ಸಿದ್ದು ಬಿ ಯಾಪಲಪರವಿಯವರ ಎತ್ತಣ ಮಾಮರ ಎತ್ತಣ ಕೋಗಿಲೆ ಇಂಗ್ಲೆಂಡ್ ಪ್ರವಾಸ ಕಥನವನ್ನೋದಿದಾಗ ಒಂದು ಹೊಸ ಪ್ರಯೋಗವನ್ನು ಕಂಡ ಅನುಭವವಾಯ್ತು. ಸಾಮಾನ್ಯವಾಗಿ ಪ್ರವಾಸ ಕಥನಗಳಲ್ಲಿ ಒಂದು ಪ್ರದೇಶದಲ್ಲಿನ ಬೆಟ್ಟ, ಕಾಡು, ಕಣಿವೆ, ಹೊಳೆ, ಜಲಪಾತ, ನಗರಗಳು, ಅಲ್ಲಿನ ಕಟ್ಟಡಗಳು, ರಸ್ತೆಗಳು, ಪಾರ್ಕುಗಳು, ಮಾಲುಗಳು, ಹೊಟೆಲುಗಳು, ಮನೆಗಳು, ನಾಗರಿಕ ಸೌಲಭ್ಯಗಳು ಇಂತಹವುಗಳ ವರ್ಣನೆಯನ್ನಷ್ಟೇ ಓದಿದ್ದವರಿಗೆ ಯಾಪಲಪರವಿಯವರ ಕೃತಿಯು ಪ್ರವಾಸಾನುಭವದ ಬೇರೊಂದು ಚಿತ್ರವನ್ನೇ ತೆರೆದಿಡುತ್ತದೆ.
ಪುಸ್ತಕವನ್ನು ಓದಲು ಪ್ರಾರಂಭಿಸುವ ಮುನ್ನ ನಾನೂ ಇಲ್ಲಿ ಇಂಗ್ಲೆಂಡಿನ ಐಷಾರಾಮಿ ಬದುಕಿನ ಚಿತ್ರಣವಿರುತ್ತದೆಯೆಂದೇ ಭಾವಿಸಿದ್ದೆ. ಪುಸ್ತಕದೊಳಗಿಳಿದ ಮೇಲೆ ಅನ್ನಿಸಿತು, ಈ ಪುಸ್ತಕದ ವಿಷಯವು ಒಬ್ಬ ಚಿಂತಕ, ನಿಷ್ಠುರವಾದಿ ಮತ್ತು ಸತ್ಯಾನ್ವೇಷಕನ ಕೈಗೆ ಸಿಕ್ಕಿ ಸಾರ್ಥಕತೆಯನ್ನು ಪಡೆದಿದೆ.
ಇಲ್ಲಿನ ಪ್ರಾರಂಭಿಕ ಪರಿಚ್ಛೇದಗಳು ಅಷ್ಟೊಂದು ಆಕರ್ಷಣೀಯವೆನಿಸದಿದ್ದರೂ ಆನಂತರದ ಸಮಯ ಪ್ರಜ್ಞೆ ಮತ್ತು ಲಕ್ಷುರಿ, ಹೌಸ್ ಆಫ್ ಕಾಮನ್ಸ್, ಗ್ಲೋಬ್ ಥಿಯೇಟರ್, ಷೇಕ್ಸ್ ಫಿಯರನ ಮಹಾಮನೆ, ಷೇಕ್ಸ್ ಫಿಯರನ ನಾಟಕಗಳ ವೈಭವ, ವೈದ್ಯ ಸೇವಕ-ರೋಗಿ ಯಜಮಾನ, ಮೆಡಿಕಲ್ ಕಾಲೇಜುಗಳ ಅಧ್ಯಯನ ವಿಸ್ತಾರ, ಆಕ್ಸ್‌ಫರ್ಡ್, ಬ್ಲಾಡಿಯನ್ ಗ್ರಂಥಾಲಯ, ಕ್ರೈಸ್ಟ್ ಚರ್ಚ್ ಕಾಲೇಜು ಮುಂತಾದವುಗಳನ್ನು ಕಂಡ ಅವರ ಅನುಭವಗಳು ನಮ್ಮನ್ನು ಆಯಾ ಸ್ಥಳಕ್ಕೆ ಕರೆದೊಯ್ದು ತೋರಿಸಿದಂತನಿಸುತ್ತದೆ. ನಾವು ಇಂಗ್ಲೆಂಡಿನವರಿಗಿಂತ ಯಾವ ಯಾವ ಕ್ಷೇತ್ರಗಳಲ್ಲಿ ಹಿಂದಿದ್ದೇವೆ, ಅವರಿಂದ ಕಲಿಯಬೇಕಾದದ್ದೇನಿದೆ ಎಂಬುದರ ಅರಿವೂ ನಮಗಾಗುತ್ತದೆ. ಅಲ್ಲಿನವರ ಚಿಂತನೆಗಳು, ಬದುಕಿನ ರೀತಿ, ಅವರ ಶಿಸ್ತು, ಸಮಯ ಪ್ರಜ್ಞೆ, ಐತಿಹಾಸಿಕ ಕಟ್ಟಡಗಳು ಮತ್ತು ವಸ್ತುಗಳು ಮತ್ತು ಅವುಗಳ ಮೇಲಿನ ಅವರ ಪ್ರೀತಿ, ಹಾಗೂ ಅವುಗಳ ನಿರ್ವಹಣೆ, ಅಲ್ಲಿನ ಶಿಕ್ಷಣ ಪದ್ದತಿ, ಬೃಹತ್ ಗ್ರಂಥಾಲಯಗಳು ಮೊದಲಾದವುಗಳನ್ನೋದಿದಾಗ ನಾವೆಲ್ಲಿ ಸೋತಿದ್ದೇವೆ, ನಮ್ಮ ಬಲ ಹೀನತೆ ಯಾವುದು ಎಂಬುದನ್ನೂ ಮಾರ್ಮಿಕವಾಗಿ ಚುಚ್ಚಿ ಹೇಳಲಾಗಿದೆ ಇಲ್ಲಿ.
ಇಂಗ್ಲೆಂಡಿನ ಶ್ರೀಮಂತ ಬದುಕಿನ ಚಿತ್ರಣವನ್ನು ಅಚ್ಚುಕಟ್ಟಾಗಿ ಬಿಡಿಸಿಯಾದ ಮೇಲೆ ಲಿಂಗಭೇದವಿಲ್ಲದ ಅಂಗ ಸಂಭೋಗ, ಮದುವೆ ಇಲ್ಲದ ದಾಂಪತ್ಯ, ಮನಸು ಕಟ್ಟುವ ಹುಡುಕಾಟ, ಮುಂತಾದ ಕೆಲವು ಪರಿಚ್ಛೇದಗಳಲ್ಲಿಇಂಗ್ಲೆಂಡಿನಲ್ಲಿ ಅವನತಿ ಕಾಣುತ್ತಿರುವ ಸಂಸಾರ ವ್ಯವಸ್ಥೆ, ಕಂಟ್ರಾಕ್ಟಿನಂತಿರುವ ದಾಂಪತ್ಯ ಸಂಬಂಧಗಳು, ಮುರಿದು ಹೋಗಿರುವ ಹೆತ್ತವರ ಮತ್ತು ಮಕ್ಕಳ ನಡುವಣ ಬೆಸುಗೆಗಳು, ಗೊತ್ತು ಗುರಿ ಕಾಣದ ಯುವಜನ, ಮುಕ್ತ ಲೈಂಗಿಕ ಸ್ವಾತಂತ್ರ್ಯ ಮತ್ತು ಮಾದಕ ದ್ರವ್ಯ ಸೇವನೆಗಳಲ್ಲಿ ಕೊಚ್ಚಿ ಹೋಗುತ್ತಿರುವ ಯುವಶಕ್ರಿ, ಈ ಸಮಸ್ಯೆಗಳಿಗೆ ಪರಿಹಾರ ಕಾಣದೆ ತಲ್ಲಣಿಸುತ್ತಿರುವ ಸರಕಾರ ಇವುಗಳನ್ನು ನಮ್ಮ ಕಣ್ಣಿಗೆ ಕಟ್ಟುವಂತೆ ವಿವರಿಸುತ್ತಾ ನೆರೆಮನೆಯ ಸುಡುತಿಹ ಬೆಂಕಿ ನಮ್ಮ ಮನೆಗೂ ಹಬ್ಬೀತೆಂಬ ಎಚ್ಚರಿಕೆಯ ಗಂಟೆಯನ್ನೂ ಬಾರಿಸಿದ್ದಾರೆ ಯಾಪಲಪರವಿಯವರು.
ಮಾನವೀಯ ಮೌಲ್ಯಗಳು ಕುಸಿದುಹೋಗುತ್ತಿರುವ ಮತ್ತು ಸಾಮಾಜಿಕ ವ್ಯವಸ್ಥೆಗಳು ಶಿಥಿಲವಾಗುತ್ತಿರುವ ಈ ಸಮಯದಲ್ಲಿ ನೆರೆಯವರನ್ನು ನೋಡಿ ಕೆಲವನ್ನು ಕಲಿಯುವ, ನೆರೆಯವರು ಎಡವಿರುವೆಡೆಗಳನ್ನು ಗುರುತಿಸಿ ನಾವು ಜಾಗೃತರಾಗುವ ಬಗ್ಗೆ ಚಿಂತಿಸಲು ಸಾಕಷ್ಟು ಗ್ರಾಸವನ್ನೊದಗಿಸುತ್ತದೆ ಈ ಕೃತಿ. ಈ ದೃಷ್ಟಿಯಲ್ಲಿ ಶ್ರೀ ಸಿದ್ದು ಬಿ ಯಾಪಲಪರವಿಯವರದು ಸ್ಥುತ್ಯಾರ್ಹ ಪ್ರಯತ್ನವೇ ಸರಿ.
- ವಿ ವಿ ಗೋಪಾಲ್
No comments:
Post a Comment