*Crazy star and his past era: ವಿ.ರವಿಚಂದ್ರನ್*
*Happy Birthday To You Ravichandran*
ಹುಡುಗರು, ಹುಡುಗಿಯರು, ಅಷ್ಟೇ ಅಲ್ಲ ಮಹಿಳೆಯರು ಹಾಗೂ ಮುದುಕರಿಗೆ ಹೊಸ ಪ್ರೇಮಲೋಕ ತೋರಿಸಿದ ನಟ, ಸಿನಿತಂತ್ರಜ್ಞ ಕ್ರೇಜಿಸ್ಟಾರ್ ರವಿಚಂದ್ರನ್.
ಸಿನಿಮಾ ಹೀಗೂ ಇರಬಹುದೆಂದು ತೋರಿಸಿದ ತೇಲುಗಣ್ಣ ರಸಿಕ. ಇಡೀ ಬದುಕನ್ನೇ ಸಿನಿಮಾ ನಶೆಯಲ್ಲಿ ಕಳೆದ ಕ್ರಿಯೇಟಿವ್ ಜೀವಿ.
ಹೆಣ್ಣಿನ ಸೌಂದರ್ಯವನ್ನು ಭಿನ್ನ ಆಯಾಮಗಳಲ್ಲಿ ಸಿನೆಮಾಸ್ಕೋಪ್ ತರೆಯ ಮೇಲೆ ಉರುಳಾಡಿಸಿದಾಗ ಅಬ್ಬಾ! ಬೆವತವರ ಸ್ಥಿತಿ ಕೇಳೋದು ಬೇಡವೇ ಬೇಡ.
ಇಂತಹ ಮಾಂತ್ರಿಕನನ್ನು ನೋಡುವ ಕನಸು ಕೊರೆಯುತ್ತಲೇ ಇತ್ತು. ಆದರೆ ಅದ್ಹೇಗೆ ಸಾಧ್ಯ.
ನಾ ನಟನೂ ಅಲ್ಲ, ಸಿನಿ ಪತ್ರಕರ್ತನೂ ಅಲ್ಲ.
ಕನಸು ಹತ್ತಾರು ವರ್ಷ ಜತನವಾಗಿಯೇ ಇತ್ತು.
ಎಂಟು ವರ್ಷಗಳ ಹಿಂದೆ ಆ ಕನಸನ್ನು ನನಸಾಗಿಸಿದವರು ನಟ ಮೂಗು ಸುರೇಶ್.
ರವಿಚಂದ್ರನ್ ಮನೆ ಒಳಗೆ ದೂಡಿ ಮಾಯವಾದರು.
ನನ್ನ ಕಣ್ಣುಗಳನ್ನು ನಾನೇ ನಂಬದ ಸ್ಥಿತಿ. ಆದರೂ ಸಾವರಿಸಿಕೊಂಡು ಮಾತನಾಡಿದೆ, ಮನಬಿಚ್ಚಿ.
ಆ ನೆನಪು ಅಷ್ಟಕ್ಕೇ ಮುಗಿಯಲಿಲ್ಲ. ಎರಡು ವರ್ಷಗಳ ಹಿಂದೆ ಅನುವಾದಿತ ಕಾದಂಬರಿ *ಒಂದು ಬಿರುಗಾಳಿಯ ಕಥೆ* ಬಂದ ಮೇಲೆ ಮತ್ತೊಮ್ಮೆ ನಾನೇ ನೇರವಾಗಿ ಮಾತನಾಡಿದೆ.
ಬಿಡುಗಡೆಯಾದ *ಅಪೂರ್ವ* ಸಿನೆಮಾ ಕುರಿತು ಹೇಳುವ ಅಗತ್ಯವೂ ಇತ್ತು.
ರಾತ್ರಿ ಕೆಲವು ಗೆಳೆಯರೊಂದಿಗೆ ಮನೆ ಸೇರಿದೆ. ಅಪೂರ್ವ ಯಾಕೆ ಜನರಿಗೆ ತಲುಪಲಿಲ್ಲ ಎಂಬುದ ಹೇಳಿದೆ. ಆದರೂ ಸಿನೆಮಾ ನಿರಾಕರಿಸಿದ ಪತ್ರಕರ್ತರ ಬಗ್ಗೆ ಅವರಿಗೆ ಬೇಸರವೂ ಇತ್ತು.
ನನ್ನ ಅಭಿಪ್ರಾಯಗಳನ್ನು ರವಿ ಆಲಿಸಿ, ತಮ್ಮ ಬೇಗುದಿ ಹೇಳಿಕೊಂಡರು.
' *ಜನ ಇನ್ನೂ ಮೇಲಾದರೂ ನಾನು ಹೊಕ್ಕಳು ತೋರಿಸಲಿ ಎಂದು ಬಯಸುವದು ಸರೀನಾ?*' ಎಂದರು.
*ಹೌದು ಅದು ನೀವು ಹುಟ್ಟಿಸಿದ ಅಭಿರುಚಿ, ಜನ ಅದನ್ನೇ ನಿರೀಕ್ಷೆ ಮಾಡುತ್ತಾರೆ. ಅಪೂರ್ವದಂತಹ ಪ್ರಯೋಗಕ್ಕೆ ಕಾಲ ಕೂಡಿ ಬಂದಿಲ್ಲ* ಎಂಬ ವಾದವನ್ನು ಅರ್ಧ ಒಪ್ಪಿದರು.
ಕಾಮ, ಹೆಣ್ಣು, ಪ್ರಬುದ್ಧ ಮನುಷ್ಯ, ಇಳಿ ವಯಸ್ಸಿನ ತಾಕಲಾಟಗಳನು ಮುಕ್ತವಾಗಿ ಮಾತನಾಡಿದರು.
ಅವರೀಗ ಮಾಗಿದ್ದಾರೆ.
ವಯೋಮಾನಕ್ಕೆ ತಕ್ಕಂತೆ ಸಿನೆಮಾ ಇರಲೆಂದು ಬಯಸುತ್ತಾರೆ. ಆದರೆ ಕಾಲ ಬದಲಾಗಿದೆ. ಅದಕ್ಕೆ ತಕ್ಕಂತೆ ನೋಡುಗರೂ ಬದಲಾಗಿದ್ದಾರೆ. ಅದನ್ನು ಅವರು ಅರಿಯಬೇಕು.
ಹೆಣ್ಣಿನ ಸೌಂದರ್ಯವನ್ನು ಕಣ್ಣಿಗೆ ರಾಚಿ, ಮನದಲಿ ಕಾಮನೆಗಳು ಅರಳುವಂತೆ ಮಾಡಿ, ಎಷ್ಟೋ ಮಹಿಳೆಯರು ಗುಟ್ಟಾಗಿ ತಮ್ಮನ್ನು ಆರಾಧಿಸುವ ಮನಸ್ಥಿತಿ ನಿರ್ಮಿಸಿದ ನಿಜವಾದ ರೋಮ್ಯಾಂಟಿಕ್ ಹೀರೋ *ರವಿಚಂದ್ರನ್*.
ಮೊನ್ನೆ ಯಾರೋ ಮಹಿಳೆ ಇತ್ತೀಚಿನ ನನ್ನ ಹೊಸ ಕವನ ಸಂಕಲನ *ಪಿಸುಮಾತುಗಳ ಜುಗಲ್* ಓದಿ ನಿಸ್ಸಂಕೋಚವಾಗಿ ರವಿಚಂದ್ರನ್ ಹಾಡುಗಳಿಗೆ ಹೋಲಿಸಿ ಸಂಭ್ರಮಿಸಿದರು.
ಆಗೀಗ ಚಾಟ್ ಮಾಡುತ್ತ ನನ್ನನ್ನು ಪ್ರೀತಿಯಿಂದ ಗೌರವಿಸುವ ಹೀರೋ ಸರಳತೆ ಬಗ್ಗೆ ನನಗೆ ಅಭಿಮಾನವಿದೆ.
ಇಂದು ರವಿಚಂದ್ರನ್ ಹುಟ್ಟು ಹಬ್ಬಕ್ಕೆ ಎಲ್ಲ ರಸಿಕ ಹೃದಯಗಳ ಪರವಾಗಿ ಒಲವಿನಿಂದ ಹಾರೈಸುತ್ತೇನೆ.
*ಸಿದ್ದು ಯಾಪಲಪರವಿ*
No comments:
Post a Comment