*ಬರಹ-ಬದುಕು-ಬದುಕೇ ಬರಹ: ಡಾ.ನಾ.ಮೊಗಸಾಲೆ*
ಕರಾವಳಿಯ ಪುಟ್ಟ ಹಳ್ಳಿ ಕಾಂತಾವರದಲ್ಲಿ ವೃತ್ತಿ ಜೀವನ ಆರಂಭಿಸಿದ ಮೊಗಸಾಲೆ, ವೃತ್ತಿಯಿಂದ ಆಯುರ್ವೇದ ವೈದ್ಯರು ಪ್ರವೃತ್ತಿಯಿಂದ ಬರಹಗಾರರು.
ಬರೆಯುವದೆಂದರೆ ಸುಮ್ಮನೇ ಬರೆಯುವದಲ್ಲ, ಭಿನ್ನವಾಗಿ ವಿಭಿನ್ನವಾಗಿ. ಕಥೆ, ಕವಿತೆ, ಕಾದಂಬರಿ, ವೈದ್ಯಕೀಯ ಲೇಖನ, ವಿಮರ್ಶೆ ಹೀಗೆ ಸಾಹಿತ್ಯದ ಎಲ್ಲ ಜನಪ್ರಿಯ ಪ್ರಕಾರಗಳನ್ನು ಕರಗತ ಮಾಡಿಕೊಂಡ ಹೆಗ್ಗಳಿಕೆ.
ಸಂಘಟಿಕ ಬರಹಗಾರನೂ ಆಗುವುದು ಕಠಿಣ. ಆದರೆ ಮೊಗಸಾಲೆ ಅಪರೂಪ ಎನಿಸುವಂತಹ ಸಂಘಟಿಕರು. ದೂರದ ಹಳ್ಳಿಗೆ ಕನ್ನಡದ ದಿಗ್ಗಜರೆಲ್ಲ ಬರಲಿ ಎಂಬ ಹಿರಿಯಾಸೆಯಿಂದ *ಕಾಂತಾವರ ಕನ್ನಡ ಸಂಘ* ಸ್ಥಾಪಿಸಿದರು.
ಮುದ್ದಣ ಸ್ಮಾರಕ ಪ್ರಶಸ್ತಿ ಆರಂಭಿಸಿ ನಾಡಿನ ಕವಿಗಳಿಗೆ ದನಿಯಾಗಿ ಧ್ವನಿಸಿದರು.
ನಿರಂತರತೆ ಮೊಗಸಾಲೆಯವರ ಹಿರಿಮೆ. ಯಾವುದೇ ಕಾರಣಕ್ಕೆ ನಿಲ್ಲಿಸದ ಛಲ.
ಕನ್ನಡ ಸಂಘದ ಚಟುವಟಿಕೆ, ಹೊಟ್ಟೆ ಪಾಡಿಗೆ ವೈದ್ಯಕೀಯ ವೃತ್ತಿ ಇಟ್ಟುಕೊಂಡರೂ ತಮ್ಮೊಳಗಿರುವ ಲೇಖಕನನ್ನು ಜತನದಿಂದ ಕಾಪಾಡಿದರು.
ವಿನೂತನ ರೀತಿಯ ವಿಷಯ ನಿರೂಪಣೆಯ *ನನ್ನದಲ್ಲದ್ದು* ಕಾದಂಬರಿ ವಿಮರ್ಶಕರ ಗಮನ ಸೆಳೆದು, ಓದುಗರನ್ನು ಬೆಚ್ಚಿಸಿತು.
ಮಾನವೀಯ ಸಂಬಂಧಗಳು, ಮನುಷ್ಯನನ್ನು ಅನಗತ್ಯ ಆಳುವ ಕಾಮಕ್ಕೆ ಹೊಸ ವ್ಯಾಖ್ಯ ಬರೆದರು.
ಕಾಮವೆಂದರೆ ಮೊಗಸಾಲೆಯವರಿಗೆ ಜೀವಚೈತನ್ಯ. ಜೀವನೋತ್ಸಾಹ. ವಾಸ್ತವದಲ್ಲಿ ಕಾಮಕ್ಕೆ ಬೆಚ್ಚಿ ಬೀಳುವ ಮನುಷ್ಯ ಅಂತರಂಗದಲಿ ಆರಾಧಿಸುತ್ತಾನೆ.
ವೈದ್ಯರಾಗಿ ಕಾಮದ ಚೈತನ್ಯವನ್ನು ಭಿನ್ನ ಆಯಾಮದಲ್ಲಿ ನೀರೂಪಿಸಿದ ಅಥೆಂಟಿಸಿಟಿ.
ಅನುಭವಿಸಿದ ಆರ್ಥಿಕ ಮುಗ್ಗಟ್ಟನ್ನು ಅನಗತ್ಯ ವೈಭವೀಕರಿಸದ ಸಂತೃಪ್ತ ಬದುಕು. ಬರವಣೆಗೆಗೆ ಯಾವುದೂ ಅಡ್ಡಿಯಾಗದಂತೆ ಕಾಪಿಟ್ಟುಕೊಂಡರು.
ಬರೆಯುವ ತುಡಿತ, ಬರೆದದ್ದು ಓದುಗರಿಗೆ ವ್ಯವಸ್ಥಿತವಾಗಿ ತಲುಪಿಸುವ ಉತ್ಸಾಹ.ಎಲ್ಲವೂ ಅನನ್ಯ.
ಐವತ್ತು ವರ್ಷಗಳ ಪಯಣದಲಿ ಸುಮಾರು *ಹದಿನೈದು ಸಾವಿರ ಪುಟಗಳಷ್ಟು* ಮೌಲಿಕವಾದ ಕೃತಿ ಪ್ರಕಟಿಸಿದ್ದು ಸಣ್ಣ ಸಾಧನೆಯಲ್ಲ.
ವಿಶ್ವವಿದ್ಯಾಲಯ ಪ್ರಾಧ್ಯಾಪಕರಾಗಿ ಈ ಕೆಲಸ ಮಾಡಿದ್ದರೆ ಆ ಮಾತು ಬೇರೆ.
ಯಾವ ಪದವಿಯನ್ನೂ ಪಡೆಯದೇ ವೃತ್ತಿಯಿಂದ ಯಶಸ್ವಿ ವೈದ್ಯರಾಗಿದ್ದುಕೊಂಡು, ಧೋ ಎಂದು ಮಳೆ ಸುರಿಯುವ ಕರಾವಳಿ ಕಾಡಲ್ಲಿ ಹಳೇ ಮನೆಯ ಕಂದೀಲು ಬೆಳಕಲ್ಲಿ ಅಕ್ಷರ ಬಳ್ಳಿ ಹಬ್ಬಿಸಿದ್ದು ನೆನೆದರೆ ಮನಸಿಗೆ ಪುಳಕ.
ಶಕ್ತಿ ಕೇಂದ್ರಗಳಿಂದ ದೂರವಿದ್ದರೂ ಎಲ್ಲರೂ ಕಾಂತಾವರಕ್ಕೆ ಬರಲಿ ಎಂಬ ಉದ್ದೇಶದಿಂದ ಕನ್ನಡ ಸಂಘ ಸಶಕ್ತಗೊಳಿಸಿದವರು.
ಕಾಂತಾವರಕೆ ಬಾರದ ಸಾಹಿತಿಗಳೇ ಇಲ್ಲ. ಕಾರಂತರ ಆದಿಯಾಗಿ ಎಲ್ಲರೂ ಮೊಗಸಾಲೆ ದಂಪತಿಗಳ ಆತಿಥ್ಯ ಸವಿದಿದ್ದಾರೆ.
ಅವರ ಪತ್ನಿ *ಶ್ರೀಮತಿ ಪ್ರೇಮಾ* ಬಂದ ಅತಿಥಿಗಳಿಗೆ ನಿರಂತರ ಊಟ ಹಾಕಿದ ಅನ್ನಪೂರ್ಣೆ.
ಮೊಗಸಾಲೆ ಅವರಿಗೆ ಸಂಸಾರ ನಿರ್ವಹಣೆಯ ಭಾರ ಬೀಳದಂತೆ ಮೂರು ಮಕ್ಕಳ ಲಾಲನೆ ಮಾಡುವುದರೊಂದಿಗೆ, ಆತಿಥ್ಯ ನೋಡಿಕೊಂಡ ಕರುಣಾಮಯಿ.
ಅವರ ಕಾದಂಬರಿಯಲಿ ಹರಿದಾಡುವ ಪಾತ್ರಗಳ ಗ್ರಾಮ ಸೊಗಡು, ದೇಸಿಯತೆ, ಜೀವನ್ಮುಖತೆ ನಮ್ಮೆದುರು ಅನುಸಂಧಾನಗೈಯುತ್ತವೆ.
ತಮ್ಮ ಸಾಮಿಪ್ಯಕ್ಕೆ ಬಂದ ಪ್ರತಿಯೊಬ್ಬರನ್ನು ಕಾದಂಬರಿ ಪಾತ್ರಗಳ ಮೂಲಕ ಮೊಗಸಾಲೆ ಹಿಡಿದು ಕಟ್ಟಿ ಹಾಕಿದ್ದಾರೆ.
ಅವರ ಕೃತಿಗಳನ್ನು ಆಸ್ಥೆಯಿಂದ ಓದಿ ಪ್ರೋತ್ಸಾಹದ ಮಾತುಗಳನ್ನಾಡಿದ ಮೊದಲ ವಿಮರ್ಶಕಿ.
ಅವರ ವೈದ್ಯಕೀಯ ಲೇಖನಗಳು ಕೂಡ ರೋಗನಿರೋಧಕ ಸೂತ್ರಗಳು. ಆ ಲೇಖನಗಳಲ್ಲಿಯೂ ಕ್ರಿಯಾಶೀಲತೆ ಢಾಳಿಸುತ್ತದೆ.
ಪಳಗಿದ ಲೇಖಕನಿಗೆ ಇಂಗದ ದಾಹ. ಇವರ ಕೃತಿಗಳು ಇಂಗ್ಲಿಷ್, ಮರಾಠಿ, ತೆಲುಗು,ಹಿಂದಿ ಭಾಷೆಗಳಿಗೆ ಹೋಗಿ ಹೆಸರು ಮಾಡಿದರೂ ಯಾಕೋ ಪ್ರಶಸ್ತಿಗಳು ದೂರ ಸರಿದಿವೆ. ಅದಕೆ ಕಾರಣ ಹುಡುಕುವ ಗೋಜಿಗೆ ಹೋಗದೇ, ಲಾಬಿ ಮಾಡದೇ ನಿರ್ಲಿಪ್ತವಾಗಿ ಮೊಗಸಾಲೆ ಬರೆಯುತ್ತಲೇ ಇದ್ದಾರೆ.
ಇವರ ಕೃತಿಗಳ ಕುರಿತು ಅಧ್ಯಯನಶೀಲ ವಿಮರ್ಶಾ ಕೃತಿಗಳು ಪ್ರಕಟವಾಗಿದ್ದು ಅರ್ಥಪೂರ್ಣ ಗೌರವ.
*ಬರಹಗಾರರ ಕಾರ್ಖಾನೆ ಕಾಂತಾವರ*
ತಮ್ಮಂತೆ ಅನೇಕರು ಬರೆಯಲೆಂಬ ತುಡಿದಿಂದ
ಕಾಂತಾವರ ಕನ್ನಡ ಸಂಘದ ಮೂಲಕ ನೂರೆಂಟು ಹೊಸ ಬರಹಗಾರರನ್ನು ಬೆಳಕಿಗೆ ತಂದ ಔದಾರ್ಯ.
ಮುದ್ದಣ ಕಾವ್ಯ ಪ್ರಶಸ್ತಿ ಪಡೆದ ಅನೇಕರೀಗ ಹೆಸರಾಂತ ಕವಿಗಳು. ಯಾವುದೇ ಫಲಾಪೇಕ್ಷೆ ಇಟ್ಟುಕೊಳ್ಳದೇ ಪ್ರಾಂಜಲ ಮನಸ್ಸಿನಿಂದ ಹೊಸ ತಲೆಮಾರಿನ ಬರಹಗಾರರನ್ನು ತಮ್ಮ ಮಾತಗಳ ಮೂಲಕ ಹುರಿದುಂಬಿಸುತ್ತಾರೆ.
*ಮುನಿಸಿಕೊಂಡ ಪುರಸ್ಕಾರಗಳು*
ಕನ್ನಡ ಸಂಘದ ಸಾಂಸ್ಥಿಕ ಕೆಲಸ, ವೈಯಕ್ತಿಕ ಸಾಹಿತ್ಯ ಕೃಷಿಗೆ ದೊರಕಲೇಬೇಕಾದ ಮನ್ನಣೆ ಮೊಗಸಾಲೆ ಅವರಿಗೆ ದಕ್ಕದೇ ಇರುವುದಕ್ಕೆ ಕಾಲವೇ ಉತ್ತರಿಸಬೇಕು.
ರಾಜ್ಯೋತ್ಸವ ಪ್ರಶಸ್ತಿ ಹೊರತು ಪಡಿಸಿ ಬೇರಾವ ಪ್ರಶಸ್ತಿಗಳು ಕಾಂತಾವರದ ಕಡೆ ಯಾಕೋ ತಲೆ ಹಾಕಲಿಲ್ಲ. ಆ ಸಣ್ಣ ಬೇಸರ ನನಗಂತೂ ಇದೆ.
*ಅಲ್ಲಮಪ್ರಭು ಪೀಠ*
ಕಲ್ಯಾಣ ಕರ್ನಾಟಕದ ಶರಣರ ಅನುಭಾವದ ಪರಿಚಯ ಕರಾವಳಿಯಲಿ ಇಲ್ಲ ಎಂಬ ಅನುಮಾನವಿತ್ತು. ಆದರೆ ಮೊಗಸಾಲೆ ಅವರು ಅಲ್ಲಮಪ್ರಭು ಪೀಠದ ಮೂಲಕ ವಚನಾನುಸಂಧಾನದಲಿ ನಿರತರಾಗಿದ್ದಾರೆ.
ಬುದ್ಧನ ನಂತರ ಈ ನಾಡು ಕಂಡ ಮಹಾನ್ ದಾರ್ಶನಿಕ ಅಲ್ಲಮ.
ಬಸವಣ್ಣನ ವೈಚಾರಿಕ ಚಳುವಳಿಯ ಭರದಲ್ಲಿ ಅಲ್ಲಮನ ಆಧ್ಯಾತ್ಮ ಸಾಧನೆಗೆ ಮಂಕು ಕವಿದದ್ದು ನಿಜ.
ಆದರೆ ಡಿ.ಆರ್.ನಾಗರಾಜ, ಲಂಕೇಶ್, ಗಿರಡ್ಡಿಯವರು ಇತ್ತೀಚೆಗೆ ಅಲ್ಲಮನ ವ್ಯಕ್ತಿತ್ವದ ಮೇಲೆ ಬೆಳಕು ಚಲ್ಲಿದವರು.
ಈಗ ಅಲ್ಲಮ ಕರಾವಳಿಯಲಿ ಅರಳುತ್ತಿದ್ದಾನೆ.
ಅದೂ ಕಾಂತಾವರದ ಕಾನನದ ತುದಿಯಲ್ಲಿ.
ಮೂರುವರೆ ಎಕರೆ ವಿಶಾಲ ಪ್ರದೇಶದಲ್ಲಿ ಮೊಗಸಾಲೆ ಅಲ್ಲಮನ ಅನುಭವ ಮಂಟಪ ಸೃಷ್ಟಿಸಿದ್ದಾರೆ.
ಅವರ ಕನಸು ಬರೀ ಕನಸಾಗಲು ಬಸವಾದಿ ಶರಣರು ಬಿಡುವುದಿಲ್ಲ. ಬಿಡಬಾರದು ಕೂಡ.
ಅಲ್ಲಮ ಪೀಠ, ಕಾಂತಾವರ ಕನ್ನಡ ಸಂಘ ಹಾಗೂ ಮೊಗಸಾಲೆ ಅವರ ಒಟ್ಟು ಸಾಧನೆ ಪರಿಗಣಿಸಿ ಪದ್ಮ ಪುರಸ್ಕಾರ ಅಥವಾ ಕೇಂದ್ರ ಸಾಹಿತ್ಯ ಅಕಾಡೆಮಿಯ ಪುರಸ್ಕಾರ ದೊರಕಬೇಕು.
ಪ್ರಶಸ್ತಿ, ಪುರಸ್ಕಾರಗಳು ವ್ಯಕ್ತಿಯ ಯೋಗ್ಯತೆಯ ಮಾನದಂಡವಲ್ಲವಾದರೂ ಬೇಕೆನಿಸುವುದು ಸಹಜ.
*ಕಾರಟಗಿಯಿಂದ ಕಾಂತಾವರಕೆ*
ಬಯಲು ಸೀಮೆಯ ಬಿಸಿಲ ನಾಡ ಕಾರಟಗಿಯಿಂದ ನನ್ನ ಪಯಣ ಆರಂಭವಾಗಿದ್ದು ಇಡೀ ಲೋಕ ಸಂಚಾರ ಸಾಗಿಯೇ ಇದೆ.
ನನ್ನ ಲೋಕ ಸಂಚಾರದಲಿ ಅನೇಕರನು ಕಂಡು ಸಂಭ್ರಮಿಸಿದ್ದೇನೆ. ಬರಹಗಾರನಾಗಿ, ಲೈಫ್ ಸ್ಕಿಲ್ ತರಬೇತುದಾರನಾಗಿ ವ್ಯಕ್ತಿಗಳನ್ನು ಆಸ್ಥೆಯಿಂದ ಗಮನಿಸುತ್ತೇನೆ.
ಈ ಹುಡುಕಾಟದಲಿ ತುಂಬ ಖುಷಿ ಕೊಟ್ಟವರಲಿ ಡಾ.ಮೊಗಸಾಲೆ ಪ್ರಮುಖರು.
ಮೂರು ದಶಕಗಳ ಹಿಂದೆ ಓದಿದ್ದ *ನನ್ನದಲ್ಲದ್ದು* ನನ್ನನ್ನು ಕಾಡುತ್ತಲೇ ಇತ್ತು. ಅವರನ್ನು ಕಾಣುವ ಕುತೂಹಲ ಕೂಡ ಇತ್ತು.
ಎರಡು ವರ್ಷಗಳ ಹಿಂದೆ ಬಂಗಾರಮಕ್ಕಿಯ ಸಾಂಸ್ಕೃತಿಕ ಜಾಗತಿಕ ಸಮಾವೇಶದಲ್ಲಿ ಭೇಟಿ ಆಗಿ ಮಾತಿಗೆ ಸಿಕ್ಕರು.
ಮತ್ತೆ ಇತ್ತೀಚೆಗೆ ಪ್ರಜಾವಾಣಿಯಲ್ಲಿ ಅವರ ಸಾಹಿತ್ಯ ಗ್ರಾಮದ ಕುರಿತ ಬರಹ ಓದಿ ಫೋನಾಯಿಸಿದೆ. ಅಲ್ಲಮ ಪೀಠದ ಕಾರ್ಯಕ್ರಮದ ಉಪನ್ಯಾಸಕ್ಕೂ ಹೋದೆ.
ಅಲ್ಲಮನ ಅನುಗ್ರಹ ಕಾಂತಾವರಕೆ ಕೈ ಬೀಸಿ ಕರೆದಂತಾಯಿತು.
ಹತ್ತಾರು ಸುತ್ತಿನ ಮಾತುಕತೆ, ಶುಭೋದಯ ಕರ್ನಾಟಕದ ನನ್ನ ಸಂದರ್ಶನ ನೋಡಿದ ಹಿರಿಯ ಶರಣಜೀವಿ ಚಂದ್ರಕಾಂತ ಬೆಲ್ಲದ ಅವರು ಅಲ್ಲಮಪ್ರಭು ಪೀಠದ ಜವಾಬ್ದಾರಿ ನಿರ್ವಹಿಸಲು ಪರೋಕ್ಷವಾಗಿ ಕೇಳಿಕೊಂಡರು.
ದೂರದ ಕಾಂತಾವರ ಏನು, ಹೇಗೆ, ಎತ್ತ ಅನಿಸಿದರೂ ಪ್ರೀತಿಯ ಹಕ್ಕೊತ್ತಾಯಕೆ ಕಟ್ಟು ಬಿದ್ದು, ಮೊಗಸಾಲೆ ಅವರ ಕನಸು ನನಸಾಗಿಸಲು ಒಪ್ಪಿಕೊಂಡೆ.
ಮೊಗಸಾಲೆ ಅವರ ಬದ್ಧತೆ, ಚೈತನ್ಯ ನನ್ನಲ್ಲಿ ಖಂಡಿತವಾಗಿ ಇಲ್ಲವೇ ಇಲ್ಲ.
ಕಾಣದ ಕೈಯೊಂದು ಹಿಡಿದು ಕಟ್ಟಿ ಹಾಕಿದೆ. ಒಳ್ಳೆಯತನ, ಸದುದ್ದೇಶ ಇದ್ದರೆ ಒಳ್ಳೆಯದಾಗುತ್ತದೆ. ಇಲ್ಲದಿರೆ ಇಲ್ಲ. ಚಿಂತಿಸಲು ನಾವ್ಯಾರು?
ಆದರೂ ಮಾಡುವ ಉತ್ಸಾಹ ತುಂಬಿ ಕಾಪಾಡಲು ಮೊಗಸಾಲೆಯವರ ಒಳ್ಳೆಯತನವೂ ಇದೆ.
ಈಗ ಅಲ್ಲಮಪ್ರಭು ಪೀಠದ ಗೌರವ *ಯೋಜನಾ ನಿರ್ದೇಶಕನ* ಹೊಣೆಗಾರಿಕೆ. ಗೆದ್ದರೆ ಮೊಗಸಾಲೆ ಹಾಗೂ ಅಲ್ಲಮ ಕಾರಣ. *ಸೋತರೆ ಸಂಪೂರ್ಣ ನಾನೇ*.
ಆದರೆ ಇಲ್ಲಿ ನಿರ್ವಿಕಾರವಾಗಿ ದುಡಿದಾಗ ಸೋಲುವ ಮಾತೇ ಇಲ್ಲ.
ಈಗ ಡಾ.ನಾ.ಮೊಗಸಾಲೆ ಅವರಿಗೆ ವಜ್ರಮಹೋತ್ಸವದ ಸಡಗರ ಅವರ ಮೂರು ಜನ ಮಕ್ಕಳು, ಸೊಸೆಯಂದಿರು, ಮೊಮ್ಮಕ್ಕಳು ಮೊಗಸಾಲೆ ಅವರ ಚಿರಾಸ್ತಿ,. ಅವರ ಸಾವಿರಾರು ಪುಟಗಳ ಗ್ರಂಥಗಳು ಚರಾಸ್ತಿ.
ಮೊಗಸಾಲೆ ಅವರು ಹುಟ್ಟುಹಾಕಿದ ಕನ್ನಡ ಸಂಘ, ಸಾಹಿತ್ಯ ಗ್ರಾಮ ಹಾಗೂ ಅಲ್ಲಮಪ್ರಭು ಪೀಠಗಳ ಮನದಂಗಳದಲಿ ಮೊಗಸಾಲೆ ಅಜರಾಮರ. ಶರಣರು ಉಪಮಿಸಲಾಗದ ಉಪಮಾತೀತರು.
ಡಾ.ನಾ.ಮೊಗಸಾಲೆ ಹಾಗೂ ಶ್ರೀಮತಿ ಪ್ರೇಮಾ ತಾಯಿ ಮೊಗಸಾಲೆ ಆದರ್ಶ ಶರಣ ದಂಪತಿಗಳು.
ನೂರು ಕಾಲ ಆರೋಗ್ಯ ಪೂರ್ಣವಾಗಿ ಬರೆಯುತ್ತ, ನಸುನಗುತ ಬೆರೆಯುತ್ತ ನಮ್ಮೊಡನೆ ಇರಲಿ ಎಂದು ಹಾಡುವೆ, ಬೇಡುವೆ.
*ಸಿದ್ದು ಯಾಪಲಪರವಿ*
No comments:
Post a Comment