Sunday, November 26, 2017

ವಿದಾಯದ ಮಿಲನ

*ವಿದಾಯದ ಮಿಲನ*

ಎರಡೂ ಅಷ್ಟೇ ಪೂರಕ
ಪ್ರತಿ ಮಿಲನಕೂ ಇರಲೇಬೇಕು
ವಿದಾಯ ವಿದಾಯವಿಲ್ಲದೆ ಮಿಲನಿಸುವು-
ದಾದರೂ ಹೇಗೆ ?

ಹೋಗುವೆ ಅಲ್ಲ ಹೋಗಿ-
ಬರುವೆ ಮತ್ತೆ ಮತ್ತೆ ನಾ-
ನೀ

ಹತ್ತಿರವಿದ್ದವರು ಸದಾ ದೂರ ನೀ
ದೂರವಿದ್ದರೂ ಇಲ್ಲೇ ಹತ್ತಿರ
ಹಾಗಂತ ಬೇಡವೇ ಬೇಡ ಸದಾ  ನಾ
ಹತ್ತಿರ

ದೂರದೂರಿನ ಮಿಲನಕೆ ಸಾವಿರದ
ಸಾವೇ ಇರದ ಸವಿಸುಖ ಚಿಮ್ಮಿ
ಪುಟಿಯುವ ಜೀವತಾರುಣ್ಯ ವಯ
ಮಾನಕೂ ಮೀರಿದ ತೀವ್ರತೆ

ಇದು ಬರೀ ಕೂಡುವಿಕೆಯಲ್ಲ ನಾವೇ
ಕಳೆದುಹೋಗುವ ಪರಿ ಪರಿ
ಏದುರಿಸ ಸಂಚಲನಕೆ ಅಪರಿಮಿತ
ಲಯ-ರಾಗ-ತಾಳ-ಮೇಳಗಳ
ಮಹಾಸಮ್ಮೇಳನ

ಮತ್ತೆ ಮತ್ತೆ ಸೇರೋಣ ಆಗೊಮ್ಮೆ
ಈಗೊಮ್ಮೆ ಮಗದೊಮ್ಮೆ ನಿತ್ಯ ಬರೀ
ಮಾತಾಡೋಣ
ಸೇರಿದಾಗ ಎಲ್ಲ ಕೂಡಿ ಕಳೆಯೋಣ

ವಿದಾಯ-ಮಿಲನ ಎರಡೂ ಅವನೇ
ಹೊಣೆಗಾರ ಬಾ ಎಂದಾಗ ಬರೋಣ
ಹೋಗು ಎಂದಾಗ ಸುಮ್ಮನೇ ನಡೆದು
ಬಿಡೋಣ

ಮತ್ತೆ ಮಿಲನದ ಸಡಗರವ
ನೆನಪಿನಲಿ ನೆನೆಯುತ್ತ ನೆನೆಯುತ.

---ಸಿದ್ದು ಯಾಪಲಪರವಿ.

Sunday, November 12, 2017

ಮಾಯವಾದ ಪ್ರೇಮ

*ಲವ್ ಕಾಲ*

*ಮಾಯವಾದ ಪ್ರೇಮ ಏನಿದ್ದರೂ ಡೇಟಿಂಗ್*

ನನ್ನ ಬ್ಲಾಗಿನ ಜನಪ್ರಿಯ ಅಂಕಣ *ಲವ್ ಕಾಲ* .

ಇತ್ತೀಚೆಗೆ ಫೇಸ್ ಬುಕ್ ಭರಾಟೆಯಲಿ ಸುದೀರ್ಘ ಬರಹ ಮಂಕಾಗಿದೆ. ಓದುವ ಪುರುಸೊತ್ತೇ ಇಲ್ಲ .

ಅಲ್ಲಲ್ಲಿ ಗಂಭೀರ ಓದುಗರು ಸಿಗುತ್ತಾರೆ ಎಂಬ ಕಾರಣಕ್ಕೆ ನಮ್ಮಂತವರು ಬರೆಯುತ್ತೇವೆ.

ಹೋಗಲಿ ಬಿಡಿ ವಿಷಯಕ್ಕೆ ಬರುತ್ತೇನೆ . ಸಾಹಿತ್ಯದ ವಿದ್ಯಾರ್ಥಿಯಾಗಿ ಅನೇಕ ಪ್ರೇಮ ಕಥೆಗಳನ್ನು ಓದಿದ್ದೇನೆ , ಕೇಳಿದ್ದೇನೆ ಹಾಗೆ ಹೇಳಿದ್ದೇನೆ .

ಆದರೆ ಈಗ ಅದಕ್ಕೆ *ಸಮಯವಿಲ್ಲ* ಎಂಬ ವಾತಾವರಣ . ಫಾಸ್ಟ್ ಫುಡ್ ಯುಗದಲ್ಲಿ ಫಾಸ್ಟ್ ಸಂಬಂಧಗಳು .
ಅಷ್ಟೇ ಬೇಗ ಹಳಸಿಬಿಡುತ್ತವೆ .

ಪ್ರೀತಿಸಿ ಮರ ಸುತ್ತಿ ಪ್ರೇಮ ಪತ್ರ ಬರೆಯುವುದು ಈಗ ಬಿಗ್ ಜೋಕ್ .

ಆಧುನಿಕ ದಿನಗಳ ಡೇಟಿಂಗ್ , ಲಿವ್ ಇನ್ ರಿಲೇಶನ್ , ವೀಕ್ ಎಂಡ್ ಸ್ಟೇ ಇತ್ಯಾದಿ ದೇಹಕೇಂದ್ರಿತ ಸಂಬಂಧಗಳು ತಲ್ಲಣವನುಂಟು ಮಾಡಿವೆ .

*ದೇಹವೇನು ಬಟ್ಟೆಯಾ ಬದಲಿಸಲು* ಎಂಬ ಕಾಲ ಹೋಗಿದೆ . ಕೊಳೆಯಾದ ಬಟ್ಟೆಯಂತೆ ಸಂಬಂಧಗಳು ಕೊಳೆತು ಕಳೆದು ಹೋಗುತ್ತವೆ , ಬದಲಾಗುತ್ತವೆ .

ಪ್ರೀತಿ-ಪ್ರೇಮ-ಪ್ರಣಯಗಳಲಿ ಹಿಂದೆ ಇದ್ದ ಥ್ರಿಲ್ ಈಗ ಇಲ್ಲವೇ ಇಲ್ಲ very practical and mechanical .

ನಾವು ವಿದ್ಯಾರ್ಥಿಗಳಾಗಿದ್ದಾಗ ಪ್ರತಿಶತಃ 80 ಪ್ರೇಮಿಗಳು ಇರುತ್ತಿದ್ದರು . ಎಲ್ಲವೂ ಬರೀ ತೇಲಾಡುವ ಅನುಭವ . ದೇಹಸಂಬಂಧ , ಮದುವೆ ಏನೂ ಇಲ್ಲ !

ಗಣ ಗಣ ತಿರುಗಿ , ಗಂಟೆಗಟ್ಟಲೆ ಮಾತಾಡಿ , ನೂರಾರು ಪುಟ ಪತ್ರ ಬರೆದು ಊರು ಸೇರೋದು ಅಷ್ಟೇ !!

ಈಗ ವಾತಾವರಣಕ್ಕೆ ತಕ್ಕಂತೆ ಪ್ರೀತಿ , ಅದರ ಸ್ಥಿತಿಯೂ ಭಿನ್ನ . ಭಾವುಕತೆ ಮಾಯ .

SMS , fb ,watsapp ಇತ್ಯಾದಿ ಬರಹಗಳ short ಸಂದೇಶಗಳಂತೆ ಅಷ್ಟೇ short ಆಗಿ ಮುಗಿದುಬಿಡುತ್ತವೆ .

ಕಾಲೇಜಿನ ಸಂಬಂಧಗಳು , ವೃತ್ತಿ ಬದುಕಿನ ಸಂಬಂಧಗಳು ಯಾವುದೇ ಇರಲಿ very short and hot no sweet .
ಭಾವ ತೀವ್ರತೆಯ ಕೊರತೆ .

*ಆದರೂ ಲಕ್ಷಕ್ಕೆ ಒಂದು ಜೋಡಿ ಹಕ್ಕಿಗಳು ಹಾರುತ್ತವೆ*

ಉರ್ದು ಹಾಗೂ ಹಿಂದಿ ಭಾಷೆಯಲ್ಲಿ ಬರೆದ *ಸಾಹಿರ್ ಲೂಧಿಯಾನ್ವಿ ಹಾಗೂ ಅಮೃತಾ ಪ್ರಿತಮ್* ನನ್ನನ್ನು ಈಗಲೂ ಕಾಡುತ್ತಾರೆ .

ಕೇವಲ 59 ವರ್ಷ ಬದುಕಿದ ಸಾಹಿರ್ ಎಂದಿಗೂ ಸಾಯುವದಿಲ್ಲ . ಪ್ರಿತಮ್ ತನಗೆ ಸಿಗದ ಸಾಹಿರ್ ನೆನಪಲಿ ಹೆಚ್ಚು ಕಾಲ ಬದುಕಿ ಅಷ್ಟೇ ತೀವ್ರವಾಗಿ ಬರೆದು ಅಮರಳಾಗಿದ್ದಾಳೆ .

ಅವನು ಸೇದಿ ಬಿಸಾಕಿದ ತುಂಡು ಸಿಗರೇಟ್ , ಅವಳು ಕುಡಿದಿಟ್ಟ ಚಹಾದ ಕಪ್ ಪ್ರೇಮ ಸಂಕೇತದ ಪ್ರತಿಮೆಗಳು .

ಅವನ ಹಾಡುಗಳನ್ನು ಗುನುಗುನಿಸುವ ಕಂಠದಲಿ ಸಾಹಿರ್ ಜೀವಂತವಾಗಿದ್ದಾನೆ .

ಇಂತಹ ಭಾವುಕ ಲೋಕದಲ್ಲಿ ತೇಲಾಡಿದ ಪ್ರೇಮ ಪ್ರಕರಣಗಳು ನಮ್ಮ ಯುವಕರಿಗೆ ತಮಾಷೆಯಾಗಿ ಕಾಣುವದು ಸಹಜ .

ದೇಹಯಜ್ಞ ಯುಗದಲ್ಲಿ ಬೆಂದು ಹೋಗುವ ಯುವಕರು ತಮ್ಮ ಜೀವನ ಶೈಲಿಯನ್ನು ಕೊಂಚ ಬದಲಾಯಿಸಿಕೊಳ್ಳಬೇಕು ಎಂದನಿಸುವುದು ಸಹಜ .

ನಾನು *ವಾಸ್ತವದಲೆಗಳ ಮೇಲೆ ಭಾವ ಪಯಣದಲಿ* ಇದ್ದೇನೆ ಬೇಕಾದರೆ ನೀವು ಬನ್ನಿ , ಕರೆದುಕೊಂಡು ಹೋಗುವೆ .

---ಸಿದ್ದು ಯಾಪಲಪರವಿ.