*ಮರೆಯಾಗದ ಮಹಾಬೆಳಗು: ಮಾತಾಜಿ*
ಇಡೀ ಜಗತ್ತಿಗೆ ಬಸವಧರ್ಮ ಪರಿಚಯಿಸಿದ ಪೂಜ್ಯ ಲಿಂಗಾನಂದರು ಹಾಗೂ ಪೂಜ್ಯ ಮಾತಾಜಿ ಅವರ ಕೊಡುಗೆಯನ್ನು ವರ್ಣಿಸಲಾಗದು. ಇಡೀ ಧರ್ಮ ಸಾರವನ್ನು ಅತ್ಯಂತ ವೈಜ್ಞಾನಿಕವಾಗಿ ನಿರೂಪಿಸಲು ಅಹೋರಾತ್ರಿ ಶ್ರಮಿಸಿದರು.
ಅಸ್ಪಷ್ಟವಾಗಿದ್ದ ಇಡೀ ವಚನ ಚಳುವಳಿಯನ್ನು ಜಗತ್ತಿಗೆ ಪರಿಚಯಿಸಿದ ಮೊದಲ ಪೀಠಾಧಿಪತಿಗಳು.
ರಾಜ್ಯದಲ್ಲಿ ಇದ್ದ ಸಾವಿರಾರು ಮಠಾಧೀಶರು ಮಾಡಲಾಗದ ಕೆಲಸವನ್ನು ಇವರೀರ್ವರು ಸಾಧಿಸಿದರು.
ರಾಜ್ಯ, ದೇಶ,ವಿದೇಶಗಳಲ್ಲಿ ಅಪ್ಪಟ ಬಸವಾಭಿಮಾನಿಗಳ ಪಡೆ ನಿರ್ಮಿಸಿದರು. ಕೇವಲ ಸೈದ್ಧಾಂತಿಕ ತಿಳುವಳಿಕೆ ನೀಡಿದರೆ ಸಾಲದು ಅದು ಸಂಘಟನೆಯ ಸ್ವರೂಪದಲ್ಲಿರಲಿ ಎಂಬ ಕಾರಣಕ್ಕಾಗಿ ರಾಷ್ಟ್ರೀಯ ಬಸವ ದಳ ಹುಟ್ಟು ಹಾಕಿದರು.
ಹೆಚ್ಚು ಹೆಚ್ಚು ಹಣ ಸಂಗ್ರಹಣ ಮತ್ತದರ ಸದ್ಬಳಕೆಯ ಮಾರ್ಗ ಕಲ್ಪಿಸಿದರು. ಸ್ಥಾವರಕ್ಕಳಿವುಂಟು ಎಂದು ಸಾರಿದ ಬಸವಾದಿ ಶರಣರ ಸ್ಮಾರಕಗಳನ್ನು ನಿರ್ಮಿಸಿದ್ದು ಆರಂಭದ ದಿನಗಳಲ್ಲಿ ವಿರೋಧಾಭಾಸ ಅನಿಸುತ್ತಿದ್ದರೂ ಅವಗಳಿಗೆ ಐತಿಹಾಸಿಕ ಮೆರುಗು ಕೊಟ್ಟರು.
ಕಲ್ಯಾಣದ ಬೀದರ ಜಿಲ್ಲೆಯ ತುಂಬ ಸಂಚರಿಸಿ ಜನರನ್ನು ಸಂಘಟಿಸಿದರು.
ಗುರು-ವಿರಕ್ತ ಮಠೀಯ ವ್ಯವಸ್ಥೆಯ ಜೊತೆ ಸೆಣಸಾಡಿ ತಮ್ಮ ಅಸ್ಮಿತೆ ಉಳಿಸಿಕೊಂಡು ತಮ್ಮದೇ ಆದ ಪಡೆ ನಿರ್ಮಿಸಿಕೊಂಡರು. ಇಡೀ ಬಸವ ಚಳುವಳಿಯ ಆಳ,ಅಗಲ,ವಿಶಾಲತೆಗಳ ತಲಸ್ಪರ್ಷಿ ಅಧ್ಯಯನ ಮತ್ತದರ ಪ್ರತಿಪಾದನೆ ಅಪರೂಪ.
ನಾಡಿನ ಅನೇಕ ಮಠಾಧಿಶರು ಉದ್ದೇಶಪೂರ್ವಕವಾಗಿ ಮುಚ್ಚಿಟ್ಟಿದ್ದ ಬಸವ ಸಂದೇಶದ ವೈಜ್ಞಾನಿಕ ಸಾರವನ್ನು ಜಗತ್ತಿಗೆ ತೋರಿಸಿಕೊಟ್ಟರು. ಅನಿವಾರ್ಯವಾಗಿ ವಿರಕ್ತ ಮಠಾಧೀಶರು ಇವರನ್ನು ಒಪ್ಪಿಕೊಳ್ಳುವ ವಾತಾವರಣ ಸೃಷ್ಟಿ ಮಾಡಿದರು.
ಕೂಡಲಸಂಗಮದ ಶರಣ ಮೇಳದ ಯಶಸ್ಸಿಗೆ ಇಲಕಲ್ಲ, ಗದಗ, ಚಿತ್ರದುರ್ಗ ಮಠಗಳ ಪೂಜ್ಯರುಗಳು ಬಹಿರಂಗ ಬೆಂಬಲ ನೀಡಿದರು. ಆದರೆ ಬಸವ ಸಿದ್ಧಾಂತದ ನಿಜ ವಾರಸುದಾರರೆನಿಸಿಕೊಂಡ ಮಾತಾಜಿ ಅವರಿಗೆ ಯಾಕೋ ಹೊಸ ಹೊಳಹುಗಳು ಕಾಡಲಾರಂಭಿಸಿದವು.
ಅದು ಈ ಸಮಾಜದ ದೌರ್ಭಾಗ್ಯವೂ ಹೌದು. ಎಲ್ಲರೂ ಒಗ್ಗಟ್ಟಾಗಿ ಬೆಸೆದುಕೊಂಡಿರುವ ಸುವರ್ಣ ಕಾಲದಲ್ಲಿ ಲಿಂಗದೇವ ನಾಮಾಂಕಿತ ಬದಲಾವಣೆ ಅವರನ್ನು ಆವರಿಸಿಕೊಂಡಿತು.
ನೂರಾರು ಮಠಾಧೀಶರು, ಲಕ್ಷಾಂತರ ಬಸವ ಭಕ್ತರಿಗೆ ಸದರಿ ನಿಲುವು ನೋವುಂಟು ಮಾಡಿತು. ತಾವು ಮಾಡಿದ್ದು ತಪ್ಪು ಎಂದು ಗೊತ್ತಾದರೂ ಸುಮ್ಮನೇ ಹಟಕ್ಕೆ ಬಿದ್ದರು. ಅದನ್ನೇ ಮಹಾತ್ಮರ ಟ್ರ್ಯಾಜಿಕ್ ಫ್ಲಾ ( Tragic flaw ) ಎಂದು ಶೇಕ್ಸ್‌ಪಿಯರ್ ತನ್ನ ದುರಂತ ನಾಯಕರನ್ನು ವರ್ಣಿಸುತ್ತಾನೆ.
ಗಣ್ಯಾತಿಗಣ್ಯರ ಒಂದೇ ಒಂದು ಈ ದೌರ್ಬಲ್ಯ ಇಡೀ ವ್ಯವಸ್ಥೆಯನ್ನು ಕುಸಿದು ಹಾಕುತ್ತದೆ. ನಂತರ ದಿನಗಳಲ್ಲಿ ಕೇವಲ ತಮ್ಮ ವಿತಂಡ ವಾದವನ್ನು ಒಪ್ಪುವ ಭಕ್ತರನ್ನು ಮಾತ್ರ ಜೊತೆಗಿಟ್ಟುಕೊಂಡರು.
ಇದನ್ನು ಪ್ರತಿಭಟಿಸಿ ಹೊರ ಬಂದ ಅವರ ಬಸವ ಗರಡಿಯಲ್ಲಿ ಬೆಳೆದ ಸಾಧಕರು ವೈಯಕ್ತಿಕ ನೆಲೆಯಲ್ಲಿ ಬಸವ ಸಾಮ್ರಾಜ್ಯ ವಿಸ್ತರಿಸಿದ್ದು ಸಮಾಜಕ್ಕೆ ಆದ ಇನ್ನೊಂದು ಲಾಭ.
ಲಿಂಗಾನಂದ ಅಪ್ಪಗಳ ಗರಡಿಯಲ್ಲಿ ತಯಾರಾದ ಸಾಧಕರು ಇಂದಿಗೂ ಬಸವ ನಿಷ್ಠೆ ಮೆರೆಯುತ್ತಲಿದ್ದಾರೆ.
ಇಪ್ಪತ್ತು ವರ್ಷಗಳ ಹಿಂದೆ ಲಿಂಗದೇವ ವಚನಾಂಕಿತ ಪ್ರಕರಣದ ನಂತರ ಕೂಡಲ ಸಂಗಮದಲ್ಲಿ ಅವರೊಂದಿಗೆ ಎರಡು ತಾಸು ಚರ್ಚೆ ಮಾಡಿ ನಾಮಾಂಕಿತ ಹಿಂದೆ ಪಡೆದು ಬಸವ ಬಳಗದ ಸ್ವಾಸ್ಥ್ಯ ಕಾಪಾಡಲು ನಿವೇದಿಸಿಕೊಂಡಿದ್ದೆ. ಆದರೆ ಮಾತಾಜಿ ತಮ್ಮ ಪಟ್ಟು ಸಡಿಲಿಸದೇ ಸಮರ್ಥಿಸಿಕೊಳ್ಳಲು ಪ್ರಯತ್ನಿಸಿದ್ದು ತುಂಬಾ ನೋವಾಯಿತು.
ಮತ್ತೆಂದೂ ನಾನವರನ್ನು ವೈಯಕ್ತಿಕವಾಗಿ ಭೇಟಿಯಾಗಲಿಲ್ಲ, ಅವರ ಕಾರ್ಯಕ್ರಮಗಳಲ್ಲಿ ಭಾಗವಹಿಸಲೂ ಇಲ್ಲ.
ಸಾವಿರಕ್ಕೂ ಹೆಚ್ಚು ಬಸವಾದಿ ಶರಣರ ಕಾರ್ಯಕ್ರಮಗಳಲ್ಲಿ ಭಾಗಿಯಾದ ನನಗೆ ಮಾತಾಜಿಯವರಿಂದ ಮಾನಸಿಕವಾಗಿ ದೂರಾದ ನೋವು ಇಂದಿಗೂ ಕಾಡುತ್ತಿದೆ. ಮಾತಾಜಿ ಕೂಡಾ ತಮ್ಮ *ಟ್ರ್ಯಾಜಿಕ್ ಫ್ಲಾ* ಅರ್ಥವಾದರೂ ಒಪ್ಪಕೊಳ್ಳದೇ ಹಟಕ್ಕೆ ಬಿದ್ದರು.
ನಂತರದ ಲಿಂಗಾಯತ ಧರ್ಮದ ಚಳುವಳಿಯಲ್ಲಿ ಈ ಕಹಿ ಮರೆತು ಮಠಾಧೀಶರೆಲ್ಲ ಒಗ್ಗಟ್ಟಾಗಿ ಹೋರಾಟ ಮಾಡಲು ಬಸವ ಚೈತನ್ಯವೇ ಕಾರಣ.
*ಇದೊಂದು ದೋಷ ಬಿಟ್ಟರೆ ಮಾತಾಜಿ ಅವರ ಸಾಧನೆ ಅನನ್ಯ, ಅಧ್ಬುತ,ಅಪರೂಪ*.
ಬೇರೆಯವರ ಬಸವ ಸಾಧನೆಯೂ ಕೂಡ ಮಾತಾಜಿಯವರ ಮಹಾಮಾರ್ಗದಂತೆ ಗೋಚರಿಸುತ್ತದೆ. ಮಾತಾಜಿಯವರಿಗೆ ಮಾತಾಜಿಯವರೇ ಸರಿಸಾಟಿ.
ತಮ್ಮ ಆರೋಗ್ಯ ಲೆಕ್ಕಿಸದೇ ಇಡೀ ಪ್ರಪಂಚ ಸುತ್ತಿ *ಬಸವಪ್ರಜ್ಞೆ* ಬಿತ್ತಿ ಬೆಳೆಸಿದರು.
ಇಂದು ಇಡೀ ಜಗತ್ತು ಬಸವಾದಿ ಶರಣರ ಸಾಹಿತ್ಯ ಅರ್ಥ ಮಾಡಿಕೊಳ್ಳಲು ಕಾರಣರಾದವರಲ್ಲಿ ಲಿಂಗಾನಂದರು ಹಾಗೂ ಮಾತಾಜಿಯವರು ಅಗ್ರಮಾನ್ಯರು.
ತಮ್ಮ ಗುರುಗಳ ಕಾಲ ನಂತರದಲ್ಲಿಯೂ ಬಸವ ಬಳಗವನ್ನು ಸಾಂಸ್ಥಿಕವಾಗಿ ಕಟ್ಟಿ ಬೆಳೆಸಿದರು. ಅವರ ಸಂಘಟನಾ ಶಕ್ತಿ ಅದ್ವಿತೀಯ.
ಲಿಂಗದೇವ ವಚನಾಂಕಿತ ಪ್ರಕರಣವನ್ನು ಬದಿಗಿರಿಸಿ ನೋಡಿದಾಗ ಮಾತಾಜಿಯವರು ಮಾಡಿದ ಸಾಧನೆ ಬೆರಗು ಮೂಡಿಸುವಂತಹದು.
ಎಡಬಿಡದ ಕಾರ್ಯಚಟುಕೆಗಳಿಂದಾಗ ಆರೋಗ್ಯ ಹಾಳಾಯಿತಾದರೂ ಅದನ್ನವರು ಲೆಕ್ಕಿಸದೇ ದುಡಿದ ಅವರ ಜೀವನೋತ್ಸಾಹ ಅನುಕರಣೀಯ, ಅದಮ್ಯ,ಅಪ್ರತಿಮ.
ನಿಮಗೆ ಸಾವಿರದ ಶರಣು ತಾಯೇ.
ನೀವು ಸದಾ ನಮ್ಮ ಮನದಲ್ಲಿ ಮಹಾ ಬೆಳಗಿನ ಬೆರಗಾಗಿ ನೆಲೆಗೊಂಡಿದ್ದೀರಿ.
*ಸಿದ್ದು ಯಾಪಲಪರವಿ*
No comments:
Post a Comment