Friday, December 29, 2017

ಬೇಡಲಾರೆ ಯಾರನೂ

*ಬೇಡಲಾರೆ ಯಾರನೂ*

ಬೇಡಲಾರೆ ನಾನಿನ್ನು ಬೇಡಿದರೆ
ವರವ ಯಾರೂ ಕೊಡುವುದಿಲ್ಲ

ಇವರು ನಮ್ಮವರು ಕೈ ಬಿಡ
ಲಾರರು ಎಂಬ ಭ್ರಮೆಯ
ಬದುಕಲಿ ನೂರೆಂಟು ಆಸೆ
ಭರವಸೆಗಳ ಲೆಕ್ಕಾಚಾರ

ಯಾರೂ ನಮ್ಮವರಲ್ಲದಿರೆಯೂ
ನಮ್ಮವರು ನಮಗೆ ಏನೆಲ್ಲ
ಆಗುತ್ತಾರೆಂಬ ಗಾಳಿ ಗೋಪುರದ
ಮೇಲೆ ಕಳಸವಿಟ್ಟು ಜಾತ್ರೆ
ಮಾಡಿ ತೇರನೆಳೆಯುವ ಹುಚ್ಚು

ನಮ್ಮವರೆನಿಸಿಕೊಂಡವರು ಒಮ್ಮೆ
ಮೇಲೆ ಹಾರಿದರೆ ಗಾಳಿಪಟ ಹಾರಿದ್ದೇ
ಹಾರಿದ್ದು ಪಾಪ ಪಟಕ್ಕೇನು ಗೊತ್ತು

ಪಟ ಹಾರಿಸುವವನ ಕೈ ಸೋತರೆ
ಎಳೆದಾನೆಂದು

ನಿನ್ಪಷ್ಟಕೆ ನೀ ನಡೆ ನಿನ್ನಿಷ್ಟದ ಹಾಗೆ
ಯಾರೂ ಇಲ್ಲಿ ಇಲ್ಲ ನಿನಗೆ ನೆರವಾಗಿ
ನೆರಳಾಗಿ ಕೈ ಹಿಡಿದು ಮುನ್ನಡೆಸಲು

ಏಳು ಎದ್ದೇಳು ಸಾಗು ನಿಧಾನದಿ ನಿನ್ನ
ವೇಗವ ನೀ ಅರಿತು

ಅಲ್ಲಿರಲಿ ಒಂದು
ಗುರಿ ಅದ ತಲುಪಲು ನೀ ತೆವಳುತ್ತ
ಏಳುತ್ತ ಒಮ್ಮೊಮ್ಮೆ ಬೀಳುತ್ತಲಾದರೂ
ನಡೆಯುವದ ಬಿಡಬೇಡ

ದಣಿವು ಹಸಿವು ಬಾಯಾರಿಕೆಯ
ಸಂಕಷ್ಟದಲಿಯೂ ಮಾಸದ
ನಗುವಿರಲಿ ಮೊಗದಲಿ

ಗಂಟು ಮುಖದ ಕಗ್ಗಂಟು ಕಳಚ
ಬಹುದು ಸುತ್ತಲಿನವರ ನಂಟು

ಬೇರೆಯವರ ನಂಟಿನ ಗಂಟನು
ನೆಚ್ಚದೆ ಬಿಚ್ಚದೆ ಬೆಚ್ಚದೆ ನಡೆ

ನಿನ್ನ
ಕಾಲುಗಳ ಮೇಲೆ ನಿನ್ನದೇ ಕಾಲ
ಕೂಡಿ ಬರುವವರೆಗೆ....

---ಸಿದ್ದು ಯಾಪಲಪರವಿ

Thursday, December 28, 2017

ಕಾಮಾಗ್ನಿ

*ಕಾಮಾಗ್ನಿ*

ಆಕಾಶ ಭೂಮಿ ಒಂದಾಗಿ ನಿಂತು
ಉರಿವ ಅಗ್ನಿಯ ಅಂಗೈಯಲಿ
ಹಿಡಿದು ಸಪ್ತ ಸರೋವರಗಳ
ನೀರ ಗಟ ಗಟನೆ ಕುಡಿದರೂ
ಇಂಗದ ದಾಹ
ಬತ್ತದ ತಳಮಳ

ಮನದಾಳದಲಿ ಭೋರ್ಗರೆಯುವ
ಬಯಕಗಳ ಹಂಗು ತೀರಿಸಿ
ಹಗುರಾಗಿ ಬೆತ್ತಲಾಗಿ ಬಯಲಲಿ
ಬಯಲಾಗಲು
ಬಂದು ಸೇರಬಾರದೇ ಬೇಗ

---ಸಿದ್ದು ಯಾಪಲಪರವಿ

Tuesday, December 26, 2017

ಚುಟುಕುಗಳು

1
ಬಾನಂಗಳದ ಕಾರ್ಗತ್ತಲಲಿ ಚಕ ಚಕನೆ ಹೊಳೆಯುವ
ನಕ್ಷತ್ರಗಳ ಮಧ್ಯೆ ಮಿನುಗುವ ಚಂದಿರ.

2
ಉರಿ ಬಿಸಿಲಲಿ ಬಳಲಿದ ಭೂಮಿ ತಣ್ಣಗಾಗಲು ಚಡಪಡಿಸುತಿರೆ  ಒಮ್ಮೆಲೇ ಜೋರಾಗಿ ಸುರಿವ ಮುಂಗಾರು.

3
ಹರಿವ ನದಿಗೆ ಒಮ್ಮೆಲೇ  ಉನ್ಮಾದವ ಹೆಚ್ಚಿಸಿ ವೇಗವಾಗಿ ಹರಿದು ಸಮುದ್ರ ಸೇರಿ ನಲಿಯಲು ದೊರೆಯುವ ತಿರುವು.

4
ಹೂ ಬಿಸಿಲಲಿ ಅರಳಿದ ಕೆಂದಾವರೆಯ ಮಿಲನ ಸ್ಪರ್ಷದುಲ್ಲಾಸಕೆ  ಹಾರಿ ಬರುವ  ದುಂಬಿ ನೀ.

5
ಬೆಳದಿಂಗಳಲಿ ಮೈದುಂಬಿ ನರ್ತಿಸುತ ಮಿಲನದೊಳಿರುವ
ಸರ್ಪಗಳ ಕಂಡು ಬೆಚ್ಚಿ ಚಡಪಡಿಸಿದ ಹಾವಾಡಿಗ.

6
ಮೈಕೊರೆಯುವ ಛಳಿಯಲಿ ಗಡ ಗಡನೆ ನಡುಗುವ
ಚಡಪಡಿಕೆಯ ದೂರಾಗಿಸಲು ಅವತರಿಸುವ ಅಗ್ನಿಕುಂಡ

    ----ಸಿದ್ದು ಯಾಪಲಪರವಿ

Saturday, December 23, 2017

Little champs

*ಭಾವ-ಗಾನ-ಧ್ಯಾನಗಳ ಸಮಾಗಮ: Sa Re Ga Ma Pa little champs*

ನನ್ನನ್ನು ಹಿಡಿದಿಟ್ಟು , ಅಳಿಸಿ , ನಗಿಸಿ ಗಂಟಲು ಬಿಗಿಯುವುವಂತೆ ಮಾಡುವ ದೃಶ್ಯ.

ಆಗೀಗ ಬರೆಯುತ್ತೇನೆ , ಕಾವ್ಯ ಮೊದಲ ಆಯ್ಕೆ. ಮೂವತ್ತು ವರ್ಷಗಳ ಸಾಧನೆಯ ನಂತರ ಈಗ ಕೊಂಚ ಹಿಡಿತ. ಆದರೆ  ಸಂಪೂರ್ಣ ಅಲ್ಲ.

ಸಂಗೀತಕ್ಕೆ ಕಾವ್ಯ-ಸಾಹಿತ್ಯ ಜೀವಾಳ.
ಪಂಚಾಕ್ಷರ ಗವಾಯಿಗಳ ಆಶ್ರಮದ ನನ್ನ ಸಂಪರ್ಕ. ಪೂಜ್ಯ ಪುಟ್ಟರಾಜ ಗವಾಯಿಗಳ ಮೇಲಿನ ಶೃದ್ಧೆ ಸಂಗೀತ ಆಸಕ್ತಿಯನ್ನು ಹೆಚ್ಚಿಸಿದೆ.

ಗಾನ-ಧ್ಯಾನ ಪೂರಕ.

ನನ್ನ ತರಬೇತಿಯಲ್ಲಿಯೂ ಹೇಳುವೆ ' ಸಾಧನೆಗೆ , ಖುಷಿಗೆ ಗಾನ-ಧ್ಯಾನ ಮುಖ್ಯ'.

ಸಂಗೀತ ಎಲ್ಲರಿಗೂ ಅರ್ಥವಾಗುವ, ಎಲ್ಲರನ್ನೂ ಆಕರ್ಷಿಸುವ *universal language*.

ಅರಸಿಕನ ಮನಸನೂ ಅರಳಿಸುವ ತಾಕತ್ತು.

ಇನ್ನು ಕೊಂಚ ತಿಳಿದಿದ್ದರೆ ಮುಗಿದೇ ಹೋಯಿತು.

*ಸ್ವರ್ಗ ಸುಖ,ಹೊಸ ಲೋಕ ದರ್ಶನ*.
Weekend ನಲ್ಲಿ ಊರಲ್ಲಿದ್ದರೆ ಆನಂದದಿ ನಗುತ್ತ-ಅಳುತ್ತ ಅನುಭವಿಸುವ ಪರಮಾನಂದವೇ little champs.

Zee ಕನ್ನಡವರು ತುಂಬ ಜಾಣರು , ಜನರ ನಾಡಿಮಿಡಿತ ಬಲ್ಲವರು.
ವೈಭವೀಕರಿಸಿ ಎಲ್ಲದನ್ನು ಉಣ ಬಡಿಸುತ್ತಾರೆ.

ಅದರಲ್ಲೂ ಮಕ್ಕಳಿದ್ದರೆ ಎಲ್ಲವೂ ಅಂದ-ಚಂದ.
ಇಲ್ಲಿ ಎತ್ತರಕ್ಕೆ ಏರಿದ ಸಾಧಕರು involve ಆಗಿ ಮಕ್ಕಳ ಜೊತೆ ಭಾವನಾತ್ಮಕ ವಾತಾವರಣ ಸೃಷ್ಟಿಸುತ್ತಾರೆ.

ನಿರೂಪಕಿ ಅನುಶ್ರೀ ಪ್ರಮುಖ ಆಕರ್ಷಣೆ. ಕೊಂಚ ಅತೀ ಅನಿಸಿದರೂ ಸಾಮಾನ್ಯರ ಗಮನ ಸೆಳೆಯಲು ಅನಿವಾರ್ಯ ಕೂಡಾ ! Just commercial !!

VP- ವಿಜಯಪ್ರಕಾಶ  ಹಾಗೂ ಅರ್ಜುನ ಜನ್ಯ , ಜುರಿಗಳು , ವಾರದ ಅತಿಥಿ ಹಾಗೂ ಹಂಸಲೇಖ ಎಲ್ಲರೂ  wonderful and ultimate. ಅವರದು ಮಕ್ಕಳೊಡನೆ ಮುದ್ದು ಮಕ್ಕಳಾಗಿ ಬೆರೆಯುವ ಅನನ್ಯತೆ.

ಮಕ್ಕಳ ಪ್ರತಿಭೆಯನ್ನು ಅಭಿವ್ಯಕ್ತಗೊಳಿಸಲು ಕೋಟಿಗಟ್ಟಲೆ ಹಣ ಸುರಿದು , ಕೋಟಿಗಟ್ಟಲೆ ಜನರಿಗೆ ತಲುಪಿಸಿ , ಕೋಟಿಗಟ್ಟಲೆ ಗಳಿಸುವ ರಾಘವೇಂದ್ರ ಹುಣಸೂರ ತಂಡದವರ ಪರಿಕಲ್ಪನೆ ಅನುಪಮ.

ಸಂಗೀತದ ಯಶಸ್ವಿ ಪಯಣ ಹಾಗೂ ಒಳಪಟ್ಟುಗಳನ್ನು ಜನಸಾಮಾನ್ಯರಿಗೆ ತಿಳಿಯುವಂತೆ ಆಗಾಗ ವಿವರಿಸುವದು ಇನ್ನೂ ವಿಶೇಷ.

ಸುಮ್ಮನೇ ಹಾಡನ್ನು enjoy ಮಾಡುವ ನಾವು ಹಿಂದಿರುವ ಶ್ರಮದ ಕುರಿತು ತಲೆ ಕೆಡಿಸಿಕೊಳ್ಳುವುದಿಲ್ಲ.

ಹಾಡಿಗೆ ಇರಬೇಕಾದ ಧ್ಯಾನಸ್ಥ ಸಾಧನೆ ಕುರಿತು  ಹೇಳುವುದು , ಕೆಲವು ಘಟನೆಗಳ ಭಾವುಕ ಸಂಗತಿಗಳನ್ನು ಸಿನಿಮೀಯವಾಗಿ ತೋರಿಸಿ ಅಳುವಂತೆ ಮಾಡುವುದು, ಅದಕ್ಕೆ ಬೇಕಾಗುವ ರೀತಿಯಲ್ಲಿ script ತಯಾರಿಸಿ , ಅದನ್ನು ಅಷ್ಟೇ ರಸವತ್ತಾಗಿ present ಮಾಡುವುದು ಎಲ್ಲರನ್ನೂ ಬೇರೆ ಜಗತ್ತಿಗೆ ಕೊಂಡೊಯ್ಯುತ್ತದೆ.

ಹಣದ ವ್ಯವಹಾರ ಇದ್ದರೂ ಹೆಚ್ಚು involvement ಇರುವುದರಿಂದ commercial ಅನಿಸುವುದಿಲ್ಲ.

ಗ್ರಾಮೀಣ , ಅಸಹಾಯಕ ಪ್ರತಿಭೆಗಳಿಗೆ ಸೂಕ್ತ , ನಿಷ್ಪಕ್ಷಪಾತ ವೇದಿಕೆಯೂ ಹೌದು.

' ಅಯ್ಯೋ time waste ' ಎಂದು ಗೊಣಗದೇ , ನಿಜವಾಗ್ಲೂ ಬಿಡುವಿದ್ದರೆ ಈ ಕಾರ್ಯಕ್ರಮ ನೋಡಿ .

ಬೆಟ್ಟಿಂಗ್ ದಂಧೆ ಸೃಷ್ಟಿ ಮಾಡುವ ಕ್ರಿಕೆಟ್ ಆಟ ನೋಡುವ ನಾವು ಕೊಂಚ ಭಿನ್ನವಾಗಿ ಖುಷಿ ಕೊಟ್ಟು ಮೈಮರೆಸುವ ಕಾರ್ಯಕ್ರಮಗಳ ಕಡೆ ತಿರುಗಿ ನೋಡೋಣ. ಇಲ್ಲದಿದ್ದರೆ ಎಲ್ಲವೂ *Waste*.

---ಸಿದ್ದು ಯಾಪಲಪರವಿ.

Thursday, December 21, 2017

ಹಟ ಬೇಡ ನಾ ಕಾಲಜ್ಞಾನಿ‌ ಅಲ್ಲ

*ಲವ್ ಕಾಲ*

*ಹಟ ಬೇಡ ನಾ ಕಾಲಜ್ಞಾನಿ ಅಲ್ಲ*

ಈ ಪ್ರೀತಿಯ ವಾಂಛೆ. ಏನೇನು ಹೇಳೋಕೆ ಬರೋದಿಲ್ಲ.

ಉಸಿರಿನ ಹಾಗೆ ಪ್ರೀತಿಸುವ ಹುಚ್ಚು.
ಒಮ್ಮೊಮ್ಮೆ ಇನ್ನಿಲ್ಲದ ಕೋಪ-ತಾಪ-ಜಗಳ. ಅದೂ ಬಹಳ ಕಾಲ ಇರುವುದಿಲ್ಲ .

ಎಲ್ಲಿ ನೊಂದುಕೊಂಡು ಕೊರಗುತ್ತೀಯಾ ಎಂಬ ಆತಂಕ. ಮತ್ತದೇ ಉತ್ಕಟತೆ.

ಕಾಳಜಿಯಿಂದ ಹೇಳಿದ ಮಾತುಗಳನ್ನು ಕೇಳದ ನಿನ್ನ ಹಟಮಾರಿತನದಿಂದ ರೋಸಿ ಹೋಗಿದ್ದೇನೆ .

ನನ್ನ ಉದ್ದೇಶ ಅರ್ಥ ಮಾಡಿಕೊಳ್ಳಲಾಗದ ನಿನ್ನ ಅಪಾರ್ಥ ಮಾಡಿಕೊಳ್ಳುವ ಇಬ್ಬಂದಿತನ, ಯಾರದೋ ಮುಲಾಜಿಗೆ ಬೀಳುವ ಅಮಾಯಕತೆ , ನಂಬಿ ಒದ್ದಾಡುವ ಅಸಹಾಯಕತೆಗೆ ಏನು ಹೇಳಲಿ ?

ಆದರೂ ತುಂಬಾ ನಿಷ್ಟುರವಾಗಿ ಮಾತನಾಡಿ ನನ್ನ ಪ್ರೀತಿಯ ಪಣಕ್ಕಿಟ್ಟರೂ ಲೆಕ್ಕಿಸದ ನಿನ್ನ ಧೋರಣೆಗೆ ಕಾರಣ ತಿಳಿಯುತ್ತಿಲ್ಲ.

ಅನಾರೋಗ್ಯ , ಅನೇಕ ಒತ್ತಡಗಳ ನಡುವೆ ಮುಖವಾಡ ಹಾಕಿಕೊಂಡ ಸೋಗಲಾಡಿಯೊಬ್ಬ ಕರೆದ ಕಾರ್ಯಕ್ರಮಕ್ಕೆ ನಿನ್ನನ್ನು ಕಳಿಸುವ ಮನಸ್ಸಿರಲಿಲ್ಲ ಆದರೂ ನೀನು ಹೋಗಲೇಬೇಕು ಅಂದಾಗ ಕಂಗಾಲಾದೆ.

ಬುದ್ಧಿ ಸಂಯಮ ಕಳೆದುಕೊಂಡು , ಮನಸ್ಸು ವ್ಯಗ್ರವಾಯಿತು.

ಮನಸು ಮುರಿದುಕೊಳ್ಳುವುದು ದೊಡ್ಡದಲ್ಲ , ನಿನ್ನ ಅಜ್ಞಾನಕೆ ಮರುಗಿ ನಾನೇ ಸಹಿಸಿಕೊಂಡೆ.

ಪ್ರೀತಿ ಎಲ್ಲವನ್ನೂ ಸಹಿಸುತ್ತದೆ ಎಂಬುದ ನಿರೂಪಿಸುವ ಹುಚ್ಚನಂತೆ !

ಗಾಢವಾಗಿ ಪ್ರೀತಿಸುವ ವ್ಯಕ್ತಿಗೆ ಅತೀಂದ್ರಿಯ ಶಕ್ತಿಯನ್ನು ಭಗವಂತ ಕರುಣಿಸಿರುತ್ತಾನೆ.

ಆ ಕಾಳಜಿ ಇಟ್ಟುಕೊಂಡು ಹೇಳಿದ ಮಾತುಗಳನ್ನು ನೀನು ಲೆಕ್ಕಿಸಲೇ ಇದ್ದಾಗ ಮರುಕಪಟ್ಟೆ.

ನಾನು ಕಾಲಜ್ಞಾನಿಯಲ್ಲ ಆದರೂ ನಿನಗಿಂತ ಹೆಚ್ಚು ಲೋಕಜ್ಞಾನ ಇದೆ.

ಎದುರಿಗೆ ಸುಂದರವಾಗಿ ಮಾತನಾಡಿ ಮುಖ ನೋಡಿ ಹಲ್ಲು ಕಿರಿಯುವ , ಮಾತಲ್ಲಿ ಮರ ಹತ್ತಿಸಿ ಮೋಜು ನೋಡುವ ಹಕನಾಕುಗಳ ಹರಾಮಿತನ ನಿನಗೆ ಬೇಗ ತಿಳಿದಷ್ಟು ಕ್ಷೇಮ.

ಯಾರನ್ನೂ ಬೆಳೆಸದ , ಬೆಳೆಯುವುದನ್ನು ಸಹಿಸದ ಜನರ ಮಧ್ಯೆ ನಾವು ನಮ್ಮ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು.

*ಕಾಲ ಹಾಗೂ ಪ್ರೀತಿಸುವ ವ್ಯಕ್ತಿಗಳು* ಮಾಯವಾಗುವ ಮುನ್ನ ಎಚ್ಚತ್ತುಕೊಂಡು ಜೊಳ್ಳ ತೂರಿ , ಗಟ್ಟಿ ಕಾಳ ಕಾಪಾಡಿಕೊಳ್ಳಬೇಕು.

ಇಲ್ಲದಿರೆ ಪ್ರೀತಿಯ *ಬರದಲಿ* ಬಾಡಬೇಕಾದೀತು.

ಪ್ರೀತಿಸೌಧ ಒಮ್ಮೆಲೆ  ಕುಸಿಯವುದು ಬೇಡ ಎಂಬ ಕಾರಣಕ್ಕೆ ಎಲ್ಲ ಸಹಿಸಿಕೊಂಡಿರುವೆ.

ನನ್ನ ಸಹನೆ ದೌರ್ಬಲ್ಯವಲ್ಲ. ದಿವ್ಯಶಕ್ತಿ.

ನೀನೂ ಪರಿವರ್ತನೆಯಾಗುವೆ ಎಂಬ ಭರವಸೆಯಿಂದ ಕಾಯುತ್ತೇನೆ.

ಕರುಳು ಕತ್ತರಿಸುವ ತನಕ.

ಮುಖವಾಡ ನೋಡದೇ ಮುಖ ನೋಡು.
ಮರುಳ ಮಾತು ಕೇಳದೇ ಮನಸು ನೋಡು.

---ಸಿದ್ದು ಯಾಪಲಪರವಿ.

Monday, December 18, 2017

ಓಲೆ-17

ಕನಸಿಗೊಂದು ಓಲೆ

ಓಲೆ-17

ಹಲೋ ಚಿನ್ನು ,

ನಿನ್ನ ಆಧ್ಯಾತ್ಮದ ಕುರಿತು ಮಾತನಾಡಿದ ಗೆಳೆಯರು ಈಶ್ವರಿ ವಿಶ್ವವಿದ್ಯಾಲಯದ ಮೌಲ್ಯಗಳ ಬಗ್ಗೆ ವಿವರಿಸುವಾಗ detachment ಮಹತ್ವ ವಿವರಿಸಿ ಮನದ ಮಾತುಗಳ ಹೊಗಳಿದರು.

ಅವರ ಹೊಗಳಿಕೆಯಿಂದ ನಾನೇನು ಪುಳಕಗೊಳ್ಳಲಿಲ್ಲ. I'm detached towards appreciation.

''ನಾವು ನಮ್ಮ ಸಂಬಂಧಗಳು ಹಾಗೂ ಅವರಿಗೆ ಬರುವ ಕಷ್ಟಗಳ ಕುರಿತು ವೃಥಾ ಚಿಂತಿಸುವ ಅಗತ್ಯವಿಲ್ಲ ಅದೂ ಕರ್ಮ' ಎಂಬ ಅವರ ವಿವರಗಳನ್ನು ಆಲಿಸಿದೆ.

ಆದರೆ ಯಾವುದೇ ನೋವುಗಳು ವೈಯಕ್ತಿಕ ನೆಲೆಯಲ್ಲಿ ದಾಳಿ ಮಾಡಿದಾಗ ನಮ್ಮ ಎಲ್ಲ ಸಿದ್ಧಾಂತ ಹಾಗೂ ಮೌಲ್ಯಗಳು ಮಂಕಾಗಿ ಚಿಂತೆ ಮಾಡುವುದು ಮನುಷ್ಯನ ಮಿತಿ ಆದರೆ ನಾವು ಆ ಮಿತಿಯನ್ನು ಇಟ್ಟುಕೊಂಡೇ ಬಂದದ್ದುನ್ನು ಸಹನೆಯಿಂದ ಎದೆಗುಂದದೆ ಎದುರಿಸಲೇಬೇಕು.

ಆ ನೋವಿಗೆ ಪರೋಕ್ಷವಾಗಿ ನಮ್ಮ ಕೆಲವು ತಪ್ಪು ನಿರ್ಧಾರಗಳು ಕಾರಣವಾಗಿರುತ್ತವೆ ಎಂಬುದನ್ನು ನೆನಪಿಸಿಕೊಂಡು ನಮ್ಮನ್ನು ನಾವೇ ಸಂತೈಸಿಕೊಳ್ಳಬೇಕು.

Detachment ಎಲ್ಲ ಘಟನೆಗಳ ನೋವು ನಿವಾರಣೆಗೆ ಮೂಲ ಮಂತ್ರ ಆದರೆ ಕೇವಲ ಸಾಧನೆಯಿಂದ ಮಾತ್ರ ಈ ನಿರ್ಲಿಪ್ತತೆಯನ್ನು ರೂಢಿಸಿಕೊಳ್ಳಬಹುದು.

ನಾವು ಅಂದುಕೊಂಡಂತೆ ನಮಗೆ ಬೇಕಾದವರು ಇರಲಿ ಎಂದು ಬಯಸುವದೇ ವ್ಯಾಮೋಹ , ಆ ವ್ಯಾಮೋಹ ಹಾಗೂ ಭಿನ್ನಾಭಿಪ್ರಾಯ �ನಮ್ಮ ನೋವಿನ ಮೂಲ.

ಮೂಲ ಗೊತ್ತಾದ ಮೇಲಾದರೂ ಖುಷಿಯಾಗಿ ಇರಬೇಕು.

ಆ ಹಂತವನ್ನು ನಿಧಾನವಾಗಿ ತಲುಪೋಣ.

ನಿನ್ನೆ ಅಚಾನಕ್ ಆಗಿ ಒಬ್ಬರು ಹೋಗಿದ್ದರಿಂದ ಈ ಮಾತು ಹೆಚ್ಚು ಪೂರಕವೆನಿಸಿತು.

ನಿನ್ನ ಪ್ರೀತಿಯ

ಅಲೆಮಾರಿ

( ಸಿದ್ದು ಯಾಪಲಪರವಿ )

18-12-2017

Saturday, December 16, 2017

ಹುಸಿ ಮುನಿಸು ಇರಲಿ‌ ಆದರೆ...

*ಲವ್ ಕಾಲ*

*ಹುಸಿ ಮುನಿಸು ಇರಲಿ ಆದರೆ...*

ತುಂಬ ಪ್ರಯಾಸ ಹಾಗೂ ಪ್ರಯತ್ನದ ಪ್ರತಿಫಲವಾಗಿ ಈ ಸಂಬಂಧ.
ಬದುಕಿನ ಆಶಯ-ಆಲೋಚನೆ ಒಟ್ಟಾರೆ ಖುಷಿಯಾಗಿರೋದು ಅದಕ್ಕಾಗಿ ನಾವು ಪರಸ್ಪರ ಸಹಿಸಿಕೊಂಡಿರುತ್ತೇವೆ.

ಪ್ರೀತಿ ಬದುಕಿನ ಜೀವಧಾತು. ಅತಿಯಾದ ಪ್ರೀತಿಯಲಿ ಎಲ್ಲವೂ ಕೊಂಚ ಅತಿರೇಕ.
ಅತಿಯಾದಾಗ possessiveness , ಅದು ಮುಂದೆ ಕೊಂಚ ಅನುಮಾನ- ಎಲ್ಲಿ ಕಳೆದುಕೊಂಡು ಬಿಡುತ್ತೇನೋ ಎಂಬ ತಲ್ಲಣ-ಚಡಪಡಿಕೆ.

ಪ್ರೀತಿ ಬಯಸುವ ಜೀವ ಇದನ್ನು ಅರ್ಥಮಾಡಿಕೊಂಡು ಸಹಿಸಿಕೊಳ್ಳಬೇಕು. ಮನಸು ಮಾತು ಒರಟಾಗಬಾರದು ಒಗಟಾಗಬೇಕು.

*ಬಿಸಿಯಪ್ಪುಗೆ , ಪಿಸುಮಾತುಗಳ ಮಿಲನಕೆ ಬಯಸುವ ಮನಸು ಕೊಂಚ ದೂರಾದಾಗ ವಿಚಲಿತವಾಗಿ ಚಡಪಡಿಸುವುದು ಸಹಜ*.

ಜಗಳ,ಹಟ,ಹುಸಿಮುನಿಸು,ಸಂಶಯ,ಕಾಳಜಿ,ಕಿರಿಕಿರಿ,
ಅಳು,ನಗು,ರಮಿಸಿ ಮುದ್ದಾಡೋದು  ಎಲ್ಲಾ ಒಟ್ಟಿಗೆ ಕಟ್ಟೆ ಒಡೆದ ಭಾವ ಕೆರೆ.

ಅದರಲ್ಲೂ ಇನ್ನಿಲ್ಲದ ಹಿತ.

ಭಾರವಾಗಿ ಭಯಭೀತಗೊಂಡ ಮನಸಿಗೆ ಮತ್ತೆ ಮರುಕಿಸುವ ನಿರಾಳ.
ಯಾವುದು ಖರೆ ಪ್ರೀತಿಯೋ,ಜಗಳವೋ, ಸಂಶಯವೋ.

ಎಲ್ಲವೂ ಖರೆ:ಎಲ್ಲವೂ ಸುಳ್ಳು.

ಅತ್ತು ರಮಿಸಲು ನಮ್ಮನ್ನು ಬಿಟ್ಟು ಬೇರೆ ಯಾರೂ ಇಲ್ಲ ಬಾ ಅಂದಾಗ
*ಮೆಲ್ಲುಸಿರೇ ಸವಿಗಾನ*.

---ಸಿದ್ದು ಯಾಪಲಪರವಿ

Friday, December 8, 2017

ವಾಸ್ತವದಲೆ

ವಾಸ್ತವದಲೆ

ಮೈತುಂಬಾ ಹರಿದಾಡಿ ಸಣ್ಣಪುಟ್ಟ
ಹಿತಕರ ಗಾಯ ಮಾಡಿ ಮನದಾಳದಲಿ
ತಳ ಹೂಡಿ ನೀ
ಹೀಗೆ ಮಾಯವಾಗಬಹುದು ಎಂದು
ನಿನಗೆ ಮಾತ್ರ ಗೊತ್ತು

ನಾ
ಕತ್ತಲಲಿ ಧ್ವನಿ ಹಿಡಿದು , ಬೆಳಕಲಿ
ವಾಸನೆ ಹಿಡಿದು ಕನವರಿಸುತ್ತ ನೀ
ಬರುವೆ ಎಂಬ ಚಿತ್ತದಲಿ ಮತ್ತೆ
ಮತ್ತೆ ಕೆರೆದ ಗಾಯವ ಕೆರೆಯುತ್ತ
ಗಾಯ ಮಾಯಲಿಲ್ಲ ಎಂದು ಹಲುಬುತ್ತೇನೆ

ವಾಸ್ತವ ಲೋಕದಿ ಒಮ್ಮೊಮ್ಮೆ ಬದುಕೇ
ಹೀಗೆ ಕೊಳೆಯಾದ ಬಟ್ಟೆ ಕಳಚಿ ಬಿಸಾಡಿದ
ಹಾಗೆ
ಒಗೆದು ಗಂಜಿ ಹಾಕಿ  ಇಸ್ತ್ರೀ ಮಾಡಿ ಮತ್ತೆ
ನೀ ತೊಡಬಹುದು ಎಂಬ ಭ್ರಮಾಲೋಕ

ನೀ ಒಗೆದದ್ದು ಕೊಳೆಯಾದುದಕೆ ಅಲ್ಲ
ಬಣ್ಣ ಮಾಸಿದೆ ಎಂದು ಸಾಕಾಗಿ

ಹೋಗಲಿ ಬಿಡು ಜಗದ ಮಾರುಕಟ್ಟೆಯಲಿ
ಈಗ ನೂರಾರು ಹೊಸ ಮಾಲುಗಳು ಕೊಂಡು
ಧರಿಸುವ ನಿನ್ನಾಸೆಗೆ ನೀರೆರೆಯಲಾರೆ

ನನದು ನನಗೆ ಸರಿ ನಿನದು ನಿನಗೆ ಸರಿ
ಒಟ್ಟಿನಲಿ ಇದೇ ಈ ಬಾಳಿನ ಪರಿ

ನೋವು , ಹತಾಶೆ , ನಿರಾಸೆಯ ಮನಕೆ
ನೂರೆಂಟು ಗಲಿಬಿಲಿ ಕರಡಿಯ ಬಿಗಿ ಹಿಡಿತವ
ಬಿಡಿಸಿಕೊಳಲು ಒಂದಷ್ಟು ಕಚಗುಳಿ

ಬಾಳ ಹಾದಿಯಲಿ ಬಿಸಿಲಿಗೆ ದಣಿದವರು
ಪಯಣ ಮೊಟುಕುಗೊಳಿಸಿದರೆ
ನಿನಗೇಕೆ ಧಾವಂತ  ಬಿಡು
ಚಿಂತೆ

ನಿನ್ನ ಹಾದಿ ನೀ ಹಿಡಿದು ಮತ್ತೆ ಸಿಗುವ
ದಾರಿ ಹೋಕರ ಮಾತಿಗೆಳೆಯದೆ
ಮಾತಿಗಿಳಿಯದೇ ಮೌನದೀ ಸಾಗು

ಇಲ್ಲದಿರೆ ತಲುಪುವ ಗುರಿ ದೂರಾದೀತು ಜೋಕೆ
ಭ್ರಮೆಯನೊಮ್ಮೆ ಕೊಡವಿ ಹಗುರಾಗಿ
ಕಾಲು ಜಾಡಿಸಿ ಕೊಂಚ ದಣಿವಾರಿಸಿಕೊಂಡು
ನಡೆ ನಡೆ ಮುಂದೆ ಮುಂದೆ...

----ಸಿದ್ದು ಯಾಪಲಪರವಿ

Monday, December 4, 2017

ಕೈ ಹಿಡಿದು ನಡೆಸು ತಂದೆ

*ಕೈ ಹಿಡಿದು ನಡೆಸು ತಂದೆ*

ಹುಟ್ಟಿದಾಗ ಬಾಯಲ್ಲಿ ಇಟ್ಟ
ಬಂಗಾರದ ಚಮಚೆ ಹಾಲು ತುಂಬಿದ 
ಬೆಳ್ಳಿಯ ಬಟ್ಟಲು ಕಲಸಿದ ಗೋಡಂಬಿ
ಸಕ್ಕರೆಯ ತುಂಬ ಬರೀ ಅಕ್ಕರೆ

ನಸುನಗುತ ಬೆಳೆದ ಬಾಲ್ಯದ ಸಿರಿಸಂಪದ
ಈಗೊಂದು ಹೀಗೊಂದು ಬರೀ ನೆನಪು

ಮುಂದೆ ಸಿರಿಯೊಳಡಗಿದ ಬಡತನ
ಹೇಳಲು ತೋರಲು ಎಲ್ಲವೂ ಉಂಟು
ಆದರೆ ಬರಿಗೈ ದಾಸನಾಗಿ ಅಲೆಯುವ
ಖಾಲಿ ಕೈ ಫಕೀರ

ಹೋರಾಟ ನೋವ ನುಂಗುತ ಸಾಗಿದ
ಪಯಣದಲಿ ದಣಿವರಿಯದ ಧಣಿತನದ
ಮೆರುಗಿನ ಮುಸುಕು

ಆರ್ಧ ಹಾದಿ ಸಾಗಿದರೂ ನಿಲ್ಲದ ಹೋ
ರಾಟ ಒಂಟಿ ದುಃಖಕೆ ಇಲ್ಲ ಯಾರ ಸಾಧ್

ಹಾಡಬೇಕು ನಲಿಯಬೇಕು ಅಪ್ಪ
ಹೊರಿಸಿದ ನೊಗ ಹೊರಬೇಕು
ಹೊಲ ಹರಗಬೇಕು ಕಳೆ ತೆಗೀಬೇಕು
ಬೆಳಿ ಬೆಳೀಬೇಕು

ಸಾಕೀ ಧಣಿತನದ ಮುಖವಾಡ ಅಂಗಲಾಚಿ
ಬೇಡಬೇಕು ಮಹಾ ದೇವನ
ಕೊಡು ತಂದೆ ಹಿಡಿ ತುಂಬ ಹಿಡಿ
ಹಿಡಿ ರೊಕ್ಕ ಕರಗಿ ನೀರಾಗಲು

ದುಃಖ-ದುಮ್ಮಾನ  ದುಗುಡ

ಇನ್ನೆಷ್ಟು ದಿನ ಈ ಅಗ್ನಿಪರೀಕ್ಷೆ ಸೋತು
ಕರಕಲಾಗದೇ ಎದ್ದು ಹೋದರು ನಮ್ಮ
ಹಿರಿಯರು ಸೋಲನೊಪ್ಪದೇ ಅಪ್ಪದೇ
ಕೊಟ್ಟ ಮಾತು ತಪ್ಪದೇ

ಕೈಕಾಲು ದಣಿದಿರಲು ದಾರಿ ಸಾಗೀತು
ಹೇಗೆ ? ನಗು ಅರಳುವದಾದರೂ ಹೇಗೆ ?

ಮಾತು ಮೌನವಾಗುವ ಮುನ್ನ
ಉಸಿರು ನಿಟ್ಟುಸಿರಾಗಿ ನಿಲುವ
ಮೊದಲೇ ಕೃಪೆ ಮಾಡು
ತಂದೆ ನಾ ಕಾಲನ ಹೊಡೆತಕೆ ಸಿಕ್ಕು
ನಲುಗಿ ನರಳುವ ಮುನ್ನ.

---ಸಿದ್ದು ಯಾಪಲಪರವಿ