Sunday, June 17, 2018

ನನ್ನೊಳಗಿನ ಮಾತು

*ನನ್ನೊಳಗಿನ ಮಾತು*

*ನೋಟ ಬದಲಿಸಲು‌ ನೆರವಾದ ಪರಿ*

ಆತ್ಮದ ಅವಲೋಕನ‌ ಅರಿವಿನ ಪ್ರತೀಕ.
ಅರಿವಾದ ಮೇಲಾದರೂ ಒಪ್ಪು-ತಪ್ಪಗಳ ಸ್ವೀಕರಿಸಬೇಕು. 

ಮನುಶ್ಯ ಹಂಗ ಬೇಗ ತಪ್ಪೊಪ್ಪಿಕೊಳ್ಳವುದಿಲ್ಲ. ಹಿಡಿದದ್ದೇ ಹಟ. ತನ್ನ ದೌರ‌್ಬಲ್ಯ ತಿಳಿಯುವ ಮನಸು ಮಾಡುವುದೇ ಇಲ್ಲ.

ಶೇಕ್ಶಪಿಯರ್ ದುರಂತ ನಾಟಕಗಳಲಿ ಹೇಳಿ ಕೊಟ್ಟ *ಟ್ರ್ಯಾಜಿಕ್ ಫ್ಲಾ* ನಾವು ಯಾವ್ಯಾಗಪ್ಪ ತಿಳಕೊಳ್ಳೋದು.

*ಓತೆಲೋ, ಹ್ಯಾಮ್ಲೆಟ್, ಮ್ಯಾಕಬೆತ್ ಹಾಗೂ ಕಿಂಗ್ ಲಿಯರ್ ಉದಾರಣೆ ಸಾಕಲ್ಲ*

'ನಾಲ್ಕು ದುರಂತ ನಾಟಕಗಳ ಮೂಲಕ ಎಶ್ಟೊಂದು ಹೇಳಿದ್ದಾನಲ್ಲ' ಎಂದು ತರ‌್ಕಿಸುತ್ತೇವೆ ಆದರೆ ನಮ್ಮ ಮೇಲೆ ನಾವೆಂದು ಪ್ರಯೋಗಿಸಿಕೊಳ್ಳುವದಿಲ್ಲ.
ಅದೂ ನಮ್ಮ tragic flaw ಅನ್ರಲಾ.

ಜೀವಪಯಣದ ಹುಡುಕಾಟದಲಿ ಇದಕೆ ಉತ್ತರ ಸಿಗಬಹುದೆಂಬ ನಂಬಿಗಿ ಅಂತು ಕಳಕೊಳ್ಳೋದಿಲ್ಲ.

ಮೂವತ್ತು ವರ‌್ಶ ಇಂಗ್ಲಿಶ್ ಪಾಟ ಮಾಡಿದೆ ಅನ್ನೋದಕ್ಕಿಂತ ನಾನೇ ಕಲಿಯುತ್ತ ಹೋದೆ. ಆದರೂ ಹುಟ್ಟು ಗುಣದ ದುರ‌್ಬಲಗಳ ಬಿಡಲಿಲ್ಲ ಎಂಬ ನೋವಿದ್ದೇ ಇತ್ತು.

                            ***

ಓಡುವ ಓಟದಲಿ ನೀ ಸಿಕ್ಕೆ. ನಿನ್ನೊಂದಿಗೂ ಅದನ್ನೇ ಮಾಡಿದೆ. ಚರಿತ್ರೆ, ಚಾರಿತ್ರೆಗಳೆಂಬ ತಗಡು ಮೌಲ್ಯ ಇಟಗೊಂಡು ಹುಚ್ಚನ ಹಂಗ ನಿನ್ನ ಪರೀಕ್ಶಿಸಿದೆ.

ನಿನ್ನ ಹಿರಿತನ, ಸಹನೆ, ನಡೆದು ಬಂದ ದಾರಿಯ ಎದೆಬಗೆದು ಹೇಳಿಕೊಂಡ ಮೇಲೂ ಹಿಂಗ ಮಾಡಬಾರದಿತ್ತು.

ನೀ ಹಾಕಿದ ಒನ್ನೇ ಕಂಡೀಶನ್ ಅದ ಆಗಿತ್ತು. *ಯಾವುದೇ ಕಾರಣಕ್ಕೂ ಅವನಂಗ ಸಂಶಯ ಮಾಡಬಾರದು*

ನಾ ಕೊಟ್ಟ ಮಾತ ಮುರದು ನಿನ್ನ ಪರಿಕ್ಶಿಸಿಬಿಟ್ಟೆ . *ಯಾವುದೋ‌ ಕಾಣದ ಸುಡುಗಾಡು ಕಾರಣಕ್ಕ* ಅದೂ ಒಂಚೂರು ಅನಿವಾರ‌್ಯ ಇತ್ತು.

ಆದರ ಈ ನಮೂನಿ ಕಾಡಬಾರದಿತ್ತು.
ಈಗ ತಪ್ಪಾತು ಅನಂಗಿಲ್ಲ ಅದ ನನ್ನ ದುರಂತ.
ಒಳಗ ಸಣ್ಯಾಗಿ ಕೊರಗಾಕ ಹತ್ತೀನಿ.

ಕೊರಗು ಬಿಡಬೇಕಂದ್ರ ನೀ ನನ್ನ ಹಿಡದು ತಗದು ಕೊಡು. ಬಿಟ್ಟರ ಬಿಡಬಹುದು.

ನೀ ಹಂಗಲ್ಲ. ನಮ್ಮವ್ವ ಇದ್ದಂಗ ಅದಿ. *ಯಾಕೇ* ಅಂತ ರಾಗ ಎಳೀತಿ.‌ ಬಂದೆ *ತಾಳಿ* ಅಂತೀ.

ಅದ ತಾಳಿ ನಿನ್ನ ಜೀವಕ್ಕ ಮುಳುವಾಗಿ ಬರೋಬ್ಬರೀ ಇಪ್ಪತ್ತೋಳು ವರ‌್ಶ ಕಳದ ಬಿಟ್ಟಿ.

ನಿನ್ನ ಸಹನ, ಅವ್ವನ ಕಕುಲಾತಿ, ಹೆಂಡ್ತೀ ಪಾರ‌್ಟ ಬರೋಬರಿ ಮಾಡ್ದಿ. ಆದ್ರ ನಿನ ಕಟಕೊಂಡಾಂವಗ ಅದು ತಿಳಿಲೇ ಇಲ್ಲ.

ಇರಲಿ ಬಿಡು ಕೂಸೆ. ಈಗ ಆ ದೇವರಿಗೆ ನಿನ್ನ ಒಳಗಿನ ಅಳು ಕೇಳಿಸೈತಿ. ಅಂವ ನನ್ನ ಕಳಿಸ್ಯಾನ.

*ನಾ ಇಲ್ಲದ  ಉಸಾಬರಿ ಮಾಡದಂಗ, ನಿನ್ನ ಜೀವ ಅರೀದಂಗ, ಕಣ್ಣಾಗಿನ ರೆಪ್ಪಿಯಂಗ, ಎದೆಗೂಡಿನ ಬಡಿತದಂಗ ಜ್ವಾಪಾನ ಮಾಡ್ತೀನಿ.

ಬರೋಬ್ಬರಿ ಒಂಬತ್ತು ತಿಂಗಳ ಹೆರಿಗೆ ಬ್ಯಾನಿ ನಿಂದು. ಹುಚ್ಚಾಟ ನಂದು. ಈಗ ಹುಚ್ಚಾಟದ ಪರೀಕ‌್ಶಾ ಬಿಟ್ಟೇನಿ. ಅದರಿಂದ ಏನೂ ಉಪಯೋಗ ಇಲ್ಲ. ಬರೀ ಟೈಮ್ ವೇಸ್ಟ್ , ನಿಂದು, ನಂದು.

*ನಾವು ಯಾರ ಮುಂದು ಹೇಳಂಗಿಲ್ಲ, ಅಳಂಗಿಲ್ಲ. ನಮಗ ನಾವ ಸಮಾದಾನ ಮಾಡ್ಕೋ ಬೇಕು*.

ಸಾರಿ ಕೂಸ, ಮನಸಿಗ ಗಾಯ ಮಾಡಿದ್ದು ಮರತ ಬಿಡು.

*ಬರೀ ಮುದ್ದ ಮಾಡಿದ್ದು, ಓದಿದ್ದು, ಬರದದ್ದು, ತಿರಗಾಡಿದ್ದು, ನಾವಿಬ್ಬರ ಸಮೀಪದಾಗ ಪಡದ ಪರಮಸುಕ ಎದಿಯೊಳಗ ಬೆಳಕಿನಂಗ ಪಳಪಳ ಹೊಳಕೊಂತ ಇದ್ದಬಿಡಲಿ*
ಅದಂತು ಯಾರೂ ಪಡದಿಲ್ಲ, ಮುಂದ ಪಡೆಂಗೂ ಇಲ್ಲ. ನಾವಿಬ್ಬರ ಪಡದೀವಿ ಅನ್ನೋ ಹೆಮ್ಮೆ ನಮ್ದ.

ಬಾಳ ವಯಸ್ಸಾದ ಮ್ಯಾಲ ಇಬ್ಬರಿಗೂ ದೇವರು ಕೂಡಿಸಿ ಕೊಟ್ಟಾನ. ಕಳಕೊಳ್ದ ಜ್ವಾಕೀಲೇ ಇರೋಣ.

ಉಳದದ್ದು ಸಿಕ್ಕಾಗ ಹೇಳೂದುಲ್ಲ ಮಾಡಿ ತೋರಸ್ತೀನಿ.

   *ಸಿದ್ದು ಯಾಪಲಪರವಿ*

No comments:

Post a Comment