ಶಾಲೆ, ಅಂಗಡಿ, ಕಾರಟಗಿ ಬೇಸರವಾದಾಗಲೆಲ್ಲ. ಅಕ್ಷರಗಳು ತಲೆಗೆ ಪ್ರವೇಶಿಸಲು ನಿರಾಕರಿಸಿದಾಗಲೆಲ್ಲ ಓಡಿ ಹೋಗುತ್ತಿದ್ದೆ, ಏನೋ ನೆಪ ಮಾಡಿಕೊಂಡು ಕುಷ್ಟಗಿಗೆ.. .
ಕಾಶಮ್ಮ ಅಮ್ಮ ಸಿದ್ದ ನಿನ್ನ ಸಾಲಿ ಅಂದರೆ ಅಜ್ಜ ಅಷ್ಟೇ ರಾಗವಾಗಿ ಸಿದ್ಧನ ಶಾಲೆ ಪಡಸಾಲಿ ಅನ್ನುತ್ತಿದ್ದ, ನಾನು ಶಾಲೆ ಕಲಿಯುವುದಿಲ್ಲ ಎಂದು ಅಜ್ಜನಿಗೆ ಖಾತ್ರಿ ಆಗಿತ್ತು. ಏನೇ ಆಗಲಿ ಸಿದ್ಧನ ಪಾಲಿಗೆ ಓದು ಒಕ್ಕಾಲು, ಬುದ್ದಿ ಮುಕ್ಕಾಲು ಅಂದರೆ ತಪ್ಪಾಗುವುದಿಲ್ಲ ಎಂದು ಶಹಬ್ಬಾಸಗಿರಿ ನೀಡಿ ಧೈರ್ಯ ತುಂಬಿದ.
ಅಜ್ಜಾ ನೀಟಾಗಿ ಕೋರ್ಟಗೆ ಹೋಗುವಾಗ ಜೊತೆಗೆ ಹೋಗುತ್ತಿದ್ದೆ. ಅಜ್ಜನ ಸಹಾಯಕರು ಬಂದಾಗ ಏನೇನೋ ವಿಚಿತ್ರ ಪ್ರಶ್ನೆ ಕೇಳುತ್ತಿದ್ದೆ. ನನ್ನ ವಾಚಾಳಿತನದಿಂದಾಗಿ ನಾನು ತುಂಬಾ ಜಾಣನಿರಬಹುದೆಂದು ಅವರೆಲ್ಲ ಭಾವಿಸಿದ್ದರು.
ತುಂಬಾ ಗೌರವದಿಂದ ಕೋರ್ಟಗೆ ಬರುವ ನ್ಯಾಯಧೀಶರು ಬಹಳ ದೊಡ್ಡ ವ್ಯಕ್ತಿ ಅನಿಸುತ್ತಿದ್ದರು. ಅಜ್ಜಾ ನಾನು ವಕೀಲ ಆಗಬೇಕಾದ್ರ ಏನು ಮಾಡಬೇಕು. ಪೋಲಿಸರು ಸೆಲ್ಯೂಟ್ ಹೊಡೆಯುವದನ್ನು ನೋಡಿದರೆ ನನಗೂ ಜಡ್ಜ ಆಗಬೇಕು ಅನಿಸುತ್ತೆ ಅಂದೆ.
ಶಾಲೆಗೆ ಹೋಗದೆ, ಕಾಲೇಜು ಶಿಕ್ಷಣ ಪಡೆಯದೇ ಜಡ್ಜ್ ಆಗಲು ಸಾಧ್ಯನಾ ಅಂದೆ, ಭಲೆ ಮಗನೇ ಅಂದ. ಪರೀಕ್ಷೆಯಲ್ಲಿ ಪಾಸಾಗದಿದ್ದರೂ ಬಾಯಿ ಮಾತಿನ ಪ್ರಶ್ನೆ ಕೇಳಿ ನನ್ನನ್ನು ಯಾಕೆ ಪಾಸು ಮಾಡುವುದಿಲ್ಲ ಎಂದು ವಾದಿಸಿದೆ.
ಪರೀಕ್ಷೆಯ ಭಯ ನನ್ನಿಂದ ದೂರಾಗಲೇ ಇಲ್ಲ. ಪರೀಕ್ಷೆ ಬರೆಯದೇ ಪಾಸಾಗಬೇಕು ಎಂದು ಬಯಸಿದೆ.
ಪರೀಕ್ಷೆ ಬಂದರೆ ಸಾಕು ಜ್ವರ ಬರುತ್ತಿತ್ತು. ಜ್ವರದ ನೆಪದಿಂದ ಏನೋ ಗೀಚಿ ಬರುತ್ತಿದ್ದೆ. ಶಿಕ್ಷಕರು ಕರುಣೆ ತೋರಿ ಪಾಸು ಮಾಡುತ್ತಿದ್ದರು. ಏಳನೇ ತರಗತಿಯ ಮುಲ್ಕಿ ಪರೀಕ್ಷೆ ಮೇಷ್ಟ್ರು ಕೃಪೆಯಿಂದ ಪಾಸಾದೆ. ೮,೯ ದಾಟಿದೆ. ಆದರೆ ಹತ್ತರಲ್ಲಿ ನನ್ನ ಆಟ ನಡೆಯಲಿಲ್ಲ.
ಬದುಕಿನ ಯಶಸ್ಸಿನ ಮರ್ಮವೂ ಅರ್ಥ ಆಗಲಿಲ್ಲ. ಗೆಳೆಯರು ಗಂಭೀರವಾಗಿ ಓದಿ, ಪಾಸಾಗುವುದು ನನ್ನ ಮೇಲೆ ಯಾವುದೇ ಪರಿಣಾಮ ಬೀರಲಿಲ್ಲ. ಮನಸು ಶಾಲೆ ಶಿಕ್ಷಣದ ವಿಷಯಕ್ಕೆ ಕಲ್ಲಾಗಿ ಹೋತು. ತುಂಬಾ ವಾಚಾಳಿ ಇದ್ದುದರಿಂದ ಜಾಣ ಎಂದು ಎಲ್ಲರೂ ಹೋಗಳುತ್ತಿದ್ದದು ಕೂಡಾ ನನ್ನ ನೋವನ್ನು ದೂರಾಗಿಸಿತು. ದಡ್ಡನಾದರೂ ಎಲ್ಲರೂ ಪ್ರೀತಿಸುತ್ತಿದ್ದರಿಂದ ಶಾಲೆ ಕಲಿಯುವುದು ಗಂಭೀರ ಎನಿಸಲಿಲ್ಲ.
ಸಾಂಪ್ರಾದಾಕ ಶಿಕ್ಷಣವಿಲ್ಲದೆ ಯಶಸ್ಸು ಸಾಧ್ಯವಿಲ್ಲ ಎಂಬ ಕಿಡಿ ನುಂಗತೊಡಗಿದೆ. ಮುಂದೊಂದು ದಿನ ತೋಂಟದಾರ್ಯ ಮಠದ ಅಜ್ಜರನ್ನು ಕೇಳಿದೆ ಸಾಂಪ್ರದಾಯಿಕ ಶಿಕ್ಷಣವಿಲ್ಲದೆ, ಯಾವುದಾದರೂ ಕ್ಷೇತ್ರದಲ್ಲಿ ನಿರಂತರ ಪ್ರಯತ್ನ ಮಾಡಿದರೆ ಯಶಸ್ಸು ಸಾಧ್ಯ ಆದರೂ ಪದವಿ ಪಡೆದರೆ ಒಳ್ಳೆಯದು ಅಂದರು ಹಾಗಾದರೆ ಯಾವ ಕ್ಷೇತ್ರ ನನಗೆ ದಕ್ಕಬಹುದು ಎಂದು ಆಲೋಚಿಸಿದೆ. ಉತ್ತರ ಹೊಳೆಯಲಿಲ್ಲ.
ಸರಿ ಈಗ ಕನ್ನಡ ಸಾಹಿತ್ಯ, ಭಾಷೆಯಲ್ಲಿ ಆಸಕ್ತಿ ಇದೆ, ಅದನ್ನೆ ಕಲಿತರಾಯಿತು ಎಂದು ತೀರ್ಮಾನಿಸಿದೆ. ಕುಷ್ಟಗಿಯಯಲ್ಲಿ ದಸ್ತಗೀರಿ ಮಾಷ್ಟ್ರು ಅಂತ ಇದ್ದರು. ಅವರು ಶಿಕ್ಷಕ ವೃತ್ತಿಯೊಂದಿಗೆ ಯಂತ್ರ, ತಂತ್ರಗಳ ವಿದ್ಯೆಯನ್ನು ತಿಳಿದಿದ್ದರು, ಊರ ಹೊರಗೆ ಬಯಲು ಕಡೆ ಹೋಗಿ ಬರುವಾಗ ಅಜ್ಜ ಅವರ ಮನೆಗೆ ಹೋಗಿ ಬರುತ್ತಿದ್ದೆ. ಸಣ್ಣಗೆ ನನ್ನ ವಿಷಯವೂ ಪ್ರಸ್ತಾಪವಾಯಿತು.
ನನಗೆ ಮಂತ್ರಿಸಿ ತಾಯತ ನೀಡಿದರು. ಅಜ್ಜ ಸ್ನಾನ ಮಾಡಿಸಿ ತಾಯತ ಕಟ್ಟಿದ. ಒಟ್ಟಾರೆ ಯಾವುದೇ ಮಂತ್ರವೋ, ತಾಯ್ತವೋ ನನ್ನನ್ನು ಉದ್ದಾರ ಮಾಡಿದರೆ ಸಾಕು ಅಂದುಕೊಂಡೆ. ಎಡಿಯೂರು ಸಿದ್ದಲಿಂಗೇಶನಿಗೆ, ಮನೆ ದೇವ್ರು ಹಳ್ಳದ ಬಸವೇಶ್ವರನಿಗೆ ಮುಡುಪು ಕಟ್ಟಿದರೆ ನಾನು ಪಾಸ್ ಆಗಬಹುದು ಎಂದರು. ಇಬ್ಬರಲ್ಲಿಯೂ ಬೇಡಿಕೊಂಡೆ. ಒಂಟಿಯಾಗಿ ಅಳಲು ಶುರು ಮಾಡಿದೆ.
ಸಾರ್ವಜನಿಕವಾಗಿ ಸದಾ ನಸುನಗುತ್ತಾ, ನಗಿಸುತ್ತಾ ಇರುತ್ತಿದ್ದ ನಾನು ಒಂಟಿತನದಲಿ ನೋವು, ಅಪಮಾನ ಅನುಭವಿಸುತ್ತಿದ್ದೆ. ಎಲ್ಲ ಇದೆ ಆದರೆ ಶಿಕ್ಷಣ ಇಲ್ಲದಿದ್ದರೆ ಹೇಗೆ ಎಂಬ ನಿರಾಶೆ.
ವಿದ್ಯೆಯಿಲ್ಲದವನ ಮುಖ ಹದ್ದಿಗಿಂತಲೂ ಕಡೆ ಎಂಬ ಸರ್ವಜ್ಞನ ಸಾಲುಗಳು ಹಿಂಸೆ ಅನಿಸಿ ಕನ್ನಡಿ ನೋಡಿಕೊಂಡೆ, ಆದರೆ ನಾನು ಹದ್ದಿನಂತೆ ಇಲ್ಲ ಬಿಡು ಎಂದು ಸಮಾಧಾನ ಪಟ್ಟುಕೊಂಡೆ.
ಕವಿತೆ, ಕತೆ, ಸಿನಿಮಾ ಹೀಗೆ ಎಲ್ಲ ಕಡೆ ಬಳಕೆಯಾಗುತ್ತಿದ್ದ ಪದಗಳೊಂದಿಗೆ ನನ್ನನ್ನು ಸಮೀಕರಿಸಿಕೊಂಡು ನೋಡುತ್ತಿದ್ದೆ. ಎಲ್ಲಿಯಾದರೂ ಪರಿಹಾರ ಸಿಗಬಹುದೆಂಬ ಹುಚ್ಚು.
ಕರಿದಾರ, ತಾಯ್ತ, ಮಂತ್ರಗಳು ಫಲಿಸಲಿಲ್ಲ. ದೇವರು, ಧರ್ಮ, ಸಂಪ್ರದಾಯಗಳಿಗೆ ಅರ್ಥವಿಲ್ಲ ಎನಿಸಿತು. ಬರುಬರುತ್ತಾ ಒಳಗೊಳಗೆ ನಾಸ್ತಿಕನಾದೆ ಆಸ್ತಿಕತೆಯ ಸೋಗಿನಲ್ಲಿ. ಎಲ್ಲ ಗುಡಿಗುಂಡಾರಗಳಿಗೂ, ಅಲೆದೆ. ಕೊಳ್ಳದ ಅಮರೇಶ್ವರ, ಯಾಪಲಪರವಿ ಬಸವಣ್ಣ, ಎಡೆಯೂರು ಸಿದ್ಧಲಿಂಗೇಶ ಯಾರಾದರೂ ನನ್ನನ್ನು ಕಾಪಾಡಿದರೆ ಸಾಕು ಎನಿಸುತ್ತಿತ್ತು. ನಿದ್ದೆ ಹತ್ತುವವರೆಗೆ ಎನೇನೋ ಆಲೋಚಿಸುತ್ತಿದ್ದೆ.
No comments:
Post a Comment