Thursday, April 26, 2018

ನಾನೊಂದ ಅರ್ಥವಾಗದ ಗಪದ್ಯ

*ನಾನೊಂದ ಅರ್ಥವಾಗದ ಗಪದ್ಯ*

ಉಸಿರ ನಿಟ್ಟುಸಿರ ಬಿಡಬೇಡ ಅರ್ಥ
ಆಗಲಿಲ್ಲ ವಾದ-ವಿವಾದ-ಹಿಂಸೆ

ನಿಗೂಢ ಪಯಣದಲಿ ನೂರೆಂಟು
ತರ್ಕದಾಚೆಗಿನ ಉತ್ತರಿಸಲಾಗದ
ಪ್ರಶ್ನೆಗಳು

ಗೊತ್ತಿರುವ ಉತ್ತರ ಆದರೂ ನಿರುತ್ತರ
ಪ್ರಶ್ನೆಗಳ‌ ಕೇಳಬಾರದೆಂಬ ಮನದ
ತಕರಾರಿಗೆ ಇಲ್ಲ ಇಲ್ಲಿ ಉತ್ತರ

ಎಲ್ಲವೂ ಒಗಟು ಕೊಂಚ ಒರಟು
ವಿಶಾದ ವಿವಾದ ಬರೀ ಗೊಂದಲ

ಬಹುದೂರ ಸಾಗಿದ‌‌ ಮೇಲೂ ದಾರಿಯ
ಹುಡುಕಾಟ ಸಾಗಿದ್ದೆಲ್ಲಿಗೆಂಬ ಪರದಾಟ

ಹೋಗಬೇಕು ಹೋಗಲೇಬೇಕು ಪಯಣ
ನಿಲ್ಲಿಸಲಾಗದು ನಿಲ್ಲುವತನಕ ಜೀವ
ಚೈತನ್ಯ

ಸಾಂಗತ್ಯ ಸಾಮಿಪ್ಯದ ಸವಿ ಸುಖದ
ಸಮಾಧಿ ಸ್ಥಿತಿಯಲಿ ಜ್ಞಾನ ಉದಯ

ಮೈಮನಗಳ ರೋಮದಾಳದಲಿ ಒಲವ
ಕಂಪಿನ ಇಂಪಿನ ತಂಪು

ಅನುಭವಿಸಿದ ಅನುಭಾವಕೆ ಬೇಡ
ಅನುಮಾನ ಬಿಗುಮಾನ ಅಜ್ಞಾನ

ಒಮ್ಮೆ ಕಳೆದು ಹೋದರೆ ಈ ಜಗ
ಮಗಿಸುವ ಜಾತ್ರೆಯಲಿ ಹುಡುಕುವುದು
ಕಡುಕಷ್ಟ

ಬಿಡಬೇಡ ಹಿಡಿದ ಕೈ ಬೆರಳ ಬೆಸುಗೆ
ಬಿಗಿಯಾಗಿರಲಿ ಈ ಭವ ಬಂಧನ‌

ನೊಂದಿದ್ದೇವೆ ಬೆಂದಿದ್ದೇವೆ ಕಂದಿದ್ದೇವೆ
ಆದರೂ ಕುಂದದಿರಲಿ‌ ಈ ಅನುಬಂಧ

ಅಹಮಿಕೆ-ಅಜ್ಞಾನ-ಅನುಮಾನ
ಅಲುಗಾಡಿಸದಿರಲಿ ಅಂತ
ರಂಗದ ತವಕ‌ ತಲ್ಲಣಗಳ

ಓದು ನಿಧಾನದಿ ಒಳಗಡಗಿರುವ
ಒಲವಿನಂತರಂಗದ ನಿಧಿಯ ಹುಡುಕು
ಅಡಗಿರುವ ನಿಶಬ್ದ ಶಬ್ದಗಳ ನಿಗೂಢ
ಅರ್ಥಗಳ

ಕೈಬಿಟ್ಟು ಕಳೆದುಕೊಂಡರೆ ಸಿಗುವುದೇ
ಕಷ್ಟ ಇನ್ನು ಅರ್ಥವಾಗುವ ಮಾತು
ಮಾರು ಹರದಾರಿ ದೂರ

ಕಳೆಯದೇ ಕೂಡೋಣ ಕೂಡಿ
ನಲಿಯೋಣ ಕೂಡಿದರೂ ಕಳೆಯದೇ

ಹೊಸ ಹೊಸ ಭಾಷ್ಯೆ ಬರೆದು ಇತಿಹಾಸ
ಪುಟಗಳಲಿ ಥಳ ಥಳ ಹೊಳೆಯುತ

ಒಲವ ದನಿಗೆ ಧ್ವನಿಯಾಗಿ ರಿಂಗಣಿಸುತ
ರಿಂಗಣಿಸುತ ಸುಮಧುರ ಹಾಡಾಗೋಣ.

No comments:

Post a Comment