ವಾಸ್ತವದಲೆ
ಮೈತುಂಬಾ ಹರಿದಾಡಿ ಸಣ್ಣಪುಟ್ಟ
ಹಿತಕರ ಗಾಯ ಮಾಡಿ ಮನದಾಳದಲಿ
ತಳ ಹೂಡಿ ನೀ
ಹೀಗೆ ಮಾಯವಾಗಬಹುದು ಎಂದು
ನಿನಗೆ ಮಾತ್ರ ಗೊತ್ತು
ನಾ
ಕತ್ತಲಲಿ ಧ್ವನಿ ಹಿಡಿದು , ಬೆಳಕಲಿ
ವಾಸನೆ ಹಿಡಿದು ಕನವರಿಸುತ್ತ ನೀ
ಬರುವೆ ಎಂಬ ಚಿತ್ತದಲಿ ಮತ್ತೆ
ಮತ್ತೆ ಕೆರೆದ ಗಾಯವ ಕೆರೆಯುತ್ತ
ಗಾಯ ಮಾಯಲಿಲ್ಲ ಎಂದು ಹಲುಬುತ್ತೇನೆ
ವಾಸ್ತವ ಲೋಕದಿ ಒಮ್ಮೊಮ್ಮೆ ಬದುಕೇ
ಹೀಗೆ ಕೊಳೆಯಾದ ಬಟ್ಟೆ ಕಳಚಿ ಬಿಸಾಡಿದ
ಹಾಗೆ
ಒಗೆದು ಗಂಜಿ ಹಾಕಿ ಇಸ್ತ್ರೀ ಮಾಡಿ ಮತ್ತೆ
ನೀ ತೊಡಬಹುದು ಎಂಬ ಭ್ರಮಾಲೋಕ
ನೀ ಒಗೆದದ್ದು ಕೊಳೆಯಾದುದಕೆ ಅಲ್ಲ
ಬಣ್ಣ ಮಾಸಿದೆ ಎಂದು ಸಾಕಾಗಿ
ಹೋಗಲಿ ಬಿಡು ಜಗದ ಮಾರುಕಟ್ಟೆಯಲಿ
ಈಗ ನೂರಾರು ಹೊಸ ಮಾಲುಗಳು ಕೊಂಡು
ಧರಿಸುವ ನಿನ್ನಾಸೆಗೆ ನೀರೆರೆಯಲಾರೆ
ನನದು ನನಗೆ ಸರಿ ನಿನದು ನಿನಗೆ ಸರಿ
ಒಟ್ಟಿನಲಿ ಇದೇ ಈ ಬಾಳಿನ ಪರಿ
ನೋವು , ಹತಾಶೆ , ನಿರಾಸೆಯ ಮನಕೆ
ನೂರೆಂಟು ಗಲಿಬಿಲಿ ಕರಡಿಯ ಬಿಗಿ ಹಿಡಿತವ
ಬಿಡಿಸಿಕೊಳಲು ಒಂದಷ್ಟು ಕಚಗುಳಿ
ಬಾಳ ಹಾದಿಯಲಿ ಬಿಸಿಲಿಗೆ ದಣಿದವರು
ಪಯಣ ಮೊಟುಕುಗೊಳಿಸಿದರೆ
ನಿನಗೇಕೆ ಧಾವಂತ ಬಿಡು
ಚಿಂತೆ
ನಿನ್ನ ಹಾದಿ ನೀ ಹಿಡಿದು ಮತ್ತೆ ಸಿಗುವ
ದಾರಿ ಹೋಕರ ಮಾತಿಗೆಳೆಯದೆ
ಮಾತಿಗಿಳಿಯದೇ ಮೌನದೀ ಸಾಗು
ಇಲ್ಲದಿರೆ ತಲುಪುವ ಗುರಿ ದೂರಾದೀತು ಜೋಕೆ
ಭ್ರಮೆಯನೊಮ್ಮೆ ಕೊಡವಿ ಹಗುರಾಗಿ
ಕಾಲು ಜಾಡಿಸಿ ಕೊಂಚ ದಣಿವಾರಿಸಿಕೊಂಡು
ನಡೆ ನಡೆ ಮುಂದೆ ಮುಂದೆ...
----ಸಿದ್ದು ಯಾಪಲಪರವಿ
No comments:
Post a Comment