Sunday, December 30, 2018

೨೦೧೭ ನೋಟ

*ಕಳೆದು ಹೋದ ವರ್ಷ* -ಒಂದು ನೋಟ ( 2017 )

ಹೊಸ ವರ್ಷ ಅಂದ್ರೆ ಯಾವುದು ಅಂತ ವಿಚಾರ ಮಾಡಬಾರದು. ಇಂಗ್ಲಿಷ್ ಕ್ಯಾಲೆಂಡರ್ ನಂಬಿಕೊಂಡು ಬಂದು ಒಪ್ಪಿಕೊಂಡಿದ್ದೇವೆ. ಅದನ್ನೇ ಒಪ್ಪಿಕೊಳ್ಳಬೇಕು ಅಷ್ಟೇ!

ಹೊತ್ತು ಹೋದದ್ದು ಗೊತ್ತಾಗುವುದಿಲ್ಲ ನೋಡಿ. ಕಾಲನ ವೇಗ ತಡೆಯಲಾಗದು.

ಒಮ್ಮೆ ನಡೆದದ್ದು ಮೆಲುಕು ಹಾಕಿ, ಸಣ್ಣ ಕ್ರಿಯಾಯೋಜನೆ ರೂಪಿಸಿಕೊಳ್ಳಬೇಕು, ಮುಂದಿನ ಕ್ಷಣ ಏನಾಗುತ್ತೆ ಎಂದು ಗೊತ್ತೆ ಇಲ್ಲ ಆದರೂ...

ನಾನೂ ತಪ್ಪು ಮಾಡುತ್ತೇನೆ ಆದರೆ ಅದು ಬೇರೆಯವರ ಬದುಕಿಗೆ ಕೊಳ್ಳಿಯಾಗದಿರಲಿ.

*ಹೆಣ್ಣು-ಹೊನ್ನು-ಮಣ್ಣು ಸಿಗುವುದಾದರೆ ನಾಲಿಗೆ-ಮನಸು ನಿಯಂತ್ರಣ ಕಳೆದುಕೊಳ್ಳಬಾರದು* ಎಂದು ನಿರಂತರ ಬೇಡಿಕೊಳ್ಳುವೆ.

ಆದರೂ ಜೋಲಿ ಹೋದರೆ ನಾನೇ ಸಂಭಾಳಿಸಿಕೊಳ್ಳಬೇಕು ಇದು ಮನಸಿನ ಮಾತು.

                                 ***

ವರ್ಷದ ಆರಂಭದಲ್ಲಿ ಎರಡು ಮಹತ್ವದ ಘಟನೆಗಳು. ಕನಕದಾಸ ಶಿಕ್ಷಣ ಸಮಿತಿಯ ಸುವರ್ಣ ಸಂಭ್ರಮ. ಕೊನೇ ಗಳಿಗೆಯಲ್ಲಿ ಪ್ರವೇಶ. ಹುಬ್ಬಳ್ಳಿಯ ಪ್ರಾಚಾರ್ಯ ಸಂದೀಪ ಬೂದಿಹಾಳ ಮನಸ್ಸು ಮಾಡಿ ಹೊಸ ಹುಮ್ಮಸ್ಸು ತುಂಬಿದರು.

ಚೇರಮನ್ ಡಾ.ಬಿ.ಎಫ್.ದಂಡಿನ ಸರ್, ಪದಾಧಿಕಾರಿಗಳಾದ ರವಿ ದಂಡಿನ ಹಾಗೂ ಡಾ.ಪುನೀತಕುಮಾರ ಅವರು ಕೊಟ್ಟ ಜವಾಬ್ದಾರಿಗಳನ್ನು ಸಮರ್ಥವಾಗಿ ಯಾವುದನ್ನೂ ಲೆಕ್ಕಿಸದೇ ನಿರ್ವಂಚನೆಯಿಂದ ಪೂರೈಸಿದೆ.

ಖ್ಯಾತ ನಿರ್ದೇಶಕ ಕಾಲೇಜ್ ಕುಮಾರ್ ಫೇಮಿನ ಸಂತು-ಸಂತೋಷ್ ನನ್ನ ಸಾಹಿತ್ಯ ಹಾಗೂ ಧ್ವನಿ ಬಳಸಿಕೊಂಡದ್ದು ನನ್ನ ಸೌಭಾಗ್ಯ.

*ಬರುವುದ ಬೇಡ ಎನಬಾರದು, ಬಾರದಿರುವುದರ ಬೆನ್ನು ಬೀಳಬಾರದು*. ಏನಾದರೂ ದಕ್ಕಲಿ ಎಂಬ ಹಪಾಹಪಿ ಬಿಟ್ಟು ಈಗ ಸುಖವಾಗಿದ್ದೇನೆ.

ಈಗ ಸಂಸ್ಥೆ ನೀಡಿದ ಇತರ ಜವಾಬ್ದಾರಿಗಳನ್ನು ಮುಂದುವರೆಸಲು ಸೇತುವೆ.

ನನ್ನ ಹಿತೈಷಿಗಳು, ಮಾರ್ಗದರ್ಶಕರು ಹಾಗೂ ಅಕ್ಯಾಡೆಮಶಿಯನ್ ಪ್ರೊಫೆಸರ್ ಡಾ.ಆರ್.ಎಂ.ರಂಗನಾಥ್ ಅವರ ನೆರವಿಗೆ ಥ್ಯಾಂಕ್ಸ್ ಹೇಳುವದು ತುಂಬಾ ಕೃತಕ.

ನೂರಾರು ತಾಸುಗಳಿಗಿಂತ ಹೆಚ್ಚು ಮಾತನಾಡಿದ್ದು,ಈ ವರ್ಷದ ಮಹಾನವಮಿ, ಉಗಾದಿ, ದೀಪಾವಳಿ... ಎಲ್ಲವೂ ಹೌದು.

ಆ ಕೆಲಸ ಸಕಾರಾತ್ಮಕವಾಗಿ ಮುಂದುವರೆದೇ ಇದೆ. ಅವರ ಸಾಮರ್ಥ್ಯವನ್ನು ಗ್ರಹಿಸಿದ ಎಲ್ಲರಿಗೂ ಚಿರಋಣಿ. *ಮೌಲ್ಯದ ಹೊಳಪಿಗೆ ಸಾವಿಲ್ಲ*.

ದೂರದರ್ಶನ ದಂಡಿನ ಸರ್ ಅವರ ಸಂದರ್ಶನ ಪ್ರಸಾರ ಮಾಡಿತು. ನಿರ್ಮಲ ಎಲಿಗಾರ ನಂತರ ನನ್ನ ಬರಹದ ಮೇಲೆ ಹೊಸ ಬೆಳಕನ್ನು *ಬೆಳಗು* ಮೂಲಕ ಎರಡು ಬಾರಿ ಬಿತ್ತರಿಸಿದರು.

ಮುಖ್ಯಮಂತ್ರಿಗಳ ಕಾರ್ಯಕ್ರಮ ಮಹತ್ವದ ತಿರುವು ನೀಡಿತು.

                                ***

ಪ್ರೀತಿ-ಪ್ರೇಮ-ಪ್ರಣಯ-ಮಾನ-ಅವಮಾನ--ಹಿಂಸೆ-ಸಮಸ್ಯೆ-ಕಿರುಕಳ ಎಲ್ಲವನೂ ಸಮಾನವಾಗಿ ಅನುಭವಿಸಿ ಸ್ವೀಕರಿದ್ದೇನೆ.

ಅತೀ ಹೆಚ್ಚು ಬರೆದ ದಾಖಲೆ. ಕಾವ್ಯ ಪ್ರಧಾನ. ನಿಲ್ಲದ ಮನದ ಮಾತುಗಳು. ಪುಟ್ಟ ಪುಟ್ಟ ಸಕಾಲಿಕ ಬರಹಗಳು.
ಸಾಮಾಜಿಕ ಜಾಲತಾಣಗಳ ಸಮರ್ಥ ಬಳಕೆ. ಓದಲಿ ಬಿಡಲಿ ಬರೆದು ತಲುಪಿಸುವ ವೇದಿಕೆ.

                               ***

ಜನ ಎಲ್ಲದನ್ನೂ, ಎಲ್ಲರನ್ನೂ ಟೀಕೆ-ಟಿಪ್ಪಣೆ ಮಾಡುತ್ತಾರೆ. ಅವುಗಳನ್ನು ಲೆಕ್ಕಿಸದೇ, ಕೆಲವನ್ನು ಸ್ವೀಕರಿಸಿ ನಂಬಬೇಕು.
ಹಾಗೆ ನಂಬಿದ ಆಧ್ಯಾತ್ಮಿಕ ಕೇಂದ್ರ ಬಂಗಾರಮಕ್ಕಿಯ ಪೂಜ್ಯ ಮಾರುತಿ ಗುರೂಜಿ ಹಾಗೂ ಅವರ ಸಮಾಜೋಸಾಂಸ್ಕೃತಿಕ ಕಾರ್ಯಕ್ರಮಗಳು.

ಮಲೆನಾಡು ಉತ್ಸವ ಹಾಗೂ ದರ್ಶನ ನನ್ನ ಖಾಸಗಿ ಸಂಗತಿಗಳು ಅವುಗಳಿಗೆ ತಾರ್ಕಿಕ ಹಾಗೂ ಪ್ರಗತಿಪರ ಮಾನದಂಡ ಬೇಡ.

ಅದು ನನ್ನ ನಂಬಿಕೆ. ತಾನುಂಬುವ ಊಟ, ತನ್ನಾಸೆಯ ರತಿಸುಖದಂತೆ ವೈಯಕ್ತಿಕ ಆಚರಣೆಗಳಿಗೆ ಸ್ಪೇಸ್ ಇಟ್ಟುಕೊಳ್ಳಬೇಕು ಯಾರೂ ಕೊಡುವುದಿಲ್ಲ.

*ಧ್ಯಾನ-ಬರಹ-ಕಾಮ-ಊಟ ನನ್ನ ಆಯ್ಕೆ*.  ಸಾರ್ವತ್ರಿಕ ಚರ್ಚೆ ಸಲ್ಲದು.

                              ***

ಸಾಹಿತ್ಯ ಸಂಭ್ರಮ ಖುಷಿ ಕೊಟ್ಟ ಕಾರ್ಯಕ್ರಮ. ಸಮ್ಮೇಳನಕ್ಕೆ ಹೋಗಲಿಲ್ಲ. ಕರೆಯಲೂ ಇಲ್ಲ. ಪ್ರೊ.ಚಂಪಾ ಅವರಿಗೆ ಸಂದ ಗೌರವ. ನಂತರದ ವಿವಾದ ಕೂಡ ಇಂಟರೆಸ್ಟಿಂಗ್.

ಈ ವರ್ಷ ಅತೀ ಹೆಚ್ಚು ವಿವಾದಗಳು. ವಿಷಾದಗಳು.

ಒಂದರ ಚರ್ಚೆ ಮುಗಿಯುವದರೊಳಗೆ ಮತ್ತೊಂದು ಅದನ್ನು ಮರೆಸುವಂತಹದು.
ಆಗಿದ್ದು ಆಗಿ ಹೋಗುತ್ತೆ ಬಲಿಯಾದವರು ಬಲಿಯಾಗಿ ನಾಲ್ಕು ದಿನಗಳ ಸುದ್ದಿಯಾಗಿ ಮರೆಯಾಗಿ ಮಾಯವಾಗುತ್ತಾರೆ. ಯಾವುದೇ ಇತಿಹಾಸ ನಿರ್ಮಿಸದೆ.

ಆದರೆ ಇದ್ದವರು ದುರಾಸೆಗೆ ಬಿದ್ದು ಒಂದಿಷ್ಟು ಬಾಚಿಕೊಳ್ಳುತ್ತಾರೆ.

                                ***

ಮರೆಯಾದ ಗೌರಿ, ದಾನಮ್ಮ ಇನ್ನೂ ನೂರಾರು ಜೀವಗಳು... ಒಮ್ಮೊಮ್ಮೆ ನಾವು-ನೀವೂ!

ಸಿದ್ಧಾಂತಗಳ ಕೂಗು ಕರ್ಕಶವಾಗಿ ಕೇಳುತ್ತಲಿದೆ, ಹೇಸಿಗೆ ಎನಿಸುವಷ್ಟು. ಎರಡರಲ್ಲೂ ಅತಿರೇಕದ ಅನಾಗರಿಕತೆ. ಆರೋಗ್ಯಪೂರ್ಣ ಚರ್ಚೆ ಬೇಡಾಗಿದೆ. ಬರೀ ಕತ್ತರಿಸೋ ಕೆಲಸ.

ವೀರಶೈವ-ಲಿಂಗಾಯತ ಒಂದು ತಾರ್ಕಿಕ ನಿಲುವು ಸಾಧ್ಯವಾಗಿದೆ. ಲಾಭ ಆಗಲಿ ಬಿಡಲಿ. ಬಣ್ಣ ಬಯಲಾಗಿದೆ. ಇನ್ನೂ ನಡೆದೇ ಇದೆ. ನಡೆಯಲಿ.

ಈಗ ಎಲ್ಲದರಲ್ಲೂ ರಾಜಕಾರಣದ ಲೆಕ್ಕ-ಆಚಾರ-ವಿಚಾರ.
ಎಲ್ಲ ಕಡೆ ಎಡ-ಬಲ. ಎರಡೂ ಅಲ್ಲದವರ ದಿವ್ಯ ಮೌನ.
ಅವರ ಸಂಖ್ಯೆಯೇ ಹೆಚ್ಚು. ಕಾಯ್ದು ನೋಡುವ ತಂತ್ರ.
*ಹಿಂಸೆ ವೈಭವೀಕರಿಸಿ ನೆತ್ತರು ಹರಿಯುವುದು ಬೇಡ*. ಸಿದ್ಧಾಂತಗಳ ಹೆಸರಿನಲ್ಲಿ.

ರಾತ್ರೋ ರಾತ್ರಿ ಬೆಳಕಿಗೆ ಬರುವ ಅಬ್ಬರದಿ ನಾವೇ ಕಳೆದುಹೋಗುವುದು ಗೊತ್ತಾಗುತ್ತಿಲ್ಲ.

ನಾಲಿಗೆ ಮನಸು ನಿಯಂತ್ರಣ ಕಳೆದುಕೊಂಡು ಹಾರಾಟ ನಡೆಸಿವೆ.

ನಮ್ಮ ಪಾಡಿಗೆ ನಾವು ಇರೋದು ಯಾರೀಗೂ ಬೇಡ. *ಏನಾದರೂ ಸದ್ದು-ಸುದ್ದಿ ಮಾಡಿ ಬದುಕಿದ್ದೇವೆ ಎಂದು ನಿರೂಪಿಸದಿದ್ದರೆ ನಮ್ಮ ಸಾವಿನ ಘೋಷಣೆ*.

                                  ***

ಎರಡು ಪುಸ್ತಕಗಳನ್ನು ಗೆಳೆಯರು, ಒಂದನ್ನು ನಾನು ತರುತ್ತಿರುವೆ.

ಬೆಂಗಳೂರಿನ ನಟ, ಕಲಾವಿದ, ಬರಹಗಾರ ಒನ್ ವ್ಹೀಲರ್ ಪ್ರಕಾಶನದ ಮಂಜುನಾಥ.ವಿ.ಎಂ. *ಪಿಸುಮಾತುಗಳ ಜುಗಲ್* ಅಂದವಾಗಿ ವಿನ್ಯಾಸಗೊಳಿಸಿ ಖುಷಿ, ಸಂತೃಪ್ತಿಗೆ ಕಾರಣರಾಗಿದ್ದಾರೆ.

ಲಂಕೇಶ್ ಪ್ರಭಾವವನ್ನೂ ಇನ್ನೂ ಕಾಪಿಟ್ಟುಕೊಂಡು ಬರೆಯುವ ಮಂಜುನಾಥ ಅವರ ಪುಸ್ತಕಪ್ರೀತಿ ಬೆರಗನ್ನುಂಟು ಮಾಡಿದೆ.

ಯುವ ಮಿತ್ರ ಆನಂದ ಕುಂಚನೂರ ನನ್ನ ಕನಸು ನನಸಾಗಲು ಜೊತೆಯಾದರು.

ಇಂತಹ ಒಂದು ಪ್ರಯತ್ನಕ್ಕೆ ಅಷ್ಟೇನು ಪರಿಚಿತರಲ್ಲದ ಹಿರಿಯ ಕಥೆಗಾರರಾದ ಕಲಬುರ್ಗಿಯ  ಶ್ರೀಮತಿ ಕಾವ್ಯಶ್ರೀ ಮಹಾಗಾಂವಕರ್ ಉತ್ಸಾಹ ಹಾಗೂ ವಿಶ್ವಾಸದಿಂದ ಸಹಸ್ಪಂದಿಸಿ ಬರೆದದ್ದು ಒಂದು ಸುಂದರ ಕೃತಿ ಮೂಡಿ ಬರಲು ಕಾರಣವಾಯಿತು.

ಮಾನವೀಯ ಸಂಬಂಧಗಳು ತುಂಬ ಗೊಂದಲದಲ್ಲಿರುವಾಗ ಹೊಸ ಪ್ರಯೋಗಗಳು ಕಷ್ಟ ಆದರೂ ಸಕಾರಾತ್ಮ ಉದ್ದೇಶ ಇದ್ದರೆ ನಮ್ಮ ಆಸೆಗಳು ಈಡೇರುತ್ತವೆ. ಉದ್ದೇಶ ಸರಿ ಇರದಿದ್ದರೆ ಏನೂ ಆಗಲ್ಲ.

ಮೈಸೂರಿನ ಕವಿಮಿತ್ರ ಮಂಜುನಾಥ ಲತಾ ರೂಪ ಪ್ರಕಾಶನದ ಮೂಲಕ ಲೇಖನದ ಸಂಕಲನ
*ಅಸಂಗತ ಬರಹಗಳು* ---- ಓದಿ ಯಾರಿಗೂ ಹೇಳಬೇಡಿ  ಮುದ್ರಣದಲ್ಲಿದೆ.

ಮರುಬರಹ, ಮರುಮುದ್ರಣ ಹೊಸ ರೂಪ ಪಡೆದು ಇಂಗ್ಲೆಂಡ್ ಪ್ರವಾಸ ಕಥನ 
*ಕಲ್ಯಾಣದಿಂದ ಕೇಂಬ್ರಿಜ್ಜಿಗೆ* ---- ಮಗಲಾಯಿ ಹುಡುಗನ ಪಾರೆನ್ ಟೂರು. ಜಾಯಫುಲ್ ಲಿವಿಂಗ್ ಫೌಡೇಶನ್ ಮೂಲಕ ಹೊರ ಬರುತ್ತೆ.

*ಮೂರು ಪುಸ್ತಕಗಳು ನಿಮ್ಮ ಕೈಗೆ. ಖಂಡಿತವಾಗಿ*
ಇದಿಷ್ಟು ಅತ್ಯಂತ ಖುಷಿ ಕೊಟ್ಟ ಪುಸ್ತಕ ಸಂಭ್ರಮ.

                                  ***

ಸಹಕಾರ, ಶಿಕ್ಷಣ, ಸೌಹಾರ್ದ, ಸಾಹಿತ್ಯ ಪರಿಷತ್ತು, ರಿಜನಲ್ ಇನ್ಸಟೂಟ್ ಫಾರ್ ಕೋ-ಆಪರೇಟಿವ್ ಮ್ಯಾನೇಜ್‌ಮೆಂಟ್ ಆಯೋಜಿಸಿದ್ದ ನೂರಾರು ಶಿಬಿರಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಜಾಯಫುಲ್ ಲಿವಿಂಗ್ ಇನ್ ಪರ್ಸನಲ್ ಐಂಡ್ ಪ್ರೊಫೆಶನಲ್ ಲೈಫ್ ಕುರಿತು ದಣಿವರಿಯದೆ ಬೆರೆತಿದ್ದೇನೆ.

ಆದರೆ 'ಈ ಸಾಮರ್ಥ್ಯವನ್ನು ಎನ್ ಕ್ಯಾಶ್ ಮಾಡಿಕೋ' ಅಂತಾರೆ ಆದರೆ ಬೇಡ ಅನಿಸಿದೆ.

ತುಂಬಾ ತನ್ಮಯನಾಗಿ ತರಬೇತಿ ನೀಡಿ ಕೇಳುಗರನ್ನು ಮೋಡಿ ಮಾಡುವ ಭರದಲ್ಲಿ ಒಳಗೊಳಗೆ ಕಳೆದುಹೋಗಿ ನಾನಾಗಿರುವುದೇ ಇಲ್ಲ.

ಬರೆಯುವಾಗ ಯಾವುದೇ *ಅವ್ಯಕ್ತ ಶಕ್ತಿ* ಕೈಹಿಡಿದು ಬರೆಸುತ್ತದೆ. ಮಾತಾಡುವಾಗ ಏನೋ ಪ್ರೇರಣೆ ಆದರೆ  ಆವೇಶದಿಂದ ಮೈಮರೆತು ಮಾತನಾಡಿ  ಹೈರಾಣಾಗಿರುತ್ತೇನೆ.

ಎಲ್ಲವನ್ನೂ ನಿಷ್ಟೆಯಿಂದ ಪೂರೈಸುವ ತುಡಿತ ತಾನಾಗಿ ಫಲ ನೀಡುವವರೆಗೆ ಕಾಯುವೆ.

                                 ***

ಒಂಬತ್ತು ತಿಂಗಳ ಹಿಂದೆ ಅನಿರೀಕ್ಷಿತವಾಗಿ ಕರಾವಳಿ ನಂಟು. ತರಬೇತಿಯೊಂದರಲ್ಲಿ ಭೇಟಿ ಆದ ಭಾಸ್ಕರ ದೇವಸ್ಯ ಮಂಗಳೂರು ಬಂಧನಕ್ಕೆ ನಾಂದಿ.

ಸುಪ್ತಮನಸಿನ ಹಲವು ಆಲೋಚನೆಗಳು ಗಟ್ಟಿಯಾಗಿರಬೇಕು, ಸುಪ್ತಮನಸು  ಪ್ರಾಂಜಲವಾಗಿರಬೇಕು. ಆಸೆಗಳು ಈಡೇರುವುದರಲ್ಲಿ ಅನುಮಾನ ಬೇಡ.

ಹೊಸ ಸವಾಲುಗಳನ್ನು ಹುಂಬತನದಿಂದ ಸ್ವೀಕರಿಸಿ ಒದ್ದಾಡುವುದು ನನ್ನ ಜಾಯಮಾನ. ಆದರೆ ಶಕ್ತಿ ಮೀರಿ ಪ್ರಯತ್ನಿಸಿದಾಗ ಪ್ರಯಾಸದಿಂದ  ಗುರಿ ತಲುಪುತ್ತೇನೆ.

ಮಂಗಳೂರು-ಕಟೀಲು-ನಿಡ್ಡೋಡಿ-ಕಾಂತಾವರ = ಜ್ಞಾನರತ್ನ ಅನಿಸಿದೆ ನೋಡೋಣ.

*ಎಲ್ಲದೂ ಅವನ ಮಹಿಮೆ*.
ಗ್ರಾಮೋತ್ಸವ ಅರ್ಥಪೂರ್ಣ.
ಭಾಸ್ಕರಗೌಡ ದೇವಸ್ಯ ಅವರ ಒಳ್ಳೆಯತನಕ್ಕೆ ಒಳ್ಳೆಯದಾಗಲಿ.

ಕಡೀ ದಿನ ಆನಂದ ಕುಂಚನೂರ ಕತೆಗಳ ಅನಾವರಣ. *ಮಹತ್ವದ ವ್ಯಕ್ತಿಗಳ ಮಿಲನ*.

                             ***

                         *ಸಂಕಲ್ಪ*

Joyful living ಸರಿಯಾಗಿ ಅರಿತಿದ್ದೇನೆ... ಆದರೆ ಪಾಲನೆ ?

Self evaluation ಬೇಕಲ್ಲ !

ಮುಖ್ಯವಾಗಿ ಬದುಕನ್ನು ಅಲುಗಾಡಿಸುವ *ಅರ್ಥವ್ಯವಸ್ಥೆ* ಸರಿದಾರಿಗೆ ಬಂದಾಗ ಅರ್ಧ ಗೆದ್ದಂತೆ.

ಕೆಲವು ಸಂಬಂಧಗಳನು ಎಚ್ಚರಿಕೆಯಿಂದ ನಿಭಾಯಿಸಬೇಕು.

ಬೇಕಾದವರನ್ನು ಬೇಕಾದ ರೀತಿಯಲ್ಲಿ ಪಡೆದುಕೊಳ್ಳುತ್ತೇವೆ ಆದರೆ ಉಳಿಸಿಕೊಳ್ಳುವುದೂ ಅಷ್ಟೇ ಮುಖ್ಯ.

ನಾನು ಹೆಚ್ಚು ಭಾವುಕನಾಗದೆ ಸಂಯಮದಿ ನಡೆದುಕೊಂಡು ಕಾಪಾಡುವ ಸೂಕ್ಷ್ಮ ಜವಾಬ್ದಾರಿ ಹೊರಬೇಕು.
*ಜಗ್ಗಾಟದಲಿ ಹರಿಯಬಾರದು*.
*ಕಾಲ, ಉತ್ತಮರ ಪ್ರೀತಿ ಕಳೆದ ಮೇಲೆ ಸಿಗುವುದೇ ಇಲ್ಲ*.

ಆರೋಗ್ಯದ ಕುರಿತು awareness ಇನ್ನೂ ಹೆಚ್ಚಾಗಬೇಕು.

*ತಿರುಗಾಟ-ಮಾತು-ಉಸಾಬರಿ ಕಡಿಮೆ ಆಗಿ
ಓದು-ಬರಹ-ಧ್ಯಾನ ಹೆಚ್ಚಾಗಬೇಕು*.

*ಆನೆ ಬಲ*

ಆರೋಗ್ಯ-ನೆಮ್ಮದಿಗಾಗಿ ಮಾತ್ರ ಪ್ರಾರ್ಥಿಸಬೇಕು.

ಎಲ್ಲರೂ ಹೆಚ್ಚು ಖುಷಿಯಾಗಿರಲಿ ಎಂದು ಬಯಸಿದಾಗ ಖುಷಿ ತಾನಾಗಿಯೇ ಸಿಗುತ್ತದೆ.

*ಶ್ರೀ.ಎಂ*. ಹಾಗೂ ಅವರು ದಯಪಾಲಿಸಿದ ಕರುಣೆಯನ್ನು  ನಿರಾಯಾಸವಾಗಿ ಕಾಪಾಡಬೇಕು.

ಐದು ವರ್ಷಗಳಿಂದ ಹೊಸ ವರ್ಷವನ್ನು ನಶೆಯಿಲ್ಲದೆ ಸ್ವಾಗತಿಸಿದ್ದೇನೆ. ಸಣ್ಣಪುಟ್ಟ ಬದ್ಧತೆಗಳು ಕೂಡ ದೊಡ್ಡ ಖುಷಿ ನೀಡುತ್ತವೆ.

ಗುರು-ಹಿರಿಯರು-ಜನ್ಮದಾತರ ಕೃಪೆಯೊಂದಿಗೆ ನಿಮ್ಮ ಹಾರೈಕೆಯೂ ಇರಲಿ.

Wish you Happy New Year.

---ಸಿದ್ದು ಯಾಪಲಪರವಿ.

ಹೋದ ವರ್ಷ ಬರೆದದ್ದು....

ಖುಷಿಯಾಗಿರಲು...

*ಖುಷಿಯಾಗಿರಲು ಏಕಾಂತ ಸಾಕು*

ನಾವು ಎಲ್ಲ ಏನೆಲ್ಲ ಮಾಡುವುದು ಕೇವಲ ಖುಷಿಗಾಗಿ. ಖುಷಿಯನ್ನು ಎಲ್ಲಂದರಲ್ಲಿ ಹುಡುಕುತ್ತೇವೆ.‌ ಗೆಳೆಯರು, ಬಂಧುಗಳು, ಕುಟುಂಬದ ಸದಸ್ಯರು…
ಊ ಹೂಂ ಯಾರೂ ಖುಷಿ ಕೊಡಲಾರರು, ನಾವು ನಿರೀಕ್ಷಿಸಲೂ ಬಾರದು.

ಎಲ್ಲರಿಗೂ ಅವರದೇ ಆದ ಆಯ್ಕೆಗಳಿರುತ್ತವೆ, ಆಸೆಗಳಿರುತ್ತವೆ, ಅವುಗಳ ಪೂರೈಸುವ ಸ್ವಾರ್ಥವೂ ಇರುವುದು ಸಹಜ.
ನಮ್ಮ ನಿರೀಕ್ಷೆ ನಮ್ಮ ದುಃಖಕ್ಕೆ ಮೂಲ ಎಂದು ಗೊತ್ತಿದ್ದರೂ ಮತ್ತೆ ಮತ್ತೆ ನಿರೀಕ್ಷಿಸುತ್ತಲೇ ಸಾಗುತ್ತೇವೆ.

ಹೊಸ ವರ್ಷ, ಹುಟ್ಟು ಹಬ್ಬ ನಮ್ಮ ಸಡಗರವಾಗದೇ ಕಳೆದು ಹೋದ, ನಾವು ವಿನಾಕಾರಣ ಕಳೆದುಕೊಂಡ ಕಾಲದ ಪರಾಮರ್ಶೆಯಾಗಬೇಕು.

ಎಲ್ಲ ಬಿಟ್ಟು ದೂರ ಹೋಗಲು ನಾವು ಸನ್ಯಾಸಿಗಳೇನು ಅಲ್ಲವಾದರೂ ಕೊಂಚ ನಿರ್ಲಿಪ್ತತೆ ಅನಿವಾರ್ಯ.
ಕಾಲನ ವೇಗದಲ್ಲಿ ಎಲ್ಲರಿಗೂ ಗಡಿಬಿಡಿ, ಧಾವಂತ.
*ಒಂದು ಮುಗುಳು ನಗೆ, ಬಿಸಿಯಪ್ಪುಗೆ, ಸಿಹಿ ಮುತ್ತಿಗಾಗಿ ಪ್ರತಿ ಜೀವಗಳು ಹಾತೊರೆಯುತ್ತವೆ*. ಆದರೆ ಯಾರಿಂದ ನಾವು ನಿರೀಕ್ಷಿಸಬೇಕೆಂಬುದೇ ಗೊಂದಲ.

ಹರೆಯದಲ್ಲಿ ಹೆಂಡತಿ, ಕೊಂಚ ದೊಡ್ಡವರಾದ ಮೇಲೆ ಮಕ್ಕಳು, ಇನ್ನೂ ಮಾಗಿದ ಮೇಲೆ ಮೊಮ್ಮಕ್ಕಳು ಮುಂದೆ…
ಎಲ್ಲವೂ ಎಲ್ಲರೂ ಖಾಲಿ ಖಾಲಿ.

ಹೆಂಡತಿ ಅಥವಾ ಗಂಡನಿಗೆ ಅದೇನೋ ಜವಾಬ್ದಾರಿಗಳ ನೆಪ, ಒತ್ತಾಯದ ಸನ್ಯಾಸ ಬದುಕು. ದೈಹಿಕವಾಗಿ ಜೊತೆಗಿದ್ದರೂ ಗೊತ್ತಾಗದಂತೆ ದೂರಾಗುವ ಪರಿಯೇ ವಿಚಿತ್ರ,

ಅದೇನೋ ಬಿಗುಮಾನ, ಸಂಕೋಚ ಬಿಗಿದಪ್ಪಿ ಮುದ್ದಿಸಲೂ.
ಎಂತಹ ವಿಚಿತ್ರ ನೋಡಿ ಒಂದು ಕಾಲದ ಜೋಡಿ ಹಕ್ಕಿಗಳು ತಮಗೆ ವಯಸ್ಸಾಗಿ ಮುಪ್ಪು ಆವರಿಸಿತೇನೋ ಎಂಬ ಹುಚ್ಚು ಹಿಡಿಸಿಕೊಂಡ ಕೊರಗು.

ಅನುಸಂಧಾನ, ಅನುರಾಗ, ಅನ್ಯೋನ್ಯತೆಗೆ ವಯಸ್ಸು ಅಡ್ಡಿಯಾಗಬಾರದು, ಇಬ್ಬರಿಗೂ ಅಷ್ಟೇ ವಯಸ್ಸಾಗಿರುತ್ತೇ ಆದರೂ ಈ ಹಿಂಜರಿತ ಯಾಕೋ ಅರ್ಥವಾಗದು.
ಇಂತಹ ಅರ್ಥವಾಗದ ಸಂಗತಿಗಳನ್ನು ಅರ್ಥ ಮಾಡಿಕೊಳ್ಳಲು ಮನಸು ಮಾಡಬೇಕು ಅಷ್ಟೇ.

ದೇಹಕ್ಕೆ ವಯಸ್ಸಾಗುತ್ತೆ, ಮನಸಿಗೆ ವಯಸ್ಸಾಗುವುದಿಲ್ಲ ಎಂಬುದು ನಮಗರ್ಥವಾಗುವುದೇ ಇಲ್ಲ.
ಸರಿ ಹಾಗಾದರೆ ಒಂಟಿಯಾದರೇನಂತೆ ಧ್ಯಾನ, ಸಂಗೀತ ಆಲಿಸುವಿಕೆ, ಓದು,ಬರಹ, ಓಡಾಟ, ಹರಟೆ ಮೈಗೂಡಿಸಿಕೊಂಡರೆ ಸಾಕಲ್ಲ.

ಈ ಮಧ್ಯೆ ಸುಡುಗಾಡು ಸಣ್ಣಪುಟ್ಟ ಅನಾರೋಗ್ಯ ಬೇರೆ. ಅವುಗಳದೇ ಧ್ಯಾನ. ಅದು ಅನಗತ್ಯ ನಕಾರಾತ್ಮಕ ಧ್ಯಾನ.

“ನಿನ್ನ ಪಾಡಿಗೆ ನೀನೂ ಖುಷಿಯಿಂದ ಇರು ಓಡಾಡಿಕೊಂಡು, ಬೇಕಾದ ಕೆಲಸಗಳೊಂದಿಗೆ” ಎಂದು ಸಂಗಾತಿಗಳಿಗೆ ಹೇಳುವ, ಸ್ವಾತಂತ್ರ್ಯ ಕೊಡುವ ಮನಸ್ಥಿತಿ ನಮಗಿರುವುದಿಲ್ಲ. ಕೊನೆವರೆಗೂ  ನಮ್ಮ ಸೇವೆ ಮಾಡಿಕೊಂಡು ಸಾಯಲೆಂಬ ಕೊಳಕು ಮನೋಧರ್ಮ ಬೇರೆ!
ನಿರ್ಮಲ, ನಿರಾತಂಕ, ನಿಶ್ಚಲ, ನೆಮ್ನದಿಯ ಏಕಾಂತ ಜೀವನವನ್ನು ನಾವು ಅನುಭವಿಸಿ, ನಮ್ಮೊಂದಿಗಿರುವವರಿಗೂ ಅನುಭವಿಸುವ ಅವಕಾಶ ಕೊಡುವ ಸಂಕಲ್ಪ ಮಾಡೋಣ.
ಏಕಾಂತ ಒಂಟಿತನ ಅಲ್ಲವೇ ಅಲ್ಲ. ಅದೊಂದು ಮನಸಿನ ಮುದ. ಆತ್ಮಾನುಸಂಧಾನದ ಮೆಲ್ಲುಸಿರ ಸವಿಗಾನ.
ಬನ್ನಿ ಏಕಾಂತದ ಖುಷಿಯಲ್ಲಿ ಹೊಸ ಹಾದಿ ಹುಡುಕೋಣ.
ನಾನು, ನಾವು, ನೀನು, ನೀವೂ…

  *ಸಿದ್ದು ಯಾಪಲಪರವಿ*

Saturday, December 29, 2018

ಬೇಡಲಾರೆ

*ಬೇಡಲಾರೆ ಯಾರನೂ*

ಬೇಡಲಾರೆ ನಾನಿನ್ನು ಬೇಡಿದರೆ
ವರವ ಯಾರೂ ಕೊಡುವುದಿಲ್ಲ

ಇವರು ನಮ್ಮವರು ಕೈ ಬಿಡ
ಲಾರರು ಎಂಬ ಭ್ರಮೆಯ
ಬದುಕಲಿ ನೂರೆಂಟು ಆಸೆ
ಭರವಸೆಗಳ ಲೆಕ್ಕಾಚಾರ

ಯಾರೂ ನಮ್ಮವರಲ್ಲದಿರೆಯೂ
ನಮ್ಮವರು ನಮಗೆ ಏನೆಲ್ಲ
ಆಗುತ್ತಾರೆಂಬ ಗಾಳಿ ಗೋಪುರದ
ಮೇಲೆ ಕಳಸವಿಟ್ಟು ಜಾತ್ರೆ
ಮಾಡಿ ತೇರನೆಳೆಯುವ ಹುಚ್ಚು

ನಮ್ಮವರೆನಿಸಿಕೊಂಡವರು ಒಮ್ಮೆ
ಮೇಲೆ ಹಾರಿದರೆ ಗಾಳಿಪಟ ಹಾರಿದ್ದೇ
ಹಾರಿದ್ದು ಪಾಪ ಪಟಕ್ಕೇನು ಗೊತ್ತು

ಪಟ ಹಾರಿಸುವವನ ಕೈ ಸೋತರೆ
ಎಳೆದಾನೆಂದು

ನಿನ್ಪಷ್ಟಕೆ ನೀ ನಡೆ ನಿನ್ನಿಷ್ಟದ ಹಾಗೆ
ಯಾರೂ ಇಲ್ಲಿ ಇಲ್ಲ ನಿನಗೆ ನೆರವಾಗಿ
ನೆರಳಾಗಿ ಕೈ ಹಿಡಿದು ಮುನ್ನಡೆಸಲು

ಏಳು ಎದ್ದೇಳು ಸಾಗು ನಿಧಾನದಿ ನಿನ್ನ
ವೇಗವ ನೀ ಅರಿತು

ಅಲ್ಲಿರಲಿ ಒಂದು
ಗುರಿ ಅದ ತಲುಪಲು ನೀ ತೆವಳುತ್ತ
ಏಳುತ್ತ ಒಮ್ಮೊಮ್ಮೆ ಬೀಳುತ್ತಲಾದರೂ
ನಡೆಯುವದ ಬಿಡಬೇಡ

ದಣಿವು ಹಸಿವು ಬಾಯಾರಿಕೆಯ
ಸಂಕಷ್ಟದಲಿಯೂ ಮಾಸದ
ನಗುವಿರಲಿ ಮೊಗದಲಿ

ಗಂಟು ಮುಖದ ಕಗ್ಗಂಟು ಕಳಚ
ಬಹುದು ಸುತ್ತಲಿನವರ ನಂಟು

ಬೇರೆಯವರ ನಂಟಿನ ಗಂಟನು
ನೆಚ್ಚದೆ ಬಿಚ್ಚದೆ ಬೆಚ್ಚದೆ ನಡೆ

ನಿನ್ನ
ಕಾಲುಗಳ ಮೇಲೆ ನಿನ್ನದೇ ಕಾಲ
ಕೂಡಿ ಬರುವವರೆಗೆ....

---ಸಿದ್ದು ಯಾಪಲಪರವಿ

Monday, December 24, 2018

ಕಳೆದ ಹೊತ್ತು

*ನಾನೀ ಕಳೆದ ಹೊತ್ತು*

ಬಾ ಎಂದು ಕರೆದ ಕೂಡಲೇ
ಬಂದದ್ದೇಕೋ ನಾ ಕಾಣೆ

ಕೊರಳ ದನಿಗೆ ತಲೆ ತೂಗಿದ
ಸರ್ಪ ತನ್ನ ತಾ ಮರೆತಂತೆ

ಜನುಮ ಜನುಮಾಂತರದ ಮಾತು
ಬರೀ ಮಾತು ಕತೆಗೆ

ಪ್ರೀತಿಯ ಭ್ರಮೆಗೆ ಅಂದುಕೊಂಡ
ಮಾಗಿಯ ಕಾಲದಲಿ

ಮನಸು ಅರಳಿದ ಹೊತ್ತಲಿ
ದೇಹವೂ ಅರಳಿತ್ತು ಮಲ್ಲಿಗೆಯ
ಮೊಗ್ಗಿನ ಹಿಗ್ಗಂತೆ ಸುಗ್ಗಿಯ
ರಾಶಿಯಂತೆ

ಬಿಡು ಅಂದಾಗ ಬಿಡಲು
ಬೇಕು ಎಂದಾಗ ಹಿಡಿಯಲು
ಇದು ಮುಟ್ಟಾಟ ಅಲ್ಲ

ಖೋ ಖೋ ಎಂದು
ಬೆನ್ನು ಚಪ್ಪರಿಸಿದರೆ ಓಡಲಾಗದು
ಕುಂತ ನೆಲ ಬಿಟ್ಟು
ಹಿಡಿದ ನೆಲೆ ಕೆಟ್ಟು

ನಂಬಿದ ಬಾಳಿಗೊಂದು ರೀತಿ
ನೀತಿಯನೂ ಹೊಸೆದಾಗ ಹೊಸದ
ಹೊಸೆದು ಬೆಸೆಯಲಾಗದು

ಬೆಸೆದ ಬಿಸಿ ಇನ್ನೂ ಬಿಗಿಯಾಗದು
ಅಂದುಕೊಂಡದ್ದೀಗ
ಬರೀ ಭ್ರಾಂತು ಎಲ್ಲ
ತಿರುವು ಮುರುವು ಹೊಸದು
ಬೆಸೆಯಿತು ಹಳೆಯದು
ಪಿಸಿದು ಪಿಸಿದು ಚೂರಾಯಿತು

ಆದರೂ

ಇಲ್ಲ ವಿಶಾದ
ವಿನಾಕಾರಣ ಏಕೆ ಹೀಗೆಂಬ
ತಳಮಳವೂ ದೂರ ಬಹು
ದೂರ

ಬೇಕಿದ್ದ ಹುಡುಕುತ್ತಿದ್ದ ಕಳ್ಳ
ಮನಸಿಗೀಗ ಬರೀ ಸಡಗರ

ಬೇಕಿದ್ದು ದಕ್ಕಿದ ನಿರಾತಂಕದಲಿ
ಎದೆಯರಳಿ ತೊಟ್ಟುಗಳು ತಡವರಿಸುವ
ತವಕಕೆ ಮೈಯಲ್ಲ ಕಾಲು

ನಡಗುವ ತೊಡೆಗಳಲಿ ಶಕ್ತಿ
ಸಂಚಲನ ಅರಳಿ ನಗುವ
ಚಂದ್ರ ಬಿಂಬಕೆ ಉಕ್ಕೇರಿದ
ತೆರೆಯ ಅಲೆಗಳ ಏರಿಳಿತ

ನಾ ಅರಳಿ ಕೆರಳಿದ್ದೀಗ
ಪೂರ್ಣ ಪರಿಪೂರ್ಣ ಸಂಪೂರ್ಣ

ಸಾರ್ಥಕ ಸಮರ್ಥ ಸಮರ್ಪಕ
ನಾ
ನೀ
ಕಳೆದು ಹೋದ ಹೊತ್ತಲಿ

ಬರೀ ಬೆಳಕು ಥಳ ಥಳ
ಹೊಳೆಯುವ ಮಹಾಬೆಳಗು.

*ಸಿದ್ದು ಯಾಪಲಪರವಿ*

ಒಳಗೆ ಕಾಡುವ

*ಒಳಗೆ ಕಾಡುವ ಪಂಚಮಹಾಭೂತ*

ನಿನ್ನ ದೇಹಕೆ ನೂರು ತುಟಿಗಳು ಮುತ್ತಿಕ್ಕಲು
ಎಂಬ ಭ್ರಾಂತಿಗಿಲ್ಲ ಕೊನೆ ಬೇಕೆನಿಸುವ ತವಕಕೆ

ಕೊಳೆತು ನಾರುತ ಮಣ್ಣ ಸೇರಿ ಮಾಯವಾಗುವ
ದೇಹಕೂ ನಿಲ್ಲದ ಬಯಕೆಗಳು

ಪಂಚಮಹಾಭೂತಗಳು ಹೊರಗು ಒಳಗೂ
ಹೊರಗೆಲ್ಲ ಘಮ ಘಮ
ಒಳಗೆ ಬರೀ ಕೊಳಕು ಮಲ ಮೂತ್ರ ನೆತ್ತರಿನ
ಕಮಟು ವಾಸನೆಗೆ ಚರ್ಮದ ಹೊದಿಕೆ
ಬಣ್ಣ ಬಟ್ಟೆಗಳ ಬಡಿವಾರದ ಸಿಂಗಾರ

ಜೋತು ಬಿದ್ದ ಮೊಲೆಗಳ ಎತ್ತಿ ಕಟ್ಟುವ ಸಡಗರ
ನಿಮಿರದ ಪೌರುಷಕೆ ಸುರಸುಂದರಿ ವಯಾಗ್ರ
ಕಾಂಡೂಮುಗಳ ಕನಸ ಕನವರಿಕೆ

ಮನಸಿಗೆ ಬರೀ ವಿಸರ್ಜನೆಯ ನಿರಾಳತೆ
ಬೆವರು-ಮಲ-ಮೂತ್ರ-ಧಾತು ಹೊರ ಹಾಕಿ
ಹಗುರಾಗುವ ಚಡಪಡಿಕೆಯಲಿ ಗಂಡು ಹೆಣ್ಣು
ಅರಿಯದ ಭೇದ ಭಾವ

ವಿಸರ್ಜಸಿ ಹಗುರಾಗಿ ನಿಟ್ಟುಸಿರು ಬಿಟ್ಟಾಗ
ಅಬ್ಬಾ ! ಅದೆಂತಹ ಆನಂದ ಮನಸಿಗಿಲ್ಲ ಹೇಸಿ
ಭಾವ ಹಗುರಾದ ಉನ್ಮಾದ ನೂತನ

ಮಿಲನಮಹೋತ್ಸವದ ಸಂಭ್ರಮದಿ ಬೆವರು
ಅಮೃತ,  ಬಿಸಿ ನೆತ್ತರಕೆ ಉಕ್ಕುವ ಚೈತನ್ಯ,
ಧಾತುವಿನ ಚಿಮ್ಮುವ ಧಾವಂತಕೆ

ನೀ ನನಗೆ
ನಾ ನಿನಗೆ
ನಾವು ನಮಗಾಗಿ
ಅನಿವಾರ್ಯ ಈ ಹೇಸಿ
ಜನುಮದಲೂ ನಿತ್ಯ ಮತ್ತೆ ಮತ್ತೆ ಹಗುರಾಗುವ
ಸಾಂಗತ್ಯದ ಸೆಳೆತಕೆ.

  *ಸಿದ್ದು ಯಾಪಲಪರವಿ*

Tuesday, December 11, 2018

ಪ್ರಜಾಪ್ರಭುತ್ವ...

*ಸಂವಿಧಾನ ಹಾಗೂ ಭಾರತೀಯ ಪ್ರಜಾಪ್ರಭುತ್ವ ಅಮರ*

ನಮ್ಮ ದೇಶದ ಸಂವಿಧಾನ ಹಾಗೂ ಪ್ರಜಾಪ್ರಭುತ್ವ ಅಮರ ಅಜರಾಮರ ಎಂಬುದನ್ನು ಮತದಾರ ಎತ್ತಿ ಹಿಡಿದಿದ್ದಾರೆ.
ಪಂಚರಾಜ್ಯಗಳ ಫಲಿತಾಂಶ ಈ ದೇಶದ ಪ್ರಜೆಗಳು ಏಕಚಕ್ರಾಧಿಪತ್ಯ ಸಹಿಸುವುದಿಲ್ಲ ಎಂಬುದ ನಿರೂಪಿಸಿದ್ದಾರೆ.

ಕಳೆದ ಲೋಕಸಭೆಯ ಫಲಿತಾಂಶದಿಂದಾಗಿ *ಕಾಂಗ್ರೆಸ್ ಮುಕ್ತ ಭಾರತ* ದಂತಹ ಅಹಂಕಾರದ ಮಾತುಗಳು ಮತದಾರರನ್ನು ಕೆಣಕಿದ್ದು ಸಹಜ.

ಆದರೆ ಜಾಣ ಮತದಾರ ಸದಾ ಜಾಗೃತನಾಗಿ ಬರುವ ಚುನಾವಣೆಗಾಗಿ ಮೌನವಾಗಿ ಕಾಯುತ್ತಾನೆ.

ನಮ್ಮ ಸಂವಿಧಾನದಲ್ಲಿ ವಿರೋಧ ಪಕ್ಷಕ್ಕೆ ಅದರದೇ ಆದ ಘನತೆ, ಗೌರವ ಇದೆ. ಅದನ್ನು ಅಣಕಿಸಿದ ಇಂದಿರಾಗಾಂಧಿ ಅವರಿಗೆ ಜನ ಪಾಠ ಕಲಿಸಿದ ಇತಿಹಾಸವನ್ನು ರಾಜಕೀಯ ಪಕ್ಷಗಳು ಮರೆಯಬಾರದು.

ರಾಜಕೀಯ ಪಕ್ಷ ಹಾಗೂ ಅದರ ನಾಯಕರು ಮತದಾರ ಮನಸು ಮಾಡಿದರೆ ಗೌಣವಾಗಿ ಬಿಡುತ್ತಾರೆ.

ದೇಶದಲ್ಲಿ ಅದ್ಭುತ ಬದಲಾವಣೆ ಬಯಸಿ ಮೋದಿಯವರಿಗೆ ವಿಪರೀತ ಬಹುಮತ ಕೊಟ್ಟು ಗೆಲ್ಲಿಸಿದರು. ಆದರೆ ಅವರ
ಅನೇಕ ನಿರ್ಣಯಗಳು ಜನಸಾಮಾನ್ಯರಿಗೆ ಪ್ರಯೋಜನವಾಗಲಿಲ್ಲ.
ನೋಟು ಅಮಾನ್ಯೀಕರಣ, ಜಿ.ಎಸ್.ಟಿ., ಇಳಿಯದ ಪೆಟ್ರೋಲಿಯಂ ಬೆಲೆಗಳು, ಜಮಾ ಆಗದ ಹದಿನೈದು ಲಕ್ಷ, ಅಪ್ರಸ್ತುತ ಮಂದಿರ ನಿರ್ಮಾಣ...ಇತ್ಯಾದಿ… ಇತ್ಯಾದಿ.

ಕಾಂಗ್ರೆಸ್ ಪಕ್ಷದಲ್ಲಿ ಮೋದಿಗೆ ಸಮಾನರಾದ ನಾಯಕರಿರದಿದ್ದರೂ, ಬಿಜೆಪಿ ಬೇಡವಾದ ಕಾರಣದಿಂದಾಗಿ ಕಾಂಗ್ರೆಸ್ ಅನಿವಾರ್ಯವಾಯಿತು.

ಒಂದೊಂದು ಕಡೆ ಒಂದೊಂದು ರೀತಿಯಲ್ಲಿ ಪರಿಣಾಮ ಕೊಡುವ ತಾಕತ್ತು ಭಾರತೀಯ ಮತದಾರನಿಗಿದೆ.

*ಹಾಗಂತ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಇದೇ ಟ್ರೆಂಡ್ ಇರುತ್ತದೆ ಎಂದು ತಪ್ಪಾಗಿ ಭಾವಿಸಲಾಗದು*.
ಅಂದಿನ ಮನಸ್ಥಿತಿ ಮತ್ತೆ ಬದಲಾಗಿರುತ್ತದೆ, ಈ ಪರಿಣಾಮದಿಂದ ಪಾಠ ಕಲಿತರೆ ಮತ್ತೆ ಮತದಾರ ಬದಲಾಗುತ್ತಾನೆ.

ಭಾರತೀಯ ಪ್ರಜಾಪ್ರಭುತ್ವ ವ್ಯವಸ್ಥೆ ಉಳಿಯಲೆಂದು ಮತದಾರ ಸದಾ ಬಯಸುವುದರಿಂದ ಈ ರೀತಿಯ ಆಟ ಆಡಿ ಪಾಠ ಕಲಿಸುತ್ತಾನೆ.

ನಮ್ಮ ರಾಜಕೀಯ ನಾಯಕರು ಬಹು ಬೇಗ ಇತಿಹಾಸ ಮರೆತುಬಿಡುವುದು ಬಹು ದೊಡ್ಡ ದುರಂತ. ‌

ಇತಿಹಾಸ ಮರೆಯದೇ ವರ್ತಮಾನದ ಜನಸಾಮಾನ್ಯರ ಭಾವನೆ ಗ್ರಹಿಸಿಕೊಂಡು ಆಡಳಿತ ನಡೆಸಲೆಂದು ಮತದಾರ ಬಯಸುತ್ತಾನೆ. ಪಕ್ಷಗಳ ಅಜೆಂಡಾ ಅವನಿಗೆ ಮುಖ್ಯವಾಗುವುದಿಲ್ಲ.

ಜನತಂತ್ರ ವ್ಯವಸ್ಥೆಯಲ್ಲಿ ಯಾರೂ ಮುಕ್ತಲಾಗಲಾರರು, ಆಗಲೂಬಾರದು, ಹಾಗಾದರೆ ಮನುಷ್ಯ ದುರಹಂಕಾರಿಯಾಗಿ ಡಿಕ್ಟೇಟರ್ ಆಗಿಬಿಡುತ್ತಾನೆ.‌

ಸರ್ವಾಧಿಕಾರಿ ಮನು ಮನೋಧರ್ಮ ಮಾನವನಿಗೆ ಬೇಡಾದ ಸಂಗತಿ ಎಂಬುದನ್ನು ತಿಳಿಹೇಳಲು ಈ ಚುನಾವಣಾ ಪರಿಣಾಮಗಳು ನೆರವಾಗಿಬಿಡುತ್ತವೆ.
ರಾಜಕೀಯ ಪಕ್ಷಗಳು ಪಾಠ ಕಲಿಯುತ್ತವೆ ಎಂಬ ಭರವಸೆ ಇಟ್ಟುಕೊಂಡು ರಾಜಕಾರಣದ ತಲ್ಲಣಗಳ ಸಕಾರಾತ್ಮಕವಾಗಿ ಎದುರಿಸೋಣ.

  *ಸಿದ್ದು ಯಾಪಲಪರವಿ*

Sunday, December 9, 2018

ಮೋಹನ್ ನಾಗಮ್ಮನವರ

*ನಾಗಮ್ಮನವರ ಬರೀ ನೆನಪಲ್ಲ*

ಕರ್ನಾಟಕ ಕಾಲೇಜಿನ ಸಂಗಾತಿಗಳೇ ಹಾಗೆ, ಆಯಸ್ಕಾಂತೀಯ ಸೆಳೆತ. ನನ್ನ ಸೀನಿಯರ್ ಮೋಹನ್ ಸೊಗಸಾದ ಮಾತುಗಾರ, ತುಂಬಾ ಜಾಣ ಆದರೂ ಪ್ರ್ಯಾಕ್ಟಿಕಲ್ ಪರೀಕ್ಷೆಗಳಲಿ ಪಾಸಾಗದಷ್ಟು ಜಗಳ ಆಡಿಬಿಟ್ಟಿದ್ದ.

ಪದವಿ ಪಾಸಾಗದಿದ್ರೂ ಬದುಕ ನದಿಗೆ ಈಸಿ ಬಿಟ್ಟಿದ್ದ.
ಹೋರಾಟಗಳ ಮೂಲಕ ಧಾರವಾಡ ನೆಲ ಹಿಡಿದುಬಿಟ್ಟ. ವಿದ್ಯಾವರ್ಧಕ ಸಂಘದ ಚಟುವಟಿಕೆಗಳ ಮೂಲಕ ನೆಲೆ ಕಂಡುಕೊಂಡ.
ಹಳ್ಳಿಯಿಂದ ಬಂದ ನನ್ನಂತ ಸಾವಿರಾರು ಹುಡುಗರ ಹೀರೊ ಆದ.
ಓದುವ, ಬರೆಯುವ,ಮಾತನಾಡುವ ಕಲೆ ಕಲಿಸಿಕೊಟ್ಟ ಗುರುವಾದ.

ನಿಸ್ವಾರ್ಥ ಸೇವೆ ಮೂಲಕ ಜನಾನುರಾಗಿಯೂ ಆದ. ಏನಾದರು ನೌಕರಿ ಮಾಡಬೇಕು ಅನಿಸದಷ್ಟು ಸಂತೃಪ್ತ ಭಾವ ಬೆಳೆಸಿಕೊಂಡ.
ಲಂಕೇಶ್ ಪತ್ರಿಕೆಯ ವಿಶಿಷ್ಟ ಬರಹಗಳ ಮೂಲಕ ನಾಡಿನ ಗಮನ ಸೆಳೆದು ಪತ್ರಿಕೋದ್ಯಮದ ಸೆಳೆತ ಹಚ್ಚಿಕೊಂಡು ನಿರಂತರ ಬರೆಯಲಾರಂಭಿಸಿ ಊಹಿಸದ ಎತ್ತರಕ್ಕೆ ಬೆಳೆದು ನಮ್ಮ ಪಾಲಿನ ಹೀರೊ ಆಗಿಬಿಟ್ಟ.

ಧಾರವಾಡಕ್ಕೆ ಹೋದಾಗಲೆಲ್ಲ ಭೇಟಿಯಾದಾಗ ಅದೇ ಹಳೆಯ ಗೆಳೆತನದ ವಾತ್ಸಲ್ಯದ ಹೊನಲು.
ಸಂಘದ ಚುನಾವಣೆಯಲ್ಲಿ ಸ್ವಂತ ಬಲದಿಂದ ಗೆಲ್ಲುವ ಸಾಮರ್ಥ್ಯ. ಅಚ್ಚುಕಟ್ಟಾಗಿ ಕಾರ್ಯಕ್ರಮಗಳ‌ ಆಯೋಜಿಸುವ ಕುಶಲತೆ, ಸಂಘಟನಾ ಸಾಮರ್ಥ್ಯ.

ಹಿರಿಯರೊಂದಿಗೆ ನವಿರು ಸಂಬಂಧ, ಕಿರಿಯರೊಡನೆ ಆತ್ಮೀಯತೆ, ರಾಜಕಾರಣಿಗಳ ಜೊತೆ ಅಗತ್ಯಕ್ಕೆ ಬೇಕಾದಷ್ಟು ಒಡನಾಟಗಳ ಮೂಲಕ ಎಲ್ಲ ಗಳಿಸುತ್ತ ಹೋದ ಹಣ *ಹೊರತು ಪಡಿಸಿ*.

ಸರಕಾರದ ವಿವಿಧ ಸಮಿತಿಗಳು, ಹುಬ್ಬಳ್ಳಿ-ಧಾರವಾಡ ಮಹಾನಗರಪಾಲಿಕೆ ಚಟುವಟಿಕೆಗಳಿಗೆ ಜೀವ ತುಂಬಿದ.
ಅತಿಯಾದ ಕೂಗಾಟ,ಹಾರಾಟ ಇರದ ತಣ್ಣನೆಯ ಚಳುವಳಿಗಳಿಗೆ ಹೊಸ ಆಯಾಮ ಕೊಟ್ಟ ಹೆಗ್ಗಳಿಕೆ ಮೋಹನ್ ನಾಗಮ್ಮನವರ ಅವರಿಗೆ ಸಲ್ಲುತ್ತದೆ.

ನಾನೂ ಧಾರವಾಡಕ್ಕೆ ಬರಲಿ ಎಂಬ ಆಸೆಯೂ ಇತ್ತು.‌ ಗದುಗಿನ ಪರಿಸರ ನನಗೆ ಸಾಲದು ಎಂದು ತಿವಿಯುತ್ತಿದ್ದ.
ಸರಕಾರಿ ಉದ್ಯೋಗ, ತೋಂಟದಾರ್ಯ ಮಠದ ಸೆಳೆತದಿಂದಾಗಿ‌ ಗದಗ ಬಿಡುವ ಮನಸಾಗಲಿಲ್ಲ.

ಆಹ್ವಾನಿಸಿದ ಕಾರ್ಯಕ್ರಮಗಳಿಗೆ ತಪ್ಪದೇ ಹಾಜರು, ನಾನೂ ಅಷ್ಟೇ ಕರೆದರೆ ಓಡಿ ಹೋಗುತ್ತಿದ್ದೆ. ಹತ್ತಾರು ಬೈಟಕ್ಕುಗಳು, ಕಳೆದ ಮಧುರ ಕ್ಷಣಗಳು ಒತ್ತರಿಸುತ್ತಲೇ ಇವೆ.
*ವೈಯಕ್ತಿಕ ಬದುಕಿನ ಖಾಸಗಿ ಸಂಗತಿಗಳಿಗೆ ಮೌನ ಸಾಕ್ಷಿಯಾದೆ*. ಹಲವು ಘಟನೆಗಳಿಗೆ ಇಬ್ಬರೂ ಅಸಹಾಯಕರು.

ರಾಜಕಾರಣದ ಹುಚ್ಚಿತ್ತಾದರೂ ಅದರ ಮಿತಿ ಮತ್ತು ಅಪಾಯ ಗೊತ್ತಿತ್ತು. ಹೀಗಾಗಿ ಸೂಜಿಗೆ ಕೊಟ್ಟ ಮುತ್ತಾಯಿತು.

ಹಿರಿಯ ತಲೆಮಾರಿನ ಸಾಹಿತಿಗಳಿಗೆ ನಾಗಮ್ಮನವರ ಊರುಗೋಲಾದ. ಧಾರವಾಡದ ಕಲ್ಯಾಣನಗರ  *Pensioners Paradise* ನಂತಾಗಿತ್ತು, ಅಲ್ಲಿ ನೆಲೆಸಿರುವ ಸಾಹಿತಿಗಳ ಮಕ್ಕಳೆಲ್ಲ ಈಗ ಅನಿವಾಸಿ ಭಾರತೀಯರು.‌ ಹಿರಿಯರ ಒಂಟಿತನ ದೂರ ಮಾಡಲು ಮೋಹನ್ ಮಗನಂತೆ ನೆರವಾದ.

ಅತಿಯಾದ ಓಡಾಟ, ಸಂಜೆಯ ಬೈಟಕ್ಕುಗಳು ಆರೋಗ್ಯ ಹಾಳಾಗಲು ಒಂದು ನೆಪವಿರಬಹುದು, ಆದರೂ ಇದು ಅರ್ಧಸತ್ಯ.

ಕೊನೆ ದಿನಗಳಲ್ಲಿ ತುಂಬ ಹಿಂಸೆ ಅನುಭವಿಸಿದ, ಡೈಲೆಸಿಸ್ ಅನಿವಾರ್ಯ ಆದಾಗ ಬದುಕು ಕಠಿಣ ಅನಿಸಿತು.

ಅನಾರೋಗ್ಯ-ಮುಪ್ಪು-ಸಾವು ಬದುಕಿನಲ್ಲಿ ಅನಿವಾರ್ಯ ಆದರೆ ಬೇಗ ಬರಬಾರದಲ್ಲ. ಅದೂ ಇಷ್ಟೊಂದು ಪಾದರಸದಂತೆ ಓಡಾಡುವ ಜೀವಗಳಿಗೆ. ಅದಕೆ ನೋವು, ತಲ್ಲಣ, ಹತಾಷೆ, ಹಳಹಳಿ, ಹೇಳಲಾಗದ ದುಃಖ.
ಈ ಹಿಂದೆ ಕುಲಕರ್ಣಿ ವೀಣಾ ಅಕಾಲಿಕವಾಗಿ ಹೋದಾಗ ಅಷ್ಟೇ ಒದ್ದಾಡಿದ್ದೆ, ಈಗ ಮೋಹನ್.
ಛೇ ! ಈ ಸಾವು ನ್ಯಾಯವಲ್ಲ ಖರೆ ಆದರೂ…

  *ಸಿದ್ದು ಯಾಪಲಪರವಿ*

Thursday, December 6, 2018

ನನಗಾಗಿ ನೀ

*ನನಗಾಗಿ ನೀ ನಾನಾಗಿಬಿಟ್ಟೆ*

ನನಗಾಗಿ ನೀ ಇಟ್ಟ ಹೆಸರ ಬಿಟ್ಟೆ
ಹೊಸ ಹೆಸರ ತೊಟ್ಟೆ

ನೀನೇ ಹಾಕಿಕೊಂಡ ಗಡಿ ಬಿಟ್ಟೆ
ಆಳಿದವನ ಸಂಗ ಬಿಟ್ಟು ಬಿಟ್ಟೆ

ಮೈಮನಗಳ ಕೊಟ್ಟು ನಿನ್ನ ನೀ ಬಿಟ್ಟೆ
ನಿಟ್ಟುಸಿರ ಬಿಟ್ಟು ಬಿಸಿಯುಸಿರ ಕೊಟ್ಟೆ

ನಿಶಬ್ದವಾದ ಬಂಧನವ ಬಿಗಿಯಲು ಕೊಟ್ಟೆ
ಶಬ್ದಗಳ  ಭಂಡಾರದ ಕೀಲಿ ಕೈಲಿಟ್ಟೆ

ಉಸಿರ ಹಸಿರಲಿ ಮೋಹಿಸಿ ಕಾಪಿಟ್ಟೆ
ತೋಳಬಂಧಿಯಲಿ ತಲೆ ಇಟ್ಟೆ

ಕೊಡುವುದೆಲ್ಲವ ಕೊಟ್ಟು ಅರಳಿದ
ಮನಸ ಕೆರಳಲು ಹರಿಬಿಟ್ಟೆ

ಇದು ಲೋಕದ ಮಾತಲ್ಲ ಎಂದರಿತು ಬಿಟ್ಟೆ
*ಅವನ* ಲೀಲೆಗೆ ಶರಣಾಗಿ ಮೈಛಳಿ ಬಿಟ್ಟೆ

ಬಿಡಲು ಇನ್ನು ಏನೂ ಉಳಿದಿಲ್ಲವೆಂದರಿತು
ನಂಬಿದ ಮನಸಿನಲಿ ಲೀಲವಾಗಿ ಬಿಟ್ಟೆ

ಬಿಡು ಬಿಡು ಎಂದಾಗ ಮೌನವಾಗಿ ಬಿಟ್ಟೆ
ಮತ್ತೆ ಮತ್ತೆ ಕೊಡುವ ಲೆಕ್ಕ ಇಟ್ಟೆ

ಭಾವನೆಗಳ ಉಸಿರ ತಳಮಳವ ಕೈಗಿಟ್ಟು
ಮಹಾ ಕಾವ್ಯವಾಗಿ ನನ್ನ ಕೂಡಿಬಿಟ್ಟೆ

ಮಹಾ ಬಿಡಿಸಲಾಗದ ಒಗಟ ಬಿಡಿಸಿಬಿಟ್ಟೆ
ಒಲವಲೋಕಕೊಂದು ಹೊಸ ಅರ್ಥ ಕೊಟ್ಟೆ

ಈಗ ನೀ ನಾನಾಗಿ ನಿಶ್ಚಿಂತವಾಗಿ ಬಿಟ್ಟೆ.

*ಸಿದ್ದು ಯಾಪಲಪರವಿ*

Thursday, November 29, 2018

ಎಚ್. ಕಾವ್ಯಶ್ರೀ ನಾಟಕ ಅಗ್ನಿದಿವ್ಯ

ಸಂಶಯದ ಮೇಲೆ ಮತ್ತೊಂದು ಗದಾಪ್ರಹಾರ
*ಎಚ್.ಕಾವ್ಯಶ್ರೀ ಅವರ ನಾಟಕ  ಅಗ್ನಿದಿವ್ಯ*

ಸಾಹಿತ್ಯದಲ್ಲಿ ಅಗ್ರಸ್ಥಾನ ಕಾವ್ಯಕ್ಕೆ  , ದೃಶ್ಯ ಮಾಧ್ಯಮದಲ್ಲಿ ನಾಟಕಕ್ಕೆ ಕಾರಣ ಬೀರಬಹುದಾದ ತೀವ್ರ ಪರಿಣಾಮ.

ಕಿರುತೆರೆ ಹಾಗೂ ಹಿರಿತೆರೆ ಮೇಲಿರುವ ಕೃತಕತೆ ಹಾಗೂ ಢಾಳತೆಯಿಂದ ಬಹು ದೂರವಿರುವ ರಂಗಭೂಮಿ ದೃಶ್ಯ ಪ್ರಕಾರದ ಹಿರಿಯಣ್ಣ.

ನಾಟಕದ ಮೂಲಕ ಅತ್ಯಂತ ಗಂಭೀರ ವಿಷಯಗಳನ್ನು ತೀಕ್ಷ್ಣವಾಗಿ ಪ್ರತಿಬಿಂಬಿಸಬಹುದು.

ಈ ಹಿನ್ನೆಲೆಯಲ್ಲಿ ಎಚ್.ಕಾವ್ಯಶ್ರೀ ಅವರು  *ಅಗ್ನಿದಿವ್ಯ*ದ ಮೂಲಕ ಹೊಸ  ಕಾಣಿಕೆ ನೀಡಿದ್ದಾರೆ.

ನಮ್ಮ ಮಹಾಕಾವ್ಯದ ಪಾತ್ರಗಳು ದಿನಕ್ಕೊಂದು ಬಗೆಯಲಿ ಕಾಡುತ್ತಲೇ ಇವೆ. ಸೀತೆ , ದ್ರೌಪದಿ , ಊರ್ಮಿಳೆ , ಶಾಕುಂತಲೆ , ಅನುಭವ ಮಂಟಪದ ಅಕ್ಕ , ಶೆಕ್ಷಪಿಯರ್ ನಾಟಕದ ಡೆಸ್ಡಿಮೋನಾ ಎಲ್ಲರೂ ಬಗೆ ಬಗೆಯಾದ ಅನುಭವ ನೀಡುತ್ತಾರೆ.

ಸೀತೆ ಎದುರಿಸಿದ ಅಗ್ನಿಪರೀಕ್ಷೆಯನ್ನು ಆಧುನಿಕ ಮಹಿಳೆಯರ ಸಮಕಾಲೀನ ಸವಾಲುಗಳ ಮೇಲೆ ಬೆಳಕು ಚಲ್ಲಿದ್ದಾರೆ.

ರಾಮಾಯಣ ದೃಶ್ಯಗಳನ್ನು ಆಧರಿಸಿ ನಡೆಯುವ ರಿಹರ್ಸಲ್ ಮೂಲಕ ನಾಟಕ ಪ್ರಾರಂಭವಾಗುತ್ತದೆ . ನಟರು ರಾಮಾಯಣದ ದೃಶ್ಯಗಳಲ್ಲಿ ಮುಳುಗಿಹೋಗಿ ತಮ್ಮನ್ನು ತಾವು ಸಮೀಕರಿಸಿಕೊಳ್ಳುವ ಬಗೆ ಕೂಡಾ ವಿಭಿನ್ನ.

ನಾಟಕ ಆರಂಭವಾದ ಕೆಲವೇ ನಿಮಿಷಗಳಲ್ಲಿ ವಸ್ತು ನವಿರಾಗಿ ತೆರೆದುಕೊಳ್ಳುತ್ತದೆ. ಅಗ್ನಿಪರೀಕ್ಷೆಗೆ ಒಳಗಾಗುವಾಗ ಸೀತೆ ಕೇಳುವ ಪ್ರಶ್ನೆಗಳಿಗೆ ಉತ್ತರಿಸುವುದು ಕಷ್ಟ .

ಅಗ್ನಿಪರೀಕ್ಷೆಗೆ ರಾಮ ಕೊಡುವ ಕಾರಣಗಳನ್ನು ಸೀತೆ ಕೇಳಿಸಿಕೊಂಡು ನಂತರ  ತಿರುಗೇಟಿನ ಮೂಲಕ ಕೊಡುವ ಪೆಟ್ಟು ಸಣ್ಣದಲ್ಲ.

ಪುರುಷಪ್ರಧಾನ ವ್ಯವಸ್ಥೆಯಲ್ಲಿ ಹೆಣ್ಣು ಸಂಪ್ರದಾಯದ ನೆಪದಲ್ಲಿ ಅನುಭವಿಸುವ ಯಮಯಾತನೆಯನ್ನು  ಅರ್ಥಪೂರ್ಣವಾಗಿ ಹೆಣೆಯಲಾಗಿದೆ.

ರಾಮ-ಸೀತೆಯರ ಪಾತ್ರಧಾರಿಗಳ ತೊಳಲಾಟದ  ಮನೋಕ್ಷೋಭೆಯನ್ನು ಪರಿಣಾಮಕಾರಿಯಾಗಿ ನಾಟಕಕಾರರು ಮುಖದ ಮೇಲೆ ಎಸೆಯುತ್ತಾರೆ .

ಅಗ್ನಿಪರೀಕ್ಷೆ ಹಾಗೂ ಅಗಸನ ಮಾತಿಗೆ ಮನ್ನಣೆ ಕೊಟ್ಟು ಕಾಡಿಗೆ ಅಟ್ಟುವ ಮೂಲ ಉದ್ದೇಶ ಕೇವಲ *ಸಂಶಯ* ಮಿಕ್ಕದ್ದೆಲ್ಲ ಬರೀ ನೆಪ.

ರಾಮಾಯಣದ ಸೀತೆ ಹಾಗೂ ಪಾತ್ರದಾರಿ ದಿವ್ಯ ಎದುರಿಸುವ ತಲ್ಲಣ ಒಂದೇ ಆದರೆ ಕಾಲ ಬೇರೆ.

ಸೀತೆ ಅನುಭವಿಸಿದ ಹಿಂಸೆಯನ್ನು ದಿವ್ಯ ಎದುರಿಸಿ ಅರಗಿಸಿಕೊಳ್ಳಲು ಪ್ರಯತ್ನಿಸುತ್ತಾಳೆ ಆದರೆ ಕೊನೆಗೆ ಅವಳು ತೆಗೆದುಕೊಳ್ಳುವ ನಿರ್ಣಯ !
ಅಬ್ಬಾ ! ಪ್ರೇಕ್ಷಕ ನಿಟ್ಟುಸಿರು ಬಿಡುತ್ತಾನೆ.

ಇಂತಹ ಕಠಿಣ ವಸ್ತುವನ್ನು ರಂಗದ ಮೇಲೆ ಪ್ರಯೋಗ ಮಾಡುವದೊಂದು ದೊಡ್ಡ ಸವಾಲು.
ಆ ಸವಾಲನ್ನು ನಿರ್ದೇಶಕ ಲಕ್ಷ್ಮಣ ಪೀರಗಾರ ಸಮರ್ಪಕವಾಗಿ ನಿರ್ವಹಿಸಿದ್ದಾರೆ.

ಮನುಷ್ಯನ ಮನಸ್ಸಿನ ಸೂಕ್ಷ್ಮಾತೀತ ಸಂಗತಿಗಳ ಎಳೆಹಿಡಿದು ನಮ್ಮ ಸಂಪ್ರದಾಯದ ಮೂಲಭೂತವಾದವನ್ನು ಕೆಣಕುತ್ತಾರೆ.

ಹೆಣ್ಣನ್ನು ಸಂಶಯಿಸಿ , ಸತಾಯಿಸಿ ಕಾಡುವ ರೀತಿ ರಿವಾಜುಗಳ ಮೇಲೆ  ನಾಟಕಕಾರರು ಗದಾಪ್ರಹಾರ ಮಾಡಿ ಕೊಂಚ ಆಲೋಚನೆಗೆ ಹಚ್ಚಲು ಯಶ ಸಾಧಿಸಿದ್ದಾರೆ.

ಗದಗ ಜಿಲ್ಲೆಯ ರೋಣ ತಾಲೂಕಿನ ಕೊತಬಾಳ ಗ್ರಾಮದ ಅರುಣೋದಯ ಕಲಾತಂಡದ ಶಂಕರಣ್ಣ ಸಂಕಣ್ಣವರ್ ಹಾಗೂ ಕಲಾವಿದರ ಶ್ರಮ ಸಾರ್ಥಕವೆನಿಸುತ್ತದೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಲಾತಂಡಗಳನ್ನು ಉತ್ತೇಜಿಸುವ ಹೊಸ ಯೋಚನೆಯ  ಪ್ರತಿಫಲವೇ *ಅಗ್ನಿದಿವ್ಯ*.

*ನೊಂದವರ ನೋವ ನೋಯದವರು ಎತ್ತ ಬಲ್ಲರು* ಎಂಬ ಮಹದೇವಿ ಅಕ್ಕನ ಸಾಲುಗಳು ಮನದ ತುಂಬೆಲ್ಲ ರಿಂಗಣಿಸುತ್ತಿರುವಾಗ ನೂರಾರು ಸೀತೆಯರ ಅಸಹಾಯಕತೆ ನೆನಪಾಯಿತು.

ಸೂಕ್ಷ್ಮ ವಿಷಯವನ್ನು ರಂಗಾಭಿನಯದ ಮೂಲಕ ಮನದಾಳದಲಿ ಅಚ್ಚೊತ್ತಲು ಕಾರಣರಾದ ಎಲ್ಲರಿಗೂ ಅಭಿವಂದನೆಗಳು.

ಮಹಿಳಾ ಸಬಲೀಕರಣ ಹಾಗೂ ಫೆಮಿನಿಸಮ್ ಕುರಿತ ರಂಗ ಪ್ರತಿಪಾದನೆಯ ಮುನ್ನೋಟ ಇದು.

---ಸಿದ್ದು ಯಾಪಲಪರವಿ.