Thursday, April 26, 2018
ಡಾ.ರಾಜ್
*ಬಾಲ್ಯದ ಕನಸುಗಳಿಗೆ ಬಣ್ಣ ತುಂಬಿದ ರಾಜ್*
ಬಾಲ್ಯದಲ್ಲಿ ಸಿನಿಮಾ ನನ್ನ ದೊಡ್ಡ ದೌರ್ಬಲ್ಯ .
ಸಿನಿಮಾ ನೋಡುವ ಚಟಕ್ಕಾಗಿ ಆದ ಅನಾಹುತಗಳು ಅಷ್ಟಿಷ್ಟಲ್ಲ...
ಮೊದಲು ನೋಡಿದ ಸಿನಿಮಾ ಶ್ರೀ ಕೃಷ್ಣ ದೇವರಾಯ ಅಲ್ಲಿಂದ ರಾಜಕುಮಾರ್ ಹುಚ್ಚು ಹಿಡಿದದ್ದು ಬಿಡಲೇ ಇಲ್ಲ.
ಬಾಲ್ಯದಲ್ಲಿ ಸಿನಿಮಾ ನೋಡಲು 30 ಕಿಲೋಮೀಟರ್ ದೂರದ ಗಂಗಾವತಿಗೆ ಹೋಗಬೇಕಾಗುತ್ತಿತ್ತು ಅದಕ್ಕೆ ನಮ್ಮ ಹತ್ತಿರ ಹಣ ಇರುತ್ತಿರಲಿಲ್ಲ ಆದರೆ ಹೇಗಾದರೂ ಮಾಡಿ ನೋಡಲೇಬೇಕೆಂಬ ಅಪರಿಮಿತ ಹುಚ್ಚು !
ಬಾಲ್ಯದ ಗೆಳೆಯರಾದ ಹಣವಾಳ ಸಿದ್ದಣ್ಣ,ಅರಳಿ ಅಪ್ಪಣ್ಣ ,ಯಾಪಲಪರವಿ ಶರಣು ಹಾಗೂ ಇನ್ನೂ ಕೆಲವರು ಸಿನಿಮಾ ಸಂಗಾತಿಗಳಾಗಿದ್ದರು.
ಗಂಗಾವತಿ ಅಥವಾ ಗದಗಗೆ ಹೋದರೆ ನೆಲದ ಮೇಲೆ ಕುಳಿತು ಒಂದೇ ದಿನ ನಾಲ್ಕು ಶೋ ನೋಡಿ ದಾಖಲೆ ನಿರ್ಮಿಸಿ ಚೆನ್ನಾಗಿ ಉಗಿಸಿಕೊಂಡದ್ದೂ ಇದೆ.ಆದರೆ ಸಿನಿಮಾ ನೀಡುವ ಖುಷಿ ಮುಂದೆ ಅದ್ಯಾವ ಲೆಕ್ಕ ಅನಿಸುತ್ತಿತ್ತು .
ಸಿನಿಮಾ ನಮ್ಮ ಬಾಲ್ಯದ ಅದ್ಭುತ ಮನೋರಂಜನೆ ಹಾಗೂ ಕ್ರಿಯಾಶೀಲತೆಯ ದೃಶ್ಯ ಕಾವ್ಯ !!
ಈಗ ಸಿನಿಮಾ ಲೋಕಕ್ಕೆ ಆ ತಾಕತ್ತು ಇಲ್ಲದಿರುವುದು ವಿಷಾದನೀಯ.
ರಾಜಕುಮಾರ ನಟನೆ, ಭಾಷಾ ಶುದ್ಧತೆ,ವಿಭಿನ್ನ ಪಾತ್ರಗಳ ನಿರ್ವಹಣೆ ಬೆರಗುಂಟು ಮಾಡುತ್ತಿತ್ತು.
ನಟರು ಹತ್ತು ಹಲವು ಕಾರಣದಿಂದ ದೇವತೆಗಳಂತೆ ಕಂಗೊಳಿಸಿದ್ದ ಕಾಲವದು.
ನಟರು ನನ್ನ ಕಲ್ಪನಾ ಲೋಕದ ಆರಾಧ್ಯ ದೇವರುಗಳಾಗಿ ಸಿನಿಮಾ ಪ್ರೀತಿ ಹಾಗೂ ಕುತೂಹಲ ಹುಟ್ಟಿಸಿದರು.
ಬದುಕಿನಲ್ಲಿ ನಟರಷ್ಟು ದೊಡ್ಡವರು ಯಾರೂ ಅಲ್ಲ ಎಂಬ ತೀರ್ಮಾನಕ್ಕೆ ಬಂದೆ. ಅದರಲ್ಲೂ ರಾಜಕುಮಾರ ಅಂತೂ ಲೆಜೆಂಡ್ ಅನಿಸಿದರು.
13 ರ ಪ್ರಾಯದಲ್ಲಿ ಗಂಭಿರವಾಗಿ ಓದಲಾರಂಭಿಸಿದ್ದ ಪತ್ರಿಕೆಯೇ *ರೂಪತಾರ*.
ವಿಜಯಾ ಅವರು ಬರೆಯುತ್ತಿದ್ದ ಲೇಖನ ಹಾಗೂ ಸಂದರ್ಶನಗಳನ್ನು ಮಹಾಕಾವ್ಯದಂತೆ ಓದಲಾರಂಭಿಸಿ ಓದುವ ಹುಚ್ಚು ಹೆಚ್ಚಿಸಿಕೊಂಡೆ.
ಭಾವುಕ ಮನಸಿಗೆ ನೀರೆರೆದ ಹೆಗ್ಗಳಿಕೆ ಸಿನಿಮಾ ಹಾಗೂ ರೂಪತಾರಕ್ಕೆ ಸಲ್ಲುತ್ತದೆ.
ಸಿನೆಮಾ ಹುಚ್ಚಿನಿಂದಾಗಿ ಹತ್ತನೇ ಕ್ಲಾಸ್ ಫೇಲ್ ಆಗಿದ್ದಕ್ಕೆ ಪಶ್ಚಾತ್ತಾಪ ಆಗಲೇ ಇಲ್ಲ. ಹೆಡ್ಡ ಅನಿಸಿಕೊಂಡು ಬಿಟ್ಟೆ.
ಕಾಲದ ತಿರುವಿನಲ್ಲಿ ಧಾರವಾಡ ಕರ್ನಾಟಕ ಕಾಲೇಜಿನ ವಿಧ್ಯಾರ್ಥಿಯಾದೆ. ಚಿತ್ರಣ ಬದಲಿಯಾಯಿತು. ಓದು ಮುಂದುವರೆದು ಬದುಕಿನ ಭರವಸೆ ಮೂಡಿದರೂ, ಸಿನಿಮಾ ನೋಟ ಬದಲಾದರೂ ರಾಜಕುಮಾರ ಸ್ಥಾಯಿಯಾಗಿ ಉಳಿದರು.
ಹಿಂದಿ ನಟರ ಪೈಕಿ ಬೆಳೆಯುತ್ತ ಹೋದಂತೆ ಅಮಿತಾಭ್-ರೇಖಾ ಕಾಡತೊಡಗಿದರು.
ತಿಳುವಳಿಕೆ ಮಟ್ಟ ಭಿನ್ನವಾದ ಮೇಲೆ ವಾಸ್ತವ ಗೊತ್ತಾಯಿತು.
ರಾಜ್-ಭಾರತಿ, ಬಚ್ಚನ್-ರೇಖಾ ಬರೀ ನಟರಾಗಿ ಉಳಿಯಲಿಲ್ಲ. ಇದು ಅರ್ಥವಾಗುವಾಗ ನಾನು ಬೆಳೆದು ಕಾಲೇಜು ಮೇಷ್ಟ್ರಾಗಿದ್ದೆ , ಕವಿಯಾಗಿದ್ದೆ.
ನನ್ನೊಳಗಿನ ಬರಹಗಾರ ಸೂಕ್ಷ್ಮನೂ, ಪ್ರಬುದ್ಧನೂ ಆಗಿದ್ದ. ಆಗ ನಟರ ಇನ್ನೊಂದು ಮುಖ ಗೋಚರವಾಯಿತು.
ರಾಜ್, ಬಚ್ಚನ್, ಗಾಯಕ ಎಸ್.ಪಿ.ಬಿ. ಹಾಗೂ ಇತರ ಸೆಲಿಬ್ರಿಟಿಗಳು ಇನ್ನೂ ಭಿನ್ನ ನೆಲೆಯಲ್ಲಿ ಅವತರಿಸಿದಾಗ ನಾ ಜೀವನಶೈಲಿ, ಲೈಫ್ ಸ್ಕಿಲ್, ವ್ಯಕ್ತಿತ್ವ ವಿಕಸನ ತರಬೇತಿ ಆರಂಭಿಸಿದ್ದೆ.
ನನ್ನ ನೆಚ್ಚಿನ ಕಲಾವಿದರೊಂದಿಗೆ ನಾನೂ ಬೆಳೆದಿದ್ದೆ.
ಜೀವನ ಕಟ್ಟಿಕೊಳ್ಳಲು ಇವರು ಹೇಗೆ ಆದರ್ಶವಾಗಬೇಕು ಎಂಬುದನ್ನು ಉದಾಹರಿಸಲಾರಂಭಿಸಿದೆ.
ಈಗ ಬಿಡಿ ಬೇಕಾದ ನಟರನ್ನು ಭೇಟಿಯಾಗಿ ಮಾತನಾಡಿಸುವಷ್ಟು ಬೆಳೆದಿದ್ದೇನೆ. *ಆದರೆ ಮಾತನಾಡಿ ಸಂಭ್ರಮಿಸಲು ರಾಜಕುಮಾರ ಇಲ್ಲವಲ್ಲ*.
ಅವರ ಸರಿಸಮ ಈಗಿನವರು ಯಾರೂ ಇಲ್ಲ. ಪೂರ್ಣ ಪ್ರಮಾಣದ ಅಭಿನಯ ಬಿಟ್ಟು ಕೊಂಚ ಕಮರ್ಶಿಯಲ್ ಆಗಿರುವುದು ಕಾಲದ ಅನಿವಾರ್ಯತೆ.
*ರಾಜ್ ಬದುಕು ಎಂದರೆ ನಟನೆ ಬರೀ ನಟನೆ*
ಯೋಗ ಮಾಡಿ ದೇಹದ ಸೌಂದರ್ಯ ಕಾಪಾಡಿದರು.
ಹೊಟ್ಟೆ ತುಂಬ ಊಟ ಮಾಡಿದರು.
ಭಾವ ಜೀವಿಯಾಗಿ ಬಾಳಿದರು. ಇಷ್ಟಪಟ್ಟವರನ್ನ ಮನಸಾರೆ ಪ್ರೀತಿಸಿದರೂ ರಗಳೆ ಮಾಡಿಕೊಳ್ಳಲಿಲ್ಲ.
ಆಕರ್ಷಣೆಗೆ ಸಹಜವಾಗಿ ಒಲಿದವರನ್ನು ನಿರಾಶೆಗೊಳಿಸದೇ ಸ್ವೀಕರಿಸಿದರು.
ಯಾವುದೇ ಗಾಸಿಪ್ಪುಗಳಿಗೆ ಬಲಿಯಾಗದ ಆದರ್ಶ ಮೆರೆದರು.
ಮಗುವಿನ ಮುಗ್ಧತೆ, ದೇಸಿಯ ಉಡುಗೆ, ತುಂಬು ಕುಟುಂಬದ ನಿರ್ವಹಣೆ, ಪರದೆ ಮೇಲೆ ಹಾಗೂ ಪರದೆ ಹಿಂದೆ ಅದೇ ಆದರ್ಶ ಸಾರಿದರು.
ನಟನೆ,ಆರೋಗ್ಯ, ಸರಳತೆ,ಸಹಜತೆ ಹಾಗೂ ಜೀವನ ಪ್ರೀತಿಯ ಸೂತ್ರದಿ ಅಲುಗಾಡದ ಏಕತಾನತೆಯ ಮಧುರ ಕಲರವ.
ಈಗ ರಾಜಕುಮಾರ್ ಅವರ ನೂರಾರು ಸಿನಿಮಾಗಳನ್ನು ಹತ್ತಾರು ಬಾರಿ ನೋಡಿದ್ದೇನೆ.
ನಿನ್ನೆ ರಾಜ್ ಅವರ 90 ನೇ ಹುಟ್ಟು ಹಬ್ಬದ ಸಡಗರದಿ ಮತ್ತೆ ಮೆಲುಕು ಹಾಕಿದೆ.
ನಿಧಾನವಾಗಿ ಸಿನಿಮಾ ಪ್ರೀತಿ ಮಂಕಾಯಿತಾದರೂ ರಾಜಕುಮಾರ್ ಸಿನಿಮಾಗಳು ಟಿವಿ ಯಲ್ಲಿ ಮೂಡಿದರೆ ಉಸಿರು ಬಿಗಿ ಹಿಡಿದುಕೊಂಡು ನೋಡುತ್ತಲೇ ಇರುತ್ತೇನೆ ...
----ಸಿದ್ದು ಯಾಪಲಪರವಿ.
Subscribe to:
Post Comments (Atom)
No comments:
Post a Comment