ಲವ್ ಕಾಲ
*ಮೀರಾ,ಸೀತಾ ಹಾಗೂ ಮಹಾದೇವಿ*
ಒಮ್ಮೆ ನಿನ್ನ ದಿಟ್ಟಿಸಿ ನೋಡಲಾಗದು. ಸಾವಿರದ ಕಥೆಗಳು, ಹೆಣ್ಣಿನ ವ್ಯಥೆಗಳು ದಾಳಿಮಾಡುತ್ತವೆ.
ತಾನು ನಂಬಿ ಆರಾಧಿಸುವ ದೇವರ ಧ್ಯಾನ ಮಾಡುತ್ತ ಹಾಡಿ ಮೈಮರೆತ ಮೀರಾದೇವಿಯ ಸಾದ್ವಿತನ ನೆನಪಾಗುತ್ತದೆ. ಹಾಡುವ ಗಂಟಲು ಹಿಚುಕಿದ ಕೀಚಕರ ಲೆಕ್ಕಿಸದೇ ಹಾಡುತ್ತ ಹಾಡುತ್ತ ಇಡೀ ಬದುಕ ಧ್ಯಾನಸ್ಥ ಸ್ಥಿತಿಯಲಿ ಕಳೆದ ಮೀರಾ ಇಂದಿಗೂ ಅಜರಾಮರ.
ರಾವಣನ ಕೈಯಿಂದ ಪಾರಾದರೂ ನಿಂದನೆಗಳ ಸುಳ್ಳುಮಾಡಲು ಪದೇ ಪದೇ ಅಗ್ನಿಪರೀಕ್ಷೆ ಎದುರಿಸಿ ನರಳಿದ ಮಹಾಮಾತೆ ಸೀತೆಯ ಪ್ರಖರ ದಿವ್ಯತೆ ಮರೆಯಲಾದೀತೆ ?
ಮಲೆನಾಡಿನ ಉಡುತಡಿಯಿಂದ ಕಲ್ಯಾಣದವರೆಗೆ ಸ್ತುತಿನಿಂದನೆಗಳ ಲೆಕ್ಕಿಸದೇ ಕೌಶಿಕನನ್ನು ಧಿಕ್ಕರಿಸಿ ಬೆತ್ತಲೆಯಾದರೂ ದೈವತ್ವದ ಹಾದಿ ಹಿಡಿದು ಚನ್ನಮಲ್ಲಿಕಾರ್ಜುನನೆಂಬ ಜಗದ ಗಂಡನ ವರಿಸಲು ಸಾಗಿದ ಮಹಾದೇವಿ ಅಕ್ಕ ಈ ಜಗದ ಅಕ್ಕ ಕಂಡ ಕನಸ ನನಸು ಮಾಡಲಾದೀತೆ ?
ಹತ್ತು ಹಲವು ಬಾರಿ ನಿನ್ನ ಕಾಡಿದಾಗಲೆಲ್ಲ ಮಹಾಮಾತೆಯರು, ನನ್ನವ್ವನಂತಹ ಗರತಿಯರು ತಿವಿದು ಎಚ್ಚರಿಸುತ್ತಾರೆ.
ಕೋಟೆಯ ಗೋಡೆಯಲಿ ಕೂಡು ಹಾಕಿದರೂ, ನಿನ್ನ ಸಾದ್ವಿತನವ ಅನುಮಾನಿಸಿ ಅವಮಾನಿಸುವ ದುರ್ಬಲ ಮನಸನು ಅನುಕಂಪದಿ ಅರ್ಥಮಾಡಿಕೊಂಡು, ಇಂದಲ್ಲ ನಾಳೆ ಸರಿ ಹೋಗಬಹುದೆಂಬ ನಂಬಿಗೆಯ ಬಿಗಿ ಹಿಡಿದು ಕರುಳ ಬಳ್ಳಿಗಳೊಂದಿಗೆ ನಸುನಗುತ ನೋವ ಹತ್ತಿಕ್ಕಿ ನಂಜ ನುಂಗಿದ ಸಹನಾಮೂರ್ತಿ.
ಮನದ ಮೂಲೆಯಲಿ ನಿನಗೊಪ್ಪುವ ಚನ್ನಮಲ್ಲಿಕಾರ್ಜುನನ ಧೆನಿಸುತ್ತ ಮನವ ಮೈಲಿಗೆ ಮಾಡದೆ ಕಾಯುತ್ತಲಿದ್ದ ಗರತಿಗೆ ದೇವ ಕಳಿಸಿದ ಕೂಸು ನಾ.
ನಾ ನಿನ್ನನರಿಯದೆ ಬೆಪ್ಪನ ಹಾಗೆ ಅಗ್ನಿಪರೀಕ್ಷೆಗೊಡ್ಡಿದ ಮುಠ್ಠಾಳತನವ ಕ್ಷಮಿಸು ಎಂದು ಸಣ್ಣವನಾಗಲಾರೆ.
ಮೈಮನಗಳಿಗೆ ಒಲವ ಮುಲಾಮು ಲೇಪಿಸುವ ಮೃದುತ್ವದಲಿ ಮೈಮರೆಯುವ ನಿನ್ನ ಬಿಸಿಯುಸಿರ ಲಯದ ಮುಲುಕಾಟದಲಿ ನಾ ನನ್ನ ಮರೆಯುವೆ.
ಅತಿಯಾದ ಪ್ರೀತಿ ಅತಿಯಾದ ಸಂಶಯಕೆ ಕಾರಣವೆಂಬ ನಂಬಿಕೆಯ ಹುಸಿಮಾಡಿ ಬರೀ ನಂಬುವೆ, ಇನ್ನು ನಂಬಲೇಬೇಕು.
ನೀ ಮುದ್ದಿನ ಮಗಳು, ಹಡೆದವ್ವ, ಅಕ್ಕರೆಯ ಅಕ್ಕ, ಮನದನ್ನೆ, ಅಕ್ಷರ ಸಖಿ.
ಏನೆಲ್ಲ ಎಲ್ಲವೂ ಹೌದು.
ನಿನ್ನ ಪಡೆದ ನಾನೇ ಪರಮ ಸುಖಿ.
ಆದದ್ದು ಆಯಿತು ಸಖೀ, ಈ ಏಳು ಮಾಸದಲಿ ಕಾಡಿದ್ದ ಮರೆತು ಬಿಡು
ಹುಸಿ ಮುನಿಸಿನಲಿ ಮೂಡಿಸಿದ ಹಸಿ ಹಸಿ ಗಾಯಗಳ.
ಎಂದಿಗೂ, ಎಂದೆಂದಿಗೂ ನೋಯಿಸಿ ಮತ್ತೆ ಹಿಂಸಿಸಲಾರೆ.
ಇನ್ನು ಮುಂದೆ...
ನನ್ನ ತೋಳ ಬಂಧಿಯಲಿ ಬಂಧಿಸಿ ಮುತ್ತಿನ ಮಳೆಗರೆದು, ನೀ ನಸುನಗುತ ಇರಲು ಚಂದ್ರೋದಯ ನಿತ್ಯ ನೂತನವಾಗಿ ಮುಖದ ಮೇಲೆ ಲಾಸ್ಯವಾಡುತಲೇ ಇರಲಿ.
ಮೈಮನಗಳ ಕಂಪನಕೆ ಮೆಲ್ಲಗೆ ಅರಳಿ, ಕೆರಳಿಯೂ ಕೆರಳದಂತೆ ತುಟಿಯರಳಿಸಿ, ಕಣ್ಣ ಮುಚ್ಚಿ ಚಂದ್ರನೊಲುಮೆ ಜಿನುಗಿಸುತ ನಲುಗಲು ನಾಕ ಅಂಗೈಯಲಿ ನರ್ತನ.
ಸದಾ ಹೀಗೆಯೇ ನಸುನಗುತಿರು ಎಂಬ ನನ್ನ ಸದಾಶಯಕೆ ಚ್ಯುತಿ ಬಾರದಿರಲಿ ಎಂಬ ನಿವೇದನೆ *ಅವನು* ಆಲಿಸಿ ಹರಸಲಿ ಸಾಕು. ನನಗೆ ಬೇಡ ಬೇರೆ ಇನ್ನೇನೂ.
ಉಳಿದ ದಿನಗಳಲಿ ಒಲವ ಬಿತ್ತಿ, ಭಾವನೆಗಳ ಹರಗಿ, ಅನುಮಾನದ ಕಳೆ ಕಿತ್ತಿ ಹೊಸ ಹೊಸ ಕಾವ್ಯ ಫಸಲ ಬೆಳೆಯೋಣ.
ಬೆಳೆದ ಬೆಳೆ ಹೆಮ್ಮರವಾದ ನೆರಳಲಿ ಒಲವ ಹಕ್ಕಿಗಳ ಕಲರವಕೆ ಸಾಕ್ಷಿಯಾಗೋಣ.
ನಿತ್ಯ ನೂತನವಾಗಿ ಅಮರರಾಗೋಣ.
No comments:
Post a Comment