*ಕಲಬುರಗಿ, ಸಂಗಮೇಶ್ವರ ಮಹಿಳಾ ಮಂಡಳದ ಲೇಖಕರ ವೇದಿಕೆ ಮತ್ತು ಪಿಸುಮಾತುಗಳು*
*ಹೆಣ್ಣು ಮಾಯೆ ಅಲ್ಲ, ಅವಿವೇಕಿಯೂ ಅಲ್ಲ*
ಕಲಬುರಗಿ, ಕಲ್ಯಾಣ ಕರ್ನಾಟಕ ಯಾರಿಗೆ ತಾನೇ ಗೊತ್ತಿಲ್ಲ. ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಗೆಳೆಯರಿದ್ದಾರೆ. ಅದರಲ್ಲೂ ಈ ಸೋಸಿಯಲ್ ಮೀಡಿಯಾ ಬಂದ ಮೇಲೆ ಈ ಸಂಬಂಧಗಳು ಅಂಗೈಯಲಿ.
ಕೇಡು, ಒಳಿತು ಎರಡೂ ನಮ್ಮ ಕೈಯಲ್ಲೂ ಅನ್ನಿ.
ಈಗ ವಿಶಯಕ್ಕೆ ಬರುವೆ.
ಇದೇ ಜಾಲತಾಣದಲಿ ಪರಿಚಯವಾದ ಲೇಖಕಿ ಕಾವ್ಯಶ್ರೀ ಅವರೊಂದಿಗೆ ಒಂದು ಜುಗಲ್ ಬರೆದದ್ದು ಅಕ್ಷರ ಲೋಕದಲೊಂದು ದಾಖಲೆ.
ಅದಕೆ ಕಾರಣ ಸಹೃದಯತೆ ಮತ್ತು ಸದ್ಬಳಕೆ.
ಹೆಣ್ಣು ಎಂದರೆ ಸೆಳೆತ, ಜೀವಸೆಲೆ, ಭೋಗದ ವಸ್ತು, ಮಕ್ಕಳ ಹೆರುವ ಯಂತ್ರ, ಇನ್ನೂ ಏನೇನೋ ಹೇಳಲಾಗುತ್ತೆ.
ಇದಕ್ಕೆ ನಾನೇನು ಹೊರತಲ್ಲ, ನಾ ಸಂತನೂ ಅಲ್ಲ.
ಆದರೆ ನನಗೆ ಹೆಣ್ಣಿನ ಬಗ್ಗೆ ಅಪಾರವಾದ ಕಾಳಜಿಯೂ ಇದೆ.
ಕೂಡು ಕುಟುಂಬ ವ್ಯವಸ್ಥೆಯಲಿ ತ್ಯಾಗ, ಸಹನೆಯಿಂದ ಬಾಳಿ ಬದುಕಿದ *ಅಜ್ಜಿ, ಸೋದರತ್ತೆ, ಹರೆಯದಲ್ಲಿ ಗಂಡನ ಕಳೆದುಕೊಂಡರೂ ಯಾರನ್ನೂ ಲೆಕ್ಕಿಸದೇ ಗೌರವದಿಂದ ಬಾಳುತ್ತಿರುವ ತಂಗಿ, ಹೆಂಡತಿ, ಇಬ್ಬರು ಮುದ್ದು ಮಕ್ಕಳು* ನನ್ನ ವಿಚಾರ ಸರಣಿಯನ್ನು ಬದಲಿಸಿದ್ದಾರೆ.
ಹೆಣ್ಣು ನನಗಂತು ಮಾಯೆಯಲ್ಲ. ದೌರ್ಬಲ್ಯವೂ ಅಲ್ಲ. ಜೀವಚೈತನ್ಯ. ಮುದ ನೀಡುವ ಸಂಗಾತಿ. ಹತ್ತು ಹಲವು ರೂಪದಲ್ಲಿ.
ಹರೆಯದಲ್ಲಿ ಮಹಿಳಾ ಕಾಲೇಜಿನಲ್ಲಿ ಉಪನ್ಯಾಸಕನಾಗಿ ಸೇರಿಕೊಂಡರೂ ಎಲ್ಲೂ, ಯಾರೊಂದಿಗೂ ಪ್ರೀತಿ-ಪ್ರೇಮ-ಪ್ರಣಯಗಳಲಿ ಕಳೆದು ಹೋಗದೇ ಎಚ್ಚರವಹಿಸಿದೆ.
ಮದುವೆ,ಹೆಂಡತಿ,ಮಕ್ಕಳೊಂದಿಗೆ ಹಲವು ಕಾಲ ನನದೇ ಮಾದರಿಯಲ್ಲಿ ಬದುಕಿದೆ.
ವಯಸು ಮಾಗಿದಂತೆಲ್ಲ ಹೆಣ್ಣು-ಹೊನ್ನು-ಮಣ್ಣು ವ್ಯಾಖ್ಯಾನ ಅರಿಯಲು ಚಡಪೆಡಿಸಿದೆ.
ಆ ಹುಡುಕಾಟದಲಿ *ಕೊಂಚ ಕಳೆದು ಹೋದದ್ದು*, ಅದನ್ನು ನನ್ನ ಸಂಗಾತಿ ಅರ್ಥ ಮಾಡಿಕೊಂಡು ಸಹಿಸಿದ್ದು ಈಗ ಇತಿಹಾಸ.
ಶೇಕ್ಸ್‌ಪಿಯರ್ ನಾಟಕ ಒಥೆಲೋ ನನ್ನ ಅಲುಗಾಡಿಸಿತು. ಆಗ ಹೆಣ್ಣು ಡೆಸ್ಟಿಮೋನಾಳಂತೆ ಕಂಡಳು. ಕ್ಲಿಯೋಪಾತ್ರಳಂತೆ ಅಲ್ಲ.
*ಮಹಾದೇವಿ ಅಕ್ಕ* ನನ್ನ ಪಾಲಿನ ದೇವತೆ, ಆತ್ಮದ ಸಂಕೇತ. ಒಳಗೆ ಸುಳಿವಾತ್ಮಕೆ ಮೊಲೆ,ಮೀಸೆಯ ಹಂಗ ಹರಿದು ಕಣ್ಣು ತೆರೆಸಿದ ಧೀಮಂತೆ.
ಬುದ್ಧ-ಅಲ್ಲಮ-ಓಶೋ ಹೊಸ ಲೋಕ ಪರಿಚಯಿಸಿದರು. ಹೆಣ್ಣು ಮಾಯೆ ಅಲ್ಲ. ಮಾಯೆ ಮನದ ಮುಂದಣ ಆಸೆ ಎಂಬುದನ್ನು ನಿಧಾನ ಗ್ರಹಿಸಿದೆ.
ಮನಸು ಮಾಗಿದಂತೆಲ್ಲ ಹೆಣ್ಣು ಭಿನ್ನವಾಗಿ ಕಂಡಳು. ಮೂಲಭೂತ ಪುರುಷ ಪ್ರಧಾನ ಮನಸ್ಥಿತಿಯಿಂದ ಹೆಣ್ಣನ್ನು ನೋಡುವುದು ನಿಲ್ಲಿಸಿದೆ.
ಗಂಡಸಿನ ತೀವ್ರ ಚಪಲತೆಗೆ ಬಲಿಯಾಗಿ ಯಾವುದೇ ಸುಖ ಅನುಭವಿಸದೇ ಸತ್ತು ಹೋಗುವ, ಕಸ-ಮುಸರಿಯ ಒಗೆತನದ ವಿಜ್ರಂಭಣೆಯಲ್ಲಿಯೇ ಅಸಂಗತ ಹುತಾತ್ಮಳಾಗಿ ಹೊಗಳಿಸಿಕೊಳ್ಳುವ, ಹೆಣ್ಣಿಗೆ ಹೆಣ್ಣೇ ಶತ್ರು ಎಂಬ ಹುಸಿ ಹೇಳಿಕೆಯ ತಾನೂ ನಂಬುವ ಹೆಣ್ಣು ತನಗರಿವಿಲ್ಲದಂತೆ ಗಂಡಿನ ಆಸರೆಯಲಿ ಸ್ವರ್ಗ ಹುಡುಕುವ ಅವಿವೇಕ.
ಈಗ ಕಾಲ ಬದಲಾಗಿದೆ ಆದರೆ ಶೋಶಣೆ ನಿಂತಿಲ್ಲ. ಸ್ವರೂಪ ಬದಲಾಗಿದೆ.
ಪುರುಶನ ಚಡಪಡಿಕೆಯ ಶೀಗ್ರ ಸ್ಕಲನದ ಮೈತುನಕೆ ಅರಿವಿಲ್ಲದೆ ನಿತ್ಯ ಬಲಿ.
ಕಾಮವೇ ಎಲ್ಲವೂ ಅಲ್ಲ. ಅದನು ಮೀರಿದ ಲೋಕವೊಂದಿದೆ ಎಂದು ಅಕ್ಕ *ನಿರ್ಭಯ-ನಿರಾಕರಣೆ-ನಿರ್ಲಿಪ್ತತೆ* ಸೂತ್ರ ಹಿಡಿದು ಬಟ್ಟೆಯ ಹಂಗ ಹರಿದು, ಗಂಡಿನ ಅಹಂ ಕೆಣಕಿ, ಉತ್ತರವನ್ನೂ ಕೊಟ್ಟಳು.
ಇದನ್ನು ಈಗ ಪ್ರತಿಯೊಬ್ಬ ಹೆಣ್ಣು ಅರಿಯಲೇಬೇಕು.
ಆಗ ಗಂಡು ನಗಣ್ಯನಾಗುತ್ತಾನೆ.
ಅದು ಬಿಟ್ಟು ಗಂಡು ಹೆಣ್ಣನ್ನು ಮಾಯೆ ಎಂದು ಬೈಯ್ಯುವುದು, ಹೆಣ್ಣು ಗಂಡನ್ನು ಟೀಕಿಸುತ್ತಲೇ *ಅವನ ತೋಳಿನಾಸರೆ ಬಯಸುವುದು ಎಂತಹ ವಿಪರ್ಯಾಸ*.
***
ಇಂತಹ ಸಾವಿರ ಆತಂಕಗಳ ಇಟ್ಡುಕೊಂಡೇ ಆತ್ಮವಿಶ್ವಾಸ, ಧೈರ್ಯದಿಂದ ಕಾವ್ಯಶ್ರೀ ಅವರನ್ನು ಜುಗಲ್ ಬಂದಿಗೆ ಕರೆದೆ.
*ಯಾರಿಗೆ ಯಾರೂ ಮಾಯೆಯಾಗುವುದು ಬೇಡವಾಗಿತ್ತು*. ಪ್ರೀತಿಯಲಿ ಕಳೆದು ಹೋಗದ ಎಚ್ಚರವೂ ಇತ್ತು.
ಪ್ರೀತಿ-ಭಕ್ತಿಯಲಿ ಕಳೆದು, ಕರಗಿ ಹೋಗದೇ ಅನುಭವಿಸಲಾಗದು.
*ಉಂಡು ಉಪವಾಸ, ಬಳಸಿ ಬ್ರಹ್ಮಚಾರಿ* ಉಣ್ಣದೇ, ಬಳಸದೇ ಸುಖಿಸಿ ಈಗ ಹೊರಬಂದಿದ್ದೇವೆ.
*ನೈತಿಕತೆ, ವಿಶ್ವಾಸ,ಪ್ರಾಮಾಣಿಕತೆಯಷ್ಟೇ ನಮ್ಮ ಬಂಡವಾಳ*.
***
ಕಲಬುರಗಿಯ ಸಂಗಮೇಶ್ವರ ಮಹಿಳಾ ಮಂಡಳದ ಲೇಖಕರ ವೇದಿಕೆ ಅಂತಹ ನೂರಾರು ಅನುಮಾನ ಇದ್ದರೂ, ಮುಖಾಮುಖಿ ಇಟ್ಟುಕೊಂಡಾಗ ಅದೇ ವಿಶ್ವಾಸ ನನಗಂತೂ ಇತ್ತು.
ಡಾ.ವಿಕ್ರಮ್ ವಿಸಾಜಿ ಮಾತಾಡಲಿ ಎಂಬ ಏಕೈಕ ಕರಾರಿಟ್ಟೆ.
ಡಾ.ಲಕ್ಷ್ಮಿ ಜೋಶಿ ನನಗೆ ಚಿರಪರಿಚಿತ. ನನ್ನ ಮೇಲೆ ಕೊಂಚ ಅನುಮಾನ, ಕೊಂಚ ವಿಶ್ವಾಸ, ಭಯ, ಗೊಂದಲ ಇನ್ನೂ ಏನೇನೋ !!
ಸುಜಾತ ಹಾಗೂ ತಮ್ಮ ತಂಡದವರನು ಒಪ್ಪಿಸಿ ಕಾರ್ಯಕ್ರಮ ರೂಪಿಸಿದರು.
ಈಗ ಉಳಿದ್ದು ನೀವೇ ನೋಡಿದ್ದೀರಿ. ಡಾ.ವಿಸಾಜಿ ಎಲ್ಲರ ಮನಸುಗಳಲಿ ರಿಂಗಣಿಸುತ್ತಿದ್ದ ಅನುಮಾನಗಳಿಗೆ ಉತ್ತರ ಕೊಟ್ಟಾಗ. *ಜಗಳಬಂದಿ ಅಳಿದು ಜುಗಲ್ ಬಂದಿಯಾಯಿತು*
ವಿಸಾಜಿ ಮಾತುಗಳೇ *ಹೀರೋ*.
ಜುಗಲ್ ಬರೆಯುವ ರಿಸ್ಕ್ ತೆಗೆದುಕೊಂಡು ಸಿಕಾ ನಾಮದ ಕಾವ್ಯಶ್ರೀ ಎಲ್ಲರ ಮಾತುಗಳ ಮೂಲಕ
ಬೆನ್ನು ತಟ್ಟಿಸಿಕೊಂಡು *ನಾಯಕಿ* ಆದಾಗ ನಾ ಬೆಪ್ಪಾದೆ.
ಅಧ್ಯಕ್ಷತೆವಹಿಸಿದ್ದ ಹಿರಿಯ ಮಹಿಳೆ, ಈ ಜುಗಲ್ ಹುಡುಗ ಸ್ವಲ್ಪ *ಉಡಾಳ ಇದ್ದಂಗ ಅದಾನ* ಅಂದಾಗ ಪುಗಸಟ್ಟೆ ಸಿಕ್ಕ ರಸಿಕತನದ ಬಿರುದಿಗೆ ಈ ವಯದಲ್ಲೂ ಪುಳಕಗೊಂಡೆ.
ಇಡೀ ತಂಡದ ಮಹಿಳೆಯರ ಪ್ರೀತಿ-ವಿಶ್ವಾಸ, ಹೊಸತನವನ್ನು ಮುಕ್ತವಾಗಿ ಚರ್ಚಿಸಿ ಅನುಮಾನಗಳ ದೂರ ಮಾಡಿಕೊಂಡು ಕೇವಲ ಕಾವ್ಯವನ್ನು ಮಾತ್ರ ಆಸ್ವಾದಿಸುವ ಸರ್ವಾನುಮತದ ನಿರ್ಣಯ ತೆಗೆದುಕೊಂಡಿದ್ದಕ್ಕೆ ಚಿರರುಣಿ.
*ಕಲಬುರಗಿ ಮಾಧ್ಯಮ ಮಿತ್ರರು ನಿಜವಾಗಿಯೂ ವಂಡರ್ ಫುಲ್. ಭಿನ್ನ, ಭಿನ್ನ ಗ್ರಹಿಕೆಯ ವಿಭಿನ್ನ ವರದಿ ಮಾಡಿ ತಮ್ಮ ಕಾವ್ಯಾಸಕ್ತಿ ಮೆರೆದಿದ್ದಾರೆ*.
ಪಾಲ್ಗೊಂಡ ಎಲ್ಲಾ ಕಾವ್ಯಾಸಕ್ತರ ಸಹೃದಯತೆ ಕಂಡುಕೊಂಡು ಅರಳಿಹೋದೆ.
*ಭಾವ ಕೋಶದ ನೆನಪುಗಳೇ ಹಾಗೆ ಖುಷಿ ಕೊಡುತ್ತವೆ*.
ಆ ಖುಷಿಯನ್ನು ಕಲಬುರಗಿ ಮನಸುಗಳು ಕೊಟ್ಟಿದ್ದೀರಿ. ಜತನವಾಗಿಟ್ಟುಕೊಂಡರೂ ಅನಿಸಿದ್ದು ದಾಖಲಾಗಲಿ ಅನಿಸಿತು.
ಕಾಲ ಎಲ್ಲವನ್ನೂ ಮರೆಸುತ್ತೆ, ಕರಗಿಸಿ ಅರಗಿಸಿಕೊಳ್ಳುತ್ತೆ. ಅದಕೆ ನಾ ಮರೆಯುವ ಮುನ್ನ ನಿಮಗೆಲ್ಲ ಕ್ರುತಗ್ನತೆ ಸಲ್ಲಿಸುವ ನೆಪದಲಿ ಇಷ್ಟೆಲ್ಲ ಬರೆದೆ.
ಯಾಕೋ *Thanks to one and all*
ಎನ್ನಲೂ ಮನಸು ಬರಲಿಲ್ಲ.
ನಿಮ್ಮ ಎಲ್ಲ ಬಗೆಯ ಅಭಿಪ್ರಾಯಗಳನ್ನು ಗೌರವಿಸಿ, ಖುಶಿಯಿಂದ ಸ್ವೀಕರಿಸುತ್ತೇನೆ.
*ಮುಕ್ತತೆ ನನ್ನ ಶಕ್ತಿ. ಸಹನೆ ನನ್ನ ಮಿತಿ*
ಅಕ್ಷರವೆಂಬ ಮಾಯಾಲೋಕದ ಮೂಲಕ ಸದಾ ಸಂಪರ್ಕದಲ್ಲಿರೋಣ.
*ಎಲ್ಲರಿಗೂ ಸಾವಿರದ ಶರಣು*
*ಸಿದ್ದು ಯಾಪಲಪರವಿ*
No comments:
Post a Comment