ಸಂವಾದ
*ವೀರಶೈವ-ಲಿಂಗಾಯತ ಚಳುವಳಿಯ ಬಗೆ*
ನಿವೃತ್ತ ಅಧಿಕಾರಿ ಎಸ್.ಎಂ. ಜಾಮದಾರ ಹಾಗೂ ಬಸವರಾಜ ಇಟ್ನಾಳ ಅವರ ಅಭಿಪ್ರಾಯಗಳು ಸಮಯೋಚಿತ.
ಆದರೆ ಇಲ್ಲಿ ಆವೇಶದ ಭರದಲ್ಲಿ ಖಾಸಗಿ ಆರೋಪ ಮತ್ತು ರಾಜಕಾರಣದ ವಾಸನೆ ವಿಜ್ರಂಭಿಸುವುದು ತರವಲ್ಲ.
ಲಿಂಗಾಯತ ಚಳುವಳಿ ಇಂದಿನ ಅಗತ್ಯವಾಗಿದೆ. ಕೇವಲ ಸ್ವತಂತ್ರ ಧರ್ಮದ ನಂಬಿಕೆಯನ್ನು ಮೀರಿದ ಸಮಷ್ಟಿ ಪ್ರಜ್ಞೆ ಲಿಂಗಾಯತ ಧರ್ಮದ ತಳಹದಿಯಾಗಿದೆ.
ಲಿಂಗಾಯತ ಧರ್ಮ ಸರಳ, ವೈಜ್ಞಾನಿಕ ಮತ್ತು ಮೌಲಿಕ.
ಆದರೆ ಹೋರಾಟದ ಮುಂಚೂಣಿಯಲ್ಲಿರುವ ಬಹುಪಾಲು ಜನರು ಲಿಂಗಾಯತ ತತ್ವಗಳನ್ನು ಸಂಪೂರ್ಣ ಪಾಲಿಸುತ್ತಾರಾ? ಎಂಬ ಪ್ರಶ್ನೆ ಅಪ್ರಸ್ತುತ. ಪೂರ್ಣ ಪ್ರಮಾಣದ ಆಚರಣೆ ಕಠಿಣವಾದರೂ ಬಸವಪ್ರಜ್ಞೆ ಇದೆ ಎಂಬುದಷ್ಟೇ ಸಮಾಧಾನಕರ.
ಇಂದಿನ ಸ್ವಾರ್ಥಮಯ ವಾತಾವರಣದಲ್ಲಿ ಬಸವಪ್ರಜ್ಞೆ ಸಾಕು. ಆಚರಣೆ ಮುಂದಿನ ಬೆಳವಣಿಗೆ.
ಸ್ವತಂತ್ರ ಧರ್ಮದ ಚಳುವಳಿಗೆ ಈಗ ರಾಜಕೀಯ ಸ್ವರೂಪ ಪಡೆಯಲು ಇನ್ನೊಂದು ರಾಷ್ಟ್ರೀಯ ಪಕ್ಷದ ಮೌನವೇ ಕಾರಣ. ಕಾಂಗ್ರೆಸ್ ಪಕ್ಷ ಇದನ್ನು ಬಳಸಿಕೊಂಡದ್ದು ಕೇವಲ ಜಾಣ ನಡೆಯೇ ಹೊರತು ಅಪ್ರತಿಮ ಲಿಂಗಾಯತ ಪ್ರೇಮವಲ್ಲ.
ಸದುದ್ದೇಶ ಇಟ್ಟುಕೊಂಡ ಮಠಾಧೀಶರು,ಲಿಂಗಾಯತ ಧರ್ಮದ ವಿಚಾರಧಾರೆಗಳಲ್ಲಿ ನಂಬಿಕೆ ಇಟ್ಟುಕೊಂಡವರಿಗೆ ಎಂ.ಬಿ.ಪಾಟೀಲ ಹಾಗೂ ವಿನಯ್ ಕುಲಕರ್ಣಿ ಭರವಸೆಯಾಗಿ ಕಂಡದ್ದು ಸಹಜ.
ಅದೇ ನಿಲುವನ್ನು ಬಿಜೆಪಿ ನಾಯಕರು ಹೊಂದಿದ್ದರೂ ಸ್ವಾಗತಿಸುತ್ತಿದ್ದರು. ಆದರೆ ಯಾಕೋ ಹಾಗಾಗಲೇ ಇಲ್ಲ.
ಕೆಲವರು ವೀರಶೈವರ ಬೆನ್ನು ಬಿದ್ದರೆ ಬಹುಪಾಲು ನಾಯಕರು ಮೌನಕ್ಕೆ ಶರಣಾದರು.
ಕೆಲವು ನಾಯಕರಾದರು ಲಿಂಗಾಯತ ಧರ್ಮವನ್ನು ಬೆಂಬಲಿಸಿ ಲಾಭ ಪಡೆಯಲು ಬೇಡ ಅಂದವರು ಯಾರು?
ಆಕಸ್ಮಾತ್ ಬೆಂಬಲಿಸಿದರೆ ಭಾಜಪ ಹೈಕಮಾಂಡ್ ತಮ್ಮನ್ನು ಗಲ್ಲಿಗೇರಿಸುತ್ತದೆಯೇನೋ ಎಂಬಂತೆ ಮೌನ ತಾಳಿದರು.
ಅವರ ಮೌನದ ಲಾಭ ಕಾಂಗ್ರೆಸ್ ಪಡೆಯಿತು ಅಷ್ಟೇ!
ಇಡೀ ಚಳುವಳಿ ಕಾಂಗ್ರೆಸ್‌ಮಯವಾಗಲು ಬಿಜೆಪಿ ನಾಯಕರೆಲ್ಲರೂ ಕಾರಣಾಗಿಬಿಟ್ಟರು.
ವೈಯಕ್ತಿಕವಾಗಿ ಲಿಂಗಾಯತ ಧರ್ಮದ ಹೋರಾಟದಲ್ಲಿ ನಂಬಿಕೆ ಇದ್ದವರಾದರೂ ಈಗಲೂ ಬಾಯಿ ಬಿಡುತ್ತಾ ಇಲ್ಲ.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರೇ ಅಲ್ಪಸಂಖ್ಯಾತ ಜೈನ ಧರ್ಮದವರು. ರಾಜ್ಯ ಬಿಜೆಪಿ ನಾಯಕರು ಲಿಂಗಾಯತ ಹೋರಾಟದ ಮಹತ್ವವನ್ನು ತಮ್ಮ ರಾಷ್ಟ್ರೀಯ ಅಧ್ಯಕ್ಷರಿಗೆ ವಿವರಿಸಬಹುದಿತ್ತು. ಆದರೆ ಅಂತಹ ಧೈರ್ಯ ಮಾಡದೇ ಮೌನವಾಗಿದ್ದು, ವಿನಾಕಾರಣ ಚಳುವಳಿಯ ವೈರಿಗಳಾದರು.
ಧರ್ಮ ವ್ಯಕ್ತಿಯ ಖಾಸಗಿ ಸಂಗತಿ. ಅದನ್ನು ರಾಜಕೀಯ ನಿಲುವಿಗೆ ತಳುಕು ಹಾಕುವ ಅಗತ್ಯವೇ ಇರಲಿಲ್ಲ.
ಈ ಹೋರಾಟದ ಮುಂಚೂಣೆಯಲ್ಲಿರುವ ಎಂ.ಬಿ.ಪಾಟೀಲ್, ವಿನಯ್ ಕುಲಕರ್ಣಿ, ಬಸವರಾಜ ಹೊರಟ್ಟಿ ನಿಧಾನವಾಗಿ ತಮಗರಿವಿಲ್ಲದಂತೆ ತಮ್ಮನ್ನು ತಾವು ಸಮರ್ಪಣಾ ಭಾವದಿಂದ ತೊಡಗಿಸಿಕೊಳ್ಳಲು ಹೋರಾಟದ ತೀವ್ರತೆ ಹಾಗೂ ಅದರ ಪ್ರಭಾವವೇ ಕಾರಣ.
ಇದರ ರಾಜಕೀಯ ಲಾಭ ಕಾಂಗ್ರೆಸ್ ಪಕ್ಷಕ್ಕೆ ತಟ್ಟುತ್ತದೆ ಎಂಬುದು ಶುದ್ಧ ಸುಳ್ಳು.
ಅದನ್ನು ಅರಿಯದಷ್ಟು ಅಮಾಯಕರಲ್ಲ ನಮ್ಮ ರಾಜಕಾರಣಿಗಳು.
ಲಿಂಗಾಯತ ಧರ್ಮದ ಹೋರಾಟ ಮುಂಚೂಣೆಯಲ್ಲಿರುವ ಜನಸಾಮಾನ್ಯರು ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕುತ್ತಾರೆ ಎಂಬುದೂ ಶುದ್ಧ ಸುಳ್ಳು.
ಧರ್ಮ-ರಾಜಕಾರಣ ಪೂರಕವಾಗಿ ಆಲೋಚನೆ ಮಾಡಿದ್ದರೆ ಬಿಜೆಪಿ ಕರ್ನಾಟಕದಲ್ಲಿ ಅಧಿಕಾರ ಹಿಡಿಯುತ್ತಿರಲಿಲ್ಲ.
ವಾಸ್ತವ ಹೀಗಿರುವಾಗ ಹೋರಾಟದ ಮುಂಚೂಣಿಯಲ್ಲಿರುವ ನಾಯಕರಿಗೆ ಯಾವುದೇ ರಾಜಕೀಯ ಲಾಭವಾಗುವುದಿಲ್ಲ.
ಜನಸಾಮಾನ್ಯರಿಗೆ ಲಿಂಗಾಯತ ಧರ್ಮದ ಪ್ರಜ್ಞೆ ಹೆಚ್ಚಿಸುವಲ್ಲಿ ಈ ಚಳುವಳಿ ಕಾರಣವಾಗಿದೆ.
ವೀರಶೈವ ಮತ್ತು ಲಿಂಗಾಯತ ಮಧ್ಯೆ ಇದ್ದ ಅಂತರ ನಿಚ್ಚಳವಾಗಲು ಸಚಿವರಾದ ಎಂ.ಬಿ.ಪಾಟೀಲ, ವಿನಯ ಕುಲಕರ್ಣಿ ಹಾಗೂ ಎಸ್.ಎಂ.ಜಾಮದಾರ ಪ್ರಾಮಾಣಿಕವಾಗಿ ಪ್ರಯತ್ನಿಸಿದ್ದಾರೆ. ಈ ಹೋರಾಟದಲ್ಲಿ ಬಸವರಾಜ ಹೊರಟ್ಟಿಯವರು ಅಷ್ಟೇ ನಿಷ್ಪ್ರಹವಾಗಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ಬುದ್ಧಿ ಜೀವಿಗಳಿಗೆ, ಮಠಾಧೀಶರುಗಳಿಗೆ ಹಾಗೂ ಬಸವತತ್ವದಲ್ಲಿ ನಂಬಿಕೆ ಹೊಂದಿದವರಿಗೆ ಈ ಹೋರಾಟವನ್ನು ಮುನ್ನಡೆಸಲು,ಸಂಘಟನೆ ಮಾಡಲು ಆಧುನಿಕ ರಾಜಾಶ್ರಯದ ಅನಿವಾರ್ಯತೆಯಿತ್ತು.
ಹೋರಾಟದ ಉದ್ದೇಶ ಸರಿಯಾಗಿದ್ದರೆ ಸಾಕು. ಅಲ್ಲಿರುವವರು ಪರಿಪೂರ್ಣ-ಪರಿಶುದ್ಧರಾಗಿರಲಿ ಎಂಬ ನಿರೀಕ್ಷೆ ಅಸಾಧು.
ಆ ಅನಿವಾರ್ಯತೆಯ ಲಾಭ ಕೆಲವರಿಗೆ ದಕ್ಕಿದೆ.
ನಿಜಾರ್ಥದಲ್ಲಿ ಯಾವುದೇ ರಾಜಕೀಯ ಪಕ್ಷಕ್ಕೆ ಒತ್ತೆ ಇಡುವ ಅಗತ್ಯವೇ ಇಲ್ಲ. ಲಾಭ ಮಾಡಿಕೊಂಡವರು ಜಾಣರು.
ಸ್ವತಂತ್ರ ಧರ್ಮ ಎಂದು ಸಾಂವಿಧಾನಿಕ ಮಾನ್ಯತೆ ಸಿಗಲಿ, ಬಿಡಲಿ. ಇದೊಂದು ಒಳ್ಳೆಯ ಆರಂಭ. ಈ ಹೋರಾಟದಿಂದ ಬಸವಪ್ರಜ್ಞೆ ಪಸರಿಸಿದೆ ಎಂಬುದೊಂದು ಹೆಮ್ಮೆ ಹಾಗೂ ಅಭಿನಂದನೀಯ.
-----ಪ್ರೊ.ಸಿದ್ದು ಯಾಪಲಪರವಿ.
No comments:
Post a Comment