*ಲವ್ ಕಾಲ*
*ನಡುಗಾಲದ ಏರುಮನ*
ಈ ಪಯಾಣದಲಿ ನಡುಗಾಲ ಒಂದರ್ಥದಲ್ಲಿ ಪ್ರಬುದ್ಧ ಗಟ್ಟಿ ಅಂದುಕೊಂಡಿರುತ್ತೇವೆ. ಆದರೆ ಹಾಗೆ ಆಗದೇ ಎಡವಟ್ಟುಗಳು ಯಾವಾಗೆಂದರೆ ಆವಾಗ ಆಗಬಹುದು.
ಅವುಗಳನ್ನು ಎಡವಟ್ಟುಗಳು ಅನಲಾಗದು. ಪ್ರಾಯದಲ್ಲಾದರೆ ಎಲ್ಲವೂ ಕಲರ್ ಕಲರ್ ಕಂಡದ್ದೆಲ್ಲ ದಕ್ಕಲೆಂಬ ಹಂಬಲ, ಚಪಲ, ತೀವ್ರತೆ.
ನಡುಗಾಲದಲಿ ಎಲ್ಲವನ್ನೂ ಅನುಭವಿಸಿ, ಒಳ್ಳೆಯದು, ಕೆಟ್ಟದ್ದು ಯಾವುದೆಂಬ ಸ್ಪಶ್ಟತೆ ಬಂದಿರುತ್ತದೆ. *ಮುಖ* ಯಾವುದು *ಮುಖವಾಡ* ಯಾವುದೆಂದು ಗೊತ್ತಾದರೂ ಒಳ್ಳೆ ಮಾತು ಮತ್ತು ಹೊಗಳಿಕೆಗೆ ಮರುಳಾಗುವ ಅಪಾಯದ ಕಾಲವೂ ಹೌದು.
ಇಂತ ಸಂದಿಗ್ಧ ಕಾಲದಲ್ಲಿ ನೀ ಸಿಕ್ಕು ಬಿಟ್ಟೆ. ಸಿಕ್ಕ ಮೇಲೆ ಮುಖ, ಮುಖವಾಡಗಳದೇ ಜಗಳ, ಚರ್ಚೆ, ಮಾತು-ಕತೆ.
ಈಗ ನಿಲ್ಲಿಸಿಬಿಡೋಣ ಈ ಸುಡುಗಾಡು ಮುಖಗಳ ಕತೆ. ಸಮಯ ಕಮ್ಮಿ ಇದೆ, ಮೊದಲೇ ಸಿಕ್ಕದ್ದು ನಡುಗುವ ನಡುಗಾಲದಲಿ. ಬರೀ ನಲುಗುವುದೇ ಆಗುತ್ತೆ, ಹೀಗೆಯೇ ಒಣ ಕಾಡು ಹರಟೆಯಲಿ.
ಪರಸ್ಪರ ಕಳೆದುಹೋದ ಮೇಲೆ ಅನುಮಾನ ಸಹಜ, ಅದೂ ಚಾರಿತ್ರ್ಯದಂತ ಸೂಕ್ಷ್ಮಾತಿಸೂಕ್ಷ್ಮ ಸಂಗತಿಯ ಕೆದಕಬಾರದು. ವ್ಯಾಮೋಹದಲಿ ನಾ ಕೆಣಕಿಬಿಟ್ಟೆ ಆದರೆ ನೀ ಸರಿಯಾಗಿ ಕನ್ವಿನ್ಸ್ ಮಾಡಲು ತುಂಬಾ ಸಮಯ ತೆಗೆದುಕೊಂಡು ಒದ್ದಾಡಿದೆ. ಹೇಳುವ, ಕೇಳುವಲ್ಲಿ ಸಣ್ಣ *ಕಮ್ಯೂನಿಕೇಶನ್ ಗ್ಯಾಪ್* .
ಈ ತರದ ಬಾಂಡೇಜುಗಳಲಿ ಹೀಗಾಗಬಾರದು. ಎಲ್ಲವೂ ತರೆದಿಟ್ಟ ಪುಸ್ತಕದಂತೆ ಇದ್ದರೆ ಚಂದ. ನಾ ಸರಿಯಿದ್ದೇನೆ ಎಂದು ಹೇಸಿಗೆ ಮೇಲೆ ಕಾಲಿಟ್ಟರೂ ತೊಳೆದುಕೊಳದಿರಲಾದೀತೆ?
ನಕಾರಾತ್ಮಕ, ಅಪಾಯಕಾರಿ ಮುಖವಾಡಗಳೇ ಹಾಗೆ, ಒಳ್ಳೆಯತನದ ಸೋಗಿನಲಿ ಅವತರಿಸಿ ಮೆದುಳಿಗೆ, ನೆರಿಗೆಗೆ ಕೈ ಹಾಕುತ್ತವೆ. ಅರಿಯುವದರೊಳಗಾಗಿ ಕಳೆದು ನಮ್ಮನು ನಾವು ಹುಡುಕಬೇಕಾಗುತ್ತೆ.
ನಾವು ಬರೀ ಸರಿ ಇದ್ದರೆ ಸಾಲದು. ಸರಿ ಇದ್ದವರ ಜೊತೆಗೂ ಇರಬೇಕಾಗುತ್ತೆ.
ಕೆಸರೆಂದು ಗೊತ್ತಾದ ಸರಿದು ಹೋಗಬೇಕು, ಒಮ್ಮೆ ನೋಡಿಯೇ ಬಿಡೋಣ, ನಂತರ ಕಾಲು ತೊಳಕೊಂಡರಾಯಿತೆಂಬ ಹಟಕೆ ಬೀಳಬಾರದು.
ನಡುಗಾಲದಲಿ ಸಿಕ್ಕವರು ಕಳೆದು ಹೋದರೆ ತುಂಬ ಹಿಂಸೆ, ಹರೆಯದಲಾದರೆ ಗಾಯ ತಡಕೊಳ್ಳಬಹುದು. ಮಾಗಿದ ಮೇಲಲ್ಲ.
ನಮಗೆ ಮಾಡಲು ಬೇಕಾದಷ್ಟು ಕೆಲಸಗಳಿವೆ, ಸಮಯ ತುಂಬಾ ಕಡಿಮೆ ಇದೆ. ಸೈದ್ದಾಂತಿಕ ವಿಷಯಗಳಲಿ ಕಾಲ ಹಾಕಿ ದೂರುವುದು ಬೇಡ.
ಆಯ್ತೀಗ ಇಬ್ಬರು ಕಳೆದುಕೊಂಡರೂ ಬೇಕಾದ್ದನೆಲ್ಲ ದಕ್ಕಿಸಿಕೊಂಡಿದ್ದೇವೆ.
ನಿಷ್ಟೆ,ಪ್ರಾಮಾಣಿಕತೆ, ಪಾರದರ್ಶಕತೆ ಇಟ್ಟುಕೊಂಡು ಖುಶಿ ಖುಶಿಯಾಗಿ ಕಾಲ ಹಾಕೋಣ. ಈ ಖುಶಿಯನು ಮತ್ತೆಲ್ಲಾದರೂ ಹುಡುಕಿದರೆ ಹುಚ್ಚರಾಗುತ್ತೇವೆ.
ಬರೆಯೋಣ ಹದವಾಗಿ ಬೆರೆಯೋಣ. ದೇನಿಸುತ, ಧೇನಿಸುತ್ತ.
ಬೆನ್ನು ಬಾಗಿ ಇಳಿಹೊತ್ತಿಗೆ ಜಾರುವ ಮುನ್ನ ಪರಿತಪಿಸದೇ ಬುಜದ ಮೇಲೊರಗಿ ಕಣ್ಣ ಮುಚ್ಚಿ ನಲುಗದೇ ನವಿರಾಗಿ ಮುಲುಗುತಲಿರೋಣ. ಮುಸ್ಸಂಜೆಯ ಸುಂದರ ಕತೆಯಾಗೋಣ.
*ಸಿದ್ದು ಯಾಪಲಪರವಿ*
No comments:
Post a Comment