*ಹಾಡಗೆರೆ ಶಾಲೆ,ಜನಪ್ರತಿನಿಧಿಗಳು ಹಾಗೂ ಗುರೂಜಿ*
ಉತ್ತರ ಕನ್ನಡ ಜಿಲ್ಲೆಯ ತುದಿಯ ಕಾಡಿನ ಹಳ್ಳಿ ಹಾಡಗೆರೆ. ಇಲ್ಲೊಂದು ಸರಕಾರಿ ಶಾಲೆ. ಐವತ್ತು ವಿದ್ಯಾರ್ಥಿಗಳು. ಊರಿಗೆ ರಸ್ತೆ ಇಲ್ಲ. ವಾಹನ ಸೌಕರ್ಯ ಕೂಡಾ ಇಲ್ಲ. ಈ ರಾಜ್ಯದಲ್ಲಿ ಇನ್ನೂ ಇಂತಹ ವಾತಾವರಣ ಇದೆ. ಸಾವಿರಾರು ಕೋಟಿ ಅನುದಾನ, ಅದರ ಸದ್ಭಳಕೆಗೆ ಪರದಾಡುವ ಜನಪ್ರತಿನಿಧಿಗಳು.
ಆದರೂ ಇದು ವಾಸ್ತವ. ಇಲ್ಲಿರುವ ಶಾಲೆಯನ್ನು ಬಂಗಾರಮಕ್ಕಿಯ ಮಾರುತಿ ಗುರೂಜಿ ಅವರು ದತ್ತು ತೆಗೆದುಕೊಂಡು ಅಭಿವೃದ್ಧಿ ಪಡಿಸಿದ್ದಾರೆ.
ಶಾಲೆಯ ಎರಡನೇ ವಾರ್ಷಿಕೋತ್ಸವ. ಶಾಲೆ ಆರಂಭವಾಗಿ ೩೯ ವರ್ಷ.
ಈ ಬಾರಿಯ ವಾರ್ಷಿಕೋತ್ಸವಕ್ಕೆ ಜನಪ್ರತಿನಿಧಿಗಳ ದಂಡೇ ಇತ್ತು. ಶಾಸಕರಾದ ಶ್ರೀ ಮಾಂಕಾಳ ವೈದ್ಯ, ಜಿಲ್ಲಾ ಪಂಚಾಯತ್ ಸದಸ್ಯರಾದ ಪುಷ್ಪಾ ನಾಯ್ಕ್ ಹಾಗೂ ಎಲ್ಲ ಅಧಿಕಾರಿಗಳು.
ಊರಿನ ನೈಜ ಸ್ಥಿತಿಯ ಮನವರಿಕೆ. ಶಾಸಕರ ಸರಳತೆ ಹಾಗೂ ಜನಪರ ಮಾತುಗಳಲಿ ನಂಬಿಕೆ ಉಂಟಾಯಿತು.
ಸಾವಿರಾರು ಕೋಟಿ ಬಳಕೆಯ ಲೆಕ್ಕ ಕೊಟ್ಟ ರೀತಿಯಲ್ಲಿ ಧನ್ಯತೆ ಇತ್ತು.
ಮೂಲಭೂತ ಸೌಕರ್ಯಗಳ ವಂಚಿತ ಜನರ ಯೋಗಕ್ಷೇಮದ ಅರಿವು ಇಂದಿನ ಅಗತ್ಯ.
ಜನಪ್ರತಿನಿಧಿಗಳು, ಮಠಾಧೀಶರು ಮನಸು ಮಾಡಿದರೆ ಏನೆಲ್ಲಾ ಸಾಧ್ಯ ಎಂಬುದನ್ನು ಈ ಕಾರ್ಯಕ್ರಮ ಕಟ್ಟಿಕೊಟ್ಟಿತು.
ಪೂಜ್ಯ ಮಾರುತಿ ಗುರೂಜಿ ಅವರು ತಮ್ಮ ಆಧ್ಯಾತ್ಮಿಕ ಸಾಧನೆಯ ಜೊತೆಗೆ ಸಮಾಜಮುಖಿ ವಿಚಾರಗಳ ಮೂಲಕ ಜನಪ್ರತಿನಿಧಿಗಳ ಜಾಗೃತಗೊಳಿಸುವ ಕಾರ್ಯ ಮಾಡುತ್ತಿರುವುದು ಅಭಿನಂದನೀಯ.
ದಟ್ಟ ಕಾಡು,ಸ್ವಚ್ಛಪರಿಸರ, ಪಕ್ಷಿಗಳ ಕಲರವ, ಹಳ್ಳಿಗರ ಸಂಭ್ರಮ, ಮಹಿಳೆಯರ ಕುಂಭ ಸ್ವಾಗತ, ಮಕ್ಕಳ ಮುಗ್ಧತೆ, ಜನಪ್ರತಿನಿಧಿಗಳ ಭರವಸೆಯ ಮಾತುಗಳ ಸರಳತೆ ಹಾಗೂ ಕೊನೆಗೆ ಗುರೂಜಿ ಅವರ ತನ್ಮಯತೆಯ ಆಶಿರ್ವಚನ ಸುಂದರ ಸಂಜೆಯ ಸಾರ್ಥಕ್ಯ.
ಮುಗ್ಧ ಜನರ ಆಶೋತ್ತರಗಳನ್ನು ಶಾಸಕರು ಹಾಗೂ ಅವರ ಸಹಚರರು ಈಡೇರಿಸುತ್ತಾರೆ ಎಂಬ ಭರವಸೆ ಮೂಡಿತು.
ಮುಂದಿನ ವರ್ಷದ ವಾರ್ಷಿಕೋತ್ಸವಕ್ಕೆ ಹೋಗುವಾಗ ಇರಬಹುದಾದ ಸುಂದರ ರಸ್ತೆಯ ಕಲ್ಪಿಸಿಕೊಂಡು ಊರು ಸೇರಿದೆ.
----ಸಿದ್ದು ಯಾಪಲಪರವಿ.
No comments:
Post a Comment