*ಸಮಾನಮನಸ್ಕರೆಂಬ ಶಬ್ದಾಡಂಬರ ಸೂತಕವಲ್ಲವಾದರೂ* !
*ಗೆಳೆಯರು, ತುಂಬಾ ಆತ್ಮೀಯರು, ಬಹಳ ಪರಿಚಯ, ಒಂದೇ ತಟ್ಟೆಯಲ್ಲಿ ಉಂಡವರು, ಭಾಳ ವರ್ಷ ಒಂದೇ ಕಡೆ ಇದ್ವಿ, ಮಾತು ತಗದು ಹಾಕಲ್ಲ, ಎಲ್ಲಾ ಕೇಳಿಯೇ ಮಾಡ್ತಾರೆ, ನನ್ನ ತಿರ್ಮಾನನ ಕಡೆ…*
ಇಂತಹ ಶಬ್ದಗಳು ನಾವು ನಮಗರಿವಿಲ್ಲದಂತೆ ಧಾರಾಳವಾಗಿ ಬಳಸುತ್ತೇವೆ. ಹಾಗೆ ಬಳಸುವಾಗ ಪ್ರತಿಯೊಬ್ಬ ವ್ಯಕ್ತಿಗೂ ತನ್ನದೇ ಆದ ನಿರ್ಣಯ ತೆಗೆದುಕೊಳ್ಳುವ ಸ್ವಾತಂತ್ರ್ಯ ಇದೆ ಎಂಬುದನ್ನು ಮರೆತುಬಿಡುತ್ತೇವೆ.
ಹೀಗೆಯೇ ಅಂದುಕೊಂಡು ಜೊತೆಗಿದ್ದವರು ಸಾಂದರ್ಭಿಕ ಕಾರಣಗಳಿಂದ ಅನಿರೀಕ್ಷಿತವಾಗಿ ದೂರಾದಾಗ ಆಘಾತ ಸಹಜ.
ಎಲ್ಲವೂ ಸರಿ ಇದ್ದಾಗ ಎಲ್ಲಾ ಸರಿಯಾಗಿಯೇ ಇರುತ್ತದೆ. ಈ ತರಹದ ಪದ ಬಳಕೆಯ ಗೆಳೆತನದಂತೆ.
ಹಣ, ಆಸ್ತಿ, ಪ್ರತಿಷ್ಟೆ, ಸಿದ್ಧಾಂತಗಳು ಅಡ್ಡ ಬಂದ ಕೂಡಲೇ ಪದಗಳ ಬಳಕೆಗೆ ಮಂಕು ಕವಿಯುತ್ತದೆ.
ದಶಕಗಳ ಸ್ನೇಹ ದಿಢೀರೆಂದು ಕೊನೆಗೊಳ್ಳುತ್ತದೆ. ವಿನಾಕಾರಣ, ಸಣ್ಣ-ದೊಡ್ಡ ಎಂಬ ಕಾರಣಗಳಾಚೆಗಿನ ಗೊಂದಲ ಇದಾಗಿಬಿಡುತ್ತೆ.
ಅನೇಕ ವಿಕಸನ ತರಬೇತಿಗಳಲ್ಲಿ ಶಿಬಿರಾರ್ಥಿಗಳು ಕಳೆದು ಹೋದ ಆತ್ಮೀಯರ ಅಳಲು ತೋಡಿಕೊಳ್ಳುತ್ತಾರೆ.
ನಾವು ಮತ್ತೊಬ್ಬರಿಗೆ ಹೇಳುವ ಮುಂಚೆ ನಮ್ಮ ಅನುಭವ ಅಷ್ಟೇ ಪ್ರಮುಖವಾಗುತ್ತದೆ.
ನನ್ನ ಬದುಕಿನಲ್ಲಿ ಅನೇಕ ಗೆಳೆಯರಿದ್ದಾರೆಂಬ ಭ್ರಮೆಯಲ್ಲಿದ್ದೆ. ಗೆಳೆತನವೆಂಬ ಅಮಲಿನಲ್ಲಿ ಭ್ರಾಂತಗೊಂಡವನಂತೆ ಕೇಕೆ ಹಾಕುತ್ತಾ ಕಾಲ ಕಳೆಯುತ್ತಿದ್ದೆ.
ಓಡಾಟ, ಮೋಜು, ಪಾರ್ಟಿಗಳು, ಗಂಟಲು ಕಿರುಚುವ ವಾದವಿವಾದಗಳು ಸಾಗಿಯೇ ಇತ್ತು.
ಒಮ್ಮೆ ಬರಸಿಡಿಲು ಬಡಿದಂತೆ ಆಘಾತ ನಡೆದು ಹೋಯಿತು.
ಆರ್ಥಿಕವಾಗಿ, ಸಾಮಾಜಿಕವಾಗಿ, ಆರೋಗ್ಯದಲ್ಲಿಯೂ ಕುಸಿದು ಹೋದೆ. ಅದೂ ಹೀಗೆಯೇ ನಂಬಬಾರದವರನ್ನು ನಂಬಿ,
ಸ್ವಯಂಕೃತ ತಪ್ಪಿನಿಂದ ಕಾರ್ಗತ್ತಲಲಿ ಮುಳುಗಿ ಹೋದೆ.
ಸಾವಿರ ಸಾವಿರ ಸಂಖ್ಯೆಯಲ್ಲಿ ಇದ್ದ ಗೆಳೆಯರ ಹಿಂಡು ಹತ್ತಿರ ಸುಳಿಯದೇ ನನ್ನ ದೋಶಗಳನ್ನು ಹುಡುಕಿ ಸಂಶೋಧನೆ ಮಾಡಲಾರಂಭಿಸಿತು.
“ ಅಯ್ಯೋ ಅತಿಯಾಸೆಗೆ ಬಿದ್ದು ಹಾಳಾದರು” ಎಂದು ಮೂದಲಿಸಿದರು.
“ ಇವರಿಗ್ಯಾಕೆ ಬೇಕಿತ್ತು ಊರ ಉಸಾಬರಿ, ತಮ್ಮ ಪಾಡಿಗೆ ತಾವಿದ್ದರಾಗಿತ್ತು “.
ಇನ್ನೂ ಹೀಗೆ ಏನೇನೋ. ‘ಅಯ್ಯೋ ಬಿಡ್ರಿ ಅವನು ಮಾನಸಿಕ ಆಗಿ ಸತ್ತೇ ಬಿಡ್ತಾನೆ’ ಅಂದು ಆಡಿಕೊಂಡದ್ದು ಇದೇ ನಾನು ಹಿತೈಷಿಗಳು ಅಂದುಕೊಂಡ *ಸೋ ಕಾಲ್ಡ್ ಗೆಳೆಯರು* ಹಾಗೂ *ಹತ್ತಿರದ ಬಂಧುಗಳು*.
*ಇನ್ನರ್ ಸರ್ಕಲ್* ವ್ಯಾಖ್ಯಾನ ನನಗಾಗ ಸ್ಪಷ್ಟವಾಯಿತು. ಇಲ್ಲಿ ನೂರಾರು ಜನರು ಇರುವುದು ಅಸಾಧ್ಯ ಎಂಬ ಕಠಿಣ ಸತ್ಯ ನಿಧಾನವಾಗಿಯಾದರೂ ಅರ್ಥವಾಯಿತು.
ಯಾವುದೇ ಕರಾರಿಲ್ಲದೆ, ಗುಮಾನಿಯಿಲ್ಲದೆ, ನಾನು ತಪ್ಪಿತಸ್ಥ ಎಂಬ ಭಾವ ಹೊಂದದೇ ಆರ್ಥಿಕವಾಗಿ,ಮಾನಸಿಕವಾಗಿ, ಸಾಮಾಜಿಕವಾಗಿ, ನೈತಿಕವಾಗಿ ಕೇವಲ *ಮೂರೇ* ಜನ ಉಳಿದರು.
*ಅವರು ಈಗಲೂ ಇದ್ದಾರೆ, ಮುಂದೆಯೂ ಇರುತ್ತಾರೆ*.
ಅಂದು ಆಡಿಕೊಂಡ ಉಳಿದ 997 ಜನ “ ಅಯ್ಯೋ ನಮಗೆ ಯಾರು ತಪ್ಪು ಮಾಹಿತಿ ನೀಡಿದ್ದರು, ನೀವು ಅಂತವರಲ್ಲ ಎಂದು ಗೊತ್ತಿತ್ತು, ನೀವ ಖರೆ ಜಾಣರು, ಬುದ್ಧಿವಂತರು, ಏನೋ ಬ್ಯಾಡ್ ಟೈಮ್, ನಮ್ದ ತಪ್ಪಾತು” ಇತ್ಯಾದಿ,ಇತ್ಯಾದಿ.
ಆದರೆ ನಾನು ಯಾರನ್ನೂ ದೂಷಿಸಿಲ್ಲ, ದೂಷಿಸುವುದಿಲ್ಲ, ಎಲ್ಲಾ ಕಾಲನ ಮಹಿಮೆ.
ತೊಂದರೆಯೆಂಬ ಸಮಸ್ಯೆ ಇಟ್ಟುಕೊಂಡ ನನ್ನನ್ನು ಹಾವು ಕಂಡವರಂತೆ ಗೆಳೆಯರು ನಾಪತ್ತೆಯಾಗುವದು ಸಹಜ ಎಂಬ ನಿಜಾಂಶವಾದರು ಗೊತ್ತಾಯ್ತಲ್ಲ. ಇಲ್ಲದಿದ್ದರೆ ಈತನಕ *ನನಗೂ ಸಾವಿರ ಜನ* ಗೆಳೆಯರು ಎಂದು ಬೀಗುತ್ತಿದ್ದೆ.
*ಕಾಲಕ್ರಮೇಣ, ಅನಾರೋಗ್ಯ, ಅನಾನುಕೂಲಗಳ ನೆಪದಲ್ಲಿ ಇದ್ದ ಮೂವರಲ್ಲಿ ಒಬ್ಬೊಬ್ಬರು ಕರಗಿದರೆ, ಇರುವವರ ಸಂಖ್ಯೆ ಕಡಿಮೆ ಆದಾಗ ಮತ್ತದೇ ತಲ್ಲಣವಾಗಬಹುದು*.
ಆ ಆಘಾತವನ್ನು ಸಕಾರಾತ್ಮಕವಾಗಿ ಸಹಿಸಿಕೊಳ್ಳಬೇಕು.
ಕೊನೆಗೆ ನಾವು ಒಬ್ಬರೇ ಉಳಿದರೂ ಆ ಮೂವರೊಡನೆ ಕಳೆದ ಕ್ಷಣಗಳ ಜತನ ಮಾಡಿಕೊಂಡು, ಅದೇ ನೆನಪಿನಂಗಳದಲಿ ಆಟವಾಡಬೇಕು.
ದೇಹ,ಮನಸಿಗೆ ಮುಪ್ಪಡರಿ ನಾವು ಒಂದು ದಿನ ಹೋಗುತ್ತೇವೆಯಾದರೂ, ಕನಿಷ್ಟ ಒಬ್ಬಿಬ್ಬರಿಗಾದರೂ ಅಂತಹ ಒಳ್ಳೆಯ ಗೆಳೆಯರಾಗಿ ಉಳಿಯುವ ಪ್ರಯತ್ನ ಮಾಡಬೇಕು.
ಸಡುದಾರಿಯ ಸುಡು ಬಿಸಿಲಿನಲಿ ಬಿಟ್ಟು ಓಡಿ ಹೋಗುವ ಹೇಡಿಗಳಾಗಬಾರದು.
*ಸಿದ್ದು ಯಾಪಲಪರವಿ*
No comments:
Post a Comment