Sunday, October 31, 2010

ಉಳಿಯದ ಸ್ನೇಹ- ಮರೆಯಲಾಗದ ಕಾಣಿಕೆ

ಮುಂದಿನ ಪ್ರವಾಸದಲ್ಲಿ ಕೊಂಚ ಗಂಭೀರವಾಗಿದ್ದರೂ, ನಿನ್ನ ಸಾಮಿಪ್ಯ ಬೇಕೆನಿಸುತ್ತಿತ್ತು. ಮನಸ್ಸು ನಿಯಂತ್ರಣ ಕಳೆದುಕೊಂಡರೂ ನಿನ್ನಯ ಅಳು ನೆನಪಾಗಿ ಮೌನಿಯಾದೆ.
ನನ್ನ ಮೌನವು ನಿನಗೆ ಇಷ್ಟವಾಗಲಿಲ್ಲ. ನಾನು ಸಹಜವಾಗಿ ಮೊದಲಿನಂತೆ ಲವ ಲವಿಕೆಯಿಂದ ಇರಲಿ ಎಂಬ ನಿನ್ನ ನಿರೀಕ್ಷೆ ಸುಳ್ಳಾಯಿತು. ನಾನು ಅಂತರ್ಮುಖಿಯಾದೆ. ಏನನ್ನೋ ಕಳೆದುಕೊಂಡೆ ಜೀವನೋತ್ಸಾಹ ಇಲ್ಲದಾಯಿತು. ನಿನ್ನನ್ನು ಕಳೆದುಕೊಳ್ಳುವುದು ನೆನಪಾದರೆ ಸಾಕು ಕುಗ್ಗಿಹೋಗುತ್ತೇವೆ.
ನಾನೇನು ನಿನ್ನನ್ನು ಬಯಸಿಯೇ ಇರಲಿಲ್ಲ. ಆದರೆ ಪ್ರಾಮಾಣಿಕ ಸ್ನೇಹ ನನ್ನನ್ನು ಆಳಕ್ಕೆ ನೂಕಿತ್ತು. ಅಲ್ಲಿಂದ ಮೇಲೇರಲು ಸಾಧ್ಯವಾಗಲೇ ಇಲ್ಲ.
ಹೀಗೆ ಗಟ್ಟಿ ಧೈರ್ಯ ತಗೆದುಕೊಂಡು, ಭವಿಷ್ಯವನ್ನು ಕಲ್ಪಿಸಿಕೊಂಡಾಗ ಭಯವಾಯಿತು. Insecure ಭಾವನೆ ಹೆಚ್ಚಾಯಿತು. ನಾಳೆ ರಾತ್ರಿ ಊರು ತಲುಪುತ್ತೇವೆ. ಹೋದ ಮೇಲೆ ಪರೀಕ್ಷಾ ತಯಾರಿ ಆರಂಭ.
ಆ ಪ್ರಾಯದಲ್ಲಿ ಜಾಣರ ಗುಂಪೊಂದು, ಹೆಣ್ಣು-ಗಂಡು ಎಂಬ ಭೇದವಿಲ್ಲದೆ ಒಟ್ಟಾಗಿ study ಮಾಡುವ ಯೋಜನೆಯನ್ನು ಶಿಕ್ಷಕರು ರೂಪಿಸಿದದರು. ಹೇಗಿದ್ದರೂ ಅಲ್ಲಿ ಮತ್ತೆ ಒಟ್ಟಾಗಿ ಇರುತ್ತೇವಲ್ಲ ಎಂಬ ನಂಬಿಕೆ ಬೇರೆ.
ನನ್ನ ತುಂಟತನವನ್ನು ನಿಯಂತ್ರಿಸಿಕೊಂಡು ಗಂಬೀರವಾಗಿ ನಿನ್ನೊಂದಿಗೆ ವರ್ತಿಸಲಾರಂಸಿದೆ. ಆದರೆ ಮೊದಲಿನ ಸಹಜತೆ ಉಳಿಯಲಿಲ್ಲ. ಇಷ್ಟೊಂದು ಸಣ್ಣ ವಯಸ್ಸಿಗೆ, ಇಷ್ಟೊಂದು ದೊಡ್ಡ ಪ್ರಮಾದ ನಡೆಯಬಹುದು ಅಂದುಕೊಂಡಿರಲಿಲ್ಲ.
ಒಂಚೂರು ಗಂಭೀರವಾಗಿ ಆಲೋಚಿಸಿದಾಗ ಭವಿಷ್ಯ ಕರಾಳವೆನಿಸಿತು. ಬದುಕಿನಲ್ಲಿ ಯಶಸ್ವಿಯಾಗದಿದ್ದರೆ ಹೇಗೆ? ಅದಕ್ಕೆ ಕಾರಣ ಯಾರು? ಎಂಬ ಆಲೋಚನೆಗಳು ಆರಂಭವಾದ ಕೂಡಲೇ ನಿನ್ನ ಮೇಲೆ ಬೇಸರ ಉಂಟಾಯಿತು. ನೀನು ಪ್ರೀತಿಯನ್ನು ತೋರಿಸದೇ ಇದ್ದರೆ, ಸಹಿಸಿಕೊಂಡಿದ್ದರೆ ನಾನು ಬಚಾವಾಗುತ್ತಿದ್ದೆ ಎಂಬ ಹುಸಿ ಆರೋಪಿಗಳು ಆರಂಭವಾದರೂ ಸುಮ್ಮನೆ ಸಹಿಸಿಕೊಂಡೆ. ಕೊನೆದಿನ, ಮೊದಲ ದಿನದಂತೆ ಅಪರಿಚಿತವಾಗಿಯೇ ಬಿಳ್ಕೋಟ್ಟಾಗ ತಳಮಳ.
ನಾಳೆಯಿಂದ study ಮಾಡಲು ಒಟ್ಟಾಗಿ ಸೇರೋಣ. ನಿನಗೆ difficult ಎನಿಸುವ ವಿಷಯಗಳನ್ನು ನಾನೇ ಚರ್ಚಿಸಿ ತಿಳಿಸುವೆ ಎಂದಾಗ ನಿನ್ನ maturity.ಅರ್ಥವಾಗಿ ಸಣ್ಣವನೆನಿಸಿ ಕುಬ್ಜನಾಗಿ ಹೋದೆ.
ಒಂದು ವಾರ ನಾನೇ ಒಂಟಿಯಾಗಿ ಕಳೆದು, ನಿನ್ನನ್ನು ಪೀಡಿಸದೆ. ವಿಶ್ವಾಸ ಹೆಚ್ಚಿಸಿಕೊಂಡೆ. ಅಲ್ಲಿ ಸಹಜತೆ ಇರದಿದ್ದರೂ ಆತ್ಮವಿಶ್ವಾಸವಿತ್ತು.
ಒಂದು ವಾರದಲ್ಲಿ ನಿಧಾನ ಬದಲಾಗುತ್ತ ಹೋದೆ. out of sight is out of mind ಎಂಬ ಮಾತು ದಿಟ ಎನಿಸಿತು.
ಆದರೆ ಮತ್ತೇನು combined study ನಮ್ಮನ್ನು ಒಂದು ಮಾಡಿದ್ದು ಎರಡನೇ ಅಪಾಯಕ್ಕೆ ನಾಂದಿಯಾಯಿತು. ವಿಶಾಲವಾದ ಮೈದಾನ ಹತ್ತಾರು ರೂಮುಗಳು combined study ಗೆ ಸುಂದರ ವಾತಾವರಣ ಕಲ್ಪಿಸಿತ್ತು ಆದರೆ ನಾನದರಲ್ಲಿ ಆಗಬೇಕಾದ ರೀತಿಯಲ್ಲಿ involve ಆಗಲಿಲ್ಲ.
ಒಂದೆರಡು like minded ಗೆಳೆಯರೊಂದಿಗೆ study ಚೆನ್ನಾಗಿ ಸಾಗಿತು. ಆದರೆ ಮನಸ್ಸು ಮತ್ತೆ ಹಿಂದೆ ತಿರುಗಿತು.
ಎಲ್ಲರೂ ಅವರವರ ಪಾಡಿಗೆ ಇರುತ್ತಿದ್ದರು. ನೀನು ಗಣಿತ ಹೇಳಿಕೊಡುವಾಗ ನನ್ನ ಲೆಕ್ಕಾಚಾರವೇ ಬೇರೆಯಿರುತ್ತಿತ್ತು. Study ಬಿಟ್ಟು ಉಳಿದ ವಿಷಯ ಆರಂಭಿಸಿದೆ.
ನಡುರಾತ್ರಿ ಎರಡು ಗಂಟೆಯವರೆಗೆ ನನ್ನ ಮಾತುಗಳನ್ನು ಸಹನೆಯಿಂದ ಕೇಳಿಕೊಂಡ ನಿನ್ನ ತಾಳ್ಮೆ ಗಾಂಭೀರತೆ ಬದುಕಿನ ಬಗೆಗೆರುವ ಜವಾಬ್ದಾರಿ ನನ್ನ ಮೇಲೆ ಇರುವ ಪ್ರೀತಿ ಹೀಗೆ ಯಾವುದನ್ನು ನೆನಪಿಸಿಕೊಳ್ಳಲಿ.
ನಾನೇ ಒಂದಿನ ಕೇಳಿದೆ. ಆಯಿತು, ನಿನ್ನನ್ನು ನಾನೆಂದು ಮುಂದೆ ಭೇಟಿ ಆಗುವುದಿಲ್ಲ. ನನ್ನ ಜೀವನದ ಕೊನೆಕ್ಷಣದ ವರೆಗೆ ನೆನಪಿನ ಆಳದಲ್ಲಿ ಉಳಿಯುವ ಕಾಣಿಕೆ ನೀಡು ಎಂಬ ಬೇಡಿಕೆಗೆ ನೀನು ವಿಚಳಿತಳಾದೆ.
ಇಲ್ಲ ನನಗೆ ನಿನ್ನ ಮರೆಯೋಕೆ ಸಾಧ್ಯವಿಲ್ಲ. ಪರಸ್ಪರ ಸ್ನೇಹಿತರಾಗಿ ಉಳಿದರೆ ಖಂಡಿತ ಭೇಟಿ ಆಗುತ್ತ ಇರೋಣ. ಅದಕ್ಕೆ ಕಾಣಿಕೆ ಇತ್ಯಾದಿ ಬೇಡ. ನಿರ್ಮಲ ಸ್ನೇಹ ನಿಷ್ಟೆಯ ಮನಸ್ಥಿತಿ ಸಾಕು ಎಂದ ನಿನ್ನ ವಾದ ಅರ್ಥವಾಗಿದ್ದರೆ ನನಗಿಂದು ಈ ಸ್ಥಿತಿ ಅಂದರೆ ನಿನ್ನನ್ನು ಅಗಲುವ ಸ್ಥಿತಿ ಬರುತ್ತಿರಲಿಲ್ಲ.
ನನ್ನ ಮನದಾಳದ ಅಳಲನ್ನು ಕಡ್ಡಾಯವಾಗಿ ಬೇಕಿರುವ ಕಾಣಿಕೆಯ ಸುಳಿವನ್ನು ನೀಡಿ ನಿನ್ನನ್ನು ತೀವ್ರವಾಗಿ ಚಿಂತಿಸುವಂತೆ ಮಾಡಿದೆ. ನನಗೆ ಗೊತ್ತಿತ್ತು ಪರೀಕ್ಷೆ ಮುಗಿದ ಮೇಲೆ ನೀನು ಸಿಗುವುದಿಲ್ಲ ವೆಂದು ಅದಕ್ಕೆ ಕಾಣಿಕೆಗಾಗಿ ಪದೇ ಪದೇ ಒತ್ತಾಯಿಸಿದಾಗಲೂ ನೀನು ಜಾರಿಕೊಳ್ಳುತ್ತಿದೆ. ಆದರೆ ನಾನು ಬಿಡಬೇಕಲ್ಲ.

Saturday, October 30, 2010

ಮನಕರಗಿಸಿದ ಅಳು-ಅರ್ಥವಾಗದ ನಾನು.

ಮೆಲ್ಲನೆ ಗುಸು ಗುಸು ಪ್ರಾರಂಬವಾಗಿತ್ತು. ನಿನ್ನ ಮೇಲೆ ಮೊದಲಿನ ನಂಬಿಕೆ ಎಲ್ಲರಿಗೂ ಕಡಿಮೆ ಆಗಿತ್ತು. ಇದಾವುದನ್ನು ಲೆಕ್ಕಿಸುವ ಸ್ಥಿತಿಯಲ್ಲಿ ನಾನಿರಲಿಲ್ಲ. ನಮ್ಮಿಬ್ಬರನ್ನು ಎಲ್ಲರೂ ಆಲಕ್ಷಿಸಿ, ತಮ್ಮ ಪಾಡಿಗೆ ತಾವಿದ್ದು ಪ್ರವಾಸವನ್ನು enjoy ಮಾಡಿದರು.
ನಮ್ಮ ಖಾಸಗಿ ಗೊಂದಲಗಳನ್ನು ಇಣುಕಿ ನೋಡುವ ತುಂಟತನ ಯಾರಲ್ಲಿ ಇರಲಿಲ್ಲ. ಆದರೂ ನಾವಿಬ್ಬರೂ dull ಆದ ಬಗ್ಗೆ ಅನುಮಾನ ಶುರು .
ಮತ್ತೆ ನಿನ್ನ ಉಪದೇಶ ಶುರು ಆಯ್ತು. ನೋಡು ನಿನಗೆ ಇಡೀ ಬದುಕಿನುದ್ದಕ್ಕೂ ನನ್ನನ್ನು ಕಳೆದುಕೊಳ್ಳಬಾರದೆಂಬ ಇರಾದೆ ಇದ್ದರೆ ಸಂಯಮದಿಂದ ನಡೆದುಕೊ.
ಇಲ್ಲಿಗೆ, ಇಷ್ಟಕ್ಕೆ, ಮುಗಿಸುವುದಾದರೆ ಎಲ್ಲವನ್ನು ಸಹಿಸುವೆ ಎಂಬ ನಿನ್ನ ವಾದವನ್ನು ಆಲಿಸುವ ಸಹನೆ ಉಳಿದಿರಲಿಲ್ಲ.
ನಿನ್ನ ಸೌಂದರ್ಯ, ನಿರ್ಮಲ ಪ್ರೀತಿ, ನಿರ್ವಾಜ್ಯ ಗೆಳೆತನವನ್ನು ಗಮನಿಸುವ ಮನೋಸ್ಥಿತಿಯನ್ನು ಕಳೆದುಕೊಂಡಿದ್ದೆ.
ಮುಂದಿನ ಪಯಣ uneasy ಆಯಿತು. ಊರು ಮುಟ್ಟಿದರೆ ಸಾಕು ಎಂಬ ನಿನ್ನ ಧಾವಂತ ಅರ್ಥವಾಯಿತು.
ಆದರೆ ನನಗೆ ಇದು ಬೇಕೆನಿಸಿತು. ಒಂದೇ ವಾರದಲ್ಲಿ ಹೀಗೆ ನಾನು ಬದಲಾಗಬಹುದು ಎಂದು ಅಂದುಕೊಂಡಿರಲಿಲ್ಲ.
ಇನ್ನೆರಡು ದಿನದಲ್ಲಿ ಊರು ತಲುಪುತ್ತೇವೆ. ಏಪ್ರಿಲ್ ನಲ್ಲಿ ಪರೀಕ್ಷೆ ಎದೆ ಧಸಕ್ ಎಂದಿತು. ವಾಸ್ತವದ ಸವಾಲುಗಳನ್ನು ಪ್ರೇಮ ಕುರುಡಾಗಿಸಿತ್ತು.
ಸಿರ್ಸಿ ಮಾರಿ ಕಾಂಬಾದೇವಿಯ ದರ್ಶನದಲ್ಲಿ ನೀನು ಗಂಭೀರಳಾದದ್ದನ್ನು ಗಮನಿಸಿದೆ. ನಿನ್ನ ಲ್ಲಿ ಪಾಪಪ್ರಜ್ಷೆ ಜಾಗೃತವಾಯಿತು. ಬೆಂಕಿಯಲ್ಲಿ ಕೈ ಇಟ್ಟವಳ ಹಾಗೆ ಒದ್ದಾಡಿದೆ. ಪ್ರೀತಿಯ ಮನದಾಳದ ಮಾತುಗಳನ್ನು ಕೇಳುವ ಸಹನೆ ನನ್ನಲ್ಲಿ ಇಲ್ಲದ್ದು ನಿನ್ನ ವ್ಯಥೆಗೆ ಕಾರಣವಾಯಿತು.

ನಿನ್ನ ಆಳದ ನೋವನ್ನು ಯಾರಿಗೂ ಹೇಳಲಾಗದ ನಿನ್ನ ದುಸ್ಥಿತಿಯ ಬಗ್ಗೆ ಈಗ ಕನಿಕರವೆನಿಸುತ್ತದೆ.
ಮತ್ತದೇ ಏಕಾಂತ. ಈಗ ನನ್ನ ಬಿಸಿ ಅಪ್ಪುಗೆ ನಿನ್ನ ಪಾಲಿಗೆ ಅಗ್ನಿ ಕುಂಡವಾಯಿತು. ಸಿಹಿ ಮುತ್ತುಗಳು ಹಾವಿನ ಹೆಡೆಯಾದವು.
ನಿನ್ನನ್ನು ನೀನು ನಿನಗರಿವಿಲ್ಲದಂತೆ, ಪ್ರಾಮಾಣಿಕ ಅಭಿವ್ಯಕ್ತಿಯಿಂದಾಗಿ ಕಳೆದುಕೊಂಡಿದ್ದೆ.

ನನಗೆ ಅದಾವುದನ್ನು ಗ್ರಹಿಸುವ ಶಕ್ತಿ ಇರಲಿಲ್ಲ. ವಿವೇಕ ನನ್ನಿಂದ ಮಾಯವಾಗಿತ್ತು. ಜಾಗೃತ ಗೊಳಿಸುವ ವಯಸ್ಸು ಅದಲ್ಲ ಬಿಡು. ಈ ಹುಡುಗಾಟ ಎಲ್ಲಿದ್ದವರನ್ನು ಎಲ್ಲಿಗೋ ತಲುಪಿಸಿತು.
ಒಮ್ಮೆಲೆ ನೀನು ಜೋರಾಗಿ ಅಳಲು ಶುರು ಮಾಡಿದಾಗ ಭಯವಾಯ್ತು. please leave me alone. ನನ್ನನ್ನು ಕಾಡಬೇಡ. ಕೈಮುಗಿತೇನೆ.

ಊರಿಗೆ ಹೋದ ಮೇಲೆ ಈ ರೀತಿ ಕಾಡಿದರೆ ತೊಂದರೆ ಅನುಭವಿಸಿ ಸಾಯ್ತೇನೆ ಅಂದಾಗ ಆಘಾತವಾಯಿತು.
ನಾನೇನು ಹುಡುಗಿ ಮದುವೆಯಾಗಿ ಹೋಗ್ತೇನೆ. ಆದರೆ ನೀನು ಮುಂದೆ ಕಾಲೇಜಿಗೆ ಹೋಗಿ ಜಾಣನಾಗಿ ಭವಿಷ್ಯ ರೂಪಿಸಿಕೊಳ್ಳಬೇಕು. ನನ್ನಿಂದ ನಿನ್ನ ಬಾಳು ಹಾಳಾಗಬಾರದು.

ಕೇವಲ ಆಪ್ತ ಅಪ್ಪುಗೆಗೆ ನೀನು ಹೀಗೆ ಕರಗಿ ಹೋಗಿ ಹಟಮಾರಿ ಆಗುತ್ತಿ ಎಂದು ಗೊತ್ತಿದ್ದರೆ ನಾನಿಂತಹ ತಪ್ಪು ಮಾಡುತ್ತಿದ್ದಿಲ್ಲ.
ದಯವಿಟ್ಟು ಕ್ಷಮಿಸು ಮಾರಾಯ, ಸ್ವಲ್ಪ ಸಹನೆ ತಗೋ, ನೀನು ತುಂಬಾ ಚಿಕ್ಕವನು.
ನನಗಿಂತ ಎಂಟು ತಿಂಗಳು ಸಣ್ಣವನು. ನನಗಿಂತ ಆರು ವರ್ಷ ದೊಡ್ಡವನನ್ನು ಮದುವೆಯಾಗಿ ಹೋಗುವ ಗೃಹಿಣಿ. ನನ್ನನ್ನು ಒಂಚೂರು ಆ ಪವಿತ್ರ ದೃಷ್ಟಿಯಿಂದ ನೋಡು.
ಇನ್ನೆರಡು ತಿಂಗಳಲ್ಲಿ ನಾನು ಬೇರೆಯವರ ಹೆಂಡತಿ. ಆಗ ನಿನಗೆ ಯಾವ ಅಧಿಕಾರವೂ ಇರುವುದಿಲ್ಲ. ಕೇವಲ ಒಂದೇ ವಾರದ ಸಲುಗೆಯಲ್ಲಿ ನನ್ನನ್ನು ಬಿಟ್ಟಿರುವುದು ಅಸಾಧ್ಯ ಎಂಬಂತೆ ವರ್ತಿಸಿದರೆ ಮುಂದೆ ಹೇಗೆ ಇರುತ್ತೀ.
ನಾನು ನಿನಗಾಗಿ ಚಿಂತಿಸುವಂತಾಯಿತು. please control your self, ಇಲ್ಲಂದರೆ ನೀನು ಹಾಳಾಗುತ್ತೀ ಎಂದು ಬಿಗಿದಪ್ಪಿ ಅಳಲು ಪ್ರಾರಂಭಿಸಿದಾಗ ಒಂದು ಕ್ಷಣ ಸ್ತಂಬೀ ಭೂತನಾದೆ. ಆಯ್ತು ನಿನ್ನನ್ನು ಅರ್ಥಮಾಡಿಕೊಳ್ಳುವೆ ದಯವಿಟ್ಟು ಅಳಬೇಡ ಅಂದಾಗ ನಿನಗೆ ಸಮಾಧಾನವಾಯ್ತು.
ನನ್ನ ಈ ಸಹನೆಯನ್ನು ನೀನು ತೃಪ್ತಿಯಿಂದ ಸ್ವೀಕರಸಿದೆ. ಆದರೆ ನನ್ನ ಈ ಸಹನೆ ಶಾಶ್ವತವಾಗಿ ಉಳಿಯುತ್ತೆ ಎಂಬ ನಂಬಿಕೆ ನನ್ನಲ್ಲಿರಲಿಲ್ಲ. ಕಣ್ಣೀರನ್ನು ವಾತ್ಸಲ್ಯದಿಂದ ಒರೆಸಿದೆ.
ಹೌದು ನಿನ್ನ ಬಾಳಿಗೆ ಮುಳ್ಳಾಗಬಾರದು ಇಷ್ಟು ಅನುಭವಿಸಿದ್ದು ಸಾಕು.
ಊರಿಗೆ ಹೋದ ಮೇಲೆ ಈ ಹಿಂದೆ ಇದ್ದಂತೆ, ಅಪರಿಚಿತನಾಗಿ serious ಆಗಿ ಉಳಿಯಬೇಕು ಎಂಬ ನಿರ್ಧಾರಕ್ಕೆ ಬಂದು ಹಾಸಿಗೆ ಸೇರಿದೆ.
ನಿನ್ನ ಕಣ್ಣಿರ ಹನಿಗಳು ಎದೆಯ ಮೇಲೆ ಹರಿದಾಡಿದಂತೆ ಭಾಸವಾಯಿತು.
ನನ್ನನು ಸಮಾಧಾನ ಪಡಿಸಿಕೊಳ್ಳಲು ಪ್ರಯತ್ನಿಸಿ ನಿದ್ರೆಗೆ ಜಾರಿದೆ.

ಪಾಸಾದ ಮೊದಲ ಪರೀಕ್ಷೆ - ನಿಟ್ಟುಸಿರು ಬಿಟ್ಟ ಶಿಕ್ಷಕರು

ನಿಧಾನವಾಗಿ ನಿರಾಶೆ ಪ್ರಾರಂಭ. ಉಳಿದ ವಿಷಯಗಳಲ್ಲಿ ಪರಿಪೂರ್ಣತೆ ಇಲ್ಲದೆ Highscool ಗೆ ಹೋಗುವದಾದರೂ ಹೇಗೆ ಎಂಬ tension ಶುರು ಆಯಿತು. ಸ್ವಲ್ಪ serious ಆಗಿ ಶಾಲೆಗೆ ಅಂಟಿಕೊಂಡಿದ್ದು ಏಳನೇ ವರ್ಗದಲ್ಲಿ.
ಆದರೆ ಆಗ ತುಂಬಾ ವಿಳಂಬವಾಗಿತ್ತು. Board exam ಎದುರಿಸುವ ಕಾರಣಕ್ಕಾಗಿ ಎಲ್ಲಿಯೂ ಹೋಗದಂತೆ ಅಭ್ಯಾಸ ಪ್ರಾರಂಭ ಮಾಡಿದೆ.
ಇಂಗ್ಲಿಷ್, ವಿಜ್ಞಾನ, ಗಣಿತ ವಿಷಯಗಳಲ್ಲಿ ಹೆಚ್ಚಿನ ಪರಿಪೂರ್ಣತೆ ಸಾಧ್ಯವಾಗಲಿಲ್ಲ.

ಅಡಿಪಾಯವಿಲ್ಲದ ಕಟ್ಟಿದ ಮನೆಯಂತಾದ ನನ್ನ ಶಿಕ್ಷಣದ ಕುರಿತು ಚಿಂತಿಸುವಂತಾಯಿತು. ನಾನು primary ಹಂತದಲ್ಲಿ ಶಿಕ್ಷಣ ಪಡೆಯಲು ವಂಚಿತನಾದದ್ದು ಮುಂದಿನ ಅಧ್ಯಯನಗಳಲ್ಲಿ ಶ್ರಮ ಪಡುವಂತಾಯಿತು.
ಇತ್ತೀಚಿನ ದಿನಗಳ ಶ್ಯಕ್ಷಣಿಕ ಕಾರ್ಯಗಳಲ್ಲಿ ನನ್ನ ಭಾಷಣ, ತರಬೇತಿಗಳು ಮುಗಿದ ಮೇಲೆ ಶಿಕ್ಷಣ ತಜ್ಞರು ನಾನು ಮೊದಲಿನಿಂದಲೂ ಪ್ರತಿಭಾ ಸಂಪನ್ನ rank ವಿದ್ಯಾರ್ಥಿಯೆಂದೇ ಭಾವಿಸುತ್ತಾರೆ. ಅತ್ಯಂತ ವಿಫಲ ವಿದ್ಯಾರ್ಥಿ ಎಂಬ ಸತ್ಯ ಬಹಳಷ್ಟು ಜನರಿಗೆ ಗೊತ್ತೇ ಇಲ್ಲ. ಅಂದಿನ ನನ್ನ ವಿಫಲತೆ, ಇಂದಿನ ಸಫಲತೆಗೆ ನಾಂದಿಯಾಗಿದ್ದು ಹಲವರಿಗೆ ಪ್ರಯೋಜನವಾಗಿದೆ.
ಇವರೊಬ್ಬ educational expert ಎಂದು ಪರಿಚಯಿಸಿದಾಗ ಒಳಗೊಳಗೆ ಸಂಕೋಚವಾಗಲು ನನ್ನ ಬಾಲ್ಯದ ವಿಫಲತೆ ಕಾರಣ. ಏಳನೇ ತರಗತಿಯಲ್ಲಿದ್ದಾಗ ಪೂರ್ವಭಾವಿ ಪರೀಕ್ಷೆಗಳಲ್ಲಿ ನನ್ನ ವಿಫಲತೆಯನ್ನು ಗುರುತಿಸಿದ ಮುಖ್ಯ ಗುರುಗಳು fail ಆಗುವ ಸೂಚನೆಯನ್ನು ನೀಡಿದರು. ಆದರೆ ಕಾಲ ಮಿಂಚಿತ್ತು. ಊರಲ್ಲಿನ ಪ್ರತಿಷ್ಟಿತರ ಮಕ್ಕಳು board exam ನಲ್ಲಿ fail ಆದರೆ ಶಿಕ್ಷಕರಿಗೆ, ಶಾಲೆಗೆ ಕೆಟ್ಟ ಹೆಸರು ಬೇರೆ.
ನನ್ನನ್ನು ಕರೆದು ಚನ್ನಾಗಿ ಅಭ್ಯಾಸ ಮಾಡಲು ಸೂಚಿಸಿದರೂ ನಾನು ಅಸಹಾಯಕ ಸ್ಥಿತಿ ತಲುಪಿದ್ದೆ.
ಸರಿ ವಾರ್ಷಿಕ ಪರೀಕ್ಷೆ ಹತ್ತಿವಾದಾಗ, ಜಾಣ ಗೆಳೆಯರ ನೆರವು ಕೇಳಿದೆ.ಅವರಿಗೂ ನಾನು pass ಆಗಲಿ ಎಂಬ ಸದಾಶಯವಿತ್ತು.
ಅಂದಿನ ಸರಕಾರಿ ಶಾಲೆಗಳಲ್ಲಿ ಸಮರ್ಪಕ seating ವ್ಯವಸ್ಥೆ ಇರಲಿಲ್ಲ. ನೆಲದ ಮೇಲೆ ಕುಳಿತು ಪರೀಕ್ಷೆ ಬರೆಯಬೇಕಿತ್ತು.
ದಡ್ಡ ವಿದ್ಯಾರ್ಥಿಗಳು, ನದಿಯಲ್ಲಿ ತೇಲಿ ಬರುವ ಹೆಣಕ್ಕೆ ಸಮ ಎಂದು ಶಿಕ್ಷಕರು ತಮಾಷೆ ಮಾಡುತ್ತಿದ್ದರು. ನದಿಯಲ್ಲಿ ತೇಲಿ ಬರುವ ಹೆಣವನ್ನು ನೋಡಿದವರು ಉದ್ದನೇ ಕೋಲಿನಿಂದ ಹೆಣವನ್ನು ಮುಂದಿನ ಊರಿಗೆ ಸಾಗಿಸುತ್ತಾರಂತೆ. ಹಾಗೆ ನನ್ನನ್ನು ಹೈಸ್ಕೂಲಿಗೆ ಸಾಗು ಹಾಕುವ ಯೋಚನೆ, ಜವಾಬ್ದಾರಿ ಶಿಕ್ಷಕರ ಪಾಲಿಗಿತ್ತು.

ಏಳನೇ ಪರೀಕ್ಷೆಯಲ್ಲಿ ನಾನು ಬರೆದ ಉತ್ತರ ಪತ್ರಿಕೆಗಳನ್ನು ಒಮ್ಮೆ ಶಿಕ್ಷಕರೇ ಪರೀಕ್ಷಿಸುತ್ತಿದ್ದರು. pass ಆಗುವ ಅವಕಾಶ ಕಡಿಮೆ ಅನಿಸಿದರೇ ಒಂದೆರಡು ಉತ್ತರಗಳನ್ನು ಬರೆಸುವದು ಅನಿವಾರ್ಯ ವಾಯಿತು.
ಸತ್ಯ, ಪ್ರಾಮಾಣಿಕತೆಯನ್ನು ಬೋಧಿಸುವ ಶಿಕ್ಷಕರು ನಮ್ಮಂತಹ ಅವಿವೇಕಿಗಳಿಂದಾಗಿ ಎಂತಹ ತೊಂದರೆ ಅನುಭವಿಸಬೇಕಾಯಿತು ಎಂದು ನೆನಪಾದರೆ ಬೇಸರವಾಗುತ್ತದೆ.
ಹೀಗಾಗಿ ಅಂದು ನಮ್ಮ ಪ್ರವೇಶಗಳನ್ನು ಕಾಪಿ ಮಾಡಿಸುವದು ಅನಿವಾರ್ಯವಾಗಿತ್ತು. ಪರೀಕ್ಷಾ ನಕಲು ಪದ್ದತಿಯನ್ನು ನಿಯಂತ್ರಿಸಲು ಅಧಿಕಾರಿಗಳು ವಿಫಲರಾಗುತ್ತಿದ್ದರು.
ಹಿಂದುಳಿದ ಹೈದ್ರಾಬಾದ್ ಕರ್ನಾಟಕ ಪ್ರದೇಶಗಳಲ್ಲಿ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸುವುದಕ್ಕಿಂತ, ವಿದ್ಯಾರ್ಥಿಗಳನ್ನು ಶಾಲೆಗೆ ಕರೆತರುವುದೇ ಪ್ರಯಾಸಕರ ಕೆಲಸವಾಗಿತ್ತು. mass copy ಇರದಿದ್ದರೂ ಅಲ್ಲಲ್ಲಿ oxygen ತರಹ ಸಹಾಯ ಮಾಡಿ ಜೀವದಾನ ನೀಡುತ್ತಿದ್ದರು. ಊರಲ್ಲಿ ಇದ್ದ ಸರಕಾರಿ ಶಾಲೆಗಳ ಸ್ಥಿತಿ ಚಿಂತಾಜನಕವಾಗಿತ್ತು.
ಅದೇ ತಾನೇ ಊರಲ್ಲಿ ಖಾಸಗಿ ಇಂಗ್ಲಿಷ್ ಮಾಧ್ಯಮ ಶಾಲೆ ಪ್ರಾರಂಭವಾಗಿತ್ತು.

English medium ಹುಚ್ಚು ಹಳ್ಳಿಗಳಲ್ಲಿ ಆರಂಭವಾಗಿತ್ತು. ಮನೆಯಲ್ಲಿ ತಮ್ಮ ಜಗದೀಶ, ತಂಗಿ ರಾಜೇಶ್ವರಿ ಇಂಗ್ಲಿಷ್ ಶಾಲೆಗೆ ಹೋಗುತ್ತಿದ್ದರು.
ನಾನು ಶಿಕ್ಷಣ ಪಡೆಯುವಲ್ಲಿ ಪೂರ್ವ ವಿಫಲನಾಗಿದ್ದು ನನಗೇನು ಅನಿಸಲೇ ಇಲ್ಲ. ಏಳನೇ ತರಗತಿಯ ಆರು paper ಚನ್ನಾಗಿ ಆದವು ಎಂಬ ಸಮಾಧಾನ ಶಿಕ್ಷಕರಿಗೆ, ಆದರೆ ನನಗೆ ಆ ರೀತಿಯ ಆತ್ಮವಿಶ್ವಾಸವಿರಲಿಲ್ಲ.
ಆತ್ಮಾವಲೋಕನ ಮಾಡಿಕೊಳ್ಳುವ ಸ್ಥಿತಿಯಲ್ಲಿ ನಾನಿರಲಿಲ್ಲ. ಏನಾದರೂ ಆಗಲಿ ಎಂಬ ಭಾವನೆಯಿತ್ತು.

ಮನೆತನದ ಶ್ರೀಮಂತಿಕೆ ಕಡಿಮೆ ಆಗಿ ವ್ಯಾಪಾರ ಇಳಿಮುಖವಾಗಿತ್ತು. ಮನೆತನದ ಶ್ರೀಮಂತ ಅಮರಣ್ಣ ತಾತ 1976 ರಲ್ಲಿ ನಿಧನರಾಗಿದ್ದರು.
ಮುಂದೆ ಶಿಕ್ಷಣದ ಮೂಲಕವೇ ಬದುಕನ್ನು ರೂಪಿಸಿಕೊಳ್ಳುವ ಅನಿವಾರ್ಯವಿತ್ತು. ವ್ಯಾಪಾರ ಊರಲ್ಲಿ ಭಿನ್ನವಾಗಿ ಬೆಳೆಯತೊಡಗಿತ್ತು.
ಅತ್ತಕಡೆ ವ್ಯಾಪಾರವೂ ಇರಲಿಲ್ಲ. ಪರಿಪೂರ್ಣ ಶಿಕ್ಷಣವೂ ಸಿಗಲಿಲ್ಲ ಎಂಬ ತ್ರಿಶಂಕು ಸ್ಥಿತಿ ನಮ್ಮದಾಗಿತ್ತು.
ಇನ್ನು ಮುಂದೆ ಗಂಭೀರವಾಗಿ ಅಭ್ಯಾಸ ಮಾಡಬೇಕು ಎಂಬ ನಿರ್ಧಾರ ಮಾಡಿದೆ.
ಸುದೈವ ವಶಾತ್ 7th pass ಆದೆ. ನನಗಿಂತಲೂ ಹೆಚ್ಚು ನಮ್ಮ ಶಿಕ್ಷಕರು ಖುಷಿ ಪಟ್ಟರು. ಅಂದು ನಾನು 7th pass ಆದ ಸಂಭ್ರಮ ನೆನಪಾದರೆ ಅಮಿತಾಬ ಬಚ್ಚನ್ ರ ಮಂಜ ಪಾಸ್ ಆದ ಎಂಬ ಜಾಹಿರಾತು ನೆನಪಾಗುತ್ತದೆ. ಅಂತೂ ಮಂಜ ಪಾಸ್ ಆದ.

Friday, October 29, 2010

ವಿಚಲಿತಗೊಂಡ ಮನಸು - ಕೆರಳಿದ ಭಾವನೆಗಳು

ಮೈಸೂರು ದಾಟುವ ಹೊತ್ತಿಗೆ ನಾನು ಭಿನ್ನವಾಗಿ ಹೋಗಿದ್ದೆ. ಎಂದೂ ಇರದ ಕೋಪ ನನ್ನ ನಡೆ-ನುಡಿಯಲ್ಲಿ ಶುರುವಾಯಿತು.. ಅದನ್ನು ಗುರುತಿಸಲಿಲ್ಲ. ಶ್ರೀರಂಗ ಪಟ್ಟಣದ ಪಾರ್ಕಿನಲ್ಲಿ ಮರದ ಕೆಳಗೆ ನಿಂತು ನಿನ್ನನ್ನು ಕಾಯುವಾಗ ಸಿಟ್ಟು ಬರಬಾರದಿತ್ತು.
ಆದರೆ ನಾನು ಕೋಪಿಸಿಕೊಂಡಾಗ ನನ್ನಲ್ಲಾದ ಬದಲಾವಣೆಯನ್ನು ನೀನು ಗುರುತಿಸಲಿಲ್ಲ. ಈಗ ಕೇವಲ ಬಯಕೆ ಮಾತ್ರ ಉಳಿದು, ಉಳಿದ ಕುತೂಹಲವೆಲ್ಲ ನಿಧಾನ ಮಾಯವಾಯಿತು.

ಬೇಲೂರಿನಲ್ಲಿ halt ಮಾಡಿದಾಗ ಮತ್ತೊಮ್ಮೆ ಇಡೀ ರಾತ್ರಿ ಚರ್ಚಿಸುವ ಅವಕಾಶ. ಆದರೆ ನಾನು ಸುಂದರ ಸಮಯವನ್ನು ಹಾಳುಮಾಡಿಕೊಂಡೆ. ನಿನ್ನಿಂದ ಏನೆಲ್ಲ, ಅಪ್ರಿಯವಾದದ್ದನ್ನು ಬಯಸಿದ್ದು ನಿನಗೆ ಆತಂಕವನ್ನುಂಟುಮಾಡಿತ್ತು. ನಿಧಾನವಾಗಿ ನಿರಾಕರಣೆ ಮಾಡಿದಾಗ, ನಾನು ನನಗರಿವಿಲ್ಲದಂತೆ ಹಕ್ಕನ್ನು ಚಲಾಯಿಸಿದ್ದು ಆಘಾತವನ್ನುಂಟುಮಾಡಿತ್ತು.
ನಾನಾಗ ಬದಲಾಗಿದ್ದೆ. ಬಿಸಿ ಅಪ್ಪುಗೆಯ ರೋಮಾಂಚನ ಹಿತಕಾರಿಯಾಗದೇ ಶತ್ರುವಾಯಿತು. ನೀನು ದಾಳಿ ಮಾಡಿದಾಗ ಇದ್ದ ಮುಗ್ಧತೆ ನನ್ನಲ್ಲಿ ಉಳಿದಿರಲಿಲ್ಲ. ನಾನು ಒಂದರ್ಥದಲ್ಲಿ ವಿಕೃತವಾಗಿ ಹೋಗಿದ್ದೆ.
ನೀನು ನನ್ನಿಂದ ಬಯಸಿದ ಮುಗ್ಧ ಪ್ರೇಮದ ಜಾಗೆಯಲ್ಲಿ ಬಯಕೆ ಆವರಿಸಿತ್ತು. ಕೇವಲ ಎರಡೇ ದಿನಗಳಲ್ಲಿ ಆದ ಬದಲಾವಣೆ, ಯಾಕೆ ಹೀಗೆ ಎಂಬ ಜಿಜ್ಞಾಸೆ, ಅತಾರ್ಕಿಕ ಸಂಗತಿಯಾಯಿತು.
ಇಬ್ಬರೂ mood ಕಳೆದುಕೊಂಡು ಗಂಭೀರವಾದೆವು. ಪ್ರವಾಸದ ಆರಂಭದಲ್ಲಿದ್ದ ಖುಷಿ ನಿಧಾನವಾಗಿ ಕರಗಿ ಹೋಯಿತು.
please ನನ್ನನ್ನು ರೂಮಿಗೆ ಹೋಗಲು ಬಿಡು, ಯಾರಾದರೂ ತಪ್ಪು ತಿಳಿದುಕೊಂಡಾರು ಎಂದದ್ದು ನನಗಿಷ್ಟವಾಗಲಿಲ್ಲ.

ಎಲ್ಲವೂ track ತಪ್ಪಿದಾಗ ಆಗುವ ಅನಾಹುತವನ್ನು ನೀನು ನನಗಿಂತ ಚನ್ನಾಗಿ ಅರಿತವಳಾಗಿದ್ದೆ.
Engaged girl ಎಂಬ relaxation ಉಳಿಯುವುದಿಲ್ಲ ಎಂದು ನಿನಗೆ ಖಾತ್ರಿಯಾದಾಗ ನನ್ನನ್ನು ದೂರ ಮಾಡಲು ಪ್ರಯತ್ನಿಸಿದ ಸೂಕ್ಷ್ಮತೆ ನನಗೆ ಅರ್ಥವಾಗಲಿಲ್ಲ. You felt that I started disturbing you.
ನಿನ್ನ ಪ್ರೇಯಸಿಯಂತೆ ಪರಿಭಾವಿಸಲು ಪ್ರಾರಂಭಿಸಿದ್ದು ನಿನಗೆ ಹೊಸದೆನಿಸಿತು.
ಬಸ್ಸಿನಲ್ಲಿ ನಿಧಾನವಾಗಿ ತಿಳಿಹೇಳಿದರೂ ನನಗದು ಅರ್ಥವಾಗಲಿಲ್ಲ. ನೋಡು ಪುಟ್ಟಾ ನಾನು ಮದುವೆಯಾಗಿ ಹೋಗುವವಳು ನನಗೆ ನಿನ್ನಿಂದ ತೊಂದರೆಯಾಗಬಾರದು. ನಿನ್ನ ಮೇಲಿದ್ದ ನಿರ್ಮಲ ಪ್ರೇಮವನ್ನು ಹೇಳಿ-ಹಂಚಿಕೊಂಡಿದ್ದೆ ತಪ್ಪಾಯಿತು ಅನ್ನುವಂತೆ ನಡೆದುಕೊಳ್ಳಬೇಡ. ನಿನ್ನ ಪ್ರೀತಿಯ ನೆನಪನ್ನು ಕಟ್ಟಿಕೊಂಡು ಹೋಗಲು ಅವಕಾಶ ಮಾಡಿಕೊಡು. ನೆನಪು ಹಿತಕರವಾಗಿ ಉಳಿಯಬೇಕಾದರೆ ನೀನು ಮುಗ್ಧವಾಗಿದ್ದರೆ ಚಂದ, ಈ ರೀತಿ ಹೆಚ್ಚನದನ್ನು ಬಯಸಬೇಡ ಅಂದಾಗಲೂ, ಊಹೂಂ.....ನಾನು ಬದಲಾಗಿ ಹೋಗಿ ಆಕ್ರಮಣಕಾರಿಯಾಗಿದ್ದೆ.

ಬಿಸಿ ಉಪ್ಪಿಟ್ಟು, ಅಮೇರಿಕಾ ಹಾಲು

ರಾಮಣ್ಣ ಮೇಷ್ಟ್ರು ಪ್ರಕರಣವೊಂದೇ ನನ್ನ ನಿರಾಸಕ್ತಿಗೆ ಕಾರಣವಲ್ಲ. ಅಕ್ಷರ ಪ್ರೇಮ ಅರಳಲೇ ಇಲ್ಲ. ಅಂಗಡಿ ಮೇಲಿನ ಆಸಕ್ತಿ, ಪುಟಾಣಿ, ಬೆಲ್ಲ, ಗೋಡಂಬಿಗಳ ಮೇಲಿನ ಪ್ರೀತಿಯಿಂದಾಗಿ ಶಾಲೆ ಆದ್ಯತೆ ಅನಿಸಲೇ ಇಲ್ಲ.
ಮನೆಯಲ್ಲೂ ಅಷ್ಟೆ, ದೊಡ್ಡ ಪರಿವಾರ ಯಾರು ಹೋಗ್ತಾರೆ, ಬಿಡ್ತಾರೆ ಎಂಬ ಕಟ್ಟುನಿಟ್ಟು ಇರಲಿಲ್ಲ. ಪಾಲಕರು, ಅಜ್ಜಂದಿರು, ನಮ್ಮನ್ನು ಹೊಡೆಯುವುದು ಶಿಕ್ಷಿಸುವುದಂತೂ ದೂರದ ಮಾತು. ಎಲ್ಲರೂ ಅವರವರ ಪಾಡಿಗೆ busy.
ಇಂದಿನ ಪ್ರಾಥಮಿಕ ಶಿಕ್ಷಣದ ಶಿಸ್ತನ್ನು, ಅಭ್ಯಾಸದ ಬಗೆಗಿನ ಕಾಳಜಿಯನ್ನು ನೋಡಿದರೆ ಆಶ್ಚರ್ಯ. ಈ ರೀತಿಯ ಬಾಲ್ಯದ ಶಿಕ್ಷಣ ಪಡೆದ ನೆನಪೆ ಇಲ್ಲ.
ಇದ್ದ ಸರಕಾರಿ ಶಾಲೆಯಲ್ಲಿ ಮಕ್ಕಳು ಬಂದರೆ ಸಾಕು ಎನ್ನುವ ಸ್ತಿತಿ ಶಾಲೆಯಲ್ಲಿ ಕೊಡುತ್ತಿದ್ದ ದಪ್ಪ ಕಾಳಿನ ಉಪ್ಪಿಟ್ಟು ಒಮ್ಮೊಮ್ಮೆ ಶಾಲೆಗೆ ಹೋಗಲು ಪ್ರೇರೆಪಿಸುತ್ತಿತ್ತು.
ಅದನ್ನು ಎಲ್ಲರೂ ತಿನ್ನಬಾರದು ಎಂಬ ಕರಾರಿದ್ದರೂ ನಾನು ಕಡ್ಡಾಯವಾಗಿ ಖುಷಿಯಿಂದ ತಿನ್ನುತ್ತಿದ್ದೆ.
ಇಂದಿನ ಅಕ್ಷರ ದಾಸೋಹದ ಬಿಸಿ ಊಟ ಅಂದು ಉಪ್ಪಿಟ್ಟಿನ ಸ್ವರೂಪದಲ್ಲಿತ್ತು. ಬಿಸಿಯುಟ ಹೊಸ concept ಅಲ್ಲ. ಅಂದು ಅಮೇರಿಕಾ ಒದಗಿಸುತ್ತಿದ್ದ ಹಾಲಿನ ಪುಡಿ, ಮತ್ತು ರವೆಯನ್ನು ಮಕ್ಕಳ ಆಹಾರವಾಗಿ ಬಳಸುತ್ತಿದ್ದರು. ನಮ್ಮಂತಹ ದಡ್ಡ ಹುಡುಗರನ್ನು ಆಕರ್ಷಿಸಲು ಉಪ್ಪಿಟ್ಟು ನೆರವಾಯಿತು.
ಉಪ್ಪಿಟ್ಟು ಮಾಡುವ ವಾಸನೆ ಸಿಕ್ಕರೆ ಸಾಕು ಶಾಲೆಗೆ ಓಡಿಹೋಗುತ್ತಿದ್ದೆ. ಯಾರಿಗೂ ಕಾಣದಂತೆ ಉಪ್ಪಿಟ್ಟು ತಿನ್ನುತ್ತಿದ್ದೆ.
ನಿಧಾನವಾಗಿ ಸಾಧ್ಯವಾದಷ್ಟು ಕಲಿಯಲು ಪ್ರಾರಂಬಿಸಿದೆ. ರೆಗ್ಯೂಲರ್ ಇರದಿದ್ದರೂ ವರ್ಷ ಏಪ್ರಿಲ್ 10 ರಂದು ಪಾಸ್ ಆಗಿರುತ್ತಿದ್ದೆ.
ತಲೆಗೆ ಎಷ್ಟು ಅಕ್ಷರಗಳು ಹೋದವು ಎಂಬ ಪರೀಕ್ಷೆ ಇಲ್ಲದೆ ಪಾಸ್ ಆದದ್ದು ನನ್ನ ಶೈಕ್ಷಣಿಕ ಪವಾಡ
ಇಂತಹ ಪವಾಡಗಳು ನಮ್ಮ ಕಾಲಕ್ಕೆ ಸಾಮಾನ್ಯ. ಶ್ರೀಮಂತರ ಮಕ್ಕಳು ಶಾಲೆಗೆ ಬಂದರೆ ಸಾಕು ಎಂಬ ಸಂಭ್ರಮ ಬೇರೆ.
ಕನ್ನಡವನ್ನು ಮಾತ್ರ ಕಲಿಯುತ್ತಿದ್ದೆ. ಇಪ್ಪತ್ತರವರೆಗೆ ಮಗ್ಗಿ ಕಲೆತಿದ್ದು ಗಣಿತದ ಸಾಧನೆ.
ವಿಜ್ಞಾನ, ಇಂಗ್ಲಿಷ್, ಹಿಂದಿ ವಿಷಯಗಳ ಪದಗಳು ಆಗಾಗ ಪ್ರತ್ಯಕ್ಷವಾಗಿ ಮಾಯವಾಗುತ್ತಿದ್ದವು. ಆದರೆ ಆಳಕ್ಕೆ ಇಳಿಸಿಕೊಳ್ಳುವ ಪ್ರಯತ್ನ ಮಾಡಲಿಲ್ಲ. ಬಿಂದುರಾವ್ ಮೇಷ್ಟ್ರು, ಪ್ರಕಾಶಪ್ಪ ಮೇಷ್ಟ್ರು ಶಿಸ್ತಿನಿಂದ ಪಾಠ ಮಾಡುತ್ತಿದ್ದರು. ಬರುಬರುತ್ತಾ ಕುಷ್ಟಗಿಗೆ ಹೋಗುವುದನ್ನು ಕಡಿಮೆ ಮಾಡಿದೆ. ಶಾಲಾ ಸುಧಾರಣಾ ಸಮಿತಿಯ ಸಭೆಗಳಲ್ಲಿ ನಮ್ಮಂತಹ ಹುಡುಗರ ಬಗ್ಗೆ ಚರ್ಚೆಯಾಗುತ್ತಿದ್ದ ಸುದ್ದಿಗಳು ಕಿವಿಗೆ ಬಡಿಯುತ್ತಿದ್ದವು.
ಆದರೆ ಶಾಲೆಯ ಬಗ್ಗೆ ಭಯ, ಆಸಕ್ತಿ, ಶ್ರದ್ಧೆ ಬರಲೇ ಇಲ್ಲ. ಬಾಲ್ಯದಲ್ಲಿ ಕಡ್ಡಾಯವಾಗಿ ಶಿಕ್ಷೆ ನೀಡಿ ಶಿಕ್ಷಣ ನೀಡಬೇಕು. ಇಲ್ಲದಿದ್ದರೆ ಶಿಕ್ಷಣ ತಲೆಗೆ ಹೋಗುವುದಿಲ್ಲ ಎಂದು ಈಗ ಅನಿಸುತ್ತದೆ. ಆದರೆ ದೇಹ ದಂಡನೆಯ ಅಗತ್ಯವಿಲ್ಲ.
ಕನ್ನಡ ಅಕ್ಷರ ದುಂಡಾಗಿ ಬರೆಯುವುದನ್ನು ರೂಢಿ ಮಾಡಿಕೊಳ್ಳಲಿಲ್ಲ. ಅದೇ ಕಾರಣಕ್ಕೆ ಈಗಲೂ ಅಕ್ಷರ ದುಂಡಾಗುವುದಿಲ್ಲ.
ಮರವಾಗಿ ಬಗ್ಗದ್ದು, ಗಿಡವಾಗಿ ಬಗ್ಗೀತೆ ಎಂಬ ಮಾತು ನನ್ನ ಅಕ್ಷರಗಳಿಗೆ ಅನ್ವಯಿಸುತ್ತದೆ. ಬಾಲ್ಯದಲ್ಲಿ ಶುದ್ದಬರಹ ಸಾಧ್ಯವಾಗಲಿಲ್ಲ.
ಪ್ರತಿ ವರ್ಷ pass ಆಗುವ ಸಂಬ್ರಮ ಇದ್ದೇ ಇರುತ್ತಿತ್ತು. ನನಗಿಂತ ಒಂದೇ ವರ್ಷ ಮುಂದಿನ ಚನ್ನಪ್ಪ ಕಕ್ಕ ಶಾಲೆಯಲ್ಲಿ ಬುದ್ಧಿವಂತನಿದ್ದ. ಅದನ್ನು ನಾನೆಂದು compitition ಎಂದು ಭಾವಿಸಲೇ ಇಲ್ಲ. ಅವನದು ಅವನಿಗೆ, ನನ್ನದು ನನಗೆ ಎಂಬ easy going attitude ಇತ್ತು.
ಅಂಗಡಿಯಲ್ಲಿ ಕುಳಿತಾಗ ಅಮರಣ್ಣ ತಾತ ಕೇಳುವ ಇಲ್ಲ ಪ್ರಶ್ನೆಗಳಿಗೆ ಸರಳವಾಗಿ ಉತ್ತರ ಕೊಡುತ್ತಿದ್ದರಿಂದ ತಾತ ಶಹಬ್ಬಾಸ್ ಗಿರಿ ಕೊಡುತ್ತಿದ್ದ. ಹೀಗಾಗಿ ನನ್ನನ್ನು ದಡ್ಡ ಎಂದು ಯಾರೂ ಪರಿಗಣಿಸಲಿಲ್ಲ. ಅಮರಣ್ಣ ತಾತ ವ್ಯಾಪಾರದಲ್ಲಿ ತುಂಬಾ ಬುದ್ಧಿವಂತ. ಮನೆಯ ಹಿರಿಯ ಬೇರೆ, ಅಂತಹ ತಾತನೇ ಸರ್ಟಿಫಿಕೇಟ್ ಕೊಟ್ಟ ಮೇಲೆ ಉಳಿದವರೇನು ಲೆಕ್ಕ ಎಂಬ ಅಸಡ್ಡೆ ಬೆಳೆಯಿತು.
ಅಕ್ಯಾಡೆಮಿಕ್ ಆಗಿ ಬೆಳೆಯದಿದ್ದರೂ ಸಾಮಾನ್ಯ ಜ್ಞಾನ ಬೆಳಸಿಕೊಂಡೆ. ದಿನ ಪತ್ರಿಕೆ ಓದುತ್ತಿದ್ದೆ. ರೇಡಿಯೋ ಕೇಳುತ್ತಿದ್ದೆ ಅಲ್ಲಿನ ಎಲ್ಲ ಸುದ್ದಿಗಳನ್ನು ತುಂಬಾ ಅಚ್ಚುಕಟ್ಟಾಗಿ ಅಮರಣ್ಣ ತಾತನಿಗೆ ವರದಿ ಮಾಡುತ್ತಿದ್ದೆ.

ನಾಲ್ಕಾರು ಜನ ಇದ್ದಾಗ ತಾತ ಹೇಳುತ್ತಿದ್ದ, "ನಮ್ಮ ಸಿದ್ದಿ ತುಂಬಾ ಜಾಣ ಎಲ್ಲ ಸರಿಯಾಗಿ ನೆನಪಿಟ್ಟಿರುತ್ತಾನೆ." ಎಂಬ ಪ್ರಶಂಸೆಗಳು ಅಕ್ಯಾಡೆಮಿಕ್ ಆಗಿ ಬೆಳೆಯಲು ತಡೆಯೊಡ್ಡಿದವು.
ಗಲ್ಲೆಮೇಲೆ ಕುಳಿತುಕೊಂಡು ಸರಿಯಾಗಿ ಲೆಕ್ಕ ಮಾಡುತ್ತಿದ್ದೆ. ವ್ಯಾಪಾರದಲ್ಲಿನ ಚುರುಕುತನ ನನ್ನ ಜಾಣ ಎಂದು ಪರಿಗಣಿಸಿತು. ಏಳನೇ ತರಗತಿ ಬೋರ್ಡ ಪರೀಕ್ಷೆ. ಆಗ ಶಿಕ್ಷಕರು ಕಟ್ಟು ನಿಟ್ಟಾಗಿ ಕ್ಲಾಸಿಗೆ ಹಾಜರಾಗಲು ಸೂಚಿಸಿದರು.
ಒಂದರಿಂದ ಆರು ಅಪರೂಪದ ಅತಿಥಿಯಾಗಿದ್ದ ನಾನು ಶಾಲೆಗೆ regular ಆದದ್ದು ಏಳನೇ ಕ್ಲಾಸಿನಲ್ಲಿ ಮಾತ್ರ.

Thursday, October 28, 2010

ಕೆಟ್ಟು ಹೋದ ರಾಜಕೀಯ ಸಂಸ್ಕೃತಿ


ರಾಜ್ಯದ ಉನ್ನತ ಸ್ಥಾನದಲ್ಲಿರುವ ಮುಖ್ಯ ಮಂತ್ರಿಗಳು ನಿಮಗೆ ಗಂಡಸುತನ ಇದ್ದರೆ ಬರುವ ಚುನಾವಣೆಯಲ್ಲಿ ಗೆದ್ದು ತೋರಿಸಿ' ಎನ್ನುತ್ತಾರೆ.
ಇನ್ನೊಬ್ಬ ಮಾಜಿ ಮುಖ್ಯಮಂತ್ರಿ ಗೌರವಾನ್ವಿತ ಸ್ಪೀಕರ್ ಅವರಿಗೆ ಅವನಿದ್ದಾನಲ್ಲ ನಿಮ್ಮ ಸ್ಪೀಕರ್, ಅವನಿಗೆ ಈ ವಿಷಯ ಕೇಳಿ' ಎಂಬ ಅಗೌರವ ಭಾಷೆ ಬಳಸುತ್ತಾರೆ.
ಕೈ, ನಾಲಿಗೆ, ಹೀಗೆ ದೇಹದ ವಿವಿಧ ಅಂಗಾಂಗಗಳನ್ನು ಕತ್ತರಿಸುವುದಾಗಿ ಇನ್ನೊಬ್ಬರು ಅಬ್ಬರಿಸುತ್ತಾರೆ.
ಸುಸಂಸ್ಕೃತ ಸಭ್ಯ ಎನಿಸಿಕೊಂಡ ಕನ್ನಡ ಸಂಸ್ಕೃತಿಯ ಪ್ರತಿನಿಧಿಗಳಾಗಿರುವ ನಮ್ಮ ರಾಜಕೀಯ ನಾಯಕರುಗಳು ಹದ್ದು ಮೀರಿ ವರ್ತಿಸುತ್ತಿದ್ದಾರೆ.
ಪ್ರಜಾತಂತ್ರ ವ್ಯವಸ್ಥೆಯಲ್ಲಿ ಸೋಲು-ಗೆಲವು ಇದ್ದದ್ದೇ. ಅಧಿಕಾರದಲ್ಲಿದ್ದವರನ್ನು ಬೀಳಿಸುವ ಪ್ರಕ್ರೀಯೆಯಿಂದಾಗಿ ಎಲ್ಲ ಗೊಂದಲ ಸೃಷ್ಟಿಯಾಗಿ ಶಾಸಕರ ಬೆಲೆ, ಭೂಮಿಯ ಬೆಲೆಯಂತೆ ಆಕಾಶಕ್ಕೇರಿದೆ. 25 ಕೋಟಿ ಬೆಲೆಬಾಳುತ್ತಾರೆಂದರೆ ಏನರ್ಥ?
ಕವಡೆ ಕಿಮ್ಮತ್ತಿಗೆ ಬೆಲೆ ಇಲ್ಲದಂತೆ ವರ್ತಿಸುವ ಜನಪ್ರತಿನಿಧಿಗಳ ಬೆಲೆ ರಾಜಕೀಯ ಜಂಜಾಟದಿಂದಾಗಿ ಕೋಟಿಗೇರಿದೆ.
ಸ್ವತ: ಶಾಸಕರೇ ತಮ್ಮ (ಇಲ್ಲದ) ಬೆಲೆಗಾಗಿ ಅಚ್ಚರಿಗೊಂಡಿದ್ದಾರೆ. ಯಾವ ಮಾರುಕಟ್ಟೆಯಲ್ಲಿ ಮಾರಾಟಗೊಳ್ಳಬೇಕೆಂದು ಗೊಂದಲಕ್ಕೆ ಬಿದ್ದಿದ್ದಾರೆ. ಪಕ್ಷ, ಸಿದ್ದಾಂತ, ಆರಿಸಿದ ಮತದಾರರ ಮೌಲ್ಯಗಳನ್ನು ಮರೆತು, ತಮ್ಮ ಮೌಲ್ಯ ಹೆಚ್ಚಳಕ್ಕೆ ಪರದಾಡುತ್ತಿದ್ದಾರೆ.
ಕರ್ನಾಟಕ ಶಾಸಕ ಸಭೆಯ ಇತಿಹಾಸದಲ್ಲಿಯೇ Best (?) Batch ಎನ್ನಬಹುದು.
ಅಧಿಕಾರ ಸಿಗದಿದ್ದರೂ ಚಿಂತೆಯಿಲ್ಲ, ಸಿಕ್ಕ ಹಣ ಬಾಚಿಕೊಂಡರೆ ಸಾಕು ಎಂದು busy ಆಗಿದ್ದಾರೆ.
ಅವರ ಹಣ ಹೂಡಿಕೆಗಾಗಿ ತಲೆಹಿಡುಕರು, ಭೂಮಿ ಹಿಡುಕರು ಅವರಿಗಿಂತಲೂ busy ಆಗಿದ್ದಾರೆ.
ಈ ಸ್ಥಿತಿ ಇನ್ನು ಮುಂದೆ ನಿಲ್ಲುವಂತೆ ಕಾಣುವುದಿಲ್ಲ. ಎಲ್ಲ ರಾಜಕೀಯ ಪಕ್ಷಗಳು ಇನ್ನೂ ಆಪರೇಷನ್ ಗಳಿಗೆ ಸಿದ್ಧವಾಗುತ್ತವೆ ಅಧಿಕಾರ ಇರುವ ಪಕ್ಷಗಳ ಜೊತೆಗೆ ಕೈಜೋಡಿಸುವಾಗ ಕ್ಷೇತ್ರದ ಅಭಿವೃದ್ಧಿ ಎಂದರೆ ಏನು ಎಂಬುದನ್ನು ಅರ್ಥ ಶಾಸ್ತ್ರ ಬಲ್ಲವರು ಇವರನ್ನು ನೋಡಿ ಆದಷ್ಟು ಬೇಗ ಹೊಸ ವ್ಯಾಖ್ಯಾನ ರೂಪಿಸಲಿ.

ಬದಲಾದ ಭಾವನೆಗಳು - ಉಂಟಾದ ತಲ್ಲಣ

ನೀನು ಉಂಟು ಮಾಡಿದ ಗೊಂದಲಕ್ಕೆ ಕೊನೆ ಬೀಳಬಹುದು ಅಂದುಕೊಂಡಿದ್ದೆ.
ಬಿಸಿ ಅಪ್ಪುಗೆ, ಸಿಹಿ ಚುಂಬನಗಳು ನನ್ನ ಮೈ-ಮನಗಳನ್ನು ಅರಳಿಸಿ ಹೊಸ ತಲ್ಲಣಗಳಿಗೆ ಕಾರಣವಾಗಿ ಪ್ರೇಮಭಾಷೆಯನ್ನು ಪರಿಚಯಿಸಿದವು.
ಮುಗ್ಧತೆ ಮಾಯವಾಗಿ, ಹೊಸ ಆಸೆ ಹುಟ್ಟಿತು. ನಮ್ಮಲ್ಲಿರುವ ಪ್ರೇಮ-ಕಾಮನೆಗಳು ಅರಳುವುದು ಹೀಗೆ ಇರಬಹುದು ಅಂದು ಕೊಂಡಿರಲಿಲ್ಲ.
ಮುಗ್ಧತೆ ಕಳೆದುಕೊಂಡೆ ಅನಿಸಿದಾಗ, ಆ ಜಾಗೆಯಲ್ಲಿ ಆರಾಧನೆ , ದಬ್ಬಾಳಿಕೆ ಶುರು ಆಯಿತು.
ಹೀಗಾಗಬಹುದು ಅಂದುಕೊಂಡಿರಲಿಲ್ಲ. ನೀನೇಕೆ ಬೇರೆಯರನ್ನು ಮದುವೆ ಆಗಬೇಕು. ನಿನ್ನನ್ನು ಮದುವೆ ಆಗುವ ಹುಡುಗನಿಗೆ ಯಾವ ಹಕ್ಕಿದೆ? ಎಂಬ ಎಡವಟ್ಟು ಪ್ರಶ್ನೆ ಆರಂಭವಾಗಲು ನಿನ್ನ ವರ್ತನೆ ಕಾರಣ ಎಂಬ ಭಾವನೆ ಕೆರಳಿಸಿತು.
ಪ್ರಯಾಣದಲಿ ಬಸ್ಸಿನ ಗಾಲಿಗಳು ಉರುಳಿದಂತೆಲ್ಲ, ಭಾವನೆಗಳು ಅರಳಹತ್ತಿದವು. ಮತ್ತೆ ಅದೇ ಅಪ್ಪುಗೆ, ಚುಂಬನಗಳು ಬೇಕೆನಿಸಿದವು.
ನಾನೊಬ್ಬ ಭಾವಕ ಹುಡುಗ, ನೀನಾದರೆ ಪ್ರಭುದ್ಧ ಹೆಣ್ಣು ನಿನಗೆ ಮದುವೆ ಎಂಬ ಸಂಕೋಲೆಯಲ್ಲಿ ನನ್ನನ್ನು ಗಾಯಗೊಳಿಸಿ ಆಸೆ ತೋರಿಸಿ ಮಾಯವಾಗುವ ಅಧಿಕಾರ ನಿನಗೆ ಕೊಟ್ಟವರಾರು? ನೋಡು ನನಗರಿವಿಲ್ಲದಂತೆ ನಾನು ಕ್ರೂರಿಯಾಗಲು ನಿನ್ನ ಪ್ರೇಮದ ಬಿಸಿ-ಅಪ್ಪುಗೆಯೇ ಕಾರಣ.
ಆದರೆ ಈ ಎಲ್ಲ ತಾರ್ಕಿಕ ಅಲೋಚನೆಗಳು ಈಗ ಅರ್ಥವಾಗಿವೆ. ಆಗ ನನಗೆ ತಿಳಿದಿದ್ದರೆ ಅಷ್ಟೊಂದು ಭಾವುಕನಾಗುತ್ತಿರಲಿಲ್ಲ.

ಎಲ್ಲವನ್ನು ಸಹಿಸಿಕೊಂಡು ಸಿಕ್ಕಷ್ಟು ಅನುಭವಿಸುತ್ತಿದ್ದೇನೇನೋ. ಒಂಟಿಯಾಗಿ ಬಳಲುವ ಸ್ಥಿತಿ ಬರುತ್ತಿರಲಿಲ್ಲ.
Hug,Love,Kiss ಎಂಬ ಪದಗಳು, ರಾಗ ಸಂಯೋಜನೆಗೊಂಡು ದೇಹದ ಮೇಲೆ ಹಿತವಾಗಿ ನರ್ತನ ಮಾಡಲು ಶುರು ಮಾಡಿದ ಮೇಲೆ ನನ್ನಲ್ಲಿ ಬದಲಾವಣೆ ಆರಂಭವಾಗಿತ್ತು.
ಮುಂದೆ ಇಂತಹ ದಟ್ಟ ಕಾಡೊಂದು ಸಿಕ್ಕರೆ ನೀನು ಹೇಳುವ ಮುನ್ನವೇ ನಾನೇ ಬಿಗಿದಪ್ಪಿ ಮುದ್ದಾಡಲು ನಿರ್ಧರಿಸಿದೆ.ಏ fool ಬಾರೋ ಇಲ್ಲಿ ಅನ್ನುವ ಅಗತ್ಯವೇ ಇಲ್ಲ. ನನ್ನಲ್ಲೀಗ ಆ foolishness ಮಾಯವಾಗಿದೆ.
ಮುಂಬರುವ ಎಲ್ಲ ಘಟನೆಗಳಿಗೆ ನೀನೆ ಕಾರಣವಾದೆ ಎಂಬುದನ್ನು ವಿಷಾದದಿಂದ ನೆನಪಿಸಿಕೊಳ್ಳುತ್ತೇನೆ. ಹುಡುಗುತನದ ಮುಗ್ಧತೆ ಮಾಯವಾಗಿ, ಪುರುಷ ಪ್ರಧಾನ dominent ಭಾವನೆ Adom, Eve ಕತೆಯಂತೆ ಹೀಗೆ ಆರಂಬವಾಗಬಹುದು ಅಂದುಕೊಂಡಿರಲಿಲ್ಲ.
Adom and Eve ಕತೆಯನ್ನು ಶಿಕ್ಷಕರು ವಿವರಿಸಿದಾಗ ಅರ್ಥವಾಗಿರಲಿಲ್ಲ. ಆದರೆ ನೀ ಮೈ ಪುಳಕಗೊಳಿಸಿದ ಮೇಲೆ Adom ಎಚ್ಚರಾಗಿದ್ದಾನೆ.
ಪಕ್ಕದಲ್ಲಿ ನಿನ್ನ ಪಾಡಿಗೆ ನೀನು ಕುಳಿತಿದ್ದೆ, ಬೇಕಾದಾಗ ಮಾತ್ರ ಬೇಕಾದಂತೆ ವರ್ತಿಸುವ ತಿಳುವಳಿಕೆ ನಿನಗೆ ನಿನ್ನ ಹೆಣ್ತನ ನೀಡಿತ್ತು. ಆದರೆ ನನಗೆ ಕೇವಲ ಹುಚ್ಚು, ನೀ ಬೇಕೆಂಬ ಅದಮ್ಯ ಬಯಕೆ.
ನಿಧಾನ ರೋಮಾಂಚಿತನಾಗಿ ಮೈ ಅರಳತೊಡಗಿ ಮನಸು ಬೆಚ್ಚಗಾಯಿತು.
ನಿಧಾನ ತಾಗಿ ಬಳುಕುವ ನಿನ್ನ ತೋಳುಗಳನ್ನು ದಿಂಬಾಗಿಸಿ ಮಲಗಿಕೊಂಡಾಗ ನಿದ್ರೆಗೆ ಜಾರಿದ್ದೆ ಗೊತ್ತಾಗಲಿಲ್ಲ......
ಬೆಳಕು ಹರಿದಾಗ ಕಣ್ಣೆದುರು ಧುತ್ತೆಂದು ಪ್ರತ್ಯಕ್ಷವಾದ ಮೈಸೂರು ಅರಮನೆ ನಿನ್ನಷ್ಟು ಭವ್ಯ ಅನಿಸಲಿಲ್ಲ.
ಮೈ ಮನಗಳಲಿ, ಕಣ್ಣನೋಟದಲಿ, ಹರಿದಾಡುವ ರಕ್ತದಲಿ ನೀ ಆವರಿಸಿಕೊಂಡಿದ್ದೆ.
ನನ್ನ ನಗು -ಮುಗ್ಧತೆಯಂತೆ ಮಾಯವಾಗಿ ಹೋಯಿತು. ಮುಗ್ಧತೆಗೆ ಗೊತ್ತಿರದ ಅನೇಕ ಸತ್ಯಗಳು ಅರ್ಥವಾಗತೊಡಗಿದವು.


ಅರಮನೆಯ ಸೌಂದರ್ಯದ ವಿವರಣೆ ತಲೆಯಲಿ ಹೋಗಲಿಲ್ಲ.ನೀನೋ ಏನೂ ಅಗದವಳಂತೆ, ಏನನ್ನೂ ಅನುಭವಿಸದಂತೆ ಸಹಜವಾಗಿದ್ದುದು, ನನ್ನ ಸಹಜತೆಯನ್ನು ನುಂಗಿಹಾಕಿತ್ತು.
ಗಲಿಬಿಲಿಯಾದ ಮನಸಿಗೆ ನಿನ್ನ ಸಾಂತ್ವನದ ಮಾತುಗಳು ಬೇಕೆನಿಸಿದ್ದವು. ನೀ ಸುಮ್ಮನಾದರೆ ಕೆನ್ನೆಗೆ ಬಾರಿಸಿ ಮಾತಿಗೆ ಎಳೆಯಬೇಕೆನಿಸಿತು.
ಪುರುಷತ್ವದ ಅಹಂಕಾರ ಜಾಗೃತವಾದಾಗ, ಕಾಮ ಅರಳಿದಾಗ ಉಂಟಾಗುವ ಮೃಗತ್ವ ಕೆರಳಿತು.
sorry I am sorry ಹಿಂದೆ ತಿರುಗದ ಹಾದಿ ಹಿಡಿದಿದ್ದೆ. ಮುಂದೆ ನನ್ನಿಂದ ಏನಾದರು ಎಡವಟ್ಟಾದರೆ ದಯವಿಟ್ಟು ಕ್ಷಮಿಸು ಎನ್ನುವ ಸೌಜನ್ಯವನ್ನು ಮನಸು ಮರೆಯಿತು.
Love,affection, infatuation ಹೀಗೆ ಹೊಸ ಪದಗಳು ಸಾಲಾಗಿ ಜೋಡಣೆಯಾದವು. ಈಗ ಅದಕ್ಕಾಗಿ ವಿಷಾದವಿಲ್ಲ ಆ ಮಾತು ಬೇರೆ ಅದರೆ ಆಗ ......ಆಗ.....

Wednesday, October 27, 2010

ಮನಸು ಅರಳುವ ಸಮಯ

ಆಗ ನನಗೆ ಹದಿನೈದು ವರ್ಷ. ಹಾಗಂತ ಶಾಲಾ ದಾಖಲೆಗಳು ಹೇಳುತ್ತಿದ್ದವು. ಒಂದು ಲೆಕ್ಕಕ್ಕೆ smart ಎನ್ನಬಹುದು. ದುಂಡಾಗಿದ್ದದ್ದು ನಿಜ. ನಾಜೂಕಾಗಿ ಅರಳಿದ್ದ ಮೀಸೆ, ಗುಳಿಬಿದ್ದ ಕೆನ್ನೆಗಳಲಿ ಇಣುಕುತ್ತಿದ್ದ ದಾಡಿ ಖುಷಿ ನೀಡಿದವು.
ಶಾಲೆಯಲ್ಲಿ tour ಹೋಗುವ plan ready ಆಯಿತು. ಕುವೆಂಪು ಜನ್ಮಸ್ಥಳ ಕವಿಶೈಲಕ್ಕೆ ಹೋಗೋಣವೆಂದಾಗ ಖುಷಿ, ಖುಷಿ.
ನಿನ್ನ ಮುದ್ದಾದ ಮುಖ ಕಂಡಾಗಲೆಲ್ಲ. ಮಜ ಅನಿಸುತ್ತಿತ್ತು. ಇಡೀ class ನಲ್ಲಿ ಚಂದುಳ್ಳ ಚಲುವೆಯಾದ ನೀನು ಯಾರೊಂದಿಗೂ ಮಾತನಾಡುತ್ತಿರಲಿಲ್ಲ. ಪೋಲಿ ಹುಡುಗರ ಕಮೆಂಟುಗಳನ್ನು ಲೆಕ್ಕಿಸದೇ ನಿನ್ನ ಪಾಡಿಗೆ ನೀನಿದ್ದೆ.
ಆದರೆ ನಿನ್ನೊಳಗಿದ್ದ 'ನಾನು' ನನಗೆ ಗೊತ್ತಿರಲಿಲ್ಲ. ನೀ ಅದನ್ನು ಗೊತ್ತು ಮಾಡಿರಲಿಲ್ಲ.
ಅಂದು ರಾತ್ರಿ ಗೆಳೆಯರಿಂದ ಬೀಳ್ಕೊಟ್ಟು ಬಸ್ಸನೇರುವಾಗ ನೀ ಬಂದಿರಬಹುದು ಅಂದುಕೊಂಡಿರಲಿಲ್ಲ. ಪ್ರವಾಸದ ನಿಯಮಗಳನ್ನು ಶಿಕ್ಷಕರು ವಿವರಿಸಿ ರೈಟ್ ಹೇಳುವಾಗ ಏನೇನೋ ಕನಸುಗಳು. ಕಾಮ ಪ್ರೇಮದ ಸ್ಪಷ್ಟತೆ ಇಲ್ಲದ ಎಳಸಲು ವಯಸು. ಹಾಗಂತ ನಾ ಅಂದುಕೊಂಡಿದ್ದೆ.

ನಿನ್ನನ್ನು ಚುಡಾಯಿಸುತ್ತಿದ್ದ ಪೋಲಿಗಳಿಗೆ ಪ್ರವಾಸದಲ್ಲಿ ಜಾಗವಿರಲಿಲ್ಲ. ಅದಕ್ಕೆ ನೀ ಮಾಡಿದ influence ಕಾರಣ ಎಂದು ನಂತರ ತಿಳಿಯಿತು. ಮರುದಿನ ನದಿ ತೀರದಲಿ ನಿಂತ ಬಸ್ಸನ್ನು ಇಳಿಯುವಾಗ ಅನಿರೀಕ್ಷಿತ ನಗು ಬೆರಗು ಮೂಡಿಸಿತು. ಸ್ನಾನ ಮಾಡಿ ನಾಷ್ಟಾಕ್ಕೆ ready ಅದಾಗ ದೂರದಲಿ ಗೆಳತಿಯರಿಲ್ಲದೆ ಏನೋ ನೋಡುತ್ತಾ ಕುಳಿತ ನೀ ನನ್ನನ್ನು ಕರೆಯಬಹುದು ಅಂದುಕೊಂಡಿರಲಿಲ್ಲ. ಏ ಬಾರೋ ಇಲ್ಲಿ ಅಂದಾಗ shock!
ಹತ್ತಿರ ಹೋದೆ ನಿನ್ನನು ಅನುಮಾನಿಸುವ ಪ್ರಮಯವೇ ಇರಲಿಲ್ಲ. ಯಾಕೆಂದರೆ ನಿನ್ನ ಬಿಗುಮಾನ ಜಗಜ್ಞಾಹಿರ.
ಡಬ್ಬದಲ್ಲಿದ್ದ ಅಂಟಿನ ಉಂಡಿ, ಚಕ್ಕುಲಿ ಕೈಯಲ್ಲಿ ಹಿಡಿದು ಚಾಚಿದಾಗ No ಅನ್ನಲಾಗಲಿಲ್ಲ. ಸುಮ್ಮನೆ ತಿನ್ನಲು ಶುರು ಮಾಡಿದೆ. ಅದೇ ವರ್ಷ ಪಟ್ಟಣದಿಂದ ಬಮದವಳು, ಆಗೀಗ ಬಳಸುತ್ತಿದ್ದ ಇಂಗ್ಲಿಷ್ ಪದಗಳಿ ಅರ್ಥವಾಗುತ್ತಿರಲಿಲ್ಲ. ಏ ಏನೋ ನೀನು thanks ಹೇಳದೆ ದನ ತಿಂದ ಹಾಗೆ ತಿಂತೀ ಅಂದೆ. sorry, thanks ಎಂದೆ. ಒಂದನ್ನು ಹೇಳು, ಎರಡು ಒಟ್ಟಿಗೆ ಬೇಡ ಎಂದು ನೀನೆ ನಕ್ಕೆ. ಎಲ್ಲರೂ ready ಆಗೋಕೆ ಇನ್ನರ್ಧ ತಾಸಿದೆಯಂತೆ ಆ ಕಡೆ ಹೋಗಿ ಬರೋಣ ಎಂದಾಗ ಸಣ್ಣ ನಡುಕ.
ಹಾಗೆ ಹೋಗುವಾಗ ನೀ ಹೇಳಿದ ಸುಮಧುರ ಮಾತುಗಳು ಇಂದಿಗೂ ನೆನಪಿವೆ.

ಈ ವರ್ಷ 10th ಮುಗಿದ ಮೇಲೆ ನನ್ನ ಮದುವೆ ಮಾಡ್ತಾರೆ. ಹುಡುಗ ಬೆಂಗಳೂರಲ್ಲಿದ್ದಾನೆ ಅಂದಾಗ ನಿರಾಶೆಯಾಯಿತು. ಅದು ಸರಿ ಯಾಕೊ ನೀನು ಹೀಗೆ ಪೆದ್ದನ ಹಾಗೆ ಇರ್ತೀಯಾ, you are really good boy. ನಿನ್ನನ್ನು ಬಿಟ್ಟು ಹೋಗಲು ಬೇಸರ. ನಾನೇನು ಮಾತಾಡಲಿಲ್ಲ. ಮಾತಾಡುವ ಸ್ಥಿತಿಯಲ್ಲೂ ನಾನಿರಲಿಲ್ಲ. ನಿನ್ನ ಉದ್ದೇಶವೇ ನನಗೆ ಅರ್ಥವಾಗಲಿಲ್ಲ.
ಏಯ್ ನಿನ್ನ ಕೈ ಚಾಚು ಎಂದಾಗ ಪೆದ್ದನ ಹಾಗೆ ಕೈಚಾಚಿದೆ. ದಪ್ಪನಾಗಿ I H U ಎಂದು ಬರೆದಾಗ ಮತ್ತದೇ ನಿರಾಶೆ. ಹೀಗೆಂದರೇನು ಗೊತ್ತಾ ನಿನಗೆ ಎಂದಾಗ ಸುಮ್ಮನಿದ್ದೆ. ನಿನ್ನದು ಅತೀಯಾಯ್ತು ಏನಾದರೂ ಮಾತನಾಡು ಅಂದಾಗ ಅನಿವಾರ್ಯವಾಗಿ ಹೇಳಿದೆ. ಇಲ್ಲ ನನಗೆ ILU ಗೊತ್ತು. IHU ಗೊತ್ತಿಲ್ಲ. Mostly I Hate you ಇರಬೇಕು ಅಂದಾಗ you fool ಅನ್ನಬೇಕಾ.
ಹೇಗೋ tour ಒಂದು ವಾರವಿದೆ. ನೀ ನಿಜ ಅರ್ಥ ಮಾಡಿಕೊಂಡು ಹೇಳಿದರೆ ಸುಂದರ, ಮರೆಯಲಾಗದ gift ಕೊಡ್ತೇನೆ ಅಂದಾಗ ಪೆಚ್ಚಾದೆ.
ಸುಂದರವಾಗಿ ಹರಿಯುವ ಜಲಧಾರೆ, ಅರಳಲು ನಾಚುತ್ತಿದ್ದ ಸೂರ್ಯನ ಕಿರಣಗಳು ನಿನ್ನ ರಂಗನ್ನು ಹೆಚ್ಚಿಸಿದ್ದವು. ನನಗೇನು ಅರ್ಥವಾಗಲಿಲ್ಲ.
ಎಡಗೈಯಲ್ಲಿ ಬರೆದ IHU ಪದೇ, ಪದೇ ವೀಕ್ಷಿಸಿದೆ. Tour ನೋಡುವ ಉತ್ಸಾಹವೇ ಮಾಯವಾಯಿತು. H ನಲ್ಲಿ ಬರಬಹುದಾದ ಇಲ್ಲ ಪದಗಳನ್ನು ಊಹಿಸಿದೆ. ಊಹೂಂ, ಉತ್ತರ ಹೊಳೆಯಲಿಲ್ಲ.
ರಾತ್ರಿ ಅದೆಲ್ಲೊ ಛತ್ರದಲಿ ವಾಸ. ನಿದ್ದೆ ಬರಲಿಲ್ಲ. ರೂಂ ಬಿಟ್ಟು ಹೊರಬಿದ್ದೆ. ನೀನು ಧುತ್ತೆಂದು ಪ್ರತ್ಯಕ್ಷ ಆದರೆ ನಿನ್ನ ಗೆಳತಿಯರೊಂದಿಗೆ. ಬಾರೋ ಇಲ್ಲಿ ಎಂದಾಗ ಮತ್ತದೇ ಸಂಕೋಚ ನಿನ್ನ ಮದುವೆ fix ಅಗಿದ್ದರಿಂದ ನಿನ್ನನ್ನು ಯಾರು ತಪ್ಪು ತಿಳಿಯುವುದಿಲ್ಲ ಅಂತ ಆ ನಡುರಾತ್ರಿಯಲ್ಲಿಯೇ ಗೊತ್ತಾದದ್ದು. ಗೆಳತಿಯರೆಲ್ಲ ಮಾಯ.

ಆ ರಾತ್ರಿಯಲ್ಲಿ ಇಬ್ಬರೇ. ಅರ್ಥ ಆಯಿತಾ ಅಂದಾಗ No ಅಂದೆ. ಏ ಬೆಪ್ಪಾ IHU ಎಂದರೆ, I Hug you ಎಂದರ್ಥ ಎಂದೆ. ಆದರೆ ನನ್ನ ದುರಂತ ನನಗೆ Hug ಎಂಬ ಪದದ ಅರ್ಥವೇ ಗೊತ್ತಿದ್ದಿಲ್ಲ. ಇಲ್ಲ ಮಾರಾಯ್ತಿ ನೀನು ಹೇಳುವುದನ್ನು ನೇರವಾಗಿ ಹೇಳು ಅಂದಾಗ, ಇಲ್ಲ ನಾಳೆ ನೀನು hug ಗೆ ಅರ್ಥ ಹುಡುಕಿಕೊಂಡು ಬಾ ಎಂದು good night ಹೇಳಿ ಮಾಯವಾದೆಯಲ್ಲ......

Tuesday, October 26, 2010

ಕವಿಶೈಲದ ನೆರಳಲಿ......Hugನ ಹುಡುಕಾಟ.

ಈ ಎರಡು ದಿನದ Hug ಹಾಗೆ ಉಳಿಯಿತು. ಯಾರನ್ನಾದರೂ ಕೇಳೋಣವೆಂದರೆ ಸಂಕೋಚ. ಆಗ ಈಗಿನ ಹಾಗೆ ಮೊಬೈಲ್ ಇರಲಿಲ್ಲ. ಕವಿಶೈಲದಲ್ಲಿ ಅರ್ಧದಿನ ಕಳೆಯುವ ಸೂಚನೆ ನನ್ನ ಉತ್ಸಾಹವನ್ನು ಹೆಚ್ಚಿಸಲೇ ಇಲ್ಲ.
ನಿನ್ನೆಯಿಂದ ನೀ ಮಾಡಿಕೊಂಡ arrangement ನಿಂದಾಗಿ ನಿನ್ನ ಪಕ್ಕ ಕುಳಿತುಕೊಳ್ಳುವ ಸುವರ್ಣ ಅವಕಾಶ. ಆದರೆ ಏನೂ ಮಾಡೋದು ನೀ ಮದುವೆಗೆ fix ಆದ ಹುಡುಗಿ ಬೇರೆ.
ಬಸ್ಸಿನಲ್ಲಿ ಇದ್ದ ಮೌನ ನಿಧಾನ ಕರಗಹತ್ತಿತು. ಬಾ ಕವಿಶೈಲದಲ್ಲಿ ನಾವಿಬ್ಬರೇ ತಿರುಗಾಡೋಣ ಎಂದಾಗ ಹೇಗಾಗಿರಬೇಡ. ನಿನ್ನದು ಒಂದರ್ಥದಲಿ preplanned murder ಅನಿಸಿತು. Hug ಅರ್ಥ ಕೇಳುತ್ತೀ ಎಂಬ ಭಯ ಬೇರೆ.
ಬಯಲು ಸೀಮೆಯ ನಾನು ಅಷ್ಟೊಂದು ಸುಂದರ ಕಾಡನ್ನು ನೋಡಿರಲಿಲ್ಲ. ಅಬ್ಬಾ! ಅದೆಂತಹ ಸುಂದರ ದೃಶ್ಯಕಾವ್ಯ. ಅಲ್ಲಿ ನಿನ್ನೊಂದಿಗೆ ಬೇರೆ. ಈ ಜನ್ಮಕ್ಕೆ ಇಷ್ಟೇ ಸಾಕು ಅನಿಸಿತು.
ಹೆಜ್ಜೆ ಸಪ್ಪಳದ ಮೌನ ಮುರಿದು ಮಾತಿಗೆ ನಿಂತಾಗ ಸುಮ್ಮನಾದೆ. ಇಲ್ಲಿ ಕೂಡೋಣವಾ ಎಂದಾಗ ಮತ್ತದೇ ಮೌನ.
ಇಷ್ಟೊಂದು innocent ಇರೋ ನಿನ್ನನು ಹೇಗೋ ಬಿಟ್ಟುಹೋಗಲಿ ನಾನು. ಬಾ ಮರಿ ನೀನು, ನನ್ನೊಂದಿಗೆ ಬೆಂಗಳೂರಿಗೆ ಬಾ, ಅಲ್ಲೇ college ಗೆ ಹೋಗುವಿಯಂತೆ ಅಂದಾಗ ಮಾತೇ ಹೊರಡಲಿಲ್ಲ.
ನನಗೆ ನೀನು ಅರ್ಥವಾಗದ ಕವಿತೆಯಾದೆ. ಅದರೆ ಸಹನೆ ಕಳೆದುಕೊಳ್ಳಲು ಮನಸ್ಸಾಗಲಿಲ್ಲ.
ಮನೆಯಲ್ಲಿ ಹೇಳ್ತಾರೆ ಅಂತಾ, ಮುಂದಿನ ಭವಿಷ್ಯವನ್ನು ನೆನೆದು ಮದುವೆ ಆಗಿ ಹೋಗ್ತಾ ಇದ್ದೀನಿ. ಆದರೆ ನಿನ್ನ ಪ್ರೀತಿಯ ನೆನಪನ್ನು ತಗೆದುಕೊಂಡು ಹೋಗಬಾರದು ಎಂಬ condition ಇಲ್ಲವಲ್ಲ ಎಂದಾಗ ನೀನು ಇನ್ನಷ್ಟು ಜಟಿಲವಾದೆ. ಯಾಕೆಂದರೆ ನಾನು ಆಗ ಹುಡುಗ, ಆದರೆ ನೀನು ಪ್ರಭುದ್ಧ ಹೆಣ್ಣು. ನನ್ನ ಪಾಲಿನ ಹುಡುಗಿಯಾಗಿರಲಿಲ್ಲ.
You fool I love you, I loveyou too much ಅಂದಾಗ ಬೆಚ್ಚಿ ಬಿದ್ದೆ. ನಿನ್ನ ಪ್ರೀತಿಯ logic ಅರ್ಥ ಆಗಲಿಲ್ಲ. ಮದುವೆ ಆಗೋ ಹುಡುಗಿಯರನ್ನು ಪ್ರೀತಿಸಲಾಗುವುದಿಲ್ಲ ಎಂಬ ವ್ಯಾಖ್ಯಾನ ನನ್ನ ತಲೆಯಲ್ಲಿ ಇತ್ತು. ನಿನ್ನ reaction ಏನು ಅಂದಾಗ ನನಗೆ ಮಾತೆ ಹೊರಡಲಿಲ್ಲ.
ಕಣ್ಣು ಮುಚ್ಚು ಎಂದೆ. ಮುಚ್ಚಿದೆ, ಹತ್ತಿರ, ಕಿವಿಯ ಹತ್ತಿರ ಬಂದಂತೆ ಭಾಸವಾಯಿತು. ಜೋರಾಗಿ ಕಿರುಚಬಹುದೆಂದು ಹೆದರಿದೆ. ಮೆಲ್ಲಗೆ ಅತೀ ಮೆಲ್ಲಗೆ ನಾಜೂಕಾಗಿ ಉಸುರಿದೆ. ಅದೇ ಮಾತು, ಅದೆಷ್ಟು ಮಧುರ I Love you. ಕಣ್ಣು ತೆರೆಯುವ ಮನಸಾಗಲಿಲ್ಲ. ನಿಧಾನ ಕಣ್ಣೀರು ಸುರಿಯಲಾರಂಭಿಸಿದೆ ಆದರೆ ಕಣ್ಣು ತೆರೆಯಲಿಲ್ಲ.
ನನ್ನಲಿ ಉಂಟಾದ ಗೊಂದಲ ನಿನಗೆ ಅರ್ಥವಾಗಬಹುದು ಅಂದುಕೊಂಡೆ. ಕಣ್ಣನ್ನು ತೆರೆಯದೇ, ಏನೋ ಕಲ್ಪಿಸಿಕೊಂಡೆ. ಈಗ I love you ಪದವೂ ಹೊಸದೆನಿಸಲಿಲ್ಲ. ಅದನ್ನು ನಾವು ನಿನ್ನ ಮೃದುವಾದ ಕೈಗಳಿಂದ ಎರಡು ಕೆನ್ನೆ ಹಿಡಿದು ಕೆನ್ನೆಗೆ,ತುಟಿಗೆ ಮುತ್ತಿಟ್ಟಾಗ ಸಿಡಿಲು ಹೊಡೆದ ಅನುಭವ.
ಮೈಯಲ್ಲಾ ಪುಳಕ. ಏನೂ ಅರ್ಥವಾಗಲಿಲ್ಲ. ಅರ್ಥ ಮಾಡಿಕೊಳ್ಳುವ ಮುಂಚೇಯೇ ಅಘಾತ ಕಾದಿತ್ತು. ಕಂಪಿಸತೊಡಗಿದೆ. ನನ್ನ ಕಂಪನ ನಿನಗೆ ತಮಾಷೆಯಾಗಿ ಕಂಡಿರಬೇಕು.
ಪ್ರಥಮ ಚುಂಬನ ಇಷ್ಟೊಂದು ಮಧುರವಾಗಿರಬಹುದೆಂದು ಅಂದುಕೊಳ್ಳಲು ಹೇಗೆ ಸಾಧ್ಯ?
ನಿಧಾನ ಕಣ್ಣು ತೆಗೆದೆ ಎದುರಾಗಿದ್ದ ನಿನ್ನ ಸುಂದರ ನಗು, ಮುಗ್ಧ ಪ್ರೀತಿ, ಅರ್ಥವಾಗದ ಭಾವನೆಗಳು......
ನೀ ನನ್ನವಳಲ್ಲ, ಬೇರೆ ಯಾರನ್ನೋ, ಮದುವೆಯಾಗಿ ಹೋಗುವ ಹೆಣ್ಣು ಎಂಬುದನ್ನು ಆ ಕ್ಷಣ ಮರೆಸಿತು. Are you happy?
ಅಂದಾಗ ಮಾತೆ ಹೊರಡಲಿಲ್ಲ.
ನನಗೆ ಯಾಕೆ ಸಂತೋಷವಾಗಬೇಕು. ಶಾಶ್ವತವಾಗಿ ನೀ ಸಿಗುವುದಿಲ್ಲ ಎಂದು ಗೊತ್ತಾದ ಮೇಲೂ.
ಹೊತ್ತು ಹೋಗಿದ್ದೆ ಗೊತ್ತಾಗಲಿಲ್ಲ. ಮೈ ಹಗುರ ಎನಿಸಿತ್ತು. ರೋಮಾಂಚನ ಊಹಿಸುವ ಮುನ್ನವೇ ಕರಗಿ ಹೋಗಿದ್ದೆ. ನಿನಗೆ ನನ್ನ ಮಾತುಗಳು ಬೇಕಾಗಿರಲಿಲ್ಲ. ನನ್ನ ಮೌನದಲ್ಲಿಯೇ ಸಾವಿರಾರು ಅರ್ಥಗಳು.

Hug ನ ಅರ್ಥ ತಿಳಿಯಿತಾ ಅಂದಾಗ, ಅರೆ ಏನಿದು ಹುಡುಗಾಟ ಅನಿಸಿತು. ಶಬ್ದದ ಅರ್ಥ ಮೀರಿ ಹೋದಾಗಲೂ ಅರ್ಥ ಯಾಕೆ.
ಬಾ ಇಲ್ಲಿ ಎಂದು ನನ್ನೆದುರು ನಿಂತು. ಮತ್ತೆ ಕಣ್ಣು ಮುಚ್ಚಲು ಆದೇಶ ಬೇರೆ.
ಗಟ್ಟಿಯಾಗಿ ತಬ್ಬಿಕೊಂಡು ಜೋರಾಗಿ I Hug you, I love you ಎಂದು ಕಿರುಚಿದಾಗಲೂ Hug ನ ಅರ್ಥ ತಿಳಿಯಲಿಲ್ಲ. ಮೈ-ಮನ ಹಗುರಾಗಿ ಬಸ್ಸನೇರಿದಾಗ ಸೂರ್ಯ ಜಾರಿ ಹೋಗಿದ್ದ. ಅವನೊಂದಿಗೆ ನಾನು ಕೂಡಾ............

ನೀರಿನ ಚಲನ ಶೀಲತೆ ನಿಮಗೆ ಬೇಕಾ

"You have to adjust yourself like water,

Adjust yourself in every situation, in any shape

and always find out your way and keep moving."

ಮೇಲಿನ ವಾಕ್ಯ ಎಷ್ಟು ಸುಂದರವಾಗಿವೆ. ಆದರೆ ನೀರಿನಂತೆ ಹೊಂದಿಕೊಳ್ಳುವುದು ಹೇಳಿದಷ್ಟು ಸುಲಭವೆ?

ಸುಲಭವಲ್ಲವಾದರೂ ಅನಿವಾರ್ಯ.

ನಮ್ಮ ನಿತ್ಯದ ಕಾರ್ಯ ಚಟುವಟಿಕೆಗಳು ನಮ್ಮ ಯೋಜನೆಯಂತೆ, ನಮಗೆ ಸರಿಕಂಡಂತೆ ನಡೆದಿರುತ್ತವೆ.

ಯಾರಾದರೂ ಅಡೆತಡೆ ಒಡ್ಡಿದರೆ ಕಿರಿಕಿರಿ ಅನಿಸುತ್ತದೆ. ಅದನ್ನು ಪ್ರತಿಭಟಿಸಲು ಯತ್ನಿಸಬೇಕೆನಿಸುತ್ತದೆ. ತಡೆ

ಒಡ್ಡಿದರೂ ನಮಗಿಂತ ಕಿರಿಯರಾದರೆ ತಕ್ಷಣ react ಮಾಡುತ್ತೇವೆ. ಒಂದು ವೇಳೆ ಸ್ಥಾನ-ಮಾನಗಳಲ್ಲಿ,

ಅಧಿಕಾರದಲ್ಲಿ, ವಯಸ್ಸಿನಲ್ಲಿ ದೊಡ್ಡವರಿದ್ದರೆ ನುಂಗಿಕೊಂಡು ಸುಮ್ಮನಿರುತ್ತೇವೆ. ಪ್ರತಿಭಟನೆ ಹಾಗು ಸಹಿಸುವಿಕೆ

ಎರಡೂ ಅಪಾಯಕಾರಿ. ಪ್ರತಿಭಟಿಸುವುದು ಎಷ್ಟು ಬೇಸರವೋ, ಅದನ್ನು ನುಂಗಿಕೊಳ್ಳುವುದು ಅಷ್ಟೆ.

ನಮಗೆ react ಮಾಡಬೇಕು ಅನಿಸಿದಾಗ ಅಡೆತಡೆಗಳಗೆ ಕಾರನ ಹುಡುಕಲು ಪ್ರಯತ್ನಿಸಬೇಕು ಇದಕ್ಕೆ ನಾವು

ಎಷ್ಟರ ಮಟ್ಟಿಗೆ ಕಾರಣ ಎಂಬುದನ್ನು ಸಾದ್ಯವಾದರೆ ಅರಿತುಕೊಳ್ಳಲು ಪ್ರಯತ್ನಿಸಬೇಕು. ಒಮ್ಮೊಮ್ಮೆ

ಬೇರೆಯವರು ತಂದೊಡ್ಡುವ ಆತಂಕಗಳಿಗೆ ಕೇವಲ ಅವರಷ್ಟೇ ಕಾರಣರಾಗಿರುವುದಿಲ್ಲ. ನಮಗರಿವಿಲ್ಲದಂತೆ ನಾವು

ಕಾರಣರಾಗಿರುತ್ತೇವೆ.

ಆದರೆ ಅದನ್ನು ಅರಿಯಲು ವಿಫಲರಾಗಿ ಬೇರೆಯವರ ಮೇಲೆ ಆರೋಪ ಹೊರಿಸುವ ಅನಿವಾರ್ಯತೆ

ಎದುರಾಗುತ್ತದೆ.

ಈ ರೀತಿಯ ವಾತರಣಕ್ಕೆ ನಾವು ಕಾರಣರಲ್ಲ ಎಂದು ಸಾರಾಸಗಟವಾಗಿ ಅಭಿಪ್ರಾಯಪಡಬಾರದು.

ಇಲ್ಲಿ ನಾವು ನೀರಿನಂತೆ ಹೊಂದಿಕೊಂಡು, ನಮ್ಮ ಮಾರ್ಗ ಕಂಡುಕೊಳ್ಳುವದೇನೆಂದರೆ ಪ್ರತಿಭಟಿಸದೆ, ನೋವು

ಅನುಭವಿಸದೆ ಹಿರಿ-ಕಿರಿಯರ ತಕರಾರುಗಳನ್ನು ಯಥಾಸ್ಥಿತಿಯಲ್ಲಿ ಮನಸ್ಸಿಗೆ ಕಿರಿಕಿರಿ ಅನಿಸಿಕೊಳ್ಳದೇ ಶಾಂತ

ಚಿತ್ತರಾಗಿ ಸ್ವೀಕರಿಸುವುದು.

ಇದು ಹೇಳಿದಷ್ಟು ಸುಲಭವಲ್ಲವಾದರೂ ನಿರಂತರ ಪ್ರಯತ್ನದಿಂದ ಸಾಧ್ಯವಾಗುತ್ತದೆ. ಆರಂಬದ ದಿನಗಳಲ್ಲಿ

ಯಾರಾದರೂ ತಕರಾರು ಒಡ್ಡಿದರೆ ನನಗೆ ವಿಪರೀತ ಸಿಟ್ಟುಬರುತ್ತಿತ್ತು. ನನ್ನದೇನು ತಪ್ಪು ಇಲ್ಲದಾಗ ಏಕೆ

ಸಹಿಸಬೇಕು ಎಂಬ ಆತಂಕ ಉಂಟಾಗುತ್ತಿತ್ತು. ಅದರೆ ಈಗ ಕಾಲ ಪಾಠಕಲಿಸಬೇಕು. ಪ್ರತಿಯೊಬ್ಬರು ತಮ್ಮದೇ

ಆದ ಸಮರ್ಪಕ ಕಾರಣ ಇಟ್ಟುಕೊಂಡು ತಡೆಯೊಡ್ಡಲು ಕಾರಣರಾಗುತ್ತಾರೆ ಅಂದುಕೊಂಡಾಗ ಸಮಾಧಾನ

ಸಿಗುತ್ತದೆ. ಈ ರೀತಿಯ ಪ್ರತಿಭಟನೆ ಅಥವಾ ಸಹಿಸುವಿಕೆಯಿಂದ ವಸ್ತು ಸ್ಥಿತಿಯನ್ನು ಬದಲಾಯಿಸಲು ಸಾಧ್ಯವಿಲ್ಲ

ಎಂದು ಗೊತ್ತಾದಾಗ ಮೇಲಿನ ಸಾಲುಗಳು ಪ್ರಸ್ತುತವೆನಿಸುತ್ತವೆ. ಎಲ್ಲರಿಗೂ ಖಚಿತವಾದರೆ ನಿರಂತರ

ಸಮಾಧಾನ, ಶಾಶ್ವತ ಪರಿಹಾರ ಸಿಗುತ್ತದೆ.

Monday, October 25, 2010

ಎಲ್ಲವೂ ನಿಗೂಢ - ಅಚ್ಚರಿಯ ವಾಸ್ತವದ ಪ್ರಜ್ಞೆ

ಆ ರಾತ್ರಿ ಅಷ್ಟೊಂದು ಆಹ್ಲಾದಕರವಾಗಿರಬಹುದು ಅಂದುಕೊಂಡಿರಲಿಲ್ಲ. ಸೆಳೆಯುವ ಕಂಗಳ ನೋಟಕ್ಕೆ

ಅರಿವಿಲ್ಲದಂತೆ ಬಲಿಯಾಗಿದ್ದೆ. ಆದರೆ ಒಲಿಯಬಹುದೆಂದು ಅಂದುಕೊಂಡಿರಲಿಲ್ಲ.

ಒಲಿಸಿಕೊಳ್ಳುವ ನನ್ನ ಆಸೆಗೆ ನೀನು ಸ್ಪಂದಿಸಬಹುದು ಅಂದುಕೊಂಡಿರಲಿಲ್ಲ. ಪ್ರತಿ ನೋಟದಲ್ಲೂ ನನ್ನನ್ನು

ಆಲಕ್ಷಿಸಿದ ರೀತಿಯನ್ನು ಸತ್ಯವೆಂದು ನಂಬಿದೆ. ಅಂದು ಧೋ ಎಂದು ಸುರಿಯುತ್ತಿದ್ದ ಮಳೆ, ಭಾವನೆಗಳಿಗೆ ಕಿಚ್ಚು

ಹಚ್ಚಿತು. ತೊಯ್ದು ತೊಪ್ಪಡಿಯಾದ ಬಟ್ಟೆಗಳನ್ನು ಬದಲಿಸಲು ಅವಕಾಶ ಮಾಡಿಕೊಟ್ಟು ನನ್ನ ಪಾಡಿಗೆ ನಾನಿದ್ದೆ.

ಇದ್ದಕ್ಕಿದ್ದ ಹಾಗೆ ಮಧ್ಯೆ ರಾತ್ರಿ ಗುಡುಗು -ಸಿಡಿಲು ಅಪ್ಪಳಿಸಿದಾಗ ಬೆಚ್ಚಿಬಿದ್ದೆ. ಬಹುದಿನದ ಆಸೆ ಹೀಗೆ ಸಪ್ಪಳ

ಮಾಡದೇ ಈಡೇರಬಹುದೆಂದು ಅಂದುಕೊಂಡಿರಲಿಲ್ಲ. ಇಡೀ ಬದುಕಿನಲ್ಲಿ ಅಪರೂಪ ಎನ್ನಬಹುದಾದ ಸುಖ

ಅನುಭವಿಸಿದೆ. ಮೈ-ಮನಸು ಹಗುರಾಗಿಸಿದ ನಿನ್ನ ಸಂಭ್ರಮವನ್ನು ಮರೆಯಲು ಹೇಗೆಸಾಧ್ಯ?

ಸೂರ್ಯ ಇಣುಕುವ ಮುಂಚೇಯೇ ನೀನು ನನ್ನಿಂದ ಜಾರಿ ಹೋಗಿದ್ದೆ. ಏನೆನೋ ಸಾಧಿಸಿದೆ ಎಂಬ ಅಭಿಮಾನ

ನನ್ನಲ್ಲಿ ಶಾಶ್ವತವಾಗಿ ಉಳಿಯಬಹುದು ಅಂದುಕೊಂಡಿದ್ದೆ.

ಬೆಳಕು ಹರಿದು ನಾನು ಹೊರಬೀಳುವ ಮುಂಚೆಯೇ ನೀನು ಜಾಗ ಖಾಲಿಮಾಡಿದ್ದೆ. ಅದೇ ಸಂಬ್ರಮ ಮೆಲುಕು

ಹಾಕುತ್ತಾ, ಹಾದಿ ಸವೆದದ್ದೇ ಗೊತ್ತಾಗಲಿಲ್ಲ.

ಚೇಂಬರ್ ನಲ್ಲಿ relax ಆಗಿ ನಿನಗೆ ಫೋನಾಯಿಸಿದಾಗ ನಸುನಾಚುತ್ತಾ ಬರಬಹುದು ಅಂದುಕೊಂಡಿದ್ದೆ. ಆದರೆ

ನನ್ನ ನಿರೀಕ್ಷೆ ಸುಳ್ಳಾಯಿತು.

ಎಂದಿನಂತೆ ಅದೇ ಗಂಭೀರತೆಯಲ್ಲಿ ಚೇಂಬರ್ ನುಗ್ಗಿದಾಗ ಅಚ್ಚರಿ. ಮುಖದ ಮೇಲೆ ತೃಪ್ತಿಯ ನಗು ಇರಲಿಲ್ಲ.

ಸುಖದ ಹುಮ್ಮಸ್ಸು ಇರಲಿಲ್ಲ. ನಮ್ಮಿಬ್ಬರ ಮಧ್ಯೆ ಏನೂ ನಡೆದಿಲ್ಲವೆಂತೆ ನಡೆದುಕೊಂಡಿದ್ದಕ್ಕೆ ಏನನ್ನಬೇಕು.

ಅತೀಯಾದ ವಾಸ್ತವವಾದ ಎನ್ನಲೇ? ಕ್ರೂರತೆ ಎಂದು ಪರಿಭಾವಿಸಲೇ? ಕೇಳಿದ ಪ್ರಶ್ನೆಗಳಿಗೆ ಎಂದಿನ

ಶೈಲಿಯಲ್ಲಿಯೇ ಉತ್ತರ ಕೊಟ್ಟು ಹೊರನಡೆದಾಗ ಆಘಾತವಾಯಿತು.

ಸುಖದ ಉನ್ನತಿಯನ್ನು ಅನುಭವಿಸುವಾಗಿನ ನಿನ್ನ ಸಂತೃಪ್ತಿ ಈಗ ಯಾಕಿಲ್ಲ. ಇದೊಂದು ರೀತಿಯ ಸ್ವಾರ್ಥವಲ್ಲದೆ

ಇನ್ನೆನು?

ಅಂಗ ಸಮಭೋಗದ ಸವಿಯನು ಮರು ಚರ್ಚಿಸಲು, ಮೆಲಕು ಹಾಕಲು ನೀನು ನಿರಾಕರಿಸಿದಾಗ ಹೇಗಾಗಬೇಡ.

ಸಂಜೆಯೊಳಗೆ ಮತ್ತೊಮ್ಮೆ ಬಂದು ಸುಮಧುರ ಭಾವನೆಗಳನ್ನು ಹಂಚಿಕೊಳ್ಳಬಹುದು ಅಂದುಕೊಂಡಿದ್ದೆ. ಸುಖ

ಅನುಭವಿಸುವಷ್ಟೇ ಮುಖ್ಯ ಅದನ್ನು ಮೆಲುಕು ಹಾಕುವುದು ಎಂಬ ಸುಖಾನುಭವ ನಿನಗೆ ಬೇಕಿಲ್ಲವೆಂದರೆ ಏನರ್ಥ.

ಬೇಕಾದಾಗ, ಬೇಕಾದಂತೆ ಬಳಸಲು ನಾನೇನು ಪ್ರಾಣಿಯೇ.... ನನಗೂ ಭಾವನೆಗಳಿವೆ. ಅನುಭವಿಸಿದ ಸುಖ

ದು:ಖಗಳನ್ನು ಮೆಲುಕು ಹಾಕುವ ಸುಂದರ ಅವಕಾಶಗಳನ್ನು ಕಳೆದ ನಿನ್ನೊಂದಿಗೆ ಎಂದು ಕೂಡಬಾರದು

ಅಂದುಕೊಂಡು ಹಾಸಿಗೆ ಸೇರಿದೆ.

Friday, October 22, 2010

ವಾಲ್ಮೀಕಿ ಜಯಂತಿ - ರಾಮಾಯಣ

ಸಾವಿರಾರು ವರ್ಷಗಳ ಹಿಂದೆ ಜನಿಸಿದ ಮಹರ್ಷಿ ವಾಲ್ಮೀಕಿ ಜಗತ್ತಿನ ಮೊಟ್ಟ ಮೊದಲ ಕವಿ. ಅದಕ್ಕಾಗಿಯೇ ವಾಲ್ಮೀಕಿಯನ್ನು ಆದಿ ಕವಿ ಎಂದು ಬಣ್ಣಿಸುತ್ತಾರೆ. ಭಾರತದಂತಹ ಪವಿತ್ರ ದೇಶದ ಘನತೆಯನ್ನು ರಾಮಾಯಣದಂತಹ ಮಹಾಕಾವ್ಯವನ್ನು ಬರೆದು ಹೆಚ್ಚಿಸಿದ ಕೀರ್ತಿ ವಾಲ್ಮೀಕಿಗೆ ಸಲ್ಲುತ್ತದೆ.
ಬೇಡ ಎನ್ನುವ ಪದದಲ್ಲಿ ಅದ್ಭುತವಾದ ಅರ್ಥವಿದೆ. ಬೇಡನೆಂದರೆ ಎಲ್ಲ ಕೆಟ್ಟ ಗುಣಗಳನ್ನು ನಿರಾಕರಿಸಿದವನು, ತಿರಸ್ಕರಿಸಿದವನು ಎಂಬ ಅರ್ಥವಿದೆ.
ಮದ ಬೇಡ, ಮತ್ಸರ ಬೇಡ, ಮೋಹ ಬೇಡ, ಕಾಮ ಬೇಡ ಎಂದು ಹೇರುವದೇ ಬೇಡ ಎಂಬ ನಿಜವಾದ ಅರ್ಥವೆಂಬುದನ್ನು ನಾವು ಅರಿಯಬೇಕು.
ತನ್ನ ಶಿಷ್ಯ ಭಾರದ್ವಾಜನೊಂದಿಗೆ ಗಂಗಾ ನದಿಗೆ ಸ್ನಾನಕ್ಕೆ ಹೊರಟಿದ್ದಾಗ ಅಲ್ಲಿದ್ದ ತಾಮಸ ಕೊಳದಲ್ಲಿ ಸ್ನಾನ ಮಾಡಲು ವಾಲ್ಮೀಕಿ ಬಯಸುತ್ತಾನೆ.
ತಾಮಸ ಸರೋವರದ ಮೇಲಿನ ಮರದಲ್ಲಿ ಜೋಡಿ ಪಕ್ಷಿಗಳು ಸುಂದರವಾಗಿ ಹಾಡುತ್ತಾ ಕುಳಿತಿದ್ದನ್ನು ಕಂಡು ವಾಲ್ಮೀಕಿಗೆ ಸಂತೋಷವಾಗುತ್ತದೆ. ಆದರೆ ಆ ಸಂತೋಷ ಕೆಲವೇ ಕ್ಷಣಗಳಲ್ಲಿ ಮಾಯವಾಗಿಬಿಡುತ್ತದೆ.
ಒಬ್ಬ ಬೇಡಗಾರನ ಬಾಣ ಗಂಡು ಪಕ್ಷಿಗೆ ತಾಗಿ ಅದು ದುಃಖಿಸುತ್ತಾ ನೆಲಕ್ಕೆ ಬೀಳುತ್ತದೆ. ಅದನ್ನು ಕಂಡು ಹೆಣ್ಣು ಪಕ್ಷಿ ದುಃಖಿಸುತ್ತದೆ.

ಕೆಲವೇ ಕ್ಷಣಗಳಲ್ಲಿ ಮಾಯವಾದ ಸಂತೋಷಕ್ಕೆ ಬೇಟೆಗಾರನ ಹಿಂಸೆ ಎಂಬುದನ್ನು ವಾಲ್ಮೀಕಿ ಅರಿಯುತ್ತಾನೆ.
ಬಿಲ್ಲು ಬಾಣಗಳ ಸಮೇತ ಬಂದ ಬೇಟೆಗಾರನಿಗೆ ಹೇಳುತ್ತಾನೆ. ನೋಡು ಯಾವುದೇ ತಪ್ಪು ಮಾಡದೇ ಸಂತೋಷವಾಗಿ ಕಾಲ ಕಳೆಯುತ್ತಿದ್ದ ಪಕ್ಷಿಯನ್ನು ನೀನು ಕೊಂದಿದ್ದಕ್ಕೆ ಅದಕ್ಕಾಗಿ ನೀನು ಜೀವನ ಪರ್ಯಂತ ಶಾಂತಿ ನೆಮ್ಮದಿಯನ್ನು ಕಳೆದುಕೊಳ್ಳುತ್ತಿ ಎಂದು ಹೇಳುವುದರ ಮೂಲಕ ಮೊದಲ ಶ್ಲೋಕವನ್ನು ರಚಿಸುತ್ತಾನೆ.
ಮಾನಿಯಾದ ಎಂಬ ಶ್ಲೋಕವೇ ಮೊಟ್ಟ ಮೊದಲ ಸಂಸ್ಕೃತ ಕಾವ್ಯವಾಗಿದೆ ಎಂಬುದನ್ನು ಇತಿಹಾಸ ಹೇಳುತ್ತದೆ.
ಹಿಂಸೆ ಒಳ್ಳೆಯದಲ್ಲ ಎಂಬ ಅಹಿಂಸಾ ತತ್ವವನ್ನು ವಾಲ್ಮೀಕಿ ಸಾವಿರಾರು ವರ್ಷಗಳ ಹಿಂದೆಯೇ ತಿಳಿಸಿದ್ದಾನೆ. ಅದೇ ತತ್ವವನ್ನು ಹಿಡಿದ ಬುದ್ದ-ಬಸವ-ಗಾಂಧೀಜಿ ಈ ಜಗತ್ತನ್ನು ಗೆದ್ದಿದ್ದಾರೆ.
ಅದನ್ನೇ ಬಸವಣ್ಣ ಕಳಬೇಡ, ಕೊಲಬೇಡ ಎಂದು ಹೇಳಿದ್ದಾನೆ. ಗಾಂಧೀಜಿ ಅಹಿಂಸೆಯೇ ಧರ್ಮ ಎಂದು ಹೇಳಿದ್ದಾರೆ.
ರಾಮಾಯಣದ ಇಪ್ಪತ್ತಾಲ್ಕು ಸಾವಿರ ಶ್ಲೋಕಗಳು ಏಳು ಕಾಂಡಗಳು ಸಾವಿರಾರು ಪಾತ್ರಗಳನ್ನು ಸೃಷ್ಟಿ ಮಾಡಿವೆ.
ಅಲ್ಲಿ ಬರುವ ರಾಮ-ರಾವಣ, ಸೀತೇ, ಲಕ್ಷ್ಮಣ, ಶೂರ್ಪನಕಿ, ಹನುಮಂತ ಕೇವಲ ಸಂಕೇತಗಳು.
ಆ ಎಲ್ಲ ಪಾತ್ರಗಳು ನಮ್ಮಲ್ಲಿಯೇ ಅಡಗಿವೆ ಎಂಬುದನ್ನು ವಾಲ್ಮೀಕಿ ಹೇಳುತ್ತಾನೆ. ರಾಮನ ಪಾತ್ರ ತ್ಯಾಗ ಮತ್ತು ಒಳ್ಳೆಯತನವನ್ನು ಸೂಚಿಸುತ್ತದೆ.
ರಾಮನು ತಮ್ಮನ ಸಲುವಾಗಿ ಸಿಂಹಾಸನವನ್ನೇ ತ್ಯಾಗ ಮಾಡಿ ಕಾಡಿಗೆ ತೇರಳುತ್ತಾನೆ. ರಾಮನ ತ್ಯಾಗ, ತಾಯ ಮೇಲಿನ ಪ್ರೀತಿ ಅವನ ಶ್ರೇಷ್ಠತೆಯನ್ನು ಸಾರುತ್ತವೆ.
ಬಾಲ ಕಾಂಡ, ಅಯೋಧ್ಯ ಕಾಂಡ, ಅರಣ್ಯ ಕಾಂಡ, ಕ್ಟಿಂದ ಕಾಂಡ ಹಾಗೂ ಸುಂದರ ಕಾಂಡ, ಯುದ್ದ ಕಾಂಡ ಹಾಗೂ ಉತ್ತರ ಕಾಂಡಗಳ ಮೂಲಕ ಇಡೀ ರಾಮಾಯಣವನ್ನು ವಿವರಿಸಲಾಗಿದೆ.
ಇದು ಜಗತ್ತಿನ ಮೊಟ್ಟ ಮೊದಲ ದೊಡ್ಡ ಮಹಾಕಾವ್ಯ ಎಂಬ ಕೀರ್ತಿಯನ್ನು ಗಳಿಸಿಕೊಂಡಿದೆ.
ಇಲ್ಲಿ ಬರುವ ಪ್ರತಿಯೊಂದು ಪಾತ್ರಗಳು ಮನುಷ್ಯನಲ್ಲಿ ಅಡಗಿರುವ ಗುಣಗಳನ್ನು ಹೇಳುತ್ತವೆ. ಇಲ್ಲಿ ಬರುವ ಎಲ್ಲ ಪಾತ್ರಗಳಿಗೆ ಅವುಗಳದೇ ಆದ ಒಳ್ಳೆಯ ಕೆಟ್ಟ ಗುಣಗಳಿರುತ್ತವೆ.
ಆದರೆ ಅವುಗಳನ್ನು ನಾಶ ಮಾಡಿ ಹೇಗೆ ಒಳ್ಳೆಯರಾಗಬೇಕು ಎಂಬುದೇ ಈ ಮಹಾಕಾವ್ಯದ ಉದ್ದೇಶ.
ಅನೇಕ ಕಾರಣಗಳಿಂದಾಗಿ ಶ್ರೀರಾಮನನ್ನು ಮರ್ಯಾದಾ ಪುರುಷನೆಂದು ಕರೆಯುತ್ತೇವೆ. ಆತನಲ್ಲಿ ಅಡಗಿದ್ದ ಪ್ರೀತಿ-ವಿಶ್ವಾಸ ತ್ಯಾಗ ಒಬ್ಬ ವ್ಯಕ್ತಿಯಲ್ಲಿ ಹೇಗೆ ಶಾಶ್ವತವಾಗಿ ಶ್ರೇಷ್ಠ ವ್ಯಕ್ತಿಯನ್ನಾಗಿ ರೂಪಿಸುತ್ತವೆ ಎಂಬುದಕ್ಕೆ ಸಾಕ್ಷಿ.
ಇಂದು ಜಗತ್ತು ಶ್ರೀರಾಮನ ಶ್ರೇಷ್ಠ ಮೌಲ್ಯಗಳಿಗಾಗಿಯೇ ಗಾಂಧೀಜಿ ಪ್ರಾಣ ಬಿಡುವಾಗ ಹೇರಾಮ್ ಎಂದರು. ಶ್ರೀರಾಮನ ಪಾತ್ರ ಅವನಲ್ಲಿನ ಶ್ರೇಷ್ಠ ಗುಣ ಗಾಂಧೀಜಿಯವರ ಮನಸ್ಸಿನ ಮೇಲೆ ತೀವ್ರ ಪರಿಣಾಮ ಬೀರಿತ್ತು ಎಂಬುದಕ್ಕೆ ಈ ಘಟನೆಯೇ ಸಾಕ್ಷಿಯಾಗಿದೆ.
ಒಬ್ಬ ರಾಜಕುಮಾರನಾಗಿ ರಾಮ ಕಾಡಿನಲ್ಲಿ ಹದಿನಾಲ್ಕು ವರ್ಷ ವನವಾಸವನ್ನು ಅನುಭವಿಸುತ್ತಾನೆ. ಆಗ ಜೀವನದ ಕಷ್ಟಗಳೇನು ಎಂಬುದನ್ನು ಅರಿತುಕೊಂಡು ಪರಿಪೂರ್ಣ ಮನುಷ್ಯನಾಗುತ್ತಾನೆ.
ನಮ್ಮ ಬದುಕಿನಲ್ಲಿಯೂ ಕಷ್ಟ, ನೋವುಗಳು ಬಂದಾಗ ನಾವು ಶ್ರೀರಾಮನ ವನವಾಸದ ಅರಣ್ಯ ಕಾಂಡವನ್ನು ಓದಿದರೆ ಸಾಕು ನಮ್ಮ ಕಷ್ಟಗಳೆಲ್ಲ ಮಾಯವಾಗುತ್ತವೆ.
ಶ್ರೀರಾಮನಂತಹ ರಾಜಕುಮಾರನಿಗೆ ಅಷ್ಟೊಂದು ರೀತಿಯ ಕಷ್ಟಗಳಿದ್ದ ಮೇಲೆ ನಮ್ಮದು ಯಾವ ಲೆಕ್ಕ ಅನಿಸಿ ಸಮಾಧಾನ ಸಿಗುತ್ತದೆ.
ವಾಲ್ಮೀಕಿಯ ಉದ್ದೇಶ ಕೂಡಾ ಅದೇ ಆಗಿತ್ತು. ಜೀವನವೆಂದ ಮೇಲೆ ಕಷ್ಟಗಳು ಬಂದೇ ಬರುತ್ತವೆ. ನಾವು ಅವುಗಳನ್ನು ಧೈರ್ಯದಿಂದ ಎದುರಿಸಬೇಕು ಎಂಬುದೇ ಆಗಿದೆ.
ರಾವಣನು ಸೀತೆಯನ್ನು ಅಪಹರಿಸದೇ ಹೋಗಿದ್ದರೆ ರಾವಣನ ಕೆಟ್ಟ ಗುಣಗಳು ಹಾಗೆಯೇ ಉಳಿದು ಬಿಡುತ್ತಿದ್ದವು. ರಾವಣನಲ್ಲಿ ಅಹಂಕಾರ, ಪೂಜಾಫಲ ಎರಡನ್ನೂ ಕವಿ ಸುಂದರವಾಗಿ ವರ್ಣಿಸುತ್ತಾನೆ. ಆದರೆ ಅವನ ಅಹಂಕಾರ ಅವನ ಪೂಜಾಫಲವನ್ನು ಹಾಳುಮಾಡುತ್ತದೆ.
ಪರರ ಧನ, ಪರರ ಸ್ತ್ರೀಯನ್ನು ಅಪಹರಿಸುವುದು ಒಳ್ಳೆಯದಲ್ಲ ಎಂಬುದನ್ನೇ ವಾಲ್ಮೀಕಿ ಇಲ್ಲಿ ನೀರೂಪಿಸುತ್ತಾನೆ.
ರಾವಣನ ಅಂತ್ಯ ವ್ಯಕ್ತಿಯಲ್ಲಿ ಅಡಗಿರುವ ಅಹಂಕಾರದ ಅಂತ್ಯವಾಗಿದೆ. ಶಿವಭಕ್ತನಾದ ರಾವಣ ದೇವರನ್ನು ಒಲಿಸಿಕೊಂಡರೂ ಪರಸ್ತ್ರೀ ಮೇಲಿನ ವ್ಯಾಮೋಹದಿಂದಾಗಿ ತನ್ನ ಅಂತ್ಯ ಕಾಣುತ್ತಾನೆ.
ಅದನ್ನು ಬಸವಣ್ಣನವರು ಛಲಬೇಕು ಶರಣಂಗೆ ಪರಸತಿಯನು ಒಲ್ಲೆನೆಂಬ, ಛಲಬೇಕು ಶರಣಂಗೆ ಪರಧನವ ಒಲ್ಲೆನೆಂಬ ಎಂದು ಸಾರಿದ್ದಾರೆ.
ಮರ್ಹ ವಾಲ್ಮೀಕಿಯ ಸಂದೇಶಗಳನ್ನು ಎಲ್ಲ ಮಹಿಮಾ ಪುರುಷರು ಮತ್ತೆ ಮತ್ತೆ ಬೇರೆ ರೀತಿಯಲ್ಲಿ ಸಾರಿ ಹೇಳಿದ್ದಾರೆ.
ಇಂದು ನಾವು ಅನೇಕ ಕಷ್ಟಗಳನ್ನು ಎದುರಿಸುತ್ತೇವೆ. ಆಗ ನೋವನ್ನು ಅನುಭವಿಸುತ್ತೇವೆ. ಅಂತಹ ಸಂದರ್ಭದಲ್ಲಿ ರಾಮಾಯಣದ ಅರಣ್ಯ ಕಾಂಡವನ್ನು ಓದಿದರೆ ನಮಗೆ ಬಂದಿರುವ ಕಷ್ಟಗಳು ಏನೂ ಅಲ್ಲ ಅನಿಸುತ್ತವೆ.
ಕಷ್ಟಗಳು ಯಾರನ್ನೂ ಬಿಟ್ಟಿಲ್ಲ, ಬಿಡುವುದೂ ಇಲ್ಲ. ಅವುಗಳನ್ನು ಎದುರಿಸಿದರೆ ಜೀವನದಲ್ಲಿ ಸುಖ ಸಿಗುತ್ತದೆ ಎಂಬುದನ್ನು ಮುಂದೆ ವಾಲ್ಮೀಕಿ ತಮ್ಮ ರಾಮಾಯಣದ ಸುಂದರ ಕಾಂಡದಲ್ಲಿ ವಿವರಿಸುತ್ತಾರೆ.
ಈ ಎಲ್ಲ ಕಾರಣಗಳಿಂದ ರಾಮಾಯಣದಲ್ಲಿ ಎಲ್ಲವೂ ಇದೆ. ಇಡೀ ನಮ್ಮ ಜೀವನವೇ ಇದೆ. ಜೀವನದ ಎಲ್ಲ ಸಮಸ್ಯೆಗಳಿಗೆ ಪರಿಹಾರವೂ ಇದೆ.
ಲಕ್ಷ್ಮಣನ ಸೋದರ ಪ್ರೇಮ, ಹನುಮಂತನ ಸ್ವಾಮಿನಿಷ್ಟೆ, ಸೀತೆಯ ಪಾವಿತ್ರತೆ ಮನುಷ್ಯನಲ್ಲಿ ಇರಬೇಕದ ಗುಣಗಳನ್ನು ಸಾರಿ ಹೇಳುತ್ತವೆ.
ನಮ್ಮ ಮನಸ್ಸಿನಲ್ಲಿ ರಾಮ-ರಾವಣ-ಹನುಮಂತ ಎಲ್ಲರೂ ಅಡಗಿ ಕುಳಿತಿರುತ್ತಾರೆ. ನಾವೇ ಅವರನ್ನು ಹುಡುಕಿ ತೆಗೆದು ಒಳ್ಳೆಯ ಗುಣಗಳನ್ನು ಅಳವಡಿಸಿಕೊಂಡಾಗ ಶ್ರೀರಾಮರಾಗುತ್ತೇವೆ. ಇಲ್ಲದಿದ್ದರೆ ರಾವಣರಾಗುತ್ತೇವೆ ಎಂಬ ಸಂದೇಶವನ್ನು ಜಗತ್ತಿಗೆ ಮರ್ಹ ವಾಲ್ಮೀಕಿ ನೀಡಿದ್ದಾನೆ.
ಜಗತ್ಪ್ರಸಿದ್ದ ಕವಿಯ ರಾಮಾಯಣ ಇಂದು ಎಲ್ಲರಿಗೆ ಬೇಕಾಗಿದೆ. ಶ್ರೀರಾಮ ನಮ್ಮ ಪಾಲಿನ ದೇವರಾಗಿದ್ದಾನೆ. ಆದರೆ ಅವನ ಆದರ್ಶ ಗುಣಗಳನ್ನು ನಾವು ಪಾಲಿಸಿಕೊಂಡಾಗ ಶ್ರೀರಾಮನಿಗೆ ಹಾಗೂ ಮರ್ಹ ವಾಲ್ಮೀಕಿಗೆ ಗೌರವ ಕೊಟ್ಟಂತಾಗುತ್ತದೆ.
ನಮ್ಮಲ್ಲಿರುವ ರಾವಣವನ್ನು ಕಿತ್ತಿ ಒಗೆದು ಬದುಕಿನಲ್ಲಿ ಬರುವ ಎಲ್ಲ ಕಷ್ಟಗಳನ್ನು ಎದುರಿಸಿದಾಗ ಬದುಕು ಸುಂದರವಾಗುತ್ತದೆ.
ಮರ್ಹ ವಾಲ್ಮೀಕಿ ಯಾವುದೇ ಒಂದು ಜಾತಿಗೆ ಸೀಮಿತವಾಗಿಲ್ಲ. ಹುಟ್ಟಿನಿಂದ ಬೇಡನಾದರೂ, ಅವನ ಕಾವ್ಯದ ಮೂಲಕ, ಅವನ ದೈವ ಗುಣಗಳ ಮೂಲಕ ದೇವರಾಗಿದ್ದಾನೆ. ವಿಭೂತಿ ಪುರುಷನಾಗಿದ್ದಾನೆ. ಬುದ್ದ-ಬಸವ-ಗಾಂಧಿ-ಅಂಬೇಡ್ಕರ್ ಯಾವುದೇ ಜಾತಿ ಜನಾಂಗಕ್ಕೆ ಸೇರಿದವರಲ್ಲ. ಅವರ ಆದರ್ಶ ಹಾಗೂ ಸಾಧನೆಗಳ ಮೂಲಕ ಅವರು ಎಲ್ಲ ಜನಾಂಗಕ್ಕೂ ಸೇರಿರುತ್ತಾರೆ.
ನಮ್ಮೆಲ್ಲರಿಗೆ ಕೇವಲ ಹುಟ್ಟಿನಿಂದ ಜಾತಿರುತ್ತದೆ. ನಾವು ಏನನ್ನಾದರೂ ಶ್ರೇಷ್ಠವಾದದ್ದನ್ನು ಸಾಧಿಸಿದರೆ ನಾವು ಜಾತಿಯನ್ನು ಮೀರಿ ಬೆಳೆಯುತ್ತೇವೆ. ಅಂತಹ ಶ್ರೇಷ್ಟ ಗುಣಗಳನ್ನು ನಮ್ಮ ಸಾಹಿತ್ಯ ನಮಗೆ ನೀಡುತ್ತದೆ.
ರಾಮಾಯಣ, ಮಹಾಭಾರತ, ಬಸವಾದಿ ಶರಣರ ವಚನಗಳು, ಗಾಂಧಿ-ಅಂಬೇಡ್ಕರ್ ಅವರ ವಿಚಾರ ಧಾರೆಗಳು ನಮ್ಮನ್ನು ಪರಿಪೂರ್ಣ ಮನುಷ್ಯರನ್ನಾಗಿ ಮಾಡುತ್ತವೆ.
ಈ ಎಲ್ಲ ಪುಣ್ಯ ಪುರುಷರ ಜಯಂತಿಗಳನ್ನು ಆಚರಿಸುವುದರ ಮೂಲಕ ನಮ್ಮನ್ನು ನಾವು ಪರಿಶುದ್ಧ ಗೊಳಿಸಬೇಕಾಗಿದೆ. ನಮ್ಮ ಮಕ್ಕಳಿಗೆ ರಾಮಾಯಣ ಓದಿಸುವುದರ ಮೂಲಕ ಅವರಲ್ಲಿ ತ್ಯಾಗ, ಪ್ರೀತಿ, ವಿಶ್ವಾಸ, ಸ್ನೇಹ ನಿಷ್ಠೆಯ ಭಾವನೆಗಳನ್ನು ಬೆಳೆಸಬೇಕಾಗಿದೆ.

ಧಣಿ ಎಂಬ ಪದ - ಒಮ್ಮೆ ಕಿರಿ-ಕಿರಿ ಒಮ್ಮೆ ಸಂಭ್ರಮ


ಈಗ ರಾಜಕೀಯದಲ್ಲಿ ಚಾಲ್ತಿ ಇರುವ ಪದ 'ಗಣಿಧಣಿ'ಗಳು. ವಿಪರೀತ ಹಣ ಇದ್ದು ಎಲ್ಲವನು ನಿಯಂತ್ರಿಸುವವರು ಎಂಬ ಅರ್ಥ ಗಣಿ ಪದ ಒಮ್ಮೊಮ್ಮೆ ನೀಡುತ್ತದೆ.
ಬಾಲ್ಯದಲ್ಲಿ ಈ ಪದ ನನ್ನನ್ನು ಹೆಚ್ಚು ಕಾಡುತ್ತಿತ್ತು. ಆಗ ಕಾರಟಗಿಯಲ್ಲಿ ಇದ್ದ ಕೆಲವೇ ಧಣಿಗಳಲ್ಲಿ ನಾವು ಒಬ್ಬರು. ನನ್ನನ್ನು ಹೆಗಲ ಮೇಲೆ ಹೊತ್ತು ತಿರುಗುವ ನಂಬಿಗಸ್ತ ಹಿರಿಯ ಆಳು ನನ್ನನ್ನು ಪ್ರೀತಿಯಿಂದ ಧಣಿ ಎಂದೇ ಕರೆಯುತ್ತಿದ್ದರು. ಇದಕ್ಕೊಂದು ಉದಾಹರಣೆ ಕೋಡುತ್ತೇನೆ.
ನಾನು ಶಾಲೆಗೆ ಪ್ರವೇಶ ಪಡೆಯುವ ಸಂದರ್ಭದಲ್ಲಿ ನನ್ನ ಮೇಲೆ ನಿಷ್ಠೆ ಇರುವ ವ್ಯೆಕ್ತಿ ಎಡ್ಮಿಶನ್ ಗಾಗಿ ಹೋಗಿದ್ದಾನೆ. ಶಾಲಾ ಮುಖ್ಯಸ್ಥರು ನನ್ನ ಹೆಸರನ್ನು ಕೇಳಿದಾಗ ಸಿದ್ದಪ್ಪ ಧಣಿ ಎಂದಿದ್ದಾನೆ.
ಕೋಪಿತಗೊಂಡ ಶಿಕ್ಷಕರು ಹಾಗೆಲ್ಲ ಬರೆಯಲಾಗುವುದಿಲ್ಲ ಎಂದಿದ್ದಾರೆ. ಆಗ ಇಲ್ಲ ಸರ್ ಹಾಗಾದರೆ ಸಿದ್ದಬಸಪ್ಪ ಧಣಿ ಇರಲಿ ಎಂದು ಹೇಳಿದ್ದಾನೆ. ತಮಾಷೆಯಾಗಿ ಮೇಷ್ಟ್ರು ಸಿದ್ದಬಸಪ್ಪ ಎಂದು ನಮೂದಿಸಿದ್ದಾರೆ.
ಆದರೆ ನನ್ನ ತಂದೆಯ ಹೆಸರನ್ನು 'ಬಸವರಾಜ' ಎಂದು ನಮೂದಿಸಲು ಅವರು ನನ್ನ ತಂದೆಯ ಸ್ನೇಹಿತರಾಗಿದ್ದ ಕಾರಣ. ಈಗಲೂ ನನ್ನ ದಾಖಲಾತಿಯ ಈ ಹೆಸರನ್ನು ಎಲ್ಲರೂ ಚುಡಾಯಿಸುತ್ತಾರೆ. ನಾನಾದರೆ ಅಪ್ಪ, ನಮ್ಮ ತಂದೆ ಹೆಸರು ಮಾತ್ರ 'ರಾಜ'.
ಬಾಲ್ಯದಲ್ಲಿನ ನಮ್ಮ ಮನೆಯ ನೂರಾರು ಆಳುಗಳು ಒಂದು ವರ್ಷದವರಿಂದ ಹಿಡಿದು ವಯೋವೃದ್ಧರಿಗೆ ಧಣಿ ಎಂದೇ ಕರೆಯುತ್ತಿದ್ದುದು ಅಚ್ಚರಿ ಎನಿಸುತ್ತಿತ್ತು.
ಹೊಲದಲ್ಲಿನ ಬಾವಿಗೆ ಈಸು ಕಲಿಸಲು ಕರೆದುಕೊಂಡು ಹೋಗುತ್ತಿದ್ದ ಮುದುಕಪ್ಪನಿಗೆ ತಾತ ಎಂದು ಕರೆದರೆ ಸಾಕು ಬೇಸರವಾಗುತ್ತಿತ್ತು. ಬ್ಯಾಡ ಧಣಿ ನೀನು ನನಗೆ ತಾತ ಅನಬೇಡ ಮುದಕಪ್ಪ ಅನ್ನಪಾ ಸಾಕು ಅನ್ನುತ್ತಿದ್ದ.
ನಮ್ಮೂರಲ್ಲಿ ಬಹುವಚನಪದಗಳನ್ನು ಯಾರಿಗೂ ಬಳಸುತ್ತಿದ್ದಿಲ್ಲ.ಆಳುಗಳು ಕೂಡಾ ಮಾಲೀಕರಿಗೆ ಏಕವಚನದಲ್ಲಿಯೇ ಮಾತಾಡಿದರೂ 'ಧಣಿ' ಎಂಬ ಪದ ಬಿಡುತ್ತಿರಲಿಲ್ಲ.
1980 ರ ಹೊತ್ತಿಗೆ ನಮ್ಮ ಮನೆತನ ಆರ್ಥಿಕವಾಗಿ ಹಿನ್ನಡೆಪಡೆಯಿತು. ಇದ್ದ ನುರಾರು ಆಳುಗಳ ಸಂಖ್ಯೆ ಕ್ಷೀಣಗೊಂಡು ನಾಲ್ಕಾರು ಜನ ಉಳಿದರು.
ಬಾಲ್ಯದಲ್ಲಿ ಸಂಭ್ರಮ, ಶ್ರೀಮಂತಿಕೆಯಲ್ಲಿ ಬೆಳೆದ ನಮಗೆ ನಿರಾಶೆಯಾಯಿತು.
ಸ್ಕೂಲಿಗೆ ಕಳಿಸಲು ಇದ್ದ ಜೀಪನ್ನು ಮಾರಾಟ ಮಾಡಲಾಯಿತು. ದಿನಕ್ಕೆ ಹತ್ತಾರು ಸಾವಿರ ಲಾಭ ತರುತ್ತಿದ್ದ ಕಿರಾಣಿ ಅಂಗಡಿ ಬಂದ್ ಆಯಿತು. ನಮ್ಮ ಮನೆಯಲ್ಲಿ ಕೆಲಸಕ್ಕೆ ಇದ್ದವರೆಲ್ಲ ಸಣ್ಣಪುಟ್ಟ ವ್ಯಾಪಾರ ಪ್ರಾರಂಭಿಸಿ ಮಾಲಕರಾದರು. ಆದರೆ ನಾವು ಮಾತ್ರ ಧಣಿತನವೂ ಇಲ್ಲದೆ ದುಡಿಮೆಯೂ ಇಲ್ಲದೆ ಅಸ್ಥಿಪಂಜರಗಳಾದೆವು. ಊರಲ್ಲಿ ಸಣ್ಣ ಪುಟ್ಟ ವಾಹನಗಳು ಬೈಕುಗಳು ಕಾಣಲಾರಂಭಿಸುವ ಹೊತ್ತಿಗೆ ನಮ್ಮಲ್ಲಿದ್ದ ಎಲ್ಲ ವಾಹನಗಳು ಕಾಣೆಯಾದದ್ದು ವಿಪರ್ಯಾಸ.
ಆಗ ಇಡೀ ಊರಲ್ಲಿ ಕೇವಲ ಮೂರೇ ಜೀಪುಗಳಿದ್ದವು. ಆರು ಲಾರಿಗಳಿದ್ದವು ಅವು ಕೇವಲ ಮೂರೆ ಮನೆತನಕ್ಕೆ ಸಂಬಂಧಿಸಿದ್ದವು. ನಾವು ಎಲ್ಲವನ್ನು ಕಳೆದುಕೊಳ್ಳುವ ಹೊತ್ತಿಗೆ ಊರಿನ ಚಿತ್ರಣ ಬದಲಿ ಆಗಿತ್ತು. ನೀರಾವರಿ ಪ್ರಭಾವದಿಂದ ವ್ಯಾಪಾರೋದ್ಯಮ ಜೋರಾಗಿತ್ತು.
ನಮ್ಮ ಮನೆಯ ಆಳುಗಳೆಲ್ಲ ವೈಯಕ್ತಿಕವಾಗಿ ಧಣಿಗಳಾಗಿದ್ದರೆ ನಾವು ಧಣಿತನದ ಪಳೆಯುಳಿಕೆ ಆಗಿದ್ದೆವು. ನಮ್ಮೆದುರಿಗೆ ಬೈಕಿನಲ್ಲಿ ಹೋಗುತ್ತಿದ್ದ ನಮ್ಮ ಆಳುಗಳು ಅದೇ ಪ್ರೀತಿಯನ್ನು ಇಟ್ಟುಕೊಂಡು ಯಾಕಪ ಸಿದ್ದಪ್ಪ ಧಣಿ ಎಲ್ಲಿಗೆ ಒಂಟಿದಿ ಎಂದಾಗ ನೋವಾಗುತ್ತಿತ್ತು. ಯಾರು 'ಧಣಿ' ಗಾಡಿ ಮೇಲೆ ಹೋಗುವ ಅವನೋ, ನಡೆದುಕೊಂಡು ಹೋಗುವ ನಾನೋ ಎಂಬ ಅನುಮಾನ ಬಂದು ಏನೂ ಇಲ್ಲದ ಧಣಿ ತನಕ್ಕಾಗಿ ನೋವಾಗುತ್ತಿತ್ತು.
ಅಷ್ಟೊತ್ತಿಗಾಗಲೇ ಹೈಸ್ಕೂಲು ವ್ಯಾಸಂಗ ಮುಗಿಯಲು ಬಂದಿತ್ತು. ವ್ಯಾಪಾರ ಮಾಡಬೇಕೆಂದರೆ ಎಲ್ಲ ಅಂಗಡಿಗಳು ಮುಚ್ಚಿದ್ದವು. ಬೇರೆಯವರ ಅಂಗಡಿಗೆ ಹೋಗಬೇಕೆಂದರೆ ಅವರೆಲ್ಲರೂ ನಮ್ಮ ಹತ್ತಿರ ದುಡಿದವರೇ ಆದರೂ ಈಗವರು ಧಣಿಗಳು. ಈ ಒಣ ಪ್ರತಿಷ್ಟೆ ನಮ್ಮನ್ನು ದುಡಿಯದಂತೆ ಕಟ್ಟಿಹಾಕಿತು.
ಕಾಲ ಚಕ್ರದ ಸುಳಿಗೆ ನಮ್ಮ ಮನೆತನ ಸಿಕ್ಕಿತು. ನಾವೆಲ್ಲ ಹಣವಿಲ್ಲದ ಧಣಿಗಳಾಗಿ ಉಳಿದೆವು. ಹೇಗೋ ಕಷ್ಟಪಟ್ಟು ಕಾಲೇಜು ವ್ಯಾಸಂಗ ಮಾಡುವುದು ಅನಿವಾರ್ಯವಾಯಿತು. ಊರಲ್ಲಿದ್ದರೆ ಬೇರೆಯವರ ಅಂಗಡಿಗೆ ದುಡಿಯಲು ಹೋಗಬೇಕು ಅವರ್ಯಾರು ನಮ್ಮನ್ನು ಕೆಲಸಕ್ಕೆ ಇಟ್ಟುಕೊಳ್ಳುವುದಿಲ್ಲ. ಯಾಕೆಂದರೆ ನಾವಿನ್ನು ಅವರ ಪಾಲಿನ ಧಣಿಗಳು.
ಆದರೆ ಹಿರಿಯರು ಗಳಿಸಿದ್ದ ಆಸ್ತಿ ಹಾಗೆ ಇತ್ತು, ದೊಡ್ಡ ದೊಡ್ಡ ಮನೆಗಳು ಗೋದಾಮುಗಳು, ಊರಮುಂದಿನ ಹೊಲ, ಮನೆಯ ತಿಜೂರಿಯಲ್ಲಿ ಅಡಗಿ ಕುಳಿತ ಬಂಗಾರ ನಮ್ಮನ್ನು ಪೂರಾ ನಿರ್ಗತಿಕರನ್ನಾಗಿ ಮಾಡಲಿಲ್ಲ.
ಹಣವಿಲ್ಲದೆ, ಕಾರು-ಜೀಪುಗಳಿಲ್ಲದೆ ಬದುಕುವ ಶೈಲಿಯನ್ನು ರೂಢಿ ಮಾಡಿಕೊಂಡೆವು.
ಬಾಲ್ಯದ ಧಣಿತನ ದೂರಾಗಿ ವಾಸ್ತವಕ್ಕೆ ಬಂದೆವು. ನಮ್ಮ ಮೇಲಿನ ಅಭಿಮಾನದಿಂದಲೋ, ಪ್ರೀತಿಯಿಂದಲೋ, ರಸ್ತೆಯಲ್ಲಿ ಯಾರಾದರೂ ಧಣಿ ಅಂದಾಗ ಒಳಗೊಳಗೆ ಹಿಂಸೆಯಾಗುತ್ತಿತ್ತು. ಮುಂದೆ ಕಾಲಚಕ್ರ ನೀಡಿದ ಅನುಭವಗಳನ್ನು ಮತ್ತೆ ಯಾವಾಗಲಾದರು ವಿವರಿಸುತ್ತೇನೆ.

Thursday, October 21, 2010

ಬಟ್ಟೆ ಶೋಕಿ - ಓದುವ ಹುಚ್ಚು ಕಲಿಸಿದ ಟೇಲರ್ ರಾಮಣ್ಣ

ಸಿನಿಮಾ ನೋಡುವ ಹವ್ಯಾಸದಿಂದ ಸುಂದರವಾಗಿ ಬಟ್ಟೆ ಉಡುವ ಪ್ಯಾಶನ್ ಶುರು ಆಗಿದ್ದು ಏಳನೇ ತರಗತಿಯಲ್ಲಿ. ಅಗ ಪ್ರೈಮರಿ ಸ್ಕೂಲ್‌ನಲ್ಲಿ ಓದುವವರಿಗೆ ನಿಕ್ಕರ್ ತೊಡುವ ಅನಿವಾರ್ಯವಿತ್ತು. ಪ್ಯಾಂಟ್ ಹೊಲಿಸುತ್ತಿರಲಿಲ್ಲ. ಆದರೆ ನಾನು ತುಂಬಾ ಹಟ ಮಾಡಿ ಬೆಲ್ ಬಾಟಂ ಫ್ಯಾಂಟ್ ಹೊಲಿಸಿದೆ. ತಲೆ ತುಂಬಾ ದಟ್ಟ ಕೂದಲು, ಸೊಂಟಕ್ಕೆ ದಪ್ಪನೆ ಬೆಲ್ಟ್ ಬಿಗಿದು ನನಗಿಂತ ಮುಂದೆ ನಡೆಯುವ ಬಾಟಂ ನೋಡಿ ಸಂಭ್ರಮಿಸಿದ್ದೆ, ದಿನಾಂಕ : ೭-೭-೭೭ ರಂದು ಒಂದು ಫೋಟೋ ತೆಗೆಸಿ ಅದರ ಕೆಳಗೆ ಮೇಲಿನ ದಿನಾಂಕ ಬರೆದು ಖುಷಿ ಪಡುವ ಕನಸು ಕೂಡಾ ನನಸಾಯಿತು. ಇದೆಲ್ಲ ನನಗೆ ನೆನಪಾದದ್ದು ೧೦-೧೦-೧೦ ರಂದು ಎಂಬುದು ಅಷ್ಟೇ ವಿಸ್ಮಯ.
ನನಗೆ ಮೊಟ್ಟ ಮೊದಲ ಪ್ಯಾಂಟ್ ಹೊಲಿದುಕೊಟ್ಟ ರಾಮು ಟೇಲರ್ ರಾಮಣ್ಣ ಮಡಿವಾಳರ ಬಟ್ಟೆ ಶೋಕಿಯೊಂದಿಗೆ ಓದುವ ಹವ್ಯಾಸವನ್ನು ಕಲಿಸಿದ. ನನಗಿಂತ ವಯಸ್ಸಿನಲ್ಲಿ ಹಿರಿಯನಾದ ರಾಮಣ್ಣನಿಗೆ ನನ್ನ ಮೇಲೆ ಎಲ್ಲಿಲ್ಲದ ಪ್ರೀತಿ. ಪ್ರತಿ ದೀಪಾವಳಿ, ದಸರಾ ಹಬ್ಬಗಳನ್ನು ಸುಂದರವಾಗಿ ಪ್ಯಾಂಟ್ ಸ್ಟಿಚ್ ಮಾಡಿ ಕೊಡುತ್ತಿದ್ದ. ಜಗಳಾಡಿದರೂ ಸೌಮ್ಯವಾಗಿ ಉತ್ತರಿಸಿ ಸಾಗ ಹಾಕುತ್ತಿದ್ದ ಆತನ ಸಹನೆ ಇಂದಿಗೂ ಹಸಿರಾಗಿದೆ.
ಆತ ನೀಟಾಗಿ ಬಟ್ಟೆ ಕಟ್ ಮಾಡುತ್ತಾ ಸಾಹಿತ್ಯ, ಶಿಕ್ಷಣ, ರಾಜಕೀಯದ ಕುರಿತು ಚರ್ಚೆ ಮಾಡುತ್ತಿದ್ದ. ವಿದ್ಯಾವಂತನಾದ ರಾಮಣ್ಣನೊಂದಿಗೆ ಚರ್ಚಿಸಲು ನಮ್ಮೂರಲ್ಲಿ ಯಾರೂ ಸಿಗುತ್ತಿದ್ದಿಲ್ಲ. ಕಲಿಯುವ ನನ್ನ ಆಸಕ್ತಿ ಆತನಿಗೆ ತುಂಬಾ ಖುಷಿ ಕೊಡುತ್ತಿತ್ತು. ಕುತೂಹಲದಿಂದ ಅನೇಕ ಪ್ರಶ್ನೆಗಳನ್ನು ಕೇಳುತ್ತಿದ್ದೆ. ಅವೆಲ್ಲ ವಯಸ್ಸಿಗೆ ಮೀರಿದ ಪ್ರಶ್ನೆಗಳೇ ಆಗಿರುತ್ತಿದ್ದವು ಎಂದು ಈಗ ಅನಿಸುತ್ತದೆ.
ರಾಮಣ್ಣನ ಮೂಲ ಊರು ಈಗಿನ ಗದಗ ಜಿಲ್ಲೆಯ ಸೂಡಿ. ದುಡಿಯಲು ನಮ್ಮೂರಿಗೆ ಬಾಲ್ಯದಲ್ಲಿಯೇ ಬಂದಿದ್ದ. ಕಾರಟಗಿ ಪ್ರದೇಶಗಳಲ್ಲಿ ಧಾರವಾಡ ಜಿಲ್ಲೆಯ ಜನರನ್ನು ಮ್ಯಾಗಡೆಯವರು (ಮೇಲಿನ ಪ್ರದೇಶದವರು) ಎನ್ನುತ್ತಿದ್ದರು.
' ಅಬಾಬಾ ಮ್ಯಾಗಡೆಯವರ ಕೂಡಾ ಬಾರಿ ದೋಸ್ತಿ ಬಿಡಪಾ ನಿಂದು' , ಎಂದು ಎಲ್ಲರೂ ತಮಾಷೆ ಮಾಡುತ್ತಿದ್ದರು.
ಸ್ನೇಹ ಮಾಡಲು ವಯಸ್ಸು, ಅಂತಸ್ತು ಬೇಕಿಲ್ಲ ಎಂಬ ಸತ್ಯ ರಾಮಣ್ಣ ಕಲಿಸಿ ಕೊಟ್ಟ. ಹೈಸ್ಕೂಲ್‌ನಲ್ಲಿ ಓದುವಾಗಲೂ ರಾಮಣ್ಣ ಗೆಳೆಯನಾಗಿ ಇದ್ದ. ನಾನು ಶೈಕ್ಷಣಿಕವಾಗಿ ನಿರೀಕ್ಷಿಸಿದ ಯಶಗಳಿಸಲಿಲ್ಲ. ಆದರೆ ಸಾಹಿತ್ಯ, ಸಿನಿಮಾ ಹಾಗೂ ರಾಜಕೀಯ ಕ್ಷೇತ್ರಗಳಲ್ಲಿ ನನಗಿದ್ದ ಆಸಕ್ತಿಯನ್ನು ಆತ ಗುರುತಿಸಿದ್ದ. ಇಲ್ಲ ಸಿದ್ದು ನೀನು ಧಾರವಾಡಕ್ಕೆ ಹೋಗು ಹೆಂಗೂ ಶ್ಯಾಣಾ ಆಗತಿ ಅಂತ ಧಾರವಾಡಕ್ಕೆ ಹೋಗಲು ಪ್ರೇರೆಪಿಸಿದ.
ಮುಂದೆ ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಓದುವಾಗಲೂ ರಜೆಯಲ್ಲಿ ರಾಮಣ್ಣನ ಅಂಗಡಿಯಲ್ಲಿಯೇ ಇರುತ್ತಿದ್ದೆ. ಎಲ್ಲರಿಗೂ ಅಚ್ಚರಿ. ನನ್ನ ತಿಳುವಳಿಕೆ ಹೆಚ್ಚಾದದ್ದನ್ನು ಕಂಡು ಹಿರಿಯ ಸೋದರನಂತೆ ಖುಷಿ ಪಡುತ್ತಿದ್ದ. ಧಾರವಾಡದ ವ್ಯಾಸಂಗದ ಸಮಯದಲ್ಲಿ ಪ್ರಕಾಶ ನಾಜರೆ ಗೆಳೆತನವಾಗಿ ನನ್ನ ಸ್ಟಿಚಿಂಗ್ ನಾಜರೆ ಟೇಲರ್‍ ಗೆ ಶಿಪ್ಟ್ ಆದಾಗಲೂ ರಾಮಣ್ಣನ ಗೆಳೆತನ ಬಿಡಲಿಲ್ಲ. ಧಾರವಾಡದಲ್ಲಿ ಹೊಲಿದ ಪ್ಯಾಂಟ್ ನೊಂದಿಗೆ ಕಂಪೇರ್ ಮಾಡಿ ಹೊಸ ಪ್ರಯೋಗ ಮಾಡುತ್ತಿದ್ದ.
ನನ್ನ ವ್ಯಾಸಂಗ ಮುಗಿದ ಮೇಲೆ ಗದುಗಿನಲ್ಲಿ ಲೆಕ್ಚರ್ ಆದಾಗ ರಾಮಣ್ಣಗೆ ಎಲ್ಲಿಲ್ಲದ ಸಂಭ್ರಮ. ನೋಡಪಾ ಹೇಗಿದ್ದಾತ ಹೇಗಾದೆ ಅಂದಿದ್ದ. ಮುಂದ ತುಂಬಾ ಬ್ಯುಸಿ ಆಗಿ ಊರಿಗೆ ಹೆಚ್ಚು ಹೋಗಲಾಗಲಿಲ್ಲ.
ಹೋದಾಗಲೆಲ್ಲ ಆತನನ್ನು ಕಂಡು ಬರುತ್ತಿದ್ದೆ. ಮದುವೆಯಾಗಿ ಆತನಿಗೆ ಮೂರು ಮಕ್ಕಳು ಹುಟ್ಟಿ ಸಂಸಾರ ಹೊರೆಯಾಯಿತು, ದುಡಿಮೆ ಸಾಲುವುದಿಲ್ಲ ಅಂತ ಪೇಚಾಡಿದ ನೆನಪು.
ಮುಂದೆ ಆತ ತೀವ್ರ ಅನಾರೋಗ್ಯಕ್ಕೆ ಗುರಿ ಆದದ್ದನ್ನು ತಮ್ಮ ಜಗದೀಶ ಹೇಳಿದ. ಆದರೆ ರಾಮಣ್ಣನನ್ನು ನೋಡಲು ಸಾಧ್ಯವಾಗಲಿಲ್ಲ. ದುಡಿಮೆ ಸಾಲದು ಎನಿಸಿ ಸಾಲ ಮಾಡಿ ಊರು ಬಿಟ್ಟು ಸೂಡಿಗೆ ಬಂದದ್ದನ್ನು ಗೆಳೆಯರು ಹೇಳಿದರು. ನನಗೆ ಆತನ ಭೇಟಿ ಸಾಧ್ಯವಾಗಲೇ ಇಲ್ಲ. ೧೯೯೦ ರಲ್ಲಿ ನನಗೊಂದು ಜೊತೆ ಡ್ರೆಸ್ ತಯಾರಿಸಿದ್ದ ಅನಿವಾರ್ಯವಾಗಿ ಆ ಹಣ ನೀಡಿರಲಿಲ್ಲ. ಆ ಕೊರಗು ನನ್ನನ್ನು ಕಾಡುತ್ತಲೇ ಇತ್ತು.
೨೦೦೦ ನೇ ಇಸ್ವಿಯಲ್ಲಿ ರಾಮಣ್ಣ ಸೂಡಿಯಲ್ಲಿ ನಿಧನರಾದ ವಿಷಯ ತಿಳಿದು ಬೇಸರವಾಗಿ ದುಃಖವಾಯಿತು. ಆತನ ಸಹನೆ, ಜಾಣತನ ಯಾವಾಗಲಾದರೊಮ್ಮೆ ಕಾಡುತ್ತಿತ್ತು. ಗೆಳೆಯ ಬಿದರೂರ ಅವರೊಂದಿಗೆ ಸೂಡಿಗೆ ಹೋದಾಗ ಆತನ ಫ್ಯಾಮಿಲಿ ಕುರಿತು ವಿಚಾರಿಸಿದ್ದೆ. ಮಕ್ಕಳು ದೊಡ್ಡವರಾಗಿದ್ದಾರೆ, ಸಂಸಾರ ಕಷ್ಟದಲ್ಲಿದೆ ಎಂದು ಗೊತ್ತಾಯಿತು. ಇಂದು ಅಚಾನಕಾಗಿ ಆತನ ಮಗ, ಹೆಂಡತಿ ನನ್ನನ್ನು ಹುಡುಕಿಕೊಂಡು ಬಂದರು, ಬಿ.ಎ. ಪ್ರಥಮ ಶ್ರೇಣಿಯಲ್ಲಿ ಪಾಸ್ ಆಗಿದ್ದೇನೆ ಎಂದು ಮಗ ಹೇಳಿದಾಗ ರಾಮಣ್ಣನನ್ನು ನೋಡಿದಷ್ಟೇ ಸಂತೋಷವಾದರೂ, ತಂದೆಯನ್ನು ಕಳೆದುಕೊಂಡ ಅವನ ಅನಾಥ ಪ್ರಜ್ಞೆಗೆ ದುಃಖವಾತು. ಆತನಿಗೆ ಬಿ ಎಡ್ ಮಾಡಲು ಸೂಚಿಸಿದೆ. ಚಹಾ ಕುಡಿದು ಶ್ರೀಧರ ರಾಮಣ್ಣ ಮಡಿವಾಳರ ಹೊರಟು ನಿಂತಾಗ ಅವರಪ್ಪನಿಗೆ ಕೊಡಬೇಕಾಗಿದ್ದ ೨೦ ವರ್ಷದ ಹಿಂದಿನ ಬಾಕಿ ಕೊಟ್ಟೆ. ಹುಡುಗ ಹಣ ಪಡೆದುಕೊಳ್ಳಲು ನಿರಾಕರಿಸಿದ. ಇಲ್ಲ ನಿಮ್ಮಪ್ಪನ ಬಾಕಿ ಹಾಗೆ ಉಳಿದು, ನನ್ನ ಮನಸ್ಸನ್ನು ಕೊರೆಯುತ್ತಿತ್ತು, ದಯವಿಟ್ಟು ಸ್ವೀಕರಿಸು ಎಂದು ಬಾಕಿ ತೀರಿಸಿದೆ. ಆದರೆ ರಾಮಣ್ಣನ ಸ್ನೇಹದ ಬಾಕಿ ಹೇಗೆ ತೀರಿಸಲು ಸಾಧ್ಯ.?

Wednesday, October 20, 2010

ಲ್ಯಾಂಡ್ ಮಾರ್ಕ್ ಲೋಕದಲ್ಲಿ


ವ್ಯಕ್ತಿತ್ವ ವಿಕಸನ ಈಗ ಜಾಗತಿಕ ಕ್ರೇಜ್. ಅಮೇರಿಕಾ ಅನೇಕ ಸಂಶೋಧನೆಗಳನ್ನು ಮಾಡುತ್ತಲೇ ಇರುತ್ತದೆ. ನಗುವುದು ಹೇಗೆ ? ಸಂದರ್ಶನದ ಯಶಸ್ಸು, ಸಂತಸದ ಬದುಕು..... ಇತ್ಯಾದಿ ವಿಷಯಗಳ ಮೇಲೆ ಲಕ್ಷಾಂತರ ಪುಟಗಳು ದಾಖಲಾಗುತ್ತವೆ.
ಹತ್ತು ಹಲವು ಆಲೋಚನೆಗಳನ್ನು ಕ್ರೋಢಿಸಿಕೊಂಡು, ಒಂದು ಸಿದ್ಧಾಂತದೊಂದಿಗೆ ವಿನೂತನ Syllabus ರೂಪಿಸಿಕೊಂಡಿರುವ Landmark Education ಒಂದು ಜಾಗತಿಕ ಖ್ಯಾತಿ ಪಡೆದಿರುವ ಸಂಸ್ಥೆ.
೨೦೦೪ ರಲ್ಲಿ ಮಹಿಮಾ ಪಟೇಲ ನನ್ನನ್ನು Forum ಗೆ ಪರಿಚುಸಿದ್ದರ ನಿಧಾನ ಅರಿಯಲು ಯತ್ನಿಸಿದೆ. ಅಂದಿನ ತರಬೇತಿ ವೈಯಕ್ತಿಕ ಅoಚಿಛಿh ಆಗಲು ಪ್ರೇರಣೆ ನೀಡಿತ್ತು. ಹಾಗೆ ವ್ಯಕ್ತಿತ್ವ ವಿಕಸನ ತರಬೇತಿದಾರನಾಗಿ ಯಶಸ್ಸನ್ನು ಪಡೆದಾಗ ಮತ್ತೆ ನನ್ನ ಆತ್ಮ"ಶ್ವಾಸವನ್ನು ಒರೆಗಲ್ಲು ಹಚ್ಚುವ ಪ್ರಸಂಗ ಬಂದಿತು.
ಇತ್ತೀಚಿನ ಅಪಘಾತ, ವೃತ್ತಿಯಲ್ಲಿನ ಸ್ಥಿತ್ಯಂತರ ಹೊಸ ಸವಾಲು. ಬದುಕು ಬದಲಿಸುವುದು ಮಲಗಿದಾಗ ಮಗ್ಗಲು ಬದಲಿಸಿದಂತಲ್ಲ. ಸವಾಲು ಸ್ವೀಕರಿಸಬೇಕಾಗುತ್ತದೆ. ಎಲ್ಲವೂ ಅಂದುಕೊಂಡಂತೆ ಇರುವುದಿಲ್ಲ, ಆಗುವುದು ಇಲ್ಲ.
ಆದರೆ ಬೇರೆಯವರಿಗೆ ಉಪದೇಶ ಹೇಳುವುದು ಸುಲಭ. ವೈಯಕ್ತಿಕ ಸಮಸ್ಯೆ ಎದುರಾದಾಗ ಪ್ರತಿಕ್ರಿಸಿ ಎದುರಿಸುವುದರಲ್ಲಿ ಸವಾಲಿರುತ್ತದೆ. ಮತ್ತೊಮ್ಮೆ Forum Reviewಮಾಡಿದಾಗ ಏನೇನೋ ಬದಲಾವಣೆ ಒಂಚೂರು ಆತ್ಮವಿಶ್ವಾಸ ಹೆಚ್ಚಿತು.
ಮೂರು ದಿನಗಳ Landmark Forum m ನನ್ನು ಗಂಭೀರವಾಗಿ ಆಲಿಸಿದೆ. ಅನೇಕ ಸಂಗತಿಗಳಿಗೆ ಹೊಸ ಹೊಳಪು ಸಿಕ್ಕಂತೆ ಅನಿಸಿತು. ಈಗ ಅನಿವಾರ್‍ಯವಾಗಿ ವೃತ್ತಿ ಬದಲಿಸಿದ್ದೇನೆ. ಯಾರದೋ ಮೇಲೆ depend ಆಗಿ ಅಂತಾದರೆ ಮತ್ತೆ ವಿಫಲತೆ ಎದುರಾಗುತ್ತದೆ.
ನನ್ನ ಮೇಲಿನ ಆತ್ಮ ವಿಶ್ವಾಸದಿಂದಾಗಿ ಗಟ್ಟಿ ಧೈರ್ಯ ಮಾಡಿದ್ದೇನೆ. ಇಂತಹ ಕಠಿಣ (?) ಸಂದರ್ಭದಲ್ಲಿ Forumm ನೆರವಾಗಿದೆ. ಬ್ಲಾಗ್ ಮೂಲಕ ಅನುಭವ ಹಂಚಿಕೊಂಡು ಪುಸ್ತಕ ಪ್ರಕಟಿಸಬೇಕಿದೆ. ಎಲ್ಲಿ ಉಳಿಯುತ್ತೇನೆ, ಹೇಗೆ ಉಳಿಯುತ್ತೇನೆ ಎಂಬುದು ಮುಖ್ಯವಲ್ಲ ನಿರಂತರ ಅಲೆಯುತ್ತಾ, ಸಾಧ್ಯವಾದಷ್ಟು ಪರಿವರ್ತನೆಗೆ ಒಗ್ಗಿಕೊಂಡು ಬದುಕು ಕಟ್ಟಿಕೊಳ್ಳುತ್ತೇನೆ.

Thursday, October 14, 2010

ಎತ್ತಣ ಮಾಮರ ಎತ್ತಣ ಕೋಗಿಲೆ- ವಿ ವಿ ಗೋಪಾಲ್

ಸಿದ್ದು ಬಿ ಯಾಪಲಪರವಿಯವರ ಎತ್ತಣ ಮಾಮರ ಎತ್ತಣ ಕೋಗಿಲೆ ಇಂಗ್ಲೆಂಡ್ ಪ್ರವಾಸ ಕಥನವನ್ನೋದಿದಾಗ ಒಂದು ಹೊಸ ಪ್ರಯೋಗವನ್ನು ಕಂಡ ಅನುಭವವಾಯ್ತು. ಸಾಮಾನ್ಯವಾಗಿ ಪ್ರವಾಸ ಕಥನಗಳಲ್ಲಿ ಒಂದು ಪ್ರದೇಶದಲ್ಲಿನ ಬೆಟ್ಟ, ಕಾಡು, ಕಣಿವೆ, ಹೊಳೆ, ಜಲಪಾತ, ನಗರಗಳು, ಅಲ್ಲಿನ ಕಟ್ಟಡಗಳು, ರಸ್ತೆಗಳು, ಪಾರ್ಕುಗಳು, ಮಾಲುಗಳು, ಹೊಟೆಲುಗಳು, ಮನೆಗಳು, ನಾಗರಿಕ ಸೌಲಭ್ಯಗಳು ಇಂತಹವುಗಳ ವರ್ಣನೆಯನ್ನಷ್ಟೇ ಓದಿದ್ದವರಿಗೆ ಯಾಪಲಪರವಿಯವರ ಕೃತಿಯು ಪ್ರವಾಸಾನುಭವದ ಬೇರೊಂದು ಚಿತ್ರವನ್ನೇ ತೆರೆದಿಡುತ್ತದೆ.
ಪುಸ್ತಕವನ್ನು ಓದಲು ಪ್ರಾರಂಭಿಸುವ ಮುನ್ನ ನಾನೂ ಇಲ್ಲಿ ಇಂಗ್ಲೆಂಡಿನ ಐಷಾರಾಮಿ ಬದುಕಿನ ಚಿತ್ರಣವಿರುತ್ತದೆಯೆಂದೇ ಭಾವಿಸಿದ್ದೆ. ಪುಸ್ತಕದೊಳಗಿಳಿದ ಮೇಲೆ ಅನ್ನಿಸಿತು, ಈ ಪುಸ್ತಕದ ವಿಷಯವು ಒಬ್ಬ ಚಿಂತಕ, ನಿಷ್ಠುರವಾದಿ ಮತ್ತು ಸತ್ಯಾನ್ವೇಷಕನ ಕೈಗೆ ಸಿಕ್ಕಿ ಸಾರ್ಥಕತೆಯನ್ನು ಪಡೆದಿದೆ.
ಇಲ್ಲಿನ ಪ್ರಾರಂಭಿಕ ಪರಿಚ್ಛೇದಗಳು ಅಷ್ಟೊಂದು ಆಕರ್ಷಣೀಯವೆನಿಸದಿದ್ದರೂ ಆನಂತರದ ಸಮಯ ಪ್ರಜ್ಞೆ ಮತ್ತು ಲಕ್ಷುರಿ, ಹೌಸ್ ಆಫ್ ಕಾಮನ್ಸ್, ಗ್ಲೋಬ್ ಥಿಯೇಟರ್, ಷೇಕ್ಸ್ ಫಿಯರನ ಮಹಾಮನೆ, ಷೇಕ್ಸ್ ಫಿಯರನ ನಾಟಕಗಳ ವೈಭವ, ವೈದ್ಯ ಸೇವಕ-ರೋಗಿ ಯಜಮಾನ, ಮೆಡಿಕಲ್ ಕಾಲೇಜುಗಳ ಅಧ್ಯಯನ ವಿಸ್ತಾರ, ಆಕ್ಸ್‌ಫರ್ಡ್, ಬ್ಲಾಡಿಯನ್ ಗ್ರಂಥಾಲಯ, ಕ್ರೈಸ್ಟ್ ಚರ್ಚ್ ಕಾಲೇಜು ಮುಂತಾದವುಗಳನ್ನು ಕಂಡ ಅವರ ಅನುಭವಗಳು ನಮ್ಮನ್ನು ಆಯಾ ಸ್ಥಳಕ್ಕೆ ಕರೆದೊಯ್ದು ತೋರಿಸಿದಂತನಿಸುತ್ತದೆ. ನಾವು ಇಂಗ್ಲೆಂಡಿನವರಿಗಿಂತ ಯಾವ ಯಾವ ಕ್ಷೇತ್ರಗಳಲ್ಲಿ ಹಿಂದಿದ್ದೇವೆ, ಅವರಿಂದ ಕಲಿಯಬೇಕಾದದ್ದೇನಿದೆ ಎಂಬುದರ ಅರಿವೂ ನಮಗಾಗುತ್ತದೆ. ಅಲ್ಲಿನವರ ಚಿಂತನೆಗಳು, ಬದುಕಿನ ರೀತಿ, ಅವರ ಶಿಸ್ತು, ಸಮಯ ಪ್ರಜ್ಞೆ, ಐತಿಹಾಸಿಕ ಕಟ್ಟಡಗಳು ಮತ್ತು ವಸ್ತುಗಳು ಮತ್ತು ಅವುಗಳ ಮೇಲಿನ ಅವರ ಪ್ರೀತಿ, ಹಾಗೂ ಅವುಗಳ ನಿರ್ವಹಣೆ, ಅಲ್ಲಿನ ಶಿಕ್ಷಣ ಪದ್ದತಿ, ಬೃಹತ್ ಗ್ರಂಥಾಲಯಗಳು ಮೊದಲಾದವುಗಳನ್ನೋದಿದಾಗ ನಾವೆಲ್ಲಿ ಸೋತಿದ್ದೇವೆ, ನಮ್ಮ ಬಲ ಹೀನತೆ ಯಾವುದು ಎಂಬುದನ್ನೂ ಮಾರ್ಮಿಕವಾಗಿ ಚುಚ್ಚಿ ಹೇಳಲಾಗಿದೆ ಇಲ್ಲಿ.
ಇಂಗ್ಲೆಂಡಿನ ಶ್ರೀಮಂತ ಬದುಕಿನ ಚಿತ್ರಣವನ್ನು ಅಚ್ಚುಕಟ್ಟಾಗಿ ಬಿಡಿಸಿಯಾದ ಮೇಲೆ ಲಿಂಗಭೇದವಿಲ್ಲದ ಅಂಗ ಸಂಭೋಗ, ಮದುವೆ ಇಲ್ಲದ ದಾಂಪತ್ಯ, ಮನಸು ಕಟ್ಟುವ ಹುಡುಕಾಟ, ಮುಂತಾದ ಕೆಲವು ಪರಿಚ್ಛೇದಗಳಲ್ಲಿಇಂಗ್ಲೆಂಡಿನಲ್ಲಿ ಅವನತಿ ಕಾಣುತ್ತಿರುವ ಸಂಸಾರ ವ್ಯವಸ್ಥೆ, ಕಂಟ್ರಾಕ್ಟಿನಂತಿರುವ ದಾಂಪತ್ಯ ಸಂಬಂಧಗಳು, ಮುರಿದು ಹೋಗಿರುವ ಹೆತ್ತವರ ಮತ್ತು ಮಕ್ಕಳ ನಡುವಣ ಬೆಸುಗೆಗಳು, ಗೊತ್ತು ಗುರಿ ಕಾಣದ ಯುವಜನ, ಮುಕ್ತ ಲೈಂಗಿಕ ಸ್ವಾತಂತ್ರ್ಯ ಮತ್ತು ಮಾದಕ ದ್ರವ್ಯ ಸೇವನೆಗಳಲ್ಲಿ ಕೊಚ್ಚಿ ಹೋಗುತ್ತಿರುವ ಯುವಶಕ್ರಿ, ಈ ಸಮಸ್ಯೆಗಳಿಗೆ ಪರಿಹಾರ ಕಾಣದೆ ತಲ್ಲಣಿಸುತ್ತಿರುವ ಸರಕಾರ ಇವುಗಳನ್ನು ನಮ್ಮ ಕಣ್ಣಿಗೆ ಕಟ್ಟುವಂತೆ ವಿವರಿಸುತ್ತಾ ನೆರೆಮನೆಯ ಸುಡುತಿಹ ಬೆಂಕಿ ನಮ್ಮ ಮನೆಗೂ ಹಬ್ಬೀತೆಂಬ ಎಚ್ಚರಿಕೆಯ ಗಂಟೆಯನ್ನೂ ಬಾರಿಸಿದ್ದಾರೆ ಯಾಪಲಪರವಿಯವರು.
ಮಾನವೀಯ ಮೌಲ್ಯಗಳು ಕುಸಿದುಹೋಗುತ್ತಿರುವ ಮತ್ತು ಸಾಮಾಜಿಕ ವ್ಯವಸ್ಥೆಗಳು ಶಿಥಿಲವಾಗುತ್ತಿರುವ ಈ ಸಮಯದಲ್ಲಿ ನೆರೆಯವರನ್ನು ನೋಡಿ ಕೆಲವನ್ನು ಕಲಿಯುವ, ನೆರೆಯವರು ಎಡವಿರುವೆಡೆಗಳನ್ನು ಗುರುತಿಸಿ ನಾವು ಜಾಗೃತರಾಗುವ ಬಗ್ಗೆ ಚಿಂತಿಸಲು ಸಾಕಷ್ಟು ಗ್ರಾಸವನ್ನೊದಗಿಸುತ್ತದೆ ಈ ಕೃತಿ. ಈ ದೃಷ್ಟಿಯಲ್ಲಿ ಶ್ರೀ ಸಿದ್ದು ಬಿ ಯಾಪಲಪರವಿಯವರದು ಸ್ಥುತ್ಯಾರ್ಹ ಪ್ರಯತ್ನವೇ ಸರಿ.
- ವಿ ವಿ ಗೋಪಾಲ್