*ನೀ ಬರೀ ಮಾಯೆಯೆಲ್ಲ*
ಮನವ ಕದಡಿ ದೇಹ ಕೆಡಿಸಿ ಭಾವ
ವಿಷಮಿಸಿದಡೆ ಮಹಾ ಮಾಯೆ
ಮನವ ಅರಳಿಸಿ ದೇಹ ವಿರಮಿಸಿ
ಭಾವ ಸದ್ಭಾವವಸಗಿಸುವ ನೀ
ಮಾಯೆಯಲ್ಲ
ತನು-ಮನ
ಒಪ್ಪಿಸಿದ ನಂಬಿದ ಜೀವ
ತೊಟ್ಟ ಉಡಿಗೆಯ ಇಟ್ಟ ಹೆಸರ
ಕಟ್ಟಿಕೊಂಡ ಭವದ ಹಂಗ ಬದಲಿಸಿ
ಬೆರೆತ ನಿನ್ನ ನಿಸ್ಸಂಗ ಸುಖಕೆ ಬೆಲೆ
ಕಟ್ಟಲಾದೀತೆ ?
ಅವ್ವನ ಒಡಲು ಅಕ್ಕನ ಒಲವಿನ
ಕಡಲಲಿ ತೇಲಿಸಿ ಲಾಲಿ ಹಾಡಿ
ನಲುಮೆಯ ಸಂಗಾತಿಯ ತೆರದಿ
ಭಾವನೆಗಳ ತೆರೆ ಏರಿಳಿತದಿ ಆಡುವ
ಸುಖದಾಟಕೆ ದಣಿವಿದ್ದೀತೆ ?
ಉಸಿರಿನ ಬಿಸಿಯಲಿ ಬಿಗಿ ಬಂ
ಧನದಿ ಬೆರೆತು ಬಯಕೆಗಳ ತೀರಿಸಿ
ಸುಖದ ಸಿರಿಯಲಿ ಕಾಪಿಡುವ
ಮಿಲನ ಸುಖವ ಬರೀ ನಿರ್ಲಜ್ಯ
ಕಾಮವಿಕಾರ ಎನಲಾದೀತೆ ?
ಕೂಗಿದ ಕರೆಗೆ ಓಡಿ ಬೆಂಬತ್ತಿ
ಬೇಕು-ಬೇಡಗಳ ತೀರಿಸಿ
ಸಹಜಾನಂದದಲಿ ಪರಮಾನಂದ
ಧೇನಿಸುತ ಸಮಾಧಿ ಚರಮ ಸುಖದ
ಅನುಭಾವಕೆ ಚಪಲ ಎನಲಾದೀತೆ ?
ಬಿಡು ಎಂದಾಗ ಅರೆಕ್ಷಣ
ಯೋಚಿಸದೇ ಬಿಟ್ಟು ಬಿಸಾಕುವ
ನಿರ್ಲಿಪ್ತ ಮನೋಭಾವಕೆ ಮನ
ಕರಗದೇ ಕಟುಕಾದೀತೆ ?
ನಿಸ್ವಾರ್ಥ ಪ್ರೇಮದನುಸಂಧಾನದಲಿ
ಬರೀ ಸುಖ ಅಲ್ಲ ದೇವನಾನಂದದ
ಹುಡುಕಾಟವಿದೆ ಮಿಲನವೆಂಬುದು ಕೈ
ಕಾಲುಗಳ ಮುಲುಕಾಟ ನವರಂದ್ರಗಳ
ಮಿಸುಕಾಟವೂ ಅಲ್ಲ
ಅದರಾಚೆಗಿನ ಆತ್ಮಗಳ ಮೆರವಣಿಗೆ
ಎಂದೋ ಆದ ನಿಶ್ಚಿತಾರ್ಥಕೆ ಇಂದು
ನಡೆಯುವ ಕಲ್ಯಾಣ ಮಹೋತ್ಸವ
ಮೆರವಣಿಗೆಯ ಗದ್ದಲವಿಲ್ಲದ ವಾದ್ಯಗಳ
ಸದ್ದಿಲ್ಲದ ಮಂತ್ರ ಘೋಷಣೆಯಿಲ್ಲದ
ಆಡಂಬರದ ಪಿತಾಂಬರವಿಲ್ಲದ ಬೆಳ್ಳಿ
ಬಂಗಾರಗಳ ಥಳುಕಿಲ್ಲದ
ದೇವಾನುದೇವತೆಗಳ ಸಮ್ಮುಖದಿ ಕಾಡ
ಬೆಳದಿಂಗಳ ನೆರಳಲಿ ಪಿಸುಮಾತುಗಳ
ನಿನಾದದಲಿ
ಒಲವ ಸಪ್ತ ಪದಿ ತುಳಿದು
ಸವಿಜೇನಗುಟುಕಿಸಿ ತೋಳ
ಬಂಧನದ ಚಪ್ಪರದಲಿ ಮೈಛಳಿ
ಬಿಟ್ಟು ಬೆಚ್ಚಗೆ ಮಲಗಿದ ಸಂಗದಿ
ಹುಟ್ಟಿದ ಭಾವ ಹಸುಳೆಗಳ ನಿಶಬ್ದ
ಶಬ್ದಗಳಿಗೆ ಸೂತಕವಿಲ್ಲ ಮಡಿ
ಮೈಲಿಗೆಯ ಸೋಂಕಿಲ್ಲ
ಬೆಳೆಯುತ್ತ ಬೆಳೆಯುತ್ತ ಬೆಳೆಯುವ
ಕನಸುಗಳ ಕೂಸುಗಳಿಗೆ ಸಾವೂ
ಇಲ್ಲ ಕೇಡೂ ಇಲ್ಲ
ಅರಿವಿನ ಅಕ್ಷರದ ಮಾಲೆಗಳ ಪೋಣಿಸಿ
ಧಾರಣ ಮಾಡಿದವರ ಮೈಮನಗಳಲಿ
ಜ್ಞಾನ ಪರಿಮಳ ಸುಗಂಧದ
ಘಮಲು
ಸುವಾಸನೆಯ ಕಂಪಿನ
ಇಂಪಿನ ಕಂಪು ಸಾವಿಲ್ಲದ ಈ
ಸುಖವ ಮಾಯೆ ಅನಲಾದೀತೆ ?
ನೀ ಮಾಯೆಯಲ್ಲ
ನಾ ಮಾಯವಾಗಿಲ್ಲ.
*ಸಿದ್ದು ಯಾಪಲಪರವಿ*
No comments:
Post a Comment