*ಕಳೆದು ಹೋದವರು*
ಗೋಡೆಯ ಮೇಲೆ ಲೊಚಗುಡುವ
ಹಲ್ಲಿ
ಮುಂಜಾನೆ ಕೂಗುವ ಕೋಳಿ
ಮೈಕಿನಲ್ಲಿ ಪ್ರಾರ್ಥಿಸುವ ಮುಲ್ಲಾ
ವಾಕಿಂಗ್ ಹೋಗುವವರ ಬಿರುಹೆಜ್ಜೆ
ದೇಹ ಕರಗಿಸಲು ತುಳಿಯುವ ನಿಂತ
ಸೈಕಲ್ಲಿನ ಝೇಂಕಾರ
ತೆರೆದ ಬಾಗಿಲು ಇಣುಕುವ ಸೂರ್ಯ
ರತ್ನಪಕ್ಷಿಯ ಶಕುನ
ಆದರೂ
ಮನಸು ಖಾಲಿ ಖಾಲಿ ಖಾಲಿ
ನನ್ನವರು ಕಳೆದು ಹೋಗಿದ್ದಾರೆ
ತಮ್ಮ
ತಮ್ಮ ಗದ್ದಲದ ಸಡಗರದಲಿ
ನನ್ನವರಾಗಿದ್ದರೆ ಕಳೆಯುತ್ತಿರಲಿಲ್ಲ
ನಾ
ನನ್ನವರು ಅಂದುಕೊಂಡರೆ ಅವರದೇನು
ತಪ್ಪಿಲ್ಲ ಬಿಡಿ
ಅವರ ಪಾಡಿಗೆ ಅವರದೇ ಸರಿ ಈಗ
ಅವರು ಇನ್ನೂ ಬಿಜಿ ಕಳೆದುಕೊಂಡಿದ್ದಾರೆ
ಮುದ್ದಾಂ ಬೇಕು ಅಂತ
ಹಬ್ಬದೂಟ ನೆಚ್ಚಿ ದಿನದೂಟ ಕಳಕೊಂಡ
ಹಳವಂಡ
ಹಸಿವು ಸಂಕಟ ತಳಮಳ ನಾ ಮಾಡಿ
ಕೊಂಡ ಎಡವಟ್ಟು ನಾ
ಅನುಭವಿಸಿಅಳುವಂತೆ ಇಲ್ಲ
ಜೋರು
ಇವಳು ಬೆಚ್ಚಿ ಬೆದರಿ ಬೈದಾಳು
ಮಕ್ಕಳ ಫೀಜು, ಮನೆ ಸಾಲದ ಕಂತು
ಅರ್ಧ ಬರೆದ ಕವಿತೆ ಪೂರ್ಣ
ಬರೆಯಲಾಗದ ಕಥೆ ಮತ್ತದರ
ವ್ಯಥೆ
ಬದುಕು ಹೀಗೆಯೇ ಇರುವವರು ಇದ್ದೇ
ಇರುತ್ತಾರೆ ಹೋಗುವವರು ಹೋಗುತ್ತ
ಇರುತ್ತಾರೆ ಇರಬೇಕು ನನ್ನ ಪಾಡಿಗೆ
ನಾ
ಓಂಕಾರವ ಮಾತಾಗಿಸಿ ಉಸಿರ ಲಯವ
ಉಂಡು ಸಂಭ್ರಮಿಸಿ ಧ್ಯಾನಿಸುತ ಅವನ
ಅವನು ನೀಡುವ ವರವ ಪಡೆದು
ಇರುವುದ ಹಿಡಿದು ಇರದಿರದ
ಹುಡುಕದೇ ಚಡಪಡಿಸದೇ ಸುಮ್ಮನೆ
ಹಾಗೆ ಸುಮ್ಮನೇ ಇರಬೇಕು
ಇರುತಲಿರಲೇಬೇಕು
ನಾ ಹಿಡಿದ ಗಮ್ಯದ ಕಡೆಗೆ
ಓಡಬೇಕು ಓಡಿ ಹೋಗಿ ಸಿಗುವುದ
ಪಡೆಯಬೇಕು.
---ಸಿದ್ದು ಯಾಪಲಪರವಿ.
No comments:
Post a Comment