Wednesday, February 28, 2018

ಬಿಳಿ ಕಾಗದ

*ಬಿಳಿ ಕಾಗದ*

ಬಿಳಿ ಹಾಳೆ ಕೈಗಿಟ್ಟು ಏನಾದರೂ ಬರೆ
ಎಂದು ವಿಶ್ವಾಸದಿಂದ ಹೇಳಿದೆ
ಸುಂದರ ಚಿತ್ತಾರ , ಒಲವಿನ ಮಾತುಗಳು
ಹಾಳೆಯ ತುಂಬಾ ಹರಡಬಹುದೆಂಬ
ಭವ್ಯ ಕನಸಿತ್ತು

ಏನೂ ಇಲ್ಲದೆ ಏನಾದರೂ ಗೀಚಿದ್ದರೆ ಸಾಕಿತ್ತು
ಆದರೆ ಸುಂದರ ಬಿಳಿ ಹಾಳೆಯ ಸ್ವಚ್ಛವನು
ನೀ ಸ್ವಚ್ಛಂದ ಅಂದುಕೊಳ್ಳುತ್ತೀ ಎಂದೆಣಿಸಿರಲಿಲ್ಲ

ಎದೆಯ ಬಗೆದು ಹೃದಯ ಅಂಗೈಯಲಿ
ಇಟ್ಟಾಗ ಕರುಳು ಚುರ್ ಅನ್ನಬೇಕಿತ್ತು

ತಲೆಯಲಡಗಿದ ತುಮುಲಗಳ ಯಾವ
ಮುಲಾಜಿಲ್ಲದೆ ಶಬ್ದ ಮಾಲೆ ಕಟ್ಟಿ ಹಾಡ
ಹೇಳಿದಾಗ ನೀ ತಲೆದೂಗಬೇಕಿತ್ತು

ಮಗುವಿಗೆ ಹಾಗೆ ಬೆತ್ತಲಾಗಿ ಅತ್ತಿತ್ತ ಓಡಾಡಿ
ಮುಗ್ಧ ನಗೆಯಲಿ ಕೇಕೆ ಹಾಕಿದಾಗ
ಸಂಭ್ರಮದಿ ಎತ್ತಿ ಮುದ್ದಾಡಬಹುದಿತ್ತು

ದುಃಖದಿ  ತೊಡೆಯ ಮೇಲೆ ಮಲಗಿ
ಬಿಕ್ಕಳಿಸಿದಾಗ ತಲೆ ಸವರಿ
ರಮಿಸಬಹುದಿತ್ತು

ನನ್ನ ಎದೆಯಾಳದ ಭಾವನೆಗಳು
ಭೋರ್ಗರೆದಾಗ
ಆಲಿಸುವದು ಬೇಡ ಕೊಂಚ
ಕೇಳಬಹುದಿತ್ತು

ಕನಸುಗಳು ನನವಿರಬಹುದು ಆದರೆ
ಭ್ರಮೆ ಅಂತು ಅಲ್ಲವಲ್ಲ

ಮನದ ಮಾತುಗಳು ಇವು ಸಂತೆಯ
ಸದ್ದು ಪುಂಡರ ಗೋಷ್ಟಿಗಳಲ್ಲವಲ್ಲ

ಈಗಲೂ ಏನಾದರೂ ಬರೆ
ಆದರೆ ಎಳೆಯಬೇಡ ಬರೆ

ಅದು ಬಿಳಿ ಹಾಳೆ ಅಲ್ಲಿ ಇಲ್ಲಿ ಬಿದ್ದು
ಗಾಳಿಯಲಿ ಹಾರಾಡಿ ಕೊಚ್ಚೆಯಲಿ
ಕೊಳೆತು ನೆಲದಲಿ
ಸಮಾಧಿಯಾಗುವುದು ಬೇಡ

ಚಿಂದಿ ಆಯುವ , ರದ್ದಿ ಮಾರುವವರ
ಕೈಗಾದರೂ ಸಿಕ್ಕರೆ ಕೊಂಚ
ಬರಬಹುದು ಬೆಲೆ

ಅವರ ಕೈಗೆ ಒಂದಿಷ್ಟು ಪುಡಿಗಾಸು ಸಿಕ್ಕು
ಖುಷಿಯಿಂದ  ಅರಳುವ ನಗೆಯಲಿ
ನಾ ಮರೆಯಾಗಿ ಮೆರೆಯುವೆ.

---ಸಿದ್ದು ಯಾಪಲಪರವಿ

No comments:

Post a Comment