Tuesday, June 12, 2018

ವಿವಾದಗಳೇ ಇಲ್ಲದ ಮೇಲೆ...

ಲವ್‌ ಕಾಲ

*ವಿವಾದಗಳೇ ಇಲ್ಲದ ಮೇಲೆ...*

*ಪ್ರೀತಿ ಇಲ್ಲದ ಮೇಲೆ ಏನನ್ನೂ‌ ಮಾಡಲಾಗುವುದಿಲ್ಲ, ದ್ವೇಶವನ್ನೂ*

ಪ್ರೊ. ಚಂಪಾ ಅವರ ಕಾಡುವ ಸಾಲುಗಳು.

ಈ ಪುಟ್ಟ ಪಯಣದಲಿ ಪ್ರೀತಿಗಿಂತ ಜಗಳವಾಡಿದ್ದೇ ಹೆಚ್ಚು. ಕಾರಣ ಹುಡುಕುವುದು ಕಷ್ಟ. *ಎಲ್ಲಿ ಪ್ರೀತಿ ಅಲ್ಲಿ‌ ಸಂಶಯ*  ಹಾಗಂತ‌ ಎಷ್ಟೊಂದು ಸಮಾಧಾನ‌ ಮಾಡಿಕೊಳ್ಳಲಾದೀತು ?

ಸಹನೆಗೂ‌ ಒಂದು ಮಿತಿ ಇದೆ ಆದರೆ ಪ್ರೀತಿಸುವ ಹೃದಯಕ್ಕೆ ಮಿತಿ ಇರುವುದೇ ಇಲ್ಲ. ಮಿತಿ ಮೀರಿ ಎಲ್ಲವನೂ ಸಹಿಸಿಕೊಳ್ಳುತ್ತದೆ.

ಏನೇನೂ ನೆಪ ಹಿಡಿದು ಆಡಿದ ಜಗಳಕೆ ಲೆಕ್ಕ ಇಡಲಾದೀತೆ ?

ಆದರೂ ಮಾತು ನಿಲ್ಲಿಸಲೇ ಇಲ್ಲ. ಮಾತನಾಡುವಾಗಲೆಲ್ಲ ವಿವಾದ, ಜಗಳ‌ ಇದ್ದೇ ಇರುತ್ತಿತ್ತು.

ಇಬ್ಬರಿಗೂ ಅಸಮಾಧಾನ. ಮಾತು ಮುಗಿಯುವ ಮೊದಲು ಪರಸ್ಪರ ರಮಿಸಿಕೊಂಡೇ ವಿರಮಿಸುವ ಅನಿವಾರ್ಯತೆ.

*ಹಸಿವು, ಬಡತನ, ಕೌಟುಂಬಿಕ ಜಂಜಾಟ, ಸಾಲ-ಶೂಲ, ಸಾಮಾಜಿಕ ಸಮಸ್ಯೆಗಳೇ ಕಿತ್ತು ತಿನ್ನುತ್ತಿರುವಾಗ ಈ‌ ಪ್ರೀತಿ-ಗೀತಿ ಯಾವನಿಗೆ ಬೇಕು* ಎಂದು ಬೈದುಕೊಳ್ಳುತ್ತಲೇ ಪ್ರೀತಿಯ ಸುಳಿಯಲ್ಲಿ ಸಿಕ್ಕು‌ ಒದ್ದಾಡುತ್ತೇವೆ.

ಮನೋತೆವಲು ಎಲ್ಲಕ್ಕಿಂತ ಮುಂದೆ ಓಡ್ತಾ ಇರುತ್ತೆ. ಅದು ಒಂದರ್ಥದಲ್ಲಿ ಐಡೆಂಟಿಟಿ ಕ್ರೈಸಿಸ್ ಕೂಡ ಹೌದು.

*ಇಷ್ಟೆಲ್ಲ ಹೋರಾಟ, ಗೊಂದಲಗಳು ಇದ್ದಾಗ ಇದೆಲ್ಲ ಯಾರಿಗೂ ಬೇಡ* ಎನ್ನುತ್ತಿರುವಾಗಲೇ ಸುಳಿಯಲಿ ಕಳೆದು ಹೋಗಿ ನಮ್ಮನ್ನು ನಾವೇ ಹುಡುಕುತ್ತಿರುತ್ತೇವೆ.

ಮನುಷ್ಯ ಸಂಘಜೀವಿ ಅದರಂತೆ ಸೂಕ್ಷ್ಮ ಜೀವಿಯೂ ಹೌದು!

ಬದುಕಿನ ಪ್ರತಿಯೊಂದು ಸಂಗತಿಗಳನ್ನು, ವ್ಯಕ್ತಿಗಳನ್ನು, ಅನುಭವಗಳನ್ನು ಸೂಕ್ಷ್ಮವಾಗಿ ಅವಲೋಕಿಸುವ ಮನಸ್ಥಿತಿಯೂ ಇರುವಂತೆ, ಯಾವುದನ್ನೂ ಲೆಕ್ಕಿಸದ careless, easygoing approach ಕೂಡ ಇರುತ್ತದೆ.

ಆದರೆ ಎರಡೂ ಅಷ್ಟೇ ಸತ್ಯ.‌ ಗಂಭೀರವಾಗಿ ಪರಿಗಣಿಸುವ ಸೂಕ್ಷ್ಮಜೀವಿಗಳು, ಜೀವನವನ್ನು ಗಂಭೀರವಾಗಿ ಪರಿಗಣಿಸದವರಿಗೆ ಹುಚ್ಚರಂತೆ ಕಾಣುತ್ತಾರೆ.

                              ***

ನಮ್ಮಿಬ್ಬರ ಮಧ್ಯೆ ನಡೆದದ್ದೂ ಅದೇ. ನಾವಿಬ್ಬರೂ ಪರಸ್ಪರ ಹುಚ್ಚರು. ಅದಕ್ಕಾಗಿಯೇ ವಾದ,‌ ವಿವಾದ, ಭಿನ್ನಾಭಿಪ್ರಾಯ, ಜಗಳ, ತಕರಾರು, ಉಸಾಬರಿ, ಅಜ್ಞಾನ, ಅಹಂಕಾರ ಇನ್ನೂ ಏನೇನೋ.

ಒಮ್ಮೆ ಈ ಸತ್ಯ ತಿಳಿದರೆ ಸಾಕು ಜಗಳವಾಡಲು ಕಾರಣಗಳೇ ಇರುವುದಿಲ್ಲ. ಆ ಸತ್ಯದರ್ಶನ ಆಗುವವರೆಗೆ ಜಗಳವಾಗುತ್ತಲೇ ಇರುತ್ತದೆ.

ಜಗಳದ ಕಾರಣದಿಂದಾಗಿ ದೂರಾಗುವುದೂ ಅಸಾಧ್ಯ.
ಒಂದೇ ಸೂರಿನಡಿ, ಒಂದೇ ಹಾಸಿಗೆಯಲಿ, ಒಂದೇ ಮುಸುಕಿನಲಿ ಮಿಸುಕಾಡುತ್ತ ಕಾದಾಡಿ ಹೊರಬರಲೇಬೇಕು.

ಈ ಬದುಕಿನಲ್ಲಿ ಎಲ್ಲ ಕಡೆ ಒಳ ನುಗ್ಗಬೇಕು, ಹಾಗೆ ಅಲ್ಲಿ ತುಂಬಾ ಹೊತ್ತು ಇರಲಾಗದು. ಮುಗಿದ ಮೇಲೆ ಹೊರ ಬರಲೇಬೇಕು.

ಈ ಒಳ-ಹೊರಗಿನ ನುಗ್ಗಾಟವೇ ಜೀವನದ ರಹಸ್ಯ.
ಈ ನುಗ್ಗಾಟ ಪ್ರೇಮದಲ್ಲಿದೆ, ಕಾಮದಲ್ಲಿದೆ, ಉಡುಗೆಯಲ್ಲಿದೆ, ತೊಡುಗೆಯಲ್ಲಿದೆ, ಅಡುಗೆಯಲ್ಲಿದೆ, ಮಾತು-ಮಂಥನದಲ್ಲಿಯೂ ಇದೆ.

ನಾವೀಗ ತುಂಬಾ ಕಾದಾಡಿ, ದಣಿದು, ಒಂದು ನೆಲೆ ಕಂಡುಕೊಂಡಿದ್ದೇವೆ. ಇಷ್ಟೆಲ್ಲಾ ಅರ್ಥವಾದ ಮೇಲೂ ಗೋಳಾಡುವದರಲ್ಲಿ ಅರ್ಥವಿಲ್ಲ.

ನಿಶ್ಚಿಂತವಾಗಿ, ನಿರ್ಮಲವಾಗಿ, ನಿರ್ಲಿಪ್ತವಾಗಿ ಹೀಗೆಯೇ ಇದ್ದುಬಿಡೋಣ. ಮತ್ತೆ ವಿನಾಕಾರಣ ಕಾರಣ ಹುಡುಕದೆ.

      *ಸಿದ್ದು ಯಾಪಲಪರವಿ*

No comments:

Post a Comment