Tuesday, February 6, 2018

ನಾನು ಮತ್ತು ಕಾವ್ಯ

*ನಾನು ಮತ್ತು ಕಾವ್ಯ*

ನನ್ನ ಕಾವ್ಯದ ಅನುಬಂಧ ಇಂದಿನದಲ್ಲ ಆದರೆ ಹಿಡಿತ ಸಾಧಿಸಲು ತುಂಬ ದೂರ ಕ್ರಮಿಸಬೇಕಾಯಿತು.
ವಿದ್ಯಾರ್ಥಿಯಾಗಿದ್ದಾಗ ಕದ್ದು ಮುಚ್ಚಿ ಬರೆದು ಸಂಭ್ರಮಿಸುತ್ತಿದ್ದೆ. ಗೋಷ್ಟಿಗಳಲ್ಲಿ ಓದುವ ಅಥವಾ ಪ್ರಕಟಣೆಗೆ ಕಳಿಸುವ ಧೈರ್ಯ ಮಾಡಲಿಲ್ಲ.

ಏನಾದರೂ ಬರೆದುಕೊಂಡು ತಿದ್ದಿಸಿಕೊಳ್ಳಲು ಹಿರಿಯ ಕವಿಗಳಾದ ಸಿದ್ಧಲಿಂಗ ಪಟ್ಟಣಶೆಟ್ಟಿ ಸರ್ ಹೂ ಮನೆಗೆ ಅನೇಕರು ಬರುತ್ತಿದ್ದರು.

ಅವುಗಳ ತಿದ್ದುವ ಸಂದರ್ಭದಲ್ಲಿ ಸರ್ ಒಮ್ಮೊಮ್ಮೆ ಕಠೋರವಾಗಿಯೇ ಹೇಳುತ್ತಿದ್ದ ಸಲಹೆಗಳನ್ನು ಕೇಳಿಸಿಕೊಂಡು ನನ್ನನ್ನು ನಾನೆ ತಿದ್ದಿಕೊಂಡು ಕಾವ್ಯ ಸಾಂಗತ್ಯ ಮುಂದುವರೆಸಿದೆ.

೧೯೮೫ ರಿಂದ ಬರೆದರೂ ಅಚ್ಚಿಗೆ ಹೋದದ್ದೇ ೯೦ ರ ದಶಕದಲ್ಲಿ. ಕವಿಗೋಷ್ಟಿಗಳಲ್ಲಿ ಓದಿದ್ದು ಬಿಟ್ಟರೆ ಸಂಕಲನ ಪ್ರಕಟಿಸುವ ಮಸಸ್ಸಾಗದೇ ಮರು ಓದು ಹಾಗೂ ತಿದ್ದುವಿಕೆ ಮುಂದುವರೆಯಿತು.

ಕ್ವಾಲಿಟಿ ಕಾನ್ಸಿಯಸ್ ಎಚ್ಚರಿಸುತ್ತಲೇ ಇತ್ತು. ಆದರೆ ಈಗಿನ ಕವಿಗಳ ಧಾವಂತ ನೋಡಿದಾಗ ಇದನ್ನೆಲ್ಲ ಮೆಲುಕು ಹಾಕಿದೆ. ಅಡ್ಡ ಬರೆದರೆ ಗದ್ಯ, ಉದ್ದ ಬರೆದರೆ ಪದ್ಯ ಎನ್ನುವಂತಾಗಿದೆ ಕಾವ್ಯದ ಸ್ಥಿತಿ.

ಚನ್ನಾಗಿ ಬರೆಯುತ್ತಿಲ್ಲ ಎಂದರ್ಥವಲ್ಲ‌‌‌ ತಿದ್ದುವ ಸಹನೆ ಕ್ಷೀಣಿಸಿದೆ. ವಾಚ್ಯತೆ ಹೆಚ್ಚಾಗಿ, ಗೇಯತೆ ಇಳಿಮಖವಾಗಿದೆ. ಮೇಲಿಂದ ಮೇಲೆ ತಿದ್ದಿ ತೀಡದೇ ಹೆರಿಗೆಯಾಗುವುದರಿಂದ ಅಪಕ್ವ,ಅನಾರೋಗ್ಯ ಪೀಡಿತ ಮಗುವಿನಂತೆ.

ಈಗ ಐವತ್ತರ ಗಡಿ ದಾಟಿದ ಮೇಲೆ ಕಾವ್ಯ ಒಲಿದ ಸಂಭ್ರಮ-ಸಡಗರ. ಒಲಿಸಿಕೊಡ ಪರಿಯಲಿ ಅದಮ್ಯ ವಿಶ್ವಾಸ ಪರಿಪಕ್ವತೆ. ಕಾವ್ಯದ ಪಯಣದಲಿ‌ ಒಂಥರಾ ಖುಷಿ ಇದೆ. ಆತ್ಮವಿಶ್ವಾಸವಿದೆ. ಕಾವ್ಯದ ನಿಜಾನುಸಂಧಾನವೇ ಹಾಗೆ ಸಹನೆ ಬೇಕು.

ಸಾಹಿತ್ಯದ ಎಲ್ಲ‌ ಪ್ರಕಾರಗಳಿಗಿಂತ ಮೇಲ್ ಪಂಕ್ತಿಯಲ್ಲಿರುವ ಕಾವ್ಯದ ಮುಖಾಮುಖಿಯ ಧ್ಯಾನಸ್ಥ ಸ್ಥಿತಿಯನ್ನು ಅನುಭವಿಸುವಾಗ ಸಿಗುವ ರಸಾನುಭವ ನಮ್ಮನ್ನು ಚೇತೋಹಾರಿಯಾಗಿಡುವ ಮನಸ್ಥಿತಿ ಸಾಕು. ಓದುಗರಿಲ್ಲದ ಕೊರಗಿಲ್ಲದೆ ನಮ್ಮ ಖುಷಿಯ ಅಭಿವ್ಯಕ್ತಿಯೇ *ಕಾವ್ಯ*.

ತುಂಬಾ ವಯಸ್ಸಾದರೂ ಚಿಂತೆ ಇಲ್ಲ‌ ದಕ್ಕಿಸಿಕೊಂಡೆ ಎಂಬ ಸಂತೃಪ್ತಿ. ವಯಸ್ಸು ಮೀರಿದರೂ ಸದಾ ಕಾಲ ಮನೋವಯೋಮಾನ ಕಾಪಿಟ್ಟುಕೊಳ್ಳುವ ಕಸುವು,ತಾಕತ್ತು‌ ಕಾವ್ಯಾನುಸಂಧಾನದಲ್ಲಿದೆ. ಆ ಧಿಮಾಕಿಟ್ಟುಕೊಂಡು ಬರೆದಾಗ ಸಿಗುವ ಸುಖ ಬತ್ತದ ಕಾಮಸುಖ-ಧ್ಯಾನಚೈತನ್ಯ.

ಆದರೆ ಕಾವ್ಯ ಸರಳಿಕೃತಗೊಂಡಿರುವ ಅಪಾಯಕ್ಕಾಗಿ ಇಷ್ಟೆಲ್ಲಾ ನೆನಪಿಸಿಕೊಂಡೆ. ಯಾರಿಗೂ ಹೇಳಲಾಗದ,ಹೇಳಬಾರದ, ಹೇಳತೀರದ ಮನದ ವ್ಯಾಪಾರವನ್ನು ಕಟ್ಟಿಕೊಡುವ ಹೂಗುಚ್ಛ.

ಬರೆಯುತ,ಬರೆಯುತ್ತ ತನ್ನೊಳಗೆ ಅವಗಾಹಿಸುವ ದೈವೀ ಚೈತನ್ಯ. ಅಪ್ಪಟ ಪ್ರೇಮಿಯಂತೆ,ನಿಷ್ಕಾಮ ಚಲುವಿನ ಒಲವ ಒಲಿಸಿಕೊಂಡ ಸಾಧು-ಸಂತರು ತಮ್ಮ ಭಕ್ತಿಯ ಅಭಿವ್ಯಕ್ತಿಗೆ ಕಾವ್ಯಮಾರ್ಗ ಹಿಡಿದರು.

ವಚನ,ಅಭಂಗ,ಕೀರ್ತನೆ, ಭಕ್ತಿಗೀತೆಗಳು,ದಾಸರ ಪದಗಳ ಕಾವ್ಯಾನುಸಂಧನದ ಮೂಲಕ ದೇವರನ್ನು ಒಲಿಸಿಕೊಳ್ಳಲು ಬಳಸಿದ ಸಾಧನವೇ *ಕಾವ್ಯ*.

ನಾವು ಅಷ್ಟೇ. ಪ್ರೀತಿ, ಭಕ್ತಿಯ ಅಭಿವ್ಯಕ್ತಿಯ ಮಾಧ್ಯಮವಾಗಿ ನಿಷ್ಠೆಯಿಂದ ಕಾವ್ಯಾನುಭೂತಿ ಅನುಭವಿಸೋಣ. ದುಡುಕುವುದು ಬೇಡವೇ ಬೇಡ.

ಈಗ ಬರೆಯುವವರೂ ಆ ಶ್ರದ್ಧೆಯನ್ನು ರೂಪಿಸಿಕೊಂಡು ಕಾವ್ಯವನ್ನು ಒಲಿಸಿಕೊಳ್ಳಲಿ ಎಂಬ ಆಶಯ. ಸಲಹೆ ಅಲ್ಲ‌. ಈಗ ನನಗೆ ದಕ್ಕಿದ ಕಾವ್ಯಸಿರಿ ನಿಮಗೂ ದಕ್ಕಲಿ.

----ಸಿದ್ದು ಯಾಪಲಪರವಿ.

No comments:

Post a Comment