Tuesday, July 31, 2018

ನೋವು ಸಂಭ್ರಮವೆಂಬ ಸೂತಕ

*ನೋವು ಸಂಭ್ರಮವೆಂಬ ಸೂತಕ*

ಜೋರಾಗಿ ಕೂಗಿ ಅಳಲಾರಂಬಿಸಿದ ಕೂಡಲೇ ಸಿಡಿಲು ಹೊಡೆದಂತೆ, ನೀರವ ಮೌನ. ಬೋರ್ಗರೆದ ದುಃಖ, ನೀನಾದರೂ ಎಷ್ಟೂ ಅಂತ ಸಹಿಸುತ್ತೀ.

ಸಹನೆಗೂ ಒಂದು ಮಿತಿಯಿದೆ. ಸಂಸಾರ ನಿರ್ವಹಣೆಯ ನೆಪದಲಿ, ಎಲ್ಲವನೂ ನುಂಗಿದ ಮಾಗಿದ ಜೀವಕೆ ನಾ ಹೆಚ್ಚು ಹೇರಬಾರದಿತ್ತು, ನೀ ಸಹಿಸಲೂ ಬಾರದಿತ್ತು.

ನೀ ಸಹಿಸಿದೆ, ನಾ ಹೇರಿದೆ, ಹೇರುತ್ತಲೇ ಹೋದೆ.
ಈ ಸಾಮಾಜಿಕ ವ್ಯವಸ್ಥೆಯ ನಡುವೆ ನಾವು ಗುಟ್ಟಾಗಿ ಬದುಕುವ ಮಾನಸಿಕ ವೇದನೆ ತುಂಬಾ ಸೂಕ್ಷ್ಮ.

ಬಿಸಿತುಪ್ಪದ ಸವಿ. ಸಕ್ಕರೆ ರೋಗದವರು ಸಿಹಿ‌ ತಿಂದಂತೆ, ತಿನಬೇಕೆನಿಸುತ್ತೆ ಆದರೆ ತಿನಬಾರದು, ತಿನದಿರಲಾಗದು.
ಭಾವಗಾನಯಾನದ ಪ್ರಪಂಚದಲ್ಲಿ ಎಲ್ಲವೂ ಹೀಗೆ. ಕಾದಂಬರಿಯ ಹಾಗೆ. ತೇಲಾಡುತಲೇ ಇರಬೇಕು, ವಾಸ್ತವ ಲೋಕಕಿಳಿದರೆ ಖುಷಿ ಸಿಗಲಾರದು.

ಹೆಚ್ಚು ಕಾಲ ಆಕಾಶದಲ್ಲಿ ತೇಲಾಡುತ ಇರಲಾಗದು. ಸಹಜ, ವಾಸ್ತವ ಲೋಕಕಿಳಿಯಲೇಬೇಕು.

ಆದರೂ ನಾವಿಬ್ಬರೂ ನಮಗಾಗಿ ಖುಷಿಯಿಂದ ಬಾಳುತ್ತಲಿದ್ದೇವೆ.ಬಾಳಬೇಕು ಕೂಡಾ!

ಈ ಮಧ್ಯೆ ಬರುವ ಭಿನ್ನಾಭಿಪ್ರಾಯಗಳನ್ನು ರಾಹುಗನ್ನಡಿಯಲ್ಲಿ ನೋಡಿದ್ದೇ ಎಡವಟ್ಟಾಯಿತು.‌
ಬೇರೆಯವರ ಐಡಿಯಾಲಜಿಗಳನ್ನು ಬದಲಿಸುವ ಭರದಲಿ ಆಗುವದೇ ಹೀಗೆ‌.

ನಮಗೆ ಪ್ರಿಯವಾದವರು ನಮ್ಮ ಸಿದ್ಧಾಂತ ನಂಬಿ ನಡೆಯಲಿ ಎಂದು ಭ್ರಮಿಸಬಾರದು. ಆ ನಿಖರ ಸತ್ಯ ‌ನಂಗೂ ಗೊತ್ತು. ಆದರೂ ವಿಪರೀತ ವ್ಯಾಮೋಹ ನನ್ನನು ಮೂರ್ಖನನ್ನಾಗಿಸಿತು.

ತುಂಬಾ ತಿಳಿದಿದೆ ಅಂದುಕೊಂಡವರು ಅನುಭವಿಸುವ  ಮಾನಸಿಕ ತಳಮಳ.

ನಾನು ತುಂಬ ಆರಾಧಿಸುವ ಓಶೋ ‘ ನಿಜವಾದ ಪ್ರೀತಿ ಸಂಪೂರ್ಣ ಸ್ವಾತಂತ್ರ್ಯ ನೀಡ ಬಯಸುತ್ತದೆ, ಕಸಿದುಕೊಳ್ಳುವುದಿಲ್ಲ.’
ಆದರೆ ನಾ ಕಸಿಯುವ ಸಂಕಷ್ಟಕ್ಕೆ ಸಿಕ್ಕು ಬಿದ್ದೆ. ಪ್ರೀತಿ ಪೊಸೆಸ್ಸಿವ್ ಆದರೆ ಫಿನಿಶ್. ನಮಗರಿವಿಲ್ಲದೆ ನಾವು ಮುಳುಗಿ ಹೋಗುತ್ತೇವೆ.

ಮೊದಲೇ ಸಂಕಷ್ಟದಲಿ ಬಳಲಿದ ನಿನ್ನ ಆಳವಾಗಿ *ಮೋಹಿಸಿ, ಪ್ರೀತಿಸಿದೆ. ಪ್ರೀತಿಗೇನು ಬರವಿರಲಿಲ್ಲ. ಬೆಟ್ಟ ಆಕಾಶ, ಸರೋವರಗಳೂ ಗೌಣ*  ಆದರೇನು ಪೊಸೆಸ್ಸಿವ್ ಎಲ್ಲ ತಿಂದುಹಾಕಿತು.

ಓದು-ಬರಹ-ಧ್ಯಾನಗಳಲಿ ವಿಕಸನಗೊಂಡ ಮನಸು ಅರಿವಿಲ್ಲದೆ ವ್ಯಗ್ರವಾಯಿತು.

ನನ್ನ ಪೊಸೆಸ್ಸಿವ್ ನೆಸ್ ನನಗೆ ಮುಳುವಾಯಿತು. ನಾ ಕಂಗಾಲಾಗಿ ಕನವರಿಸಿ, ಕಳೆದುಹೋದೆ. ಎಲ್ಲಿ ಕಳೆದುಕೊಂಡು ಬಿಡುವೆನೆಂಬ ಧಾವಂತ. ಮಗು ಅವ್ವನ ಹುಡುಕುವ ಹಾಗೆ ಹಾಸಿಗೆ ತುಂಬ ಉರುಳಾಡಿ ಹುಡುಕಾಡಿದೆ.

*ನೀ ನನ್ನ ಬಿಟ್ಟು ಎಲ್ಲೂ ಹೋಗಿಲ್ಲ, ಹೋಗುವುದೂ ಇಲ್ಲ*. ಅದೂ ಸೂರ‌್ಯ-ಚಂದ್ರರಷ್ಟೇ ಸತ್ಯ. ನನಗೆ ಆ ನಂಬಿಕೆಯೂ ಇದೆ. *ಸಹನೆ ಸಮರ್ಪಣೆಗೆ ಉಪಮೇಯ*. ಮಗುವಿನ ಮುದ್ದು ಮುಖದ ಹಾಗೆ, ಉಪಮಿಸಲಾಗದು.

ಆದರೂ ಕನಲಿದೆ, ಕಾಡಿದೆ, ಹಲುಬಿದೆ, ಕನವರಿಸಿ ರೋಧಿಸಿದೆ.

ಅದನ್ನೆಲ್ಲ‌ ಕಂಡ  ನೀ ಕುಪಿತಳಾಗಿ ಸಹನೆ ಕಳೆದುಕೊಂಡೆ.
ನಾ ಮೂಕ ಪ್ರೇಕ್ಷಕ್ಷನಂತೆ ಸುಮ್ಮನೇ ನೋಡಿದೆ.

ಈಗ ಮೌನಿ‌ ನಾ.
ನನ್ನ ನಾ ಆತ್ಮಾವಲೋಕನ ಮಾಡಿಕೊಳ್ಳಲು ಹಚ್ಚಿದ ಮಹಾಮಾತೆ‌ ನೀ.

ಈಗ ನಮ್ಮ ಪ್ರೀತಿ ಇಮ್ಮಡಿಸಿದೆ. ಆತಂಕ ದೂರಾಗಿದೆ. ಜವಾಬ್ದಾರಿ ಕಳೆದುಕೊಂಡು ಹಗುರಾಗಿದ್ದೇನೆ.
ನಾನೀಗ, ಅಳು ಮೊಂಡಾಟ ಹಟಮಾರಿತನ ನಿಲ್ಲಿಸಿದ ಮಗು.
ಅವ್ವನ ಮಡಿಲಲಿ ಬೆಚ್ಚಗೆ ಹಾಯಾಗಿ ಮಲಗಿ ನೋವ ಮರೆತುಬಿಡುವೆ.
ನಿನ್ನ ಒಲವ ಮಡಿಲಲಿ ಜೋಗುಳ ಹಾಡಿ ಮಲಗಿಸಿಬಿಡು.

     ಸಿದ್ದು ಯಾಪಲಪರವಿ

Sunday, July 29, 2018

ಒಲವಿನ ವಚನ

*ಒಲವಿನ ವಚನ*

ಸಂಶಯದ ಸುಳಿಯಲಿ ನೋವಿನ
ಬೇಗುದಿಯಲಿ ಬೆಂದ ಜೀವ ನೀ

ಏಕಾಂತದ ಅಳಲು ಕೇಳಿದ ದೇವ
ನಿನಗಾಗಿ ಕಳಿಸಿದ ಧೂತ ನಾ

ಕಂಗಳ ಬೆಳಕಾಗಿ ಕಣ್ಣೀರ
ಅಳಿಸುವ ಅರಸ

ಸಿರಿವಂತ ಮುಖವಾಡದ ಬಡವನ
ಒಡಲಾಗ್ನಿಯಲಿ ಬೆಂದ ಸಹನಶೀಲೆ

ನುಂಗಿದ ನೋವ ಕಕ್ಕಿ ಬಿಡು
ವಿಷವಾಗಿ ಕರಳು ಕತ್ತರಿಸುವ ಮುನ್ನ

ಪ್ರೀತಿಯೇ ನನ್ನ ಉಸಿರು ಪ್ರೇಮವೇ
ನನ್ನ ಕಡಲು ನಂಬಿಕೆಯ ನಂ
ಬಿಗಿಯಲಿ ದಡ ಸೇರೋಣ

ಅನುಮಾನಿಸುವ ಮಾತ
ಮರೆತಬಿಡು ಪುಟವಿಟ್ಟ ಚಿನ್ನದಲಿ
ಕೆತ್ತಿದ ಬೆಳದಿಂಗಳ ಬೊಗಸೆ
ಕಂಗಳ ದೇವತೆ ನೀ

ಅಳುವದ ಮರೆತು ಮೆರೆ
ಮಹಾರಾಣಿಯ ಹಾಗೆ ನನ್ನ
ಹೃದಯ ಸಿಂಹಾಸನದಿ

ಪೂಜಿಸುವೆ ಆರಾಧಿಸುವೆ ಎದೆಯ
ಒಳಗೆ ಯಾರೂ
ನೋಡದೇ ಕದಿಯದಂತೆ

ಭಾವನೆಗಳ ಅರಮನೆಯಲಿ
ಬಡತನದ ಹಂಗಿಲ್ಲ
ಸಂಶಯದ ನಂಜಿಲ್ಲ.

ನಂಬಿ ಕೆಟ್ಟವರಿಲ್ಲ ನಂಬದಿರೆ
ನೆಮ್ಮದಿಯಿಲ್ಲ ನಂಬಿ ನಂಬುಗೆಯ
ಪಥದ ಮೇಲೆ ಹೊಸ ಪಯಣ
ಹೂಡೋಣ

ಇನ್ನೇನು ದಾರಿ ದೂರ ಸಾಗಿದೆ
ಉಳಿದ ನಾಲ್ಕು ಮಾರು ದಾರಿ
ಖುಷಿಯಿಂದ ಖುಷಿಗಾಗಿ ಸಾಗೋಣ
ನಸುನಗುತ ನೋವ ನುಂಗಿ

ಸವಿಯ ಸಮಪಾಲು ಒಲವ
ಸಮಭೋಗದ ಸಂಭ್ರಮದಲಿ
ಪಾಲುದಾರರಾಗಿ ಜೀವಯಾತ್ರೆಯ
ಜೀಕುತಲಿರೋಣ 

ಉಸಿರು ಉಸಿರಲಿ ಅಳಿಯದ
ಹೊಸ ಅನುಬಂಧದ
ಹೆಸರ ಹಸಿರಾಗಿಸೋಣ.

*ಸಿದ್ದು ಯಾಪಲಪರವಿ*

Friday, July 27, 2018

ಗುರು ಪೂರ್ಣಿಮ

ನಿತ್ಯ ನೆನಪಾಗುವ ಗುರು ಪರಿಪೂರ್ಣ

ಇಂದು ಗುರುಪೂರ್ಣಿಮೆ.‌ ಯಾರ‌್ಯಾರ ನೆನೆಯೋದು, ನೆನೆಯೋದ ಇರೋದು‌. ಮುಂದೆ ಗುರಿಯೇ ಇಲ್ಲದ ಕಾಲದಲ್ಲಿ ಗುರುವೊಬ್ಬ ಉದಯಿಸಿ ಗುರಿ ತೋರಿರುತ್ತಾನೆ‌.
ಅಷ್ಟಾದರೂ ಮನಸಿಗೆ ಬಂದಂತೆ ನಡೆದುಕೊಂಡು ನರಕಾನುಭವ ಎದುರಿಸಿರುತ್ತೇವೆ.

ಬರೀ ಸುಖ ಕೊಟ್ಟವರು ಗುರುಗಳಾಗುವುದಿಲ್ಲ, ದುಃಖ ಕೊಟ್ಟು ಪಾಠ ಕಲಿಸಿದವರೂ ಮಹಾಗುರುಗಳು. ಅವರನ್ನು ಮರೆಯಲಾಗದು.

ಇಂದು ಗುರು-ಶಿಷ್ಯ ಪರಂಪರೆ ಭಾರತೀಯ ನಾಟ್ಯಶಾಸ್ತ್ರ ಹಾಗೂ ಶಾಸ್ತ್ರೀಯ ಸಂಗೀತದಲ್ಲಿ ಮಾತ್ರ ಉಳಿದು ತನ್ನ ಪಾವಿತ್ರ್ಯತೆ ಕಾಪಾಡಿಕೊಂಡಿದೆ.
ಉಳಿದ ರಂಗಗಳಲ್ಲಿ ಗುರು ನಿಧಾನ‌ ಮಾಯವಾಗಿಬಿಡುತ್ತಾನೆ. ಗುರುಸ್ಮರಣೆಯ ಮಾತೇ ಬರುವುದಿಲ್ಲ.

ಕಾಲೇಜು ಶಿಕ್ಷಕನಾಗಿ ದುಡಿದದ್ದು ಹೊಟ್ಟೆಪಾಡು. ಕಾಲನ ಪ್ರವಾಹದಲಿ ಸಿಕ್ಕವರೆಲ್ಲ ವಿದ್ಯಾರ್ಥಿಗಳು. ಕಲಿತದ್ದು, ಕಲಿಸಿದ ಹೆಗ್ಗಳಿಕೆ. ಆದರೆ ನನ್ನ ಕರ್ನಾಟಕ ಕಾಲೇಜಿನ ಕಲಿಕೆಯಲ್ಲಿ ಎಲ್ಲರೂ ಅಪ್ಪಟ ಗುರುಗಳೇ. 

ಒಬ್ಬರಿಗಿಂತ ಒಬ್ಬರು ಅದ್ಭುತ. ಮರೆಯಲಸಾಧ್ಯ. ಆದರೆ ನಾ‌‌ ಹಾಗಾಗಲಿಲ್ಲವೆಂಬ ಸಣ್ಣ ಕೊರಗು.
ಹೈಸ್ಕೂಲ್ ಶಿಕ್ಷಕರು ಮತ್ತವರ ಬದ್ಧತೆ, ಆ ಕಾಲಘಟ್ಟದ ಹಿರಿಮೆ. ಈಗ ಶಿಕ್ಷಣ ಸಂಪೂರ್ಣ ವ್ಯವಹಾರದ ವ್ಯವಸಾಯ.
ಆಧ್ಯಾತ್ಮ ಜ್ಞಾನದ ವಿಸ್ತಾರದಲೂ ಅನೇಕ ಗುರುಗಳು ನೆನಪಾಗುತ್ತಾರೆ.
ಜಗತ್ತಿನ ಮೊದಲ ಗುರುವಾದ ಕೃಷ್ಣ ಗೀತೆಯ ಬೋಧಿಸಿ ಬದುಕಿನ ವಾಸ್ತವ ಕಟ್ಟಿಕೊಟ್ಟ.

ನಂತರ ಬುದ್ಧ ಮನಸು ಮತ್ತದರ ಸುತ್ತಲಡಗಿದ ಹುತ್ತವ ಬಿಡಿಸಿದ. ಮನೋನಿಗ್ರಹದ ಜಾದೂ ಕಲಿಸಿದ. ಬಸವಾದಿ ಶರಣರ ಕಾಲದ‌ ಅಲ್ಲಮ ಬಯಲಲಿ ಬಯಲನು ಬಿತ್ತಿ ಭಾವನೆಗಳ ಬೆಳಗಿದ.

ನಂತರ ಸಾವಿರಾರು ಸಂತರು, ಸಾಧುಗಳು ಹಿಮಾಲಯದಲಿ‌ ಮತ್ತೆಲ್ಲೋ ಇದ್ದು ಜಗದೊಳಿತಿಗಾಗಿ ತಪೋಗೈದರು.
ಹೀಗೆ ಅಪಾರ ಲೋಕಜ್ಞಾನ ನೀಡಿದ ಕವಿಪುಂಗವರ ನೆನೆಯಿದಿರಲಾದೀತೆ?

ಮನಸೆಂಬ ಮಂಗದ ಬಲೆಯಲಿ ಬೀಳದೆ ಹಿಡಿತದಲಿಟ್ಟುಕೊಳ್ಳಲು ಧ್ಯಾನವೆಂಬ ಅಂಕುಶ ಹಾಕುವ ತುಡಿತ.

ಇರುವ ಸಣ್ಣ ಆಯುಷ್ಯದಲ್ಲಿ ಎಷ್ಟು ಅಂತ ಬರೀ ಪಾಠ ಕಲಿಯೋದು? ಬೇಸರ ಮಾಡಿಕೊಳ್ಳದೇ ಸಹನೆಯಿಂದ‌ ಕಲಿಯಬೇಕು.

ಇಂದು ಗುರುಪೂರ್ಣಿಮೆ ಗಜೇಂದ್ರಗಡ ಮಹಾವೀರ ಆಯುರ್ವೇದ ಕಾಲೇಜಿನ ವಿದ್ಯಾರ್ಥಿಗಳಿಗೆ ಲೆಜೆಂಡರಿ ಟಾಕ್ ಸಿರೀಸ್ ಉದ್ಘಾಟಿಸುವ ನೆಪದಲ್ಲಿ ಮೈಡ್‌ ಮ್ಯಾನೇಜ್ಮೆಂಟ್ ಕುರಿತು ಮಾತಾಡಿ ಭಾವಿ ವೈದ್ಯರುಗಳಿಗೆ ಉತ್ಸಾಹದ ಮಾತುಗಳನ್ನಾಡಲು ಮಿತ್ರ, ಪ್ರಾಚಾರ್ಯ ಡಾ.ಸಿದ್ಧಲಿಂಗೇಶ್ ಕುದರಿ ಕರೆದಾಗ‌ ಖುಷಿಯಿಂದ ಹೋದೆ.

ಓಶೋ ಶಿಷ್ಯತ್ವ ಸ್ವೀಕರಿಸಿರುವ ಡಾ.ಕುದರಿಯವರಿಗೆ ಇನ್ನರ್ ಜರ್ನಿ ಬಗ್ಗೆ ಚನ್ನಾಗಿ ಗೊತ್ತಿದೆ, ಇಬ್ಬರ ವೇವ್ ಲೆಂಗ್ತ್ ಸರಿ ಹೊಂದಿದ್ದು, ಆ ಕ್ರಮದಲ್ಲಿ ಕಾರ್ಯಕ್ರಮವೂ ಇತ್ತು. ನೂರಾರು ವಿದ್ಯಾರ್ಥಿಗಳು ಆಸ್ಥೆಯಿಂದ ಸಂಭ್ರಮಿಸಿದರು.
ನನಗೂ ಥ್ರಿಲ್ ಆಯಿತು. ಸಮಯ ಹೋದದ್ದೇ ಗೊತ್ತಾಗಲಿಲ್ಲ. ಮತ್ತದೇ ಸನ್ಮಾನವನು ಮೀರಿದ ಸಡಗರವದು.

ಬದುಕು ಕಲಿಸಿದ‌‌ ಪಾಠಗಳ ಆಧರಿಸಿ, ಅನುಭವಿಸಿದ ನೋವುಗಳ ಮೇಳೈವಿಸಿ ಲೈಫ್ ಸ್ಕಿಲ್ ಗೆ ಒಂದು ಸ್ವರೂಪ ಕಂಡುಕೊಂಡಿದ್ದೇನೆ.

ಜಾಯ್ ಫುಲ್ ಲಿವಿಂಗ್ ನಿರ್ಭಯ-ನಿರಾಕರಣೆ-ನಿರ್ಲಿಪ್ತ  ತ್ರಿಸೂತ್ರಗಳ ಜಾಡ ಹಿಡಿದು ನೀರಸವಾಗದಂತೆ ಕೇಳುಗರ ಹಿಡಿದಿಡುವ ಸಣ್ಣ ಪ್ರಯತ್ನ.

ಕಣ್ಣಿಗೆ ಕಾಣದ ಗುರುಗಳು ಬೋಧಿಸಿದ ಎಳೆ ಹಿಡಿದು, ನಿತ್ಯ ಹೊಸ ಪಾಠ ಕಲಿಯುತ್ತ ಸಾಗುವುದೇ ಜೀವನ.
ಹೊಸದನು ಕಲಿಯುವ ಉತ್ಸಾಹ ಜೀವಂತವಾಗಿರುವಾಗಲೇ ಬದುಕು ಮುಗಿದು‌ ಮತ್ತೆ ಹೊಸ ಕಲಿಕೆ ಹುಟ್ಟಿರುತ್ತೆ.
ಶ್ರೇಷ್ಟ ಗುರು ತನ್ನಷ್ಟೇ ಶ್ರೇಷ್ಟ ಶಿಷ್ಯನ ಹುಡುಕಾಟದಲಿರುತ್ತಾನೆ.
ಆಗ ಮತ್ತೆ ಈ‌‌ ಹುಡುಕಾಟದ ಪರಂಪರೆ ಮರುಹುಟ್ಟು ಪಡೆಯುತ್ತದೆ.

  *ಸಿದ್ದು ಯಾಪಲಪರವಿ*

Tuesday, July 24, 2018

ಪ್ರೀತಿ-ಪೊಸೆಸ್ಸಿವ್

ಲವ್ ಕಾಲ

*ಪ್ರೀತಿ‌ ಪೊಸೆಸ್ಸಿವ್ ಎಂಬ ಹಿಂಸೆಯಾದಾಗ…*

“ಗಾಢವಾಗಿ ಪ್ರೀತಿಸುತ್ತೀ ನಿಜ, ವಿಪರೀತ ಜೀವ ತಿಂದ್ರೆ ಏನು ಪ್ರಯೋಜನ” ಹೀಗೆ ಅನಿಸಿಕೊಂಡು ಕಳೆದು ಹೋದವರು ಅಸಂಖ್ಯ.

ಹೌದಲ್ಲ ಈ ಭಯಂಕರ ಪ್ರೀತಿ ಅದೆಂತ ಕೆಟ್ಟ ಅಲ್ಲ.
ಸೂಕ್ಷ್ಮವಾಗಿ ಹಚ್ಚಿಕೊಳ್ಳುವ ಈ ಹುಚ್ಚು ಮನಸಿಗೆ ಬೇರೇನೂ ಕೆಲಸ ಇರೋದಿಲ್ಲ. ಬರೀ ಅದೇ ಧ್ಯಾನ. ಆ ಧ್ಯಾನ ಹುಚ್ಚಾಗಬಾರದು.

ಸಾಗರದಷ್ಟು ಪ್ರೀತಿ, ಬೆಟ್ಟದಷ್ಟು ಕಾಳಜಿ ಇದ್ದರೂ ಈ ಪೊಸೆಸ್ಸಿವ್ ಎಂಬ ಕಿರಿ ಕಿರಿ ಜೀವ ಹಿಂಡೋದು ಖರೆ.
ಈ ಸಂಕಷ್ಟ ಅನುಭವಿಸುವ ಜೀವಕೆ ಮಾತ್ರ ಗೊತ್ತು.

ಕಾಳಜಿ ನೆಪದಲಿ ಸದಾ ಕಾಲೆಳೆದು ಕಾಡುವ ಹಿಂಸೆ ಯಾರಿಗೂ ಬೇಡವೆಂಬ ಆಲಾಪ. ಈ ಒಲವ ರಾಗದಲಿ.

ನಿಜವಾದ ಪ್ರೀತಿ ಕೇವಲ ಖುಷಿ ಮತ್ತು ಸ್ವಾತಂತ್ರ್ಯ ಕೊಡಬೇಕು. ಈ ಸುಡುಗಾಡು ಅತಿರೇಕದ ಕರಡಿ ಪ್ರೀತಿಯ ಹಿಂಸೆ ಬೇಡವೇ ಬೇಡವೆಂಬ ತಲೆಸಿಡಿತ, ನಿಲ್ಲದ ಎದೆ ಬಡಿತ.

ಎಲ್ಲಿಗೂ ಹೋಗದಂತೆ, ಯಾರೊಂದಿಗೂ ಮಾತಾಡಬೇಡ ಎಂಬ ನಿನ್ನ ಕರಾರು ನಿಜವಾದ ಪ್ರೀತಿ ಹೇಗಾದೀತು?
ಹಾಗಂತ ಕೇಳಲಾಗುವುದಿಲ್ಲ, ಕೇಳಿದರೆ ನೀ ಕಳೆದು ಹೋಗ್ತಿ ಎಂಬ ತಲ್ಲಣ.

ನನಗೂ ಈ ಪ್ರೀತಿಯೆಂಬ ಜೇನು ಯಾಕೋ ಕಹಿಯಾಗಿ ವಯ್ಕ್ ಅನಿಸಿದೆ.
ನನ್ನ ಕೈಬಿಡು ಮಾರಾಯ, ನೀನು ಬೇಡ ನಿನ್ನ ಈ ಪ್ರೀತೀನೂ ಬೇಡ.
*ನಾ ನನ್ನ ಪಾಡಿಗೆ ನಾ ಆರಾಮ ಅಗಿದ್ದು ಬಿಡುವೆ* ಅನ್ನೋ ಮೊದಲೇ ನನ್ನ ಕೈಬಿಡು ಮಾರಾಯ.

ಹೌದು ನಿನ್ನ ಪ್ರೀತಿ ಅಗಮ್ಯ, ಅಪ್ರತಿಮ ಆದರೆ ನಿನ್ನ ವ್ಯಾಮೋಹ ನನ್ನ ಸ್ವಾತಂತ್ರ್ಯ ಕಿತ್ತುಕೊಂಡಿದ್ದಂತು ಅಪ್ಪಟ ಸತ್ಯ.

ಇದನ್ನು ಬಾಯಿ ಬಿಟ್ಟು ಪ್ರಾಣ ಹೋದರೂ ನಾ ಹೇಳಲ್ಲ , ಹೇಳೋಕು ಆಗಲ್ಲ.
*ನಾನು ಕಣ್ಣು ತಪ್ಪಿಸಿ, ಸುಳ್ಳು ಹೇಳಿ ಓಡಿ ಹೋಗುವ ಮುನ್ನ ನೀನೇ ನನ್ನ ಅರ್ಥಮಾಡಿಕೋ*.

ನನಗೆ ನೀ ಬೇಕು, ನಿನ್ನ ಪ್ರೀತೀನೂ ಬೇಕು ಆದ್ರೆ ಈ ಕಂಡೀಶನ್ ಬೇಡ. ಪ್ರೀತಿ ಕರಾರು ಹಾಕಬಾರದೆಂದು ಗೊತ್ತಿದ್ದರೂ ಯಾಕೆ ಹಿಂಗ್ ಕರಾರು ಹಾಕ್ತಿ. ನಾ ಕಳೆದು ಹೋಗುವ ಮುನ್ನ ನಿನ್ನಷ್ಟಕ್ಕೆ ನೀನೇ ತಿಳಕೋ.

ನಾನು ನಿನಗಾಗಿ ಪುಟ್ಟಾ ಪುರಾ ನಿಯತ್ತಿಲೇ ಅದೀನಿ. ಅದರೂ ನಿನ್ನ ಕರಾರುಗಳು ಬೆಳೀತನ ಹೊಕ್ಕಾವು ಹನುಮನ ಬಾಲದ ಹಾಗೆ.

ನಿನಗಿಷ್ಟ ಆಗೋದು ಮಾಡಲು ನಾನೇನು ಕೀ ಕೊಡೋ ಗೊಂಬೆಯಲ್ಲ. ನನಗೇನಿಷ್ಟ ಅಂತ ನಿನಗೇನು ಗೊತ್ತು?

ಇಷ್ಟಾನಿಷ್ಟಗಳ ಗೋಜು ಬಿಟ್ಟು ಆರಾಮಾಗಿರು. ಓದು,ಬರೀ ನನ್ನ ಉಸಾಬರಿ ಬಿಟ್ಟು ಸ್ವಲ್ಪ ದಿವಸ ನಿನ್ನ ಪಾಡಿಗೆ ನೀನಿರು, ನನ್ನ ಪಾಡಿಗೆ ನಾ ಇರ್ತೀನಿ.

ಮೊದಲು ನಿನ್ನ ಫೋನೆಂದರೆ ಮಧುರ ಮಂಜುಳ ಗಾನ ಆದರೀಗ ಕರ್ಕಶ ಕಿರುಚಾಟದ ಬೋರ್ಗರೆತ.

*ಪ್ರೀತಿ ಎಂಬ ಹಿಂಸೆಯ ಪಂಜರದಿಂದ ಹಾರಿ ಬಿಡು, ಹಾಯಾಗಿ ಹಾರುತಲಿರುವೆ*

ಹರಿಯೋ ನದಿಯೊಳಗ ಈ ಫೋನ್ ಜೋರಾಗಿ ಬೀಸಿ ಒಗೆದು ಹೊರಗ ಓಡಬೇಕೆನಿಸಿದೆ.

*ಸಾಸಿವೆಯಷ್ಟು ಸುಖ ಕೊಟ್ಟು ಸಾಗರದಷ್ಟು ದುಃಖ ಕೊಟ್ಟೆ*.

*ಜುಳು ಜುಳು ಹರಿಯೋ ನದಿ, ಕಿಲ ಕಿಲ ನಗುವ ಮಗುವಿನ ನಗು, ಸಂಜೆ ಮುಂದ ಕೈ ಹಿಡಿದು ನಡೆಯೋ ಹಸಿ ಮದುಮಕ್ಕಳ ನೋಡುತ, ಚಿಲಿ ಪಿಲಿಗುಡುವ ಪಕ್ಷಿಗಳ ಕಲರವ ಕೇಳುತ, ತಣ್ಣನೇ ಬೀಸುವ ಗಾಳಿಗೆ ಮೈಯೊಡ್ಡಿ ಹಾಯಾಗಿ ಇರಬೇಕೆನಿಸಿದೆ.
ಅಂತಹ ಸ್ವಾತಂತ್ರ್ಯದರಮನೆಯಲಿ ಸುಖವಾಗಿರುವೆ ನಿನ್ನ ಪ್ರೀತಿಯ ಸಂಗ ತೊರೆದು, ವ್ಯಾಮೋಹದ ಹಂಗ ಹರಿದು…*

    *ಸಿದ್ದು ಯಾಪಲಪರವಿ*

Thursday, July 19, 2018

My interview in DD

siddu shubhodaya: https://www.youtube.com/playlist?list=PLwQ2ZPoKEyic873-4tvPZW67rxKb7i7md

ಸಂಗಾತ ಹಾಗೂ ಟಿ.ಎಸ್.ಗೊರವರ

ಪ್ರತಿ‌ ಸಂಚಿಕೆಯಲೂ ಹೊಸತನ...

ಅಂದು ಸಂಕ್ರಮಣ ಮೊನ್ನೆ ಸಮಾಹಿತ  ಇಂದು ಸಂಗಾತ

ಕೆಲ‌ ತಿಂಗಳುಗಳ‌ ಹಿಂದೆ ನಮ್ಮೂರು ಕಾರಟಗಿಯಲ್ಲಿ ಕವಿ ಪೀರ್ ಬಾಶಾ ಹಾಗೂ ಟಿ.ಎಸ್. ಗೊರವರ ಸಿಕ್ಕು ತುಂಬ ಮಾತನಾಡಿದರು.
ಮಾತಿನ ಮಧ್ಯೆ ಗೊರವರ ‘ಕೆಲಸ ಬಿಟ್ಟೆ’ ಅಂದಾಗ ಆತಂಕವಾಯಿತು.

ನೌಕರಿಯ ಹಂಗಿನ ಗುಂಗಿನಲಿ ಬದುಕುವ, ರಿಸ್ಕ್ ತೆಗೆದುಕೊಳ್ಳಲು ಹಿಂದೇಟು ಹಾಕುವ ನನ್ನಂತವರಿಗೆ ಹೊಟ್ಟೆಗೇನು ಎಂಬ ಆತಂಕ-ಕಾಳಜಿ ಸಹಜ.

ಹರೆಯದ ಗೊರವರ ಸಂಗಾತ ಪತ್ರಿಕೆಯ ಕನಸು ಹಂಚಿಕೊಳ್ಳುವಾಗ ಮಂಡಾಳ‌ ಒಗ್ಗರಣಿ, ಮಿರ್ಚಿ‌ ತಿಂದಿದ್ದೆವು. ಆತ್ಮವಿಶ್ವಾಸ ಎಲ್ಲಕಿಂತ ದೊಡ್ಡದು. ಒಳ್ಳೆಯದಾಗಲಿ ಎಂದು ಹಾರೈಸಿದೆ.

‘ಹಾಗಾದರೆ ಚಂದಾ ಕೊಡಿ’ ಎಂದ ಪೀರಬಾಷಾ ಮಾತಿಗೆ ಹೂಂಗುಟ್ಟೆ.
ಊರಲ್ಲಿದ್ದಾಗಲೇ ಮೊದಲ ಸಂಚಿಕೆಯ ಪಾರ್ಸಲ್ ತಮ್ಮನ ವಿ.ಅರ್.ಎಲ್. ತಲುಪಿತ್ತು.

ಮನೆಗೆ ಬಂದು ಗಡಿಬಿಡಿಯಲ್ಲಿ ಸಂಚಿಕೆ ಕೈಗಿತ್ತು ಮಾಯವಾದ ನೆನಪು ಹಸಿರಾಗಿಯೇ ಇದೆ.
ಮುಂದೆ ಅದೇ ವೇಗದಲ್ಲಿ‌ ಸಂಗಾತ ಇಡೀ ನಾಡು ತಲುಪಿದ್ದು ಇತಿಹಾಸ.

ಪತ್ರಿಕೆಯಲ್ಲಿ ಕೆಲಸ ಮಾಡಿದ ಗೊರವರ ಅವರಿಗೆ ಕ್ಬಾಲಿಟಿ ಗೊತ್ತು, ಅದೇ ಉನ್ನತ ಗುಣಮಟ್ಟದ ಪ್ರೊಡಕ್ಷನ್.

ಈಗ ಏನೋ ಹೊಸ ಸಾಹಸ ಆರಂಭವಾದರೆ ಬೆಂಗಳೂರು ಕೇಂದ್ರೀಯವಾಗಿದ್ದಾರೆ ಚಂದ ಎಂದು ನಂಬಿದ್ದಾರೆ. ರೀಚ್ ಹಾಗೂ ಪ್ರಚಾರ ಬೇಗ ದೊರಕಬಹುದೆಂಬ ನಂಬಿಕೆಯೋ ಭ್ರಮೆಯೋ ಇದೆ.

ಆದರೆ ಗೊರವರ ಆಯ್ಕೆ ಮಾಡಿಕೊಂಡ ವಿಳಾಸ ಗದಗ ಜಿಲ್ಲೆಯ ಒಂದು ಮೂಲೆಯ ರೊಟ್ಟಿ ಮುಟಗಿಯ ಹಳ್ಳಿ ರಾಜೂರು.

ಬೆಂಗಳೂರು ಕೇಂದ್ರಿತ ಬಯಕೆಯಿಂದ ಹೊರಬಂದು ನಾಡಿನ ಯುವ ಲೈಕ್ ಮೈಂಡೆಡ್ ಸಂಗಾತಿಗಳ ನೆರವಿನೊಂದಿಗೆ, ಹಿರಿಯರ ಮಾರ್ಗದರ್ಶನದಲ್ಲಿ‌ ಸಂಗಾತ ಭರ್ಜರಿ ಸಾಗಿದೆ.

ಇದೊಂದು ಪತ್ರಿಕೆಯಲ್ಲ ಸಾಹಿತ್ಯದ ಕೃತಿ. ಎಲ್ಲ ಪ್ರಕಾರಗಳ ಒಳನೋಟ. ಬರೆಯುವ ಎಲ್ಲರೂ ಅನನ್ಯ ತುಡಿತದ ಸಂವೇದನಾಶೀಲ ಬರಹಗಾರರು.

ತುಂಬಾ ಬೆಲೆಬಾಳುವ ಹೊರಹೊದಿಕೆಯಷ್ಟೇ ಒಳ ಹೂರಣವೂ ಅಷ್ಟೇ ರುಚಿ.

ಕನ್ನಡದ ಓದುಗರಿಗೆ ಅಭಿರುಚಿ ಇದೆ. ಲಂಕೇಶ್ ಪತ್ರಿಕೆ‌ ಆ ಅಭಿರುಚಿಯನ್ನು ಹುಟ್ಟು ಹಾಕಿದೆ.
ಬೇಡವೆನಿಸಿದರೆ ಕಿತ್ತಿ ಬಿಸಾಕುತ್ತಾರೆ ಕೂಡ.
ಗೊರವರ ನಿಮ್ಮ ಹಾದಿ ಸುಂದರವೂ, ಸುಗಮವೂ‌‌ ಆಗಿದೆ.

ಗುಂಪುಗಾರಿಕೆ ಹಾಗೂ ಪಂಥಗಳಿಂದ ರೋಸಿ ಹೋದ ಮನಸುಗಳಿಗೆ ಬದಲಾವಣೆಯ ಭರವಸೆ ಬೇಕಿದ್ದ ಕಾಲದಲ್ಲಿ ಸಂಗಾತ ಬಂದಿದೆ.

ಕಟ್ಟುನಿಟ್ಟಾದ ವ್ಯವಹಾರ ಚತುರತೆ ಇಟ್ಟುಕೊಂಡೇ ಬೆಳೆಯಿರಿ, ಬೆಳೆಸಿರಿ. ನೀವು ತೆಗೆದುಕೊಂಡ ರಿಸ್ಕ್ ಗೆ ನಿಜವಾದ ಬೆಲೆ. ಸಿಗಲಿ.

ಎಲ್ಲಾ ಪಂಥಗಳ‌ ವಿಚಾರಧಾರೆಗೂ ಮನ್ನಣೆ ನೀಡಿ.
ಎಡಬಲಗಳ ಹೊಡೆತದಿಂದ ಪಾರಾಗುವ ಅಗತ್ಯವಿದೆ.

ಮೌಲಿಕವೂ, ಸುದೀರ್ಘವೂ ಆದ ಅಕಾಡೆಮಿಕ್ ಬರಹಗಳ‌‌ ವಿಶಾಲತೆ ಸಂಗಾತದ ಹೆಚ್ಚುಗಾರಿಕೆ.

ಸಾಹಿತ್ಯಾಸಕ್ತರೂ ಓದಲೇಬೇಕಾದ ಸಂಗಾತ.
ಶುಭವಾಗಲಿ ಗೊರವರ…

ಸಿದ್ದು ಯಾಪಲಪರವಿ.

ಹೆಮಿಂಗ್ವೆ ಸಂಗಾತ ಮತ್ತೂ ಬರಹ

ಸಂಗಾತ ಮತ್ತು ಹೆಮಿಂಗ್ವೆ ಮತ್ತೂ ಬರಹ‌

ಈಗ ಸಂಗಾತ ಸಾಹಿತ್ಯ ಪತ್ರಿಕೆಯಲ್ಲಿ ಅರ್ನೆಸ್ಟ್ ಹೆಮಿಂಗ್ವೇನ ಸಂದರ್ಶನದ ಅನುವಾದ ಓದಿದೆ. ಬದುಕು-ಬರಹ ಬೇರೆ ಅಲ್ಲ ಎಂದು ನಂಬಿದ್ದ ನೇರ ಬರಹಗಾರನ ಮಾತುಗಳು ವಿಚಲಿತಗೊಳಿಸಿದವು. ಎಂ.ಎ. ಅಧ್ಯಯನದ ಕಾಲದಲ್ಲಿ ಬರೀ ಓದಿದ ನೆನಪು.

ಆದರೆ ಈಗ ಓದುವದು ಪೂರ್ಣ ಪ್ರಮಾಣದ ಅರಿವಿಗೆ, ಪರೀಕ್ಷೆಗಾಗಿ ಅಲ್ಲ.
ಈಗಲೂ ಬದುಕಿನ ಪರೀಕ್ಷೆ.

ತುಂಬ ಸುದೀರ್ಘ ಎನಿಸುವ ಸಂದರ್ಶನ ಒಂದೇ ಓದಿಗೆ ದಕ್ಕುವುದಿಲ್ಲವಾದರೂ ದಕ್ಕಿಸಿಕೊಳ್ಳುವ ಅನಿವಾರ್ಯತೆಯಿಂದ ಉಸಿರು ಬಿಗಿ ಹಿಡಿದಿ ಓದಿ ದಕ್ಕಿಸಿಕೊಂಡೆ.

ಸಾಹಿತ್ಯದ ವಿದ್ಯಾರ್ಥಿಯಾಗಿ ಬರೀ ಪಾಠ-ಪ್ರವಚಗಳಲಿ ಮುಕ್ಕಾಲು ಆಯುಷ್ಯ ಕಳೆದು ಈಗ ಗಟ್ಟಿಯಾಗಿ ಬರೆಯಲು ನಿರ್ಧರಿಸಿದ ಹೊತ್ತು ಹೆಮಿಂಗ್ವೇ ಸಿಕ್ಕಾಗ ಕಳೆದುಹೋದೆ.

ಎಲ್ಲ ನಿರಾಕರಿಸಿ ಬರೀ ಏಕಾಂತ ಸ್ವೀಕರಿಸಿದ ಈ ಗಳಿಗೆಯಲಿ ಅನೇಕರಿಗೆ ಒಗಟಾಗಿದ್ದೆ. ಬರೀ ಮೊಬೈಲ್ ಮೂಲಕ ದಿನ ಏನಾದರು ಬರೆದು ಸೋಸಿಯಲ್ ಮಿಡಿಯಾದಂತ
ಅನ್ ಸೀರಿಯಸ್ ನಲ್ಲಿ ತೇಲಿ ಬಿಡುವ ಅನಿವಾರ್ಯತೆ.

ಆದರೂ ಇದೇ ಮಿಡಿಯಾದಲಿ ಕೊಂಚ ಸೀರಿಯಸ್ ಇದ್ದವರು ಸಿಕ್ಕಿದ್ದಾರೆ. ಸಿಕ್ಕವರನು ಎಳೆದಾಡಿ, ಕೊಸರಾಡಿ, ಜಗಳಾಡಿ, ತಿದ್ದಿ-ತೀಡಿ ದಕ್ಕಿಸಿಕೊಳ್ಳುವ ಧಾವಂತವೂ ಇದೆ.

ಆಧುನಿಕ ಬರಹದ ಭರಾಟೆಯಲಿ ಬರೀ ಮುಖವಾಡ, ಬದುಕಿಗೂ ಬರಹಕ್ಕೂ ಸಂಬಂಧವೇ ಇಲ್ಲ. ಒಂದು ಸಣ್ಣ ಇರುಸು ಮುರುಸಾಗುವ ಪ್ರತಿಮೆ ಬಳಸಿದರೆ ಸಾಕು ಮಡಿವಂತರು ಮೂಗು ಮುರಿದು, ಮೂಗು ಮುಚ್ಚಿಕೊಂಡು ದೂರ ಸರಿದು ಬಿಡುತ್ತಾರೆ. ಬದುಕಿನ ಅನುಭವಗಳಿಗೆ ಪ್ರಾಮಾಣಿಕ ಅಭಿವ್ಯಕ್ತಿ ಕೊಡಲು ಭಯ. ಇಮೇಜ್ ಕೆಟ್ಟರೆ ಹೇಗೆಂಬ ಸೋಗಲಾಡಿತನ.

“ಅಯ್ಯೋ ಇಷ್ಟೊಂದು ನೇರ ಬರೆದರೆ ಹೆಂಗೆ ಸರ್ “ ಎಂಬ ಕಾಳಜಿ.
ಇನ್ನೇನು ಅಬ್ಬಬ್ಬಾ ಅಂದರೆ ಹತ್ತಾರು ಕಾಲ ಬದುಕಬಹುದು ಈಗಲೂ ಇಮೇಜ್ ಎಂಬ ಭೂತದ ಭಯ.

ಮನಸಾ ಇಚ್ಛೆ ,ಮುಕ್ತವಾಗಿ ಬರೆದು, ಬದುಕಿ ನೂರಾರು ಬರಹಗಾರರನು ಸೃಷ್ಟಿಸಿದ ಮೇಷ್ಟ್ರು ಅಂತವರು ಈಗ ಸಿಗುವುದೇ ಇಲ್ಲ.

ಬರೀ ಜಾತಿ, ಗುಂಪುಗಾರಿಕೆಯ ಮಾಧ್ಯಮಗಳ ಭರಾಟೆಯಲಿ ನಿಜವಾದ ಬರಹಗಾರ ನಾಪತ್ತೆ.
ಬ್ಲಾಗ್, ಸಾಮಾಜಿಕ ತಾಣಗಳ‌ ಆಶ್ರಯಿಸುವ ಅನಿವಾರ್ಯತೆ.

ಸಂಗಾತದಂತಹ ಸಾಹಿತ್ಯ ಪತ್ರಿಕೆ ಗುರುತಿಸಿರುವ ಹೊಸ ಬರಹಗಾರರ ಹುಮ್ಮಸ್ಸನ್ನು ಕಂಡು ಸಂತೋಷವಾಗಿದೆ.
ಸೊಸಿಯಲ್ ಮೀಡಿಯಾದ ಮುಕ್ತ ಅವಕಾಶಗಳಿಂದ ಹೊಸಬರು ವೇಗವಾಗಿ ಬೆಳೆಯುತ್ತಿದ್ದಾರೆ.

ಹಳಬರೂ ಅಲ್ಲದ, ಹೊಸಬರೂ ಅಲ್ಲದ ನನ್ನಂತ ಮದ್ಯಮ ವಯಸ್ಕರಿಗೆ ಅನೇಕ ಸವಾಲುಗಳು.

ಈಗ ಬದುಕಿದಂತೆ ಬರೆಯುವ ಅಗತ್ಯ ಮತ್ತು ಅನಿವಾರ್ಯತೆ.
ಇಲ್ಲದಿದ್ದರೆ ಹೇಳ ಹೆಸರಿಲ್ಲದಂತೆ ಕಾಲನ ಹೊಡೆತದಲಿ ಕಳೆದು ಹೋಗುತ್ತೇವೆ.

ಪ್ರಾಮಾಣಿಕ ಬರಹ ಕೊಡುವ ತೀವ್ರ ಸಂವೇದನೆಯ ರಸಾನುಭವದ ಅನುಭೂತಿಯನು ಅನುಭವಿಸಿ ಖುಷಿಪಡಬೇಕು. ಓಲೈಕೆ, ಮುಜುಗರ ಬಿಟ್ಟು ಇನ್ನೂ ಹೆಚ್ಚು ಪ್ರಾಂಜಲವಾಗಿ ಬರೆಯಬೇಕು.

ಪದ್ಯ,ಗದ್ಯ, ಗಪದ್ಯ, ಕತೆ, ಪ್ರಬಂಧ, ಕಾದಂಬರಿ, ಅಂಕಣಗಳು ಯಾವುದೇ ಪ್ರಕಾರವಿದ್ದರೂ ರಸವತ್ತಾಗಿದ್ದರೆ ಓದುಗರು ಮುಕ್ತವಾಗಿ ಸ್ವೀಕರಿಸಿ ಮೇಲೆತ್ತುತ್ತಾರೆ. ಕ್ವಾಲಿಟಿ ಇರದಿದ್ದರೆ ಯಾವ ಲಾಬಿಯೂ ಕೆಲಸ ಮಾಡುವುದಿಲ್ಲ.

ಹೊಸ ಪ್ರಯೋಗಳ ಮೂಲಕ ನಾವು ತೆಗೆದುಕೊಳ್ಳುವ ರಿಸ್ಕನ್ನು ಜನ ಗೌರವಿಸುತ್ತಾರೆ. ಆಡಿಕೊಳ್ಳುವವರು ಆಡಿಕೊಳ್ಳುತ್ತಾರೆ. ಜೋಡಿಸುವವರು ಜೋಡಿಸಿಕೊಳ್ಳುತ್ತಾರೆ. ಅದನ್ನು ಯಾರೂ ತಡೆಯಲಾಗದು.

ಬಡತನವ ಹಾಸಿ ಉಂಡ ಬೇಂದ್ರೆ, ಕೆ.ಎಸ್. ನರಸಿಂಹಸ್ವಾಮಿ ಪ್ರತಿ ನಿತ್ಯದ ಅನುಭವಗಳ‌ ಕವಿತೆಗಳಾಗಿ ಹಾಡಿ ದುಃಖ ಮರೆತರು.

ಕಲ್ಯಾಣ ಕಾಲದ ಶರಣರು ತಮ್ಮ ಅನುಭವಗಳ ವಚನಗಳ ಮೂಲಕ ಪ್ರಾಮಾಣಿಕವಾಗಿ ದಾಖಲಿಸಿದ್ದರಿಂದ ಆ ಚಳುವಳಿ ಇನ್ನೂ ಜೀವಂತವಾಗಿದೆ.

ಇಂಗ್ಲೆಂಡ್, ಅಮೇರಿಕಾದ ಬರಹಗಾರರಿಗಿಂತಲೂ ಹೆಚ್ಚು ಮುಕ್ತರು ನಮ್ಮ ಶರಣರು.
ಕನ್ನಡದ ದುರಂತ, ವಚನಕಾರರ ನೆರಳಲಿ ಬೆಳೆದ ನಾವು ಸಂಕೋಚದಿಂದ ಹೊರ ಬಂದಿಲ್ಲ.

ಯುವ ಮನಸುಗಳಿಗೆ ಹುರಿದುಂಬಿಸಿ ಬರೆಯಲು ಉತ್ತೇಜಿಸಿ ನಾವೂ ಮುಕ್ತವಾಗಿ ಬರೆಯೋಣ, ಬೆರೆಯೋಣ ಎಂಬ ಮನಸ್ಥಿತಿ ನಮ್ಮದಾಗಬೇಕು.
ಕಟು ವಿಮರ್ಶೆಯನು ಪ್ರಾಂಜಲವಾಗಿ ಸ್ವೀಕರಿಸುವ ಸ್ಪೋರ್ಟಿವ್ ಗುಣಧರ್ಮವಿರಬೇಕು.

ಎಡ-ಬಲಗಳ‌‌ ಅತಿರೇಕ ಸಾಹಿತ್ಯದಲ್ಲಿ ನುಗ್ಗಬಾರದು. ವೈಯಕ್ತಿಕವಾಗಿ ನಮ್ಮ ಸಿದ್ಧಾಂತ ನಮಗೆ ಮುಖ್ಯ. ಆದರೆ ಇನ್ನೊಬ್ಬರ ಸಿದ್ಧಾಂತವನ್ನು ವಿಕಾರವಿಲ್ಲದಂತೆ ವಿಮರ್ಶಿಸಬೇಕು. ಬೇಡವಾದರೆ ಸುಮ್ಮನಿರಬೇಕು.
ನಾವು ಎಡದ ಪರ, ಬಲದ ಪರ ಅನ್ನೋದು ನಮ್ಮ ಗುಣಧರ್ಮದ ಮೇಲೆ ಅವಲಂಬಿತ. ಅದನ್ನು ಸರಿ ತಪ್ಪುಗಳ ಮೂಲಕ ನಾವೇ ಪರಾಮರ್ಶನ ಮಾಡಿ ಒಪ್ಪಿಕೊಳ್ಳಬೇಕು.

ಇನ್ನೊಬ್ಬರು ತಿವಿಯುವವರೆಗೆ ಸುಮ್ಮನಿರಬಾರದು. ಎಸ್.ಎಲ್. ಬೈರಪ್ಪ ಅವರ ಬಲಪರ ನಿಲುವುಗೊತ್ತಿದ್ದರೂ, ಎಡಪರ ಧೊರಣೆಯವರು ಅವರನ್ನು ಓದುತ್ತಾರೆ. ಓದಿನ ಗುಣಧರ್ಮವದು.

ಓದಿ ಟೀಕಿಸಬೇಕು. ಟೀಕಿಸಿದರೂ ತಡೆದುಕೊಳ್ಳಬೇಕು. ಕಟು ವಿಮರ್ಶೆ ಒಪ್ಪಿಕೊಂಡಾಗಿ ದೊಡ್ಡವರಾಗಿ ಬೆಳೆಯುವ ಭರವಸೆ ಹೆಚ್ಚು.

ಗಂಡು-ಹೆಣ್ಣಿನ ಸಂಬಂಧದ ಸೂಕ್ಷ್ಮತೆಯನ್ನು ಉಡಾಫೆ ಮಾಡದೇ, ಅವರ ಪಾಡಿಗೆ ಅವರನ್ನು ಬದುಕಲು ಬಿಡಬೇಕು.
ಹಗುರಾಗಿ ಮಾತಾಡಬಾರದು.
ಜಾತಿ,ಲಿಂಗಗಳ ತರತಮ ಇನ್ನೂ ಅಳಿಯಬೇಕು.

ಶೇಕ್ಸ ಪಿಯರ್, ಎಮರ್ಸನ್, ಥೋರೋ,ಗೈ ದೇ ಮಾಪಸಾ ಇನ್ನೂ ಅನೇಕ‌ ಶರಣರು ನಮ್ಮೊಂದಿಗಿದ್ದು ಕೈ ಹಿಡಿದು ನಡೆಸುತ್ತಾರೆ.‌

ಓದಲು ಬೇಕಾದಷ್ಟು ಮಾದರಿಗಳಿವೆ, ಸ್ವಚ್ಛಂದ ಹಾರುವ ಹಕ್ಕಿಯಂತೆ ಭಾವಕೋಶದಲಿ ವಿಹರಿಸುತ ಬರೆಯುವ ಆತ್ಮಾನಂದ.

“ಬರಹವೆಂಬುದು ಪ್ರೇಯೆಸಿಯೊಂದಿಗೆ ಸುಖಿಸಿದಂತೆ, ಮತ್ತೆ ಮತ್ತೆ ಬೇಕೆನಿಸುವ ಮತ್ತು” ಎಷ್ಟು ಚಂದದ ಸಾಲುಗಳು ಹೆಮಿಂಗ್ವೆ.

ಎಂದೋ‌‌ ದೈಹಿಕವಾಗಿ ಅಗಲಿದ ಲೇಖಕರು, ತಮ್ಮ ಬರಹಗಳ ಮೂಲಕ ಇನ್ನೂ ಇಲ್ಲಿಯೇ ನಮ್ಮೊಳಗೆ ಇದ್ದಾರೆ.

“ನೀನು ಬಾ ಸಖೀ‌, ಬನ್ನಿ ಸಂಗಾತಿಗಳೇ ಬರೆಯುವ, ಹದವಾಗಿ ಬೆರೆಯುವ ಮಿಲನ ಸುಖದಲಿ ಧ್ಯಾನಸ್ಥರಾಗಲು..

ಸಿದ್ದು ಯಾಪಲಪರವಿ.

Wednesday, July 18, 2018

ಹೂಮಳೆಯಲೊಂದು ಪಯಣ

*ಲವ್ ಕಾಲ*

*ಹೂಮಳೆಯಲೊಂದು ಪಯಣ*

ಇಂದು‌‌ ರಾತ್ರಿ ಎಂದಿನಂತೆ ಒಂದು ರಾತ್ರಿ ಆಗಿರಲಿಲ್ಲ.
ನೀ ಹೀಗೇ ಮಾಡಬಹುದೆಂಬ ಊಹೆ ಇರದ ಹೊತ್ತು.

ನಿದ್ರೆ ಗಾಢ ಆದರೆ ನಿಗೂಢ ಅಲ್ಲವಲ್ಲ. ಸಾವಿರಾರು ರಾತ್ರಿಗಳ‌ ಪಯಣದಲಿ ತರೇ ವಾರೀ ನಿದ್ದೆಯ ಕಂಡವಳು ನೀ.
ಗೊರಕೆ, ಸಣ್ಣನೆ ಮುಲುಕಾಟ, ಬರೀ‌ ನಿಚ್ಚಳ, ಎಚ್ಚರ, ಅರನಿದ್ರೆ, ಮಬ್ಬು, ಇನ್ನೂ ಬಗೆ ಬಗೆಯ ನಿದ್ದೆಯ ಸಹಿಸಿಕೊಂಡವಳೂ ನೀನೇ.

ಬೇರೆ ದೇಶದಲ್ಲಾದರೆ ಡೈವೊರ್ಸ ಮಾಡಿಬಿಡುತಿದ್ದರೇನೋ‌ ಈ ವಿಪರೀತ ನಿದ್ದೆಯ ಕಂಡು. ಆದರಿದು ಇಂಡಿಯಾ ಎಲ್ಲವನ್ನೂ ತಾಳಿಕೊಳ್ಳುವ ಗುಣ, ಅದಕೆ ಕೊರಳಲೊಂದು ತಾಳಿ ಬೇರೆ.

ನಿನಗೂ ಒಮ್ಮೊಮ್ಮೆ ನನ್ನ ಹುರಿದುಂಬಿಸಬೇಕೆಂಬುದು ಸಹಜ. ಆದರೆ ಈ ಪರಿ…

ಮಬ್ಬುಗತ್ತಲಲಿ ಎಚ್ಚರಾದಾಗ ಬರೀ ಬಯಲು ಮೈಯಲ್ಲ ಬಟಾ ಬಯಲು. ಖಾಸಗಿ ಲೋಕವೇ ಹಾಗೆ ಫುಲ್ ಆಫ್ ಪ್ರೀಡಮ್. ಅದರಲ್ಲೂ ಸಂಗಾತಿಗಳ ಏಕಾಂತಕೆ ಯಾವ ಹಂಗು, ಸಂಕೋಚವೂ ಸುಳಿಯುವುದಿಲ್ಲ.

ಪ್ರತಿಯೊಬ್ಬ ಸಂಗಾತಿಗಳ ರಾತ್ರಿ ಒಂದೊಂದು ಬಗೆ. ಭಿನ್ನ, ವಿಭನ್ನ.
ನಿಸ್ಸಂಕೋಚ, ನಿರ್ಲಜ್ಯ, ನಿರ್ವಿಕಾರ, ಮುಕ್ತ, ಬಟ್ಟೆ, ಬರೆ, ರೀತಿ-ನೀತಿಗಳ ಹಂಗಿಲ್ಲದ ಸಾಮ್ರಾಜ್ಯ.
*ಇದು ಕೇವಲ ಸಂಗಾತಿಗಳೊಂದಿಗೆ ಮಾತ್ರ*.

ಇಂದು ಅಂತಹ ವಿಸ್ಮಯ ನೀ ಕೊಟ್ಟೆ, ನಾ ಅನುಭವಿಸಿದೆ.
ಮೊದಲ ರಾತ್ರಿಯ ನೆನಪಾಗಿರಬೇಕು.

ಕಣ್ಣು ಬಿಟ್ಟಾಗ ಮೈ ತಣ್ಣಗೆನಿಸಿತು, ಇದೇನಿದು ಹಸಿ ಅಂದುಕೊಂಡೆ. ಮೆತ್ತನಾನುಭವ, ಸುಮಧುರ ವಾಸನೆ.
ಕೈಯಾಡಿಸಿದಾಗ ಹೂ ಸ್ಪರ್ಶ.

ನಾನು ಹೂ ರಾಶಿಯಲಿ ಮುಳುಗಿ ಹೋಗಿದ್ದು ಕೊಂಚ ತಡವಾಗಿ ಅರಿತೆ.

ಮೈಮೇಲೆ ಹೂಗಳ ಹಾವು ಹರಿದಾಟ. ಹಿಂದೆ ಧಾವಿಸಿದ ನೆನಪ ಹರೆಯ.

ಮುಂದೆ ಆಗುವುದೆಲ್ಲ ಅಂದುಕೊಂಡುದುಕಿಂತ ಭಿನ್ನ ನಡೆದ ಸಂಭ್ರಮದ ಸುಮಧುರ ಕ್ಷಣಗಳ ಸುರಿಮಳೆ…

ಬದುಕಿಗೊಂದು ಹೊಸತನ ತುಂಬಲು ನೀ ಮಾಡಿದ ಹೊಸತನಕೆ ಖುಷಿಯಾಯಿತು.

ಭಾವ ತೀವ್ರತೆ ಕಳಕೊಂಡರೆ ಬದುಕು‌ ಜಡ, ನೀರಸ. ‘ಅಯ್ಯೋ‌ ನಮಗೆ ವಯಸ್ಸಾಯ್ತು ಮಂಡಿ ನೋವು, ಬಿ.ಪಿ., ಶುಗರ್’ ಎಂದು ಗೋಳಿಡುತ್ತ ಸ್ವಯಂ ಮುದುಕರೆಂದು ಸಾರಿಕೊಂಡು ಸುಖ ಮುಂದೂಡುವ ಹುನ್ನಾರ.

ಕಾಮಕೂ ಮೀರಿದ ಸುಖ ಅನುಭವಿಸುವ ಅವಕಾಶ ಸಿಗುವುದೇ ಮಧ್ಯೆ ವಯಸಲಿ. ದೇಹ ಉದ್ರೇಕಗೊಳ್ಳದಿದ್ದರೂ ಮನಸು ಯಾಕೆ ಮುದುಡಬೇಕು.

ಪ್ರೀತಿ-ಪ್ರೇಮ-ಪ್ರಣಯದ ಮಾತುಗಳ ಮೂಲಕ ಜೀವಚೈತನ್ಯ ಅರಳಿಸಿಕೊಳ್ಳಬೇಕು. ಮುಖ ಸಿಂಡರಿಸಿಕೊಂಡು ಅಪರಿಚಿತರಾಗಿ ಬಾಳುವ ಕರ್ಮ ಯಾಕೆ?

ದಕ್ಕಿದಷ್ಟು ಪಡೆದುಕೊಂಡು ಮಜ ಮಾಡಬೇಕೆಂಬ ಸತ್ಯವ ನೀ ನೆನಪಿಸಿದೆ.‌

ಹರೆಯಕೆ ಮುಪ್ಪಿಲ್ಲ, ಸಾವೂ ಇಲ್ಲ. ನಾವೂ ಅಷ್ಟೇ  ಜೀವಂತವಾಗಿರಲು ಹೊಸ ರೀತಿ ಬದುಕಿ ಸದಾ ಸಂಭ್ರಮಿಸೋಣ…

*ಸಿದ್ದು ಯಾಪಲಪರವಿ*

ಇಳಿಹೊತ್ತ ಹರೆಯ

*ಇಳಿಹೊತ್ತ ಹರೆಯ*

ನಿನ್ನ ನೆನಪಿನೊತ್ತರದಲಿ ತತ್ತರಿಸಿ ಅವಳ‌
ಮೊಲೆಗಳ ಹಿಡಿದು ಬಾಯಿಗಿಟ್ಟು
ಬೆಚ್ಚಗೆ ಮಲಗಿ ಮೈ
ಮರೆತಾಗ ಮನದ ತುಂಬ
ನಿನ್ನ ನೆನಪಿನೋಕಳಿಯ ಅಮೃತಧಾರೆ

ಮರೆಯಲಾರದ ತಲ್ಲಣಕೀಗ ಇಲ್ಲ
ಇಲ್ಲಿ ಪರಿಹಾರ ನಿನಗೆ ನೀ ಸರಿಸಾಟಿ

ರಾತ್ರಿ ಹಗಲಾಗಿ ಬಾನ ತುಂಬ
ಬರೀ ನಿನದೇ ಬೆಳಕು ಚುಕ್ಕಿ
ಚಂದ್ರಮರ ಬೆರಗಲಿ

ಹಗಲು ಸೂರ‌್ಯನ ತಾಪದಲೂ
ಛಳಿ ನಿನ್ನ ಬಿಗಿದಪ್ಪಿದ ನೆನಪಿಗೆ
ಹಗಲಿನ ಛಳಿ ರಾತ್ರಿಯ ಬಿಸಿಗೆ
ಬಳಲಿ ಕನಲಿ ಕನವರಿಸುತಿದೆ
ಮನ ನೆನಪ ಸವಿಗಾನದ
ಆಲಾಪದಲಿ

ಬಿಗಿದಪ್ಪಿದ ಹಿಡಿತದಿ ಕಿತ್ತಿ ಹೋದ
ಉಡುಗೆಗಳ‌ ಬಂಧನ ಕಳಚಿದ
ಮೇಲೆ ಎಲ್ಲವೂ ಬಟಾ ಬಯಲು

ಮುದುಡಿದ ಅಂಗಾಂಗಳಿಗೆ ಸೆಟೆದು
ನಿಲುವ ಹುಮ್ಮಸ್ಸು ಜೋಲು ಬಿದ್ದು
ನಲುಗುವ ಮೊಲೆಗಳು ಪುಟಿದೆದ್ದಾಗ
ಹರೆಯದ ಹಂಗಾಮಾ

ಮಾಗಿದ  ದೇಹದಲಿ ಹೊಸತನದ
ಉನ್ಮಾದದಲೆಗಳ ಅಬ್ಬರದ ಸದ್ದು

ಅರೆನಿದ್ರೆಯಲಿ‌ ಅಡಗಿ‌ ಮಲಗಿದ
ಶಿಶ್ನಕೀಗ ಹದಿಹರೆಯದ ಬೆದೆ
ಬುಸುಗುಡುವ ಹಾವಾಗಿ ಒಳ
ನುಸುಳುವ ಧಾವಂತ

ಮಾಗಿದ್ದು ಬರೀ ದೇಹ ಜೋತು
ಬಿದ್ದ ಮೊಲೆಗಳಿಗೆ
ನೆರೆತ ಕೂದಲಿಗೆ ಕಪ್ಪಿಟ್ಟ
ಕಣ್ಣುಗಳಿಗೆ ನಡುಗುವ ತೊಡೆ
ಗಳಿಗೀಗ ನವ ಚೈತನ್ಯದ ಸೊಬಗು

ಅರಳಿ ಪುಟಿದೇಳುವ ರಭಸಕಿಲ್ಲ
ಮುಪ್ಪು ರೋಗ ಸಾವು

ಈ ಇಳಿ ಹೊತ್ತಲೂ ನಾವೀಗ
ನಾವಾಗಿ ಉಳಿದಿಲ್ಲ ಸಾವು
ನೋವು ಲೆಕ್ಕಕೂ ಇಲ್ಲ

ಇದು ಮನಸಿನ ಕೂಟ ಒಲವಿನ
ಆಟ ಭಾವನೆಗಳ ದೊಡ್ಡಾಟ ಕಾಮ
ದಾಚೆಗಿನ‌ ಮೈಮಾಟ

ಹಾಲು-ಜೇನ ಸವಿಮಿಲನದ
ಸಂಕ್ರಮಣ ಉಗಾದಿ ದೀಪಾವಳಿ
ಶ್ರಾವಣ
ಬಾಳ ಗಾನ ನಮ್ಮೀ
ಪಯಣ.

   *ಸಿದ್ದು ಯಾಪಲಪರವಿ*

ವಿಚಾರಪತ್ನಿಗೊಂದು ಓಲೆ

ವಿಚಾರಪತ್ನಿಗೊಂದು ಓಲೆ

ನೂರೆಂಟು ವಿಸ್ಮಯಗಳ ಪಯಣದಲಿ
ನಿನಗೂ ನಿನ್ನದೇ ಆದ ಅಸ್ತಿತ್ವ
ನೀ ವಿಚಾರಧಾರೆಗಳ
ಸಾಮರಸ್ಯದ ಸಂಗಾತಿ

ಭಾವನೆಗಳ ಮಾಲೀಕತ್ವದ
ಹೊಣೆಗಾರಿಕೆ ನಯ ನಾಜೂಕಿನ
ಜರೂರಿಲ್ಲ
ಮುಚ್ಚುಮರೆಯಿಲ್ಲದ ಅವಿನಾಭಾವ
ಬಂಧನ
ಆಸ್ತಿಪಾಸ್ತಿ ವಾರಸುದಾರಿಕೆಯ
ಜಂಜಡದ ಹಂಗಿಲ್ಲ

ದೇಹದಾಚೆಗಿನ ಮಾತಿಗೂ ಮೀರಿದ
ದಿವ್ಯ ಮೌನ ಎಲ್ಲವನು ಮುಕ್ತವಾಗಿ
ಹಂಚುವ ಬೆಳಕಿನ
ಹಂಗಿಲ್ಲದ ಬಯಲಬೆತ್ತಲೆ

ಎಲ್ಲಿಯೂ ಯಾರಿಗೂ ಹೇಳಲಾಗದ
ಸಂಗತಿಗಳ ನಿವೇದನೆಯ ತಂಗುದಾಣ

ನಿತ್ಯವೂ ಹಂಚಿಕೊಂಡಾಲೇ
ಮೈಮನಗಳಲಿ ಇನ್ನಿಲ್ಲದ
ಸಮಾಧಾನ

ಮಾನ್ಯತೆಯ ಮೀರಿದ ಅನುಸಂಧಾನ
ಸಾಕಲ್ಲ ಈ ಅಪ್ರತಿಮ ಬಂಧನಕೆ

ಗುಟ್ಟಾದ ಸಂಗತಿಗಳ ರಟ್ಟು ಮಾಡದೇ
ಎಲ್ಲವನು ನಿಭಾಯಿಸುವ ತಾಕತ್ತು

ಆದರೂ ಇದು ವಿಚಿತ್ರ ಅನುಭವಗಳ
ಸಹಸ್ಪಂದನ ಹಿಡಿಯಲೂ  ಆಗದ
ಬಿಡಲೂ ಬಾರದ
ಅಪವಿತ್ರವಲ್ಲದ ಸಂಸಾರ

ಮುಲುಗದೇ ನಲುಗದೇ ಬರೀ
ಮಾತುಮಂಥನಗಳ ಸಮಭೋಗದ
ಸವಿಸುಖದ ಉತ್ತುಂಗದ ಪಯಣ

ಹೀಗೆ ಸಾಗುತಲಿರಲಿ
ಮಂಥನಗಳ
ಮಹಾಮಸ್ತಕಾಭಿಷೇಕ
ಆಚಾರದ ಗೊಡವೆಯಿಲ್ಲದ
ವಿಚಾರಸತಿಯ ಸಮಾಗಮ.

---ಸಿದ್ದು ಯಾಪಲಪರವಿ