Sunday, September 8, 2019

ಹೊಸ ಇತಿಹಾಸ

ಈಗ ಹೊಸ ಇತಿಹಾಸ

ಯಾರೂ ಊಹಿಸಲಾಗದ ಕೊಡಲಾಗದ  ನೀಡಲಾಗದ
ಯಾರಿಗೂ ಕೊಡಲು ಬಾರದ ಕೊಡಲು ನಿರಾಕರಿಸಿದ ಅನುರೂಪದ ಕಾಣಿಕೆಯ ಅಂಗೈಯಲಿ ಹಿಡಿದು ನಸು ನಕ್ಕಾಗ ಬೆಚ್ಚಿ ಬೆರಗಾದೆ.

ಬಿಡಲಾಗದೆ ಚಡಪಡಿಸಿ ಅಂಗಲಾಚಿ
ಬೆಂಬಿಡದ ಭೂತ ನಾ ಎಂದರಿತ
ನೀ ಕೊಂಚ ಅರಳಿದೆ ಕೆರಳದೆ

ನಿಧಾನದಿ ತೂರಿ ಬಂದ ಭಾವ
ಬಂಧಗಳಲಿ ಬಂಧಿಯಾದೆ ಶಬ್ದಗಳ
ದಿವ್ಯಾಲಂಕಾರದ ಹೊಳಪಿಗೆ

ನಿತ್ಯ ನಿನ್ನ ಧ್ಯಾನಿಸುತಿರೆ ಇನ್ನೇನು
ನಿನ್ನ ಅಂತರಂಗದಿ ಅವಿತು ದುಃಖಿಸುವ ಗಾಯಗಳಿಗೆ ಮುಲಾಮು ಸಿಕ್ಕಾಗ
ಕರಗಿ ನೀರಾಗಿ ನೀನಾಗಿ ನೀನೇ
ಕೈಹಿಡಿದು ಮೇಲೆ ಬಂದೆ

ಮನದ ತಳಮಳ ಮಂಗಮಾಯ
ಅಂತ್ಯಗೊಂಡ ದುಗುಡ

ಚಾರಿತ್ರ್ಯದ ಸೋಗಿನ ಮುಖವಾಡದ
ಮುಸುಕ ಕಳಚಿ
ಹಂಗ ಹರಿದು ಸಂಗ
ಬೇಡಿ ಓಡೋಡಿ ಬಂದೆ

ತೋಳಬಂಧನದಿ ಕರಗಿ ಹೂತಾಗ ಸವಿಮುತ್ತುಗಳ ಸರಮಾಲೆ ತೊಡಿಸಿ

ಮೇಲೆಳೆದು ಅಡಿಯಿಂದ ಮುಡಿಯವರೆಗೆ ನಾಲಿಗೆಯ ನರ್ತನ

ಹಗಲು ರಾತ್ರಿಯಾಗಿ ಮೈಮನಗಂಟಿದ
ಲಜ್ಜೆ ಸರ ಸರ ಜಾರಿ ಅರಳಿದ
ಪರಿಗೆ ಇನ್ನಿಲ್ಲದ ತಲ್ಲಣ

ಮೈಮನಗಳ ಚಲ್ಲಾಟದಲಿ ಉಕ್ಕಿ ಹರಿದ ಉನ್ಮಾದಕೆ ಚಿಮ್ಮಿದ ರಸಧಾರೆ

ಕಳೆದು ಹೋದ ಇತಿಹಾಸದಲಿ
ಒಲುಮೆಯ ಒಲವಿಲ್ಲದ ಮುಗಿದ ಅಧ್ಯಾಯದಲಿ ಸಂತಸಕಿರಲಿಲ್ಲ
ಕೊಂಚವೂ ಜಾಗ

ಅನುಮಾನ , ಅಪಮಾನಗಳಲಿ ಬೆಂದು
ಬಾಡಿ ಹೋದ ಭಾವನೆಗಳು ಕರಗಿ
ಹೋದ ಕನಸುಗಳು

ಅಯ್ಯೋ ಈ ಹೇಸಿ ಬದುಕೇ ಎಂದು
ಹಳಹಳಸಿ ಉನ್ಮಾದಗಳ ಅದುಮಿಟ್ಟ ಜೀವಕೀಗ ಇನ್ನಿಲ್ಲದ ಹೊಸ ಚೈತನ್ಯ

ಪ್ರೀತಿ-ಪ್ರೇಮ-ಪ್ರಣಯದಾಟದ ಗಮ್ಮತ್ತಿಗೆ
ಹಾರಿ ಹಾಡಿ ಕುಣಿದು ಕುಪ್ಪಳಿಸುವ
ಮನಕೀಗ
ಎಲ್ಲವೂ ನೀನೇ ನಿನಗೆ ನಾನೇ
ಎಂದು ಹಾಡುವ  ಹಾಡಿಗೆ
ಲಯ ರಾಗ ತಾಳ
ಎಲ್ಲವೂ ನೀನೇ ನೀನೇ.

---ಸಿದ್ದು ಯಾಪಲಪರವಿ

ಅಮರ ಪ್ರೇಮ

ಅಮರ ಪ್ರೇಮಕೆ ದೇವನೊಲುಮೆ

ಬಾನಲಿ ಹಾರಾಡುವ ಜೋಡಿ
ಹಕ್ಕಿಗಳೇ ಎಷೊಂದು ಉಲ್ಲಸಿತ
ಹಾರಾಟ ದಣಿವರಿಯದ ಸಂಚಲನ

ರೆಕ್ಕೆ ದಣಿದು ಹಾಡು ಮುಗಿದ
ಮೇಲೆ
ಒಂದಿಷ್ಟು ಕೊಂಬೆ ಮೇಲೆ
ವಿರಮಿಸಿ ಗುಟಕುಗಳ
ವಿನಿಮಯದ ಕಚಗುಳಿ
ಮತ್ತದೇ ಹಾರಾಟ
ಬಾನಂಗಳದಲಿ

ಬೇಟೇಗಾರರು ಬಂದಾರು
ನಿಮ್ಮನು ಕೊಂದಾರು ಎಂದಿಲ್ಲದ
ಭೀತಿ
ನಿಮಗೆ ನಿಮದೇ ಆದ
ಧಾಟಿ

ಜೋಡಿ ಸಿಕ್ಕ ಮೇಲೆ ಸಾವಿಗಿಲ್ಲ
ಭೀತಿ
ಒಮ್ಮೆ ಸಾಯುವುದು ಇದ್ದೇ ಇದೆ

ಬದುಕನನುಭವಿಸುವ ಪರಿಗೆ
ಸಾವಿನ ಹಂಗಿಲ್ಲ ನೋವಿನ
ಗುಂಗೂ ಇಲ್ಲ

ಭಿನ್ನ ಗೂಡುಗಳ ಸೇರಿ ಒಂಟಿಯಾಗಿ
ನರಳುವ ಜಂಜಡವ ದೂಡಿ

ಮತ್ತೆ ಮತ್ತೆ ಮೇಲೇರುವ ಮೇಲೆ
ಹಾರುತಲೇ ಇರುವ ನಿಲ್ಲದ ತವಕ

ತಥಾಸ್ತು ಎಂದಭಯವ ಕರುಣಿಸಿರುವೆ
ಹಾರಿ ಹಾಡಿ ಕುಣಿದು ಜಗದ
ಜಂಜಡವ ಮರೆತು ಮೆರೆಯಲು
ಮನದ ನೋವ ಮರೆಯಲು.

---ಸಿದ್ದು ಯಾಪಲಪರವಿ

Saturday, July 13, 2019

ಕಹಿ ಮತ್ತು ಸಹನೆ

ಕಹಿ ಮತ್ತು ಸಹನೆ

ಅನಿವಾರ್ಯತೆಯೋ,ಅಸಹಾಯಕತೆಯೋ ನಾ ಕಾಣೆ ಎಲ್ಲವನ್ನು ವಿಪರೀತ ಅನ್ನುವಷ್ಟು ಸಹಿಸಿಕೊಳ್ಳುತ್ತೇನೆ. ಪ್ರತಿಯೊಬ್ಬ ವ್ಯಕ್ತಿಯ ವರ್ತನೆಯ ಹಿಂದೆ ಅವನ ಬಾಲ್ಯದ ಘಟನೆಗಳ ಪ್ರಭಾವ ಅಡಗಿರುತ್ತದೆ. ಬಾಲ್ಯದ ಕಾಣದ ಸಂಗತಿಗಳು ಈಗಲೂ ನಮ್ಮನ್ನು ನಮಗೆ ಅರಿವಿಲ್ಲದಂತೆ ಆಳುತ್ತಿರುತ್ತವೆ.ಅಂತಹ ಆಳುವ ಒಂದು ಪ್ರಸಂಗವನ್ನು ಹಂಚಿಕೊಳ್ಳಬೇಕೆನಿಸಿದೆ.

'ಮಗು ಆರೋಗ್ಯವಾಗಿರಲು ನಿತ್ಯ ಮುಂಜಾನೆ ಒಂದು ಲೋಟ ಬೇವಿನ ರಸ ಕುಡಿಸಬೇಕು' ಎಂದು ಅವ್ವನಿಗೆ ಯಾರೋ ಹೇಳಿದ್ದರಂತೆ, ಅದರ ಪ್ರಯೋಗ ನನ್ನ ಮೇಲೆ ಮಾಡಲು ನಿರ್ಧರಿಸಿ, ಮನೆಕೆಲಸದ ಹಿರಿಯ‌ ಮುದುಕಪ್ಪನಿಗೆ ಜವಾಬ್ದಾರಿ ನೀಡಿದ ನೆನಪು.

ಮೊದಲ ದಿನ ವಿಷ ( ಕಹಿಗೆ ಬಳಸುವ ಸಾಮಾನ್ಯ ಪದ) ಕುಡಿಯುವ ಸರದಿ ನನ್ನದು. ವಿಪರೀತ ಕಹಿಯಾಗಿ ವಾಂತಿ ಮಾಡಿಕೊಂಡೆ. ಇಲ್ಲಿಗೆ ಈ ಪ್ರಹಸನ ಮುಗಿಯಬಹುದು ಅಂದುಕೊಂಡೆ. ಮುಗಿಯಲಿಲ್ಲ.
ಮರುದಿನ ನಸುಕಿನಲ್ಲಿ ಎಬ್ಬಿಸಿದಾಗ ಭಯ ಭೀತನಾದೆ, ವಿಷ ಕುಡಿಯುವ ಶಿಕ್ಷೆ ನೆನೆದು.

ಅವ್ವ ಮತ್ತು ಮುದುಕಪ್ಪ ಸೇರಿ ಹೊಸ ಸಂಚು ಹೂಡಿದವರಂತೆ ನಾಲಿಗೆ ಮೇಲೆ ನಾಲಿಗೆ ಗಾತ್ರದ ಪ್ಲ್ಯಾಸ್ಟಿಕ್ ಹಾಕಿ ಮೂಗು ಮುಚ್ಚಿ ನೇರವಾಗಿ ಗಂಟಲಿನಲ್ಲಿ ಬೇವಿನ ರಸ ಸುರುವಿ ವಾಂತಿಯಿಂದ ಪಾರು ಮಾಡಿದರು.
' ಅಯ್ಯೋ ವಾಂತಿಯಾದರೆ ಚನ್ನಾಗಿತ್ತು ಈ ವಿಷ ಕುಡಿಯುವ ಹಿಂಸೆ ತಪ್ಪುತ್ತಿತ್ತು' ಎಂದು ನೆನೆದು ಗಂಭೀರವಾಗಿ ಆಲೋಚನೆ ಮಾಡುತ್ತ ಹೊಟ್ಟೆಯೊಳಗೆ ವಿಷ ಹೇಗೆ ಕೆಲಸ ಮಾಡುತ್ತಿರಬಹುದೆಂದು ಕಲ್ಪಿಸಿಕೊಂಡೆ.

ಹೀಗೆ ಬೇವಿನ ರಸ ಕುಡಿದು ದಕ್ಕಿಸಿಕೊಂಡ ಮಗನಿಗೆ ರೋಗ ರುಜಿನಗಳು ಮಗನಿಗೆ ತಟ್ಟುವುದಿಲ್ಲ ಎಂಬ ಸಮಾಧಾನ ಅವ್ವನಿಗೆ.
ನನಗೋ ಒಳಗೊಳಗೆ ಇನ್ನಿಲ್ಲದ ಆತಂಕ. ಈ ಪ್ರಕ್ರಿಯೆ ತಿಂಗಳುಗಟ್ಟಲೆ ನಡೆಯಿತು.

ನನಗೂ ಅನೇಕ ಕಲ್ಪನೆಗಳು ಆರಂಭವಾದವು. ನಾ ಬಹಳ ಗಟ್ಟಿಯಾದೆ. ಹಾವು ಕಡಿದರೂ ವಿಷ ಏರುವುದಿಲ್ಲ ಎಂಬ ದಂತಕತೆಗಳು ಕಿವಿಗೆ ಅಪ್ಪಳಿಸಲಾರಂಭಿಸಿ ಸಂಭ್ರಮಿಸಿದೆ.
ಮುಂದೆ ಈ ರಹಸ್ಯ ಮಾಹಿತಿ ಅಪ್ಪನ ತಾಯಿ ಅಮರಮ್ಮ ಅಮ್ಮನಿಂದಾಗಿ ಸ್ಪೋಟಗೊಂಡಿತು.
ಆಗ ಜನ ಭಿನ್ನ ವಿಭಿನ್ನ ಸುದ್ದಿ ಹಬ್ಬಿಸಲಾರಂಭಿಸಿದರು.
"ಈ ರಸ ಕುಡಿದರೆ ಮುಂದೆ ಯಾವುದೇ ಔಷಧ ಹತ್ತುವುದಿಲ್ಲ…
ರೋಗ ಬರದೇ ಇರಬಹುದು ಬಂದರೆ ಗುಣವಾಗುವುದೇ ಇಲ್ಲ…ನಾಲಿಗೆ ರುಚಿ ಹಾಳಾಗಿ ಹೋಗುತ್ತೆ..." ಇಂತಹ ಅನಾಹುತ ಸುದ್ದಿಗಳಿಗೆ ಅವ್ವ ಥಂಡಾ ಹೊಡೆದಿರಬೇಕು.

ಮುಂದೆ ಮುದುಕಪ್ಪನ ವಿಷಪ್ರಾಶನ ಪ್ರಸಂಗ ಇದ್ದಕಿದ್ದ ಹಾಗೆ ಬಂದ್ ಆಯಿತೆನ್ನಿ.
ಪ್ರೀತಿ, ಕಾಳಜಿ,ಅನುಕಂಪ,ಅವಮಾನಗಳ ಪ್ರಯೋಗ ಶಾಲೆ ನನ್ನ ಬಾಲ್ಯ.

ದುಂಡು ದುಂಡಾದ ಗುಳಿ ಕೆನ್ನೆಯ‌ ಹುಡುಗನ ತಲ್ಲಣ, ಹುಡುಕಾಟದ ಕುತೂಹಲಗಳಿಗೆ ನನ್ನ ನಾ ಒಡ್ಡಿಕೊಂಡು ಎಲ್ಲ ಪ್ರಯೋಗಗಳಿಗೆ ತೆರೆದುಕೊಂಡು ಜೀವನಾನುಭವ ಹೆಚ್ಚಿಸಿಕೊಂಡೆ.

ಈಗ

ಯಾರು ಎಷ್ಟೇ ಅವಮಾನ ಮಾಡಿದರೂ ಪ್ರತಿಕ್ರಿಯಿಸಿದಿರುವಾಗ, ತಟ್ಟೆಯ ಆಹಾರಕೆ ಹೆಸರಿಡದೆ ಮೌನವಾಗಿ ಊಟ ಮಾಡುವಾಗ, ಮಾಟ ಮಂತ್ರಗಳಿಗೆ ಮನಸು ಹೆದರದೇ ಇದ್ದಾಗ ಈ ಬೇವಿನ ರಸ ಕುಡಿದ ಪ್ರಸಂಗ ನೆನಪಾಗಿ ಮನಸು ನಾಲ್ಕು ದಶಕಗಳ ಹಿಂದೆ ಓಡುತ್ತದೆ.

*ಸಿದ್ದು ಯಾಪಲಪರವಿ*

Friday, May 3, 2019

ಪುಸ್ತಕ ದಿನ

*ಪುಸ್ತಕ ದಿನ ಮತ್ತು ವಿಲಿಯಂ ಶೇಕ್ಸ್‌ಪಿಯರ್*

ಮನುಷ್ಯನಿಗೆ ಪ್ರಾಣ,ಸ್ವಾತಂತ್ರ್ಯ ಹಾಗೂ ದೃಷ್ಟಿ ಕನಿಷ್ಠ ಅಗತ್ಯಗಳು ಎಂದು ಹೇಳಿದ ವಿಲಿಯಂ ಶೇಕ್ಸ್‌ಪಿಯರ್ ಹುಟ್ಟು ಮತ್ತು ಸಾವಿನ ದಿನ. ಪುಸ್ತಕ ದಿನವೂ ಹೌದು.

ಮನಷ್ಯನಿಗೆ ಹಸಿವು, ನಿದ್ರೆ ಮತ್ತು ಮೈಥುನ ದೈಹಿಕ ಬೇಕುಗಳು.

ಜ್ಞಾನಿಗಳು, ಸಂತರು ಇವುಗಳನ್ನು ನಿಗ್ರಹಿಸುತ್ತ ಅರ್ಥಪೂರ್ಣವಾಗಿ ಬದುಕಬಲ್ಲರು.

ನಾವು ಮನುಷ್ಯರು ನಮ್ಮ ಮನಸಿನ ವಿಕಾರಗಳಲಿ ಒದ್ದಾಡುತ್ತ ನರಳುತ್ತ ಕಾಲ ಕಳೆಯುತ್ತ ಕಾಲನ ಕರೆ ಬಂದಾಗ ಹೇಳದೇ ಕೇಳದೇ ಹೋಗಿಬಿಡುತ್ತೇವೆ, ಒಂದು ಸಣ್ಣ ಗುರುತನ್ನು ಬಿಡದೇ.

ಆದರೆ ಶೇಕ್ಸ್‌ಪಿಯರ್ ತನ್ನ ಮೂವತ್ತೇಳು ನಾಟಕಗಳ ಪಾತ್ರಗಳ ಮೂಲಕ ಇಂದಿಗೂ ನಮ್ಮೊಂದಿಗೆ ಜೀವಂತವಾಗಿದ್ದಾನೆ.

ಸಾಹಿತ್ಯದ ವಿದ್ಯಾರ್ಥಿಗಳು ಅವನ ಕುರಿತು ಹೇಳದೇ ಇರಲಾಗದು.

ನಾವೆಲ್ಲ ಉಪನ್ಯಾಸಕರಾದ ಹೊಸತರಲ್ಲಿ ಶೇಕ್ಸ್‌ಪಿಯರ್ ಬಿಟ್ಟು ಬೇರೇನೂ ಕಲಿಸಲಾಗುದಿಲ್ಲ ಎಂಬ ಸ್ಥಿತಿ ಇತ್ತು.

ಹತ್ತಾರು ವರ್ಷಗಳ ಪಯಣದ ನಂತರ ಶೇಕ್ಸ್‌ಪಿಯರ್ ಮೋಹದಿಂದ ಹೊರಬರಲು ಒದ್ದಾಡಬೇಕಾಯ್ತು.

*ಬದುಕಿನ ಪಾಠ ನೆನಪಿಸುವ ಅವನ ದುರಂತ ನಾಟಕಗಳು*

ಅಸಾಮಾನ್ಯ ಪಾತ್ರಗಳು ಮಾತ್ರ ನಮಗೆ ಆದರ್ಶವಾಗಬಲ್ಲವು ಎಂಬ ಸಿದ್ಧಾಂತ ಇಟ್ಟುಕೊಂಡು ದುರಂತ ನಾಯಕರುಗಳನ್ನು ಸೃಷ್ಟಿಸುತ್ತಾನೆ.‌

*ಒಥೆಲೋ, ಕಿಂಗ್ ಲಿಯರ್, ಹ್ಯಾಮ್ಲೆಟ್ ಹಾಗೂ ಮ್ಯಾಕ್ ಬೆತ್ ಪಾತ್ರಗಳ‌‌ tragic flaw ಹೇಗೆ ವ್ಯಕ್ತಿ ಹಾಗೂ ವ್ಯವಸ್ಥೆ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂಬುದನ್ನು ರಸವತ್ತಾಗಿ ನಿರೂಪಿಸಿದ್ದಾನೆ*.

ಓದುತ್ತ,ಕಲಿಯುತ್ತ,ಕಲಿಸುತ್ತ ಕಾಲ ಕಳೆಯುವ ನಮಗೆ ಅವನು ಈಗಲೂ ದಂತಕಥೆ.

ಹತ್ತು ವರ್ಷಗಳ ಹಿಂದೆ ಇಂಗ್ಲೆಂಡಿನ ಪ್ರವಾಸದಲ್ಲಿ ನಾನು ತುಂಬ ಇಷ್ಟಪಟ್ಟು ನೋಡಿದ ಅವನ ಊರು, ಮನೆ ಎಂದಿಗೂ ಮರೆಯಲಾಗದು.

ಅವನೊಬ್ಬ ಅದ್ಭುತ ಸಂತ. ಮನುಷ್ಯನ ಮನಸ್ಥಿತಿ ಅರ್ಥಮಾಡಿಕೊಳ್ಳುವ ಹತ್ತಾರು ಪಾತ್ರಗಳ‌ ಮೂಲಕ ಜೀವನ ಸಾರ ತಿಳಿಸುತ್ತಾನೆ.

*ಒಥೆಲೋನ ದುಡುಕು ಮತ್ತು ಸಂಶಯದಿಂದ ಪ್ರಾಣ ಕಳೆದುಕೊಳ್ಳುವ ಡೆಸ್ಡಿಮೋನಾ, ತನ್ನ ಮಂದಗತಿಯ ತೀರ್ಮಾನಗಳಿಂದ ಅಂತ್ಯ ಕಾಣುವ ಹ್ಯಾಮ್ಲೆಟ್, ಭ್ರಮೆ ಮತ್ತು ಅವಾಸ್ತವ ಪ್ರೀತಿಯ ನಿರೀಕ್ಷೆಗಳಿಂದ ಹುಚ್ಚನಾಗುವ ದೊರೆ ಲಿಯರ್ ಹಾಗೆ  ಅತಿಯಾದ ಮಹತ್ವಾಕಾಂಕ್ಷೆ‌ ಇಟ್ಟುಕೊಂಡು ನಂಬಿದ ರಾಜನನ್ನೇ ಕೊಲ್ಲುವ ಮ್ಯಾಕ್ಬೆತ್* ಪಾತ್ರಗಳು ನಮ್ಮ ಒಳಗೆ ನಮಗರಿವಿಲ್ಲದಂತೆ ಜೀವಂತವಾಗಿರುವ ಗುಣಗಳಾಗಿವೆ.

ನಾವು ಕೂಡ ನಾಲ್ಕು ಪಾತ್ರಗಳ ಸಮೀಕರಣದಂತಿದ್ದೇವೆ.‌

ಸಾಮಾನ್ಯ ಕುರಿ ಕಾಯುವ ಹಳ್ಳಿ ಹುಡುಗ, ತನ್ನ ಜೀವನಾನುಭವದ ಮೂಟೆ ಹೊತ್ತುಕೊಂಡು ಲಂಡನ್ ಸೇರುತ್ತಾನೆ. ತಲೆ ತುಂಬಾ ಬರೀ ಕನಸುಗಳು, ಕೈಯಲ್ಲಿ ಕಸುವಿರದಿದ್ದರೂ ನನಸು ಮಾಡುವ ಹುಮ್ಮಸ್ಸಿಗೇನೂ ಕೊರತೆ ಇರಲಿಲ್ಲ.

ಥಿಯೇಟರ್ ಹೊರಗೆ ಕುದುರೆ ಕಾಯುತ್ತ ನಾಟಕಗಳಲಿ ತನ್ಮಯನಾಗಿ ಮುಂದೆ ನಟನಾಗಿ, ನಾಟಕ ರಚಿಸಿ, ನಿರ್ದೇಶಿಸಿ ಕೊನೆಗೆ ಬಹು ದೊಡ್ಡ ಗ್ಲೋಬ್ ಥಿಯೇಟರ್ ಮಾಲೀಕನೂ ಆಗುವದೆಂದರೆ ಪವಾಡವೇ!

ಇಂಗ್ಲೆಂಡ್ ಎಂದರೆ ಶೇಕ್ಸ್‌ಪಿಯರ್ ನಾಟಕಗಳು ಎಂಬ ಪ್ರಸಿದ್ಧಿ ಅರಿತ ಎಲಿಜಾಬೆತ್ ರಾಣಿ ಅವನ ಪ್ರತಿಭೆಗೆ ಬೆರಗಾದದ್ದೀಗ ಮರೆಯಾಗದ, ಮರೆಯಲಾಗದ ಇತಿಹಾಸ.

ಅವನ ನಾಟಕಗಳ ಸೊಕ್ಕಡಗಿಸಲು ತಿಣುಕಾಡುವ university wits ಗಳು ಅವನೇರಿದ ಎತ್ತರಕೇರಲೇ ಇಲ್ಲ. ವಿಶ್ವವಿದ್ಯಾಲಯ ಪ್ರಾಧ್ಯಾಪಕರುಗಳಿಗೆ ಸೈದ್ಧಾಂತಿಕ ಸವಾಲೊಡ್ಡಿದರೂ ಆ ಅಹಮಿಕೆ ತಟ್ಟಿಸಿಕೊಳ್ಳದಿರಲು ಕಾರಣ ಅವನ ಆಧ್ಯಾತ್ಮಿಕ ಆಲೊಚನಾ ಕ್ರಮ.

ಅಲ್ಪರಿಗೆ ಅಹಮಿಕೆಯ ಸೋಂಕು ತಗುಲಿ ವಿನಾಶವಾಗುತ್ತಾರೆ ಎಂಬ ಸತ್ಯ ಅವನಿಗೆ ಗೊತ್ತಿದ್ದರಿಂದ ಅವನಿಗೆ ಅವನೇ ಸಾಟಿ.

ತಾವು ತುಂಬಾ ತಿಳಿದವರು ಎಂಬ ಅಹಮಿಕೆಯಲಿದ್ದ university wits ಗಳ ಯೋಗ್ಯತೆಯನ್ನು ಅರಿವು ಮಾಡಿಕೊಟ್ಟ ಧೀಮಂತ.

ಶೇಕ್ಸ್‌ಪಿಯರ್ ನಾಟಕದ ಜೀವಾಳವೆಂದರೆ‌ ಸಂಭಾಷಣೆ. ಕಾವ್ಯಮಯ ಹರಿತ ಮಾತುಗಳು ಮನುಷ್ಯನ ಎದೆ ಗೂಡು ಹೊಕ್ಕು ಬಿಡುತ್ತವೆ. ಮನುಷ್ಯನ ಇತಿಮಿತಿಗಳನ್ನು, ಮನದಾಳದ ಸ್ವಾರ್ಥ, ತಿಕ್ಕಲುತನ, ಅಸೂಯೆ, ಕಾಮ, ದ್ವೇಷ, ಭ್ರಮೆ ಹಾಗೂ ಅವನನ್ನು ನುಂಗಿ ಹಾಕುವ ದುರಂತಗಳನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸುತ್ತಾನೆ.

ಇಡೀ ಜಗತ್ತು ಬೆಚ್ಚಿ ಬೀಳುವಂತೆ ನಿರಂತರವಾಗಿ ಬರೆದು ಸಿರಿವಂತಿಕೆಯ ಉತ್ತುಂಗ ತಲುಪಿ ಬದುಕಿನ ಸಂತೃಪ್ತಿಯನ್ನು ತನ್ನ ಜೀವನದಲ್ಲಿ ಅನುಭವಿಸುತ್ತಾನೆ.‌

Way back to roots ಎಂಬಂತೆ ತನ್ನ ಕೊನೆ ದಿನಗಳನ್ನು ತಾನು ಹುಟ್ಟಿದ Stratford upon Avon ನಲ್ಲಿ ಕಳೆಯುತ್ತಾನೆ.

ಜಗತ್ತಿನ ಎಲ್ಲ ಭಾಷೆಗಳ ಮೂಲಕ ಅವನ ನಾಟಕಗಳು ಕೋಟ್ಯಾಂತರ ಪ್ರೇಕ್ಷಕರ ಮನಸು ಗೆದ್ದಿವೆ.

ಲಕ್ಷಾಂತರ ಸಾಹಿತ್ಯ ವಿದ್ಯಾರ್ಥಿಗಳು ಅವನ ನಾಟಕಗಳ ಮೇಲೆ ಇಂದಿಗೂ ಸಂಶೋಧನೆ ಮಾಡುತ್ತಲೇ ಇದ್ದಾರೆ.

ಪ್ರತಿ ಓದಿನಲ್ಲಿ ಅವನ ಪಾತ್ರಗಳು ಭಿನ್ನವಾಗಿ ಮೈದೆರೆಯುತ್ತವೆ.

ರೋಮಿಯೋ ಜೂಲಿಯೆಟ್‌, ಮರ್ಚೆಂಟ್ ಆಫ್ ವೆನಿಸ್, ಜೂಲಿಯಸ್ ಸೀಸರ್, ಮಿಡ್ ಸಮರ್ ನೈಟ್ ಡ್ರೀಮ್, ಕಾಮೆಡಿ ಆಫ್ ಎರರ್ಸ್ ಹೀಗೆ ಎಲ್ಲಾ ಜನಪ್ರಿಯ ಮತ್ತು ಜನಪ್ರಿಯವಲ್ಲದ ನಾಟಕಗಳಲ್ಲಿ ನಾವೆಲ್ಲ ಅಡಗಿ ಇಣುಕಿ ನೋಡುತ್ತಲಿದ್ದೇವೆ.

ಬದುಕಿನ ವಿವಿಧ ಘಟನೆಗಳು, ಪಾಠ ಕಲಿಸುವ ಭಿನ್ನ ವ್ಯಕ್ತಿಗಳು ಅವನ ನಾಟಕಗಳಲಿ ಕಣ್ಣಿಗೆ ಕಟ್ಟುವಂತೆ ಕುಣಿಯುತ್ತಾರೆ.

ನಾವು ಅಲ್ಪಮತಿಗಳು ಏನೇ ಓದಿದರು, ನೋಡಿದರು, ಕೇಳಿದರು ನಾವೇ ಕಟ್ಟಿಕೊಂಡ ಬಲೆಯಲ್ಲಿ ಸಿಕ್ಕು ಒದ್ದಾಡಿ ಸಾಯುತ್ತೇವೆ.

*ಶೇಕ್ಸ್‌ಪಿಯರ್ ಪಾತ್ರಗಳಿಗೆ ಸಿಕ್ಕ ಕೆಥಾರ್ಸಿಸ್ ಕೂಡ ನಮಗೆ ದಕ್ಕದೇ ಇರುವುದು ನಮ್ಮ ಮಿತಿ*.

ಆಧುನಿಕ ದಿನಗಳ behavioral science ಹೇಳುವ ಅನೇಕ ಸತ್ಯಗಳನ್ನು ಶೇಕ್ಸ್‌ಪಿಯರ್ ಎಂದೋ ಹೇಳಿದ್ದಾನೆ.

ಜೀವನಶೈಲಿ ನಿರ್ವಹಣೆ ಹಾಗೂ ಮನುಷ್ಯನ ಗುಣಸ್ವಭಾವ ಅರಿಯುವ ಉಪಕ್ರಮ ಅವನ ನಾಲ್ಕು tragic ಪಾತ್ರಗಳಲ್ಲಿ ಸಿಗುತ್ತದೆ.

ವರ್ತಮಾನದ ರಾಜಕಾರಣದ ಮಾತುಗಳನ್ನು ಕೇಳಿದಾಗ ಬ್ರೂಟಸ್ ನೆನಪಾಗುತ್ತಾನೆ.

ಬೆನ್ನಿಗೆ ಚೂರಿ ಹಾಕುವ ಮಾತುಗಳು ಸೀಸರ್ ಅಂತ್ಯದ ಮುಂದೆ ಯಾವ ಲೆಕ್ಕ!

ಹೀಗೆ ನನಗೆ ನಿತ್ಯವೂ ಹೊಸ ಮದುಮಗನಂತೆ ಕಂಗೊಳಿಸುವ ವಿಲಿಯಂ ಶೇಕ್ಸ್‌ಪಿಯರ್, ನಾನು ಸಂಕಷ್ಟದಲ್ಲಿದ್ದಾಗ ಕೈಹಿಡಿದು ನಡೆಸುತ್ತಾನೆ. ತಪ್ಪು ಮಾಡಿದಾಗ ಒಳಮನಸ ಎಚ್ಚರಿಸುತ್ತಾನೆ.

“ಒಂದರಗಳಗೆ ನನ್ನ ದುರಂತ ನಾಯಕರು ಮತ್ತವರ tragic flaw ನೆನಪಿಸಿಕೋ ದುರಂತ ಕಾಣಬೇಡ” ಎಂದು ಇರಿಯುತ್ತಾನೆ.

ನಮ್ಮ ಸಮಯ ಪ್ರಜ್ಞೆ ಮತ್ತು ಸಮೂಹ ಪ್ರಜ್ಞೆಯ ಸಂಕೇತವಾಗಿರುವ ಶೇಕ್ಸ್‌ಪಿಯರ್ ಹುಟ್ಟು ದಿನದ ನೆಪದಲ್ಲಿ ಅವನ ಕುರಿತು ಒಂದಿಷ್ಟು ಹಂಚಿಕೊಂಡೆ.

ಪುಸ್ತಕ ಓದುವ ಹುಚ್ಚು ಹಿಡಿಸಿದ ಶೇಕ್ಸ್‌ಪಿಯರ್ ಹಾಗೂ ಪುಸ್ತಕ ದಿನಾಚರಣೆಯ ಶುಭಾಶಯಗಳು.

*ಸಿದ್ದು ಯಾಪಲಪರವಿ*

Thursday, May 2, 2019

Monday, March 18, 2019

ಸಿದ್ಧೇಶ್ವರ ಸ್ವಾಮೀಜಿ

*ಪೂಜ್ಯ ಸಿದ್ಧೇಶ್ವರ ಸ್ವಾಮಿಗಳೊಂದಿಗೆ ಒಂದಿಷ್ಟು ಆಲಿಸುವಿಕೆ*

ಈ ಯುಗದ ದಂತಕಥೆ, ಸರಳ ವ್ಯಕ್ತಿತ್ವದ ಮೇರು ಪರ್ವತ ಪೂಜ್ಯ ಸಿದ್ದೇಶ್ವರ ಅಪ್ಪಗಳು. . ಒಂದಾದ ಕಾರಣ ಇವರ ಪ್ರವಚನಗಳಿಗೆ ದಿವ್ಯ ಶಕ್ತಿಯಿದೆ.
ಬಹಳಷ್ಟು ಜನ ಅದ್ಭುತವಾಗಿ ಮಾತನಾಡುತ್ತಾರೆ ಆದರೆ ಬದುಕುವುದಿಲ್ಲ. ನೂರಾರು ಅಪಕ್ವ ವರ್ತನೆ,ಸಣ್ಣತನ, ಸಿನಿಕತೆ. ಹೇಳುವುದು ವೇದಾಂತ ಆದರೆ ಖಾಸಗಿ ಬದುಕು ಅಯ್ಯೋ ಯಾರಿಗೂ ಬೇಡ.

ಆದರೆ ಸಿದ್ಧೇಶ್ವರ ಅಪ್ಪಗಳದು ಭಿನ್ನ ವ್ಯಕ್ತತ್ವದ ನಡೆನುಡಿ, ಅಪ್ಪಿ ತಪ್ಪಿ ನಕಾರಾತ್ಮಕ ಮಾತುಗಳ ಕಡೆ ಗಮನ ಹರಿಸದ ನಿಲುವು. ಸಂಪೂರ್ಣ ಜಾಗೃತಾವಸ್ಥೆ. ಮಾತಿನಲಿ ನಮ್ರ ವಿನಮ್ರತೆಯ ಹರವು.

ವೇದಾಂತ, ವಚನಗಳು, ಗೀತೆ,ಶಾಸ್ತ್ರ, ಬುದ್ಧ,ಝೆನ್,ಓಶೋ, ಭಾರತೀಯ ತತ್ತ್ವಶಾಸ್ತ್ರ ಹೀಗೆ ಆಳವಾದ ಅಧ್ಯಯನ, ಅದೂ ಕೇವಲ ಅಧ್ಯಯನವಲ್ಲ ಸಂಪೂರ್ಣ ಆಧ್ಯಾತ್ಮಿಕ ಬದುಕಿನ ಅದಮ್ಯ ಸಾಧನೆಯೂ ಎದ್ದು ಕಾಣುತ್ತದೆ. ಇಷ್ಟೊಂದು ಗೊಂದಲದ ಗೂಡಾಗಿರುವ ಸಮಾಜೋಧಾರ್ಮಿಕ ವ್ಯವಸ್ಥೆಯಲಿ ವಿವಾದಗಳಿಲ್ಲದೆ ಬದುಕುವುದು ಕಠಿಣ.

ಮೂಲಭೂತವಾದ ತಾಂಡವವಾಡುತ್ತಿರುವ ಕಾಲದಲ್ಲಿ ನಾವಿದ್ದೇವೆ. ಎಲ್ಲವೂ ಈಗ ಅತಿರೇಕದ ಪರಮಾವಧಿ. ಎಡಬಲಗಳ ಅಟ್ಟಹಾಸ, ಹೇಳಿದ್ದೇ ಸರಿ ಎಂಬ ಹಟಮಾರಿತನ. ಮಾತು ಕೇಳದಿದ್ದರೆ ಯಾಕೆ ಕೊಂದು ಬಿಡಬಾರದೆಂಬ ಅನರ್ಥ ಆಕ್ರೋಶ.
ಸಿದ್ಧಾಂತಗಳ ಹೇರಿ ಪ್ರಭುತ್ವ ಸಾಧಿಸುವ ಹುನ್ನಾರ. ಧರ್ಮ, ಭಾಷೆ,ಸಿಧ್ಧಾಂತಗಳ ನೆಪದಲ್ಲಿ ನೆಪೋಟಿಸಂ.‌

ವಚನ ಶಾಸ್ತ್ರಗಳ ಅಧ್ಯಯನ ಸಂದರ್ಭದಲ್ಲಿ ಕೈಗೆ ಪೂಜ್ಯರ ಅಲ್ಲಮಪ್ರಭು ವಚನಗಳ ಎಂಬ ಬೃಹತ್ ಗ್ರಂಥ ನನಗೆ ಪೂಜ್ಯ ಕೈವಲ್ಯಾನಂದ ಸ್ವಾಮಿಗಳ ಮೂಲಕ ಸಿಕ್ಕಿತ್ತು.

ಈ ಕುರಿತು ಸಾಧ್ಯವಾದರೆ ಪೂಜ್ಯರೊಂದಿಗೆ ಮಾತನಾಡುವ ಮನಸ್ಸು ಇತ್ತು. ಆದರೆ ಪೂಜ್ಯರ ದರ್ಶನ, ಮಾತು ಈಗ ಸರಳವಲ್ಲ. ಜನ ಅನಗತ್ಯ ಕೆಣಕುವ ಪ್ರಶ್ನೆಗಳನ್ನು ಕೇಳುವುದನ್ನು ಗ್ರಹಿಸಿದ ಶ್ರೀಗಳು ಅಂತಹ ಮುಜುಗರದಿಂದ ಸದಾ ದೂರ ಸರಿಯುತ್ತಾರೆ.‌
ನಾವು ಅಷ್ಟೇ ತುಂಬ ತಿಳಿದವರ ಹಾಗೆ ಮಾತನಾಡಿ ದಡ್ಡತನ ಪ್ರದರ್ಶಿಸಿಬಿಡುತ್ತೇವೆ. *ಎಲ್ಲ ಬಲ್ಲವರು ನಮ್ಮ ಅಜ್ಞಾನಕ್ಕೆ ನಕ್ಕು ಸುಮ್ಮನಾಗುತ್ತಾರೆ*.

ಅದರ ಪ್ರಜ್ಞೆ ಇಟ್ಟುಕೊಂಡ ನಾನು ಕೆಲವು ಪ್ರಶ್ನೆಗಳನ್ನು ಮಾತ್ರ ಕೇಳಿ ಅವರಿಂದ ಸುದೀರ್ಘ ವಿವರಣೆ ಬಯಸಿದ್ದೆ.
ಇಂದು ಹಳಿಯಾಳದ ಸುಂದರ ಪರಿಸರ ಮಡಿಲಿನ ಕೋಟೆ ಪ್ರವಾಸಿ ಮಂದಿರದಲ್ಲಿ ದರ್ಶನವಾದಾಗ, ಕೈವಲ್ಯಾನಂದರ ಪರಿಣಾಮಕಾರಿ ಪರಿಚಯದ ಫಲವಾಗಿ ಉತ್ತರ ಲಭಿಸಿತು.

ಶಾಂತವಾಗಿ ಹರಿಯುವ ನದಿಯಂತೆ, ಪಕ್ಷಿಗಳ ಕಲವರದ ಸಂಗೀತದ ಮಧ್ಯ ಹೊರಟ ಪೂಜ್ಯರ ಮಾತುಗಳ ಗಂಭೀರವಾಗಿ ಆಲಿಸಿದೆ. ಅನೇಕ ಅನುಮಾನಗಳಿಗೆ ಮೋಕ್ಷ ಸಿಕ್ಕಿತು. ಏನೇನೋ ಭ್ರಮೆ ಇಟ್ಟುಕೊಂಡು ಬದುಕುವ,ಓದುವ,ಬರೆಯುವ,ಹೇಳುವ ನಮ್ಮ ಮಿತಿಗಳನ್ನು ತಮ್ಮದೇ ಶೈಲಿಯಲ್ಲಿ ಪೂಜ್ಯರು ತೆರೆದಿಟ್ಟರು.
ಗೊತ್ತಿರುವ ಪರಮ ಸತ್ಯಗಳಿಗೆ ದೊಡ್ಡವರ ಅಂಕಿತ ಬಿದ್ದರೆ ಇನ್ನೂ ಹೆಚ್ಚು ಸಮಾಧಾನವಾಗುತ್ತದೆ.

ಅನುಭವ ಮಂಟಪದಲ್ಲಿ ಬಸವಾದಿ ಶರಣರ ಮಾತುಗಳಿಗೆ ಪ್ರಭುದೇವರ ಅಂಕಿತ ಬಿದ್ದ ಮೇಲೆ ಅದು ವಚನವಾಗಿ ದಾಖಲಾಗುತ್ತಿತ್ತು.

ಹಾಗೆ ನಮ್ಮ ಅನೇಕ ಅಭಿಪ್ರಾಯಗಳಿಗೆ ದೊಡ್ಡವರ ಅಂಕಿತ ಬೇಕಾಗುತ್ತದೆ. ಅದೂ ಸಿದ್ಧೇಶ್ವರ ಅಪ್ಪಗಳಂತವರ ಒಪ್ಪಿಗೆ.
“ *ನಾವು ಬದುಕಿರುವ ಕಾಲಘಟ್ಟದಲ್ಲಿ ನಮ್ಮ ಖುಷಿಗಾಗಿ ಕೆಲಸ ಮಾಡಬೇಕು, ಬೇರೇಯವರನ್ನು ಬದಲಾಯಿಸಬಲ್ಲೆವು ಎಂಬ ಭ್ರಮೆಯಿಂದಲ್ಲ* ಕೋಟ್ಯಾಂತರ ಜನಸಂಖ್ಯೆ ಹೊಂದಿರುವ ನಮ್ಮ ದೇಶ ಎಲ್ಲವನ್ನೂ ಅರಗಿಸಿಕೊಳ್ಳುತ್ತದೆ, ಬೇಡವಾದದ್ದನ್ನು ಬೇಗ ತಿರಸ್ಕರಿಸಿಬಿಡುತ್ತದೆ. “ ಎಂಬ ಪೂಜ್ಯರ ಮಾತುಗಳು ವಾಸ್ತವವಾದ ಹಾಗೂ ವರ್ತಮಾನದಲ್ಲಿ ಬದುಕಬೇಕಂಬ ನನ್ನ ಆಲೋಚನಾ ಲಹರಿಗೆ ಮುದ್ರೆ ಒತ್ತಿದಂತಾಯಿತು.

ನಾವ್ಯಾರು ಪೂಜ್ಯರ ಹಾಗೆ ಸರಳವಾಗಿ ಬದುಕಲಾರೆವು ಆದರೆ ಅವರ ಹಾಗೆ ಆಲೋಚಿಸುವ ಮನೋಧರ್ಮ ರೂಪಿಸಿಕೊಳ್ಳುವ ಒಳೆಚ್ಚರ ಇಮ್ಮಡಿಸಿತು.
ತುಕ್ಕು ಹಿಡಿದ ಮನಸಿಗೆ ಹೊಸ ಹೊಳಪು ಹೊಳೆಯಿತು.
ಭ್ರಮೆಗಳಿಲ್ಲದೆ ಮಿತಿಯರಿತು ವರ್ತಮಾನವ ಅನುಭವಿಸಿ ಮುಂದೆ ಸಾಗಲು ಬೆಳಕು ದೊರೆಯಿತು.

*ಸಿದ್ದು ಯಾಪಲಪರವಿ*

ಪ್ರೇಮ ಬಿಕ್ಷೆ

*Begging is better than stealing*

ಪ್ರೇಮ ಬಿಕ್ಷೆ

ಬಿಕ್ಷೆ ಬೇಡುವುದು ಸಣ್ಣ ಸಂಗತಿಯೇನಲ್ಲ
ಹಂಗು ಹರಿದು ಮಾನ ಬಿಟ್ಟು
ಬೀದಿಗಿಳಿಯುವುದು ಎಲ್ಲಿಲ್ಲದ
ಅವಮಾನ
ಅಂಗೈಯಲಿ ಜೀವ ಹಿಡಿದು
ಅರೆಬೆತ್ತಲೆಯಾಗಿ ತಿರುಬೋಕಿಯ
ಹಾಗೆ ತಿರುಗುವುದು ನಡು
ಬೀದಿಯಲಿ ಮಾನ ತೂರಿಕೊಂಡಂತೆ

ಕರುಳು ಹಿಂಡಿ ಹೊಟ್ಟೆ ತಳಮಳಿಸಿ
ಉಸಿರು ಗಟ್ಟಿ ಹಪಾಹಪಿಸಿ ಸಾಯುವೆ
ಎನಿಸಿದಾಗ ತಟ್ಟೆ ಕೈ ಸೇರಿ ಮೈ
ಮನಗಳು ಅರೆಬೆತ್ತಲಾಗಿ  ಕಣ್ಣು
ಕತ್ತಲಾಗಿ ಬೀದಿಗೆ ದೂಡುತ್ತವೆ

ಆತ್ಮಗೌರವ ಮನಸಾಕ್ಷಿ ಮಂಗ
ಮಾಯ ಈಗ ಬರೀ ಬದುಕು
ಸಾವು ದೂರಾದರೆ ಸಾಕು

ಮನೆಯೊಡತಿ ಮುಂದೆ ಹೋಗೆಂದಾಳು
ಎಂಬ ತಲ್ಲಣ
ಅನ್ನಲಿ ಬಿಡಿ ಮಾನಕ್ಕಿಂತ ಪ್ರಾಣ
ದೊಡ್ಡದು

ಎದೆ ಬಗೆದು ಕರುಳು ಕಿತ್ತಿ ಬರುವ ಹಾಗೆ
ಕೂಗಿದರೆ ಹೋಗೆನ್ನಲಾರಳೆಂಬ ಹುಚ್ಚು
ನಂಬಿಗೆ

ಆದರೂ ಬದುಕಿಗೆ ಬೇಕಲ್ಲ ತಂ
ಬಿಗೆ ಆ ಬಿಗಿಯಲಿ ಬಿಗುಮಾನ
ಬಿಟ್ಟು ಕೇಳುವ ಕರ್ಮ

ಕಳುವು , ಮೋಸ , ಸುಳ್ಳು ಹಾಗೂ
ಮಳ್ಳನ ಮುಖವಾಡವಿಲ್ಲದ
ಈ ಬಿಕ್ಷೆಯ ಬದುಕು ಹೀನಾಯವಲ್ಲ
ಎಂಬ ಸಂತೃಪ್ತಿ

ಕಡು-ಕಷ್ಟಗಳ ದೂರ ಮಾಡಿ ಮೈ
ಮನಗಳ ಮಾನ ಕಾಪಾಡಲು
ಬೇಡುವ ಬಿಕ್ಷೆಗೆ ಶಿಕ್ಷೆ ಬೇಡ

ಕಾಲನ ಮಹಿಮೆಯ ಕೂಸುಗಳು
ಮಿಂಚಿ ಮಾಯವಾಗುವ
ಸಂಚನು ಬಲ್ಲವರು ಯಾರು ?

ಮುಂದೆ ಹೋಗೆಂದರೆ ಹೋದಾನು
ತಿರುಗಿ ನೀ ಬೇಕೆಂದಾಗ ಬರಲಾರ
ಹಾಕಿಬಿಡು ಅನ್ನ ಹಳಸುವ ಮುನ್ನ
ಬೇರೆಯವರು ಕನ್ನ ಹಾಕುವ ಮುನ್ನ.

---ಸಿದ್ದು ಯಾಪಲಪರವಿ

Thursday, March 14, 2019

ಮಾತಾಜಿ

*ಮರೆಯಾಗದ ಮಹಾಬೆಳಗು: ಮಾತಾಜಿ*

ಇಡೀ ಜಗತ್ತಿಗೆ ಬಸವಧರ್ಮ ಪರಿಚಯಿಸಿದ ಪೂಜ್ಯ ಲಿಂಗಾನಂದರು ಹಾಗೂ ಪೂಜ್ಯ ಮಾತಾಜಿ ಅವರ ಕೊಡುಗೆಯನ್ನು ವರ್ಣಿಸಲಾಗದು. ಇಡೀ ಧರ್ಮ ಸಾರವನ್ನು ಅತ್ಯಂತ ವೈಜ್ಞಾನಿಕವಾಗಿ ನಿರೂಪಿಸಲು ಅಹೋರಾತ್ರಿ ಶ್ರಮಿಸಿದರು.
ಅಸ್ಪಷ್ಟವಾಗಿದ್ದ ಇಡೀ ವಚನ ಚಳುವಳಿಯನ್ನು ಜಗತ್ತಿಗೆ ಪರಿಚಯಿಸಿದ ಮೊದಲ ಪೀಠಾಧಿಪತಿಗಳು.
ರಾಜ್ಯದಲ್ಲಿ ಇದ್ದ ಸಾವಿರಾರು ಮಠಾಧೀಶರು ಮಾಡಲಾಗದ ಕೆಲಸವನ್ನು ಇವರೀರ್ವರು ಸಾಧಿಸಿದರು.‌

ರಾಜ್ಯ, ದೇಶ,ವಿದೇಶಗಳಲ್ಲಿ ಅಪ್ಪಟ ಬಸವಾಭಿಮಾನಿಗಳ ಪಡೆ ನಿರ್ಮಿಸಿದರು. ಕೇವಲ ಸೈದ್ಧಾಂತಿಕ ತಿಳುವಳಿಕೆ ನೀಡಿದರೆ ಸಾಲದು ಅದು ಸಂಘಟನೆಯ ಸ್ವರೂಪದಲ್ಲಿರಲಿ ಎಂಬ ಕಾರಣಕ್ಕಾಗಿ ರಾಷ್ಟ್ರೀಯ ಬಸವ ದಳ ಹುಟ್ಟು ಹಾಕಿದರು.‌

ಹೆಚ್ಚು ಹೆಚ್ಚು ಹಣ ಸಂಗ್ರಹಣ ಮತ್ತದರ ಸದ್ಬಳಕೆಯ ಮಾರ್ಗ ಕಲ್ಪಿಸಿದರು. ಸ್ಥಾವರಕ್ಕಳಿವುಂಟು ಎಂದು ಸಾರಿದ ಬಸವಾದಿ ಶರಣರ ಸ್ಮಾರಕಗಳನ್ನು ನಿರ್ಮಿಸಿದ್ದು ಆರಂಭದ ದಿನಗಳಲ್ಲಿ ವಿರೋಧಾಭಾಸ ಅನಿಸುತ್ತಿದ್ದರೂ ಅವಗಳಿಗೆ ಐತಿಹಾಸಿಕ ಮೆರುಗು ಕೊಟ್ಟರು.
ಕಲ್ಯಾಣದ ಬೀದರ ಜಿಲ್ಲೆಯ ತುಂಬ ಸಂಚರಿಸಿ ಜನರನ್ನು ಸಂಘಟಿಸಿದರು.
ಗುರು-ವಿರಕ್ತ ಮಠೀಯ ವ್ಯವಸ್ಥೆಯ ಜೊತೆ ಸೆಣಸಾಡಿ ತಮ್ಮ ಅಸ್ಮಿತೆ ಉಳಿಸಿಕೊಂಡು ತಮ್ಮದೇ ಆದ ಪಡೆ ನಿರ್ಮಿಸಿಕೊಂಡರು. ಇಡೀ ಬಸವ ಚಳುವಳಿಯ ಆಳ,ಅಗಲ,ವಿಶಾಲತೆಗಳ ತಲಸ್ಪರ್ಷಿ ಅಧ್ಯಯನ ಮತ್ತದರ ಪ್ರತಿಪಾದನೆ ಅಪರೂಪ.

ನಾಡಿನ ಅನೇಕ ಮಠಾಧಿಶರು ಉದ್ದೇಶಪೂರ್ವಕವಾಗಿ ಮುಚ್ಚಿಟ್ಟಿದ್ದ ಬಸವ ಸಂದೇಶದ ವೈಜ್ಞಾನಿಕ ಸಾರವನ್ನು ಜಗತ್ತಿಗೆ ತೋರಿಸಿಕೊಟ್ಟರು. ಅನಿವಾರ್ಯವಾಗಿ ವಿರಕ್ತ ಮಠಾಧೀಶರು ಇವರನ್ನು ಒಪ್ಪಿಕೊಳ್ಳುವ ವಾತಾವರಣ ಸೃಷ್ಟಿ ಮಾಡಿದರು.

ಕೂಡಲಸಂಗಮದ ಶರಣ ಮೇಳದ ಯಶಸ್ಸಿಗೆ ಇಲಕಲ್ಲ, ಗದಗ, ಚಿತ್ರದುರ್ಗ ಮಠಗಳ ಪೂಜ್ಯರುಗಳು ಬಹಿರಂಗ ಬೆಂಬಲ ನೀಡಿದರು. ಆದರೆ ಬಸವ ಸಿದ್ಧಾಂತದ ನಿಜ ವಾರಸುದಾರರೆನಿಸಿಕೊಂಡ ಮಾತಾಜಿ ಅವರಿಗೆ ಯಾಕೋ ಹೊಸ ಹೊಳಹುಗಳು ಕಾಡಲಾರಂಭಿಸಿದವು.
ಅದು ಈ ಸಮಾಜದ ದೌರ್ಭಾಗ್ಯವೂ ಹೌದು. ಎಲ್ಲರೂ ಒಗ್ಗಟ್ಟಾಗಿ ಬೆಸೆದುಕೊಂಡಿರುವ ಸುವರ್ಣ ಕಾಲದಲ್ಲಿ ಲಿಂಗದೇವ ನಾಮಾಂಕಿತ ಬದಲಾವಣೆ ಅವರನ್ನು ಆವರಿಸಿಕೊಂಡಿತು.‌

ನೂರಾರು ಮಠಾಧೀಶರು, ಲಕ್ಷಾಂತರ ಬಸವ ಭಕ್ತರಿಗೆ ಸದರಿ ನಿಲುವು ನೋವುಂಟು ಮಾಡಿತು. ತಾವು ಮಾಡಿದ್ದು ತಪ್ಪು ಎಂದು ಗೊತ್ತಾದರೂ ಸುಮ್ಮನೇ ಹಟಕ್ಕೆ ಬಿದ್ದರು. ಅದನ್ನೇ ಮಹಾತ್ಮರ ಟ್ರ್ಯಾಜಿಕ್ ಫ್ಲಾ ( Tragic flaw ) ಎಂದು ಶೇಕ್ಸ್‌ಪಿಯರ್ ತನ್ನ ದುರಂತ ನಾಯಕರನ್ನು ವರ್ಣಿಸುತ್ತಾನೆ.

ಗಣ್ಯಾತಿಗಣ್ಯರ ಒಂದೇ ಒಂದು ಈ ದೌರ್ಬಲ್ಯ ಇಡೀ ವ್ಯವಸ್ಥೆಯನ್ನು ಕುಸಿದು ಹಾಕುತ್ತದೆ. ನಂತರ ದಿನಗಳಲ್ಲಿ ಕೇವಲ ತಮ್ಮ ವಿತಂಡ ವಾದವನ್ನು ಒಪ್ಪುವ ಭಕ್ತರನ್ನು ಮಾತ್ರ ಜೊತೆಗಿಟ್ಟುಕೊಂಡರು.
ಇದನ್ನು ಪ್ರತಿಭಟಿಸಿ ಹೊರ ಬಂದ ಅವರ ಬಸವ ಗರಡಿಯಲ್ಲಿ ಬೆಳೆದ ಸಾಧಕರು ವೈಯಕ್ತಿಕ ನೆಲೆಯಲ್ಲಿ ಬಸವ ಸಾಮ್ರಾಜ್ಯ ವಿಸ್ತರಿಸಿದ್ದು ಸಮಾಜಕ್ಕೆ ಆದ ಇನ್ನೊಂದು ಲಾಭ.
ಲಿಂಗಾನಂದ ಅಪ್ಪಗಳ ಗರಡಿಯಲ್ಲಿ ತಯಾರಾದ ಸಾಧಕರು ಇಂದಿಗೂ ಬಸವ ನಿಷ್ಠೆ ಮೆರೆಯುತ್ತಲಿದ್ದಾರೆ.

ಇಪ್ಪತ್ತು ವರ್ಷಗಳ ಹಿಂದೆ ಲಿಂಗದೇವ ವಚನಾಂಕಿತ ಪ್ರಕರಣದ ನಂತರ ಕೂಡಲ ಸಂಗಮದಲ್ಲಿ ಅವರೊಂದಿಗೆ ಎರಡು ತಾಸು ಚರ್ಚೆ ಮಾಡಿ ನಾಮಾಂಕಿತ ಹಿಂದೆ ಪಡೆದು ಬಸವ ಬಳಗದ ಸ್ವಾಸ್ಥ್ಯ ಕಾಪಾಡಲು ನಿವೇದಿಸಿಕೊಂಡಿದ್ದೆ. ಆದರೆ ಮಾತಾಜಿ ತಮ್ಮ ಪಟ್ಟು ಸಡಿಲಿಸದೇ ಸಮರ್ಥಿಸಿಕೊಳ್ಳಲು ಪ್ರಯತ್ನಿಸಿದ್ದು ತುಂಬಾ ನೋವಾಯಿತು.
ಮತ್ತೆಂದೂ ನಾನವರನ್ನು ವೈಯಕ್ತಿಕವಾಗಿ ಭೇಟಿಯಾಗಲಿಲ್ಲ, ಅವರ ಕಾರ್ಯಕ್ರಮಗಳಲ್ಲಿ ಭಾಗವಹಿಸಲೂ ಇಲ್ಲ.

ಸಾವಿರಕ್ಕೂ ಹೆಚ್ಚು ಬಸವಾದಿ ಶರಣರ ಕಾರ್ಯಕ್ರಮಗಳಲ್ಲಿ ಭಾಗಿಯಾದ ನನಗೆ ಮಾತಾಜಿಯವರಿಂದ ಮಾನಸಿಕವಾಗಿ ದೂರಾದ ನೋವು ಇಂದಿಗೂ ಕಾಡುತ್ತಿದೆ. ಮಾತಾಜಿ ಕೂಡಾ ತಮ್ಮ *ಟ್ರ್ಯಾಜಿಕ್ ಫ್ಲಾ* ಅರ್ಥವಾದರೂ ಒಪ್ಪಕೊಳ್ಳದೇ ಹಟಕ್ಕೆ ಬಿದ್ದರು.

ನಂತರದ ಲಿಂಗಾಯತ ಧರ್ಮದ ಚಳುವಳಿಯಲ್ಲಿ ಈ ಕಹಿ ಮರೆತು ಮಠಾಧೀಶರೆಲ್ಲ ಒಗ್ಗಟ್ಟಾಗಿ ಹೋರಾಟ ಮಾಡಲು ಬಸವ ಚೈತನ್ಯವೇ ಕಾರಣ.
*ಇದೊಂದು ದೋಷ ಬಿಟ್ಟರೆ ಮಾತಾಜಿ ಅವರ ಸಾಧನೆ ಅನನ್ಯ, ಅಧ್ಬುತ,ಅಪರೂಪ*.
ಬೇರೆಯವರ ಬಸವ ಸಾಧನೆಯೂ ಕೂಡ ಮಾತಾಜಿಯವರ ಮಹಾಮಾರ್ಗದಂತೆ ಗೋಚರಿಸುತ್ತದೆ. ಮಾತಾಜಿಯವರಿಗೆ ಮಾತಾಜಿಯವರೇ ಸರಿಸಾಟಿ.

ತಮ್ಮ ಆರೋಗ್ಯ ಲೆಕ್ಕಿಸದೇ ಇಡೀ ಪ್ರಪಂಚ ಸುತ್ತಿ *ಬಸವಪ್ರಜ್ಞೆ* ಬಿತ್ತಿ ಬೆಳೆಸಿದರು.
ಇಂದು ಇಡೀ ಜಗತ್ತು ಬಸವಾದಿ ಶರಣರ ಸಾಹಿತ್ಯ ಅರ್ಥ ಮಾಡಿಕೊಳ್ಳಲು ಕಾರಣರಾದವರಲ್ಲಿ ಲಿಂಗಾನಂದರು ಹಾಗೂ ಮಾತಾಜಿಯವರು ಅಗ್ರಮಾನ್ಯರು.

ತಮ್ಮ ಗುರುಗಳ ಕಾಲ ನಂತರದಲ್ಲಿಯೂ ಬಸವ ಬಳಗವನ್ನು ಸಾಂಸ್ಥಿಕವಾಗಿ ಕಟ್ಟಿ ಬೆಳೆಸಿದರು. ಅವರ ಸಂಘಟನಾ ಶಕ್ತಿ ಅದ್ವಿತೀಯ.
ಲಿಂಗದೇವ ವಚನಾಂಕಿತ ಪ್ರಕರಣವನ್ನು ಬದಿಗಿರಿಸಿ ನೋಡಿದಾಗ ಮಾತಾಜಿಯವರು ಮಾಡಿದ ಸಾಧನೆ ಬೆರಗು ಮೂಡಿಸುವಂತಹದು.

ಎಡಬಿಡದ ಕಾರ್ಯಚಟುಕೆಗಳಿಂದಾಗ ಆರೋಗ್ಯ ಹಾಳಾಯಿತಾದರೂ ಅದನ್ನವರು ಲೆಕ್ಕಿಸದೇ ದುಡಿದ ಅವರ ಜೀವನೋತ್ಸಾಹ ಅನುಕರಣೀಯ, ಅದಮ್ಯ,ಅಪ್ರತಿಮ.
ನಿಮಗೆ ಸಾವಿರದ ಶರಣು ತಾಯೇ.
ನೀವು ಸದಾ ನಮ್ಮ ಮನದಲ್ಲಿ ಮಹಾ ಬೆಳಗಿನ ಬೆರಗಾಗಿ ನೆಲೆಗೊಂಡಿದ್ದೀರಿ.

*ಸಿದ್ದು ಯಾಪಲಪರವಿ*

Sunday, March 10, 2019

ಕನ್ನಡದ ಅಸ್ಮಿತೆ

*ಒಂದು ಪ್ರತಿಕ್ರಿಯೆ*

ಪದ್ಮರಾಜ ದಂಡಾವತಿ: ಕನ್ನಡ ಚುನಾವಣೆ ವಿಷಯ... ‌( ಪ್ರಜಾ ಮತ, ೨ ಮಾರ್ಚ್ , ೨೦೧೮)

*ಕನ್ನಡದ ಅಸ್ಮಿತೆ ಚುನಾವಣಾ ದಾಳವಾಗದು*.

ದಂಡಾವತಿಯವರು ಕನ್ನಡ ಹೋರಾಟ ನಡೆದು ಬಂದ ಬಗೆಯನ್ನು ಅರ್ಥಪೂರ್ಣವಾಗಿ ವಿವರಿಸಿ ಎಚ್ಚರಿಸಿದ್ದಾರೆ.

ನೆರೆ ರಾಜ್ಯಗಳಾದ ತೆಲುಗು, ತಮಿಳು ಹಾಗೂ ಮಲೆಯಾಳಂ ಭಾಷೆಗಳ ಜನರಷ್ಟು ಭಾಷಾಭಿಮಾನ ಕನ್ನಡಿಗರದಲ್ಲ.

ಇಂಗ್ಲಿಷ್ ಮಾಧ್ಯಮ ಶಿಕ್ಷಣದ ದಾಸರಾದ ಮಧ್ಯಮ ವರ್ಗದ ಕನ್ನಡಿಗರು ಕನ್ನಡದಿಂದ ದೂರ ಸರಿದಿದ್ದಾರೆ.

ಮಾತೃಭಾಷೆಯ ಶಿಕ್ಷಣದ ಮಹತ್ವದ ಕುರಿತು ಕುವೆಂಪು ಆದಿಯಾಗಿ ಜಗತ್ತಿನ ಎಲ್ಲ ಶಿಕ್ಷಣ ತಜ್ಞರು ಗಂಟಲು ಹರಿದುಕೊಂಡರೂ ಗ್ರಹಿಸಲಾಗದ ಕಿವುಡರು ನಾವು.

ಮಾತೃ ಭಾಷಾ ಶಿಕ್ಷಣದ ಮಹತ್ವ ಒಂದು ಸಮೂಹ ಪ್ರಜ್ಞೆಯಾಗಿ ಉಳಿಯಬೇಕಾಗಿತ್ತು. ಆದರೆ ಹಾಗಾಗಲಿಲ್ಲ. ಕನ್ನಡ ನಾಶವಾಗಲು ಹೋರಾಟದ ಮುಂಚೂಣೆಯಲ್ಲಿರವವರ ನೈತಿಕ ಪ್ರಶ್ನೆಯೂ ಕಾರಣ.

ಕನ್ನಡ ಮಾಧ್ಯಮ ಶಿಕ್ಷಣದ ಬಗ್ಗೆ ವೇದಿಕೆ ಮೇಲೆ ಮಾತನಾಡುವ ಶಿಕ್ಷಣತಜ್ಞರು, ತಮ್ಮ ಮಕ್ಕಳಿಗೆ ಇಂಗ್ಲಿಷ್ ಮಾಧ್ಯಮ ಶಿಕ್ಷಣ ಕೊಡಿಸಿ ನೈತಿಕ ಮಟ್ಟ ಕಳೆದುಕೊಂಡಿರುವುದು ಕನ್ನಡದ ದೌರ್ಭಾಗ್ಯ.

ಸಾಹಿತ್ಯ ಕ್ಷೇತ್ರದಲ್ಲಿ ಕನ್ನಡ ಬಲಶಾಲಿಯಾಗಿ ಉಳಿದಿದೆ. ಪುಸ್ತಕ ಪ್ರೇಮದ ಅನನ್ಯತೆಯನ್ನು ಪ್ರಶ್ನಿಸಲಾಗದು.

ಆದರೆ ತಮ್ಮ ಮುಂದಿನ ಜನಾಂಗಕ್ಕೆ ಶಿಕ್ಷಣ ಕೊಡುವ ವಿಷಯ ಬಂದ ಕೂಡಲೇ ಎಲ್ಲ ಮಂಗಮಾಯ,ಅಯೋಮಯ.

ಮಾತೃಭಾಷಾ ಶಿಕ್ಷಣದ ಕುರಿತು ಮಾತನಾಡುವ ಧ್ವನಿಗಳು ಅಡಗಿ ಹೋಗಿವೆ.

ಸರಕಾರಿ ಕನ್ನಡ ಮಾಧ್ಯಮ ಶಾಲೆಗಳನ್ನು ಉಳಿಸುವ ಇಚ್ಛಾಶಕ್ತಿ ಯಾರಲ್ಲೂ ಉಳಿದಿಲ್ಲ.

ರಾಜಕಾರಣಿಗಳು, ಶಿಕ್ಷಣತಜ್ಞರು, ಕನ್ನಡ ಪರ ಹೋರಾಟಗಾರರಿಗೆ ಕನ್ನಡ ಹೊಟ್ಟೆಪಾಡು ಆದರೆ ಕರುಳ ಸಂಬಂಧವಾಗಲೇ ಇಲ್ಲ.

ಭಾಷೆ,ನೆಲ,ಜಲ ನಮ್ಮ ರಾಜಕೀಯ ಹೋರಾಟದ ವಿಷಯವಾಗಿ ಈಗ ಉಳಿದಿಲ್ಲ.

ರಾಷ್ಟ್ರೀಯ ಪಕ್ಷಗಳ ಗುಲಾಮರಾಗಿರುವ ನಮ್ಮ ರಾಜಕೀಯ ನಾಯಕರುಗಳಿಗೆ ನಾಡು,ನುಡಿ ಮಹತ್ವವಾಗುವ  ಪ್ರಶ್ನೆಯೇ ಅಲ್ಲ.

ಭಾಷೆಯನ್ನು ಮುಂದಿಟ್ಟುಕೊಂಡು ಗೆಲ್ಲುವ ವಾತಾವರಣವಿಲ್ಲ. ಹಾಗಾಗಿ ಕನ್ನಡ ಭಾಷೆ ತನ್ನ ಅಂತಃಸತ್ವ ಕಳೆದುಕೊಂಡಿದೆ.

ಒಂದೆಡೆ ಮಾತೃಭಾಷಾ ಶಿಕ್ಷಣವನ್ನು ಬೆಂಬಲಿಸುವ ಸರಕಾರ ನ್ಯಾಯಾಂಗದ ಮೂಲಕ ಪಾಲಕರ ಹಕ್ಕನ್ನು ಎತ್ತಿ ಹಿಡಿಯುವ ತೀರ್ಮಾನದ ನೆಪ ಒಡ್ಡುತ್ತದೆ. ಸರಕಾರಿ  ಶಾಲೆಗಳನ್ನು ಸಂಖ್ಯೆಯ ಕೊರತೆಯ ನೆಪದ ಮೂಲಕ ಮುಚ್ಚುವ ಹುನ್ನಾರ.

ಸ್ವತಃ ರಾಜಕಾರಣಿಗಳು ನಡೆಸುವ ಇಂಗ್ಲಿಷ್ ಮಾಧ್ಯಮ ಶಾಲೆಗಳ ರಕ್ಷಣೆ ಮಾಡುವ ಹಿಡನ್ ಅಜೆಂಡಾ ಈಗ ಓಪನ್ ಸಕ್ರೆಟ್.

ಪಾಲಕರ ನಿರಾಸಕ್ತಿ, ರಾಜಕಾರಣಿಗಳ ಹಿಪೊಕ್ರೆಟಿಕ್ ನಿಲುವಿನಿಂದ ಭಾಷೆ ಈಗ ಉಳಿಯುವುದಿಲ್ಲ.

ಯುವಕರು, ವಿದೇಶದಲ್ಲಿ ಕೆಲಸ ಮಾಡುವ ಟೆಕ್ಕಿಗಳು ಮಾತೃಭಾಷೆಯ ಮಹತ್ವ ಅರ್ಥಮಾಡಿಕೊಂಡು ಭಾಷೆಯ ಉಳಿವಿಗಾಗಿ ಹೆಣಗಾಡುತ್ತಿರುವುದೂ ಹೊಸ ಭರವಸೆ.

ತಂತ್ರಜ್ಞಾನದ ವಿಪರೀತ ಬಳಕೆ, ಈಗಿನ ತಲೆಮಾರಿನ ಇಂಗ್ಲಿಷ್ ಮಾಧ್ಯಮ ಶಿಕ್ಷಣದಿಂದಾಗಿ ಮಕ್ಕಳು ಕನ್ನಡ ಭಾಷೆಯ ಗ್ರಹಿಕೆಯಿಂದ ವಂಚಿತರಾಗಲು ನಾವೇ ಕಾರಣ.

ಮುಂದೆ ಇದೇ ಮಕ್ಕಳು ಬೆಳೆದು ದೊಡ್ಡವರಾದ ಮೇಲೆ ನಮ್ಮ ಮೂರ್ಖತನವನ್ನು ಶಪಿಸುವದರಲ್ಲಿ ಸಂಶಯವಿಲ್ಲ.

ಆದ್ದರಿಂದ ಕನ್ನಡ ಭಾಷೆ ಈಗ ಚುನಾವಣಾ ವಿಷಯವಾಗುವುದಿಲ್ಲ. 

----ಸಿದ್ದು ಯಾಪಲಪರವಿ.