*ಪೂಜ್ಯ ಸಿದ್ದೇಶ್ವರ ಸ್ವಾಮೀಜಿ ಹಾಗೂ ಪದ್ಮಶ್ರೀ*
ನಿರೀಕ್ಷೆಯಂತೆ ಸಿದ್ದೇಶ್ವರ ಸ್ವಾಮೀಜಿಗಳು ಪ್ರಶಸ್ತಿ ಸ್ವೀಕರಿಸದಿರಲು ನಿರ್ಧರಿಸಿ ತಮ್ಮ ನಿಜ ವಿರಕ್ತಿ ಸಾಬೀತು ಮಾಡಿದ್ದಾರೆ.
ನುಡಿದಂತೆ ನಡೆಯುವುದು ಸರಳವಲ್ಲವೆಂದು ಗೊತ್ತಿದ್ದರೂ ಎಲ್ಲರೂ ನುಡಿಯುತ್ತಲೇ ಇದ್ದಾರೆ ನಡೆಯಲಾಗದೆ.
ಜನಸಾಮಾನ್ಯರಿಗೆ ಆಧ್ಯಾತ್ಮಿಕ ತಿರುಳನ್ನು ಗ್ರಹಿಸುವ ಮನೋಧರ್ಮ ಬೆಳೆಸಿದ ಪೂಜ್ಯರ ಸಾಧನೆ ಹಿಂದೆ ದೊಡ್ಡ ಪರಿಶ್ರಮವಿದೆ.
ವೇದಾಂತ ಸಾರವನ್ನು ಜನರಿಗೆ ತಲುಪಿಸಲು ಸನ್ಯಾಸ ಸ್ವೀಕರಿಸಿದರೂ ಕಾವಿಗೆ ಬಲಿಯಾಗದೆ ನಿಜ ಶರಣರಾದವರು.
ಇಂದು ಕಾವಿ,ಸನ್ಯಾಸ,ಧರ್ಮ ಹಾಗೂ ಲಿಂಗಾಯತತ್ವ ತುಂಬ ಗೊಂದಲಕ್ಕೆ ಬಿದ್ದಿರುವಾಗ ಕಾವಿಧಾರಿಗಳಾಗದ ಸಿದ್ದೇಶ್ವರ ಶ್ರೀಗಳು ಹೆಚ್ಚು ಪ್ರಸ್ತುತವೆನಿಸುತ್ತಾರೆ.
ಬುದ್ಧ,ಅಲ್ಲಮ,ಬಸವ,ವೇದಾಂತ,ಗೀತೆ, ಝೆನ್,ಸೂಫಿ ಹಾಗೂ ಎಲ್ಲ ಜಾಗತಿಕ ಧರ್ಮಗಳ ಸಾರವನ್ನು ಅಂಗೈಯಲ್ಲಿ ಹಿಡಿದರೂ ಬೇಕಾದವರಿಗೆ ಬೇಕಾದಷ್ಟೇ ಉಣಬಡಿಸುವ ತಾಯ್ತನವಿದೆ.
ಹೆಚ್ಚು ತಿನಿಸಿ ಆರೋಗ್ಯ ಕೆಡಿಸುವ ಪಾಂಡಿತ್ಯ ಪ್ರದರ್ಶನವಿಲ್ಲ.
ಬಹಳಷ್ಟು ಜನ ತುಂಬಾ ಶಾಸ್ತ್ರಗಳನ್ನು ಅರಗಿಸಿಕೊಂಡು ಕುಡಿದು ನಡೆ ಇಲ್ಲದೆ ಭಾರವಾಗಿದ್ದಾರೆ.
ಆಧ್ಯಾತ್ಮದ ಸಾರವನ್ನು ಬದುಕಿನಲ್ಲಿ ಪಾಲಿಸುತ್ತ ಜನರಿಗೆ ತಲುಪಿಸುವ ಏಕ ಮಾತ್ರ ಉದ್ದೇಶ.
ಎಲ್ಲ ವರ್ಗದ ಸಾವಿರಾರು ಜನರನ್ನು ಸೆಳೆಯುವ ಏಕೈಕ ಪ್ರವಚನಕಾರರು.
ಅವರ ಅನುಕರಣೆಯಲ್ಲಿ ಅನೇಕರು ತಯಾರಾಗಿದ್ದರೂ ಅವರೇರಿದೆತ್ತರಕೆ ಏರಲಾಗಿಲ್ಲ.
ಇಂಗ್ಲಿಷ್, ಮರಾಠಿ, ಹಿಂದಿ ಭಾಷೆಗಳಲ್ಲಿಯೂ ಅಷ್ಟೇ ಸಮರ್ಥವಾಗಿ ಪ್ರತಿಪಾದಿಸಿ ಇಡೀ ಲೋಕ ಸುತ್ತಿದ್ದಾರೆ.
ಸರಳತೆ, ಸಮಾಧಾನ, ನಿರ್ಲಿಪ್ತತೆ, ನಿರಾಕರಣೆ, ನಿರ್ಭಯ ಪದಗಳಿಗೆ ಉಪಮೇಯವೇ ಸಿದ್ಧೇಶ್ವರರು.
ತಮ್ಮ ಮಾತುಗಳಲ್ಲಿ ಅಪ್ಪಿ ತಪ್ಪಿಯೂ ಕೆಟ್ಟ, ನಕಾರಾತ್ಮಕ ಪದಪ್ರಯೋಗ ಮಾಡದೇ ಸಕಾರಾತ್ಮಕ ಆಲೋಚನೆಯಡೆಗೆ ಕರೆದೊಯ್ಯುವ ಲೈಫ್ ಸ್ಕಿಲ್ ಸಿದ್ಧಾಂತ.
ಹಾಗಂತ ಇವರನ್ನು ಎಲ್ಲರೂ ಒಪ್ಪುವ ವಾತಾವರಣವೂ ಇಲ್ಲ.
ಕೆಲವು ಅಪ್ಪಟ ಬಸವಾಭಿಮಾನಿಗಳು 'ಕೇವಲ ಶರಣ ಸಿದ್ಧಾಂತ ಪ್ರತಿಪಾದಿಸಲಿ, ಎಲ್ಲವೂ ಅಲ್ಲೇ ಇದೆ, ಮತ್ತೇಕೆ ಅಲ್ಲಿ ಇಲ್ಲಿಯದು ಹೇಳುವುದು' ಎಂಬ ತಕರಾರು ಎತ್ತುತ್ತಾರೆ.
ಅದಕ್ಕೆ ಉತ್ತರಿಸುವ ಅಗತ್ಯವಿಲ್ಲ. ಎಲ್ಲರಿಗೆ ಎಲ್ಲವೂ ಗೊತ್ತಿದೆ.
ನಮ್ಮ ಆಚರಣೆ ಹಾಗೂ ನಂಬಿಕೆಗಳು ಏನೇ ಇದ್ದರೂ ಬೇರೆ ಧರ್ಮಗಳನ್ನು ಓದಬಾರದೇಕೆ? ಎಂಬ ಪ್ರಶ್ನೆ ನನ್ನನ್ನೂ ಕಾಡುತ್ತಿದೆ.
ಎಲ್ಲರ ವಾದ-ವಿವಾದಗಳಿಗೆ ಉತ್ತರ ಕೊಡುವ ಅಗತ್ಯ ಹಾಗೂ ಅನಿವಾರ್ಯತೆ ಇಲ್ಲ ಬಿಡಿ.
ಆಧ್ಯಾತ್ಮಿಕ ಲೋಕಕ್ಕೆ ಭಾರತದ ಕೊಡುಗೆ ಅಪಾರವಾಗಿದೆ. ಅನೇಕ ಗೊಂದಲಗಳನ್ನು ನಿವಾರಿಸಲು ಸಾವಿರಾರು ಸಿದ್ಧೇಶ್ವರ ಅಪ್ಪಗಳ ಅಗತ್ಯವಿರುವಾಗ ಎಲ್ಲವನ್ನೂ ಇವರಿಂದ ಏಕೆ ನಿರೀಕ್ಷಿಸಬೇಕು.
ನಿಜ ಸಂನ್ಯಾಸಿಗಳಿಗೆ ಜ್ಞಾನರತ್ನ ಸಾಕು.
ದ್ಯಾನಸೂತ್ರ ಬೇಕು.
ಅರಿವನ್ನು ಹರವಿ ಹೋದ ಬುದ್ಧ, ಬಸವಾದಿ ಪ್ರಮಥರು ಹಾಗೂ ದಾರ್ಶನಿಕರು ಪ್ರಶಸ್ತಿಗಳನ್ನು ಮೀರಿ ಇನ್ನೂ ಜೀವಂತವಾಗಿದ್ದಾರೆ.
ಕೆಲವರು ಆರಂಭದಲ್ಲಿ ಸದ್ದು ಮಾಡಿ ಬೆಳೆದ ಮೇಲೆ ಅಥವಾ ತಮ್ಮ ಕೊನೆಯ ದಿನಗಳಲ್ಲಿ ತಮ್ಮ ಮೌಲ್ಯಗಳಿಗೆ ಅಪಚಾರವಾಗುವ ಕೆಲಸ ಮಾಡಿ ಪ್ರಶಸ್ತಿಗಳನ್ನು ಕಸಿದುಕೊಳ್ಳುವ ಪ್ರಸಂಗ ತಂದೊಡ್ಡುತ್ತಾರೆ.
ವ್ಯಕ್ತಿಯ ಇಡೀ ವ್ಯಕ್ತಿತ್ವದ ಹರವು ಕೊನೆಯ ಅಧ್ಯಾಯದಲ್ಲಿ ನಿರೂಪಿತವಾಗುತ್ತದೆ.
ಅದೇ ಕಾರಣಕ್ಕೆ ಐನ್ ಸ್ಟೀನ್ ಜೀವಂತವಾಗಿರುವಾಗ ತನ್ನ ಪ್ರತಿಮೆ ನಿಲ್ಲಿಸುವುದನ್ನು ವಿರೋಧಿಸುತ್ತಾನೆ.
ಅದೇ ಸಮರ್ಥ ನಿಲುವಿನ ಶ್ರೀಗಳ ನಿರ್ಧಾರ ನನಗಂತೂ ಖುಷಿ ಎನಿಸಿದೆ.
ಪೂಜ್ಯರಿಗೆ ಅನಂತ ಕೋಟಿ ಶರಣುಗಳು.
----ಸಿದ್ದು ಯಾಪಲಪರವಿ.
No comments:
Post a Comment