Sunday, December 30, 2018

ಖುಷಿಯಾಗಿರಲು...

*ಖುಷಿಯಾಗಿರಲು ಏಕಾಂತ ಸಾಕು*

ನಾವು ಎಲ್ಲ ಏನೆಲ್ಲ ಮಾಡುವುದು ಕೇವಲ ಖುಷಿಗಾಗಿ. ಖುಷಿಯನ್ನು ಎಲ್ಲಂದರಲ್ಲಿ ಹುಡುಕುತ್ತೇವೆ.‌ ಗೆಳೆಯರು, ಬಂಧುಗಳು, ಕುಟುಂಬದ ಸದಸ್ಯರು…
ಊ ಹೂಂ ಯಾರೂ ಖುಷಿ ಕೊಡಲಾರರು, ನಾವು ನಿರೀಕ್ಷಿಸಲೂ ಬಾರದು.

ಎಲ್ಲರಿಗೂ ಅವರದೇ ಆದ ಆಯ್ಕೆಗಳಿರುತ್ತವೆ, ಆಸೆಗಳಿರುತ್ತವೆ, ಅವುಗಳ ಪೂರೈಸುವ ಸ್ವಾರ್ಥವೂ ಇರುವುದು ಸಹಜ.
ನಮ್ಮ ನಿರೀಕ್ಷೆ ನಮ್ಮ ದುಃಖಕ್ಕೆ ಮೂಲ ಎಂದು ಗೊತ್ತಿದ್ದರೂ ಮತ್ತೆ ಮತ್ತೆ ನಿರೀಕ್ಷಿಸುತ್ತಲೇ ಸಾಗುತ್ತೇವೆ.

ಹೊಸ ವರ್ಷ, ಹುಟ್ಟು ಹಬ್ಬ ನಮ್ಮ ಸಡಗರವಾಗದೇ ಕಳೆದು ಹೋದ, ನಾವು ವಿನಾಕಾರಣ ಕಳೆದುಕೊಂಡ ಕಾಲದ ಪರಾಮರ್ಶೆಯಾಗಬೇಕು.

ಎಲ್ಲ ಬಿಟ್ಟು ದೂರ ಹೋಗಲು ನಾವು ಸನ್ಯಾಸಿಗಳೇನು ಅಲ್ಲವಾದರೂ ಕೊಂಚ ನಿರ್ಲಿಪ್ತತೆ ಅನಿವಾರ್ಯ.
ಕಾಲನ ವೇಗದಲ್ಲಿ ಎಲ್ಲರಿಗೂ ಗಡಿಬಿಡಿ, ಧಾವಂತ.
*ಒಂದು ಮುಗುಳು ನಗೆ, ಬಿಸಿಯಪ್ಪುಗೆ, ಸಿಹಿ ಮುತ್ತಿಗಾಗಿ ಪ್ರತಿ ಜೀವಗಳು ಹಾತೊರೆಯುತ್ತವೆ*. ಆದರೆ ಯಾರಿಂದ ನಾವು ನಿರೀಕ್ಷಿಸಬೇಕೆಂಬುದೇ ಗೊಂದಲ.

ಹರೆಯದಲ್ಲಿ ಹೆಂಡತಿ, ಕೊಂಚ ದೊಡ್ಡವರಾದ ಮೇಲೆ ಮಕ್ಕಳು, ಇನ್ನೂ ಮಾಗಿದ ಮೇಲೆ ಮೊಮ್ಮಕ್ಕಳು ಮುಂದೆ…
ಎಲ್ಲವೂ ಎಲ್ಲರೂ ಖಾಲಿ ಖಾಲಿ.

ಹೆಂಡತಿ ಅಥವಾ ಗಂಡನಿಗೆ ಅದೇನೋ ಜವಾಬ್ದಾರಿಗಳ ನೆಪ, ಒತ್ತಾಯದ ಸನ್ಯಾಸ ಬದುಕು. ದೈಹಿಕವಾಗಿ ಜೊತೆಗಿದ್ದರೂ ಗೊತ್ತಾಗದಂತೆ ದೂರಾಗುವ ಪರಿಯೇ ವಿಚಿತ್ರ,

ಅದೇನೋ ಬಿಗುಮಾನ, ಸಂಕೋಚ ಬಿಗಿದಪ್ಪಿ ಮುದ್ದಿಸಲೂ.
ಎಂತಹ ವಿಚಿತ್ರ ನೋಡಿ ಒಂದು ಕಾಲದ ಜೋಡಿ ಹಕ್ಕಿಗಳು ತಮಗೆ ವಯಸ್ಸಾಗಿ ಮುಪ್ಪು ಆವರಿಸಿತೇನೋ ಎಂಬ ಹುಚ್ಚು ಹಿಡಿಸಿಕೊಂಡ ಕೊರಗು.

ಅನುಸಂಧಾನ, ಅನುರಾಗ, ಅನ್ಯೋನ್ಯತೆಗೆ ವಯಸ್ಸು ಅಡ್ಡಿಯಾಗಬಾರದು, ಇಬ್ಬರಿಗೂ ಅಷ್ಟೇ ವಯಸ್ಸಾಗಿರುತ್ತೇ ಆದರೂ ಈ ಹಿಂಜರಿತ ಯಾಕೋ ಅರ್ಥವಾಗದು.
ಇಂತಹ ಅರ್ಥವಾಗದ ಸಂಗತಿಗಳನ್ನು ಅರ್ಥ ಮಾಡಿಕೊಳ್ಳಲು ಮನಸು ಮಾಡಬೇಕು ಅಷ್ಟೇ.

ದೇಹಕ್ಕೆ ವಯಸ್ಸಾಗುತ್ತೆ, ಮನಸಿಗೆ ವಯಸ್ಸಾಗುವುದಿಲ್ಲ ಎಂಬುದು ನಮಗರ್ಥವಾಗುವುದೇ ಇಲ್ಲ.
ಸರಿ ಹಾಗಾದರೆ ಒಂಟಿಯಾದರೇನಂತೆ ಧ್ಯಾನ, ಸಂಗೀತ ಆಲಿಸುವಿಕೆ, ಓದು,ಬರಹ, ಓಡಾಟ, ಹರಟೆ ಮೈಗೂಡಿಸಿಕೊಂಡರೆ ಸಾಕಲ್ಲ.

ಈ ಮಧ್ಯೆ ಸುಡುಗಾಡು ಸಣ್ಣಪುಟ್ಟ ಅನಾರೋಗ್ಯ ಬೇರೆ. ಅವುಗಳದೇ ಧ್ಯಾನ. ಅದು ಅನಗತ್ಯ ನಕಾರಾತ್ಮಕ ಧ್ಯಾನ.

“ನಿನ್ನ ಪಾಡಿಗೆ ನೀನೂ ಖುಷಿಯಿಂದ ಇರು ಓಡಾಡಿಕೊಂಡು, ಬೇಕಾದ ಕೆಲಸಗಳೊಂದಿಗೆ” ಎಂದು ಸಂಗಾತಿಗಳಿಗೆ ಹೇಳುವ, ಸ್ವಾತಂತ್ರ್ಯ ಕೊಡುವ ಮನಸ್ಥಿತಿ ನಮಗಿರುವುದಿಲ್ಲ. ಕೊನೆವರೆಗೂ  ನಮ್ಮ ಸೇವೆ ಮಾಡಿಕೊಂಡು ಸಾಯಲೆಂಬ ಕೊಳಕು ಮನೋಧರ್ಮ ಬೇರೆ!
ನಿರ್ಮಲ, ನಿರಾತಂಕ, ನಿಶ್ಚಲ, ನೆಮ್ನದಿಯ ಏಕಾಂತ ಜೀವನವನ್ನು ನಾವು ಅನುಭವಿಸಿ, ನಮ್ಮೊಂದಿಗಿರುವವರಿಗೂ ಅನುಭವಿಸುವ ಅವಕಾಶ ಕೊಡುವ ಸಂಕಲ್ಪ ಮಾಡೋಣ.
ಏಕಾಂತ ಒಂಟಿತನ ಅಲ್ಲವೇ ಅಲ್ಲ. ಅದೊಂದು ಮನಸಿನ ಮುದ. ಆತ್ಮಾನುಸಂಧಾನದ ಮೆಲ್ಲುಸಿರ ಸವಿಗಾನ.
ಬನ್ನಿ ಏಕಾಂತದ ಖುಷಿಯಲ್ಲಿ ಹೊಸ ಹಾದಿ ಹುಡುಕೋಣ.
ನಾನು, ನಾವು, ನೀನು, ನೀವೂ…

  *ಸಿದ್ದು ಯಾಪಲಪರವಿ*

No comments:

Post a Comment