Tuesday, January 30, 2018

ಸಿದ್ಧೇಶ್ವರ ಸ್ವಾಮೀಜಿ ಹಾಗೂ ಪದ್ಮಶ್ರೀ

*ಪೂಜ್ಯ ಸಿದ್ದೇಶ್ವರ ಸ್ವಾಮೀಜಿ ಹಾಗೂ ಪದ್ಮಶ್ರೀ*

ನಿರೀಕ್ಷೆಯಂತೆ ಸಿದ್ದೇಶ್ವರ ಸ್ವಾಮೀಜಿಗಳು ಪ್ರಶಸ್ತಿ ಸ್ವೀಕರಿಸದಿರಲು ನಿರ್ಧರಿಸಿ ತಮ್ಮ ನಿಜ ವಿರಕ್ತಿ ಸಾಬೀತು ಮಾಡಿದ್ದಾರೆ.

ನುಡಿದಂತೆ ನಡೆಯುವುದು ಸರಳವಲ್ಲವೆಂದು ಗೊತ್ತಿದ್ದರೂ ಎಲ್ಲರೂ ನುಡಿಯುತ್ತಲೇ ಇದ್ದಾರೆ ನಡೆಯಲಾಗದೆ.

ಜನಸಾಮಾನ್ಯರಿಗೆ ಆಧ್ಯಾತ್ಮಿಕ ತಿರುಳನ್ನು ಗ್ರಹಿಸುವ ಮನೋಧರ್ಮ ಬೆಳೆಸಿದ ಪೂಜ್ಯರ ಸಾಧನೆ ಹಿಂದೆ ದೊಡ್ಡ ಪರಿಶ್ರಮವಿದೆ.

ವೇದಾಂತ ಸಾರವನ್ನು ಜನರಿಗೆ ತಲುಪಿಸಲು ಸನ್ಯಾಸ ಸ್ವೀಕರಿಸಿದರೂ ಕಾವಿಗೆ ಬಲಿಯಾಗದೆ ನಿಜ ಶರಣರಾದವರು.

ಇಂದು ಕಾವಿ,ಸನ್ಯಾಸ,ಧರ್ಮ ಹಾಗೂ ಲಿಂಗಾಯತತ್ವ ತುಂಬ ಗೊಂದಲಕ್ಕೆ ಬಿದ್ದಿರುವಾಗ ಕಾವಿಧಾರಿಗಳಾಗದ ಸಿದ್ದೇಶ್ವರ ಶ್ರೀಗಳು ಹೆಚ್ಚು ಪ್ರಸ್ತುತವೆನಿಸುತ್ತಾರೆ.

ಬುದ್ಧ,ಅಲ್ಲಮ,ಬಸವ,ವೇದಾಂತ,ಗೀತೆ, ಝೆನ್,ಸೂಫಿ ಹಾಗೂ ಎಲ್ಲ ಜಾಗತಿಕ ಧರ್ಮಗಳ ಸಾರವನ್ನು ಅಂಗೈಯಲ್ಲಿ ಹಿಡಿದರೂ ಬೇಕಾದವರಿಗೆ ಬೇಕಾದಷ್ಟೇ ಉಣಬಡಿಸುವ ತಾಯ್ತನವಿದೆ.

ಹೆಚ್ಚು ತಿನಿಸಿ ಆರೋಗ್ಯ ಕೆಡಿಸುವ ಪಾಂಡಿತ್ಯ ಪ್ರದರ್ಶನವಿಲ್ಲ.

ಬಹಳಷ್ಟು ಜನ ತುಂಬಾ ಶಾಸ್ತ್ರಗಳನ್ನು ಅರಗಿಸಿಕೊಂಡು ಕುಡಿದು ನಡೆ ಇಲ್ಲದೆ  ಭಾರವಾಗಿದ್ದಾರೆ.

ಆಧ್ಯಾತ್ಮದ ಸಾರವನ್ನು ಬದುಕಿನಲ್ಲಿ ಪಾಲಿಸುತ್ತ ಜನರಿಗೆ ತಲುಪಿಸುವ ಏಕ ಮಾತ್ರ ಉದ್ದೇಶ.

ಎಲ್ಲ ವರ್ಗದ ಸಾವಿರಾರು ಜನರನ್ನು ಸೆಳೆಯುವ ಏಕೈಕ ಪ್ರವಚನಕಾರರು.
ಅವರ ಅನುಕರಣೆಯಲ್ಲಿ ಅನೇಕರು ತಯಾರಾಗಿದ್ದರೂ ಅವರೇರಿದೆತ್ತರಕೆ ಏರಲಾಗಿಲ್ಲ.

ಇಂಗ್ಲಿಷ್, ಮರಾಠಿ, ಹಿಂದಿ ಭಾಷೆಗಳಲ್ಲಿಯೂ ಅಷ್ಟೇ ಸಮರ್ಥವಾಗಿ ಪ್ರತಿಪಾದಿಸಿ ಇಡೀ ಲೋಕ ಸುತ್ತಿದ್ದಾರೆ.

ಸರಳತೆ, ಸಮಾಧಾನ, ನಿರ್ಲಿಪ್ತತೆ, ನಿರಾಕರಣೆ, ನಿರ್ಭಯ ಪದಗಳಿಗೆ ಉಪಮೇಯವೇ ಸಿದ್ಧೇಶ್ವರರು.

ತಮ್ಮ ಮಾತುಗಳಲ್ಲಿ ಅಪ್ಪಿ ತಪ್ಪಿಯೂ ಕೆಟ್ಟ, ನಕಾರಾತ್ಮಕ ಪದಪ್ರಯೋಗ ಮಾಡದೇ ಸಕಾರಾತ್ಮಕ ಆಲೋಚನೆಯಡೆಗೆ ಕರೆದೊಯ್ಯುವ ಲೈಫ್ ಸ್ಕಿಲ್ ಸಿದ್ಧಾಂತ.

ಹಾಗಂತ ಇವರನ್ನು ಎಲ್ಲರೂ ಒಪ್ಪುವ ವಾತಾವರಣವೂ ಇಲ್ಲ.

ಕೆಲವು ಅಪ್ಪಟ ಬಸವಾಭಿಮಾನಿಗಳು 'ಕೇವಲ ಶರಣ ಸಿದ್ಧಾಂತ ಪ್ರತಿಪಾದಿಸಲಿ, ಎಲ್ಲವೂ ಅಲ್ಲೇ ಇದೆ, ಮತ್ತೇಕೆ ಅಲ್ಲಿ ಇಲ್ಲಿಯದು ಹೇಳುವುದು' ಎಂಬ ತಕರಾರು ಎತ್ತುತ್ತಾರೆ.

ಅದಕ್ಕೆ ಉತ್ತರಿಸುವ ಅಗತ್ಯವಿಲ್ಲ. ಎಲ್ಲರಿಗೆ ಎಲ್ಲವೂ ಗೊತ್ತಿದೆ.

ನಮ್ಮ ಆಚರಣೆ ಹಾಗೂ ನಂಬಿಕೆಗಳು ಏನೇ ಇದ್ದರೂ ಬೇರೆ ಧರ್ಮಗಳನ್ನು ಓದಬಾರದೇಕೆ? ಎಂಬ ಪ್ರಶ್ನೆ ನನ್ನನ್ನೂ ಕಾಡುತ್ತಿದೆ.

ಎಲ್ಲರ ವಾದ-ವಿವಾದಗಳಿಗೆ ಉತ್ತರ ಕೊಡುವ ಅಗತ್ಯ ಹಾಗೂ ಅನಿವಾರ್ಯತೆ ಇಲ್ಲ ಬಿಡಿ.

ಆಧ್ಯಾತ್ಮಿಕ ಲೋಕಕ್ಕೆ ಭಾರತದ ಕೊಡುಗೆ ಅಪಾರವಾಗಿದೆ. ಅನೇಕ ಗೊಂದಲಗಳನ್ನು ನಿವಾರಿಸಲು ಸಾವಿರಾರು ಸಿದ್ಧೇಶ್ವರ ಅಪ್ಪಗಳ ಅಗತ್ಯವಿರುವಾಗ ಎಲ್ಲವನ್ನೂ ಇವರಿಂದ ಏಕೆ ನಿರೀಕ್ಷಿಸಬೇಕು.

ನಿಜ ಸಂನ್ಯಾಸಿಗಳಿಗೆ ಜ್ಞಾನರತ್ನ ಸಾಕು.
ದ್ಯಾನಸೂತ್ರ ಬೇಕು.

ಅರಿವನ್ನು ಹರವಿ ಹೋದ ಬುದ್ಧ, ಬಸವಾದಿ ಪ್ರಮಥರು ಹಾಗೂ ದಾರ್ಶನಿಕರು ಪ್ರಶಸ್ತಿಗಳನ್ನು ಮೀರಿ ಇನ್ನೂ ಜೀವಂತವಾಗಿದ್ದಾರೆ.

ಕೆಲವರು ಆರಂಭದಲ್ಲಿ ಸದ್ದು ಮಾಡಿ ಬೆಳೆದ ಮೇಲೆ ಅಥವಾ ತಮ್ಮ ಕೊನೆಯ ದಿನಗಳಲ್ಲಿ ತಮ್ಮ ಮೌಲ್ಯಗಳಿಗೆ ಅಪಚಾರವಾಗುವ ಕೆಲಸ ಮಾಡಿ ಪ್ರಶಸ್ತಿಗಳನ್ನು ಕಸಿದುಕೊಳ್ಳುವ ಪ್ರಸಂಗ ತಂದೊಡ್ಡುತ್ತಾರೆ.

ವ್ಯಕ್ತಿಯ ಇಡೀ ವ್ಯಕ್ತಿತ್ವದ ಹರವು ಕೊನೆಯ ಅಧ್ಯಾಯದಲ್ಲಿ ನಿರೂಪಿತವಾಗುತ್ತದೆ.

ಅದೇ ಕಾರಣಕ್ಕೆ ಐನ್ ಸ್ಟೀನ್ ಜೀವಂತವಾಗಿರುವಾಗ ತನ್ನ ಪ್ರತಿಮೆ ನಿಲ್ಲಿಸುವುದನ್ನು ವಿರೋಧಿಸುತ್ತಾನೆ.

ಅದೇ ಸಮರ್ಥ ನಿಲುವಿನ ಶ್ರೀಗಳ ನಿರ್ಧಾರ ನನಗಂತೂ ಖುಷಿ ಎನಿಸಿದೆ.

ಪೂಜ್ಯರಿಗೆ ಅನಂತ ಕೋಟಿ ಶರಣುಗಳು.

----ಸಿದ್ದು ಯಾಪಲಪರವಿ.

ಬಾ ಮನದಾಳದಿ ಜೋಪಾನವಾಗಿರಲು

*ಬಾ ಮನದಾಳದಿ ಜೋಪಾನವಾಗಿರಲು*

ಹೊಳೆವ ಕಂಗಳು ಹಿತವಾದ ನೋಟ
ಮುಗಿಯದ 'ಸವಿ' ಮಾತುಗಳು
ಅಗೋಚರ ಸೆಳೆತ
ಬಿದಿಗೆ ಚಂದ್ರನ ಬೆಳದಿಂಗಳು

ಅವ್ವನ ಅಕ್ಕರೆ
ಮಗಳ ಮಮತೆ
ಸಂಗಾತಿಯ ಸಂಭ್ರಮ
ಎಂದೋ ಎಲ್ಲೋ
ಕಳೆದು ಹೋದ ಮನದನ್ನೆ
ಸಿಕ್ಕ ಹರುಷ

ಸೌಂದರ್ಯ ರಾಶಿಯಲಡಗಿದ
ಸ್ನಿಗ್ದ ನಗುವಿನಲೆಗಳ ಜುಳು ಜುಳು ನಿನಾದ
ನೋಡುವ ನೋಟ ಕೀಳಲಾಗದ ಜಡಪಡಿಕೆ
ಹೇಳಲಾಗದ ಬಳಲಿಕೆ

ಒಮ್ಮೆ ಜೋರಾಗಿ ಕೂಗಿ ಹೇಳುವಾಸೆ
ಆದರೆ ಕಳೆದುಕೊಂಡರೆ ಹೇಗೆ ಎಂಬ ಭಯ

ಹೇಳಲಾರೆ ಏನನ್ನೂ ಕೇಳಲಾರೆ ನೀ
ಒಲಿಯುವತನಕ
ಮೌನದಿ ನಿನ್ನ ಹೃದಯದಲಿ
ಜೋಪಾನವಾಗಿ ಅಡಗಿ
ಅವಿತಿರುವೆ ಕಣ್ಣಿಗೆ ಕಾಣದ ಹಾಗೆ

ಕೊಡಲು ಏನೂ ಇಲ್ಲ ಪ್ರೀತಿಯ ಬಿಟ್ಟು
ಈಗ
ನಾ ವನವಾಸಿ ರಾಮ ಕೇವಲ
ಹನುಮನಾಲಿಂಗನವ ಬಿಟ್ಟು

ಬಿಗಿದಪ್ಪಿ ಮುದ್ದು ಮಾಡಿ ರಮಿಸಿ
ಸಂತೈಸಿ ಸಂತಸವ
ಹಂಚಿ ಹಗುರಾಗಬಲ್ಲೆ
ಆದರೆ ಈಗ ಅದಕೂ ಒಂದು
ಅಲ್ಪ ವಿರಾಮ !

ಸಾಗರದಾಚೆ ಬೆಟ್ಟದ ಮೇಲಿರುವ
ಗಮ್ಯ
ತಲುಪುವತನಕ ಮನದ ಸುತ್ತಲೂ
ನಿಯಂತ್ರಣದ ಕೋಟಿ ಬೇಲಿ
ತುಡುಗರು ನುಗ್ಗದ ಹಾಗೆ !!

ಕಾಯುವೆ ಕಾಲ ಮಾಗಿ
ಹಣ್ಣಾಗುವತನಕ
ಕಣ್ಣ ರೆಪ್ಪೆಯ ಪಿಳುಕಿಸದೇ

ಅಲ್ಲಿಯತನಕ ಬಾ ಮನದಾಳದಲಿ
ಜೋಪಾನವಾಗಿರಲು !!!

---ಸಿದ್ದು ಯಾಪಲಪರವಿ

Wednesday, January 24, 2018

ನಾನು ಮತ್ತು ಅಪ್ಪ

ನಾನು ಮತ್ತು ಎಂದೂ ಮರೆಯಾಗದೆ ಅಪ್ಪ

ಕಳೆದುಕೊಂಡವರ ಕುರಿತು ಬರೆಯುವಾಗ ತುಂಬಾ ನೋವಾಗುತ್ತೆ . ಅದರಲ್ಲೂ ಬದುಕು ಹಾಗೂ ಅಸ್ತಿತ್ವ ಕೊಟ್ಟ ' ಅಪ್ಪ ' .

ನಾವು ಸಹಜವಾಗಿ ಈ ಭೂಮಿಗೆ ಬಂದಿದ್ದೇವೆ ಅಪ್ಪ ಬರೀ ನೆಪ ಎಂಬ ವಾಸ್ತವದ ಸಿದ್ಧಾಂತ ಅಪ್ಪನ ವಿಚಾರವಾಗಿ ಸರಿಹೊಂದುವುದಿಲ್ಲ.

ಅಪ್ಪನನ್ನೂ ಬೇರೆಯವರಿಗಿಂತ ಸರಿಯಾಗಿ ಗ್ರಹಿಸಿದ್ದೇನೆ ಎಂಬ ಗರ್ವ.  ಸರಿಸುಮಾರು ಐವತ್ತು ವರ್ಷ ಕಳೆದರೂ ನಾಲ್ವತ್ತು ವರುಷಗಳ ಒಡನಾಟ ಒಡಲೊಳಿದೆ.

ಬಾಯಲ್ಲಿ ಬಂಗಾರದ ಚಮಚೆ ಇಟ್ಟುಕೊಂಡು ಹುಟ್ಟಿದ್ದರೂ ಮುಂದೆ ಅನುಭವಿಸಿದ್ದು ಬರೀ ನೋವು-ಸಂಕಷ್ಟ. ವ್ಯಾಪಾರದಲ್ಲಿನ ಹಾನಿ , ಕುಟುಂಬದ ಆಸ್ತಿ ವಿಭವಿಜನೆಯ ಅಸಮಾನತೆ ಹೀಗೆ ಹತ್ತಾರು ಸವಾಲುಗಳನ್ನು ತುಂಬಾ ಸಮಾಧಾನದಿಂದಲೇ ನಿಭಾಯಿಸಿದ.

ಬಾಲ್ಯದ ಅವಿಭಕ್ತ ಕುಟುಂಬ ವ್ಯವಸ್ಥೆಯಲ್ಲಿ ನನಗೆ ಪಾಲಕರ ಒಡನಾಟ ಕಡಿಮೆ ಆದರೂ ನಂತರದ ಕಾಲೇಜು ದಿನಗಳಲ್ಲಿ he became my best friend ಮುಂದಿನ ಎಲ್ಲ ಆರ್ಥಿಕ ಸಂಕಷ್ಟಕ್ಕೆ ನಾನು ನೆರವಾಗಲಿಲ್ಲ ಅದೂ ಸಾಧ್ಯವಾಗಲಿಲ್ಲ ಎಂಬ ನೋವು ಈಗಲೂ  ನನ್ನಲಿ ಉಳಿದಿದೆ.

ನನಗೆ ಆರ್ಥಿಕವಾಗಿ ಹೆಚ್ಚು ನೆರವು ನೀಡದೇ strict ಆಗಿ ಬೆಳೆಸಲು ಇದ್ದ ಅನೇಕ ಕಾರಣಗಳನ್ನು ಕೊಂಚ ಸಿಟ್ಟಿನಿಂದ ಸಕಾರಾತ್ಮಕವಾಗಿ ಸ್ವೀಕರಿಸಿದೆ . ಅದು ದೊಡ್ಡ ಪಾಠವಾದರೂ finance management ನಲ್ಲಿ ನಾನು ಎಚ್ಚತ್ತುಕೊಳ್ಳದೇ ತುಂಬಾ ಆರ್ಥಿಕ ಸಂಕಷ್ಟಗಳನ್ನು ಎದುರಿಸುವಂತಾಯಿತು. 

I have my own reservations about finance management even today. ನನಗೆ ಬದುಕು ಸಾಗಬೇಕು ಅಷ್ಟೇ. ತುಂಬಾ plan ಅಗತ್ಯವಿಲ್ಲ ಎಂಬ ಕೆಟ್ಟ ಧೋರಣೆ. I may be wrong also.

ಆದರೆ ಅಪ್ಪ ಹಾಗಲ್ಲ ದೇವರಿಗೆ ಹಾಕುವ ಹಣವನ್ನು ಕಟ್ಟಿ ಇಡುತ್ತಿದ್ದ ಯಾವುದೇ ಕಾರಣಕ್ಕೂ ಬೇರೆ ಕೆಲಸಕ್ಕೆ ಬಳಸುತ್ತಿರಲಿಲ್ಲ. ಎಂತಹ ಕಠಿಣ ಸಂದರ್ಭದಲ್ಲಿಯೂ ನನಗೆ ಹೆಚ್ಚು ಹಣ ಕಳಿಸಲೇ ಇಲ್ಲ ಹೀಗಾಗಿ ವಿದ್ಯಾರ್ಥಿಯಾಗಿದ್ದಾಗ ತುಂಬಾ ಎಚ್ಚರಿಕೆಯಿಂದ ಖರ್ಚು ಮಾಡುತ್ತಿದ್ದೆ even  tour ಹೋಗಲಿಲ್ಲ.

ಉದ್ಯೋಗ ಸೇರಿದ ಮೇಲೆ ಹಣ ಗಳಿಸುವ ವೃತ್ತಿ ಹಾಗೂ ಪ್ರವೃತ್ತಿ ನನಗೆ ಬರಲಿಲ್ಲ I totally neglected and accepted the suffering.
ಈ ಕುರಿತು ಇದ್ದ ಸಿಟ್ಟನ್ನು ಅಪ್ಪ ಆತ್ಮೀಯರ ಮೂಲಕ ಹೇಳಿಸಿದರೂ ಕೇಳಿಸಿಕೊಳ್ಳುವ ಸ್ಥಿತಿಯನ್ನು ನಾನು ದಾಟಿದ್ದೆ.

ತುಂಬಾ ಸಂಕಷ್ಟಗಳ ಸಂದರ್ಭದಲ್ಲಿ ಒಮ್ಮೆ ಕೇಳಿದೆ  ನೇರವಾಗಿ impossible ಅಂದ. ನನಗೆ ದುಃಖವಾಯಿತಾದರೂ positive ಆಗಿ ಸ್ವೀಕರಿಸಿ ಅದೇ ಸ್ನೇಹವನ್ನು ಮುಂದುವರೆಸಿ ಪಾಠ ಕಲಿತುಕೊಂಡೆ.

'ನಿಮ್ಮದು ಪೂರ್ವಜರ ಆಸ್ತಿ  ಅಪ್ಪನ ಮೇಲೆ ಕೇಸು ಹಾಕಿ ನಿನ್ನ ಪಾಲು ಕೇಳು ' ಅಂದ ಕೆಲವರ ಸಲಹೆಯನ್ನು ತಿರಸ್ಕರಿಸಿದೆ. ನನ್ನ ಸಹನೆ ಹಾಗೂ ವಿವೇಚನೆಗೆ ನಾನು ಸದಾ ಋಣಿ .

ಈ ನನ್ನ ನಿರ್ಧಾರ ಅಪ್ಪನಿಗೆ ಗೊತ್ತಾಯಿತಾದರೂ ಈ ಕುರಿತು ನಾವಿಬ್ಬರೂ ಚರ್ಚಿಸಲೇ ಇಲ್ಲ.

'ಒಂದು ಬಿರುಗಾಳಿಯ ಕಥೆ' ಪುಸ್ತಕ ಬಿಡುಗಡೆಯ ಸಂದರ್ಭದಲ್ಲಿ ಉದ್ಯಮಿ ವಿಜಯ್ ಸಂಕೇಶ್ವರ ಅವರು ನನ್ನ ಕುರಿತು ವ್ಯಕ್ತಪಡಿಸಿದ ಮೆಚ್ಚುಗೆ ಕಂಡು ಬೆರಗಾದರು. ನನ್ನ ಮಗ ಲಕ್ಷ್ಮಿ ಪುತ್ರನಾಗದಿದ್ದರೂ ಸರಸ್ವತಿಯ ಮೂಲಕ ಹೆಸರು ಮಾಡಿದ್ದಾನೆ ಎಂದು ಅವರಿಗೆ convince ಆಯಿತು.

He was very friendly with my mother. ಅವ್ವ ಹೋದ ಮೇಲೆ ತುಂಬಾ ಒಂಟಿತನದಿಂದ ಒದ್ದಾಡಿದ್ದು ನನಗೆ ಅರ್ಥವಾಯ್ತಾದರೂ ಇಷ್ಟು ಬೇಗನೆ ಹೋಗಬಹುದು ಅಂದುಕೊಂಡಿರಲಿಲ್ಲ.

He was very normal and healthy but he decided to go away. ವಿದೇಶಕ್ಕೆ ಹೋಗಲು passport ಬಂದಿತ್ತು  ಆದರೆ ಹೋಗಲಾಗಲಿಲ್ಲ . ಹೆಣ್ಣು ಮಕ್ಕಳ ಬಗ್ಗೆ ಚಿಂತೆಯೂ ಇತ್ತು ಆ ಜವಾಬ್ದಾರಿಯನ್ನು ತುಂಬಾ balance ಮಾಡಿದ ಒದ್ದಾಟ ಈಗ ಅರ್ಥವಾಗಿದೆ but I fulfill all his  incomplete desires without sharing with others , it's my strong promise to him.

I totally miss you ಅಪ್ಪ.

You have left so many values and valuable things with me...

---ಸಿದ್ದು ಯಾಪಲಪರವಿ

ಹುಡುಗಿಯರೇ ಹೀಗೆ

*ಹುಡುಗಿಯರೇ ಹೀಗೆ*

ಆಕರ್ಷಣೆಯ ಚಿಲುಮೆ
ಬತ್ತದ ಜೀವನೋತ್ಸಾಹ

ಬರೀ ಮಾಯೆಯೆಂಬ
ಭ್ರಾಂತು

ಅವ್ವ ಗೆಳತಿ ತಂಗಿ
ಹೆಂಡತಿಯಾಗಿ
ಹಿತವಾಗಿ ಕಾಡುವ
ಹೆಣ್ಣು ಮಾಯೆ ಅಲ್ಲ

ಮಗಳ ರೂಪದ
ವಾತ್ಸಲ್ಯದ ಖಣಿ

ಮುತ್ತಿನ ಮಹಿಮೆಯ
ಬಿಸಿಯಪ್ಪುಗೆಯ
ಬೆರಗಿನಲಿ ಕರಗಿಸಿ

ಮನವನಾವರಿಸಿದ
ಬೆಡಗಿ

*ಮಗಳು*
ಅಭಿವ್ಯಕ್ತಿಗೆ
ಜನುಮ ದಿನದ
*ಶುಭಾಶಯಗಳು*

*ಸದಾ ಖುಷಿಯಾಗಿರು*

---ಸಿದ್ದು ಯಾಪಲಪರವಿ

ಮುನ್ನುಡಿಗೊಂದು ಬೆನ್ನುಡಿ

*ಮುನ್ನುಡಿಗೊಂದು ಬೆನ್ನುಡಿ*

ಬದುಕೆಂಬ ಪುಸ್ತಕದ ಮೊದಲ
ಬರಹ

ಬಣ್ಣದ ಚಿತ್ತಾರಗಳು‌ ಮೈಮನದ
ತುಂಬ

ಆಟ ನೋಟ ಮೊಂಡಾಟಕೆ
ಸಾವಿರದ ನೆನಪು

ಅವ್ವನ‌ ಪಡಿಯಚ್ಚ ಹೆಗ್ಗಳಿಕೆ
ಹೇಗೋ ಕಳೆದ ಬಾಲ್ಯ

ಈಗ

ಹಲವು ಕನಸುಗಳ ಹರವಿ
ಭವಿತವ್ಯದ ಜಪ

ಬಂದುದನೆದುರಿಸುವ ಎದೆಗಾರಿಕೆ
ಸಾಕು
ನೋವ ನಲಿವಾಗಿಸಲು

ದುಃಖ-ದುಮ್ಮಾನ ಬರದಿರಲಿ
ಅದರೆ
ತಿಳಿದೋ ತಿಳಿಯದೋ ಕಾಡದಿರಲಿ

ಬೆಳೆದಂತೆ ಬದುಕು ಜಡ ಕಳೆದು
ಹೋದ
ಮುಗ್ಧತೆ ಹುಡುಕಿದರೂ ಸಿಗದು

ಮತ್ತೆ ಮಗುವಾಗಲು
ಮಾಗಬೇಕು ಮೈಮನ

ಹೀಗೆ ನೂರಾರು ಭರವಸೆಗಳ
ಹೊತ್ತು ನೇರ ಹಾದಿಯಲಿ
ಸಾಗಿರಲಿ ಜಾಣನಡೆ ಜೋಲಿ
ಹೊಡೆಯದೆ

ಕಾಪಿಟ್ಟು‌ ಕಾಯಲಿ‌‌ ಎಚ್ಚರ
ಒಳಗೂ-ಹೊರಗೂ

ಹಡೆದರೂ ಹಣೆಬರಹ
ಬರೆಯಲಾಗದ
ಅಸಹಾಯಕತೆಯಲೂ
ನೂರೆಂಟು ಆಸೆಗಳು

ಕಾಯ್ದು ಕಾಪಾಡಲು ಕಾಲದಾಟದಲಿ
ಅವನುಂಟು

ಹರಕೆಯ ಬುತ್ತಿ ಹಳಸದಿರಲಿ
ಕೂಸೆ
ಬಾಳ ಪಯಣದ ಹಾದಿಯಲಿ.

ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು.

----ಸಿದ್ದು ಯಾಪಲಪರವಿ.

ಹೀಗೊಂದು ಸಹಸ್ಪಂದನೆ

*ಹೀಗೊಂದು ಸಹಸ್ಪಂದನೆ*

*ಪರಮ ಗುರುವಿನೊಂದಿಗೆ ಜುಗಲ್ ಬಂದಿ*

ಗುರು-ಶಿಷ್ಯ ಪರಂಪರೆ ಸಂಗೀತ ಕ್ಷೇತ್ರದಲ್ಲಿ ತನ್ನ ದಿವ್ಯತೆಯನ್ನು ಕಾಪಾಡಿಕೊಂಡಿದೆ.

ಅದೇ ಪರಂಪರೆ ಕಾವ್ಯಲೋಕದಲ್ಲೂ ಸಾಧ್ಯ ಎಂದು ನಿರೂಪಿಸಲು ನನ್ನಿಂದ ಕಾವ್ಯ ಜುಗಲ್ ಬಂದಿ ಬರೆಯಲು ಪ್ರೇರೇಪಿಸಿದ ಸೃಜನಶೀಲ ಬರಹಗಾರ, ಸಹೃದಯಿ ಮನಸ್ಸುಳ್ಳ ಪ್ರೊ.ಸಿದ್ದು ಯಾಪಲಪರವಿ ಅವರಿಗೆ ಅಭಿವಂದಿಸುವೆ.

*ಪಿಸುಮಾತುಗಳ ಜುಗಲ್* ಅವರ ಕನಸಿನ ಕೂಸು.
ಕಾವ್ಯ ಲೋಕದ ಎಲ್ಲ ಸಾಧ್ಯತೆಗಳನ್ನು ದೂರವಿದ್ದೂ ಕಲಿಸಿದ *ಅಪ್ಪಟ ಗುರು*

ನಮ್ಮ ಕನಸನ್ನು ನನಸಾಗುವ ಬಗೆಯಲ್ಲಿ ವಿನ್ಯಾಸಗೊಳಿಸಿ, ಗೆರೆಗಳಿಗೆ ಭಾವ ತುಂಬಿ ವಿನೂತನವೆನಿಸುವ ಸಂಕಲನ ಪ್ರಕಟಿಸಿದ ಲೇಖಕ, ಕಲಾವಿದ,ಒನ್ ವ್ಹೀಲರ್ ಪ್ರಕಾಶನದ  ವಿ.ಎಂ.ಮಂಜುನಾಥ ಅವರ ಆಸ್ಥೆಗೆ ಶರಣು.

ಇಂತಹ ವಿನೂತನ ಪ್ರಯೋಗವನ್ನು ಪ್ರಬುದ್ಧ ಕನ್ನಡಿಗರು ಒಲವಿನಿಂದ ಸ್ವೀಕರಿಸುತ್ತಾರೆ ಎಂಬ ಭರವಸೆಯೂ ಇದೆ.

ದಯವಿಟ್ಟು ಓದಿ ಅಭಿಪ್ರಾಯ ತಿಳಿಸಿರಿ.

---ಸಿಕಾ

*ಸಾಹಿತ್ಯಸಂಗಾತಿಗಳಾದರೆ ಸಾಕು*

ನನ್ನೊಂದಿಗೆ ಜುಗಲ್ ಬರೆದ ಹುಮ್ಮಸ್ಸಿನಲ್ಲಿ ಗುರು ಎಂಬ ಭಾರ ಹೊರಿಸಿದ್ದೀರಿ.

*ಗುರು* ತುಂಬಾ ಭಾರವಾದ ಸ್ಥಾನ.

ಆಧ್ಯಾತ್ಮ ಹಾಗೂ ಸಂಗೀತ ರಂಗಗಳಲ್ಲಿ ಮಾತ್ರ ಗುರು ಅನಿವಾರ್ಯ.

ಸಾಹಿತ್ಯದಲ್ಲಿ ಅಲ್ಲವಾದರೂ ಮಾತಿನ ಕೃತಜ್ಞತೆಗಾಗಿ ಹೇಳುವ ಸೌಜನ್ಯ.

ಈ ಕುರಿತು ನಿಷ್ಠುರವಾದ ಅನಿಸಿಕೆ ಹಂಚಿಕೊಳ್ಳುವೆ.

ನನ್ನ ಉಪನ್ಯಾಸಕ ವೃತ್ತಿಗೀಗ ಮೂವತ್ತರ ಹರೆಯ.

ಸಾವಿರಾರು ವಿದ್ಯಾರ್ಥಿಗಳು ಬಂದು ಹೋಗಿದ್ದಾರೆ, ಹೋಗುತ್ತಲೇ ಇದ್ದಾರೆ.

ಈ ವೃತ್ತಿಗೆ ಹಣ ತೆಗೆದುಕೊಳ್ಳುವ ಕಾರಣದಿಂದಲೋ ಏನೋ ಕೇವಲ ಅವರು ವಿದ್ಯಾರ್ಥಿಗಳಾಗುತ್ತಾರೆ ಶಿಷ್ಯರಾಗುವ ಪ್ರಮೇಯ ಬರುವುದಿಲ್ಲ.

ನಾವೂ ಅಷ್ಟೇ ಇಡೀ ಅವರ ಬದುಕು ಪರಿವರ್ತನೆ ಮಾಡುವ ತಾಕತ್ತನ್ನೂ ಹೊಂದಿರುವುದಿಲ್ಲ.

ಆದರೆ ಆಧ್ಯಾತ್ಮ-ಸಂಗೀತ ಲೋಕದಲ್ಲಿ ತುಂಬಾ ಭಿನ್ನ.

*ಗುರುವಿನ ಗುಲಾಮನಾಗುವತನಕ ದೊರೆಯದಣ್ಣ ಮುಕುತಿ* ಎಂಬುದು ಸರ್ವಕಾಲಿಕ.

*ಧ್ಯಾನ-ರಾಗ* ಒಲಿಯಲು *ಭಕ್ತಿ-ಸಮರ್ಪಣೆ* ಅತ್ಯಗತ್ಯ.

ಬರಹದಲ್ಲಿ ವೈಯಕ್ತಿಕ ಶ್ರದ್ಧೆ ಸಾಕು. ಬೇರೆಯವರನ್ನು ದ್ರೋಣರನ್ನಾಗಿಟ್ಟುಕೊಂಡು ಬೆಳೆಯಬಹುದು.

ಆದ್ದರಿಂದ ದಯವಿಟ್ಟು ನನಗೆ ನಿರಾಯಾಸವಾಗಿ ಗುರುವಾಗುವ ಯೋಗ್ಯತೆಯಾಗಲಿ ಮನಸ್ಥಿತಿಯಾಗಲೀ ಇಲ್ಲ.

ಗಂಡು-ಹೆಣ್ಣಿನ ಸಂಬಂಧಗಳಲ್ಲಿ ನಾವೆಷ್ಟು ಸಣ್ಣವರು ಎಂಬ ಎಚ್ಚರಿಕೆಯಿಂದ ಒಮ್ಮೊಮ್ಮೆ ನಮ್ಮ ಸಂಬಂಧಗಳ declare ಮಾಡುವುದು ಅನಿವಾರ್ಯವೆನಿಸಿ ಏನೋ ಸಂಬಂಧ ಟ್ಯಾಗಿಸುತ್ತೇವೆ.

ಅಪರಿಚಿತ ಹಣ್ಮಕ್ಕಳನ್ನ *ಅಕ್ಕಾ ಅವರೇ*
ಎಂದು ಕರೆದು ಸುಂದರವಾಗಿದ್ದರೆ ಒಳಗೊಳಗೆ ಜೊಲ್ಲು ಸುರಿಸಿ ಸಂಭ್ರಮಿಸುವ ಪರಿ ತಮಾಷೆ ಅಲ್ದೇ ಇನ್ನೇನೂ?

ಇಷ್ಟೊಂದು ಮುಂದುವರೆದರೂ ಹೆಣ್ಗಂಡಿನ ವಿಷಯದಲ್ಲಿ ವೈಶಾಲ್ಯತೆ,ಸಹನೆ ಕಷ್ಟ.
ಸಿಗಲಿಲ್ಲ ಎಂದ ಕೂಡಲೇ ಚಾರಿತ್ಯಕ್ಕೆ ಕೈ ಹಾಕುವ ಮನಸ್ಥಿತಿ.

ಆದ್ದರಿಂದ ನಾನು ಆ ಸಣ್ಣ ಎಚ್ಚರಿಕೆ ಇಟ್ಟುಕೊಂಡು ವ್ಯವಹರಿಸಿದರೂ ಮೋಸ ಹೋಗಿದ್ದೇನೆ.

ಮುಖವಾಡ, ಬಳಸುವ ಪದಗಳು ನನ್ನನ್ನು ದಿಕ್ಕು ತಪ್ಪಸಿವೆ. ಹಾಗೆ ದಿಕ್ಕು ತಪ್ಪಿಸಿ ಯಾಮಾರಿಸಿಕೊಳ್ಳುವುದಕ್ಕೆ ಲಿಂಗ ಭೇದ-ಭಾವ ಇಲ್ಲ.

ಮಾತಿಗೆ ಮರುಳಾಗುವ *ಅಯೋಗ್ಯತೆ* ಸಾಕು.

ಅದರಲ್ಲೂ ವಿಶೇಷವಾಗಿ ಸಾರ್ವಜನಿಕ ಬದುಕಿನಲ್ಲಿ ಹೇರಳ ಮುಖವಾಡಗಳು.

ನಿಮ್ಮನ್ನು ವೃತ್ತಿಯಿಂದ *ಗೃಹಿಣಿ* ಎಂದು ಯಾರೋ ಪರಿಚಯಿಸಿದ್ದರಿಂದ ಇಷ್ಟೆಲ್ಲ‌ ಹೇಳಿದೇ ಅಂದುಕೋಬೇಡಿ.

ಬರಹದ ಶ್ರದ್ಧೆಯಲ್ಲಿ ನೀವು ಅಪ್ಪಟ ಅಕ್ಯಡೆಮಿಶಿಯನ್ ಎಂಬುದನ್ನು ಜುಗಲ್ ಬರೆಯುವಾಗ ಕಂಡುಕೊಂಡಿದ್ದೇನೆ.

ಅರ್ಹತೆಗೆ ಹುದ್ದೆ ಹಾಗೂ ಶಿಕ್ಷಣ ಮಾನದಂಡವಲ್ಲ. ಗುಣಸ್ವಭಾವ ಮುಖ್ಯ I mean *attitude*.

ನಮ್ಮಿಬ್ಬರ ಮಧ್ಯೆ ಭಕ್ತಿ-ಸಮರ್ಪಣೆಗಳ ಅಗತ್ಯವಿಲ್ಲವಾದ್ದರಿಂದ ಕೇವಲ ಒಳ್ಳೆಯ ಸಾಹಿತ್ಯ ಸಂಗಾತಿಗಳಾಗಬಹುದು.

ಫೇಸ್ಬುಕ್ಕಿನ ಗೆಳೆಯರನೇಕರು ನಿಮ್ಮ ಜುಗಲ್ ಪಯಣವನ್ನು ಅಭಿನಂದಿಸಲು *ಗುರುತ್ವಾಕರ್ಷಣೆ* ಕಾರಣವಾಗಿರಬಹುದು.

ಗುರುಸ್ಥಾನದ ಒಜ್ಜವನ್ನು ಕೆಳಗಿಳಿಸಿ ನಮ್ಮನ್ನು ನಾವೂ ಗೆಳೆಯರಂತೆ ಪರಸ್ಪರ ಅಭಿವಂದಿಸೋಣ.

ಏಕೆಂದರೆ *ಪಿಸುಮಾತುಗಳ ಜುಗಲ್* ನಲ್ಲಿನ ಪಾತ್ರಧಾರಿಗಳು ನಾವು.

---ಸಿದ್ದು ಯಾಪಲಪರವಿ.

Sunday, January 21, 2018

ಎದೆಯ ಗುಡಿಯ ಗೂಡಲಿ

*ಎದೆಯ ಗುಡಿಯ ಗೂಡಲಿ*

ನೀ
ಬರೀ ಮುದ್ದು ಮಾಡಲು‌
ಮಾತ್ರ ಸಾಕು

ಚರ್ಚೆ ಉಸಾಬರಿ ಸಾಕು

ಪಟ್ಟು ಹಿಡಿದು ಕುಳಿತು
ಬರೆದರೆ ಪಾವನ ಸರಸ್ವತಿ

ಯಾವುದೋ ಋಣಾನುಬಂಧ
ಬೆಸೆಯಿತು ನಮ್ಮ
ಈ ಅನುಬಂಧ

ಅಗ್ನಿ ಪರೀಕ್ಷೆಯನು
ನಿರ್ವಿಕಾರವಾಗಿ
ಎದುರಿಸಿದ ಧೀರೆ

ಕ್ಷಮಿಸು ಸಖಿ ನಾ
ತಿರುಚಿದ ಗಾಯಕೆ

ಹಚ್ಚುವೆ ಗುಟುಕಿನ ಸವಿ
ಮುಲಾಮು

ನಿತ್ಯ ನಸುನಗುತ ಮುದ್ದು
ಅಕ್ಷರಗಳಲಿ ಬಂಧಿಸು

ಹೃದಯ ಸಿಂಹಾಸನದಲಿ
ಬೆಚ್ಚಗೆ ಮಲಗಿ

ಹಾಯಾಗಿ ಹೊಸಲೋಕದಿ
ಹಾರಾಡುವೆ

ಎಂದೋ ಕಂಡ ಕನಸ
ನನಸಾಗಿಸಿ ಬಣ್ಣ ತುಂಬಿ
ಬಾಳ ರಂಗೇರಿಸಿದ ರಾಣಿ

ಈಗ ನೀ ಮಹಾರಾಣಿ
ಮನದರಮನೆಯಲಿ

ಬರೆಯುತ ಬೆರೆಯುತ
ಹಾಡುತ ನಲಿಯುತ
ಕುಣಿದು ಕುಪ್ಪಳಿಸಿ
ಧರೆಗಿಳಿಸು
ಸ್ವರ್ಗ ಸಂಭ್ರಮ

ನೀ ನಿಲ್ಲದ ನೀ ಇಲ್ಲದ
ಈ‌ ಒಲವಲೋಕದಲಿ
ಇಲ್ಲ ನನಗೆ ಬೇರೇನೂ
ಕೆಲಸ

ಬಾ ಅರಗಿಣಿ ನೀ
ಬಂಧಿಯಾಗು ಮುಕ್ತವಾಗಿ
ನನ್ನ ಎದೆಯ
ಗುಡಿಯ ಗೂಡಲಿ

ದೊರಕಿದೆ ದೊರೆಯ ಅಪ್ಪಣೆ
ಬೇಕಿಲ್ಲ ಬೇರೇನೂ
ನಾ
ನೀ
ಸದಾ ಖುಷಿಯಾಗಿರಲು

ನೀ ನಕ್ಕರೆ ಅದೇ ಸಕ್ಕರೆ
ನಾ ಹಾಲಾಗಿ‌ ಕರಗಿ
ಲೀನವಾಗಿ

ಅವನ
ಗಂಟಲ ಸವಿಯಾಗಿ
ಆಳಕಿಳಿದು ಅಮರ

ಅಜರಾಮರ ನಿನ್ನ
ನೆನಪ‌ ಹಸಿರ ಉಸಿರಲಿ...

---ಸಿದ್ದು ಯಾಪಲಪರವಿ.

ಓಲೆ-೨೦

ಒಲವಿನೋಲೆ-೨೦

ಹಲೋ ಚಿನ್ನು,

ತುಂಬಾ ಪ್ರೀತಿಸುವ ವ್ಯಕ್ತಿಗಳ ಗುಣ-ಸ್ವಭಾವ ಅರ್ಥ ಮಾಡಿಕೊಳ್ಳುವುದು ಅನಿವಾರ್ಯ.

ಪ್ರತಿಯೊಬ್ಬ ವ್ಯಕ್ತಿಗೂ ತನ್ನದೇ ಆದ ಲೋಪದೋಷಗಳಿರುತ್ತವೆ. ಅವರನ್ನು ಹತ್ತಿರದಿಂದ ತುಂಬ ಹಚ್ಚಿಕೊಂಡು ಅವಲೋಕಿಸಿದರೆ ಗೊತ್ತಾಗುತ್ತೆ.

ದೊಡ್ಡವರು, ಜಾಣರು,ಉನ್ನತ ಸ್ಥಾನದಲ್ಲಿರುವವರು ಏನೇ ಅದರೂ ವ್ಯಕ್ತಿ ವ್ಯಕ್ತಿಯೇ. ಅವರದೇ ಆದ ಚಡಪಡಿಕೆ ಹಾಗೂ ದೌರ್ಬಲ್ಯ ಗಳಿರುತ್ತವೆ.

ಅವು ಗೊತ್ತಾದ ಕೂಡಲೇ shock ಆಗುತ್ತದೆ. 'ಇಷ್ಟೊಂದು ದೊಡ್ಡವರಾಗಿ ಹೀಗೆ ಆಡ್ತಾರಲ್ಲ 'ಅಂತ ಬೇಸರವಾಗತ್ತದೆ.

ಅಂತಹ ಸಣ್ಣ ದೌರ್ಬಲ್ಯ ಗಳನ್ನು ಸಹಿಸಿಕೊಳ್ಳದಿದ್ದರೆ ಸಹವಾಸವೇ ಬೇಡವೆನಿಸುತ್ತದೆ.

ಕೊಂಚ ಊಟಕ್ಕೆ ತಡವಾದರೆ, ಡ್ರೈವರ್ ಗಾಡಿ ಓಗವಾಗಿ ಓಡಿಸಿದರೆ , ಬರುತ್ತೇನೆ ಎಂದವರು ಸ್ವಲ್ಪ ತಡ ಮಾಡಿದರೆ,ಊರಿಗೆ ಹೋಗುವ ವಿಚಾರ, ಟೂರ್ ಯೋಜನೆ ಬದಲಾದರೆ,ಕಾಫಿಗೆ ಸಿಹಿ ಹೆಚ್ಚಾದರೆ, ಮನೆ ಮತ್ತೇನೋ ನೆನಪಾದರೆ,ಫೋನ್ ಮಾಡುವುದು ಹೆಚ್ಚು ಕಡಿಮೆ ಅನಿಸಿದರೆ ರೇಗಿಬಿಡುತ್ತಾರೆ.

ಅದು ತಪ್ಪು ಎಂದೆನಿಸಿದರೂ ಅದರಿಂದ ಹೊರಬರಲಾಗದೇ ಒದ್ದಾಡುತ್ತಿರುತ್ತಾರೆ.
ಅದೆ ಪ್ರತಿಯೊಬ್ಬರ ವ್ಯಕ್ತಿತ್ವದ ಮಿತಿ.

ಈ ಮಿತಿ ಎಲ್ಲರನ್ನೂ, ನನಗೂ, ನಿಮಗೂ ಪ್ರತಿಯೊಬ್ಬರಿಗೂ ಕಾಡುವದು ಸಹಜ ಆದರೆ ನಮ್ಮ ಮಿತಿ ನಮಗೆ ಅರಿವಾಗದೆ ಬೇರೆಯವರದು ಕಾಣುತ್ತದೆ.

ಈ ಮಿತಿಯಿಂದ ತಮ್ಮಷ್ಟಕ್ಕೇ ತಾವೇ ಕಿರಿಕಿರಿ ಮಾಡಿಕೊಳ್ಳುತ್ತಾರೆ. ಅದು  ನೋಡುವವರಿಗೂ ಹಿಂಸೆ ಎನಿಸುತ್ತದೆ.

ಆದರೆ ನಾವು ಒಮ್ಮೆ ಅವರ ಸಣ್ಣ ದೌರ್ಬಲ್ಯಗಳನ್ನು ಅರಿತು ಸರಳವಾಗಿ ಸ್ವೀಕರಿಸಬೇಕು.

ದೊಡ್ಡವರ ಸಣ್ಣ ಸಂಗತಿಗಳನ್ನು, ಆತ್ಮೀಯರ ದೌರ್ಬಲ್ಯಗಳನ್ನು ಅವರ ಶಕ್ತಿಯಂತೆ ಸ್ವೀಕರಿಸಲೇಬೇಕು.

*ದೌರ್ಬಲ್ಯಗಳನ್ನು ಖುಷಿಯಿಂದ ತಮಾಷೆಯಾಗಿ ಸ್ವೀಕರಿಸಬೇಕು ನಮ್ಮನ್ನು ನಾವು ಸ್ವೀಕರಿಸುವಂತೆ*

ಆಗ ನಮ್ಮ bondage ಇನ್ನೂ ಗಟ್ಟಿಗೊಳ್ಳುತ್ತೆ.

Let us accept like package product.

ನಿನ್ನ ಪ್ರೀತಿಯ

ಅಲೆಮಾರಿ

( ಸಿದ್ದು ಯಾಪಲಪರವಿ)

Friday, January 19, 2018

ಕಳೆದು ಹೋಗಿರುವೆ

*ಕಳೆದು ಹೋಗಿರುವೆ*

ಭಾವಲೋಕದ ಭ್ರಮೆಯಲಿ
ಜೀವ ಅಂಗೈಯಲಿ ಸಾವಿರದ
ಕನಸುಗಳಲಿ ಲೀನ

ವಾಸ್ತವದ ಹಂಗ ಹರಿದು
ಪ್ರೇಮ
ಸಂಗದ ಗುಂಗಲಿ ನಾ
ಅರಿವಿರದೆ
ಕಳೆದುಹೋಗಿರುವೆ

ನಂಬಿಕೆ ಜಾಡಲೊಂದು
ಬರೀ
ವ್ಯಾಮೋಹ

ಬೇಕೋ ಬೇಡೋ
ಎಂದರಿಯದ ಮೂಢ
ಮನಸು

ಹಗಲ ರಾತ್ರಿಯಾಗಿಸಿ
ರಾತ್ರಿ ಕಣ್ಣರಳಿಸಿ

ಮನವ ಗುದ್ದಲಿ ಮಾಡಿ
ಭಾವನೆಗಳ ಹರಗಿ
ಹೊಲವ ಒಲವಿನಿಂದ
ಹಸನ
ಮಾಡುವ ಉಮೇದು

ಕಳೆವ ಕೀಳುವ ಜಿದ್ದಾ ಜಿದ್ದು
ಹೊಳಪ ಹೆಚ್ಚಿಸುವ ಹುಸಿ
ಹುಂಬತನ

ಹುಚ್ಚಾಟಗಳ ಹಂಗ ಹಿಡಿದು
ಏನಾದರೂ
ಪಡೆಯುವ ಜಡ ಜಂಜಡದ
ಧಿಮಾಕು

ಇದೆಲ್ಲ‌ ಮೀರಿದ ಸಹಜ
ಸುಂದರ ವಾಸ್ತವದ ಹಾದಿ
ತುಂಬ
ಕಲ್ಲು-ಮುಳ್ಳು

ನಾ ಸ್ವಚ್ಛ ಮಾಡಿ
ನಡೆಯಲೇಬೇಕು

ಭಾವಲೋಕದ ಸಂಗಾತಿಗಳ
ಸಂಗತಿಗಳಿಗೆ ಇರಬಹುದೆ
ಅಲ್ಪಾಯು ?

ನಾ ಸಾಯುವ ಮುನ್ನ ನೂರು
ಕಾಲ ಬದುಕಿ ಬದುಕ ತಿರುಳ
ತಿಳಿದು ಜ್ವಾಕ್ಯಾಗಿರಬೇಕು

ನಡು ಹಾದಿಯ ದಟ್ಟ ಇರುಳ
ಛಳಿಯಲಿ ಗಡಗಡ ನಡುಗಿ
ನರಳಿದರೆ ಬಿಸಿ ತಾನಾಗಿ
ಬಸಿಯದು

ಯಾರೂ ಹೊದಿಸಲಾರರು
ತಾವಾಗಿ ಪ್ರೀತಿಯ ಕೌದಿ

ಹೋಗು ನೋಡಲ್ಲಿ

ನೀ

ನಂಬಿದವರು ಎಷ್ಟೊಂದು
ಬೆಚ್ಚಗೆ  ಹಾಯಾಗಿ ಮಲಗಿ
ನಸು ನಗುತಿರಲು

ನಿನಗೇನು ಧಾಡಿ ಕೊರಗಿ
ಕೊರಗಿ
ಮುಲುಗಲು

ಇದು ವಾಸ್ತವದ ನೆಲೆ
ಭ್ರಮೆಗಿಲ್ಲ ಮೂರು ಕಾಸಿನ
ಬೆಲೆ

ಒಂಚೂರು ಒಳಗಣ್ಣ ತೆರೆದು
ಒಳಗಿಳಿದು ನಿನ್ನೊಳಗಿಳಿದು
ನೋಡು

ನೋಡು ನೋಡು ನೋಡು

ನೀ ನಿನಗಾಗಿ
ನಿನಗಾಗಿಯೇ ನಿನ್ನನೊಮ್ಮೆ.

-----ಸಿದ್ದು ಯಾಪಲಪರವಿ.

Thursday, January 18, 2018

ಓಲೆ-೧೯

ಒಲವಿನೋಲೆ-೧೯

ಹಲೋ ಚಿನ್ನು,

ಒಗಟು ಬಿಡಿಸುವ ಜೀವಪಯಣದಲಿ ಅನೇಕ ಒಗಟುಗಳು.
ಹೊಯ್ದಾಟ ನಿಂತಾಗ ಅನೇಕ ಒಗಟುಗಳಿಗೆ ಉತ್ತರ ಸಾಧ್ಯ.

ನಾವೇ ಹೆಣೆದುಕೊಂಡ ಬಲೆಯಲಿ ನಾವೇ ಸಿಕ್ಕು ಒದ್ದಾಡುತ್ತೇವೆ.

ಒಳಹೋಗುವುದು ಬಹಳ ಸುಲಭ ಆದರೆ ಹೋಗುವ ದಾರಿ‌‌ ಗೊತ್ತಿರುವ ನಾವೇ ಹೊರಬರಲು ಚಡಪಡಿಸುವುದೂ ಕೂಡಾ ಒಗಟೇ.

ಕಾರಣ ತುಂಬ ಆಸೆಪಟ್ಟು ತಿಂದು ಕರಗಿಸಲಾಗದೇ ಒದ್ದಾಡಿದಂತೆ.

ಮಾನವೀಯ ಸಂಬಂಧಗಳು ವಿಚಿತ್ರ. ಅರ್ಥವಾಗಿರದ ಅನೇಕ ಸಂಗತಿಗಳು ಅರ್ಥವಾಗಿಬಿಡುತ್ತವೆ.

ಜೊತೆಗೆ ಬರುವವರು ನಮ್ಮ ಹಾಗೇ ಇರಲಿ ಎಂದು ಬಯಸುವದೇ ನಿರಾಸೆಗೆ ಮೂಲ ಕಾರಣ.

ಬರುವುದೇನೋ ಬರುತ್ತಾರೆ ತುಂಬಾ ಕಿರಿ ಕಿರಿ‌ ಎನಿಸಿದರೇ ಹೇಳದೇ‌ ಕೇಳದೇ ಬಿಟ್ಟು ಪರಾರಿಯಾಗುತ್ತಾರೆ.

ಸಂಬಂಧಗಳಿಗೆ ಇರಬಹುದಾದ ಮಿತಿಯನ್ನು ನಾವೇ ತಡುವಿ ವೈಯಕ್ತಿಕ ಅವಲೋಕನದ ಮೂಲಕ ಮಿತಿ ಹೇರಿಕೊಳ್ಳಬೇಕು.

ಪ್ರತಿಯೊಂದಕ್ಕೂ ತನ್ನದೇ ಆದ *ಎಲಾಸ್ಟಿಕ್ ಲಿಮಿಟ್* ಇರುತ್ತದೆ.

ಆ ಲಿಮಿಟ್ ಹರಿಯುವವರೆಗೆ ಮಾತ್ರ ಎಳೆದಾಡಬೇಕು.
ತುಂಬಾ ಎಳೆದಾಡಿಕೊಂಡು ಹರಿದರೆ ಎಲಾಸ್ಟಿಕ್ ತನ್ನ ಶಕ್ತಿ ಕಳೆದುಕೊಂಡು ನಿಸ್ತೇಜವಾಗುತ್ತದೆ.

ಹರಿದುಹೋದ ಎಲಾಸ್ಟಿಕ್ ತನ್ನ ಬೆಲೆ ಕಳೆದುಕೊಂಡು ಬಿಡುತ್ತೆ.

ಯಾವುದೋ ಕಾರಣಕ್ಕೆ, ಏನೋ ಲೆಕ್ಕ ಹಾಕಿ, ಏನೋ ಹೇಳಲು ಹೋಗಿ ಬಂಧನಗಳು ಸಡಿಲವಾಗುವ ಮುನ್ನ ಎಚ್ಚತ್ತುಕೊಂಡು bondage just ಉಳಿಸಿಕೊಳ್ಳೋಣ ಕೊಂಚ ರಾಜಿಯಾಗಿ.

ಮುಂದೆ ಹಂತ ಹಂತವಾಗಿ ಕಾಲ ಎಲ್ಲವನ್ನೂ ಸರಿ‌ ಮಾಡುವವರೆಗೆ ಕಾಯೋಣ.

ನಿನ್ನ ಪ್ರೀತಿಯ

*ಅಲೆಮಾರಿ*

( ಸಿದ್ದು ಯಾಪಲಪರವಿ)

Wednesday, January 17, 2018

ರೈತ ರೈತ

ರೈತ ದ್ವಿಪದಿಗಳು

ಉಳುವ ಯೋಗಿಯ ದುಡಿವ
ಕೈಗಳಿಗೆ ಸಾವಿರದ ಶರಣು

ದಣಿವರಿಯದ  ಧಣಿ
ಭೂಮಿಯನಾಳುವ ಹೊನ್ನಿನ ಗಣಿ

ಜನರ ಹಸಿವು ಇಂಗಿಸುವ ದೇವ
ಭೂತಾಯಿಗಾಗಿ ದುಡಿಯುವ ಮಹದೇವ

ರೈತ ನೀನೆಂದರೆ ಈ ದೇಶ
ಜಗ ಮೆಚ್ಚುವ ಸರ್ವೇಶ

ಸಂಪೂರ್ಣ ಬಾಗಿದರೂ ಬೆನ್ನು
ಮಣ್ಣೇ ಇವನ ಪಾಲಿನ ಹೊನ್ನು

---ಸಿದ್ದು ಯಾಪಲಪರವಿ.

Monday, January 15, 2018

ಸಿದ್ದೇಶ್ವರ ಸ್ವಾಮೀಜಿ

*ಪೂಜ್ಯ ಸಿದ್ಧೇಶ್ವರ ಸ್ವಾಮೀಜಿಗಳು*

ನುಡಿದಂತೆ ನಡೆಯುವ ಪರಮಾತ್ಮನನ್ನು ತೋರಿಸುವ ಪುಣ್ಯಾತ್ಮರು.

  ಈ ದೇಶದಲ್ಲಿ ನೂರಾರು ಮತ ಪಂಥಗಳಿವೆ ಲಕ್ಷಾಂತರ ಸಾಧು ಸಂತರಿದ್ದಾರೆ ಎಲ್ಲದಕ್ಕೂ ಸಾಕಾಗುವಷ್ಟು ಜನರ ಸಂಖ್ಯೆಯೂ ಇದೆ.

ಧರ್ಮ ನಿರಂತರವಾಗಿ ಚಲಾವಣೆಯಲ್ಲಿರುತ್ತದೆ ,ಧರ್ಮ ,ಜಾತಿಗಳ ಹೆಸರಿನಲ್ಲಿ ಏನೆಲ್ಲಾ ಮಾಡಬಹುದಾದ ದೇಶ ನಮ್ಮದು.

ಮೋಕ್ಷದ ನೆಪದಲ್ಲಿ ದೇವರ ಹುಡುಕಾಟದಲ್ಲಿರುವವರಿಗೆ ದೇವರನ್ನು ತೋರಿತ್ತೇವೆಂದು ಅನೇಕರು ತಾವೇ ದೇವರೆಂದು ನಂಬಿಸಿಬಿಡುತ್ತಾರೆ.

ನಂಬಿದವರನ್ನು ಶೋಷಣೆ ಮಾಡುತ್ತಾ ಬಯಲಾಗಿಬಿಡುತ್ತಾರೆ.

ಕೃಷ್ಣ ಬುದ್ಧ ಮಾಹಾವೀರ ಏಸು ಪೈಗಂಬರ ಹಾಗೂ ಬಸವಾದಿ ಶರಣರು ಧರ್ಮ ಹಾಗೂ ಆಧ್ಯಾತ್ಮಕ್ಕೆ ಇರುವ ವ್ಯತ್ಯಾಸವನ್ನು ಸಾರಿ ಹೇಳಿದ್ದಾರೆ.

ಆದರೂ ನಾವು ಧಾರ್ಮಿಕ ಏಜಂಟುರುಗಳ ಮೂಲಕವೇ ದೇವರನ್ನು ಹುಡುಕುವ ಅಂಧಕಾರದಲ್ಲಿದ್ದೇವೆ.

ಆದರೆ ಪರಮ ಪೂಜ್ಯ ಸಿದ್ಧೇಶ್ವರ ಮಾಹಾಸ್ವಾಮಿಗಳು ತಮ್ಮ ಪ್ರವಚನಗಳ ಮೂಲಕ ದೇವರನ್ನು ಕಾಣುವ  ಸನ್ಮಾರ್ಗ ತೋರುತ್ತಲಿದ್ದಾರೆ.

ಘಮಘಮಿಸುವ ಪರಿಮಳದಂತೆ ,ಹಿತವಾಗಿ ಬೀಸುವ ತಂಗಾಳಿಯಂತೆ ನಿರ್ಲಿಪ್ತ ಭಾವದಿ ಶಬ್ದ ಗಳು ಅರಳುತ್ತಾ ಮನಸ್ಸನ್ನು ಪ್ರವೇಶಿಸುತ್ತವೆ.

----ಸಿದ್ದು ಯಾಪಲಪರವಿ.

ಪುಸ್ತಕ ಸಂಕ್ರಮಣ

*ಪುಸ್ತಕ ಸಂಕ್ರಮಣ*

ನನ್ನ ಹಬ್ಬಗಳೇ ಹೀಗೆ. ಎಲ್ಲಂದರಲ್ಲಿ. ಈ ವರ್ಷದ ಸಂಕ್ರಮಣ ಬೆಂಗಳೂರಿನ ಪುಸ್ತಕ ಸಡಗರ. ನಾಗರಾಜ ವಸ್ತಾರೆ ಹಾಗೂ ಅಪರ್ಣಾ ಅವರ ಸೌಜನ್ಯದ ಕರೆಗೆ ಬಂದದ್ದು ಸಾರ್ಥಕ.

ವೇದಿಕೆ ಮೇಲೆ, ಮುಂದೆ ಹಾಗೆ ಅಂಕಣದ ತುಂಬೆಲ್ಲ ಚಿರಪರಿಚಿತ ಮುಖಗಳ ಮಧ್ಯೆ ನಾನೇ ಲೋ ಪ್ರೊಫೈಲ್.

ಅದೇನೋ ವಿಚಿತ್ರ. ಮುಖಪುಸ್ತಕದ ಭಾರಿ ಗೊತ್ತಿರುವ ಗೆಳೆಯರೂ 'ಅಯ್ಯೊ ಗೊತ್ತೇ ಸಿಗಲಿಲ್ಲ' . ಅಂತಾರೆ.

ಎಂದಿನಂತೆ ಸಾಂಪ್ರದಾಯಿಕ ಮಾತುಗಳ ಸುರಿಮಳೆ. ನಾವು ಎಷ್ಟೇ ಹೊಸ ನಮೂನೆ ಬರೆದರೂ ಮಾತಿನ ಜಾಡು ಹೊಗಳಿಕೆ ಹಾದಿ ಹಿಡಿದುಬಿಡುತ್ತೆ. ನಮ್ಮ ನಿರೀಕ್ಷೆಯೂ ಹಾಗೆ ಅನ್ನಿ.

ಆದರೆ ಬರಹಗಾರ,ವಿಮರ್ಶೆ ಹಾಗೂ ಹೊಗಳಿಕೆಗಳ ಸೌಜನ್ಯಗಳ ಬದಿಗಿರಿಸಿ ತಮ್ಮ ಪಾಡಿಗೆ ತಾವು ಬರೆಯುತ್ತಿರಬೇಕು.

ಯಾರು ಏನೇ ಹೇಳಿದರೂ ಉಳಿಯುವುದು ಮಾತ್ರ ಉಳಿಯುತ್ತೆ.

ವಚನಕಾರರು ಹಾಗೂ ಶೇಕ್ಷಪಿಯರ್ ಹೊಗಳಿಕೆ ಹಾಗೂ ತೆಗಳಿಕೆಗಳ ಲೆಕ್ಕಿಸಿದ್ದರೇ ಅಂದೇ ಸಾಯುತ್ತಿದ್ದರು.
ಆದರೆ ಅವರು ಇಂದಿಗೂ ಇದ್ದಾರೆ ಮುಂದೆಯೂ ಇರುತ್ತಾರೆ.

ವಸ್ತಾರೆ ಹಾಗೂ ಅಪರ್ಣಾ ಇಬ್ಬರೂ ಸೆಲಿಬ್ರಿಟಿಗಳು, ಸೌಜನ್ಯ ಕಾಪಾಡಿಕೊಂಡು ಪ್ರೀತಿಯಿಂದ ಕರೆದ ಕೂಗಿಗೆ ಬಂದವರು ಖುಷಿಪಟ್ಟರು.

ಕಾರ್ಯಕ್ರಮ ಸೊಗಸಾಗಿತ್ತು. ಹೊಸ ವಿನ್ಯಾಸ, ಹೊಸ ಭಾಷೆಯ ಮೂಲಕ ವಸ್ತಾರೆ ಹೊಸ ಓದುಗರನ್ನು ಸೃಷ್ಟಿ ಮಾಡಿದ್ದಾರೆ. ಮಾರಾಟದ ಆತಂಕವೂ ಇರದ ಹಾಗೆ.

All the best and congratulations to Nagaraj Ramaswamy Vastarey.

---ಸಿದ್ದು ಯಾಪಲಪರವಿ.

ಓಲೆ-೧೮

ಒಲವಿನೋಲೆ-೧೮

ಹಲೋ ಚಿನ್ನು,

ತುಂಬ ದಿನಗಳಿಂದ ಬರೆಯಲಾಗಲಿಲ್ಲ.ಕಾರಣ ಕೊಡುವುದು ಬಲು ಕಷ್ಟ ಬರಹ-ಬದುಕಿನ ಹಾಗೆ.

ಓಡಾಟ ನಿಲ್ಲುವುದಿಲ್ಲ ಅನಿಸಿದೆ.ಗಡಿಯಾರದ ಪೆಂಡೊಲಮ್ ಹಾಗೆ.

ಓಡಾಡುವುದು meaningless ಅನಿಸಿದರೂ ಅರ್ಥ ಹುಡುಕುವುದು ಜಾಣತನ ಅಲ್ಲ,ಅಲ್ಲಿ ಅರ್ಥ ಇರಬೇಕಲ್ಲ.

ಆದರೂ ಹುಡುಕುವ ಹುಡುಗಾಟ ನಿಂತಿಲ್ಲ. ಬೇರೆಯವರಿಗೆ ಬಿಡು.
ಕಟ್ಟಿಕೊಂಡವರಿಗೆ ಒಗಟಾಗಿದ್ದೇನೆ.

ಯಾಕೋ ಒಗಟು ಬಿಡಿಸುವುದು ಬೇಡ ಎನಿಸಿದೆ. ಮೊದಲು ನಾನು ಬಿಡಿಸಿಕೊಳ್ಳುತ್ತೇನೆ.

ಬದುಕು ನನ್ನ ಪಾಲಿಗೆ ಸ್ವಲ್ಪ ಭಿನ್ನವಾಗಿ ಕಾಣಿಸಿ‌ ಅರ್ಥವಾಗುವ ಸಡಗರದ ಸಂಕ್ರಮಣವಿದು.

ಕಾಯುವಿಕೆ ಹೆಚ್ಚು meaningful ಅನಿಸತೊಡಗಿದೆ.

I missed so many things, many things tantalised with me but tolerated... have to tolerate.

ಪುಸ್ತಕ ಬಿಡುಗಡೆಗೆ ಬೆಂಗಳೂರಿಗೆ ಬಂದೆ. ನನ್ನ ಪುಸ್ತಕದ ಕೆಲಸ ತಾರ್ಕಿಕ ಅಂತ್ಯ ಕಂಡಿದೆ.

ಕೊಂಚ ಸಮಾಧಾನ.
ಎಲ್ಲವೂ ಪೂರ್ಣ ಪರಿಪೂರ್ಣ ಮಾಡಲಾಗುವುದಿಲ್ಲ ಎಂಬ ಅಳುಕಿತ್ತು.

ಮೂರು ತಿಂಗಳು ಪಟ್ಟು ಹಿಡಿದು ಕುಳಿತು ಬರೆದೆ.‌ ಎಲ್ಲರೂ ಸಹಿಸಿಕೊಂಡರು. ಅದರಲ್ಲೂ ಮನೆಯಲ್ಲಿ ಸಂಗಾತಿ ರೇಖಾ, ಜುಗಲ್ ಬರಹಕ್ಕೆ ಸಾಂಗತ್ಯದ ಸಾತ್ ನೀಡಿದ ಕಾವ್ಯಶ್ರೀ ಅವರ‌ ಸಹಕಾರ ನೆನೆಯುವೆ.

ಪ್ರಕಾಶಕ ಮಿತ್ರ ವಿ.ಎಂ.ಮಂಜುನಾಥ, ಕುಂಚನೂರ ಆನಂದ, ಮಾರ್ಗದರ್ಶಕರಾದ ಪ್ರೊ.ರಂಗನಾಥ ಸರ್ ಹಾಗೂ ಅನೇಕರು ನನ್ನ ಹುಚ್ಚಾಟಗಳನ್ನು ಏನೋ ಸಾಧಿಸಬಹುದು ಎಂಬ ಭರವಸೆಯಿಂದ ಸಹಿಸಿಕೊಂಡಿದ್ದಾರೆ.

ಭರವಸೆಗಳು ಬದುಕಿ ಬೆಳೆಯಬೇಕು. ಹಾಗೆಯೇ ಉಳಿಯಬಾರದು.

Everything waits for its own time zone but we have to accelerate it continuously.

ಒಂದು assignment ಮುಗಿದ ಕೂಡಲೇ ಖಾಲಿ ಖಾಲಿ ಅನಿಸಿಬಿಡುತ್ತೆ. ಮತ್ತೊಂದು ಹೊಸ ತುಡಿತ. ತಲ್ಲಣ.

ಸಂಸ್ಥೆಯ ಕೆಲಸವೂ ನಡೆದಿದೆ. ಮುಗಿದಾಗ ಹೊಸ ಗೆಲುವು.

ಸಂಕ್ರಮಣದ ಶುಭಾಶಯಗಳು. ಎಲ್ಲರಿಗೂ.

ಪ್ರೀತಿಯಿಂದ

ನಿನ್ನ

ಅಲೆಮಾರಿ

( ಸಿದ್ದು ಯಾಪಲಪರವಿ )

೧೫-೧-೨೦೧೮.