Saturday, April 28, 2018

ಭಾವತೀವ್ರತೆಯ ಸವಿಗಾನ

*ಭಾವತೀವ್ರತೆಯ ಸವಿಗಾನ*

ಮನಸೆಂಬ ಮಾಯೆಗೆ ಹತ್ತಾರು ಮುಖಗಳು.

ಭಾವುಕ,ನಿರ್ಭಾವುಕ, ಶಾಂತ,ಉಗ್ರ,ಅವಸರ,ನಿಧಾನ,ನಿರ್ಲಿಪ್ತ,ನಿರ್ಮಲ,ಆತಂಕ ಹಾಗೂ ನಿರಾತಂಕ. ಮನೋಧರ್ಮ, ಮನಃಶಾಸ್ತ್ರ ಹಾಗೂ ಮಾನಸಿಕ ಸ್ಥಿತಿ ಈ ಎಲ್ಲ ಸಂಗತಿಗಳು ಮನುಷ್ಯನ ಸುತ್ತ ಗಿರಕಿ ಹೊಡೆಯುತ್ತವೆ.

ನಾವು ಹುಟ್ಟಿದ ಕಾರಣಕ್ಕಾಗಿ ಬದುಕುತ್ತೇವೆ. ಬದುಕು ಮುಗಿದ ಮೇಲೆ ಸಾಯುತ್ತೇವೆ. ಕೆಲವರು ಒಂದೇ ರೀತಿಯಲ್ಲಿ ಬದುಕಿ ತಮಗೆ ತಾವೇ ನೀರಸವೆನಿಸಿಬಿಡುತ್ತಾರೆ.

ಉಳಿದವರು ಏನೆಂದುಕೊಂಡರು ಅವರಿಗೇನು. ನನ್ನ ಬದುಕು ನನ್ನದೂ. ಸಾಧಕರು,ಸೆಲಿಬ್ರಿಟಿಗಳು ಭಿನ್ನವಾದ ರೀತಿಯಲ್ಲಿ ಬದಲಾಗುತ್ತ ಹೋಗುತ್ತಾರೆ.

ಬದುಕಿನ ತೀವ್ರತೆಯನ್ನು ಅನುಭವಿಸಿ ದಾಖಲಿಸುತ್ತಾರೆ. ಅನೇಕರಿಗೆ ದಾರಿ ದೀಪವಾಗುತ್ತಾರೆ. ಕಾಲ ಕಾಲಕ್ಕೆ ತಾವೇ ಅಪ್ ಡೇಟ್ ಆಗುತ್ತಾರೆ.

ಉಡುಗೆ ತೊಡುಗೆ ಅಡುಗೆಗಳಲಿ ಭಿನ್ನತೆಯ ವ್ಯತ್ಯಾಸವನ್ನು ಅನುಭವಿಸುತ್ತಾರೆ.

ಓದು-ಬರಹ-ಅಲೆದಾಟ-ಗೆಳೆಯರು ಹೀಗೆ ಭಿನ್ನ ಆಯಾಮಗಳಿಂದ ಬದುಕ ಏಕತಾನತೆಗೆ ತಡೆ ಒಡ್ಡಿ ಆಕರ್ಷಕವೆನಿಸುತ್ತಾರೆ. ಇನ್ನು ಕೆಲವರು ಹಣ,ಆಸ್ತಿ, ವ್ಯವಹಾರ,ಅಧಿಕಾರಗಳ ಬೆನ್ನು ಹತ್ತಿ ಸ್ವಂತಿಕೆ ಮರೆತುಬಿಡುತ್ತಾರೆ.

ಅತಿಯಾದ ಶಿಸ್ತಿನ ನೆಪದಲಿ ಯಾರಿಗೂ ಬೇಡವಾಗುತ್ತಾರೆ. ಶಿಸ್ತಿನ ನೆಪದಲಿ ಕೋಪ ತಾಪ ರೂಢಿಸಿಕೊಂಡು ಗುಂಪಿಂದ ದೂರ ಉಳಿಯುತ್ತಾರೆ.

ಮಕ್ಕಳೊಂದಿಗೆ ಮಗುವಾಗುವದ ಮರೆತುಬಿಡುತ್ತಾರೆ.

ಆದರೆ...

ಬದುಕು ತುಂಬಾ ಚಿಕ್ಕದು. ಕಡಿಮೆ ಸಮಯದಲ್ಲಿ ವಿಭಿನ್ನವಾಗಿ ಬಾಳುವ ಜೀವನೋತ್ಸಾಹದ ಚಿಲುಮೆ. ನವರಸಗಳ ಭಾವಾಭಿವ್ಯಕ್ತಿ ಅತ್ಯಗತ್ಯ. ಮುಪ್ಪಿನಲ್ಲಿ ಅಸಹಾಯಕತೆಯಿಂದ ಯುವಕರನ್ನು ದ್ವೇಶಿಸುವ ಮನೋಧರ್ಮ ಸರಿಯಲ್ಲ.

ಯುವಕರು ಅಷ್ಟೇ ಹಿರಿಯರನ್ನು ಮುದುಕರು ಎಂದು ಜರಿಯಬಾರದು. ಮುಂದೆ ನಮಗೂ ಬರುವುದನ್ನು ಮರೆತು. ಸಾಧಕರು ರೂಢಿಸಿಕೊಂಡ ಶಿಸ್ತಿನೊಂದಿಗೆ ವಿಭಿನ್ನತೆಯನ್ನು ರೂಪಿಸಿಕೊಂಡಿರುತ್ತಾರೆ.

ಚಿಂತೆ,ಸಮಸ್ಯೆ,ಅನಾರೋಗ್ಯ ಹಾಗೂ ಅಡಚಣೆಗಳಿಂದ ನಾವು ಮುಕ್ತರಲ್ಲ. ಪ್ರತಿಯೊಬ್ಬರಿಗೂ ಒಂದಿಲ್ಲೊಂದು ಕೊರಗು. ಆ ಕೊರತೆ,ಕೊರಗಿನಲ್ಲಿ ಕೊಳೆತು ಹೋಗದೇ ಖುಷಿಯಿಂದ ಬದುಕುವ ಪ್ರವೃತ್ತಿ ಬೆಳೆಸಿಕೊಳ್ಳಬೇಕು.

ನಮಗಾಗಿ ಖುಷಿ ನೀಡಲೆಂದೇ ಕೆಲವರು ಕಾಯುತ್ತಿರುತ್ತಾರೆ. ಅವರು ನಮ್ಮ ಮನೆ ಬಾಗಿಲಿಗೆ ಬಂದಾಗ ಬಾಗಿಲು ತೆಗೆದು ಬರಮಾಡಿಕೊಂಡು ಮನದೊಳಗೆ ಇರಿಸಿಕೊಳ್ಳಬೇಕು.

ಪ್ರತಿಯೊಬ್ಬರೂ ತಮಗರಿವಿಲ್ಲದಂತೆ ಏನನ್ನೋ ಹುಡುಕುತ್ತ ಇರುತ್ತಾರೆ ಆದರೆ ಆ ಹುಡುಕಾಟ ಅವರ ನೆಲೆಯ ಮೀರಿರುತ್ತದೆ.

ಮನಸು ಮಾಗಿದಂತೆ ಆಸೆಗಳು ಕರಗಿದಂತೆ ಭಾವತೀವ್ರತೆಯ ದಿಕ್ಕು ಬದಲಾಗುತ್ತದೆ.

ಆಧ್ಯಾತ್ಮ ಅರಿವಿಲ್ಲದಂತೆ ವೈರಾಗ್ಯದ ರೂಪ ಧರಿಸುತ್ತದೆ.

ನಮ್ಮ ಮನೋಧರ್ಮಕ್ಕೆ ಸರಿ ಅನಿಸಿದವರು ಸಿಕ್ಕಾಗ ಭಾವತೀವ್ರತೆಯ ಸವಿಗಾನವ ಕಿವಿಗೊಟ್ಟು ಮನಸಾರೆ ಆಲಿಸೋಣ.

Friday, April 27, 2018

ಕಾಲು ಶತಮಾನದ ದಾಂಪತ್ಯ

ಇಪ್ಪತ್ತೆಂಟು ವರ್ಷಗಳ ಹಿಂದಿನ ಮನಸು ಯಾಕೋ ನಿರ್ಧರಿಸಿತು *ಆದರೆ ಇವಳನ್ನೇ ಮದುವೆ ಆಗಬೇಕು*.
ಕಾರಣ ಅಸ್ಪಷ್ಟ.

ಅನಿಸಿದ್ದಕ್ಕೆ ತುಂಬ ಗಾಢವಾಗಿ ಅಂಟಿಕೊಂಡೆ. ಮನಸಿನ ಹಟವೇ ಹಾಗೆ.
ಬೇಕು ಎಂದರೆ ಬೇಕು. ಹತ್ತಿರದ ಬಂಧುಗಳ ಮಗಳು.ಅವ್ವನ ಕಡೆಯಿಂದ.

ಆದರೆ ಯಾಕೋ‌ ಬೇಗ ಎಲ್ಲರಿಂದ ಅನುಮತಿ ಸಿಗಲಿಲ್ಲ. Love cum arranged ಕೂಡ ಸುಲಭವಲ್ಲ ನಮ್ಮ ವ್ಯವಸ್ಥೆಯಲ್ಲಿ.

ನಾನೋ ಆಗಲೇ ಕಾಲೇಜೊಂದರಲ್ಲಿ ಇಂಗ್ಲಿಷ್ ಪಾಠ ಮಾಡಿ ಹೊಟ್ಟೆ ಹೊರುತ್ತು ಸ್ವಾಭಿಮಾನ ಬೆಳೆಸಿಕೊಂಡಿದ್ದೆ.

ಆದರೆ ತುಂಬ ಭಾವುಕ, ವ್ಯವಹಾರ ಜ್ಞಾನ ಮಾರು ದೂರ; ಈಗಲೂ ಇಲ್ಲ ಬಿಡಿ. ಬದುಕಿನ ವ್ಯವಹಾರದಲ್ಲಿ ಪ್ರಮುಖ ಪಾತ್ರ ನಿರ್ವಹಿಸುವ ಹಣದ ಬಗ್ಗೆ ವಿಪರೀತ ಅಲಕ್ಷ.

ಈಗಲೂ ಅದೇ ಮನೋಧರ್ಮ. ಸಾವಿರ ಪೆಟ್ಟು ತಿಂದರೂ ಬದಲಾಗದ ಗುಣ. ಹಣ ದಿನಸಾವು ಅಷ್ಟೇ. ಗಳಿಸಿ ಸಂಗ್ರಹಿಸಬೇಕು ಎಂಬ ಜಾಣತನ ಬರಲೇ ಇಲ್ಲ.

*That's my big tragic flaw* ನಾನದನ್ನು ಒಪ್ಪಿಕೊಂಡೇ ಬದುಕುತ್ತಾ ಇದ್ದೇನೆ. ಬದುಕು ನಿಲ್ಲುವುದೇ ಇಲ್ಲ.

ಸಾಗಿಯೇ ಇರುತ್ತೇ ಆದರೆ ಈ ದೌರ್ಬಲ್ಯಕ್ಕೆ ಮೊದಲ ಬಲಿ ಕುಟುಂಬ ಹಾಗೂ ನಂಬಿದ ಗೆಳೆಯರು. ಕೆಲವು ಸ್ನೇಹಿತರು, ಪಾಲಕರು ಹಾಗೂ ಹೆಂಡತಿ ಈ ನನ್ನ ಅಶಿಸ್ತಿಗೆ ಹೊಂದಿಕೊಂಡು ಸಹಿಸಿ ಸ್ವೀಕರಿಸಿದ್ದಾರೆ.

ಅಂತಹ ನೂರಾರು ಮಿತಿಗಳನ್ನು ಕೇವಲ ಹೆಂಡತಿ ಮಾತ್ರ ಸಹಿಸುತ್ತಾಳೆ. I too am lucky.

She tolerated me. ನನ್ನ ದೌರ್ಬಲ್ಯಗಳನ್ನು ಪ್ರೀತಿಸುವವರು ಮಾತ್ರ ನನ್ನೊಂದಿಗೆ ಇರಬಲ್ಲರು ಎಂಬ ಸತ್ಯ ಎಂದೋ ಕಂಡುಕೊಂಡಿದ್ದೇನೆ. SWOT analysis ಪರಿಣಿತನಾದ ಮೇಲೆ ನನ್ನ ಯೋಗ್ಯತೆಯ ಅಳೆದು ತೂಗಿ ಸುಮ್ಮನಾಗಿದ್ದೇನೆ.

ಈಗ ಬೇರೆಯವರಿಂದ ಪ್ರೀತಿಯ ನಿರೀಕ್ಷೆ ನಿಲ್ಲಿಸಿದ್ದೇನೆ, ಅದೂ ತುಂಬಾ ಒತ್ತಾಯಪೂರ್ವಕವಾಗಿ. ಆದರೂ‌ ಒಳಗೊಳಗೆ ಮರುಗಿ ಕೊರಗುತ್ತೇನೆ.

ಮದುವೆಯ ವ್ಯವಸ್ಥೆ ಕುರಿತು, ಮಾನವನ ಪ್ರಾಮಾಣಿಕತೆ ಕುರಿತು ಮಾತನಾಡುತ್ತಲೇ ಹಿಪೊಕ್ರೆಟಿಕ್ ಆಗಿ ಅಪ್ರಮಾಣಿಕತೆಯಿಂದ ಬದುಕುವುದಕ್ಕೆ ಒಗ್ಗಿ ಹೋಗಿದ್ದೇವೆ.

ಸಾರ್ವಜನಿಕವಾಗಿ ನಾವು ನಮ್ಮ ದೌರ್ಬಲ್ಯಗಳನ್ನು ಹರಾಜು ಹಾಕದಿದ್ದರೂ ಮೈಮನಗಳ ಹಂಚಿಕೊಂಡ ಹೆಂಡತಿಗಾದರೂ ಗೊತ್ತಿರಲಿ ಎಂಬ ನಂಬಿಕೆ ನನ್ನದು. ಅದಕ್ಕನುಗುಣವಾಗಿ ನನ್ನ ಎಲ್ಲ, ಅಂದರೆ ಎಲ್ಲಾ ಮಿತಿಗಳನ್ನು ತುಂಬ ಜಾಗರೂಕತೆಯಿಂದ ಹೇಳುತ್ತಲೇ ಬಂದಿದ್ದೇನೆ.

ಗೆದ್ದಾಗ ಅಹಂ ಪಡದೇ ಸೋತಾಗ ಶರಣಾಗದೇ ಸಮಪಾತಳಿಯಲ್ಲಿ ಬದುಕಿದ್ದೇನೆ. ಒಮ್ಮೊಮ್ಮೆ ತೀರಾ ಖಾಸಗಿಯಾಗಿ ನನ್ನ ಕಲಕುವ ಅಪಾಯಕಾರಿ ಭಾವನೆಗಳನ್ನು ಒಬ್ಬನೇ ಒದ್ದಾಡುತ್ತ ಅನುಭವಿಸಿ ಹೇಳುವ ಸಂದರ್ಭ ಬರುವವರೆಗೆ ನಾಜೂಕಾಗಿ ಕಾಯುತ್ತೇನೆ.

ಉಡುಗೆ,ತೊಡುಗೆ,ಸಾರ್ವಜನಿಕ ಸಭ್ಯತೆ ವಿಷಯಗಳಿಗೆ I'm too possessive. ಈಗ ಇಬ್ಬರೂ ಹುಡುಗಿಯರು ದೊಡ್ಡವರಾದ ಮೇಲೆ ಸ್ವಲ್ಪ ಕಡಿಮೆಯೂ ಆಗಿದೆ. ಓದು,ಬರಹ,ತಿರುಗಾಟ,ಪ್ರೇಮ ಹಾಗೂ ಧ್ಯಾನ ಯಾವುದಕ್ಕೂ ಅಡ್ಡಿ ಮಾಡುವುದಿಲ್ಲ.

ನನ್ನ ಪಾಡಿಗೆ ನಾನಿರುವ ದೊಡ್ಡ ಸ್ವಾತಂತ್ರ್ಯ. ಆಕೆಯ ಮಿತಿಗಳನ್ನು ಗ್ರಹಿಸಿ ಒಪ್ಪಿಕೊಂಡಿದ್ದೇನೆ. ಅವು ಅಸಹನೀಯವೇನು ಅಲ್ಲ ನನ್ನ ಮಿತಿಗಳ ಹಾಗೆ!

ಮಕ್ಕಳ ಶಿಕ್ಷಣ, ಅದರಲ್ಲೂ ಕನ್ನಡ ಮಾಧ್ಯಮದಲ್ಲಿ ಓದಿಸಬೇಕು ಎಂಬ ಕಟು ನಿರ್ಧಾರಕೆ, ಕಾನ್ವೆಂಟ್ ಶಾಲೆಯಲ್ಲಿ ಓದಿದ ಈಕೆ ತಕರಾರು ತೆಗಿಯಲಿಲ್ಲ.

ಈಗಿನ ಬಹುಪಾಲು ದಾಂಪತ್ಯದ ಬಿರುಕು ಮಕ್ಕಳ ಶಿಕ್ಷಣದಿಂದ ಪ್ರಾರಂಭವಾಗುತ್ತದೆ. ಉಳಿದಂತೆ ಅತ್ತೆ-ಸೊಸೆ ಕಲರವ ನನ್ನನ್ನು ಕೊಂಚ ಕದಡಿತಾದರೂ issue ಆಗಲಿಲ್ಲ.

ಸ್ವಂತ ಮನೆ ಮಕ್ಕಳ ಶಿಕ್ಷಣ ಹೇಗೋ‌ ಸಾಗಿದೆ. ಐವತ್ತರ ಗಡಿ ದಾಟಿದ ಆಯಸ್ಸು ಆರೋಗ್ಯ ಬಯಸುತ್ತದೆ. ಕಾಲು ಶತಮಾನ ಪೂರೈಸಿದ ದಾಂಪತ್ಯ ( 2-5-1993-2-5-2018 ) ಪ್ರೀತಿ-ವಿಶ್ವಾಸ ಬಯಸುತ್ತದೆ. ' ಅಯ್ಯೋ ನಮಗೂ ವಯಸ್ಸಾಯಿತು.
ನೂರೆಂಟು ಸಮಸ್ಯೆಗಳು' ಎಂಬ ಗೊಣಗಾಟ ಇಬ್ಬರಲ್ಲೂ ಇಲ್ಲ. ನಾನಂತೂ ಕೂಗಾಡುವುದೇ ಇಲ್ಲ.

ತಪ್ಪುಗಳು ನನ್ನ ಕಡೆ ಹೆಚ್ಚು. ಹಾಗಾಗಿ ಆಕೆ ಕೂಗಾಡಿದರೂ ಜಾಣ ಸಹನೆ.

ನನ್ನ ಮಗುವಿನ ಮುದ್ದಿಸುವ ಸ್ವಭಾವಕೆ ವಯಸ್ಸಾಗಿಲ್ಲ. ನೀರಸ ದಾಂಪತ್ಯ ನನಗೆ ಇಷ್ಟವಾಗಲ್ಲ. *ಕಾಮದ ಕಸುವು ಆರಿದ ಮೇಲೆ ಮುದ್ದಿಗೆ ಬರ ಬರಬಾರದು* ಅದೂ ಕೀಳರಿಮೆ ಆಗಲೂಬಾರದು. ಕಾಮಿಸದಿದ್ದರೆ ಸೋತಂತೆ, ಸತ್ತಂತೆ ಎಂದು ಅಂದುಕೊಳ್ಳಬಾರದು.

ಹೆಚ್ಚು smart ಆಗಿ ಇರಬೇಕು. ವಯಸ್ಸಾದಂತೆ ದೈಹಿಕ ಶಿಸ್ತು ಹೆಚ್ಚಾಗಬೇಕು. We should look more young and energetic.

ಬೇರೆಯವರು ಅಸೂಯೆಪಟ್ಟರೂ ಆತಂಕ ಬೇಡ. ಈ ಜೀವನ ವಯಸ್ಸಾದಂತೆ ನಮಗಾಗಿ.

I'm more particular about dressing. ಇಡೀ ದೇಶವನ್ನ ಒಬ್ಬನೇ ಸುತ್ತಿದ್ದೇನೆ. ಇಂಗ್ಲೆಂಡಿನ ಪಯಣದಲ್ಲಿ ಒಂದು ತಿಂಗಳು ಜೊತೆಗಿದ್ದಳು.

*ಸದಾ ಒಂಟಿ ಅಲೆದಾಟ, ಓದು,ಬರಹ. ಖಾಸಗಿ ಸಂಗಾತಿಗಳ* ತಂಟೆಗೆ ಬರದ ಔದಾರ್ಯ ಆಕೆಯದು. ಕಾಯಿಪಲ್ಯ, ರೇಶನ್ ಬೆಲೆ ಗೊತ್ತೇ ಆಗದ ಅಜ್ಞಾನ ನನ್ನದು. ಮಾರ್ಕೆಟ್ಟಿಗೆ ಬಿಡುವುದೇ ಇಲ್ಲ.

ಹೆಚ್ಚು ಬದುಕನ್ನು ಪ್ರೀತಿಸಬೇಕು. ಹೆಚ್ಚು ಬರೆಯಬೇಕು ಅನಿಸಲು ಸಂಗಾತಿಗಳೇ ಕಾರಣ. I have my own limited circle in personal life but in public it's unlimited. ಬರೆದದ್ದು ಕಡಿಮೆ. ಬರೆದದ್ದನ್ನು‌ ಪ್ರೀತಿಯಿಂದ ಓದಲಿ ಎಂಬ ತುಡಿತವಿದೆ. *ನಿರ್ಭಯ-ನಿರಾಕರಣೆ-ನಿರ್ಲಿಪ್ತತೆ* ಸೂತ್ರ ಇಟ್ಟುಕೊಂಡು Joyful Living ಜೀವನ ಶೈಲಿ ತರಬೇತಿ ನೀಡುತ್ತಲಿದ್ದೇನೆ. ಕಾವ್ಯ ನನ್ನ ಆಧ್ಯತೆ. ಆಧ್ಯಾತ್ಮ ನನ್ನ ಉಸಿರು.

ಬುದ್ಧ-ಅಲ್ಲಮ-ಓಷೋ-ಶೇಕ್ಷಪಿಯರ್ ನನ್ನ ಮಾರ್ಗದರ್ಶಕರು. ಇಂಗ್ಲಿಷ್ ಓದು ಕನ್ನಡ ಬರಹದಲಿ ಒಲವು. ಬದುಕಲಿ ಬಂದವರು ಬರುತ್ತಾರೆ, ಹೋಗುವವರು ಹೋಗುತ್ತಾರೆ, ಇರುವವರು ಇದ್ದೇ ಇರುತ್ತಾರೆ.

ನಿಶ್ಚಿಂತೆಯಿಂದ ಇರಬೇಕು. *ಕೆಲವರು ಇರಲೇಬೇಕು ಎನಿಸುತ್ತದೆ*. *ಈ ಎಲ್ಲದಕೂ ಒಳಗೆ ಒಲೆ ಸರಿಯಿರಬೇಕು ಹೊರಗೆ ತಲೆ ಸರಿಯಿರಬೇಕು*

ದಾಂಪತ್ಯ ಸರಿ ಇದ್ದರೆ ಹೊರಗೂ ಸರಿ ಇರಬಹುದು ಎಂಬ ನಂಬಿಕೆ ಹಿಡಿದು ಹೊರಟಿದ್ದೇನೆ.

ರಜತ ಮಹೋತ್ಸವದ *ಸಾರ್ವಜನಿಕ ಆಡಂಬರದ ಆಚರಣೆ ಬೇಡ ಎಂಬ ಒಮ್ಮತದ ನಿರ್ಧಾರವನ್ನು ಮಕ್ಕಳು ಬದಲಾಯಿಸಿದ್ದಾರೆ.

* ಇಷ್ಟವಾದ ಊರುಗಳಲಿ ಸುತ್ತಾಡಿ ಇಷ್ಟವಾದ ಪುಸ್ತಕ ಬರೆದು ಪ್ರಕಟಿಸುವ ಇರಾದೆ ಇದೆ.

ಎಂದಿನಂತೆ ನಿಮ್ಮ ಹಾರೈಕೆ ಇರಲಿ. *ಬದುಕು ಜೀವನೋತ್ಸಾಹದಿಂದ ಸಾಗುತಲೇ ಇರಲಿ*.

*ಸಿದ್ದು ಯಾಪಲಪರವಿ*

Thursday, April 26, 2018

ನಾನೊಂದ ಅರ್ಥವಾಗದ ಗಪದ್ಯ

*ನಾನೊಂದ ಅರ್ಥವಾಗದ ಗಪದ್ಯ*

ಉಸಿರ ನಿಟ್ಟುಸಿರ ಬಿಡಬೇಡ ಅರ್ಥ
ಆಗಲಿಲ್ಲ ವಾದ-ವಿವಾದ-ಹಿಂಸೆ

ನಿಗೂಢ ಪಯಣದಲಿ ನೂರೆಂಟು
ತರ್ಕದಾಚೆಗಿನ ಉತ್ತರಿಸಲಾಗದ
ಪ್ರಶ್ನೆಗಳು

ಗೊತ್ತಿರುವ ಉತ್ತರ ಆದರೂ ನಿರುತ್ತರ
ಪ್ರಶ್ನೆಗಳ‌ ಕೇಳಬಾರದೆಂಬ ಮನದ
ತಕರಾರಿಗೆ ಇಲ್ಲ ಇಲ್ಲಿ ಉತ್ತರ

ಎಲ್ಲವೂ ಒಗಟು ಕೊಂಚ ಒರಟು
ವಿಶಾದ ವಿವಾದ ಬರೀ ಗೊಂದಲ

ಬಹುದೂರ ಸಾಗಿದ‌‌ ಮೇಲೂ ದಾರಿಯ
ಹುಡುಕಾಟ ಸಾಗಿದ್ದೆಲ್ಲಿಗೆಂಬ ಪರದಾಟ

ಹೋಗಬೇಕು ಹೋಗಲೇಬೇಕು ಪಯಣ
ನಿಲ್ಲಿಸಲಾಗದು ನಿಲ್ಲುವತನಕ ಜೀವ
ಚೈತನ್ಯ

ಸಾಂಗತ್ಯ ಸಾಮಿಪ್ಯದ ಸವಿ ಸುಖದ
ಸಮಾಧಿ ಸ್ಥಿತಿಯಲಿ ಜ್ಞಾನ ಉದಯ

ಮೈಮನಗಳ ರೋಮದಾಳದಲಿ ಒಲವ
ಕಂಪಿನ ಇಂಪಿನ ತಂಪು

ಅನುಭವಿಸಿದ ಅನುಭಾವಕೆ ಬೇಡ
ಅನುಮಾನ ಬಿಗುಮಾನ ಅಜ್ಞಾನ

ಒಮ್ಮೆ ಕಳೆದು ಹೋದರೆ ಈ ಜಗ
ಮಗಿಸುವ ಜಾತ್ರೆಯಲಿ ಹುಡುಕುವುದು
ಕಡುಕಷ್ಟ

ಬಿಡಬೇಡ ಹಿಡಿದ ಕೈ ಬೆರಳ ಬೆಸುಗೆ
ಬಿಗಿಯಾಗಿರಲಿ ಈ ಭವ ಬಂಧನ‌

ನೊಂದಿದ್ದೇವೆ ಬೆಂದಿದ್ದೇವೆ ಕಂದಿದ್ದೇವೆ
ಆದರೂ ಕುಂದದಿರಲಿ‌ ಈ ಅನುಬಂಧ

ಅಹಮಿಕೆ-ಅಜ್ಞಾನ-ಅನುಮಾನ
ಅಲುಗಾಡಿಸದಿರಲಿ ಅಂತ
ರಂಗದ ತವಕ‌ ತಲ್ಲಣಗಳ

ಓದು ನಿಧಾನದಿ ಒಳಗಡಗಿರುವ
ಒಲವಿನಂತರಂಗದ ನಿಧಿಯ ಹುಡುಕು
ಅಡಗಿರುವ ನಿಶಬ್ದ ಶಬ್ದಗಳ ನಿಗೂಢ
ಅರ್ಥಗಳ

ಕೈಬಿಟ್ಟು ಕಳೆದುಕೊಂಡರೆ ಸಿಗುವುದೇ
ಕಷ್ಟ ಇನ್ನು ಅರ್ಥವಾಗುವ ಮಾತು
ಮಾರು ಹರದಾರಿ ದೂರ

ಕಳೆಯದೇ ಕೂಡೋಣ ಕೂಡಿ
ನಲಿಯೋಣ ಕೂಡಿದರೂ ಕಳೆಯದೇ

ಹೊಸ ಹೊಸ ಭಾಷ್ಯೆ ಬರೆದು ಇತಿಹಾಸ
ಪುಟಗಳಲಿ ಥಳ ಥಳ ಹೊಳೆಯುತ

ಒಲವ ದನಿಗೆ ಧ್ವನಿಯಾಗಿ ರಿಂಗಣಿಸುತ
ರಿಂಗಣಿಸುತ ಸುಮಧುರ ಹಾಡಾಗೋಣ.

ಡಾ.ರಾಜ್

*ಬಾಲ್ಯದ ಕನಸುಗಳಿಗೆ ಬಣ್ಣ ತುಂಬಿದ ರಾಜ್* ಬಾಲ್ಯದಲ್ಲಿ ಸಿನಿಮಾ ನನ್ನ ದೊಡ್ಡ ದೌರ್ಬಲ್ಯ . ಸಿನಿಮಾ ನೋಡುವ ಚಟಕ್ಕಾಗಿ ಆದ ಅನಾಹುತಗಳು ಅಷ್ಟಿಷ್ಟಲ್ಲ... ಮೊದಲು ನೋಡಿದ ಸಿನಿಮಾ ಶ್ರೀ ಕೃಷ್ಣ ದೇವರಾಯ ಅಲ್ಲಿಂದ ರಾಜಕುಮಾರ್ ಹುಚ್ಚು ಹಿಡಿದದ್ದು ಬಿಡಲೇ ಇಲ್ಲ. ಬಾಲ್ಯದಲ್ಲಿ ಸಿನಿಮಾ ನೋಡಲು 30 ಕಿಲೋಮೀಟರ್ ದೂರದ ಗಂಗಾವತಿಗೆ ಹೋಗಬೇಕಾಗುತ್ತಿತ್ತು ಅದಕ್ಕೆ ನಮ್ಮ ಹತ್ತಿರ ಹಣ ಇರುತ್ತಿರಲಿಲ್ಲ ಆದರೆ ಹೇಗಾದರೂ ಮಾಡಿ ನೋಡಲೇಬೇಕೆಂಬ ಅಪರಿಮಿತ ಹುಚ್ಚು ! ಬಾಲ್ಯದ ಗೆಳೆಯರಾದ ಹಣವಾಳ ಸಿದ್ದಣ್ಣ,ಅರಳಿ ಅಪ್ಪಣ್ಣ ,ಯಾಪಲಪರವಿ ಶರಣು ಹಾಗೂ ಇನ್ನೂ ಕೆಲವರು ಸಿನಿಮಾ ಸಂಗಾತಿಗಳಾಗಿದ್ದರು. ಗಂಗಾವತಿ ಅಥವಾ ಗದಗಗೆ ಹೋದರೆ ನೆಲದ ಮೇಲೆ ಕುಳಿತು ಒಂದೇ ದಿನ ನಾಲ್ಕು ಶೋ ನೋಡಿ ದಾಖಲೆ ನಿರ್ಮಿಸಿ ಚೆನ್ನಾಗಿ ಉಗಿಸಿಕೊಂಡದ್ದೂ ಇದೆ.ಆದರೆ ಸಿನಿಮಾ ನೀಡುವ ಖುಷಿ ಮುಂದೆ ಅದ್ಯಾವ ಲೆಕ್ಕ ಅನಿಸುತ್ತಿತ್ತು . ಸಿನಿಮಾ ನಮ್ಮ ಬಾಲ್ಯದ ಅದ್ಭುತ ಮನೋರಂಜನೆ ಹಾಗೂ ಕ್ರಿಯಾಶೀಲತೆಯ ದೃಶ್ಯ ಕಾವ್ಯ !! ಈಗ ಸಿನಿಮಾ ಲೋಕಕ್ಕೆ ಆ ತಾಕತ್ತು ಇಲ್ಲದಿರುವುದು ವಿಷಾದನೀಯ. ರಾಜಕುಮಾರ ನಟನೆ, ಭಾಷಾ ಶುದ್ಧತೆ,ವಿಭಿನ್ನ ಪಾತ್ರಗಳ ನಿರ್ವಹಣೆ ಬೆರಗುಂಟು ಮಾಡುತ್ತಿತ್ತು. ನಟರು‌ ಹತ್ತು ಹಲವು ಕಾರಣದಿಂದ ದೇವತೆಗಳಂತೆ ಕಂಗೊಳಿಸಿದ್ದ ಕಾಲವದು. ನಟರು ನನ್ನ ಕಲ್ಪನಾ ಲೋಕದ ಆರಾಧ್ಯ ದೇವರುಗಳಾಗಿ ಸಿನಿಮಾ ಪ್ರೀತಿ ಹಾಗೂ ಕುತೂಹಲ ಹುಟ್ಟಿಸಿದರು. ಬದುಕಿನಲ್ಲಿ ನಟರಷ್ಟು ದೊಡ್ಡವರು ಯಾರೂ ಅಲ್ಲ ಎಂಬ ತೀರ್ಮಾನಕ್ಕೆ ಬಂದೆ. ಅದರಲ್ಲೂ ರಾಜಕುಮಾರ ಅಂತೂ ಲೆಜೆಂಡ್ ಅನಿಸಿದರು. 13 ರ ಪ್ರಾಯದಲ್ಲಿ ಗಂಭಿರವಾಗಿ ಓದಲಾರಂಭಿಸಿದ್ದ ಪತ್ರಿಕೆಯೇ *ರೂಪತಾರ*. ವಿಜಯಾ ಅವರು ಬರೆಯುತ್ತಿದ್ದ ಲೇಖನ ಹಾಗೂ ಸಂದರ್ಶನಗಳನ್ನು ಮಹಾಕಾವ್ಯದಂತೆ ಓದಲಾರಂಭಿಸಿ ಓದುವ ಹುಚ್ಚು ಹೆಚ್ಚಿಸಿಕೊಂಡೆ. ಭಾವುಕ ಮನಸಿಗೆ ನೀರೆರೆದ ಹೆಗ್ಗಳಿಕೆ ಸಿನಿಮಾ ಹಾಗೂ ರೂಪತಾರಕ್ಕೆ ಸಲ್ಲುತ್ತದೆ. ಸಿನೆಮಾ ಹುಚ್ಚಿನಿಂದಾಗಿ ಹತ್ತನೇ ಕ್ಲಾಸ್ ಫೇಲ್‌ ಆಗಿದ್ದಕ್ಕೆ ಪಶ್ಚಾತ್ತಾಪ ಆಗಲೇ ಇಲ್ಲ.‌‌ ಹೆಡ್ಡ ಅನಿಸಿಕೊಂಡು ಬಿಟ್ಟೆ. ಕಾಲದ ತಿರುವಿನಲ್ಲಿ ಧಾರವಾಡ ಕರ್ನಾಟಕ ಕಾಲೇಜಿನ ವಿಧ್ಯಾರ್ಥಿಯಾದೆ. ಚಿತ್ರಣ ಬದಲಿಯಾಯಿತು. ಓದು ಮುಂದುವರೆದು ಬದುಕಿನ ಭರವಸೆ ಮೂಡಿದರೂ, ಸಿನಿಮಾ ನೋಟ ಬದಲಾದರೂ ರಾಜಕುಮಾರ ಸ್ಥಾಯಿಯಾಗಿ ಉಳಿದರು. ಹಿಂದಿ ನಟರ ಪೈಕಿ ಬೆಳೆಯುತ್ತ ಹೋದಂತೆ ಅಮಿತಾಭ್-ರೇಖಾ ಕಾಡತೊಡಗಿದರು. ತಿಳುವಳಿಕೆ ಮಟ್ಟ ಭಿನ್ನವಾದ ಮೇಲೆ ವಾಸ್ತವ ಗೊತ್ತಾಯಿತು. ರಾಜ್-ಭಾರತಿ, ಬಚ್ಚನ್-ರೇಖಾ ಬರೀ ನಟರಾಗಿ‌ ಉಳಿಯಲಿಲ್ಲ. ಇದು‌ ಅರ್ಥವಾಗುವಾಗ ನಾನು ಬೆಳೆದು ಕಾಲೇಜು ಮೇಷ್ಟ್ರಾಗಿದ್ದೆ , ಕವಿಯಾಗಿದ್ದೆ. ನನ್ನೊಳಗಿನ ಬರಹಗಾರ ಸೂಕ್ಷ್ಮನೂ, ಪ್ರಬುದ್ಧನೂ ಆಗಿದ್ದ. ಆಗ ನಟರ ಇನ್ನೊಂದು ಮುಖ ಗೋಚರವಾಯಿತು. ರಾಜ್, ಬಚ್ಚನ್, ಗಾಯಕ ಎಸ್.ಪಿ.ಬಿ. ಹಾಗೂ ಇತರ ಸೆಲಿಬ್ರಿಟಿಗಳು ಇನ್ನೂ ಭಿನ್ನ ನೆಲೆಯಲ್ಲಿ ಅವತರಿಸಿದಾಗ ನಾ ಜೀವನಶೈಲಿ, ಲೈಫ್ ಸ್ಕಿಲ್, ವ್ಯಕ್ತಿತ್ವ ವಿಕಸನ ತರಬೇತಿ ಆರಂಭಿಸಿದ್ದೆ. ನನ್ನ ನೆಚ್ಚಿನ ಕಲಾವಿದರೊಂದಿಗೆ ನಾನೂ ಬೆಳೆದಿದ್ದೆ. ಜೀವನ ಕಟ್ಟಿಕೊಳ್ಳಲು ಇವರು ಹೇಗೆ ಆದರ್ಶವಾಗಬೇಕು ಎಂಬುದನ್ನು ಉದಾಹರಿಸಲಾರಂಭಿಸಿದೆ. ಈಗ ಬಿಡಿ ಬೇಕಾದ ನಟರನ್ನು ಭೇಟಿಯಾಗಿ ಮಾತನಾಡಿಸುವಷ್ಟು ಬೆಳೆದಿದ್ದೇನೆ. *ಆದರೆ ಮಾತನಾಡಿ ಸಂಭ್ರಮಿಸಲು ರಾಜಕುಮಾರ ಇಲ್ಲವಲ್ಲ*. ಅವರ ಸರಿಸಮ ಈಗಿನವರು ಯಾರೂ ಇಲ್ಲ. ಪೂರ್ಣ ಪ್ರಮಾಣದ ಅಭಿನಯ ಬಿಟ್ಟು ಕೊಂಚ ಕಮರ್ಶಿಯಲ್ ಆಗಿರುವುದು ಕಾಲದ ಅನಿವಾರ್ಯತೆ. *ರಾಜ್ ಬದುಕು ಎಂದರೆ ನಟನೆ ಬರೀ ನಟನೆ* ಯೋಗ ಮಾಡಿ ದೇಹದ ಸೌಂದರ್ಯ ಕಾಪಾಡಿದರು. ಹೊಟ್ಟೆ ತುಂಬ ಊಟ ಮಾಡಿದರು. ಭಾವ ಜೀವಿಯಾಗಿ ಬಾಳಿದರು. ಇಷ್ಟಪಟ್ಟವರನ್ನ ಮನಸಾರೆ ಪ್ರೀತಿಸಿದರೂ ರಗಳೆ ಮಾಡಿಕೊಳ್ಳಲಿಲ್ಲ. ಆಕರ್ಷಣೆಗೆ ಸಹಜವಾಗಿ ಒಲಿದವರನ್ನು ನಿರಾಶೆಗೊಳಿಸದೇ ಸ್ವೀಕರಿಸಿದರು. ಯಾವುದೇ ಗಾಸಿಪ್ಪುಗಳಿಗೆ ಬಲಿಯಾಗದ ಆದರ್ಶ ಮೆರೆದರು. ಮಗುವಿನ ಮುಗ್ಧತೆ, ದೇಸಿಯ ಉಡುಗೆ, ತುಂಬು ಕುಟುಂಬದ ನಿರ್ವಹಣೆ, ಪರದೆ ಮೇಲೆ ಹಾಗೂ ಪರದೆ ಹಿಂದೆ ಅದೇ ಆದರ್ಶ ಸಾರಿದರು. ನಟನೆ,ಆರೋಗ್ಯ, ಸರಳತೆ,ಸಹಜತೆ ಹಾಗೂ ಜೀವನ ಪ್ರೀತಿಯ ಸೂತ್ರದಿ ಅಲುಗಾಡದ ಏಕತಾನತೆಯ ಮಧುರ ಕಲರವ. ಈಗ ರಾಜಕುಮಾರ್ ಅವರ ನೂರಾರು ಸಿನಿಮಾಗಳನ್ನು ಹತ್ತಾರು ಬಾರಿ ನೋಡಿದ್ದೇನೆ. ನಿನ್ನೆ ರಾಜ್ ಅವರ 90 ನೇ ಹುಟ್ಟು ಹಬ್ಬದ ಸಡಗರದಿ ಮತ್ತೆ ಮೆಲುಕು ಹಾಕಿದೆ. ನಿಧಾನವಾಗಿ ಸಿನಿಮಾ ಪ್ರೀತಿ ಮಂಕಾಯಿತಾದರೂ ರಾಜಕುಮಾರ್ ಸಿನಿಮಾಗಳು ಟಿವಿ ಯಲ್ಲಿ ಮೂಡಿದರೆ ಉಸಿರು ಬಿಗಿ ಹಿಡಿದುಕೊಂಡು ನೋಡುತ್ತಲೇ ಇರುತ್ತೇನೆ ... ----ಸಿದ್ದು ಯಾಪಲಪರವಿ.

Tuesday, April 24, 2018

ಮುಗಿಯದ ಒಲವಪಯಣ

*ಮುಗಿಯದ ಒಲವಪಯಣ*

ಸಾವಿರದ ಸರಸದಿ ವಿರಸದ
ಮಾತೇಕೆ ದೇವನೊಲಿದ ಮೇಲೆ
ಈ ಲೋಕದ ಹಂಗೇಕೆ

ಅನುಮಾನ ಇರಲಿ ಒಲವ ಬೆಸುಗೆ
ಬಿಗಿಯಾಗಿ ಬಂಧನ‌ ಬಲಿಯಲು

ಏಕಾಂತದ ಬಾಗಿಲು ತೆರೆಯಲು
ನೆನಪಿನಲೆಗಳ ಅಬ್ಬರದೇರಿಳಿತ ನಾ
ಒಂಟಿಯಾದರೆ ಸಾಕು ಬರೀ ಒಲವ
ದಾಹ ತೀರದ ಬಯಕೆಗಳ ರಿಂಗಣ

ನನ್ನ ಎದೆಗೂಡಲಿ ಸಾವಿರದ ಚಿತ್ತಾರ
ನಗು ಖುಷಿ ಕೇಕೆಯ ಕಲರವ ಪಿಸು
ಮಾತುಗಳ‌ ತಲ್ಲಣ ಒಲವ ಗೀತೆಯ
ರಿಂಗಣ

ಪದಗಳು ಮುಗಿದರೂ ಮಾತಿಗಿಲ್ಲ ಕೊನೆ
ಮತ್ತದೇ ಬತ್ತದ ಒಲವ ಸುತ್ತ
ಮುತ್ತ ಅಲೆದಾಟ ಮತ್ತಿನಾಟ

ರಾಗ‌ ಅದೇ ಶಬ್ದ ಬೇರೆ ಭಾವ ಒಂದೇ
ಒಲವ ತಿರುಳ ಅರಿತು ಒಂಟಿತನ
ಅಳಿಸಲು

ಬಾ ಎನ್ನಲಾಗದೇ ಸುಮ್ಮನೇ ಇರದೇ
ಇನ್ನಿಲ್ಲದ ಕ್ಯಾತೆ ಕಾಲು ಕೆದರಿ
ಸಣ್ಣ ಮಕ್ಕಳ ಜಗಳ
ರಮಿಸುವ ಭರದಲಿ ಅಳು
ನಗುವಿನ ಹುಚ್ಚಾಟದಾಟ

ವಯಸು ಮನಸು ಮಾಗಿದ
ಸಂಧ್ಯಾಕಾಲದಲೂ ಮುಗಿಯದ ತಲ್ಲಣ
ಹುಚ್ಚು ಹುಡುಗಾಟ ಜೀವ ಚೈತನ್ಯದ
ಹುಡುಕಾಟ

ಕಳೆದು ಕೊಳ್ಳಲಾಗದ ಯಾರೂ ಕಸಿಯ
ಲಾಗದ ಎಂದಿಗೂ ಕುಸಿಯದ
ಕಾವ್ಯಲೋಕದ ಸ್ವಪ್ನ ಸೌಧದ
ಮುದ್ದು ಮಕ್ಕಳಿಗೆ ಇಲ್ಲಿ ಈಗ
ಅವನ ಅಜ್ಜಗಾವಲು

ನಿರ್ಭಯದಿ ಜೊತೆಯಾಗಿ ಹಾಡಿ
ನಲಿಯಲು ಕೂಡಿ ಆಡಲು

ನನಗೆ ನೀ
ನಿನಗೆ ನಾ
ಬೇಕೇ
ಬೇಕು.

-----ಸಿದ್ದು ಯಾಪಲಪರವಿ.

ಅಸ್ಪಷ್ಟ ಕಾರಣ ಮತ್ತು ನಾನು

ಲವ್ ಕಾಲ

*ಅಸ್ಪಷ್ಟ ಕಾರಣ ಮತ್ತು ನಾನು*

ಮತ್ತದೇ ರಗಳೆ. ಹೋಗಬೇಡ ಎನ್ನುವುದನ್ನು ಒಪ್ಪಿಕೊಳ್ಳಲು ನಿನಗೆ ಸ್ಪಷ್ಟ ಕಾರಣ ಬೇಕು.
ಆದರೆ ನನಗದು ಅಸಾಧ್ಯ.

ನೀ ಎಷ್ಟೇ ಒತ್ತಾಯಿಸಿದರೂ ಕೆಲವು ರಹಸ್ಯಗಳನ್ನು ಬಿಟ್ಟು ಕೊಡಬಾರದು. ಕೊಡಲಾಗದು ಕೂಡ.

ಇಂತಹ bondage ನಿಂತಿರುವುದೇ ತೀವ್ರತೆ ಮತ್ತು ನಂಬಿಕೆಗಳ ಆಧಾರದ ಮೇಲೆ.

ಆ ತೀವ್ರತೆ ಮತ್ತು ನಂಬಿಕೆ ಇದ್ದ ಮೇಲೆ ದಯವಿಟ್ಟು ಕಾರಣ ಕೇಳದೇ ಹೇಳಿದ್ದನ್ನು ಒಪ್ಪಿಕೋ.

ಪ್ರೀತಿಗೆ ತನ್ನದೇ ಆದ ಸಾತ್ವಿಕ ಹಟ ಇರುತ್ತದೆ. ದಕ್ಕಿಸಿಕೊಳ್ಳುವುದು ಸುಲಭ ಆದರೆ ಉಳಿಸಿಕೊಳ್ಳುವುದು ಕಷ್ಟ ಎಂದು ಗೊತ್ತಿರುತ್ತೆ.

ಏನೇ ಆಗಲಿ ಈ ಬಾಂಧವ್ಯ ಉಳಿಯಲೇಬೇಕೆಂಬ ಕಾರಣದಿಂದ ಕೆಲವು ಸ್ವಯಂಘೋಷಿತ ನಿರ್ಣಯಗಳನ್ನು ಪಾಲಿಸಬೇಕಾಗುತ್ತೆ.

ನಮ್ಮ ಆಸೆ ಹಾಗೂ ಪ್ರೀತಿಯನ್ನು ಅಳೆದು ತೂಗಿದಾಗ ಆಸೆಗಿಂತ ಪ್ರೀತಿ ದೊಡ್ಡದಾಗುತ್ತದೆ.

ಸಣ್ಣ ಆಸೆಗಳನ್ನು ದೂರ ದೂಡಿ ಒಲವ ಹಣತೆ ಬೆಳಗಿಸಬೇಕು.

ಸಣ್ಣ ಪುಟ್ಟ ತ್ಯಾಗಗಳು ದೊಡ್ಡ ಖುಷಿ‌ ನೀಡುತ್ತವೆ.

ಆರಂಭದಲ್ಲಿ ಇದು ಕೊಂಚ ಕಿರಿಕಿರಿ ಎನಿಸಿದರೂ, *ಇಗೋ* ಬದಿಗಿರಿಸಿ ಆಲೋಚಿಸಿದಾಗ ಮನಸು ನಲಿದು ಪ್ರೀತಿಗೆ ಒಲಿಯುತ್ತದೆ.

ಬಿಗಿಗೊಂಡ ಬಂಧನಗಳು‌ ಸಡಿಲವಾಗುವದು ನಮ್ಮ ಅಜ್ಞಾನ ಹಾಗೂ ಅಹಂಕಾರದಿಂದ.
ಅವುಗಳಿಗೆ ಬಲಿಯಾಗದಂತೆ ಮನಸನು ಹುರಿದುಂಬಿಸಬೇಕು.

ಅನುಮಾನವೆಂಬ ವಿಷ ಕುಡಿದು ನರಳಿ, ನಲುಗಬಾರದು.

ಪ್ರೀತಿ ಹೂ ಬಾಡದಂತೆ ಒಲವ ಜಲ ಹರಿಸಿ ನಸುನಗುತ ಖುಷಿಯಾಗಿರೋಣ.

-----ಸಿದ್ದು ಯಾಪಲಪರವಿ.

Sunday, April 22, 2018

ಹೀಗೊಂದು ಕರೆ...

*ಹೀಗೊಂದು ಕರೆ ಕೇಳಿಸುತ್ತಲೇ ಇದೆ*

*ಎಲ್ಲಿಯೂ ನಿಲ್ಲದಿರು...* ಅನಿಕೇತನದಲಿ ಕುವೆಂಪು ಯಾಕೆ ಹಾಗೆ ಹೇಳಿದರೋ‌ ಗೊತ್ತಿಲ್ಲ ನಾ ಕೇಳಿಸಿಕೊಂಡದ್ದು ತಪ್ಪಾಯಿತು.
*ಎಲ್ಲಿಗೋ‌ ಪಯಣ ಯಾವುದೋ ದಾರಿ ಏಕಾಂಗಿ* ಎಂಬಂತೆ ತಿರುಗಿದ್ದೆ ತಿರಿಗಿದ್ದು.

ಲೆಕ್ಕ ಇಟ್ಟರೆ ಗಾಬರಿಯಾಗುವಷ್ಟು ಅಲೆದಾಡಿದ ಅಲೆಮಾರಿ.

ಓದು-ಬರಹ ಚುರುಕಾಗಿ ಚೇತರಿಸಿಕೊಂಡಿರುವ ಕಾಲವಿದು.

ಪಯಣದ ತುಡಿತ ಆರಂಭವಾಗಿರುವ‌ ಮೂರನೇ ಹಂತ. ಹಿಂದಿನ ಎರಡು ವಿಫಲತೆ ಕಲಿಸಿದ ಅನುಭವ ಸಣ್ಣದಲ್ಲ. *ಬಿಡುವ ಉಸಿರು, ಇಡುವ ಹೆಜ್ಜೆಯಲ್ಲಿ ಸಾವಿರದ ಲೆಕ್ಕಾಚಾರ*.

ಬಂದು ಹೋದವರು ಕೊಂದು ಹಾಕಿದವರ ದಂಡೇ ಇದೆ.

ಮೇಲೇಳಲಾರದ ಹಾಗೆ ಹೊಡೆತ ಕೊಟ್ಟವರೂ ಎದೆ ಮೇಲೆ ನಿಂತು ಕಾಯುತ್ತಲೇ ಇದ್ದಾರೆ.

ನಾನೆಂದೂ ಮೇಲೇಳದೇ ಅವರ ಮನೆ ಮುಂದೆ ನಿಲ್ಲಬಹುದೆಂಬ ಕನಸು ಕಂಡವರು, ಬೆನ್ನಲ್ಲಿ ಇರಿದರೂ ಸಿಕ್ಕಾಗ ನಗುಮೊಗದ ಮುಖವಾಡದವರು ನಗುತ್ತಲೇ ಇದ್ದಾರೆ‌.

'ಅಯ್ಯೋ ನಮ್ಮ ಕೈಯಲ್ಲಿ ಏನಿದೆ *ಅವನು* ಕಾಯಬೇಕು ಅಷ್ಟೇ' ಎಂದು ಮುಗಿಲು ತೋರಿಸಿ ವ್ಯಂಗ್ಯವಾಡಿದವರೂ ಆಗಾಗ ನೆನಪಾಗಿ ಕಾಡುತ್ತಾರೆ.

ಇತಿಹಾಸ ಕಲಿಸಿದ ಪಾಠ ಮರೆಯದೇ ಹೊಸ ಹೆಜ್ಜೆ ಹಾಕುವ ಸಂಧಿಕಾಲವೋ, ಸಂಕ್ರಮಣವೋ ನಾ ಕಾಣೆ.

ಆದರೂ ಅಭ್ಯಾಸಬಲ ಮನಸು ಮಾಡಿದ ತಪ್ಪನ್ನೇ ಮತ್ತೆ ಮತ್ತೆ ಮಾಡುತ್ತದೆಯಾದ್ದರಿಂದ ಏನೇ ನಿರ್ಧಾರ ತೆಗೆದುಕೊಳ್ಳುವ ಮುನ್ನ ಜಾಗರೂಕತೆ ಇರಲೇಬೇಕು.

ಆ ಕಟ್ಟೆಚ್ಚರ ಇಟ್ಟುಕೊಂಡೇ ಹೊಸ ಆಲೋಚನೆಗೆ ಕೈ ಹಾಕಿದ್ದೇನೆ.

ಆಗಾಗ ಕಾಡುವ ಬುದ್ಧ, ಅಲ್ಲಮ ಹಾಗೂ ಸಂತರು ಕರೆದಂತಾಗುತ್ತದೆ. ಆಧ್ಯಾತ್ಮಿಕ ತಲ್ಲಣಗಳು ಒಮ್ಮೊಮ್ಮೆ ಭ್ರಾಂತು ಅನಿಸಿಬಿಡುತ್ತೆ.

ಆದರೆ ಒಮ್ಮೆ ಪರಿಪೂರ್ಣ ಅರಿವು ಮೂಡುವವರೆಗೆ ಗೊಂದಲ ನಿಲ್ಲುವುದಿಲ್ಲ.

ಆಧಿಕಾರ ಲಾಲಸೆ, ಧನದಾಹ, ವ್ಯಾಮೋಹ ನಿಲ್ಲುವತನಕ ಈ ಹೊಯ್ದಾಟ ಸಹಜ.

ನೆಲೆಗೊಳ್ಳುವ ಬಯಕೆ ಇಮ್ಮಡಿಯಾದ ಹೊತ್ತಿದು‌.

ಏನು, ಎತ್ತ ಅಗತ್ಯ ಬಿದ್ದಾಗ ತಿಳಿಸುವೆ.

ಲವ್ ಕಾಲ

ಲವ್ ಕಾಲ

*ಹೀಗೊಂದು ಜಂಬವೆಂಬ ನಾಟಕ*

' ನೀವು ಎಷ್ಟೇ ಲಾಗಾ ಹೊಡೆದರೂ ನಾ ಬದಲಾಗೋದಿಲ್ಲ, ಆದರೆ ನೋಡಿ ಖುಷಿ ಪಡುವೆ' ಈ ಹೇಳಿಕೆ ಸಾಕಲ್ಲ ನಾ ಮುಂದುವರೆಯಲು.

ಆದರೆ ನಾ ಹಾಗೆ ಮಾಡಲ್ಲ. ನನಗೂ ನನ್ನ ಘನತೆ ಗೊತ್ತಿದೆ. ಆದರೆ ಒಳಗೊಂದು, ಹೊರಗೊಂದು ಇರಬಾರದೆಂಬ ಕಾರಣಕ್ಕೆ ಸತ್ಯ ಹೇಳಿ ಹಗುರಾದೆ.

ಮನಸಿನಲ್ಲಿ ಉಂಟಾದ ಎಲ್ಲ ಭಾವನೆಗಳು ಶಾಶ್ವತವಾಗಿ ನೆಲೆಗೊಳುತ್ತವೆ ಎಂಬ ನಂಬಿಕೆ ಯಾವತ್ತೋ ಕಳೆದುಕೊಂಡಿದ್ದೇನೆ.

ಮನಸು ಮೋಡದ ಹಾಗೆ ಚಲಿಸುತ್ತಲೇ ಇರುತ್ತೆ.
ಆದರೆ ಆ ಚಲಿಸುವಿಕೆಯನ್ನು ನಾವೇ ಮೂರನೇ ವ್ಯಕ್ತಿಯಾಗಿ ಗಮನಿಸಬೇಕು. ನಿಲ್ಲಿಸಬಾರದು.

ನಿಲ್ಲಿಸಿದರೇ ಅಥವಾ ಗಮನಿಸದಿದ್ದರೂ ಮನಸು ವಿಕಾರವಾಗುತ್ತದೆ.

ಹರಿಯುವ ನದಿಗೆ ತಡೆಯೊಡ್ಡಬಾರದು. ತಡೆದಾಗ ಮಲಿನವಾಗುತ್ತೆ. ಮನಸೆಂಬ ನದಿ ಹರಿಯುತ್ತ ಹರಿಯುತ್ತ ಶುದ್ಧವಾಗಿ ಪರಿಶುದ್ಧವಾಗಬೇಕು.

ನಾನು ಪರಿಶುದ್ಧ ಎಂಬ ಜಂಬ ಬಿಟ್ಟ ಮೇಲೆ ನಿನ್ನ ಬಗ್ಗೆ ಉಂಟಾದ ಆಸೆ‌ ಹೇಳಿಕೊಂಡಿದ್ದೇನೆ.
ಒಪ್ಪುವುದು, ಬಿಡುವುದು ನಿನಗೆ ಬಿಟ್ಟದ್ದು.
ಅಹಂಕಾರ, ಅನುಮಾಗಳಿದ್ದರೆ ಸತ್ಯ ಹೇಳುವ ಧೈರ್ಯ ಬರುವುದಿಲ್ಲ.

*ಪರಸ್ಪರ ಹೇರಿಕೊಳ್ಳುವ ದಿಗ್ಬಂಧನಗಳು ಅಷ್ಟೇ ಮಹತ್ವ ಪಡೆಯುತ್ತವೆ*. ಹಾಗೆ ಹೇರಿಕೊಳ್ಳಬೇಕು ಕೂಡಾ.

ಮನದಲಿ ಉಂಟಾಗುವ ತಲ್ಲಣಗಳನ್ನು ಹೇಳುತ್ತಲೇ ಇರುತ್ತೇನೆ. ನೀನು ಕೇಳುತ್ತಲೇ ಇರಬೇಕು. ಕೇಳಿಸಿಕೊಳ್ಳದ ಹಾಗೆ ನಟಿಸುತ್ತಲೇ.

ಕೇವಲ ದೇಹ ಸೌಂದರ್ಯ ನೋಡಿ ಮರುಳಾದೆ ಎಂಬ ದಿಮಾಕು ಇಟ್ಟುಕೊಳ್ಳಬೇಡ. ಹಾಗೆ ಅಂದುಕೊಂಡರೆ ನನ್ನಲ್ಲಿ ನಿನಗರಿವಿಲ್ಲದಂತೆ ಕಳೆದುಹೋಗುತ್ತೀ ಅಷ್ಟೇ.

ಸೌಂದರ್ಯ, ದೈಹಿಕ ತಾಕತ್ತು ಇಳಿದು ಹೋಗುತ್ತೆ ಆದರೆ ಮನಸಿನ ಚೈತನ್ಯ ಉಕ್ಕುತ್ತಲೇ ಇರುತ್ತೆ.
ದೇಹ ನಂಬಿ ಬಂದ ಬಂಧನಗಳು ಅಷ್ಟೇ ಬೇಗ ಕಳೆದುಹೋಗುತ್ತವೆ. ಎಣ್ಣೆ ತೀರಿದ ಮೇಲೆ ಬತ್ತಿಗೇನು ಕೆಲಸ.

ದೇಹ ಪ್ರೀತಿಯ ಅಭಿವ್ಯಕ್ತಿಯ ಸಂಕೇತ, ಎಲ್ಲವೂ ಅಲ್ಲ.

I will tie my bondage with souls not with body. ದೇಹವ ಕಾಯಬಹುದು ಆದರೆ ಮನಸನ್ನಲ್ಲ .

ಹಾಗೆ ಕಾಯುವುದು ಮುಠ್ಠಾಳತನ.
ನಂಬಿಗೆಯಿಂದ ನಿನ್ನ ಬಿಗಿ ಹಿಡಿದು ಬಿಗಿದಪ್ಪಿದ್ದೇನೆ.
ಆಚೀಚೆ ಅಲುಗದ ಹಾಗೆ.

ನನ್ನೊಳಗೆ ನೀನಿರುವಾಗ ನಿನ್ನೊಳಗೂ ನಾ ಇರಲೇಬೇಕು.  ಜಂಬ, ಜಗಳ‌ ಬರೀ ನಾಟಕ.

ಈ ನಾಟಕ ಒಮ್ಮೆ ಮುಗಿಯಲೇ ಬೇಕು...
ನಾವು ಮುಗಿಸುವ ಮುನ್ನ...

----ಸಿದ್ದು ಯಾಪಲಪರವಿ.

Friday, April 20, 2018

ಅಕ್ಕ-ಅಲ್ಲಮ ನೀನಾ ಮಹಾಮಾಯೆ

*ಅಕ್ಕ-ಅಲ್ಲಮ ನೀನಾ ಮಹಾಮಾಯೆ*

ಆಕಾಶಕೆ ಭೂಮಿ ಭೂಮಿಗೆ
ಆಕಾಶ ಹೆಣ್ಣಿಗೆ ಗಂಡು ಗಂಡಿಗೆ
ಹೆಣ್ಣು ಮಹಾಮಾಯೆ ಎನ್ನಲಾದೀತೇ?

ನಿರ್ಮೋಹಿ ಅಕ್ಕನಿಗೆ ಕಾಡುವ ಚನ್ನ
ಮಲ್ಲಿಕಾರ್ಜುನ ವಿರಾಗಿ ಅಲ್ಲಮಂಗೆ
ಗುಹೇಶ್ವರನ ಗುಂಗೆಂಬ ಮಾಯೆ

ಹಿಡಿದುದ ಬಿಡಲು ಮತ್ತೇನೋ ಹಿಡಿಯುವ
ತುಡಿತ ಬಿಡುವೆ ಬಿಟ್ಟೆನೆಂಬ ಅಹಮಿಕೆಯ
ಮಾಯೆಗೆ ಸೋಲದಿರಲಾದೀತೆ?

ದಟ್ಟಡವಿಯಲಿ ಅಲೆಯುತ ಮೃಗಗಳ
ಲೆಕ್ಕಿಸದ ಅಕ್ಕನಿಗೆ ಒಲಿಯದ ಗಂಡನ
ಒಲಿಸುವ ಪರಿ ಪರಿಯ ನಿವೇದನೆಯ
ಮಹಾಮಾಯೆ

ಛೀ ಹೋಗಾಚೆ , ತೊಲಗೆಂದು ದೂಡಿದ
ಅಹಮಿಕೆಯಲಿ ಗೆದ್ದ ಬಿಗುಮಾನ ಸೋತವಳಲ್ಲ
ಮಾಯೆ ಗೆಲ್ಲಲಿಲ್ಲ ಇಲ್ಲಿ ಅಲ್ಲಮ‌

ಕಣ್ಣೋಟದಿ ಕೆರಳಿಸಿ ಕರಗಿದ
ಮನಸನರಿಯದೆ ಮೈಮನಗಳ
ಪುಳಕಗೊಳಿಸಿ ಬೆಂಬಿಡದೇ ಶಬ್ದ
ಮಾಲೆ ಪೋಣಿಸಿ ಹಾಡಿ ನಲಿದು
ಎದೆ ಗೂಡ ಸೇರ ಬಯಸುವಾಗ
ದೂರ ದೂಡಿ
ನಾ
ಸಂತನೆಂಬುದ್ಯಾವ ನ್ಯಾಯ?

ಕರಗಿ ನಿರಾಗಿ ನಂಬಿ ಕಳೆದು ಹೋಗುವ
ಹೆಣ್ಣ ನೋಯಿಸುವದ್ಯಾವ ಪುರುಷಾರ್ಥ?

ಕರಗುವ ಕರಗಿಸುವ ಪರಿಯಲಿ
ಕಳೆದವರ ವಿಳಾಸವಿಲ್ಲ‌ ಇಬ್ಬರೂ
ಒಬ್ಬರಿಗೊಬ್ಬರು ಪಡೆದು ಮೈಮರೆತು

ಅರಳಿ ಕೆರಳಿ ಅಂಗೈಯಲಿ ನಲುಗುವ
ತಮ್ಮತನವ ಅಲುಗಾಡಿಸಿ ರಸಾನುಭೂತಿಯ
ಚಿಮ್ಮಿಸಿ ಉಕ್ಕಿ ಹರಿದಾಗ ಎಲ್ಲವೂ
ಹಗುರ ನಿರಾತಂಕ

ಮೈತುಂಬ ಹರಿಯುವ ಬೆವರ ಸೆಲೆಯಲಿ
ಬೆರೆತ ಮಾಯೆಯಲಿ ಸೋಲು ಗೆಲುವಿನ
ಸೊಲ್ಲಿಲ್ಲ

ನನಗೆ ನೀ
ನಿನಗ ನಾ
ಮಹಾ
ಮಾಯೆ.

---ಸಿದ್ದು ಯಾಪಲಪರವಿ.

Thursday, April 19, 2018

ವಚನಾನುಸಂಧಾನ

*ವಚನಾನುಸಂಧಾನ*

ಗಂಗಾನದಿಯಲ್ಲಿ ಮಿಂದು ಗಂಜಳದಲ್ಲಿ ಹೊರಳುವರೆ?
ಚಂದನವಿದ್ದಂತೆ ದುರ್ಗಂಧವ ಮೈಯಲ್ಲಿ ಪೂಸುವರೆ?
ಸುರಭಿ ಮನೆಯಲ್ಲಿ ಕರೆವುತ್ತಿರೆ , ಹರಿವರೆ ಸೊಣಗನ ಹಾಲಿಂಗೆ?
ಬಯಸಿದಮೃತವಿದ್ದಂತೆ,
ಅಂಬಿಲವ ನೆರೆದುಂಬ ಭ್ರಮಿತಮಾನವಾ, ನೀನು ಕೇಳಾ.
ಪರಮಪದವೀಯನೀವ ಚೆನ್ನಸೊಡ್ಡಳನಿದ್ದಂತೆ, ಸಾವದೇವರ ನೋಂತರೆ, ಕಾವುದೆ ನಿನ್ನ?

----ಸೊಡ್ಡಳ ಬಾಚರಸ.

ಈಗ‌ ವಚನಗಳು, ವಚನಕಾರರು, ಶರಣರು ಹಾಗೂ ಲಿಂಗಾಯತ ಧರ್ಮ ಭಿನ್ನ ನೆಲೆಯ ಮರು ಓದಿಗೆ ಒಳಪಡಬೇಕು.

ಆಧುನಿಕ ಸ್ವತಂತ್ರ ಧರ್ಮದ ಹೋರಾಟ, ಲಿಂಗಾಯತ ಧರ್ಮವೋ? ಅಥವಾ ಪಂಥವೋ? ಎಂಬ ಕಿತ್ತಾಟ ತಾರಕಕ್ಕೆ ಏರಿರುವಾಗ ವಚನಗಳು ಮಾತ್ರ ತಮ್ಮ ಪಾಡಿಗೆ ತಾವು ಶಾಂತವಾಗಿ ನದಿಯಂತೆ ಹರಿಯುತ್ತ ಹೊಸ ಹೊಸ ಹೊಳವು ಕೊಡುತ್ತಲೇ ಇರುತ್ತವೆ.

ವಚನಗಳ‌‌ ಓದು ಕೊಡುವ ರಸಾನುಭವದ ಅನುಭೂತಿಯ ಮುಂದೆ ಮಿಕ್ಕದ್ದೆಲ್ಲ ಗೌಣ.

ಇಡೀ ಕಾಲಘಟ್ಟದ ಎಲ್ಲ ವಚನಕಾರರ ಜೀವಪರ ನಿಲುವು ಹಾಗೂ ಪ್ರಗತಿಪರ ಮನೋಧರ್ಮ ಈ ಮೇಲಿನ ವಚನದಲ್ಲಿಯೂ ಕಾಣುತ್ತದೆ.

ಸೊಡ್ಡಲ ಬಾಚರಸರಂತಹ ಶರಣರು ಬಸವಣ್ಣ, ಅಲ್ಲಮ ಹಾಗೂ ಅಕ್ಕನಷ್ಠೇ ಸಮರ್ಥವಾಗಿ ಬರೆಯಬಲ್ಲವರಾಗಿದ್ದರು.

ವೈಚಾರಿಕ ಸಾಮರ್ಥ್ಯ ಎಲ್ಲರಲ್ಲೂ ಪುಟಿಯುವ ಜೀವಸೆಲೆ.

ಅನುಭವ ಮಂಟಪದ ಪ್ರತಿಯೊಂದು ಚರ್ಚೆಗಳ ಸಾರಾಂಶಗಳನ್ನು ವಚನಗಳ ಮೂಲಕ ಶರಣರು ದಾಖಲಿಸಿದ್ದಾರೆ. ಇವತ್ತಿನ ಪಾರ್ಲಿಮೆಂಟಿನ ಚರ್ಚೆಗಳ‌ ಹಾಗೆ.

ಚರ್ಚೆ ಮತ್ತು ದಾಖಲೆಯ ಸ್ವರೂಪ ಅತ್ಯಂತ ಆಧುನಿಕ ಹಾಗೂ ಸೈದ್ಧಾಂತಿಕ.
ಏಕಪಕ್ಷೀಯ ವಾದಗಳಿಂದ ಮುಕ್ತವಾದ ಅನುಭವ ಮಂಟಪದ ಅನನ್ಯತೆ ಊಹಿಸಿಕೊಂಡರೆ ರೋಮಾಂಚನ.

ನಿರಂತರ ಓದಿನ ಹರವಿನಲ್ಲಿ ಅನೇಕ ಸಂಗತಿಗಳನ್ನು ಕಲ್ಪಿಸಿಕೊಳ್ಳಲು ಮನಸು ಬಯಸುತ್ತದೆ. ಆಳವಾದ ಅನುಭೂತಿಯ ಅನುಭವಿಸಿ ಶರಣರನ್ನು ಸ್ಮರಿಸಿಕೊಂಡಾಗ ದಿವ್ಯಾನುಭದ ಪ್ರಭೆ ಹೊರಹೊಮ್ಮುತ್ತದೆ.

ಎಲ್ಲ ವಚನಗಳ‌‌ ಓದು ಆ ಕಾಲದ ಸಾಮಾಜಿಕ ಸ್ಥಿತಿಯ ನೈಜತೆಯನ್ನು ಚಿತ್ರಿಸುತ್ತದೆ. ಅಲ್ಲದೆ
ಆಧ್ಯಾತ್ಮಿಕ ತಳಹದಿಯ ಮೇಲೆ ಕಟ್ಟಿದ್ದರಿಂದ ಅನುಭವ ಮಂಟಪ ಅಲುಗಾಡಲಿಲ್ಲ.

ಅವರ ಪ್ರಖರ ವಿಚಾರಧಾರೆಗಳು, ಅದನ್ನು ನಿರೂಪಿಸುವಾಗ ಬಳಸುವ ಉಪಮೇಯ,ಪ್ರತಿಮೆಗಳು ವಿಸ್ತಾರವನ್ನು ಅನುಭವಿಸಿ ಅನುಭಾವಿಸಬೇಕು.

ಪ್ರತಿಯೊಬ್ಬ ವ್ಯಕ್ತಿ  ಒಂದೊಂದು ಕಾಲ ಘಟ್ಟದಲ್ಲಿ ತನ್ನ ಆಸಕ್ತಿಗೆ ತಕ್ಕಂತೆ ಹುಡುಕಾಟದಲ್ಲಿರುತ್ತಾನೆ.

ಹೆಣ್ಣು-ಹೊನ್ನು-ಮಣ್ಣು ಎಂಬ ಸಾಮಾನ್ಯ ವಿಶ್ಲೇಣೆಯನ್ನೂ ಮೀರಿದ ಹುಡುಕಾಟ ಅದಾಗಿರುತ್ತದೆ.

ಮೋಕ್ಷಕ್ಕಾಗಿ ಹಂಬಲಿಸುವ ಮನಸು ಆಧ್ಯಾತ್ಮಿಕ ಸಾಧನೆಗೆ ಸಾಗಿದಾಗ ನೂರೆಂಟು ಗೊಂದಲಗಳು.

ಇಲ್ಲಿಯೂ ಧಾವಂತ, ಅವಸರ ಬೇಗ ದಕ್ಕಿಸಿಕೊಳ್ಳುವ ತುಡಿತ.

ತಲುಪಬೇಕಾದ ಗುರಿ ಗೊತ್ತಿರುತ್ತದೆ ಆದರೆ ಮಾರ್ಗ ಗೊತ್ತಿರುವುದಿಲ್ಲ.

ಗಂಗಾ ನದಿಯಲ್ಲಿ ಮಿಂದು, ಯಜ್ಞ ಯಾಗಾದಿಗಳ ಮೂಲಕ ಬೇಗನೇ ಮೋಕ್ಷ ಪ್ರಾಪ್ತಿಯಾಗಬಹುದೆಂಬ ದುರಾಸೆಯ ಅವಸರದ ಮಾರ್ಗ.

ಗಂಗಾನದಿ ಪವಿತ್ರ ಎಂಬ ನಂಬಿಕೆ ಅಂದಿನಿಂದಲೂ ಇರುವುದರಿಂದ ಶರಣರು ಇವುಗಳನ್ನು ಪ್ರತಿಮೆಯಾಗಿ ಬಳಸಿದ್ದಾರೆ. ಆದರೆ ಗಂಗಾ ಸ್ನಾನ ಪವಿತ್ರ ಎಂದು ಒಪ್ಪಿಕೊಂಡಂತೆಯೂ ಅಲ್ಲ.

ಮನುಷ್ಯನ ವ್ಯಕ್ತಿತ್ವ ವಿಕಸನಕ್ಕೆ ಬೇಕಾದ ಹಾಗೂ ಮೋಕ್ಷ ಸಾಧನೆಯ ಸೂತ್ರಗಳು ನಮ್ಮಲ್ಲಿಯೇ ಲಭ್ಯವಿರುವಾಗ ಅಲ್ಲಲ್ಲಿ ಹುಡುಕುವದ್ಯಾಕೆ ? ಎಂಬ ಪ್ರಶ್ನೆ ಎತ್ತಿದ್ದಾರೆ.

ಆ ಅನಗತ್ಯ ಹುಡುಕಾಟವನ್ನು ಗಂಜಳದ ಹೊರಳಾಟಕ್ಕೆ ಹೋಲಿಸಿ ಮನವರಿಕೆ ಮಾಡಿಕೊಟ್ಟಿದ್ದಾರೆ.

ಈ ತರಹದ ಹೋಲಿಕೆ ಮಾಡುವಾಗ ಬಳಸುವ ಪದಗಳು ಅಷ್ಟೇ ಕ್ರೂರವಾಗಿ ಕಾಣಿಸುತ್ತವೆ.

ಚಂದನದಂತಹ ಘಮಘಮಿಸುವ ಸುವಾಸನೆ ಇರುವಾಗಲೂ ದುರ್ಗಂಧ ಪೂಸಲಾಗದು.

ಆಕಳ ಹಾಲು ಮನೆಯಲ್ಲಿರುವಾಗ ನಾಯಿಯ ಹಾಲು ಕರೆಯಲಾಗದು ಎಂಬ ಹೋಲಿಕೆಯ ಕಠೋರತೆಯ ಹಿಂದಿನ ಉದ್ದೇಶ ಗ್ರಹಿಸಬೇಕು.

ಇಡೀ ಶರಣ ಚಳುವಳಿಯ ಸದಾಶಯ ಮೌಢ್ಯತೆಯ‌ ಪ್ರತಿರೋಧವಾಗಿರುವಾಗ ಮತ್ತೆ ಮೌಢ್ಯತೆಯ ಕಡೆಗೆ ಮನಸು ವಾಲುವುದನ್ನು ತೀವ್ರವಾಗಿ ಖಂಡಿಸುತ್ತಾರೆ.

ಬಹುದೇವೋಪಾಸನೆ ಹಾಗೂ ದೇವಾಲಯ ಸಂಸ್ಕೃತಿಯ ಶೋಷಣೆಯಿಂದ ಬೇಸತ್ತ ಶರಣರು ಹೊಸ ಮಾರ್ಗ ಕಂಡುಕೊಂಡಿದ್ದರು.

ಇಷ್ಟಲಿಂಗ ಬರೀ ಧಾರ್ಮಿಕ ಕುರುಹು ಆಗಿರದೇ,  ಮೋಕ್ಷ ಸಾಧನೆಯ ಕೈದೀವಿಗೆಯಾಗಿತ್ತು.
ಅದನ್ನು ಸರಿಯಾಗಿ ಅರ್ಥಮಾಡಿಕೊಳ್ಳದೇ ಹೊರಗಿನ ಹುಡುಕಾಟಕ್ಕೆ ನಿಂತ ನಿಲುವು ಶರಣರನ್ನು ಕೆರಳಿಸುತ್ತಿತ್ತು.

ಗುಡಿಯಲಿರುವ  ದೇವರು ಅಂಗೈಯಲ್ಲಿ ಲಭ್ಯವಿರುವಾಗ, ಸಾಯುವ ದೇವರ ಹುಡುಕುವದರ ಅಜ್ಞಾನವನ್ನು ಬಾಚರಸ  ಪ್ರಶ್ನಿಸುತ್ತಾನೆ.

ಮೋಕ್ಷ ಸಾಧನೆಗೆ ಬುದ್ಧನದು ನಿರಾಕಾರದ ಧ್ಯಾನ ಮಾರ್ಗವಾದರೆ, ಶರಣರದು ಭಿನ್ನ ಮತ್ತು ಸುಧಾರಿಸಿದ ಮಾದರಿಯ ಲಿಂಗಾಂಗ ಸಾಮರಸ್ಯದ ದೃಷ್ಟಿಯೋಗ, ಶಿವಯೋಗ.

ಶರಣರು ಹಾಗೂ ಬುದ್ಧ ಇಬ್ಬರದೂ ದೇವಾಲಯಗಳ ಆಚೆಗಿನ ಅನುಸಂಧಾನ. ಗುರಿ ಒಂದೇ, ಮಾರ್ಗ ಭಿನ್ನ.

ದೇವಾಲಯ ಸಂಸ್ಕೃತಿಯ ಶೋಷಣೆ,ವಂಚನೆ ಹಾಗೂ ಮೌಢ್ಯತೆಯ ನಿರಾಕರಣೆಯ ಸಂದೇಶವನ್ನು ಮೇಲಿನ ವಚನ ಪ್ರತಿಬಿಂಬಿಸುತ್ತದೆ.

                              ***

ಭಾರತೀಯ ಸನಾತನ ಧರ್ಮದ ಕಾಲಘಟ್ಟದಲ್ಲಿ ದೇವರು, ಮೂರ್ತಿ ಪೂಜೆ ಹಾಗೂ ದೇವಾಲಯಗಳ ನಂಬಿಕೆಗಳನ್ನು ಗಟ್ಟಿಗೊಳಿಸುವ ಸಂದರ್ಭದಲ್ಲಿ ಹೇಳುವ ಕಥೆಗಳು, ನೀಡುವ ಉದಾಹರಣೆಗಳು ಪ್ರಾಥಮಿಕ ಹಂತದ ವಿವರಣೆಗಳೆನಿಸಿಬಿಡುವುದು ಸಹಜ.

ದೇಹವೇ ದೇವಾಲಯ ಎಂಬ ನಂಬಿಕೆಯನ್ನು ಗಟ್ಟಿಗೊಳಿಸಲು ಯಶಸ್ವಿಯಾದದ್ದು ಸಣ್ಣ ಸಾಧನೆಯಲ್ಲ.

ಭಾವಚಿತ್ರದಲ್ಲಿರುವ ತಂದೆಗೆ ಉಗುಳುವ ಧೈರ್ಯ ಮಾಡದ ರಾಜನ ಕಥೆ ಶರಣರಿಗೆ ಹಳಸಲು ಎನಿಸುವುದು ಸಹಜ.

ಧರ್ಮ, ಆಧ್ಯಾತ್ಮ ಹಾಗೂ ಬದುಕು ಈ ಮೂರನ್ನೂ ಸಮಪಾತಳಿಯಲಿ ತೂಗಿದವರು ನಮ್ಮ ಶರಣರು.

ಶರಣರನ್ನು ಕೇವಲ ಸಾಮಾಜಿಕ ಹೋರಾಟಗಾರರು, ಕಾರ್ಮಿಕ ನಾಯಕರು ಹಾಗೂ ವಚನಕಾರರು ಎಂಬಂತೆ ಬಿಂಬಿಸುವುದು ಅಸಮರ್ಪಕ.

ಶರಣರು ಪೂರ್ಣ ಪ್ರಮಾಣದ ಆಧ್ಯಾತ್ಮಜೀವಿಗಳು.ಬರೀ ಚಳುವಳಿಗಾರರಾಗಿದ್ದರೆ ನಾಯಕತ್ವಕ್ಕಾಗಿ‌ ಕಚ್ಚಾಡುತ್ತಿದ್ದರು.

ನಿರ್ಭಯ-ನಿರಾಕರಣೆ-ನಿರ್ಲಿಪ್ತತೆಯ ಸೂತ್ರಗಳನ್ನು ಶರಣರು ಅರಿತು ಆಚರಣೆಗೆ ತಂದಿದ್ದರು. ಅವರಿಗೆ ಈ ಕುರಿತು ಯಾವುದೇ ಗೊಂದಲಗಳಿರಲಿಲ್ಲ.

ಶರಣ ಸಿದ್ಧಾಂತವು ಎಲ್ಲ ಧಾರ್ಮಿಕ ಮಿತಿಗಳ ದಾಟಿ ಭಾರತೀಯ ಸಂವಿಧಾನದ ಆಧ್ಯಾತ್ಮಿಕ ಸ್ವರೂಪದಂತಿದೆ.

----ಸಿದ್ದು ಯಾಪಲಪರವಿ.