ಸೈದ್ಧಾಂತಿಕ ಚರ್ಚೆಗಳು ಹಾಗೂ ಕೊಲೆಗಳು
ಜಗತ್ತು ತುಂಬ ಮುಂದುವರೆದು ಅಪಾರ ವೈಯಕ್ತಿಕ ಸ್ವಾತಂತ್ರ್ಯ ಅನುಭವಿಸುತ್ತಿದೆ ಅಂದುಕೊಂಡಿದ್ದೇವೆ.
ಆದರೆ ಯಾಕೋ ಮನಸು ಮುದುಡಿ ನಡುಗುತಿದೆ. ಮೇಲೆ ಸುರಿಯುವ ಧಾರಾಕಾರ ಮಳೆ, ಮೈಯಲ್ಲಿ ನಡುಕ, ನಿರಾಶೆ, ಹೇಳಲಾಗದ ಬೇಗುದಿ.
ಅಭಿವ್ಯಕ್ತಿ ಸ್ವಾತಂತ್ರ್ಯ ತನ್ನ ಕಸುವು ಕಳೆದುಕೊಂಡಿದೆಯೆಂಬ ಭಯ. ಹನ್ನೆರಡನೆಯ ಶತಮಾನದಲ್ಲಿ ಬಸವಾದಿ ಶರಣರ ಕಾಲಘಟ್ಟ ಬೇರೆ. ಆಗ ಪೌರೋಹಿತ್ಯದ ಅಟ್ಟಹಾಸ. ಆರ್ಥಿಕ, ಸಾಮಾಜಿಕ ಸಮಾನತೆಯ ಆಧಾರದ ಮೇಲೆ ಕಟ್ಟಿದ ಅನುಭವ ಮಂಟಪದ ಮೌಲ್ಯಗಳು ವಿಜ್ರಂಭಿಸಲಾರಬಿಸಿದವು.
ಅಜ್ಞಾನವನ್ನು ಬಂಡವಾಳ ಮಾಡಿಕೊಂಡು ದೇವರ ಹೆಸರಿನ ಚಾತುರ್ವಣ ವ್ಯವಸ್ಥೆಗೆ ಪೆಟ್ಟು ಬಿದ್ದು ಪುರೋಹಿತಶಾಹಿಗಳು ನಿರುದ್ಯೋಗಿಗಳಾದರು.
ಹೊಟ್ಟೆಯಲ್ಲಿ ಉರಿಬಿತ್ತು ಮತ್ತದೇ ರಾಜಸತ್ತೆಯ ಮೂಲಕ ಇಡೀ ಚಳುವಳಿಯ ಹತ್ತಿಕ್ಕುವ ಪ್ರಯತ್ನ ಅದೂ ಅದೇ ಹಿಂಸೆಯ ಮಾರ್ಗದ ಮೂಲಕ!
ಆನೆ ಕಾಲ ತುಳಿತದ ಅಮಾನವೀಯತೆಯ ಅಟ್ಟಹಾಸ. ಚದುರಿ ಹೋದ ಚಳುವಳಿ ಆದರೆ ಮೌಲ್ಯಗಳು ಚದುರಲಿಲ್ಲ ವಚನಗಳ ಮೂಲಕ ಇಂದಿಗೂ ಜೀವಂತ.
ಹೊಸ ಹೊಳವು, ಹೊಸ ವ್ಯಾಖ್ಯಾನ ಮತ್ತೆ ಹೋರಾಟದ ಪುನರುತ್ಥಾನ.
ಇಪ್ಪತ್ತನೇ ಶತಮಾನದಲಿ ಮತ್ತೆ ಅರಳಿದ ವಚನ ಚಿಂತನೆ. ಇಪ್ಪತ್ತೊಂದನೇ ಶತಮಾನದ ಆದಿಗೆ ಬಸವಾದಿ ಶರಣರ ಲಿಂಗಾಯತ ಧರ್ಮಕೆ ಹೊಸ ಹೊಳಪಿನ ಅರಿವು.
ಮತ್ತದೇ ಕರಾಳ ಇತಿಹಾಸದ ಛಾಯೆ. ತಲ್ಲಣಗೊಂಡ ಪುರೋಹಿತಶಾಹಿಗಳು. ಜಾತ್ಯಾತೀತ ಮೌಲ್ಯಗಳಿಗೆ ಸಂವಿಧಾನಿಕ ಮುದ್ರೆ ಬಿದ್ದದ್ದೇ ಸಾಕಾಗಿತ್ತು.
ಈಗ ಲಿಂಗಾಯತರು ಹಿಂದುಗಳಲ್ಲ ಎಂಬುದು ಪಿಸುಮಾತಿನಲ್ಲಿತ್ತು. ಬರು ಬರುತ್ತ ಘರ್ಜಿಸಲಾರಂಭಿಸಿತು.
ನಾಲ್ಕು ಗೋಡೆಗಳ ಮಧ್ಯೆ ಮಠಮಾನ್ಯಗಳಲಿ ಸಾಗುತ್ತಿದ್ದ ಚರ್ಚೆ ಬೀದಿಗೆ ಬಂತು. ಜನಜಾಗೃತಿ ಹೆಚ್ಚಾದಂತೆ ‘ಹೌದು ನಾವು ಹಿಂದುಗಳಲ್ಲ’ ಎಂದು ಜನಸಾಮಾನ್ಯರು ಮಾತನಾಡಲಾರಂಭಿಸಿದರು.
ಕೇವಲ ಚಿಂತಕರ ಚಾವಡಿಯ ಸುದ್ದಿ ಗಡಿ ದಾಡಿ ಹರಡಿದಾಗ ಪೌರೋಹಿತ್ಯ ಬೆಚ್ಚಿ ಬಿತ್ತು.
ಕೆಲವು ಪ್ರಾಜ್ಞರು ಮೈಕೊಡವಿ ನಿಂತರು. ‘ಹೌದು ಲಿಂಗಾಯತರು ಹಿಂದೂಗಳಲ್ಲ’ ಅಂದರು. ಅಷ್ಟಕ್ಕೇ ಮುಗಿದಿದ್ದರೆ ಉರಿ ಹೆಚ್ಚಾಗುತ್ತಿರಲಿಲ್ಲ.
‘ಹಿಂದು ಒಂದು ಧರ್ಮವೇ ಅಲ್ಲ’ ಎಂಬ ಮಾತು ಅಸಹನೀಯವಾಯಿತು.
ಈ ಕೂಗಿಗೆ ಸೈದ್ಧಾಂತಿಕ ಚರ್ಚೆಯ ಮೂಲಕ ಬಾಯಿಮುಚ್ಚಿಸುವುದು ಅಸಾಧ್ಯವೆನಿಸಿತು.
ಮತ್ತದೇ ಹಿಂಸಾಮಾರ್ಗವೇ ಒಳಿತೆನಿಸಿತು ಹೆದರಿಸಿ ಬಾಯಿ ಮುಚ್ಚಿಸಲು.
ವಾದ-ವಿವಾದ, ಚಿಂತನ-ಮಂಥನ ನಡೆಯಲೇ ಇಲ್ಲ. ನಡೆದರೆ ಇವರ ಬಣ್ಣ ಬಯಲಾಗುತ್ತಿತ್ತೇನೋ ?
ಈ ಹೋರಾಟ ಹತ್ತಿಕ್ಕಲು ಹೊಸ ಆಧುನಿಕ ಕುತಂತ್ರ ಹೂಡಲಾಯಿತು. ಅವೇ ಶೂದ್ರ ಯುವಕರ ಪಡೆಯ ಮೆದುಳಿಗೆ ಕೈ ಹಾಕಿ ತೊಳೆದು *ಬ್ರೇನ್ ವಾಶ್* ತಂತ್ರ ಬಳಸಿ ಎತ್ತಿಕಟ್ಟುವ ಮಹಾ ಜಾಣತನದ ಪೌರೋಹಿತ್ಯ.
ಹುಂಬರ ಶೂದ್ರ ಪಡೆಗೆ ಧರ್ಮ ಆಧ್ಯಾತ್ಮ ಏನೂ ಬೇಡ, ದುಡುಕಿ ಜೈಕಾರ ಹಾಕುವ ಧಾವಂತ.
ಮತೀಯ ವಾದಕೆ ದೇಶಭಕ್ತಿ ಬಣ್ಣ ಬಳಿವ ಜಾಣತನ. ಹಿಂದೂ ದ್ರೋಹಿಗಳ ಪಟ್ಟ ಕಟ್ಟಿ ಹಾದಿ ತಪ್ಪಿಸುವ ದುರುಳತನ.
ಈಗ ನೋಡಿದರೆ ಇಂತಹ ಅವಘಡಗಳು. ಚರ್ಚೆ ಗಿರ್ಚೆ ಏನೂ ಬೇಡ. ಅಹಿಂಸೆಯಿಂದ ಏನೂ ಪ್ರಯೋಜನ ಇಲ್ಲ. ಹೊಡಿ-ಬಡಿ, ಇನ್ನೂ ಮುಂದೆ ಹೋಗಿ ಕೊಲ್ಲುವ ಉತ್ತರ.
ಅಯ್ಯೋ ಕರ್ಮವೇ ಕೊಲೆಯಿಂದ ಇವರ ಧರ್ಮ ಉಳಿಯುವಂತಿದ್ದರೆ ಹಿಟ್ಲರ್ ಜಗತ್ತನ್ನೇ ಗೆದ್ದು ಬಿಡುತ್ತಿದ್ದ.
ಒತ್ತಾಯ, ಬ್ರೇನ್ವಾಶ್ ತಂತ್ರಗಳು ಈಗ ಔಟ್ ಡೇಟೆಡ್.
ಆದರೂ ಇವರಿಗೆ ಇನ್ನೂ ಅದೇ ಹಿಂಸೆಯಲ್ಲಿ ನಂಬಿಕೆ.
ಪ್ರಚೋದಿಸುವ ಮಾತುಗಳ ಮೂಲಕ ಶೂದ್ರ ಯುವಕರ ತಲೆ ಕೆಡಿಸಿ ಅವರ ಕೈಯಲ್ಲಿ ಗನ್ನು ಕೊಟ್ಟು ಹತ್ಯೆಗೈಯಿಸುವುದು ಯಾವ ಧರ್ಮ?
ಕೊಲೆ ಮಾಡಿದವರು ತಪ್ಪಿಸಿಕೊಳ್ಳುವುದಂತೂ ಅಸಾಧ್ಯ. ಆದರೂ ಸಂರಕ್ಷಿಸುವ ಹುಸಿ ಭರವಸೆಗೆ ಅವಿವೇಕಿ ಶೂದ್ರ ಸಂಹಾರ. ಯಾರದೋ ಬಂದೂಕಿಗೆ, ಯಾರದೋ ಹೆಗಲು.
*ಇಂತಹ ಅಪಾಯ ಗೊತ್ತಿದ್ದರೂ ಡಾ.ಎಂ.ಎಂ.ಕಲಬುರ್ಗಿಯವರು ಜೋರಾಗಿ ಸತ್ಯ ಪ್ರತಿಪಾದಿಸುವ ಧೈರ್ಯ ಮಾಡಿದರು. ಸತ್ಯ ಜೋರಾಗಿ ಪಸರಿಸಲು ಹುತಾತ್ಮರಾಗಲೂ ಹಟ ತೊಟ್ಟಂತಾಯ್ತು*.
ಅದರ ಅಗತ್ಯವನ್ನು ಕಾಲ ಬಯಸಿತ್ತೆಂಬಂತೆ ಸತ್ಯದ ಕಠಿಣ ಹಾದಿ ಹಿಡಿದರು.
ಯಾವಾಗ ಸತ್ಯ ನಿರೂಪಣೆ ಪ್ರಖರವಾದ ಕೂಡಲೇ ಎಚ್ಚತ್ತುಕೊಂಡ ಮೂಲಭೂತವಾದಕೆ ಕಲಬುರ್ಗಿಯವರು ಬಲಿಯಾದರು. ಈಗ ನೀರವ ಮೌನ. ಅವರ ಕೊಲೆಯನ್ನು ಸಮರ್ಥಿಸುವ ನೀಚ ಉದ್ಧಟತನ, ಅಮಾನವೀಯತೆ ವೈಭವೀಕರಣ.
ಅದೇ ಹಾದಿಯಲ್ಲಿ ಗೌರಿ ಹತ್ಯೆ. ಈಗ ತನಿಖಾ ತಂಡದ ಶ್ರಮದ ಪ್ರತಿಫಲನ ದಟ್ಟ… ಆದರೆ ಹೋದವರು ಮರಳಿ ಬರಲಾರರು. *ಕೊಲೆಗಾರರ ರಕ್ಷಣೆಯಾಗದೇ ನಿಜವಾದ ಕೊಲೆಗಾರರ ಪತ್ತೆ ಆಗಿ ಊಹಾಪೋಹಕೆ ತೆರೆಬೀಳಬೇಕು*.
ಕೊಲೆಗಾರು ಯಾರು? ಅವರ ಉದ್ದೇಶ ಏನೆಂಬುದು ಬಯಲಾಗಲಿ.
ಅವರು ನಿರೂಪಿಸಿದ ಸತ್ಯದ ಕಸುವು ಹೆಚ್ಚಾಗಬೇಕು. ನಿಜವಾದ ಸಾತ್ವಿಕತೆಗೆ ಜೀವ ಬರಬೇಕು.
ದೇಶ ಆಳುವವರ ಅಸಹನೀಯ ಮೌನ ಸರಿಯಲ್ಲ.
‘ಸೈದ್ಧಾಂತಿಕ ಭಿನ್ನಾಭಿಪ್ರಾಯಗಳನ್ನು ಚರ್ಚೆಯಿಂದ ಬಗೆಹರಿಸಿಕೊಳ್ಳುವುದು ಸರಿಯಾದ ಕ್ರಮ’ ಎಂದು ಒಕ್ಕೂಟ ವ್ಯವಸ್ಥೆಯಲ್ಲಿ ಆಳುತ್ತಿರುವ ಮುಖ್ಯಸ್ಥರು ಹೇಳಲಿ ಎಂಬುದು ನನ್ನಂತವರ ಹಕ್ಕೊತ್ತಾಯ.
ನೀವು ಯಾವುದೇ ಸಿದ್ಧಾಂತದಲ್ಲಿ ವೈಯಕ್ತಿಕ ನಂಬಿಕೆ ಇಟ್ಟುಕೊಂಡಿದ್ದರೂ ದೇಶವಾಸಿಗಳ ಹಿತ ಕಾಪಾಡುವಾಗ ಸಂವಿಧಾನಾತ್ಮಕವಾಗಿ ನಡೆದುಕೊಳ್ಳಬೇಕು, ವೈಯಕ್ತಿಕ ನಂಬಿಕೆಗಳ ಆಧಾರದ ಮೇಲೆ ಅಲ್ಲ.
ಕಲಬುರ್ಗಿಯವರ ಹಾಗೂ ಗೌರಿ ಲಂಕೇಶ್ ಅವರನ್ನು ಕೊಂದ ಮಾತ್ರಕ್ಕೆ ಇದೊಂದು ಶಾಶ್ವತ ಅಂತ್ಯವಲ್ಲ. ಎಲ್ಲರೂ ಸಾವಿಗೆ ಎದೆಗೊಟ್ಡು ನಿಂತರ ಎಷ್ಟೊಂದು ಜನರನ್ನು ಕೊಲ್ಲಲಾದೀತು?
ಎಡ-ಬಲಗಳ ನೆಪದಲ್ಲಿ ಮಾನವ ಪ್ರೇಮದ ಸೆಲೆ ಬತ್ತಬಾರದು. ಎರಡೂ ಸಿದ್ಧಾಂತಗಳು ಹೇಳುವುದು ಅದೇ ಮಾನವೀಯತೆಯನ್ನೇ ಆದರೆ ಅವುಗಳ ಆಚರಣೆಯ ಹೆಸರಿನಲ್ಲಿ ಜೀವ ತೆಗೆಯುವುದು ಯಾವ ನ್ಯಾಯ?
ಜನರು ತಮಗೆ ಸರಿಕಂಡದ್ದನ್ನು ಸ್ವೀಕರಿಸುತ್ತಾರೆ, ಯಾವುದನ್ನೂ ಹೇರಲಾಗುವುದಿಲ್ಲ. ಆದ್ದರಿಂದ ಅಭಿವ್ಯಕ್ತಿಯನ್ನು ಹತ್ತಿಕ್ಕುವುದಾಗಲಿ, ಕೊಲ್ಲವುದಾದಲಿ ದೇವ ಮೆಚ್ಚುವ ಕೆಲಸವಲ್ಲ.
ಕೇವಲ ಸಾತ್ವಿಕ ಹಾದಿಯಲ್ಲಿ ವಾದ-ವಿವಾದ ಸಾಗಿರಲಿ, ಹಿಂಸೆ ಬೇಡವೇ ಬೇಡ.
ಸತ್ತವರ ನೋವು ನಮಗೆ ನಲಿವಾಗಬಾರದು. ಮಾನವೀಯ ಮೌಲ್ಯಗಳ, ಧರ್ಮದ ಕತ್ತು ಹಿಚುಕಿ ಯಾರೂ ದೊಡ್ಡವರಾಗಿಲ್ಲ, ಆಗುವುದೂ ಇಲ್ಲ.
ಅಗಲಿ ಹೋದವರು ಮೌಲ್ಯಗಳನ್ನು ಜೀವಂತ ಬಿಟ್ಟು ಹೋಗಿದ್ದಾರೆ.
ಇದ್ದು ಸತ್ತಂತಿರುವ ನಮ್ಮನ್ನು ಕ್ಷಮಿಸಿ ಬಿಡಿ ಕಲಬುರ್ಗಿ ಸರ್…
ಸಿದ್ದು ಯಾಪಲಪರವಿ
No comments:
Post a Comment