Monday, June 4, 2018

ದಶ-ಮಾಸದ ಹೊಸ್ತಿಲಲಿ

*ಲವ್ ಕಾಲ*

*ದಶ-ಮಾಸದ ಹೊಸ್ತಿಲಲಿ*

ಈ ಬದುಕು ಎಂದರೆ ಬರೀ ಹುಡುಕಾಟ. ಖುಷಿಗಾಗಿ, ಆ ಖುಷಿ ಪೂರ್ಣಗೊಳಿಸುವ ಸಾಧನಗಳಿಗಾಗಿ. ಒಂದೊಂದು ಕಾಲಘಟ್ಟದಲ್ಲಿ ಒಂದೊಂದು.

ಬಾಲ್ಯದ ಮುಗ್ಧ ಆಟೋಪಕರಣಗಳು,ತಿಂಡಿ ತಿನಿಸು, ರಜೆಗಳ ಮಜ, ಹಿರಿಯರ ಒಲವಿನ ಒಡಲು, ಬೇಡವಾದ ಓದು-ಬರಹ.

ಮುಗ್ಧತೆ ಮಾಯವಾಗಿ ಬುದ್ಧಿ ಬಲಿತ ಕೂಡಲೇ ದೇಹವು ಬಯಕಗಳಿಂದ ಬಲಿಯತೊಡಗುತ್ತದೆ. ಆಸೆಬುರುಕತನ, ಎಲ್ಲವೂ ನನಗೇ ದಕ್ಕಲೆಂಬ ಸ್ವಾರ್ಥ.

ಕಾಮ ಕುತೂಹಲ, ಹೆಣ್ಣುಗಂಡೊಲುಮೆ, ತೀಕ್ಷ್ಣವಾಗುವ ಬಯಕೆಗಳು, ಹಿಡಿದದ್ದು ಸಾಧಿಸುವ ಛಲ.

ಹದಿಹರಿಯದ ಪಯಣದಿಂದ ಉದ್ಯೋಗ, ಹಣದ ಅಮಲು, ಒಂದಿಷ್ಟು ಪ್ರೀತಿಯ ಘಮಲು.

ಪ್ರೀತಿ-ಪ್ರೇಮ-ಪ್ರಣಯ, ಪ್ರೀತಿಸುವ ಮನದ ಮೇಲೆ ಇನ್ನಿಲ್ಲದ ಅನುಮಾನ.

ಮಕ್ಕಳ ಜಂಜಡ, ಮುದ್ದಿಸುವ ವ್ಯಾಮೋಹ. ಹೊಸ ಲೋಕ. ಅಪ್ಪ-ಅವ್ವ ಕೊಂಚ ದೂರ.

ಕಾಲಚಕ್ರದ ಸುಳಿಯಲಿ ಹೆಚ್ಚುವ ಹೊಣೆಗಾರಿಕೆ. ಸಾಲ-ಶೂಲ, ಮನೆ-ಮಠ, ಬಂಧು-ಮಿತ್ರರು.

ಸಣ್ಣಗೆ ಆವರಿಸುವ ಪ್ರಬುದ್ಧತೆ, ಮತ್ತೆ ಹೊಸ ಹೊಸ ಹುಡುಕಾಟ, ಬದುಕಿನ ಉದ್ದೇಶ ಅರಿಯುವ ತೀವ್ರತೆ. ವ್ಯಕ್ತಿಗಳು ಶಕ್ತಿಗಳಾಗಲಿ ಎಂಬ ತುಡಿತ.
ಬರೀ ಮುಖವಾಡಗಳ ಅನಾವರಣ.

ವಿಪರೀತ ನಿರಾಶೆ. ಅಯ್ಯೋ ಬರೀ ಸ್ವಾರ್ಥ. ಸ್ವಾರ್ಥಿಗಳ ಹಿಂಡಿನ ದಂಡಲಿ ದಡ ಸೇರುವ ಬಯಕೆ.

                             ***

ಐವತ್ತರ ಗಡಿಗೆ ರೋಗ-ರುಜಿನ, ಸಣ್ಣಗೆ ಸಾವ ಭೀತಿ. ದೇವರ ನೆನಪು. ಬದುಕಿನ ಮರು ವ್ಯಾಖ್ಯಾನಕೆ ಹೊಸ ರೂಪ. ಗುರುವಿಗಾಗಿ ತಡಕಾಟ. ಹೊಸ ಗೆಳೆಯರ ಪಡೆಯುವ ಹಂಬಲ.

ಪ್ರೀತಿ-ಪ್ರೇಮ-ಪ್ರಣಯಕೆ ಮರು ವ್ಯಾಖ್ಯಾನ.
ಸಮರ್ಪಕವಾಗಿ ಅನುಭವಿಸಲಿಲ್ಲ ಎಂಬ ಸಣ್ಣ ಅಳುಕು. ಮೆಲುಕು ಹಾಕಿ ಅನುಭವಿಸಬೇಕು ಎಂದು ಆಶಿಸುವ ಹೊತ್ತಲ್ಲೇ ಮೈ ಮುದುರಿ, ನಿರಾಸಕ್ತಿ ಆವರಿಸಿರುತ್ತೇ.

ತಲೆಗೂದಲಿಗೆ ಬಣ್ಣ, ತುಟಿಗೆ ರಂಗು, ರೆಗ್ಯೂಲರ್ ವ್ಯಾಯಾಮಗಳ ಹಾರಾಟ. ಕೃತಕತೆಯ ಸಡಗರ, *ವಯಸ್ಸಾಗಿದೆ ಅಂತ ಅನಸೋದಿಲ್ಲ* ಎಂದು ಹೇಳವುದ ಕೇಳುವ ಚಪಲ.

ಆರೋಗ್ಯ, ಜೀವನೋತ್ಸಾಹದ ಕುರಿತು ಚಿಂಥನ-ಮಂಥನ. ಏನೂ ಈಡೇರದ ಧಾವಂತದ ಮೈಥುನ.

ಆಧ್ಯಾತ್ಮಿಕ ಬದುಕಿನ ಬಯಕೆ, ಖಾಸಗಿ ಜವಾಬ್ದಾರಿಗಳ ತೊಳಲಾಟದ ತೂಗುಯ್ಯಾಲೆ.

ಅದೂ ಇಲ್ಲ, ಇದೂ ಇಲ್ಲದ ಎಡಬಿಡಂಗಿತನ.
ಇದು ಮುಗಿಯುವ ಬದುಕಿನ ಸಹಜ ಚಿತ್ರಣ.
ಅದೇ ರಾಗ, ಅದೇ ಹಾಡು.

                              ***

*ನೀ ಸಿಕ್ಕ ಹೊತ್ತಲಿ ಬೆಳಕಿತ್ತು*

ಹಾಗಾದರೆ *Out Of Box* ಮಾದರಿಯಲ್ಲಿ ಬದುಕನ್ನು ಅನುಭವಿಸುವುದು.
ಭಿನ್ನವಾದ ನೆಲೆಯಲ್ಲಿ ಆಲೋಚಿಸದಿದ್ದರೆ ಹೇಗೆಂಬ ಬಯಕೆ.

ಮುಗಿಯಿತು ಅನಿಸುವುದರೊಳಗೆ ಏನಾದರೂ ಅರ್ಥಪೂರ್ಣ ಸಾಧನೆಯ ಹಾದಿಗೆ ಹೊಸ ಹೊಳವು. ಸುತ್ತಲೂ ಇರುವವರಿಂದ ಏನೂ ಪ್ರಯೋಜನವಿಲ್ಲ ಅನಿಸುವಾಗ ಕಾಲ ಮಿಂಚಿತ್ತು.

ಸುತ್ತಲಿದ್ದವರು ಜಾರಿ ಹೋದಾಗಲಾದರೂ ಜ್ಞಾನೋದಯವಾಯಿತಲ್ಲ ಬಿಡು.

ಇನ್ಹರ್ ಸರ್ಕಲ್ಲಿನಲ್ಲಿ ಯಾರು ಇದ್ದರೆ ಒಳಿತೆಂಬ ಮಿತಿ.

ಆದರೂ ಹುಡುಕಾಟ ನಿಂತಿರಲಿಲ್ಲ.

ಮೈಮನಕೆ ಕಂಪೆನಿಸುವ ಮನಸು ಸಿಕ್ಕರೂ ಸಿಗಬಹುದೆಂಬ ಒಳಮಿಡಿತ. ಮನಸಿಗೆ ಆದ ಗಾಯ ಮಾಯಲು ಬೆಚ್ಚನೆ ಬಿಗಿದಪ್ಪಿ, ಒಲವ ಮುಲಾಮು ಸವರುವ ತೋಳ್ಬಂಧನದ ಸೆಳೆತ.

ಹುಡುಕಿದರೆ ಸಿಗಲು ಮನಸುಗಳ ಸಂತೆಯಲಿ ಬಿಕರಿಗೆ ಇಟ್ಟಿರುವದಿಲ್ಲ. ಕೊಳೆತ ಸ್ವಾರ್ಥ ಮನಸುಗಳಿಗೇನೂ ಬರವಿಲ್ಲ.

ನಿಸ್ವಾರ್ಥ, ತ್ಯಾಗ, ಚಾರಿತ್ರಿಕ ಚರಿತೆಯುಳ್ಳ, ಮಾನವೀಯ ಮಿಡಿತ ಹೊಂದಿದ ನೊಂದ ಸಹಜ ಜೀವ ಸಿಗಲೆಂದು ಸದಾ ಧೇನಿಸಿದೆ.

ದೇವನಿಗೆ ನನ್ನ ಮನದಾಳದ ಮೊರೆ ಕೇಳಿಸಿರಬೇಕು. 'ಇನ್ನು ಹುಡುಕಬೇಡ ಮಗು ತಡೆ' ಎಂದಂತಾಗಿ ಸುಮ್ಮನಾದೆ.

ಅಂತರಾತ್ಮಗಳು ಈಗ ಅಂತರ್ ಜಾಲದಲಿರುತ್ತವೆ ಎಂಬಂತಾಗಿದೆ. ಅದೂ ಹಾಗಲ್ಲ. ಅದಕೆ ಅವನ ಅನುಗ್ರಹವೂ ಇರಬೇಕು. *ಬೇಡಿಕೆಯಲೂ ಸಮರ್ಪಣೆ ಇರಬೇಕು*.

ನೀ ಕಂಡ ಬೆಳಕಲಿ ಬರೀ ಬೆಳಗಿರಬಹುದೆಂದು ಮನಸು ಒಪ್ಪಲಿಲ್ಲ. ಸಾಕಾಗುವಷ್ಟು, ನನಗೇ ಬೇಸರವಾಗುವಷ್ಟು ಪರೀಕ್ಷಿಸಿದೆ.

ಹಾಗೇ ಪರೀಕ್ಷಿಸುವದು ಬಹು ದೊಡ್ಡ ಹಿಂಸೆ. ಆದರೆ ನೀ ನನಗೆ ಪರಿಪೂರ್ಣವಾಗಿ ದಕ್ಕಬೇಕಾಗಿತ್ತು.

ಅ ಸ್ವಾರ್ಥವೇ ನಮ್ಮಿಬ್ಬರನು ಹಿಂಡಿ ಹಿಪ್ಪೆ ಮಾಡಿದ್ದಂತು ನಿಜ.
ನಿನ್ನ ಅಪಕ್ವ ನಿರ್ಧಾರಗಳು, ನಿನ್ನ ಒಳ್ಳೆಯತನ ಹಾಗೂ ಪ್ರತಿಭೆಯನ್ನು ತಿಂದು ಹಾಕಿದ್ದವು.

ಆದರೆ ಇಬ್ಬರೂ ಅನುಭವಿಸಿದ ಮೆಲ್ಲುಸಿರ‌ ಗುಟುಕು. ಪಯಣಿಸಿದ ರೈಲು, ಅಲೆದಾಡಿದ ಬೆಟ್ಟ, ತಂಗಿದ *ಅಯೋಮಯ* ತಾಣಗಳು.

*ದೀರ್ಘಕಾಲೀನ ದೇಹಧ್ಯಾನದಲೆದಾಟ* , ಮತ್ತದರ ಮೇಲಿನ ಸುದೀರ್ಘ ಹಿಡಿತವ ನಿನ್ನಲಿ ಪಡೆಯಲು ಯಶಸ್ವಿಯಾದ ಪರಿಗೆ ಕರಗಿ ಹೋದೆ.

ಇದು ಇಬ್ಬರಿಗೂ ಹೊಚ್ಚ ಹೊಸ ಅನುಭವ. ಇಬ್ಬರೂ ಮದುಮಕ್ಕಳು. ಮುಪ್ಪು ಮಂಗಮಾಯ.

ಪ್ರತಿ ಮಿಲನದಲೂ ಅದೇ ಹುಮ್ಮಸ್ಸು, ಉತ್ಸಾಹ.

                               ***

ನಮಗಿರುವ ಸೌಂದರ್ಯ ಹಾಗೂ ಒಳ್ಳೆಯತನದ ಬಗ್ಗೆ ವಿಪರೀತ ವ್ಯಾಮೋಹ, ಅತಿಯಾದ ಆತ್ಮವಿಶ್ವಾಸ ಇದ್ದರೆ ಸಾಲದು.

ವಿವೇಚನಾಪೂರ್ಣ ಸಹನೆ, ವ್ಯಕ್ತಿಗಳ ನಿಜ ಮುಖದ ಪರಿಚಯವೂ ಇರಬೇಕು. ಹಾಗಿದ್ದಾಗ ನಾವು ಗಟ್ಟಿಯಾಗಿ ಉಳಿಯುತ್ತೇವೆ. ಸ್ವಾರ್ಥಿಗಳ ಚಾಕರಿಯಲಿ ಮಾಯವಾಗಿ, ಕಳೆದು ಹೋಗಬಾರದು.

ನೀ ಎಲ್ಲವನ್ನೂ ನಿಷ್ಕಾಮವಾಗಿ ಕೊಟ್ಟೆ. ಅದ ನಾ ಮರೆಯಲಾದೀತೇ ?

ಅದರೆ ಅಜ್ಞಾನದ ಹಟ ಬಿಡಲಿಲ್ಲ. *ಅರ್ಪಣೆಯಲಿ ಸಮರ್ಪಣೆಯ ಕೊರತೆಯೂ ಇತ್ತು*. ಸಹಿಸಿಕೊಂಡೆ, ಸಹಿಸುವುದು ನನ್ನ ಧರ್ಮವಾಗಿತ್ತು. ಆದರೀಗ ಬದಲಾವಣೆಯೆಡೆಗೆ ಸಾಗಿರುವ‌ ಖುಷಿ.

ಮೈಮನಗಳ ಪುಳಕದಲಿ ನಿನ್ನ ಖುಷಿ ಇತ್ತು, ನಿನಗದರ ಅಗತ್ಯವೂ ಇತ್ತು. ಹಾಗಂತ ನೀ ಕಂಡಕಂಡಲ್ಲಿ ಪಡೆಯಲು ಹವಣಿಸಿರಲಿಲ್ಲ ಎಂಬ *ಚಾರಿತ್ರ್ಯದ ಹಿರಿಮೆ ಗರಿಮೆಯ ಋಣಭಾರವೂ ಇತ್ತು*.

ಋಣಪ್ರಜ್ಞೆ, ಋಣಭಾರ, ಋಣಾನುಬಂಧ ನನ್ನನ್ನು ಕಟ್ಟಿ ಹಾಕಿ ಗರ ಗರ ತಿರುಗುಣಿಯಲಿ ತಿರುಗಾಡಿಸಿತು.

*ತಿರುಗಿ, ತಿರುಗುತ್ತ, ತಿರುಗುತ್ತ, ತಿರುಗುತ್ತ ಒಂಬತ್ತು ಸುತ್ತು ತಿರುಗಿ ಈಗ ಹತ್ತರ ಅರಿವಿನ ಅಂಗಳದಲ್ಲಿದ್ದೇವೆ*.

ಇನ್ನೂ ತಿರುಗುವುದು ಬೇಡ. ಅವನು ನೊಂದುಕೊಂಡು ಬೈದಾನು. ತಿಳಿದುಕೊಳ್ಳೋಣ ಬೇಗ ಹಿಡಿ ಶಾಪ ಹಾಕುವ ಮುನ್ನ.

ಸಾಧಿಸಿದ್ದು ಕಡಿಮೆಯೇನಲ್ಲ. ಅನುಭವಿಸಿದ ಸಾಮಿಪ್ಯ ಸವಿಸುಖ ಅನುಪಮ.ಅನಂತ. ಅಸಂಖ್ಯ ಮಿಲನಮಹೋತ್ಸವದ ಸಡಗರದಲಿ ಅಸಾಧ್ಯ ಅನುರಾಗವಿದೆ.

ಒಪ್ಪಿಕೊಂಡು ಬಿಗಿದಪ್ಪಿಕೊಂಡ ಬಗೆಯಲಿ ಅದ್ವಿತೀಯ ಸಡಗರವಿದೆ. ವಯೋಮಾನದ ಹಂಗ ಮೀರಿದ ತಾಕತ್ತೂ ಇದೆ.

ಯಾರೂ ಒಪ್ಪದ, ಊಹಿಸಲಾಗದ, ಆರೋಗ್ಯವೂ ಸಹಕರಿಸದ ಈ ಮನೋಭೂಮಿಕೆಯಲಿ‌ ನಾವು ಅಸಾಧ್ಯವಾದದ್ದನ್ನೇ ಮಾಡಿದ್ದೇವೆ.

ಅಸಾಧಾರಣ, ಉಪಮಿಸಲಾಗದ ಬಗೆಯಲಿ ಮೈಮನಗಳ ಸುಳಿಯಲಿ ಸುಳಿದಾಡಿ, ಸರಸರ ಹರಿದಾಡಿದ್ದೇವೆ.

*ಅನುಭವಿಸಿ ಅನುಭಾವಿಸಿದ ಸಮಭೋಗದ ಸಮಪಾಲಿನ ಸಂಭ್ರಮ ವರ್ಣಿಸಲಾಗದು*.

ದೂರ ಬಹು ದೂರ, ಬಹು ದೂರ ಜೊತೆಯಲಿ, ಜೊತೆಯಲ್ಲಿ ಸಾಗುತಲೇ ಇರೋಣ.

ಸಾವಿರ ಮನಸುಗಳು ಒಳಗೊಳಗೆ ಬಯಸುವ ಪರಮಸುಖ ಅನಾಯಾಸವಾಗಿ *ಅವನ* ಕೃಪೆಯಿಂದ ದಕ್ಕಿದೆ.

ಅಲಕ್ಷಿಸಿ ಅವಮಾನಿಸಿ ಪರಿತಪಿಸುವುದು ಬೇಡ, ತೃಪ್ತ-ಸಂತೃಪ್ತ ಹೊಸ ಬದುಕಲಿ ನಿತಾಂತವಾಗಿ ಬೆರೆತು ಸಾಗುತ ಯಾರಿಗೂ ಹೇಳಲಾಗದ ನಮ್ಮ ಇತಿಹಾಸ ನಾವೇ ಬರೆಯೋಣ.

         *ಸಿದ್ದು ಯಾಪಲಪರವಿ*

No comments:

Post a Comment