Monday, January 27, 2020

ತಪ್ಪು ಬಿಗಿದಪ್ಪು

ತಪ್ಪು ಒಪ್ಪು ಬಿಗಿದಪ್ಪು 

ನೀನು ಹೇಳದೇ ಕೇಳದೇ ಬರಲಿಲ್ಲ

ಕರೆದಾಗ ಬಂದೆನೆಂಬುದೊಂದು ಮಿಥ್ 

ಮಿಥ್ಯವೂ ಅಲ್ಲ‌ ಸತ್ಯದ ಒಳಗಡಗಿರುವ 

ಮಿಥ್ಯ 

ಬಯಲ ಆಲಯದೊಳಗೆ ಸಾರಿ ಸಾರಿ 

ಹೇಳಲಾಗದು ನೀ ನನ್ನವಳು ನಾ

ನಿನ್ನವನೆಂಬ ನಿಗೂಢ ನಿಧಿ ನೀ 

ಹೇಳದಿದ್ದರೂ ಭ್ರಾಂತಿಯಲಿ ಅಗೆದು 

ಹುಡುಕಿ ತಡಬಡಿಸಿ ಕೆಬರಾಡುವ 

ಮನಸುಗಳ ಕಳವಳಕೆ ನಾವು 

ಸಿಗದ ನೆಲದ ಮರೆಯ ನಿಧಾನ 

ಹೊಣೆ ಅಲ್ಲ ಅವಾಸ್ತವದ ಸತ್ಯಕೆ 

ಯಾರೂ ಆದರೂ ಹೊಣೆ ನಾವು 

ನಮ್ಮ ನಮ್ಮ ಮೂಗಿನ ನೇರದ 

ಅನುಸಂಧಾನದ ಗುಂಗಲಿ ಸತ್ಯ 

ಕೇಳಲು ಇಲ್ಲ ಈಗ ಪುರುಸೊತ್ತು 

ನಡೆದದ್ದೇ ದಾರಿ ಹುಡುಕಿದ್ದೇ ಮಾರ್ಗ 

ಕಾಯುವವ ಕೊಲ್ಲಲಾರನೆಂಬ ನಂಬಿಗೆ

ಅದೇ ಬದುಕ ಬಾಳಾಗಿಸಿದೆ ತಲೆ ದಿಂಬಿಗೆ 

ದೇಹ ದೇವಾಲಯವಾದಾಗ ಮನಸು 

ದೇವತೆ ಮಿಲನ ಸಡಗರದಲಿ 

ಹಗಲು ರಾತ್ರಿ ಒಂದೇ ಬಿಗಿದ ಬಂಧನಕೆ 

ತಪ್ಪು ಯಾವುದು ಯಾರದು 

ಮನದ ಮುಂದಣ ಆಸೆ ಹೌದು

ಬೇಕಿತ್ತು ಬೇಕಾಗಿದೆ ಬೇಕಾಗುತ್ತೆ 

ಮುಂದೆಯೂ ಗೊತ್ತಿದ್ದು ಮಾಡಿದ 

ತಪ್ಪಿಗೆ ದೇವನೊಪ್ಪಿಗೆ ಮಾಡಿದ 

ತಪ್ಪಲೂ ತಪ್ಪದ ಸಡಗರದ ಅನು

ಸಂಧಾನದ ಸವಿಗಾನ 

ಮೈಮನಗಳ ಮಿಲನದಾಸೆಗೆ ಬರುವ

ಸಾವಿರದ ನೋವಲು ಮಧುರ ಸವಿ

ಜೇನು ಗೊತ್ತಿದ್ದೂ ಮಾಡುವ ತಪ್ಪಲೂ

ಜೇನು ತುಪ್ಪ 

ನಮಗೆ ನಾವೇ ಹೊಣೆಗಾರರು 

ನಮ್ಮ ಸಂಭ್ರಮದ ಸಂಕಟಕೆ 

ತಪ್ಪುಗಳ ಸರಮಾಲೆಯಲಿ ಸುಖದ

ಪರಿಮಳದ ಘಮಲು ಸವಿಯಲು 

ಯಾರಪ್ಪಣೆ ಬೇಡ ಹೊರಡೋಣ 

ನಡೆ ದೂರ ಬಹು ದೂರ...

Tuesday, January 14, 2020

ಮಠಗಳ ಮಿತಿ

ಮಠಗಳ ಮಿತಿ ಮತ್ತು ರಾಜಕಾರಣ

ಕಳೆದ ಕೆಲವು ವರ್ಷಗಳಿಂದ ರಾಜ್ಯದ ಗೌರವಾನ್ವಿತ ಮಠಾಧೀಶರು ತಮ್ಮ ಸಂಯಮ ಕಳೆದುಕೊಂಡವರಂತೆ ವರ್ತಿಸುತ್ತಿರುವುದು ಧಾರ್ಮಿಕ ವಿಪರ್ಯಾಸ.

ಮಠಗಳು ಅಧ್ಯಾತ್ಮ ಮತ್ತು ಶ್ರದ್ಧಾ ಕೇಂದ್ರಗಳಾಗಬೇಕು.

ಸಂಸಾರಗಳಿಗೆ,ಲೌಕಿಕರಿಗೆ ಮನಸಿಗೆ ಬೇಸರವಾದಾಗ ಕಾಲ ಕಳೆದು ನೆಮ್ಮದಿ ನೀಡುವ ಶಾಂತಿ ಧಾಮಗಳಾಗಬೇಕು.

ಸಮಾಜದ ಪ್ರತಿಯೊಂದು ಜಾತಿ,ಧರ್ಮದ ಪೀಠಾಧಿಪತಿಗಳು ತಮ್ಮ ಪೀಠಗಳ ಅಧಿಕಾರವನ್ನು ತಮ್ಮ ಸಮಾಜದ ರಾಜಕಾರಣಿಗಳಿಗೆ ಮೀಸಲಿಟ್ಟವರಂತೆ ಅಸೂಕ್ಷ್ಮವಾಗಿ ದಯವಿಟ್ಟು ವರ್ತಿಸಬಾರದು. 

ರಾಜಕೀಯ ವ್ಯವಸ್ಥೆಯಲ್ಲಿ ಪ್ರತಿಯೊಂದು ಪಕ್ಷಗಳು ತಮ್ಮ ಸಿದ್ಧಾಂತ ಮತ್ತು ಆಂತರಿಕ ಪರಸ್ಥಿತಿಗನುಗುಣವಾಗಿ ರಾಜಕೀಯ ನಿರ್ಧಾರ ತೆಗೆದುಕೊಳ್ಳುತ್ತವೆ.

ಪಕ್ಷದ ಶಾಸಕಾಂಗ ಸಭೆ ಮತ್ತು ಪದಾಧಿಕಾರಿಗಳು ತೆಗೆದುಕೊಳ್ಳಬಹುದಾದ ಆಂತರಿಕ ನಿರ್ಣಯಗಳ ಕುರಿತು ಧಾರ್ಮಿಕ ಮಠಗಳು ಬಹಿರಂಗ ಚರ್ಚೆ ಮಾಡುವುದು ಅಕ್ಷಮ್ಯ.

ಯಾವುದೇ ಧರ್ಮ ಮತ್ತು ಸಿದ್ಧಾಂತ ಈ ರೀತಿ ಆದೇಶ ಮಾಡುವ ಅಧಿಕಾರ ನೀಡಿಲ್ಲ ಎಂಬುದನ್ನು ಮಠಾಧೀಶರು ಅರಿತು ಮಾತನಾಡಬೇಕು.

ಈ ಎಲ್ಲ ಬೆಳವಣಿಗೆಯನ್ನು ಗಮನಿಸಿದರೆ ಸ್ವಾಮಿಗಳು ಸುಮ್ಮನಿರುವ ಹಾಗೆ ಕಾಣುವುದಿಲ್ಲ ಅವರನ್ನು ನಿಯಂತ್ರಿಸುವ ಜವಾಬ್ದಾರಿಯನ್ನು ಆಯಾ ಮಠಗಳ ಭಕ್ತರೇ ಹೊರಬೇಕು.

ಇಲ್ಲವೇ ರಾಜಕೀಯ ನಾಯಕರು ಮಠಗಳಿಗೆ ಹೋಗುವುದಕ್ಕೆ ಸ್ವಯಂ ನಿಯಂತ್ರಣ ಹೇರಿಕೊಂಡು ಎದುರಾಗುವ ಮುಜುಗರದಿಂದ ಪಾರಾಗಬೇಕು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಯೊಬ್ಬ ಶಾಸಕ ಎಲ್ಲ ಧರ್ಮದವರಿಂದ ಚುನಾಯಿತರಾಗಿರುತ್ತಾರೆ. ಗೆದ್ದ ಮೇಲೆ ದಿಢೀರ್ ಎಂದು ಒಂದು ಕೋಮಿನ ಪ್ರತಿನಿಧಿಯಂತೆ ವರ್ತಿಸಿ ಮತದಾರರಿಗೆ ಅವಮಾನ ಮಾಡಬಾರದು.

ಮಠಾಧೀಶರು ಅಷ್ಟೇ, ಅವರು ಸರ್ವ ಧರ್ಮಗಳ ರಕ್ಷಕರಂತೆ ನಡೆದುಕೊಳ್ಳಬೇಕು.

ಮಾಧ್ಯಮಗಳ ಎದುರು ಮತ್ತು ಸಾರ್ವಜನಿಕ ಸಭೆಗಳಲ್ಲಿ "ನಮ್ಮ ಜನಾಂಗದವರಿಗೆ ಸಚಿವ ಸ್ಥಾನ ನೀಡದಿದ್ದರೆ ನೋಡಿ " ಎಂಬರ್ಥದ ಮಾತುಗಳನ್ನು ಆಡಬಾರದು.

ಸಾರ್ವಜನಿಕ ಸಮಾರಂಭದಲ್ಲಿ, ಮಾಧ್ಯಮಗಳ ಎದುರು, ಮತ್ತೆ ಕೆಲವರು ವಿಧಾನ ಸಭೆ ಪ್ರವೇಶಿಸಿ ಈ ರೀತಿ ಹಕ್ಕೊತ್ತಾಯ ಮಾಡುವುದು ಒಂದು ಸಾಮಾಜಿಕ ಮುಜುಗರ ಮತ್ತು ಅವಮಾನ.

ಈ ಕುರಿತು ಮಠಾಧೀಶರೊಂದಿಗೆ ಚರ್ಚೆ ಮಾಡುವುದು ಮುಖ್ಯಮಂತಿಗಳಿಗೆ ಸಾಧ್ಯವಾಗುವುದಿಲ್ಲ ಆದ್ದರಿಂದ ತಮ್ಮ ಪಕ್ಷದ ಶಾಸಕರಿಗೆ ಈ ರೀತಿ ಧಾರ್ಮಿಕ ಒತ್ತಾಯ ಹೇರದಂತೆ ತಾಕೀತು ಮಾಡಲೇಬೇಕು. ಇಲ್ಲದೇ ಹೋದರೆ ಅವರ ವೈಯಕ್ತಿಕ ನೆಮ್ಮದಿ ನಾಶವಾಗಿ, ಸಾಮಾಜಿಕ ಅರಾಜಕತೆಯೂ  ಉಂಟಾಗಬಹುದು.

ಅಲ್ಲದೆ ಸಾಧ್ಯವಾದಷ್ಟು ಮಠಗಳಿಗೆ ಹೋಗುವುದನ್ನು ನಿಲ್ಲಿಸಿ ಜನರ ಮೂಲಭೂತ ಸಮಸ್ಯೆಗಳನ್ನು ಆಲಿಸಲು ಜನರ ಬಳಿ ಹೋಗುವುದು ಒಳಿತು.

ಭಕ್ತರ ಮನಃಶಾಂತಿ ಕಾಪಾಡುವ ಧ್ಯಾನ, ಅಧ್ಯಾತ್ಮ ಮತ್ತು ಯೋಗ ಸೂತ್ರಗಳನ್ನು ಬೋಧನೆ ಮಾಡಬೇಕಾದ ಮಠಗಳು ನೇರ ರಾಜಕೀಯ ಅಖಾಡಕ್ಕೆ ಇಳಿದರೆ ಸಾಮಾನ್ಯ ಭಕ್ತರು ನೆಮ್ಮದಿಗಾಗಿ ಇನ್ನೆಲ್ಲಿಗೆ ಹೋಗಬೇಕು?

ಹಾಗಂತ ಮಠಾಧೀಶರು ರಾಜಕೀಯ ನಾಯಕರುಗಳಿಗೆ ಮಾರ್ಗದರ್ಶನ ಮಾಡಬಾರದು ಎಂದು ಅರ್ಥವಲ್ಲ ಅವರ ಮಾರ್ಗದರ್ಶನ ಒಟ್ಟು ಸಮುದಾಯದ ಅಭಿವೃದ್ಧಿ ಪರ ಇರಬೇಕು.

ಅದೂ ಈ ರೀತಿ ಸಾರ್ವಜನಿಕ ಸಭೆ, ಸಮಾರಂಭಗಳಲ್ಲಿ ಹೇಳದೇ ವೈಯಕ್ತಿಕ ನೆಲೆಯಲ್ಲಿ ಸಂಯಮದಿಂದ ಚರ್ಚೆ ಮಾಡಬೇಕು. 

ಶಾಸಕರು ತಮ್ಮ ಸಮಾಜದ ಸ್ವಾಮಿಗಳ ಪ್ರಭಾವಕ್ಕಿಂತ, ವೈಯಕ್ತಿಕ ಸಾಧನೆ ಮೂಲಕ ಸ್ಥಾನಮಾನ ಪಡೆದುಕೊಂಡು ಪ್ರಜಾಪ್ರಭುತ್ವ ಮತ್ತು ನಾಡಿನ ಮತದಾರರ ಮಾನ ಕಾಪಾಡಲಿ ಎಂದು ಈ ರಾಜ್ಯದ ಸಾಮಾನ್ಯ ಪ್ರಜೆಯಾಗಿ ನಿವೇದಿಸುವೆ.

#ಸಿದ್ದು_ಯಾಪಲಪರವಿ.

Sunday, January 5, 2020

ಸಂಬಂಧನಗಳ ಹುಡುಕಾಟ

*ಹೊಸ ವರ್ಷ ಆದರೂ ಹಳೆ ವರಸೆ: ಸಂಬಂಧನಗಳ ಹುಡುಕಾಟ*

ಹೊಸ ವರ್ಷ ಬಂತು ಆದರೆ ವರಸೆ ಮಾತ್ರ ಬದಲಾಗಲಿಲ್ಲ,ಮಾತುಕತೆ, ಆಲೋಚನಾ ಕ್ರಮ ಎಲ್ಲ ಹಾಗೆಯೇ ಮುಂದುವರೆದಿದೆ.
ಇದು ಇಂಗ್ಲಿಷರ ಹೊಸ ವರ್ಷ ನಮ್ಮದಲ್ಲ ಎಂಬ ಮಾತುಗಳ ಮೂಲಕ ನಮ್ಮ ಸಣ್ಣತನದ ಪ್ರದರ್ಶನ.
ಹಾಗೆ ಹೇಳುತ್ತಲೇ ಕಾಲ ಕಳೆಯುವ ಆಷಾಢಭೂತಿಗಳು ನಾವು.
ಎಲ್ಲಾ ಬೇಕು ನಖರಾನೂ ಹಂಗೆ.

ನಿನ್ನೆ ಸಭೆಯೊಂದರಲ್ಲಿ ಮಾತನಾಡುವಾಗ 'ಟೆಕ್ನಾಲಜಿ ದಾಸರಾಗಿ ನಾವು ಮಾನವೀಯ ಸಂಬಂಧಗಳ ಕಳೆದುಕೊಂಡಿದ್ದೇವೆ.
ಪಾರ್ಕಿನಲ್ಲಿ ಕುಳಿತ ಪ್ರೇಮಿಗಳು ಮಾತಾಡುವುದ ಮರೆತು ತಮ್ಮ ಮೊಬೈಲ್ ಜೊತೆ ಕಾಲ ಕಳೆಯುವುದು ದೊಡ್ಡ ದುರಂತ. ಸುಂದರವಾದ ಹುಡುಗಿ,ಪ್ರೀತಿಸುವ ಮಕ್ಕಳು, ಜವಾವ್ದಾರಿಯುತ ಗೆಳೆಯರು ಯಾರೂ ಬೇಡವಾಗಿದೆ' ಮಾತು ಕೇಳಿದವರಿಗೆ ಹೌದೆನಿಸಿತು.

ಈಗ ಮೊಬೈಲ್ ಫ್ರೀ ಆದರೆ ಮಾತುಗಳೇ ಮಾಯ!
ಏನೋ ಧಾವಂತ,ವ್ಯಕ್ತಿ ಕೇಂದ್ರಿತ ಬದುಕು. ಕೆಲಸ ಇಲ್ಲದೇ ಭೇಟಿ, ಮಾತುಕತೆ, ಹರಟೆಗೆ ಜನ ಬೇಡವೇ ಬೇಡ. ಮಹತ್ವದ ಕೆಲಸ ಇದ್ದರೆ, ದೌಲತ್ತಿಗೆ ಅಧಿಕಾರ ಇದ್ದರೆ ಮಾತ್ರ ಜನ ಬರ್ತಾರೆ,ಮಾತಾಡಿಸ್ತಾರೆ ಇಲ್ಲ ಅಂದರೆ ಗೋವಿಂದ.
ತಿಂಗಳುಗಟ್ಟಲೆ ಫೋನು ಇಲ್ಲ.

ಉದ್ಯೋಗ ಸ್ಥಳಗಳಲ್ಲಿ ಅದೇ ಪೈಪೋಟಿ, ಕೆಲಸದ ಒತ್ತಡ. ದುಡಿಯುವ ಮನಸುಗಳಿಗೆ ಒತ್ತಡ ನೀಗಿಸಲು ಆತ್ಮೀಯರ ನಿಷ್ಕಲ್ಮಶ ಮಾತು,ಪ್ರೀತಿ, ಸ್ನೇಹ ಬೇಡವಾಗಿ ಬಿಟ್ಟದೆ.
ಏನಿದ್ದರೂ 'ಕಾಮಾ ಪೂರ್ತಿ ಮಾಮಾ' ಅನ್ನೋ ಮತಲಬ್ ಕಿ ದುನಿಯಾ.

ಕಾಡು ಹರಟೆ, ಆರೋಗ್ಯ ಪೂರ್ಣ ಚರ್ಚೆ ಸಿಗಬೇಕಾದರೆ ಒಂದಿಷ್ಟು ಹಿರಿಯರ ಬೆಳಗಿನ ವಾಕ್ ಸಮಯದಲ್ಲಿ, ಅವರು ಏಕತಾನತೆಯ ದೇಶಾವರಿ ಮಾತುಕತೆ, ಯಾವುದೇ ಆತ್ಮೀಯತೆಯಾಗಲಿ, ಪ್ರಾಮಾಣಿಕತೆಯಾಗಲಿ ಕಾಣುವುದಿಲ್ಲ.

ಎರಡು ದಶಕಗಳ ಹಿಂದೆ ಪ್ರೀತಿ, ಪ್ರೇಮ ಅಫೇರುಗಳ ನೆಪದಲ್ಲಿ ಜನ ಪರಸ್ಪರ ಸಾಂಗತ್ಯಕ್ಕಾಗಿ ಹಾತೊರೆಯುತ್ತಿದ್ದರು.
ಈಗ ಹಾದರದ ಅನುಸಂಧಾನ ಮಾಯವಾಗಿ ಅಲ್ಲಿ ಕಾಮವೂ ಡೇಟಿಂಗ್ ವ್ಯವಹಾರದ ಸರಕಾಗಿ ಹೋಗಿರುವುದು ಮನುಷ್ಯ ಸಂಬಂಧಗಳ ದುರಂತ.
ರಂಗು ರಂಗಿನ ಪ್ರೇಮ ಕಥೆಗಳ ಕಳಕೊಂಡ ಹಳವಂಡ.

ವೃತ್ತಿಯಿಂದ ನಿವೃತ್ತರಾದವರ ಪಾಡಂತು ಹೇಳತೀರದು.
ಮೈಯಲ್ಲಿ ಕಸುವು ಮಾಯಾವಾಗಿ ಮನಸು ಮೃದುವಾಗಿ ದರ್ಪ ಕಳಕೊಂಡು ಬಿಟ್ಟಿರುತ್ತಾರೆ.
ಹುಲಿಯಂತೆ ಉನ್ನತ ಹುದ್ದೆಗಳಲ್ಲಿ ಮೆರೆದವರು ಇಲಿಯಾಗಿ ಮೂಲೆ ಸೇರಿಕೊಂಡಾಗ ಯಾರೂ ಕೇರ್ ಮಾಡುವುದೇ ಇಲ್ಲ.

ದೇಹ ಮುಪ್ಪಾದರೂ ಒಳಗಿನ ಜೀವಚೈತನ್ಯಕೆ ಮುಪ್ಪು ಇರುವುದಿಲ್ಲ ಎಂಬುದನ್ನು ಕೆಲವರು ಮರೆತು ಬಿಡುತ್ತಾರೆ.
ಓದು,ಬರಹ,ಸಂಗೀತ, ಸಿನೆಮಾ ಮತ್ತು ಸಂಸ್ಕೃತಿಗಳ ಒಡನಾಟ ಇಲ್ಲದವರು, ಕ್ರಿಯಾಶೀಲ ಚಟುವಟಿಗಳ ಹವ್ಯಾಸ ಇಲ್ಲದವರು ಒಂಟಿತನದಿಂದ ನರಳಿ ಬೇಗ ಇನ್ನೂ ಮುದುಕರಾಗಿ ಹೊಸ ತಲೆಮಾರಿನ ಹುಡುಗರ ಬೈಯುತ್ತ ಎಲ್ಲರಿಗೂ ಬೇಡವಾಗುತ್ತಾರೆ.

ಟಿವಿಯಲ್ಲಿ ಬರುವ ಧಾರಾವಾಹಿಗಳ ಕಥೆಯೂ ಅದೇ.
ಅದೇ ಜಗಳ,ದ್ವೇಷ ಇಬ್ಬರು ನಟಿಯರಲ್ಲಿ ಒಬ್ಬಳು ವಿಲನ್… ಇಂತಹ ಕೆಲಸಕ್ಕೆ ಬಾರದ ಅವಾಸ್ತವ ಕತೆಗಳಲ್ಲಿ ಹೆಣ್ಣುಮಕ್ಕಳು ಕರಗಿ ಹೋಗಿದ್ದಾರೆ.

ಮನಸಿಗೆ ಮುದ ನೀಡುವ ಸಂಗೀತ ಆಲಿಸುವ, ಮಹತ್ವದ ಪುಸ್ತಕಗಳನ್ನು ಓದುವ, ಸರಿ ಕಂಡಂತೆ ಬರೆಯುವ ಹವ್ಯಾಸ ಇರದಿದ್ದರೆ ಬದುಕು ನೀರಸವಾಗಿ ಬಿಡುತ್ತದೆ.

ಕೆಲಸವಿಲ್ಲದಿದ್ದರೆ ಬರಲಾಗದ ಗೆಳೆಯರಿಗಾಗಿ ಕಾಯದೇ ನಿಮ್ಮ ಪಾಡಿಗೆ ವೈಯಕ್ತಿಕ ಸಾಂಸ್ಕೃತಿಕ ಲೋಕ ಸೃಷ್ಟಿ ಮಾಡಿಕೊಂಡು ಬದುಕಿದರೆ ಬದುಕು ಸಹನೀಯವಾದೀತು.

ಮುಪ್ಪಾದ ದೇಹವ ಶಪಿಸದೇ ಸಂಗಾತಿ ಜೊತೆ ಪ್ರೀತಿಯಿಂದ ಕಾಲ ಕಳೆಯುವ ಔದಾರ್ಯ ಈಗ ಅನಿವಾರ್ಯ.
ದೇಹಕ್ಕಿಂತ ಮನಸು ದೊಡ್ಡದು, ಕಾಮಕ್ಕಿಂತ ಪ್ರೇಮ ಹಿತಕಾರಿ ಅಂದುಕೊಂಡಾಗ ಬದುಕು ಬಾಳಾಗುತ್ತದೆ.
ಒಂಟಿತನ ಸುಂದರ ಏಕಾಂತವಾಗುತ್ತದೆ.
ಕಾಮದ ಕಸುವು ಮಾಯವಾದಾಗ ಪ್ರೇಮ, ಬಿಸಿ ಅಪ್ಪುಗೆ, ಮುದವಾದ ಮುತ್ತಿಗೂ ಬಡತನ ಇರಬಾರದು.
ಒಮ್ಮೆ ಅಲೋಚನೆ ಬದಲಿಸಿ ನೋಡಿ ಬದುಕು ಬಾಳಾಗಿ ಝಗಮಗ ಬೆಳಗಲು.