*ಏರು ಬಾ ನೆತ್ತರ ನನ್ನೆತ್ತರ*
ಸಾಗುವ ಹಾದಿಯಲಿ ಸಾವಿರ
ಮುಳ್ಳುಗಳು ಬರೀ ಕಲ್ಲುಗಳು
ಅವನೆತ್ತಿಕೊಂಡು ಒಗೆಯುವ ಹಲಾಲು
ಕೋರರು
ಮುದ್ದು ಮುಖಕೆ ಮಸಿ ಬಳಿದು
ಅಂದಗೆಡಿಸಿ ಚರಿತೆಯ ತಿರುಚಿ
ಮಾನಕೆಡಿಸಿ ಹುಸಿ ಸಿದ್ಧಾಂತಗಳ
ಹೊಸೆದು ಹಾಕಿ ಮಳ್ಳರಂಗ ಮಾತ
ನಾಡಿ ಮೆದುಳ ಕೆಡಿಸೊ ದುರುಳರು
ಮುಗ್ಧ ಅಸಹಾಯಕ ಮನಕೆ
ಬೇವ ಹಿಂಡಿ ಬೆಲ್ಲ ತಿನಿಸೋ
ಮಳ್ಳರು
ನೋವ ನುಂಗಿ ನೊಂದ ಮನಕೆ
ಖುಷಿಯ ಕೊಡಲು ದೇವ ಕಳಿಸಿದ
ಪ್ರಸಾದವ ಬೀದಿಗೆಸೆಯುವ ಹುನ್ನಾರ
ಕದಲಬೇಡ ನಲುಗಬೇಡ ಬೆದರಬೇಡ
ಮುಖವಾಡ ಕಳಚಿಬಿದ್ದು ಬೆಳಕಲಿ
ಬೆತ್ತಲಾಗಿ ಕುಣಿದು ನಲಿವ
ವಂಚಕರಿಗದು ಕತ್ತಲಂತೆ
ನಡೆಯದಿನ್ನು ದುರುಳರಾಟ ಬೆನ್ನಿಗಿರುವ
ದೇವದೂತ ನಿನ್ನ ಕೈಹಿಡಿದು ಸದಾ
ಕೇಳ್ವ ಮನದ ಮಾತ
ನೀನೀಗ ಬೆಳದಿಂಗಳು ತುಂಬಿದ ಕೊಡ
ತುಳುಕದು ನೋಡಾ ಇನ್ನು
ಬೇಡ ಸಂದೇಹದ ದುಗುಡ-ದುಮ್ಮಾನ
ಏರು ಇನ್ನೂ ಏರು ಏರುತಲೇ ಇರು
ಯಾರ ಕೈಗೂ ಎಟುಕದೆ ಆಗಸದ
ಹೊಳೆವ ಕಂಗಳಂತೆ
ಕಾಲನ ಸೆಳೆತದಿ ಕಳೆದುಹೋದ
ಪೆಟ್ರಾರ್ಕ ಲಾರಾಳಿಗೆ ಪೋಣಿಸಿದ
ಸಾಲುಗಳಿಗೀಗ ಮರುಜೀವ
ಉಮರ್ ಗಜಲ್ ಗಳಿಗೀಗ
ಮತ್ತೆ ಹೊಸ ಭಾವ
ಸಾಹಿರ್ ಲೂದಿಯಾನ್ವಿ ಕಳಕೊಂಡ
ಕನಸಿನ ಅಮೃತಳಿಗೀಗ ಮರುಹುಟ್ಟು
ಆಗ ಬರೀ ಗಜಲ್ ಗಳ ಏಕತಾರಿ
ನಿನಾದ ಒಂಟಿ ಪಯಣ ಏಕಮುಖ
ಸವಿಗಾನ
ಆದರೀಗ ನಮಗೆ ಪಿಸುಮಾತುಗಳ
ಮೆಲ್ಲುಸಿರ ಸವಿಗಾನ
ನಾವು ಬರೆದ ಹೊಸ ಹೊಚ್ಚ
ಇತಿಹಾಸದಿ ನೋವು ದುಗುಡಕಿಲ್ಲ
ಇಲ್ಲಿ ಜಾಗ
ಭಗ್ನತೆಯ ಹತಾಶೆಯಿಲ್ಲ ಸಿಗಲಿಲ್ಲವೆಂಬ
ತಲ್ಲಣವೂ ಇಲ್ಲ ಬರೀ
ದಕ್ಕಿಸಿಕೊಂಡ ಸಡಗರ
ಅನುಭವಿಸಿದ ಸಾಮಿಪ್ಯಕೆ ದೇವರೇ
ಸಾಕ್ಷಿ ಹರಿದಾಡಿ ಹದವಾಗಿ ಬೆರೆತು
ಮುದದಲಿ ಮುಲುಗಿ ನಕ್ಕು ನಲಿದು
ಏಕಾಂತದಲಿ ಜಗವ ಮರೆತು ಮೆರೆದು
ಬೆರೆತು ಬರೆದು ಉಂಡು ಆಡಿ ನಲಿದು
ಕೂಡಿದ ಕೂಟದಲಿ ಹರಿದ ಬೆವರ
ಬಿಸುಪಿಗೆ ಸುಗಂಧದ ಘಮಲು
ನೋವಿಗಿಲ್ಲ ಇಲ್ಲಿ ಜಾಗ ಮರೆತು
ಬಿಡು ಕೊಳೆತ ಮನಸ
ಹೊಸ ಬದುಕಲೀಗ ಬರೀ ಖುಷಿ
ಒಂದಿಷ್ಟೂ ಬೇಡ ಜಾಗ ಅವರು
ಇವರು ತೂರಿಕೊಳಲು
ನಮ್ಮ ಈ ಹೊಸ ಲೋಕದಲಿ
ಬರೀ
ನೀ
ನಾ
ನಾ
ನೀ
ಏರು ಬಾ ಬಾ ನೆತ್ತರ ನನ್ನೆತ್ತರ
ಹಾರಿ ಬಿಡೋಣ
ಯಾರ ಕೈಗೂ ಸಿಗದೆ ಮತ್ಯಾರ
ಕಣ್ಣಿಗೂ ಬೀಳದೇ
ಎಂದೂ ಕೆಳಗಿಳಿಯದೇ...
*ಸಿದ್ದು ಯಾಪಲಪರವಿ*
No comments:
Post a Comment