ಅವಿಭಜಿತ ಧಾರವಾಡ ಜಿಲ್ಲೆಯ ಗದುಗಿನ ಹಿರಿಮೆ ಚಿರಕಾಲ ಸ್ಮರಣೀಯ.
ಸಾಹಿತ್ಯ, ಸಂಗೀತ, ಲಲಿತಕಲೆ, ಆಧ್ಯಾತ್ಮ, ಮುದ್ರಣ, ಸಹಕಾರ, ನೇಕಾರಿಕೆ, ಕೋಮುಸೌಹಾರ್ದತೆ ಹಾಗೂ ಬಸವೇಶ್ವರ ಪುತ್ಥಳಿಯಿಂದಾಗಿ ಅಂತರರಾಷ್ಟ್ರೀಯ ಖ್ಯಾತಿ ಗಳಿಸಿದೆ.
ಕುಮಾರವ್ಯಾಸ ತನ್ನ ಮಹಾಭಾರತವನ್ನು ಇಲ್ಲಿನ ವೀರನಾರಾಯಣ ಗುಡಿಯಲ್ಲಿ ರಚಿಸಿದ್ದರಿಂದ ವಿಶೇಷ ಸಾಹಿತ್ಯಕ ಮನ್ನಣೆ ಗದುಗಿಗೆ ಇದೆ.
ತೋಂಟದಾರ್ಯ ಮಠದ ಪೂಜ್ಯ ಡಾ.ತೋಂಟದಾರ್ಯ ಸಿದ್ಧಲಿಂಗ ಮಹಾಸ್ವಾಮಿಗಳು ಕನ್ನಡದ ಜಗದ್ಗುರು ಎಂದೇ ಖ್ಯಾತರಾದವರು. ತಮ್ಮ ಶಿವಾನುಭವ ಹಾಗೂ ಲಿಂಗಾಯತ ಅಧ್ಯಯನ ಸಂಸ್ಥೆಯ ಮೂಲಕ ಬಹುದೊಡ್ಡ ಸಾಹಿತ್ಯಕ ಹಾಗೂ ಸಾಂಸ್ಕೃತಿಕ ಕ್ರಾಂತಿಯನ್ನೇ ಮಾಡಿದ್ದಾರೆ.
ಅವರು ಪ್ರಕಟಿಸಿದ ಅಪರೂಪದ ಸಂಶೋಧನಾತ್ಮಕ ಕೃತಿಗಳು ಸಂಗ್ರಹಯೋಗ್ಯ ಗ್ರಂಥಗಳಾಗಿವೆ.
ಪಂಡಿತ್ ಪಂಚಾಕ್ಷರ ಗವಾಯಿಗಳು ಸ್ಥಾಪಿಸಿದ ವೀರೇಶ್ವರ ಪುಣ್ಯಾಶ್ರಮ ಸಾವಿರಾರು ಅಂಧ, ಅನಾಥ ಮಕ್ಕಳಿಗೆ ಸಂಗೀತ ಅಭ್ಯಾಸ ನೀಡಿ ಅಂತರರಾಷ್ಟ್ರೀಯ ಸಂಗೀತ ಕಲಾವಿದರನ್ನು ನಾಡಿಗೆ ನೀಡಿದೆ. ಅವರ ಶಿಷ್ಯಂದಿರಾದ ಪಂಡಿತ್ ಪುಟ್ಟರಾಜ ಗವಾಯಿಗಳು ಅದೇ ಪರಂಪರೆಯ ಮೂಲಕ ಹಿಂದುಸ್ತಾನಿ ಸಂಗೀತದ ಪರಂಪರೆಯನ್ನು ನಾಡಿನಾದ್ಯಂತ ಪಸರಿಸಿದರು.
ಖ್ಯಾತ ಹಿಂದುಸ್ತಾನಿ ಗಾಯಕ ಪಂಡಿತ್ ಭೀಮಸೇನ ಜೋಶಿ ಈ ನೆಲದ ಮಗ ಎಂಬುದು ಮರೆಯಲಾಗದು.
ಟಿ.ಪಿ.ಅಕ್ಕಿ ಅವರು ಪ್ರಾರಂಭಿಸಿದ ವಿಜಯ ಕಲಾ ಮಂದಿರದ ಕಲಾವಿದರು ಜಗತ್ತಿನ ತುಂಬ ಹೆಸರು ಮಾಡಿದ್ದಾರೆ. ವಿಜಯ ಕಲಾ ಮಂದಿರ ಕಲಾಶಿಕ್ಷಕರ ತವರು ಮನೆ ಎನಿಸಿಕೊಂಡಿದೆ.
ಜಾತ್ಯಾತೀತ ಆಧ್ಯಾತ್ಮ ಪರಂಪರೆಗೆ ಹೊಸ ಭಾಷ್ಯ ಬರೆದ ಜಗದ್ಗುರು ಶಿವಾನಂದ ಮಹಾಸ್ವಾಮಿಗಳು ತಮ್ಮ ಮಠದ ಮೂಲಕ ನೂರಾರು ಸಂತರಿಗೆ ಶಿವ ದೀಕ್ಷೆ ಕರುಣಿಸಿದರು.
ಪೂಜ್ಯ ಸಿದ್ಧೇಶ್ವರ ಮಹಾಸ್ವಾಮಿಗಳ ಗುರುಗಳಾದ ಮಲ್ಲಿಕಾರ್ಜುನ ಸ್ವಾಮಿಗಳು ಇದೇ ಮಠದ ಶಿಷ್ಯರೆಂಬುದು ಅಭಿಮಾನದ ಸಂಗತಿ.
ಮುದ್ರಣ ಕಾಶಿ ಎಂದೇ ಖ್ಯಾತಿ ಹೊಂದಿರುವ ಇಲ್ಲಿನ ಪ್ರೆಸ್ಸುಗಳು ಮುದ್ರಿಸಿದ ಪಂಚಾಂಗ, ಕ್ಯಾಲೆಂಡರ್, ಶಬ್ದಕೋಶಗಳು ಹಾಗೂ ಪುಸ್ತಕಗಳು ಇಂದಿಗೂ ತಮ್ಮ ಮಾರುಕಟ್ಟೆ ಉಳಿಸಿಕೊಂಡಿವೆ.
ಏಷ್ಯಾ ಖಂಡದ ಮೊಟ್ಟ ಮೊದಲ ಸಹಕಾರ ಸಂಸ್ಥೆ ಇಲ್ಲಿನ ಕಣಗಿನಹಾಳದಲ್ಲಿ ಎಸ್.ಎಸ್.ಪಾಟೀಲ್ ಅವರಿಂದ ಸ್ಥಾಪಿಸಲ್ಪಟ್ಟಿತು.
ಬೆಟಗೇರಿ ನೇಕಾರರು ಖುದ್ದಾಗಿ ನೇಯುವ ಸೀರೆ, ಕುಪ್ಪಸಗಳ ಕಸುವುಗಾರಿಕೆಗೆ ಅಂತರರಾಷ್ಟ್ರೀಯ ಮಾರುಕಟ್ಟೆ ಇದೆ. ಬೆಟಗೇರಿ ನೇಕಾರಿಕೆ ಈಗ ಆಧುನಿಕ ಸ್ವರೂಪ ಪಡೆದುಕೊಂಡು ತನ್ನ ಕೌಶಲ್ಯ ಉಳಿಸಿಕೊಂಡಿದೆ.
ಇಲ್ಲಿನ ಜುಮ್ಮಾ ಮಸೀದಿ, ತ್ರಿಕೂಟೇಶ್ವರ ಹಾಗೂ ವೀರನಾರಾಯಣ ದೇವಾಲಯಗಳಿಗೆ ಒಂದೇ ಟ್ರಸ್ಟ್ ಕಮಿಟಿ ಹೊಂದಿದ ದೇಶದ ಮಾದರಿ ಕೋಮುಸೌಹಾರ್ದತೆಯ ಕೇಂದ್ರ ಎನಿಸಿಕೊಂಡಿದೆ.
ಭೀಷ್ಮ ಕೆರೆಯಲ್ಲಿ ಸ್ಥಾಪಿಸಿರುವ ನೂರಾ ಹದಿನಾರು ಅಡಿ ಎತ್ತರದ ಬೃಹದಾಕಾರದ ಬಸವೇಶ್ವರ ಪುತ್ಥಳಿ ಪ್ರವಾಸಿಗರ ಆಕರ್ಷಣೆಯ ಕೇಂದ್ರವಾಗಿದೆ.
ಗದುಗಿನ ಮಿರ್ಚಿ, ಬದನೆಕಾಯಿಗೂ ತನ್ನದೇ ಆದ ಸ್ವಾದಿಷ್ಟ ಸವಿರುಚಿಯಿದೆ.
ಹೀಗೆ ಹತ್ತು ಹಲವು ಆಯಾಮಗಳ ಬಹು ಸಂಸ್ಕೃತಿಯ ನಗರವನ್ನು ಹೆಮ್ಮೆಯಿಂದ ಸ್ಮರಿಸಿಕೊಳ್ಳುವೆ.
No comments:
Post a Comment