*ಹೊಸಾ ಕನ್ನಡ ಮತ್ತು ಹೊನಲು ಬಳಗ*
ಓದೂ ಚಟ ಇರೋ ಗೆಳೆಯಾ, ಡಾ.ಜಿ.ಬಿ.ಪಾಟೀಲರ ಮಗಾ, ಕಾನ್ವೆಂಟ್ ಸಾಲ್ಯಾಗ ಕಲ್ತ ಆಯುರ‌್ವೇದ ಹುಡುಗಾ ಡಾ.ಸಂದೀಪ ಪಾಟೀಲ ಬಾಳಾ ದಿನದಂದ ಹೇಳ್ತಾ ಇದ್ದ.' ಹಿಂಗೊಂದು ಪ್ರಯತ್ನ ನಡದೈತಿ ಅಂಕಲ್, ನೀವು ಪ್ರಯತ್ನ ಮಾಡ್ರಿ' ಅಂದದ್ದು ಬಾಳಾ ತಡ ಆಗಿ ಮನಸಿಗೆ ತಗೊಂಡೆ. ಸ್ವಲ್ಪ ನಾ ಹಂಗ, ಜಲ್ದಿ ಒಪ್ಪೂ ಪೈಕಿನ, ಸ್ವಲ್ಪ ದಿಮಾಕೂ ಅನ‌್ರಿ.
ಈಗಿನ ಹುಡುಗರು ಹೊಸ ನಮೂನಿ ವಿಚಾರ ಮಾಡ್ತಾರನ್ನೋ ನಂಬಿಗಿ ನನಗೈತಿ.
ಸಾಹಿತ್ಯ ವಿದ್ಯಾರ್ತಿಯಾಗಿ ಅನೇಕ ಸಮಸ್ಯಗಳನ್ನ ಅನುಬವಿಸಿದ ನಾನೇನು ತುಂಬಾ ಶಿಶ್ಟ ಮನಶ್ಯಾನೂ ಅಲ್ಲ.
ಇವತ್ತಿಗೂ ಇಂಗ್ಲಿಶ್ ಸ್ಪೆಲಿಂಗ್ ಸರಿಯಾಗಿ ಬರ‌್ಯಾಕ ಒದ್ದಾಡ್ತೀನಿ.
ಕನ್ನಡದ ಮ್ಯಾಲಿನ ಒಲವಿಗೇನ ಬರ ಇಲ್ಲ, ಬರೆಯೋದ ನಡದ ಐತಿ.
ಮಂದಿ ಓದಲಿ, ಬಿಡಲಿ ಪ್ರಶ್ನೇನ ಅಲ್ಲ
ಓದೂದು, ಬರೆಯೋದು, ತಿನ್ನೋದೂ, ಯಾರ‌್ನರ ಲವ್ ಮಾಡೋದು, ಬೈಯ್ಯೋದು ಮಂದಿ ಮುಂದಂತು ಹೇಳಕ ಆಗಂಗಿಲ್ಲ. ಹೇಳೂನೂ ಬಾರ‌್ದು.
ಪಟ್ಟಣಶೆಟ್ಟಿ ಸರ್, ಬೇಂದ್ರೆ ಅಜ್ಜ ಆಡು ಮಾತ್ನಾಗ ಬರದಾರ. ನಾವೂ ಅಶ್ಡ ಚಂದಾಗಿ ಮಾತಾಡ್ತೀವಿ, ಬರಿಯಾಕ ಒಲ್ಲೆ ಅಂತೀವಿ.
ಬ್ಯಾರೆಯವರು ಹಿಂಗ್ ಬರದರ ಓದಂಗಿಲ್ಲ ಅನ್ನು ಅಂಜಿಕಿ.
ಹಂಗಾಗಿ ನಾನು ಒಂಚೂರು ನಾಜೂಕಾಗಿನ ಬರಿತಿದ್ದೆ. ಮನ್ನೆ ಸಂದೀಪ ' ನೋಡೆರ ನೋಡ್ರಿ' ಅಂದ ಇದೇನ್ ಹುಚ್ಚು ಇವಂಗ ಅನ್ಕೊಳುದು ಬಿಟ್ಟು 'ಹೇಳ್ಯರ ಹೇಳಪಾ' ಆಂದು ಕುಂತಗೊಂಡು ಕೇಳ್ದಾಗ ಖರೆ ಅನಿಸ್ತು.
ನಾವ ಹೆಂಗ ಮಾತಾಡ್ತಿವಿ ಹಂಗ ಬರೆಯೋದು, ಕನ್ನಡದ ಮ್ಯಾಲೆ ಸಂಸ್ಕೃತ ಪ್ರಬಾವ, ಅನಾವಶ್ಯಕ ಮಹಾಪ್ರಾಣ ಅಂದ್ರ *ಅಕ್ಷರಕ ಸುಮ್ನ ತಿಣಿಕ್ಯಾಡಿ ಕುಂಡಿ ಸೀಳೋದು* ಬೇಕಿಲ್ಲ ಅಂದ. ನಂಗಿದು ಬಾಳ ದಿವಸದಿಂದ ಖರೆ, ಖರೆ ಅನಿಸಿತ್ತು ಆದ್ರ ರೂಡಿ ಮಾಡ್ಬಕು ಅನಿಸಿರಲಿಲ್ಲ.
ಮಗಲಾಯಿ ಊರಿಂದ ಬಂದ ನಾ *ಆಲು-ಅಣ್ಣು-ಊವ್ವಾ* ಅಂದಾಗ ಮಂದಿ ಆಡಶ್ಯಾಡಿ ನಗತಿದ್ರು.*ಅದೂ ಈ ದಾರ‌್ವಾಡ, ಗದಿಗಿನ ಕಡೆ ಮಂದಿ ಬಾರಿ ಶ್ಯಾಣೇರ ಅಂತ ತಿಳಕೊಂಡಾರ. ಎಶ್ಟ ಶ್ಯಾಣಾರ ಅಂತ ಈಗ ಗೊತ್ತೈತಿ ಬಿಡ್ರಿ*. ಮೂವತ್ತ ವರ‌್ಶದಿಂದ ನೋಡೀನಿ.
ಆದರೂ ಈ ಭಾಶಾ ಪ್ರಯೋಗ ಛಲೋ ಅನಿಸೈತಿ. ಬರಿಯಾಕ ಮನಸ ಮಾಡಿದ್ರ ಜನ ತಿಣಿಕ್ಯಾಡ್ಯಾದ್ರು ಒದ್ತಾರ.
ಬರೀಬೇಕು, ಮನಸ ಮಾಡಬೇಕು, ಓದಾಕ ಹಚ್ಚಬೇಕು.
ನಾ ಶಿಶ್ಟ ಬರಕೊಂತನ, ಇನಮ್ಯಾಲ ಇದನ್ನೂ ಬರಿತೀನಿ.
ಹೆಂಗ ಅನಿಸ್ತು ಹೇಳ್ರಿ.
*ಥ್ಯಾಂಕ್ಸ್ ಟು ಸಂದೀಪಾ ಮತ್ತವನ ಹೊನಲಿನ ಟೀಮ್*
*ಸಿದ್ದು ಯಾಪಲಪರವಿ*
No comments:
Post a Comment