Saturday, February 3, 2018

ಮಾಡು-ಬಿಡು ಗೊಂದಲ ಬಿಡು

*ಮಾಡು-ಬಿಡು ಗೊಂದಲ ಬಿಡು*

ಎಲ್ಲವೂ ಸತ್ಯ ಎಲ್ಲವೂ ಮಿಥ್ಯ
ಹೌದಾದದ್ದು ಅಲ್ಲಾಗಿ ಅಲ್ಲಾದದ್ದು
ಹೌದಾಗುವ ಹೊತ್ತಲಿ ಇನ್ನಿಲ್ಲದ
ಗೊಂದಲ ಬೇಕು-ಬೇಡಗಳ ಜೀಕಾಟ

ಬೇಕು ಬೇಕು ಎಲ್ಲವೂ ನನಗೇ ಬೇಕು
ಮತ್ತೊಮ್ಮೆ ಬೇಡ ಏನೂ ಬೇಡ
ಮಗದೊಮ್ಮೆ ಬೇಕೆಂಬ ಸೊಲ್ಲು

ಬೇಕಾದರೆ ಹಿಡಿ ಬೇಡವಾದರೆ
ನಡೆ ನೂರು ಮಾರು ದೂರ
ಕಾಯಲು ಅವನುಂಟು
ನೋಡುವ ಎಲ್ಲವ ಎಡೆಬಿಡದೆ

ಯೋಗ-ಧ್ಯಾನ ಓದು-ಬರಹ
ಪ್ರೀತಿ-ಪ್ರೇಮ
ಎಲ್ಲವೂ ಅವನು ತೊಡಿಸಿದ ಉಡುಗೆ

ಬೇಡವಾದರೆ ಕಳೆದು
ಬೆತ್ತಲಾಗಿ ನಿಶ್ಚಿಂತವಾಗು
ಇಲ್ಲಿ ಇಲ್ಲ
ಯಾರೂತಡೆದು ಹಿಡಿದು
ಕಟ್ಟಿ ಹಾಕಿ ಸಲಹಲು

ಮಾಡುವುದಾದರೂ ಏನಿದೆ
ಇಲ್ಲಿ?

ಹೋಗಲೇಬೇಕಲ್ಲ
ಒಮ್ಮೆ ಎಲ್ಲ ಮುಗಿದ ಮೇಲೆ

ಅವಕೊಟ್ಟ ಒಲುಮೆಯ ಬಿಟ್ಟು
ಬೇರೇನು ಬೇಕು?

ಧ್ಯಾನದ ಉಸಿರಲಿ ಓದಿನ ಹರವಲಿ
ಬರಹದ ಕಂಪಲಿ ಪ್ರೀತಿಯ ಸನಿಹದಿ
ಇರುವ ಸವಿಯಲಿ ಇದ್ದು ಸುಖಿಸು

ಬೇಡವಾದರೆ ಇರು ಅಲ್ಲಿ ಇಲ್ಲಿ
ಇನ್ನೆಲ್ಲೋ ಗೊತ್ತು ಗುರಿ ಇಲ್ಲದ

ಗುರು ಇಲ್ಲದ ಗೊಂದಲದ
ಗೂಡಲಿ

ಬೇಡ ಎನಲು

ನಾ
ಯಾರು
ಕೇಳಲು
ನೀ
ಯಾರು

ಮಾಡು ಖುಷಿ ಕೊಡುವ
ಕೆಲಸಗಳ ಕೇವಲ ನೀ
ನಿನಗಾಗಿಯೇ

ಮಾಡುತಲೇ ಇರು
ಕೊನೆಯ ಉಸಿರು
ನಿಲ್ಲುವ


ಕ.

-----ಸಿದ್ದು ಯಾಪಲಪರವಿ.

No comments:

Post a Comment