Friday, June 29, 2018

ಇಂದು ಬೆಳಕು ಹರಿಯಲಿಲ್ಲ

*ಇಂದು ಬೆಳಕು ಹರಿಯಲಿಲ್ಲ*

ಆಗಸದಲಿ ಮರೆಯಾದ ರವಿಕಿರಣಗಳು
ಆವರಿಸಿಕೊಂಡ ಮೋಡದ ಮುಸುಕು

ಮರದಲಿ ಚಿಲಿಪಿಲಿಸಿ ಉಲಿಯದ
ಹಕ್ಕಿಗಳ ಕಲರವ ಈ ಬೆಳಗು ಯಾಕೋ
ನೀರವ ನೀರಸ ನೀಲ ನೀಲ

ತೋಳ‌ ಮೇಲೊರಗಿದ ಮಗಳ ಸಣ್ಣನೆ
ಗೊರಕೆ ಶಾಂತವಾಗಿ ಕೇಳುವ ಎದೆಬಡಿತಕೆ
ಏನೋ ಕಳವಳ ಕಳಕೊಂಡ ಹಳವಂಡ

ಹಾಸಿಗೆ ಬಿಟ್ಟರೂ ಬಿಡದ ಜಡದ ಮಾಯೆ
ಮುಸುಕೆಳೆದು ಮಲಗಿದರೂ ತೆರೆವ ಕಂಗಳು

ನಿಧಾನ ಧೇನಿಸುತ ಏರಿದ ವ್ಯಾಯಾಮದ
ಸೈಕಲ್ ತುಳಿತದ ಕಿರ್ ಕಿರ್ ಸದ್ದು
ಕೇಳಿಸಿದ್ದು ಇದೇ ಮೊದಲು
ಮಾತಿನ ಹಂಗಿಲ್ಲದ ನೀರವ ಮೌನ
           
ಬೆಳಕು ಬೆಳಗುತಿರಬೇಕು ಹೀಗೆ
ಮೌನವಾಗದೇ ಸೂರ‌್ಯ ಉದಯಿಸಲಿ
ಬೇಗ ಹಕ್ಕಿಗಳು ಗೂಡ ಬಿಟ್ಟು ಬರಲಿ

ಮೈಚಳಿ ಬಿಟ್ಟು ಉಲಿಯುತಲಿರಲಿ
ಪಿಸುಮಾತುಗಳ ಸವಿಗಾನ ಅಲ್ಲಿ
ಜಗಳದಲಿಯೂ ಒಲವ ವರತೆ

ಸಂಗೀತದ ಆಲಾಪ‌ ರಾಗ ತಾಳ
ದ್ವೇಶಕಿಲ್ಲ ಜಾಗ ಬರೀ ಮಾತು
ಮಾತು ಮಾತು ಮುಗಿಯುವ
ಮುನ್ನ ಹುಸಿಕೋಪಕೆ ಭೈರವಿ

ಮುತ್ತಿನ ಮಳೆಗರಿದು ಮಾತು
ಮುಗಿದಾಗ ಮೈಮನಗಳಲಿ ಇನ್ನಿಲ್ಲದ
ನಿಲ್ಲದ ಕಂಪನ ಇಡೀ ದಿನದ
ಜೀವಸೆಲೆಗೆ ಒಲವಿನಾಸರೆಯ ದಿವ್ಯ
ಚೇತನ

ಆದರೆ ಯಾಕೋ
ಇಂದು ಬೆಳಕು ಹರಿಯಲಿಲ್ಲ.

  *ಸಿದ್ದು ಯಾಪಲಪರವಿ*

No comments:

Post a Comment