Thursday, November 29, 2018

ಎಚ್. ಕಾವ್ಯಶ್ರೀ ನಾಟಕ ಅಗ್ನಿದಿವ್ಯ

ಸಂಶಯದ ಮೇಲೆ ಮತ್ತೊಂದು ಗದಾಪ್ರಹಾರ
*ಎಚ್.ಕಾವ್ಯಶ್ರೀ ಅವರ ನಾಟಕ  ಅಗ್ನಿದಿವ್ಯ*

ಸಾಹಿತ್ಯದಲ್ಲಿ ಅಗ್ರಸ್ಥಾನ ಕಾವ್ಯಕ್ಕೆ  , ದೃಶ್ಯ ಮಾಧ್ಯಮದಲ್ಲಿ ನಾಟಕಕ್ಕೆ ಕಾರಣ ಬೀರಬಹುದಾದ ತೀವ್ರ ಪರಿಣಾಮ.

ಕಿರುತೆರೆ ಹಾಗೂ ಹಿರಿತೆರೆ ಮೇಲಿರುವ ಕೃತಕತೆ ಹಾಗೂ ಢಾಳತೆಯಿಂದ ಬಹು ದೂರವಿರುವ ರಂಗಭೂಮಿ ದೃಶ್ಯ ಪ್ರಕಾರದ ಹಿರಿಯಣ್ಣ.

ನಾಟಕದ ಮೂಲಕ ಅತ್ಯಂತ ಗಂಭೀರ ವಿಷಯಗಳನ್ನು ತೀಕ್ಷ್ಣವಾಗಿ ಪ್ರತಿಬಿಂಬಿಸಬಹುದು.

ಈ ಹಿನ್ನೆಲೆಯಲ್ಲಿ ಎಚ್.ಕಾವ್ಯಶ್ರೀ ಅವರು  *ಅಗ್ನಿದಿವ್ಯ*ದ ಮೂಲಕ ಹೊಸ  ಕಾಣಿಕೆ ನೀಡಿದ್ದಾರೆ.

ನಮ್ಮ ಮಹಾಕಾವ್ಯದ ಪಾತ್ರಗಳು ದಿನಕ್ಕೊಂದು ಬಗೆಯಲಿ ಕಾಡುತ್ತಲೇ ಇವೆ. ಸೀತೆ , ದ್ರೌಪದಿ , ಊರ್ಮಿಳೆ , ಶಾಕುಂತಲೆ , ಅನುಭವ ಮಂಟಪದ ಅಕ್ಕ , ಶೆಕ್ಷಪಿಯರ್ ನಾಟಕದ ಡೆಸ್ಡಿಮೋನಾ ಎಲ್ಲರೂ ಬಗೆ ಬಗೆಯಾದ ಅನುಭವ ನೀಡುತ್ತಾರೆ.

ಸೀತೆ ಎದುರಿಸಿದ ಅಗ್ನಿಪರೀಕ್ಷೆಯನ್ನು ಆಧುನಿಕ ಮಹಿಳೆಯರ ಸಮಕಾಲೀನ ಸವಾಲುಗಳ ಮೇಲೆ ಬೆಳಕು ಚಲ್ಲಿದ್ದಾರೆ.

ರಾಮಾಯಣ ದೃಶ್ಯಗಳನ್ನು ಆಧರಿಸಿ ನಡೆಯುವ ರಿಹರ್ಸಲ್ ಮೂಲಕ ನಾಟಕ ಪ್ರಾರಂಭವಾಗುತ್ತದೆ . ನಟರು ರಾಮಾಯಣದ ದೃಶ್ಯಗಳಲ್ಲಿ ಮುಳುಗಿಹೋಗಿ ತಮ್ಮನ್ನು ತಾವು ಸಮೀಕರಿಸಿಕೊಳ್ಳುವ ಬಗೆ ಕೂಡಾ ವಿಭಿನ್ನ.

ನಾಟಕ ಆರಂಭವಾದ ಕೆಲವೇ ನಿಮಿಷಗಳಲ್ಲಿ ವಸ್ತು ನವಿರಾಗಿ ತೆರೆದುಕೊಳ್ಳುತ್ತದೆ. ಅಗ್ನಿಪರೀಕ್ಷೆಗೆ ಒಳಗಾಗುವಾಗ ಸೀತೆ ಕೇಳುವ ಪ್ರಶ್ನೆಗಳಿಗೆ ಉತ್ತರಿಸುವುದು ಕಷ್ಟ .

ಅಗ್ನಿಪರೀಕ್ಷೆಗೆ ರಾಮ ಕೊಡುವ ಕಾರಣಗಳನ್ನು ಸೀತೆ ಕೇಳಿಸಿಕೊಂಡು ನಂತರ  ತಿರುಗೇಟಿನ ಮೂಲಕ ಕೊಡುವ ಪೆಟ್ಟು ಸಣ್ಣದಲ್ಲ.

ಪುರುಷಪ್ರಧಾನ ವ್ಯವಸ್ಥೆಯಲ್ಲಿ ಹೆಣ್ಣು ಸಂಪ್ರದಾಯದ ನೆಪದಲ್ಲಿ ಅನುಭವಿಸುವ ಯಮಯಾತನೆಯನ್ನು  ಅರ್ಥಪೂರ್ಣವಾಗಿ ಹೆಣೆಯಲಾಗಿದೆ.

ರಾಮ-ಸೀತೆಯರ ಪಾತ್ರಧಾರಿಗಳ ತೊಳಲಾಟದ  ಮನೋಕ್ಷೋಭೆಯನ್ನು ಪರಿಣಾಮಕಾರಿಯಾಗಿ ನಾಟಕಕಾರರು ಮುಖದ ಮೇಲೆ ಎಸೆಯುತ್ತಾರೆ .

ಅಗ್ನಿಪರೀಕ್ಷೆ ಹಾಗೂ ಅಗಸನ ಮಾತಿಗೆ ಮನ್ನಣೆ ಕೊಟ್ಟು ಕಾಡಿಗೆ ಅಟ್ಟುವ ಮೂಲ ಉದ್ದೇಶ ಕೇವಲ *ಸಂಶಯ* ಮಿಕ್ಕದ್ದೆಲ್ಲ ಬರೀ ನೆಪ.

ರಾಮಾಯಣದ ಸೀತೆ ಹಾಗೂ ಪಾತ್ರದಾರಿ ದಿವ್ಯ ಎದುರಿಸುವ ತಲ್ಲಣ ಒಂದೇ ಆದರೆ ಕಾಲ ಬೇರೆ.

ಸೀತೆ ಅನುಭವಿಸಿದ ಹಿಂಸೆಯನ್ನು ದಿವ್ಯ ಎದುರಿಸಿ ಅರಗಿಸಿಕೊಳ್ಳಲು ಪ್ರಯತ್ನಿಸುತ್ತಾಳೆ ಆದರೆ ಕೊನೆಗೆ ಅವಳು ತೆಗೆದುಕೊಳ್ಳುವ ನಿರ್ಣಯ !
ಅಬ್ಬಾ ! ಪ್ರೇಕ್ಷಕ ನಿಟ್ಟುಸಿರು ಬಿಡುತ್ತಾನೆ.

ಇಂತಹ ಕಠಿಣ ವಸ್ತುವನ್ನು ರಂಗದ ಮೇಲೆ ಪ್ರಯೋಗ ಮಾಡುವದೊಂದು ದೊಡ್ಡ ಸವಾಲು.
ಆ ಸವಾಲನ್ನು ನಿರ್ದೇಶಕ ಲಕ್ಷ್ಮಣ ಪೀರಗಾರ ಸಮರ್ಪಕವಾಗಿ ನಿರ್ವಹಿಸಿದ್ದಾರೆ.

ಮನುಷ್ಯನ ಮನಸ್ಸಿನ ಸೂಕ್ಷ್ಮಾತೀತ ಸಂಗತಿಗಳ ಎಳೆಹಿಡಿದು ನಮ್ಮ ಸಂಪ್ರದಾಯದ ಮೂಲಭೂತವಾದವನ್ನು ಕೆಣಕುತ್ತಾರೆ.

ಹೆಣ್ಣನ್ನು ಸಂಶಯಿಸಿ , ಸತಾಯಿಸಿ ಕಾಡುವ ರೀತಿ ರಿವಾಜುಗಳ ಮೇಲೆ  ನಾಟಕಕಾರರು ಗದಾಪ್ರಹಾರ ಮಾಡಿ ಕೊಂಚ ಆಲೋಚನೆಗೆ ಹಚ್ಚಲು ಯಶ ಸಾಧಿಸಿದ್ದಾರೆ.

ಗದಗ ಜಿಲ್ಲೆಯ ರೋಣ ತಾಲೂಕಿನ ಕೊತಬಾಳ ಗ್ರಾಮದ ಅರುಣೋದಯ ಕಲಾತಂಡದ ಶಂಕರಣ್ಣ ಸಂಕಣ್ಣವರ್ ಹಾಗೂ ಕಲಾವಿದರ ಶ್ರಮ ಸಾರ್ಥಕವೆನಿಸುತ್ತದೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಲಾತಂಡಗಳನ್ನು ಉತ್ತೇಜಿಸುವ ಹೊಸ ಯೋಚನೆಯ  ಪ್ರತಿಫಲವೇ *ಅಗ್ನಿದಿವ್ಯ*.

*ನೊಂದವರ ನೋವ ನೋಯದವರು ಎತ್ತ ಬಲ್ಲರು* ಎಂಬ ಮಹದೇವಿ ಅಕ್ಕನ ಸಾಲುಗಳು ಮನದ ತುಂಬೆಲ್ಲ ರಿಂಗಣಿಸುತ್ತಿರುವಾಗ ನೂರಾರು ಸೀತೆಯರ ಅಸಹಾಯಕತೆ ನೆನಪಾಯಿತು.

ಸೂಕ್ಷ್ಮ ವಿಷಯವನ್ನು ರಂಗಾಭಿನಯದ ಮೂಲಕ ಮನದಾಳದಲಿ ಅಚ್ಚೊತ್ತಲು ಕಾರಣರಾದ ಎಲ್ಲರಿಗೂ ಅಭಿವಂದನೆಗಳು.

ಮಹಿಳಾ ಸಬಲೀಕರಣ ಹಾಗೂ ಫೆಮಿನಿಸಮ್ ಕುರಿತ ರಂಗ ಪ್ರತಿಪಾದನೆಯ ಮುನ್ನೋಟ ಇದು.

---ಸಿದ್ದು ಯಾಪಲಪರವಿ.

ಗದ್ದುಗೆಯ ಗದಗ

ಅವಿಭಜಿತ ಧಾರವಾಡ ಜಿಲ್ಲೆಯ ಗದುಗಿನ ಹಿರಿಮೆ ಚಿರಕಾಲ ಸ್ಮರಣೀಯ.
ಸಾಹಿತ್ಯ, ಸಂಗೀತ, ಲಲಿತಕಲೆ, ಆಧ್ಯಾತ್ಮ, ಮುದ್ರಣ, ಸಹಕಾರ, ನೇಕಾರಿಕೆ, ಕೋಮುಸೌಹಾರ್ದತೆ ಹಾಗೂ ಬಸವೇಶ್ವರ ಪುತ್ಥಳಿಯಿಂದಾಗಿ ಅಂತರರಾಷ್ಟ್ರೀಯ ಖ್ಯಾತಿ ಗಳಿಸಿದೆ.

ಕುಮಾರವ್ಯಾಸ ತನ್ನ ಮಹಾಭಾರತವನ್ನು ಇಲ್ಲಿನ ವೀರನಾರಾಯಣ ಗುಡಿಯಲ್ಲಿ ರಚಿಸಿದ್ದರಿಂದ ವಿಶೇಷ ಸಾಹಿತ್ಯಕ ಮನ್ನಣೆ ಗದುಗಿಗೆ ಇದೆ.

ತೋಂಟದಾರ್ಯ ಮಠದ ಪೂಜ್ಯ ಡಾ.ತೋಂಟದಾರ್ಯ ಸಿದ್ಧಲಿಂಗ ಮಹಾಸ್ವಾಮಿಗಳು ಕನ್ನಡದ ಜಗದ್ಗುರು ಎಂದೇ ಖ್ಯಾತರಾದವರು. ತಮ್ಮ ಶಿವಾನುಭವ ಹಾಗೂ ಲಿಂಗಾಯತ ಅಧ್ಯಯನ ಸಂಸ್ಥೆಯ ಮೂಲಕ ಬಹುದೊಡ್ಡ ಸಾಹಿತ್ಯಕ  ಹಾಗೂ ಸಾಂಸ್ಕೃತಿಕ ಕ್ರಾಂತಿಯನ್ನೇ ಮಾಡಿದ್ದಾರೆ. ‌
ಅವರು ಪ್ರಕಟಿಸಿದ ಅಪರೂಪದ ಸಂಶೋಧನಾತ್ಮಕ ಕೃತಿಗಳು ಸಂಗ್ರಹಯೋಗ್ಯ ಗ್ರಂಥಗಳಾಗಿವೆ.

ಪಂಡಿತ್ ಪಂಚಾಕ್ಷರ ಗವಾಯಿಗಳು ಸ್ಥಾಪಿಸಿದ ವೀರೇಶ್ವರ ಪುಣ್ಯಾಶ್ರಮ ಸಾವಿರಾರು ಅಂಧ, ಅನಾಥ ಮಕ್ಕಳಿಗೆ ಸಂಗೀತ ಅಭ್ಯಾಸ ನೀಡಿ ಅಂತರರಾಷ್ಟ್ರೀಯ ಸಂಗೀತ ಕಲಾವಿದರನ್ನು ನಾಡಿಗೆ ನೀಡಿದೆ. ಅವರ ಶಿಷ್ಯಂದಿರಾದ ಪಂಡಿತ್ ಪುಟ್ಟರಾಜ ಗವಾಯಿಗಳು ಅದೇ ಪರಂಪರೆಯ ಮೂಲಕ ಹಿಂದುಸ್ತಾನಿ ಸಂಗೀತದ ಪರಂಪರೆಯನ್ನು ನಾಡಿನಾದ್ಯಂತ ಪಸರಿಸಿದರು.
ಖ್ಯಾತ ಹಿಂದುಸ್ತಾನಿ ಗಾಯಕ ಪಂಡಿತ್ ಭೀಮಸೇನ ಜೋಶಿ ಈ ನೆಲದ ಮಗ ಎಂಬುದು ಮರೆಯಲಾಗದು.

ಟಿ.ಪಿ.ಅಕ್ಕಿ ಅವರು ಪ್ರಾರಂಭಿಸಿದ ವಿಜಯ ಕಲಾ ಮಂದಿರದ ಕಲಾವಿದರು ಜಗತ್ತಿನ ತುಂಬ ಹೆಸರು ಮಾಡಿದ್ದಾರೆ. ವಿಜಯ ಕಲಾ ಮಂದಿರ  ಕಲಾಶಿಕ್ಷಕರ ತವರು ಮನೆ ಎನಿಸಿಕೊಂಡಿದೆ.

ಜಾತ್ಯಾತೀತ ಆಧ್ಯಾತ್ಮ ಪರಂಪರೆಗೆ ಹೊಸ ಭಾಷ್ಯ ಬರೆದ ಜಗದ್ಗುರು ಶಿವಾನಂದ ಮಹಾಸ್ವಾಮಿಗಳು ತಮ್ಮ ಮಠದ ಮೂಲಕ ನೂರಾರು ಸಂತರಿಗೆ ಶಿವ ದೀಕ್ಷೆ ಕರುಣಿಸಿದರು.
ಪೂಜ್ಯ ಸಿದ್ಧೇಶ್ವರ ಮಹಾಸ್ವಾಮಿಗಳ ಗುರುಗಳಾದ ಮಲ್ಲಿಕಾರ್ಜುನ ಸ್ವಾಮಿಗಳು ಇದೇ ಮಠದ ಶಿಷ್ಯರೆಂಬುದು ಅಭಿಮಾನದ ಸಂಗತಿ.

ಮುದ್ರಣ ಕಾಶಿ ಎಂದೇ ಖ್ಯಾತಿ ಹೊಂದಿರುವ ಇಲ್ಲಿನ ಪ್ರೆಸ್ಸುಗಳು ಮುದ್ರಿಸಿದ ಪಂಚಾಂಗ, ಕ್ಯಾಲೆಂಡರ್, ಶಬ್ದಕೋಶಗಳು ಹಾಗೂ ಪುಸ್ತಕಗಳು ಇಂದಿಗೂ ತಮ್ಮ ಮಾರುಕಟ್ಟೆ ಉಳಿಸಿಕೊಂಡಿವೆ.

ಏಷ್ಯಾ ಖಂಡದ ಮೊಟ್ಟ ಮೊದಲ ಸಹಕಾರ ಸಂಸ್ಥೆ ಇಲ್ಲಿನ ಕಣಗಿನಹಾಳದಲ್ಲಿ ಎಸ್.ಎಸ್.ಪಾಟೀಲ್ ಅವರಿಂದ ಸ್ಥಾಪಿಸಲ್ಪಟ್ಟಿತು.

ಬೆಟಗೇರಿ ನೇಕಾರರು ಖುದ್ದಾಗಿ ನೇಯುವ ಸೀರೆ, ಕುಪ್ಪಸಗಳ ಕಸುವುಗಾರಿಕೆಗೆ ಅಂತರರಾಷ್ಟ್ರೀಯ ಮಾರುಕಟ್ಟೆ ಇದೆ. ಬೆಟಗೇರಿ ನೇಕಾರಿಕೆ ಈಗ ಆಧುನಿಕ ಸ್ವರೂಪ ಪಡೆದುಕೊಂಡು ತನ್ನ ಕೌಶಲ್ಯ ಉಳಿಸಿಕೊಂಡಿದೆ.

ಇಲ್ಲಿನ ಜುಮ್ಮಾ ಮಸೀದಿ, ತ್ರಿಕೂಟೇಶ್ವರ ಹಾಗೂ ವೀರನಾರಾಯಣ ದೇವಾಲಯಗಳಿಗೆ ಒಂದೇ ಟ್ರಸ್ಟ್ ಕಮಿಟಿ ಹೊಂದಿದ ದೇಶದ ಮಾದರಿ ಕೋಮುಸೌಹಾರ್ದತೆಯ ಕೇಂದ್ರ ಎನಿಸಿಕೊಂಡಿದೆ.

ಭೀಷ್ಮ ಕೆರೆಯಲ್ಲಿ ಸ್ಥಾಪಿಸಿರುವ ನೂರಾ ಹದಿನಾರು ಅಡಿ ಎತ್ತರದ ಬೃಹದಾಕಾರದ ಬಸವೇಶ್ವರ ಪುತ್ಥಳಿ ಪ್ರವಾಸಿಗರ ಆಕರ್ಷಣೆಯ ಕೇಂದ್ರವಾಗಿದೆ.

ಗದುಗಿನ ಮಿರ್ಚಿ, ಬದನೆಕಾಯಿಗೂ ತನ್ನದೇ ಆದ ಸ್ವಾದಿಷ್ಟ ಸವಿರುಚಿಯಿದೆ.
ಹೀಗೆ ಹತ್ತು ಹಲವು ಆಯಾಮಗಳ ಬಹು ಸಂಸ್ಕೃತಿಯ ನಗರವನ್ನು ಹೆಮ್ಮೆಯಿಂದ ಸ್ಮರಿಸಿಕೊಳ್ಳುವೆ.‌

Tuesday, November 20, 2018

ಹಾರಿ ಹೋಗುವ ಜೀವಕೆ...

#ಮಾನಸೋಲ್ಲಾಸ

*ಹಾರಿ ಹೋಗುವ ಜೀವಕೆ ಯಾಕೆ ತಲ್ಲಣ*

ಗೊತ್ತು ನಮಗೆಲ್ಲ ಇದು ಥಟ್ ಅಂತ ಹಾರಿ ಹೋಗುವ ಜೀವ. ಮಿತಿಮೀರಿದ ಅಹಮಿಕೆ, ಅಪಾರ ಸೋಗಲಾಡಿತನ, ಭಯಾನಕ ಮಹತ್ವಾಕಾಂಕ್ಷೆ,  ಕಳೆದುಕೊಂಡರೆ ಹೇಗೆಂಬ ಅನುಮಾನ, ಬಿಡಲಾರೆನೆಂಬ ವ್ಯಾಮೋಹ, ಹಪಾಹಪಿ, ಚಡಪಡಿಕೆ, ಧಾವಂತ, ಅಸಹನೆ, ಮನೋವಿಕಾರ, ಚಪಲತೆ…

ಅಯ್ಯೋ ಬಿಡಿ ನೆಗೆಟಿವ್ ಭಾವಗಳ ಪಟ್ಟಿ ದೊಡ್ಡದಿದೆ. ಇದು ಆಗಾಗ ನನ್ನೊಳಗೆ ಕಾಡುವ, ಕೆಣಕುವ ವಿಕಾರಗಳು.

ನಿಜ ಆತ್ಮಾನುಸಂಧಾನಕೆ ಇಳಿಸುವ ಮನಸಿಗೆ ಪಾಠ ಕಲಿಸಲೆಂದೇ ಆಸ್ಪತ್ರೆ, ಸ್ಮಶಾನಗಳ ಭೇಟಿ, ಉಕ್ಕಿ ಹರಿಯುವ ಅನರ್ಥ ಸ್ಮಶಾನ ವೈರಾಗ್ಯ.

ನನಗಿರುವ ಭಯಾನಕ ವ್ಯಾಮೋಹವನ್ನು ಮೋಹಿಸುವ ಸಂಗಾತಿಗಳಿಗೆ ಪ್ರಾಮಾಣಿಕವಾಗಿ ಹೇಳಿ ತಪ್ಪನ್ನು ಒಪ್ಪಿಕೊಳ್ಳುವ ಸಜ್ಜನಿಕೆ. ನಿರ್ಮೋಹಿಯಾಗುವ ಇರಾದೆ ಮಾತ್ರ ನಿಲ್ಲುತ್ತಿಲ್ಲವೆಂಬುದೇ ಸದ್ಯದ ಸಮಾಧಾನ.‌

ಉಸಿರಾಟ ಕ್ರಿಯೆಯ ಒಳಹೊರಗಿನಾಟ ಇರುವತನಕ ಈ ಜೀವ ಇರುತ್ತದೆ. ಒಳಹೊರಗಿನ ಪ್ರಕ್ರಿಯೆ ನಿಂತ ಕೂಡಲೇ ನಮ್ಮ ಕತೆ ಮುಗಿಯಿತು.
ಈ ತಲ್ಲಣವೂ ಈ ಜನುಮಕೆ ಜೋಡು. ಸಂಗತಿ ಅರಿತಿರುವ ಸಂಗಾತಿಗಳು ಸಹಿಸಿಕೊಳ್ಳಲೆಂಬ ಬಯಕೆ ಬೇರೆ.

ನಮ್ಮ ಸಾಮಿಪ್ಯದ ಸಂಗಾತಿಗಳು ನಮ್ಮನ್ನು ಸದಾ ಮುದ್ದು ಮಾಡಲಿ ಆದರೆ ನಾ ಮಾಡಬಹುದು ಇಲ್ಲ ಬಿಡಬಹುದು.
ಇದ್ಯಾವ ನ್ಯಾಯ ಅಂತೀರಾ? ಹೌದು ಮನಸಿನ ಕುರುಡಿಗೆ ಏನೂ ಕಾಣಿಸುವುದೇ ಇಲ್ಲ. ‌

ಜೋರಾಗಿ ಕೂಗಾಡಿ, ಮನಸ ನೋಯಿಸಿ, ಮತ್ತೆ ಮಗುವಿನ ಹಾಗೆ ಬಿಕ್ಕಿ ಬಿಕ್ಕಿ ಅತ್ತು ಸೊಕ್ಕ ಮರೆತಾಗ ಥೆಟ್ ಹುಚ್ಚು ಖೋಡಿ ಮನಸು.

ಹಟ, ದಿಮಾಕು, ಸೊಕ್ಕು ತುಂಬಿ ತುಳುಕಿ ಮುಖ ಗಂಟಿಕ್ಕಿ ಮಗುವಿನ ಹಾಗೆ ರಚ್ಚೆ ಹಿಡಿಯುವ ಮನಸ ರಮಿಸಲು ಸಾವಿರದ ನಿರ್ಮಲ ಕೈಗಳೇ ಬೇಕು. ‌

ಉಸಿರ ಹಸಿರಲಿ ಅರಳಿ ಘಮಘಮಿಸುವ ಕಂಪಿನ ಇಂಪಲಿರುವ ಸಂಗಾತಿಗಳು ನಿಜಾರ್ಥದಲಿ ನಮ್ಮವರಾಗಿದ್ದಾರೆ ಈ ಹುಚ್ಚಾಟಗಳ ಸಹಿಸಿಕೊಂಡು ಎದೆಗವಚಿ ಕೆನ್ನೆಗೆ ನಾಲ್ಕು ಬಾರಿಸಿ ಬುದ್ಧಿ ಹೇಳುತ್ತಾರೆ *ಥೇಟ್ ಅವ್ವನ* ಹಾಗೆ.

ಸಹನೆ ಕಳೆದುಕೊಂಡವರು, ಯಾವುದೋ ಸ್ವಾರ್ಥಕೆ ಬೆನ್ನು ಬಿದ್ದವರು ನಡು ರಸ್ತೆಯಲಿ ಕೈಬಿಟ್ಟು ನಡೆದೇ ಬಿಡುತ್ತಾರೆ.

*ಸ್ವಾರ್ಥಿಗಳ ಕಂಡು ಹಿಡಿಯುವ ಗೊಂದಲದಲಿ ನಿಸ್ವಾರ್ಥ ಜೀವಗಳು ಘಾಸಿಗೊಳ್ಳುವುದು ಬೇಡ ಮಗಾ* ಎಂದು  ಯಾರೋ ಕೂಗಿ ಹೇಳಿದಂತಾಗಿ ಥಟ್ಟನೇ ಎದ್ದು ಕುಳಿತೆ.
*ಬಳಿ ನೀನಿದ್ದೆ. ನಿನಗೋ ಬರೀ ನಿದ್ದೆ*.

  *ಸಿದ್ದು ಯಾಪಲಪರವಿ*

Saturday, November 17, 2018

ಆತ್ಮೀಯರ ಅಂತರಂಗ

*ಆತ್ಮೀಯರ ಅಂತರಂಗ ಕೇಳಿಸಲಿ*

ಅನೇಕ ಬಾರಿ ಹೇಳಿಕೊಂಡಂತೆ ಒಬ್ಬ ವ್ಯಕ್ತಿಯ ಬದುಕಿನಲ್ಲಿ ಅಬ್ಬಬ್ಬಾ ಅಂದರೆ ನಾಲ್ಕೇ ಜನ ಆತ್ಮೀಯರಿರುತ್ತಾರೆ. ಅದನ್ನೇ ಇನ್ನರ್ ಸರ್ಕಲ್ ಅಂತಾರೆ.

ಬದುಕಿನ ಕೊನೆ ಪುಟಗಳಲಿ ಅವರೂ ಕರಗಿ ವ್ಯಕ್ತಿ ಒಂಟಿಯಾದಂತೆ ಭಾಸವಾಗುತ್ತದೆ.
ಅವನು ಒಂಟಿ ಅಲ್ಲದಿದ್ದರೂ ವಯೋಮಾನಕನುಗುಣವಾಗಿ ಆತ್ಮೀಯರು ಮಾನಸಿಕವಾಗಿ ದೂರಾದಾಗ ಇನ್ನಿಲ್ಲದ ಹಳವಂಡ.

*ಅನಾರೋಗ್ಯ-ಮುಪ್ಪು-ಸಾವು* ಬುದ್ಧ ಹೇಳಿದ ತ್ರಿಸೂತ್ರಗಳು ವಯಸ್ಸಾದ ಮೇಲೆ ನೆನಪಾಗುವುದು ಹೆಚ್ಚು ಅಪಾಯಕಾರಿ.

ಹರೆಯದಲ್ಲಿ ಬಿಂದಾಸ್ ಆಗಿ ಕಾಲ ಕಳೆಯುವ ಮನಸಿಗೆ ಮುಪ್ಪು, ಅನಾರೋಗ್ಯ ನೆನಪಿಸಿಕೊಳ್ಳುವ ಮನಸಾಗುವುದಿಲ್ಲ.

ಆದರೆ ನಾವ್ಯಾರು ಇದರಿಂದ ತಪ್ಪಿಸಿಕೊಳ್ಳಲಾಗುವುದಿಲ್ಲ.‌
ನಮ್ಮ ಅನಾರೋಗ್ಯಕ್ಕಿಂತಲೂ ಆತ್ಮೀಯರ ಅನಾರೋಗ್ಯ, ಅಗಲಿಕೆ ನಮ್ಮನ್ನು ಕಂಗಾಲಾಗಿಸುವುದು ಸಹಜ.

ಒಂಟಿತನವನ್ನು ಏಕಾಂತವಾಗಿಸುವ ಮನಸ್ಥಿತಿ ರೂಢಿಸಿಕೊಳ್ಳಬೇಕು. ಸಂಗೀತ,ಓದು,ಬರಹ ಹಾಗೂ ಏಕಾಂಗಿ ಅಲೆದಾಟ ನಮ್ಮ ಹವ್ಯಾಸವಾಗಬೇಕು.‌

ಆತ್ಮೀಯರು ಪದೇ ಪದೇ ಭೇಟಿಯಾಗಿ ಹರಟೆ ಹೊಡೆದು ನಮ್ಮೊಂದಿಗೆ ಕಾಲಹರಣ ಮಾಡಲಿ ಎಂಬ ಆಸೆ ಕೈಬಿಡಬೇಕು.
ಮಕ್ಕಳು ಅಷ್ಟೇ ತಮಗೆ ಸರಿ ಕಂಡಂತೆ ಬದುಕು ರೂಪಿಸಿಕೊಳ್ಳುತ್ತಾರೆ.

ಈಗ ಐವತ್ತರ ಗಡಿ ದಾಟಿದವರು ಸ್ವಯಂ ಘೋಷಿತ ಸೀನಿಯರ್ ಸಿಟಿಜನ್ ಆದವರಂತೆ ವರ್ತಿಸುತ್ತಾರೆ.

ನಾನೂ ಆಗಾಗ ನನ್ನ ಇನ್ನರ್ ಸರ್ಕಲ್ ನಲ್ಲಿ ಯಾರಿದ್ದಾರೆ ಎಂದು ಅಡಿಟ್ ಮಾಡಿಕೊಳ್ಳುತ್ತೇನೆ. ಹೆಚ್ಚಿಗೆ ಬೇರೆಯವರ‌್ಯಾರೂ ಸೇರಿಕೊಂಡಿರುವುದಿಲ್ಲ, ಇದ್ದವರೇ ಕಳಚಿಕೊಂಡಿರುತ್ತಾರೆ. ಹಾಗೆ ಕಳಚಿಕೊಳ್ಳವುದಕ್ಕೆ ಅವರದೇ ಕಾರಣಗಳೂ ಇರುತ್ತವೆ ಅನ್ನಿ.
ಅಂತಹ ಅನಾಥಪ್ರಜ್ಞೆ, ಒಂಟಿತನ ಕಾಡುವ ಗೆಳೆಯರ ಮಾತಿಗೆ ಆಗಾಗ ಮನಸಾರೆ ಕೇಳುವ ಕಿವಿಯಾಗುತ್ತೇನೆ. ಅವರ ಅನುಭವಗಳು ನನ್ನನ್ನು ಎಚ್ಚರಿಸಿದಂತಾಗುತ್ತದೆ.

*ಹೀಗೆಯೇ ಕೆಲವು ಸಕಾರಣಗಳ ಗುರುತಿಸಬಹುದು*.

ನಮ್ಮ ಜೀವನಶೈಲಿ ಹಾಗೂ ಸಿದ್ಧಾಂತಗಳನ್ನು ಅವರೂ ಅನುಕರಿಸಲಿ ಎಂಬ ಆಸೆಯೂ ದುಃಖಕ್ಕೆ ಮೂಲ.

ಈ Generation Gap ಅರ್ಥಮಾಡಿಕೊಂಡು ಸಿಡಿಮಿಡಿ ನಿಲ್ಲಿಸಬೇಕು.
ಅನಾರೋಗ್ಯ ಹಾಗೂ ವಯೋಮಾನ ಸಹಜ ಆತಂಕಗಳನ್ನು ನಿರ್ಭಯವಾಗಿ ಸ್ವೀಕರಿಸಿ, ನಿರೀಕ್ಷೆಗಳನ್ನು ನಿರಾಕರಿಸಿ ನಿರ್ಲಿಪ್ತವಾಗಿ ಖುಷಿಯಿಂದ ಕೇವಲ ನಮಗಾಗಿ ಬದುಕುವ ಸಣ್ಣ ಸ್ವಾರ್ಥ ಅನಿವಾರ್ಯ.

ಸ್ವಾರ್ಥ ಹಾಗೂ ಇಲ್ಲ ಎಂದು ಹೇಳುವ ನಿಷ್ಠುರತೆ ಇಳಿಗಾಲದಲ್ಲಿ ಅನಿವಾರ್ಯ. ನಮ್ಮ ಇನ್ನರ್ ಸರ್ಕಲ್ ನಿಂದ ಜನ ಕಳಚಿಕೊಂಡಾರು ಎಂಬ ತಲ್ಲಣ ಬೇಡ. *ಕಳಚಿಕೊಳ್ಳುತ್ತಾರೆ*, ಕಳಚಿ ಹೋಗುವುದು ಕಾಲನ ಅನಿವಾರ್ಯ ನಿಯಮ.

ಅದರಂತೆ ಅನಿರೀಕ್ಷಿತವಾಗಿ ಅಪ್ಪಳಿಸುವ ಅನಾರೋಗ್ಯ ಹಾಗೂ ಅಗಲುವಿಕೆಯನ್ನು ನಿರ್ಲಿಪ್ತವಾಗಿ ಸ್ವೀಕರಿಸಿ ಸಣ್ಣ ನಿಟ್ಟುಸಿರು ಬಿಟ್ಟು ಮುಂದೆ ಸಾಗೋಣ, *ನಮ್ಮ ಪಾಳೆ ಬರುವತನಕ*.

   *ಸಿದ್ದು ಯಾಪಲಪರವಿ*

ಸಮಾನಮನಸ್ಕರು

*ಸಮಾನಮನಸ್ಕರೆಂಬ ಶಬ್ದಾಡಂಬರ ಸೂತಕವಲ್ಲವಾದರೂ* !

*ಗೆಳೆಯರು, ತುಂಬಾ ಆತ್ಮೀಯರು, ಬಹಳ ಪರಿಚಯ, ಒಂದೇ ತಟ್ಟೆಯಲ್ಲಿ ಉಂಡವರು, ಭಾಳ ವರ್ಷ ಒಂದೇ ಕಡೆ ಇದ್ವಿ, ಮಾತು ತಗದು ಹಾಕಲ್ಲ, ಎಲ್ಲಾ ಕೇಳಿಯೇ ಮಾಡ್ತಾರೆ, ನನ್ನ ತಿರ್ಮಾನನ ಕಡೆ…*

ಇಂತಹ ಶಬ್ದಗಳು ನಾವು ನಮಗರಿವಿಲ್ಲದಂತೆ ಧಾರಾಳವಾಗಿ ಬಳಸುತ್ತೇವೆ. ಹಾಗೆ ಬಳಸುವಾಗ ಪ್ರತಿಯೊಬ್ಬ ವ್ಯಕ್ತಿಗೂ ತನ್ನದೇ ಆದ ನಿರ್ಣಯ ತೆಗೆದುಕೊಳ್ಳುವ ಸ್ವಾತಂತ್ರ್ಯ ಇದೆ ಎಂಬುದನ್ನು ಮರೆತುಬಿಡುತ್ತೇವೆ.
ಹೀಗೆಯೇ ಅಂದುಕೊಂಡು ಜೊತೆಗಿದ್ದವರು ಸಾಂದರ್ಭಿಕ ಕಾರಣಗಳಿಂದ ಅನಿರೀಕ್ಷಿತವಾಗಿ ದೂರಾದಾಗ ಆಘಾತ ಸಹಜ.

ಎಲ್ಲವೂ ಸರಿ ಇದ್ದಾಗ ಎಲ್ಲಾ ಸರಿಯಾಗಿಯೇ ಇರುತ್ತದೆ. ಈ ತರಹದ ಪದ ಬಳಕೆಯ ಗೆಳೆತನದಂತೆ.‌
ಹಣ, ಆಸ್ತಿ, ಪ್ರತಿಷ್ಟೆ, ಸಿದ್ಧಾಂತಗಳು ಅಡ್ಡ ಬಂದ ಕೂಡಲೇ ಪದಗಳ ಬಳಕೆಗೆ ಮಂಕು ಕವಿಯುತ್ತದೆ.

ದಶಕಗಳ ಸ್ನೇಹ ದಿಢೀರೆಂದು ಕೊನೆಗೊಳ್ಳುತ್ತದೆ. ವಿನಾಕಾರಣ, ಸಣ್ಣ-ದೊಡ್ಡ ಎಂಬ ಕಾರಣಗಳಾಚೆಗಿನ ಗೊಂದಲ ಇದಾಗಿಬಿಡುತ್ತೆ.

ಅನೇಕ ವಿಕಸನ ತರಬೇತಿಗಳಲ್ಲಿ ಶಿಬಿರಾರ್ಥಿಗಳು ಕಳೆದು ಹೋದ ಆತ್ಮೀಯರ ಅಳಲು ತೋಡಿಕೊಳ್ಳುತ್ತಾರೆ.
ನಾವು ಮತ್ತೊಬ್ಬರಿಗೆ ಹೇಳುವ ಮುಂಚೆ ನಮ್ಮ ಅನುಭವ ಅಷ್ಟೇ ಪ್ರಮುಖವಾಗುತ್ತದೆ.

ನನ್ನ ಬದುಕಿನಲ್ಲಿ ಅನೇಕ ಗೆಳೆಯರಿದ್ದಾರೆಂಬ ಭ್ರಮೆಯಲ್ಲಿದ್ದೆ. ಗೆಳೆತನವೆಂಬ ಅಮಲಿನಲ್ಲಿ ಭ್ರಾಂತಗೊಂಡವನಂತೆ ಕೇಕೆ ಹಾಕುತ್ತಾ ಕಾಲ ಕಳೆಯುತ್ತಿದ್ದೆ.
ಓಡಾಟ, ಮೋಜು, ಪಾರ್ಟಿಗಳು, ಗಂಟಲು ಕಿರುಚುವ ವಾದವಿವಾದಗಳು ಸಾಗಿಯೇ ಇತ್ತು.

ಒಮ್ಮೆ ಬರಸಿಡಿಲು ಬಡಿದಂತೆ ಆಘಾತ ನಡೆದು ಹೋಯಿತು.
ಆರ್ಥಿಕವಾಗಿ, ಸಾಮಾಜಿಕವಾಗಿ, ಆರೋಗ್ಯದಲ್ಲಿಯೂ ಕುಸಿದು ಹೋದೆ. ಅದೂ ಹೀಗೆಯೇ ನಂಬಬಾರದವರನ್ನು ನಂಬಿ,
ಸ್ವಯಂಕೃತ ತಪ್ಪಿನಿಂದ ಕಾರ್ಗತ್ತಲಲಿ ಮುಳುಗಿ ಹೋದೆ.

ಸಾವಿರ ಸಾವಿರ ಸಂಖ್ಯೆಯಲ್ಲಿ ಇದ್ದ ಗೆಳೆಯರ ಹಿಂಡು ಹತ್ತಿರ ಸುಳಿಯದೇ ನನ್ನ ದೋಶಗಳನ್ನು ಹುಡುಕಿ ಸಂಶೋಧನೆ ಮಾಡಲಾರಂಭಿಸಿತು.

“ ಅಯ್ಯೋ ಅತಿಯಾಸೆಗೆ ಬಿದ್ದು ಹಾಳಾದರು” ಎಂದು ಮೂದಲಿಸಿದರು.
“ ಇವರಿಗ್ಯಾಕೆ ಬೇಕಿತ್ತು ಊರ ಉಸಾಬರಿ, ತಮ್ಮ ಪಾಡಿಗೆ ತಾವಿದ್ದರಾಗಿತ್ತು “.
ಇನ್ನೂ ಹೀಗೆ ಏನೇನೋ. ‘ಅಯ್ಯೋ ಬಿಡ್ರಿ ಅವನು  ಮಾನಸಿಕ ಆಗಿ ಸತ್ತೇ ಬಿಡ್ತಾನೆ’ ಅಂದು ಆಡಿಕೊಂಡದ್ದು ಇದೇ ನಾನು ಹಿತೈಷಿಗಳು ಅಂದುಕೊಂಡ *ಸೋ ಕಾಲ್ಡ್ ಗೆಳೆಯರು* ಹಾಗೂ *ಹತ್ತಿರದ ಬಂಧುಗಳು*.

*ಇನ್ನರ್ ಸರ್ಕಲ್*  ವ್ಯಾಖ್ಯಾನ ನನಗಾಗ ಸ್ಪಷ್ಟವಾಯಿತು. ಇಲ್ಲಿ ನೂರಾರು ಜನರು ಇರುವುದು ಅಸಾಧ್ಯ ಎಂಬ ಕಠಿಣ ಸತ್ಯ ನಿಧಾನವಾಗಿಯಾದರೂ ಅರ್ಥವಾಯಿತು.

ಯಾವುದೇ ಕರಾರಿಲ್ಲದೆ, ಗುಮಾನಿಯಿಲ್ಲದೆ, ನಾನು ತಪ್ಪಿತಸ್ಥ ಎಂಬ ಭಾವ ಹೊಂದದೇ ಆರ್ಥಿಕವಾಗಿ,ಮಾನಸಿಕವಾಗಿ, ಸಾಮಾಜಿಕವಾಗಿ, ನೈತಿಕವಾಗಿ ಕೇವಲ *ಮೂರೇ* ಜನ ಉಳಿದರು.
*ಅವರು ಈಗಲೂ ಇದ್ದಾರೆ, ಮುಂದೆಯೂ ಇರುತ್ತಾರೆ*.

ಅಂದು ಆಡಿಕೊಂಡ ಉಳಿದ 997 ಜನ “ ಅಯ್ಯೋ ನಮಗೆ ಯಾರು ತಪ್ಪು ಮಾಹಿತಿ ನೀಡಿದ್ದರು, ನೀವು ಅಂತವರಲ್ಲ ಎಂದು ಗೊತ್ತಿತ್ತು, ನೀವ ಖರೆ ಜಾಣರು, ಬುದ್ಧಿವಂತರು, ಏನೋ ಬ್ಯಾಡ್ ಟೈಮ್, ನಮ್ದ ತಪ್ಪಾತು” ಇತ್ಯಾದಿ,ಇತ್ಯಾದಿ.

ಆದರೆ ನಾನು ಯಾರನ್ನೂ ದೂಷಿಸಿಲ್ಲ, ದೂಷಿಸುವುದಿಲ್ಲ, ಎಲ್ಲಾ ಕಾಲನ ಮಹಿಮೆ.

ತೊಂದರೆಯೆಂಬ ಸಮಸ್ಯೆ ಇಟ್ಟುಕೊಂಡ ನನ್ನನ್ನು ಹಾವು ಕಂಡವರಂತೆ ಗೆಳೆಯರು ನಾಪತ್ತೆಯಾಗುವದು ಸಹಜ ಎಂಬ ನಿಜಾಂಶವಾದರು ಗೊತ್ತಾಯ್ತಲ್ಲ. ಇಲ್ಲದಿದ್ದರೆ ಈತನಕ  *ನನಗೂ ಸಾವಿರ ಜನ* ಗೆಳೆಯರು ಎಂದು ಬೀಗುತ್ತಿದ್ದೆ.

*ಕಾಲಕ್ರಮೇಣ, ಅನಾರೋಗ್ಯ, ಅನಾನುಕೂಲಗಳ ನೆಪದಲ್ಲಿ ಇದ್ದ ಮೂವರಲ್ಲಿ ಒಬ್ಬೊಬ್ಬರು ಕರಗಿದರೆ, ಇರುವವರ ಸಂಖ್ಯೆ ಕಡಿಮೆ ಆದಾಗ ಮತ್ತದೇ ತಲ್ಲಣವಾಗಬಹುದು*.
ಆ ಆಘಾತವನ್ನು ಸಕಾರಾತ್ಮಕವಾಗಿ ಸಹಿಸಿಕೊಳ್ಳಬೇಕು.

ಕೊನೆಗೆ ನಾವು ಒಬ್ಬರೇ ಉಳಿದರೂ ಆ ಮೂವರೊಡನೆ ಕಳೆದ ಕ್ಷಣಗಳ ಜತನ ಮಾಡಿಕೊಂಡು, ಅದೇ ನೆನಪಿನಂಗಳದಲಿ ಆಟವಾಡಬೇಕು.

ದೇಹ,ಮನಸಿಗೆ ಮುಪ್ಪಡರಿ ನಾವು ಒಂದು ದಿನ ಹೋಗುತ್ತೇವೆಯಾದರೂ, ಕನಿಷ್ಟ ಒಬ್ಬಿಬ್ಬರಿಗಾದರೂ ಅಂತಹ ಒಳ್ಳೆಯ ಗೆಳೆಯರಾಗಿ ಉಳಿಯುವ ಪ್ರಯತ್ನ ಮಾಡಬೇಕು.
ಸಡುದಾರಿಯ ಸುಡು ಬಿಸಿಲಿನಲಿ ಬಿಟ್ಟು ಓಡಿ ಹೋಗುವ ಹೇಡಿಗಳಾಗಬಾರದು.

   *ಸಿದ್ದು ಯಾಪಲಪರವಿ*

Monday, November 12, 2018

ಮೆಲ್ಲುಸಿರು

*ಹೀಗೊಂದು ಮೆಲುಕು*

ಕವಿ *ಶೈಲದ  ಗಿರಿ*
ಶಿಖರದಲಿ
*ಸುನೀತ* ಗಳ
ಹಾಡಿ *ಮಾಧುರ್ಯ*
ಹೆಚ್ಚಿಸಲು
*ನಳನಳಿ* ಸಿದ ಹೂಗಳು

*ಚಂಬೆಳಕಿನ*
ಕಾಂತಿಯಲಿ *ವಿಶಾಲ*
ಹೊಳಪು
*ಅನು* ದಿನ *ಪೂರ್ಣ* ಚಂದ್ರ

ಹೀಗೆ *ಉಷೆ*
ಮೂಡುವಾಗ ಸರಳ
*ರೇಖೆಯ* ಬದುಕಲಿ

*ಕಾವ್ಯ* ಸಿರಿಯಲಿ
ಲೀನವಾದ ಇಳಿಹೊತ್ತ
ನೆಮ್ಮದಿಯಲಿ ನಿಲ್ಲದಿರಲಿ
ಈ ಪಯಣ.

*ಸಿದ್ದು ಯಾಪಲಪರವಿ*

Friday, November 9, 2018

ಅಕ್ಷರ ಸಂತ

*ನಿರಂಜನ ಜಂಗಮ‌ ಅಕ್ಷರ ಸಂತ*

ಏಕಿಷ್ಟು ಅವಸರ ಗುರುವೆ

ಹೀಗೆ ಹೇಳದೇ ಕೇಳದೇ

ಹೋಗಲು

ಅವ್ವನ ಮಮತೆ ಅಪ್ಪನ ಕಾಳಜಿ

ಗುರುವಿನ ಚೇತನ ಬೇರೆಲ್ಲೂ ಸಿಗದು

ಈಗ ಮಹಾ ಬಯಲಲಿ ಬರೀ ಶೂನ್ಯ

ಸೂರ್ಯನಿಗೆ ಬಡಿದ ದಟ್ಟ ಕತ್ತಲು

ಇನ್ನೂ ಬೆಳಗಲಾರ ರವಿ ನೀ ನಿಲ್ಲದೆ

ದಟ್ಟಡವಿಯ ಕಾರ್ಗತ್ತಲಲಿ ದಿಕ್ಕು

ತಪ್ಪಿ ಅಲೆಯುವಾಗ ಕೈಹಿಡಿದು

ಹೂ ಬೆಳಕ ಚಲ್ಲಿ ಕೈಹಿಡಿದು

ದಡ ಸೇರಿಸಿದ ಮಹಾ ಗುರುವೆ

ಒಮ್ಮೆಲೇ ಹೀಗೆ ಮರೆಯಾದ ಬರ

ಸಿಡಿಲ‌‌ ಸದ್ದಿಗೆ ಬೆಚ್ಚಿ ಬಿದ್ದು ತತ್ತರಿಸಿದೆ

ಮನ

ಹುಡುಕುವುದ ಪಡೆಯುವುದ ಪಡೆದುದ

ದಕ್ಕಿಸುವುದ ಕಲಿಸಿದೆ

ಕಳಕೊಳ್ಳುವದ ಹೇಳಿ ಕೊಡದೇ

ಕಳೆದು ಹೋದರೆ ಸಹಿಸಲಿ ಹೇಗೆ ?

ಅಕ್ಷರ ಅರಿವು ಅನ್ನದಾಸೋಹದ

ಹರಿಕಾರ ತ್ರಿವಿಧತೆಯಲಿ ಅನಂತತೆ

ಅಜರಾಮರ

ಯಾರೂ ಇಲ್ಲಿ ಉಳಿಯಲು

ಬಂದಿಲ್ಲ ಬಂದವರು ಏನೂ

ಬಿಡಲು ಇರುವುದೇ ಇಲ್ಲ

ನೀ ಏನೆಲ್ಲ ಕೊಟ್ಟೆ ಎಲ್ಲವನೂ

ಬಿಟ್ಟೆ ಬರೀ ನಮಗಾಗಿ

ಕೊಂಡು ಒಯ್ಯಲಿಲ್ಲ ಏನೂ

ನಿನಗಾಗಿ

ಐಷಾರಾಮಿ ಬಯಸದ ಮನಕೆ

ಬರೀ ಓದುವ ದಾಹ

ತಿಳಿ ಹೇಳುವ ತವಕ ಜಾಗೃತ

ಗೊಳಿಸುವ ಕಾಯಕದಲಿ ನಾಡ

ಸಂಚಾರದ ನಿಜ ಜಂಗಮ

ದಣಿದ ದೇಹಕೆ ಮುಪ್ಪಿರಲಿಲ್ಲ

ಮಿಂಚುವ ತೇಜಸ್ಸು ಎತ್ತರದ

ನಿಲುವು ನಡೆದರೆ ಆನೆ

ನುಡಿದರೆ ಸಿಂಹಘರ್ಜನೆ

ಸದಾ ಮಂದಹಾಸದ ಸುಂದರ

ಕಾಂತಿಗೆ ಮನ ಕರಗದಿರಲಾದೀತೆ ?

ಕಂಚಿನ ಕಂಠದ ಮಾತುಗಳಲಿ

ಮುತ್ತಿನ ಹಾರ ಒಲವ ಕಂಪು

ಕರುಳ ತುಂಬ ತಂಪು ತಂಪು

ಎಗ್ಗಿಲ್ಲ ಅಳುಕಿಲ್ಲದ ನಿರ್ಭಯ

ನುಡಿಗಳಲಿ ಸತ್ಯದ ಹೊಳಪು

ಮುಚ್ಚು ಮರೆಯ ಸೋಂಕಿಲ್ಲ

ನಡೆ-ನುಡಿ-ಆಚಾರ-ವಿಚಾರಗಳಲಿ‌

ಎಲ್ಲ ಬಯಲು ಬಟಾ ಬಯಲು

ತೆರೆದ ಪುಸ್ತಕ ಕೈಯೊಳಗಿನ ಕನ್ನಡಿ

ನೆನಪೊಂದೇ ಸಾಕು ಜೀವಚೈತನ್ಯ

ಉಕ್ಕಿ ಹರಿಯಲು ಇರಲಿ

ಕೃಪೆ ಕರುಣೆಯ ಕಂಪನ

ಪಂಚಮಹಾಭೂತಗಳ ಹೊರಗೂ

ಒಳಗೂ ನಿರಂತರ ಮಧುರ

ನೆನಪಿನಾಳದ ಶ್ರಧ್ಧೆಯಲಿ.

*ಸಿದ್ದು ಯಾಪಲಪರವಿ*

ಮಣ್ಣ ಮಂತ್ರದ ಕಾಯಕಯೋಗಿ

*ಮಣ್ಣ ಮಂತ್ರದ ಕಾಯಕಯೋಗಿ*

ಹಗಲಿರುಳು ಒಂದೇ ದುಡಿಯುವ
ಜೀವಕೆ
ಭಿಕ್ಷಾಟನೆ ದೂರ ದೂಡಿ ಜೋಳಿಗೆಯ
ಮಡಿಚಿಟ್ಟು ಕೃಷಿ ಕಾಯಕಕೆ ಮೈಯೊಡ್ಡಿ
ಡಂಬಳಕೆ ಸಾಗಿದ ಪಾದಯಾತ್ರೆ

ಬೇಡುವ ಜಂಗಮ ಕಳಂಕವ ದೂರ
ಮಾಡಲು ಮೈಮುರಿದು ದುಡಿವ ಛಲ

ಬತ್ತಿದ ಜಲಕೆ ಜೀವ ತುಂಬುವ
ಕನಸು ಸಲಿಕೆ ಗುದ್ದಲಿ ಹಿಡಿದು
ಬಾವಿ ತೋಡಲು ಸನ್ನದ್ಧರಾದ
ಶಿಷ್ಯ ಪಡೆಗೆ ಇನ್ನಿಲ್ಲದ ಉತ್ಸಾಹ

ಬಂಜರು ಭೂಮಿಗೆ ದ್ರಾಕ್ಷಿ ದಾಳಿಂಬೆ
ಸಡಗರ ಕಂಗಳಲರಳಿದ ಧನ್ಯತೆ

ಬರೀ ಬೇಡುವದು ಸ್ವಾಮಿತ್ವ ಅಲ್ಲ
ಬೇಡಬಾರದೆಂಬ ಹೊಸ ಸತ್ಯದ ಬೆಳಕ
ಪಸರಿಸಿದ ಕಾಯಕ ಯೋಗಿ

ದೇಹವೇ ದೇವಾಲಯವೆಂಬ
ವಚನವ ನಿರ್ವಚನವಾಗಿಸಲು
ದಣಿಸುವ ಕೈಂಕರ್ಯ

ಕಾಯಕದಿ ಬೊಬ್ಬೆಯಾದ ಕೈಗಳಲಿ
ಕಂಡ ಕೈಲಾಸ ದುಡಿತವೇ ನಿತ್ಯ
ಲಿಂಗ ಪೂಜೆ ಹಿತವಚನಗಳೇ
ದಿವ್ಯಮಂತ್ರ

ಐಷಾರಾಮಿ ಬದುಕಿಗೆ ಮಾರು
ಹೋಗದ ಸಾತ್ವಿಕ ಬದುಕ
ಬಿತ್ತಿ ಶ್ರಮದಾಲದ ಮರವ
ಹೆಮ್ಮರವಾಗಿಸಿ ಹೊಲದಲಿ ದುಡಿದ
ಏಕೈಕ ಸಂತ

ರೈತರ ಪಾಲಿಗೊಬ್ಬ ರೈತಮಿತ್ರ
ಮಾತು ಮತಿಯಲೂ ಅದೇ
ಧ್ಯಾನ
‘ಬಿತ್ತಿರಿ ಬೆಳೆಯಿರಿ’

ಮಾರದಿರಿ ಭೂಮಿಯ ಕಳಕೊಳ್ಳದಿರಿ
ಭೂತಾಯಿ ಒಡಲ ಒಲವ
ಧನದಾಸೆಯ ಬಂಡವಾಳಶಾಹಿಗಳ ಭಂಡ
ಬಡಿವಾರದ ಮಾತುಗಳಿಗೆಂದೆಚ್ಚೆರಿಸಿದ
ಭೂ ರಕ್ಷಕ

ನಿರಂತರ ದುಡಿದು ದಣಿದು
ಭೂಸೇರಿ ಲೀನವಾದಾಗ
ಎದೆಗವಚಿಕೊಂಡಳಾ
ಭೂ ಮಾತೆ ನೆಮ್ಮದಿಯ
ಸವಿಸುಖದಿ ಥೇಟ್ ಅವ್ವನ ತೆರದಿ.

 *ಸಿದ್ದು ಯಾಪಲಪರವಿ*

Tuesday, November 6, 2018

ನಂಜಾದ ನಾಲಿಗೆ

*ನಂಜಾದ ನಾಲಿಗೆ ಪರಿಣಾಮ ಮತ್ತು ಚುನಾವಣೆ*

ನಾಲಿಗೆ ನಿಯಂತ್ರಣ ಕಳೆದುಕೊಂಡರೆ ಆಗೋದೇ ಹೀಗೆ. ಜನ ಮೂರ್ಖರಲ್ಲ. ಸುಳ್ಳು ಹಾಗೂ ಬಣ್ಣದ ಮಾತುಗಳ ನಾಟಕವನ್ನು ಹೆಚ್ಚು ದಿನ ಸಹಿಸಲಾರರು.

So called ಸಲಹೆಗಾರರ ಉದ್ಧಟ ಮಾತು ಕೇಳಿ ವೈಯಕ್ತಿಕ ಜೀವನದ ಸಾವಿನ ವಿಷಯ ಕೀಳಾಗಿ ಮಾತಾಡಿದ ಪರಿಣಾಮ ಇದು.

ಈ ಹಿಂದೆ ಹಿರಿಯ ರಾಜಕಾರಣಿಯ ಸಾವಿನ ಕುರಿತು ಆಡಿದ ತುಚ್ಛ ಮಾತುಗಳಿಂದಾಗಿ ಜನ ರೋಸಿ ಹೋಗಿದ್ದರು. ಹಣ-ಅಧಿಕಾರದ ಮದ ಹೆಚ್ಚಾದಾಗ, ಶಕುನಿ ಮಾಮಾಗಳ ಮಾತು ಕಟ್ಟಿಕೊಂಡು ಹೇಳಿಕೆ ಕೊಟ್ಟರೆ ಆಗೋದೇ ಹೀಗೆ.
ಸ್ವಪಕ್ಷೀಯರ ಉದ್ಧಟ ಅಹಂಕಾರದ ಮಾತುಗಳಿಗೆ ಜನ ಉತ್ತರ ನೀಡಿದ್ದಾರೆ.

ವಿಜಯನಗರ ಸಾಮ್ರಾಜ್ಯದ ಅರಸನೆಂಬ ಭ್ರಮೆ ಹುಟ್ಟಿಸಿದವರ ಮಾತು ನಂಬಿ, ಪಡಬಾರದ ಕಷ್ಟ ಪಟ್ಟು ಅಜ್ಞಾತ ಅನುಭವಿಸಿ ಹೊರ ಬಂದ ಮೇಲಾದರೂ ಎಚ್ಚರಿಕೆಯಿಂದ ಇರಬೇಕಾಗಿತ್ತು.

ವಿಧಿ ಹಾಗಾಗಲು ಬಿಡುವುದಿಲ್ಲ, ಅಹಂಕಾರಕೆ ಪಾಠ ಕಲಿಸುವ ತೀರ್ಮಾನ ಮಾಡುತ್ಯದೆ.
ಶನಿ ಹೇಗಲೇರಿದಾಗ ಮನುಷ್ಯ ಇಂತಹ ಅನಾಹುತ ಮಾತುಗಳಿಗೆ ಮುಂದಾಗುತ್ತಾನೆ.‌

ಹಲಾಲಕೋರ ಸಲಹೆಗಾರರ ದುರುದ್ದೇಶ ಹಾಗೂ ಶಕುನಿ ಕುತಂತ್ರ‌ ಅರಿಯದ ಇವರೇನು ಮಹಾಭಾರತದ ಉದಾಹರಣೆ ಹೇಳುತ್ತಾರೆ.
ಅಮಾನವೀಯ ಸಲಹೆಗಳನ್ನು ಯಾರೇ ನೀಡಲಿ, ಸ್ವೀಕರಿಸಿ ಬಾಯಿ ಬಿಡುವ ಮುನ್ನ ಮನುಷ್ಯರಾಗಿ ಆಲೋಚಿಸಬೇಕು.
ಚುನಾವಣೆಯೆಂಬ ರಣರಂಗದಲ್ಲಿ ಎಲ್ಲವೂ ಕೌಂಟ್ ಆಗುತ್ತದೆ.

ಸಾರ್ವಜನಿಕ ಜೀವನದ ರಾಜಕಾರಣ ಅತಿಯಾದ ಸಹನೆ, ಚಾಣಾಕ್ಷತನ ಹಾಗೂ ಜಾಣತನ ಬಯಸುತ್ತದೆ. ಹುಂಬತನ, ಅಹಂಕಾರ ರಾಜಕಾರಣದ ಸಂಸ್ಕೃತಿಯಾದರೆ ಮತದಾರ ಪ್ರಭು ಕೆರಳಿಬಿಡುತ್ತಾನೆ. ಚುನಾವಣೆಯಲ್ಲಿ ಪಾಠವನ್ನೂ ಕಲಿಸಿಬಿಡುತ್ತಾನೆ.‌

ಜನತಾ ಪರಿವಾರದ ಗರಡಿಯಲ್ಲಿ ಬೆಳೆದ ಕೆಲವರು, ಹಿರಿಯರು, ರಾಜಕಾರಣದ ಪಟ್ಟು ಬಲ್ಲವರು, ಚುನಾವಣೆಯನ್ನು ಯುದ್ಧವೆಂದೇ ಪರಿಗಣಿಸುತ್ತಾರೆ. 

*ಧರ್ಮ-ಅಧರ್ಮ ರಾಜಕಾರಣಿಗೆ ಬೇಡವಾಗಿದ್ದರೂ ಜನರಿಗೆ ಬೇಕಾಗಿದೆ*.
ಜನರ ನಾಡಿ ಮಿಡಿತ ಬಲ್ಲವರು ಆಳುತ್ತಾರೆ, ಇಲ್ಲದವರು ಅಳುತ್ತಾರೆ.
ಸಹನೆ ಹಾಗೂ ಆತ್ಮವಿಶ್ವಾಸ ರೂಢಿಸಿಕೊಂಡವರು ಕಾಯುತ್ತಾರೆ. ಅಂತಹ ಜಾಣ ನಡೆ ಇಂದಿನ ಸರ್ಕಾರದ ಶಕ್ತಿಯೂ ಹೌದು,ಮಿತಿಯೂ ಹೌದು.

*ಎಲ್ಲ ಕಾಲಕ್ಕು ಒಂದೇ ಸೂತ್ರ ಕೆಲಸ ಮಾಡುವುದಿಲ್ಲ*.
ಹಣ ಹಾಗೂ ಜಾತಿಯಾಚೆಗಿನ ಲೆಕ್ಕಾಚಾರ ಇರಬೇಕಾಗುತ್ತದೆ. ಈ ಬೈ ಎಲೆಕ್ಷನ್ ಪರಿಣಾಮ ಮತ್ತೊಮ್ಮೆ ದಾರಿದೀಪ. ಎಚ್ಚೆತ್ತುಕೊಳ್ಳಬೇಕಾದವರು ಬೇಗ ಎಚ್ಚೆತ್ತುಕೊಳ್ಳಬೇಕು.

ಶಕುನಿಗಳ ಮಾತಿನ ತಾಳಕ್ಕೆ ತಕ್ಕಂತೆ ಕುಣಿಯಬಾರದು.‌
ಹೊಗಳಿ ಅಟ್ಟಕ್ಕೇರಿಸಿ, ಮೇಲೆತ್ತಿ ಕುಣಿಯುವವರು ಧೊಪ್ಪೆಂದು ಒಗೆದು ಓಡಿ ಹೋಗುತ್ತಾರೆ. ನಮ್ಮವರೇ ಚೂರಿ ಹಾಕಿದರೆ ಹೆಚ್ಚು ನೋವಾಗುವುದು ಸಹಜ.

ಅಧಿಕಾರ ಯೋಗ್ಯತೆಗೆ ತಕ್ಕಂತೆ ಸಿಗಲಿ ಎಂದು ಬಯಸಬೇಕು. ಯಾರೋ ಮರ ಹತ್ತಿಸುವವರ ಮಾತುಗಳಿಂದ ಅಲ್ಲ.

ಇದು ರಾಜಕೀಯ ಪಕ್ಷಗಳ ಗೆಲುವಲ್ಲ ಜಾಣ ಮತದಾರರ ಗೆಲುವು. ‌ಪ್ರಜಾಪ್ರಭುತ್ವದ ಗೆಲುವು. ಈ ಗೆಲುವನ್ನು ತಲೆಗೇರಿಸಿಕೊಳ್ಳುವ ಅಗತ್ಯವಿಲ್ಲ.
ಮುಂದಿನ ಚುನಾವಣೆಗೆ ದಿಕ್ಸೂಚಿಯೂ ಹೌದು ಆದರೆ ಇದು ಅಂತಿಮವೂ ಅಲ್ಲ. ಇನ್ನಾರು ತಿಂಗಳಲ್ಲಿ ಮತ್ತೆನಾಗುತ್ತೆ ಎಂದು ಪ್ರಭು ಕಾಯುತ್ತಾನೆ.
At least there is a *poetic justice* in the politics.

  *ಸಿದ್ದು ಯಾಪಲಪರವಿ*