*ಭಾವತೀವ್ರತೆಯ ಸವಿಗಾನ*
ಮನಸೆಂಬ ಮಾಯೆಗೆ ಹತ್ತಾರು ಮುಖಗಳು.
ಭಾವುಕ,ನಿರ್ಭಾವುಕ, ಶಾಂತ,ಉಗ್ರ,ಅವಸರ,ನಿಧಾನ,ನಿರ್ಲಿಪ್ತ,ನಿರ್ಮಲ,ಆತಂಕ ಹಾಗೂ ನಿರಾತಂಕ. ಮನೋಧರ್ಮ, ಮನಃಶಾಸ್ತ್ರ ಹಾಗೂ ಮಾನಸಿಕ ಸ್ಥಿತಿ ಈ ಎಲ್ಲ ಸಂಗತಿಗಳು ಮನುಷ್ಯನ ಸುತ್ತ ಗಿರಕಿ ಹೊಡೆಯುತ್ತವೆ.
ನಾವು ಹುಟ್ಟಿದ ಕಾರಣಕ್ಕಾಗಿ ಬದುಕುತ್ತೇವೆ. ಬದುಕು ಮುಗಿದ ಮೇಲೆ ಸಾಯುತ್ತೇವೆ. ಕೆಲವರು ಒಂದೇ ರೀತಿಯಲ್ಲಿ ಬದುಕಿ ತಮಗೆ ತಾವೇ ನೀರಸವೆನಿಸಿಬಿಡುತ್ತಾರೆ.
ಉಳಿದವರು ಏನೆಂದುಕೊಂಡರು ಅವರಿಗೇನು. ನನ್ನ ಬದುಕು ನನ್ನದೂ. ಸಾಧಕರು,ಸೆಲಿಬ್ರಿಟಿಗಳು ಭಿನ್ನವಾದ ರೀತಿಯಲ್ಲಿ ಬದಲಾಗುತ್ತ ಹೋಗುತ್ತಾರೆ.
ಬದುಕಿನ ತೀವ್ರತೆಯನ್ನು ಅನುಭವಿಸಿ ದಾಖಲಿಸುತ್ತಾರೆ. ಅನೇಕರಿಗೆ ದಾರಿ ದೀಪವಾಗುತ್ತಾರೆ. ಕಾಲ ಕಾಲಕ್ಕೆ ತಾವೇ ಅಪ್ ಡೇಟ್ ಆಗುತ್ತಾರೆ.
ಉಡುಗೆ ತೊಡುಗೆ ಅಡುಗೆಗಳಲಿ ಭಿನ್ನತೆಯ ವ್ಯತ್ಯಾಸವನ್ನು ಅನುಭವಿಸುತ್ತಾರೆ.
ಓದು-ಬರಹ-ಅಲೆದಾಟ-ಗೆಳೆಯರು ಹೀಗೆ ಭಿನ್ನ ಆಯಾಮಗಳಿಂದ ಬದುಕ ಏಕತಾನತೆಗೆ ತಡೆ ಒಡ್ಡಿ ಆಕರ್ಷಕವೆನಿಸುತ್ತಾರೆ. ಇನ್ನು ಕೆಲವರು ಹಣ,ಆಸ್ತಿ, ವ್ಯವಹಾರ,ಅಧಿಕಾರಗಳ ಬೆನ್ನು ಹತ್ತಿ ಸ್ವಂತಿಕೆ ಮರೆತುಬಿಡುತ್ತಾರೆ.
ಅತಿಯಾದ ಶಿಸ್ತಿನ ನೆಪದಲಿ ಯಾರಿಗೂ ಬೇಡವಾಗುತ್ತಾರೆ. ಶಿಸ್ತಿನ ನೆಪದಲಿ ಕೋಪ ತಾಪ ರೂಢಿಸಿಕೊಂಡು ಗುಂಪಿಂದ ದೂರ ಉಳಿಯುತ್ತಾರೆ.
ಮಕ್ಕಳೊಂದಿಗೆ ಮಗುವಾಗುವದ ಮರೆತುಬಿಡುತ್ತಾರೆ.
ಆದರೆ...
ಬದುಕು ತುಂಬಾ ಚಿಕ್ಕದು. ಕಡಿಮೆ ಸಮಯದಲ್ಲಿ ವಿಭಿನ್ನವಾಗಿ ಬಾಳುವ ಜೀವನೋತ್ಸಾಹದ ಚಿಲುಮೆ. ನವರಸಗಳ ಭಾವಾಭಿವ್ಯಕ್ತಿ ಅತ್ಯಗತ್ಯ. ಮುಪ್ಪಿನಲ್ಲಿ ಅಸಹಾಯಕತೆಯಿಂದ ಯುವಕರನ್ನು ದ್ವೇಶಿಸುವ ಮನೋಧರ್ಮ ಸರಿಯಲ್ಲ.
ಯುವಕರು ಅಷ್ಟೇ ಹಿರಿಯರನ್ನು ಮುದುಕರು ಎಂದು ಜರಿಯಬಾರದು. ಮುಂದೆ ನಮಗೂ ಬರುವುದನ್ನು ಮರೆತು. ಸಾಧಕರು ರೂಢಿಸಿಕೊಂಡ ಶಿಸ್ತಿನೊಂದಿಗೆ ವಿಭಿನ್ನತೆಯನ್ನು ರೂಪಿಸಿಕೊಂಡಿರುತ್ತಾರೆ.
ಚಿಂತೆ,ಸಮಸ್ಯೆ,ಅನಾರೋಗ್ಯ ಹಾಗೂ ಅಡಚಣೆಗಳಿಂದ ನಾವು ಮುಕ್ತರಲ್ಲ. ಪ್ರತಿಯೊಬ್ಬರಿಗೂ ಒಂದಿಲ್ಲೊಂದು ಕೊರಗು. ಆ ಕೊರತೆ,ಕೊರಗಿನಲ್ಲಿ ಕೊಳೆತು ಹೋಗದೇ ಖುಷಿಯಿಂದ ಬದುಕುವ ಪ್ರವೃತ್ತಿ ಬೆಳೆಸಿಕೊಳ್ಳಬೇಕು.
ನಮಗಾಗಿ ಖುಷಿ ನೀಡಲೆಂದೇ ಕೆಲವರು ಕಾಯುತ್ತಿರುತ್ತಾರೆ. ಅವರು ನಮ್ಮ ಮನೆ ಬಾಗಿಲಿಗೆ ಬಂದಾಗ ಬಾಗಿಲು ತೆಗೆದು ಬರಮಾಡಿಕೊಂಡು ಮನದೊಳಗೆ ಇರಿಸಿಕೊಳ್ಳಬೇಕು.
ಪ್ರತಿಯೊಬ್ಬರೂ ತಮಗರಿವಿಲ್ಲದಂತೆ ಏನನ್ನೋ ಹುಡುಕುತ್ತ ಇರುತ್ತಾರೆ ಆದರೆ ಆ ಹುಡುಕಾಟ ಅವರ ನೆಲೆಯ ಮೀರಿರುತ್ತದೆ.
ಮನಸು ಮಾಗಿದಂತೆ ಆಸೆಗಳು ಕರಗಿದಂತೆ ಭಾವತೀವ್ರತೆಯ ದಿಕ್ಕು ಬದಲಾಗುತ್ತದೆ.
ಆಧ್ಯಾತ್ಮ ಅರಿವಿಲ್ಲದಂತೆ ವೈರಾಗ್ಯದ ರೂಪ ಧರಿಸುತ್ತದೆ.
ನಮ್ಮ ಮನೋಧರ್ಮಕ್ಕೆ ಸರಿ ಅನಿಸಿದವರು ಸಿಕ್ಕಾಗ ಭಾವತೀವ್ರತೆಯ ಸವಿಗಾನವ ಕಿವಿಗೊಟ್ಟು ಮನಸಾರೆ ಆಲಿಸೋಣ.
No comments:
Post a Comment