*ಸುರಿವ ಮಳೆ ಕರಗಿದ ನೋವು*
ಈ ಮಳೆ ಎಷ್ಟೊಂದು ಉಪಕಾರ ಮಾಡ್ತಲ್ಲ.
ಆದ ಅವಮಾನ ಮನಸಿನಲಿ ಕುದೀತಾ ಇತ್ತು.
ಅವಮಾನಿಸುವ ಉದ್ದೇಶ ಯಾರಿಗೂ ಇರಲ್ಲ. ಕಾಲನ ಮಹಿಮೆ. ಕಂಡ ಕಂಡವರು ತಮಗೆ ಸರಿ ಕಂಡಂತೆ ಉಗಿದು ಸಿಗಿದು ಹಾಕುತ್ತಾರೆ. ಹಾಕಿಸಿಕೊಳ್ಳಬೇಕು ಅಷ್ಟೇ.
ಅಳು ಉಕ್ಕಿ ಬರುತ್ತಿತ್ತು, ಸ್ಕೂಟರ್ ವೇಗವಾಗಿ ಓಡಿಸಲಾರಂಭಿಸಿದೆ.
ನಿಧಾನ ಓಡಿಸಿದರೆ ಬೇರೆಯವರು ಮಾತನಾಡಿಸಿ, ನೋವ ಗುರುತಿಸಿಯಾರು ಎಂಬ ಚಡಪಡಿಕೆ, ಒಳಗೊಳಗೆ.
ತುಂಬ ಅನಿರೀಕ್ಷಿತವಾಗಿ ಧೋ ಎಂದು ಮಳೆ ಸುರಿಯಲಾರಂಭಿಸಿತು.
ಎಲ್ಲರೂ ಓಡಿ ಹೋಗಿ ಆಶ್ರಯ ಹುಡುಕಲಾರಂಭಿಸಿದರು. ನನಗೋ ಏನೂ ಬೇಡವಾಗಿತ್ತು, ಕೇವಲ ಮನಸಾರೆ ಅಳಬೆಕಾಗಿತ್ತು..
ಈಗ ಮುಕ್ತವಾಗಿ ಅಳಲೊಂದು ಅವಕಾಶ ಬೇಕೆನಿಸಿತ್ತು.
ಬೈಕ್ ನಿಲ್ಲಿಸಿ ಮರದ ಕೆಳಗೆ ನಿಂತದ್ದು ನೆಪ. ನಿಜಾವಾಗಿ ಆಸರೆ ಬೇಕಿದ್ದರೆ ನೀರು ಸಿಡಿಯದ ಜಾಗದಲಿ ನಿಲ್ಲಬೇಕಿತ್ತು.
ಹಾಗೆ ಹೇರಳ ನೀರು ಬೀಳುವ ಜಾಗದಲಿಯೇ ಇದ್ದು ಹಗುರಾಗುವ ಜರೂರಿತ್ತು.
ಎಲ್ಲ ಅವಮಾನ, ನೋವನ್ನು ಒಟ್ಟಾಗಿ ನೆನಪಿಸಿಕೊಂಡು ಒಂಟಿಯಾಗಿ ರೋದಿಸಲಾರಂಬಿಸಿದೆ.
ಅಳಲು ಮಳೆ ಮುಲಾಜಿಲ್ಲದೆ ನೆರವಾದದ್ದು ದೊಡ್ಡ ಉಪಕಾರ.
ಬದುಕೇ ಹೀಗೆಯೇ, ಅಂದುಕೊಂಡಂತೆ ಆಗಲಸಾದ್ಯ. ಹತ್ತು ಹಲವು ಭರವಸೆ ಇಟ್ಟುಕೊಂಡು ಜನರನ್ನು ನಂಬುವ ಅನಿವಾರ‌್ಯತೆ.
ಅಂದುಕೊಂಡಂತೆ ಆಗದಿದ್ದರೆ ಜೊತೆಗೆ ಹಿತೈಶಿಗಳೇ ತಿರುಗಿ ನಿಲ್ಲುತ್ತಾರೆ.
*ವೈಯಕ್ತಿಕ ಸ್ವಾರ‌್ತ, ಮಿತಿ ಮೀರಿದ ನಿರೀಕ‌್ಶೆಗಳು, ಅಂದುಕೊಂಡಂತೆ ನಡೆಯಲೆಂಬ ಅಹಮಿಕೆ, ನಮಗೆ ಗೊತ್ತಾಗದೇ ನಮ್ಮನ್ನಾಳುವ ಇಗೋ, ನಾನು ಹೇಳಿದ್ದೇ ನಡೆಯಬೇಕೆಂಬ ಮನದ ಮೊಂಡಾಟ, ಅನಗತ್ಯ ತಪ್ಪು ತಿಳುವಳಿಕೆ, ಕೇಳಿಸಿಕೊಳ್ಳಲಾಗದ ಅಸಹನೆ...* ಇನ್ನೂ ಏನೇನೋ *ನೋ ಗಳು*, ಸಂಬಂದಗಳ ಸಡಿಲಿಸುತ್ತವೆ.
ನಾವು ನಮ್ಮ ಅಹಮಿಕೆಯಲಿ ಸಡಿಲಾಗಿ ಕಳೆದು ಹೋಗಬಾರದೆಂಬ ಕಾಳಜಿಯಿಂದ ಇಡೀ ಬಾಂಡೇಜಿನ ಮಹತ್ವ ಮತ್ತದರಿಂದ ಸಿಕ್ಕ ಉನ್ಮಾದ, ಆನಂದಗಳ ತೂಗಿ ನೋಡಿದೆ.
ಹಟ ಹಾಗೂ ಮೇಲೆ ಹೇಳಿದ ನೆಗೆಟಿವ್ ಸಂಗತಿಗಳು ಕೊಡಬಹುದಾದ ಹಿಂಸೆಯ ನೆನೆದು ಮತ್ತೆ, ಮತ್ತೆ ಒಂಟಿಯಾಗಿ ಪಶ‌್ಚಾತಾಪದಿಂದ ನರಳಿ, ಬಂದನ ಉಳಿಯಲಿ, ಅದರ ಪ್ರತಿಫಲ ಇಬ್ಬರಿಗೂ ಕೊನೆ ತನಕ ಸಿಗಲೆಂದು ಸಂಕಲ್ಪಿಸಿ ಮಳೆಯಲಿ ಯಾರಿಗೂ ಕಾಣದ ಹಾಗೆ ಕಣ್ಣೀರ ಹರಿಸಿ ಹಗುರಾದೆ.
ನೂರು ಅಹಮಿಕೆಯ ದೂರ ನೂಕಿ, ಬಿಗಿದಪ್ಪಿ ಮುದ್ದಾಡಿ ನಾವು ಕರಗಿ ನೀರಾಗೋಣ.
ಈ ಇಳೆಗೆ ಸುರಿದ ಮಳೆಯ ಹಾಗೆ...
*ಸಿದ್ದು ಯಾಪಲಪರವಿ*
No comments:
Post a Comment