Friday, June 1, 2018

ಲಡಾಯಿ ಬಸೂ

*ಬದ್ಧತೆಯ ಬದುಕಿನ ಲಡಾಯಿ ಬಸೂ*

*ಹುಟ್ಟು ಹಬ್ಬದ ಶುಭಾಶಯದ ನೆಪದಲ್ಲೊಂದಿಷ್ಟು*

ಅರ್ಧ ಶತಕ ದಾಟಿದ ಬಸವರಾಜ ಸೂಳಿಬಾವಿ ಧಾರವಾಡದ ಕರ್ನಾಟಕ ಕಾಲೇಜಿನ ಸಂಗಾತಿ.
ಮುಂದೆ ತೊಂಬತ್ತರ ದಶಕದಲ್ಲಿ‌ ಇಬ್ಬರೂ ಗದುಗಿನಲ್ಲಿ ವೃತ್ತಿ ಬದುಕು ಆರಂಭಿಸಿ ಜೊತೆಯಾಗಿದ್ದೆವು.

ಸಾಹಿತ್ಯ, ಸಂಸ್ಕೃತಿಯ ಬೇರು ಹಿಡಿದ ಜೀವಪಯಣಕೆ ನೂರೆಂಟು ತಲ್ಲಣಗಳು.
ಉದ್ಯೋಗ ಎಟುಕದಾದಾಗ ಲಡಾಯಿ ಪತ್ರಿಕೆ ಮೂಲಕ ತಂದುಕೊಂಡ ಅನಾಹುತಗಳ ಮಧ್ಯೆ ವ್ಯಕ್ತಿತ್ವ ರೂಪಿಸಿಕೊಂಡ ಬಸೂ ಅಪ್ಪಟ ಹೋರಾಟಗಾರ.

ಅನೇಕ ಆಘಾತ, ಅಪಘಾತಗಳನ್ನು ಎದುರಿಸಿ ಇಲ್ಲಿಯವರೆಗೆ ಸಾಗಿ ಬಂದಿದ್ದಾನೆ.

ಅವನ ಮಗಳಷ್ಟೇ ಪ್ರೀತಿಸುವ ಅಕ್ಷರ ಲೋಕ ಅವನ ಕೈ ಬಿಡಲಿಲ್ಲ.

ಬಸೂ ಈಗ ಬೆಳೆದಿದ್ದಾನೆ‌. ನೆಲೆ ನಿಂತಿದ್ದಾನೆ. ಅವನ ಪ್ರಕಾಶನ ಅರ್ಥಪೂರ್ಣ ಕೆಲಸಗಳನ್ನು ಮಾಡುತ್ತಲಿದೆ.

ಈ ಹಿಂದೆ ಅವನ ಮೇಲೆ ಹಲ್ಲೆಯಾದಾಗ ತುಂಬಾ ನೋವು ಅನುಭವಿಸಿದ್ದೆ. ಅವನ ಬೆನ್ನು ಕಟ್ಟಿದ್ದು ಸಾರ್ಥಕವೆನಿಸಿದೆ.

ಇತ್ತೀಚಿನ ವೈಚಾರಿಕ ಹತ್ಯೆಗಳು ನಮ್ಮನ್ನು ಕಂಗೆಡಿಸಿವೆ. ಫ್ಯಾಸಿಸ್ಟ್ ಧೋರಣೆ ರಾಕ್ಷಸ ಸ್ವರೂಪ ತಾಳದಂತೆ ಕಾಯಬೇಕಾಗಿದೆ. ಈ ಕೆಲಸವನ್ನು ಲಡಾಯಿ ಸಮೂಹ ಬಸೂ ನಾಯಕತ್ವದಲ್ಲಿ ಮಾಡುತ್ತಲಿರುವುದು ಅಭಿನಂದನೀಯ.

ಇತ್ತೀಚಿನ ಧಾರವಾಡದ ಮೇ ಸಂಗಮ ಬಸೂನ ಬದ್ಧತೆಗೆ ಸಾಕ್ಷಿ.

ಇಡೀ ರಾಜ್ಯದ ಪ್ರಗತಿಪರ ಮನಸುಗಳು ಅವನೊಂದಿಗಿರುವುದು ಬಹಳ ದೊಡ್ಡ ಬೆಳವಣಿಗೆ. ಈ ದೇಶದ ಪ್ರಜಾಪ್ರಭುತ್ವ ವ್ಯವಸ್ಥಗೆ ಅಂತಹ ಶಕ್ತಿ ಇದೆ.
ಎಲ್ಲ ಸವಾಲುಗಳನ್ನು, ಆತಂಕಗಳನ್ನು ಎದುರಿಸಿ ಮೈಕೊಡವಿ ಮೇಲೇಳುವ ತಾಕತ್ತಿದೆ.

ಎಡಪಂಥೀಯ ಸಂಘಟನೆಗಳು ಆ ಕೆಲಸದಲ್ಲಿ ನಿರತವಾಗಿದ್ದರಿಂದ ಕನ್ನಡ ನಾಡು ಇಡೀ ದೇಶದಲ್ಲಿಯೇ ಭಿನ್ನವಾಗಿದೆ.

ಹತ್ತಾರು ವರ್ಷಗಳ ಹಿಂದಿನ ಬಸೂ ಈಗಿಲ್ಲ ಬೆಳೆದು ಬದಲಾಗಿದ್ದಾನೆ. ಪತ್ರಿಕೆ ನಡೆಸುವಾಗಿನ ಹುಂಬತನ ಇಲ್ಲದಾಗಿದೆ.

ಸೈದ್ಧಾಂತಿಕವಾಗಿ ನಮ್ಮೊಂದಿಗೆ ಇರದವರನ್ನೂ ಒಳಗೊಂಡ ಬಾಂಧವ್ಯ ನಮ್ಮದಾಗಬೇಕು. ಜಗಳ ಸೈದ್ಧಾಂತಿಕ ನೆಲೆಯಲ್ಲಿರಬೇಕು. ವೈಯಕ್ತಿಕ ದಾಳಿಯಾಗಬಾರದು.
ಮನಸುಗಳ ಕಟ್ಟುವ ಕೆಲಸದಲ್ಲಿ ತೊಡಗಿದಾಗ ಅಡೆತಡೆ ಸಹಜ. ಅವುಗಳನ್ನು ಎದುರಿಸಿ ಬೆಳೆಯಬೇಕು.

                           ***
ಪ್ರಿಯ ಬಸೂ,

ನೀ ಈಗ ಒಂಟಿಯಲ್ಲ. ಸಾವಿರಾರು ಮನಸುಗಳು ನಿನ್ನೊಂದಿಗಿವೆ. ಒಂಟಿತನವ ಏಕಾಂತವಾಗಿಸಲು ಮೈತುಂಬ ಕೆಲಸಗಳೂ ಇವೆ.

ಮಾಡುತ್ತ ಹೋದಾಗ ನಿನ್ನ ಬದ್ಧತೆ ನಿನ್ನ ಕೈ ಹಿಡಿಯುತ್ತದೆ. ವಿರೋಧ ತಾತ್ವಿಕ ನೆಲೆಯಲ್ಲಿರಲಿ. ಎಲ್ಲರೂ ಸ್ವಾರ್ಥಿಗಳೇ ಅವರವರ ಅನುಕೂಲಕ್ಕೆ ತಕ್ಕಂತೆ ಇರುತ್ತಾರೆ.

ನಾನು ಓದಿದ ವಚನಕಾರು, ಬುದ್ಧ, ಅಲ್ಲಮ‌ ತೋರಿದ ಹಾದಿಯಲ್ಲಿ ನಾನು  ಯಾವುದೇ ಗೊಂದಲವಿಲ್ಲದೇ ಓದುತ್ತಾ, ಬರೆಯುತ್ತಾ ಹೊರಟಿದ್ದೇನೆ.
ಮಾರ್ಗ ಎಡವೋ, ಬಲವೋ ಅಥವಾ ಮಧ್ಯವೋ ನಾಕಾಣೆ. ಆದರೆ ನಿನ್ನ ಮಾರ್ಗ ಸ್ಪಷ್ಟವೂ, ದಿಟ್ಟವೂ ಇದೆ.

ನಮ್ಮಿಂದಲೇ ಎಲ್ಲ ಎಂಬ ಭ್ರಮೆ ಬೇಡವೇ ಬೇಡ.
ಹಾದಿಯಲಿ ನಡೆವಾಗ ಕಾಲಿಗೆ ತಾಗುವ ಕಲ್ಲು-ಮುಳ್ಳುಗಳ ದ್ವೇಷಿಸುವದು ಬೇಡ.ಅದರಿಂದಲೂ ಪಾಠ ಕಲಿಯೋಣ.

ನಿನ್ನ ಪ್ರಕಾಶನದ ಪುಸ್ತಕಗಳು ಅದ್ಭುತ.
*ನೀನಿಟ್ಟುಕೊಂಡಿರುವ ಪುಸ್ತಕ ಪ್ರೀತಿಯ ಕುಡಿಗಳು*.

ಮೂರು ದಶಕಗಳ ಕಾಲ ಕಾಣುವದನ್ನೆಲ್ಲ ಕಂಡು, ಅನುಭವಿಸಬೇಕಾದದ್ದನೆಲ್ಲ ಅನುಭವಿಸಿದ್ದೇವೆ.

ಈಗ ಏನಿದ್ದರೂ ಖುಷಿಯಿಂದ ಬದುಕುವದು. ಮತ್ತೊಬ್ಬರನ್ನು ಬದುಕಲು ಬಿಡುವುದು.

ದೈಹಿಕ, ಮಾನಸಿಕ ಆರೋಗ್ಯ ಗಟ್ಟಿಯಾಗಿಟ್ಟುಕೊಂಡು ಓಡಾಡುತ್ತ ನೂರು ಕಾಲ ಖುಷಿಯಾಗಿರು.

*All the best ಗೆಳೆಯಾ*

    *ಸಿದ್ದು ಯಾಪಲಪರವಿ*

No comments:

Post a Comment