ಒಲವಿನೋಲೆ-೨೧
ಹಲೋ ಚಿನ್ನು,
*ಮನಸಿನ ಭ್ರಾಂತು*
*ನಾನು ತುಂಬ important,ನಾನು ಹೋದರೆ ಏನೂ ನಡೆಯುವುದಿಲ್ಲ, ಮನೆಯವರು, ಆಫೀಸಿನ ಜನ ತುಂಬಾ miss ಮಾಡಿಕೊಳ್ತಾರೆ* ಹೀಗೆ ಏನೇನೂ ಹೇಳುವುದು ತುಂಬಾ meaningless, ಅನರ್ಥ ಬಡಾಯಿಯಲ್ಲದೆ ಇನ್ನೇನು?
ನಾವು ನಮ್ಮನ್ನು ನಂಬಿದವರ ಬದುಕಿನ ಭಾಗವಾಗಿರುವ ಮಾತ್ರಕ್ಕೆ *ನಾನು* ಅನಿವಾರ್ಯ ಎಂಬ ಮನಸ್ಥಿತಿ ಹೊಕ್ಕಿರುತ್ತದೆ.
ಅಕಸ್ಮಾತ್ ಅನಾರೋಗ್ಯಕ್ಕೆ ಒಳಗಾಗಿ ಹಾಸಿಗೆ ಹಿಡಿಯಿರಿ ನೋಡೋಣ ? ಎಲ್ಲವೂ ಮಂಗ ಮಾಯ.
ಆಗ ಬೇರೆ ವರಸೆ ಶುರು. ' ಏನೇ ಹೇಳಿ ಸರ್ ಹೆಲ್ತ್ ಮಹತ್ವದ್ದು, ಮಾಡುವಾಗ ಎಲ್ಲರೂ ಮಾಡಿಸಿಕೊಳ್ತಾರೆ, ಈಗ ನೋಡಿ ಎಲ್ಲರೂ ನಾಪತ್ತೆ.'
ಹೀಗೆ ಕಾಲ ಕಾಲಕ್ಕೆ ನಾವೇ ಹೇಳುವ ಮಾತುಗಳು ಮೌಲ್ಯ ಕಳೆದುಕೊಂಡು ನಮಗೆ ತಮಾಷೆ ಎನಿಸುತ್ತವೆ.
ನಾವು ಬರೀ ನೆಪ, ಅನಿವಾರ್ಯ ಎಂಬ ಭ್ರಮೆ.
ಬೇರೆಯವರಿಗಾಗಿ ನಿಸ್ವಾರ್ಥದಿಂದ ಕೆಲಸ ಮಾಡುವ ಗುಣಧರ್ಮ ಇರಲಿ ಆದರೆ ನಾನೇ ಎಲ್ಲಾ ಎಂಬ ಅವಾಸ್ತವ ಬೇಡ.
ಮಾಡುವ ಕೆಲಸ ನಮಗೆ ಸರಿ ಅನಿಸಿ ಖುಷಿ ಕೊಡಲಿ, ಇಲ್ಲ ಅದು ನಮ್ಮ ಪಾಲಿನ ಅನಿವಾರ್ಯ ಕರ್ತವ್ಯವಾಗಿರಲಿ , ನಿಷ್ಠೆಯಿಂದ ಮಾಡೋಣ.
ಆದರೆ ನಾನು ಹೋದರೆ ನಡೆಯೋದೇ ಇಲ್ಲ ಎಂಬ ಕಾರಣ ಇಟ್ಟುಕೊಂಡು ನಮಗೆ ದಕ್ಕಿದ ಅವಕಾಶಗಳನ್ನು ಕಳೆದುಕೊಳ್ಳುವುದು ಬೇಡ.
ಒಳ್ಳೆಯ ಪುಸ್ತಕ, ಇಂಪಾದ ಸಂಗೀತ, ಬರೆಯುವ ಕಥೆ, ಹಾಡುವ ರಾಗ, ನೋಡುವ ಪರಿಸರ ಸೌಂದರ್ಯ, ಪ್ರೇಕ್ಷಣೀಯ ಸ್ಥಳಗಳು ಹೀಗೆ ಹತ್ತಾರು ಅವಕಾಶಗಳನ್ನು ಬಲಿ ಕೊಟ್ಟು ನಮಗರಿವಿಲ್ಲದಂತೆ ಕಳೆದುಹೋಗುತ್ತ ಕೊನೆಗೊಮ್ಮೆ ಸತ್ತೇ ಹೋಗುತ್ತವೆ.
ಅದಕ್ಕೆ ಹಿರಿಯರು *ಸತ್ತವರ ಬಾಯಲ್ಲಿ ಮಣ್ಣು* ಎಂದು ಇಂತಹ ಸಾವಿಗೆ ಮೂದಲಿಸುತ್ತಾರೆ.
ನಮಗರಿವಿಲ್ಲದೆ ನಮ್ಮ ಬಾಯಲ್ಲಿ ಮಣ್ಣು ಬೀಳುವ ಮೊದಲು ನಮಗೆ ಸರಿ ಅನಿಸುವ ಖುಷಿ ಕೊಡುವ ಕೆಲಸ ಮಾಡಿಬಿಡೋಣ.
ನಿನ್ನ
*ಅಲೆಮಾರಿ*
( ಸಿದ್ದು ಯಾಪಲಪರವಿ )
೩-೨-೨೦೧೮
No comments:
Post a Comment