*ಕಳೆದು ಹೋಗಿರುವೆ*
ಭಾವಲೋಕದ ಭ್ರಮೆಯಲಿ
ಜೀವ ಅಂಗೈಯಲಿ ಸಾವಿರದ
ಕನಸುಗಳಲಿ ಲೀನ
ವಾಸ್ತವದ ಹಂಗ ಹರಿದು
ಪ್ರೇಮ
ಸಂಗದ ಗುಂಗಲಿ ನಾ
ಅರಿವಿರದೆ
ಕಳೆದುಹೋಗಿರುವೆ
ನಂಬಿಕೆ ಜಾಡಲೊಂದು
ಬರೀ
ವ್ಯಾಮೋಹ
ಬೇಕೋ ಬೇಡೋ
ಎಂದರಿಯದ ಮೂಢ
ಮನಸು
ಹಗಲ ರಾತ್ರಿಯಾಗಿಸಿ
ರಾತ್ರಿ ಕಣ್ಣರಳಿಸಿ
ಮನವ ಗುದ್ದಲಿ ಮಾಡಿ
ಭಾವನೆಗಳ ಹರಗಿ
ಹೊಲವ ಒಲವಿನಿಂದ
ಹಸನ
ಮಾಡುವ ಉಮೇದು
ಕಳೆವ ಕೀಳುವ ಜಿದ್ದಾ ಜಿದ್ದು
ಹೊಳಪ ಹೆಚ್ಚಿಸುವ ಹುಸಿ
ಹುಂಬತನ
ಹುಚ್ಚಾಟಗಳ ಹಂಗ ಹಿಡಿದು
ಏನಾದರೂ
ಪಡೆಯುವ ಜಡ ಜಂಜಡದ
ಧಿಮಾಕು
ಇದೆಲ್ಲ ಮೀರಿದ ಸಹಜ
ಸುಂದರ ವಾಸ್ತವದ ಹಾದಿ
ತುಂಬ
ಕಲ್ಲು-ಮುಳ್ಳು
ನಾ ಸ್ವಚ್ಛ ಮಾಡಿ
ನಡೆಯಲೇಬೇಕು
ಭಾವಲೋಕದ ಸಂಗಾತಿಗಳ
ಸಂಗತಿಗಳಿಗೆ ಇರಬಹುದೆ
ಅಲ್ಪಾಯು ?
ನಾ ಸಾಯುವ ಮುನ್ನ ನೂರು
ಕಾಲ ಬದುಕಿ ಬದುಕ ತಿರುಳ
ತಿಳಿದು ಜ್ವಾಕ್ಯಾಗಿರಬೇಕು
ನಡು ಹಾದಿಯ ದಟ್ಟ ಇರುಳ
ಛಳಿಯಲಿ ಗಡಗಡ ನಡುಗಿ
ನರಳಿದರೆ ಬಿಸಿ ತಾನಾಗಿ
ಬಸಿಯದು
ಯಾರೂ ಹೊದಿಸಲಾರರು
ತಾವಾಗಿ ಪ್ರೀತಿಯ ಕೌದಿ
ಹೋಗು ನೋಡಲ್ಲಿ
ನೀ
ನಂಬಿದವರು ಎಷ್ಟೊಂದು
ಬೆಚ್ಚಗೆ ಹಾಯಾಗಿ ಮಲಗಿ
ನಸು ನಗುತಿರಲು
ನಿನಗೇನು ಧಾಡಿ ಕೊರಗಿ
ಕೊರಗಿ
ಮುಲುಗಲು
ಇದು ವಾಸ್ತವದ ನೆಲೆ
ಭ್ರಮೆಗಿಲ್ಲ ಮೂರು ಕಾಸಿನ
ಬೆಲೆ
ಒಂಚೂರು ಒಳಗಣ್ಣ ತೆರೆದು
ಒಳಗಿಳಿದು ನಿನ್ನೊಳಗಿಳಿದು
ನೋಡು
ನೋಡು ನೋಡು ನೋಡು
ನೀ ನಿನಗಾಗಿ
ನಿನಗಾಗಿಯೇ ನಿನ್ನನೊಮ್ಮೆ.
-----ಸಿದ್ದು ಯಾಪಲಪರವಿ.
No comments:
Post a Comment