Wednesday, May 19, 2010

ಮುನ್ನುಡಿ

ಕಾವ್ಯ ಬಾಯಿಪ್ರಸಾದವಲ್ಲ, ಋಣಾನುಸಂಬಂಧ
ನಾನು ಕನ್ನಡ ವಿಶ್ವವಿದ್ಯಾಲಯದ ಕುಲಸಚಿವನಾಗಿ ಕಾರ್ಯನಿರ್ವಹಿಸುತ್ತಿದ್ದೆ. ಈ ಅವಧಿಯಲ್ಲಿ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಹಲವರು ಸರ್ಕಾರದಿಂದ ನಿಯುಕ್ತರಾದರು. ಅವರ ಪಟ್ಟಿ ಬಂದಾಗ ಪ್ರೊ. ಸಿದ್ದು ಯಾಪಲಪರವಿ ಎಂಬ ಹೆಸರಿತ್ತು. ನೇಮಕಗೊಂಡ ನಂತರ ಮೊದಲ ಸಭೆಗೆ ಕಾರ್ಯಕಾರಿ ಸಮಿತಿಯ ಸದಸ್ಯರು ಬಂದರು. ನಾನು ಕಛೇರಿಯಲ್ಲಿ ಕೂತಿದ್ದೆ. ನನ್ನ ಆಫಿಸಿನೊಳಕ್ಕೆ ಒಬ್ಬ ನಗುಮೊಗದ ದುಂಡನೆಯ ವ್ಯಕ್ತಿ ಬಂದು 'ನಮಸ್ಕಾರ ಸಾರ್, ನಾನು ಸಿದ್ದು ಯಾಪಲಪರವಿ' ಎಂದು ಪರಿಚಯ ಹೇಳಿಕೊಂಡರು. ಅವರ ಮಾತು -ಧ್ವನಿ-ಶೈಲಿ ನನಗೆ ತುಂಬಾ ಆಪ್ತ ಎನಿಸಿತು. ಈತ ಸ್ನೇಹಪರ ಎಂದೆನಿಸಿತು. ಮುಂದೆ ಮೂರು ವರ್ಷಗಳ ಅವಧಿಯವರೆಗೆ ಅವರು ಸದಸ್ಯರಾಗಿ ಕಾರ್ಯ ನಿರ್ವಹಿಸಿದರು. ಅವರು ನನ್ನೊಡನೆ ಹಲವಾರು ದಿನ ಕುಳಿತು ಕವಿತೆ, ಕತೆ, ಸಮಕಾಲೀನ ಕನ್ನಡ ಮನಸ್ಸು, ವೈಚಾರಿಕತೆ - ಇನ್ನು ಮುಂತಾದ ಹಲವಾರು ವಿಷಯಗಳನ್ನು ನನ್ನ ಜೊತೆ ಮಾತನಾಡುತ್ತಿದ್ದರು. ಅವರದು ಸಮಪಾತಳಿಯ ದೃಷ್ಠಿ. ಎಲ್ಲೂ ರೇಜಿಗೆ ಇಲ್ಲ. ತನಗೆ ತಿಳಿದ್ದನ್ನು ಮಾತ್ರ ಹೇಳುತ್ತಿದ್ದರು. ಇಲ್ಲದಿದ್ದರೆ ತಿಳಿದುಕೊಂಡು ಬಂದು ಮಾತನಾಡುತ್ತಿದ್ದರು. ಅವರು ನಾನು ಅನೇಕ ವಿಚಾರಗಳನ್ನು ಮಾತನಾಡಿದ್ದೇನೆ; ಜೊತೆಗೆ ಸಂವಾದ ನಡೆಸಿದ್ದೇವೆ.
ನನಗೂ ಸಿದ್ದು ಯಾಪಲಪರವಿಗೂ ಹೀಗೆ ಸ್ನೇಹ ಬೆಳೆದು ಬಂತು. ನನ್ನ ಬದುಕಿನ ಕಳೆದ ಏಳೆಂಟು ವರ್ಷ ಅವರೊಡನೆ ಹಿತವಾಗಿ ಕಳೆದಿದ್ದೇನೆ. ಅವರ ಸ್ನೇಹದ ಅಮೃತವರ್ಷದಲ್ಲಿ ನಿತಾಂತನಾಗಿ ಕಳೆದಿದ್ದೇನೆ. ಅವರು ಕಳೆದ ಎರಡು ತಿಂಗಳ ಹಿಂದೆ 'ನೆಲದ ಮರೆಯ ನಿಧಾನ' ಸಂಕಲನವನ್ನು ನನ್ನ ಕೈಗಿಟ್ಟು " ಇದಕ್ಕೊಂದು ಮುನ್ನುಡಿ ಬರೆದುಕೊಡಿ" ಎಂದರು. ನನಗೆ ಕವಿತೆಯು ಪ್ರೀತಿಯ ವಿಷಯ; ಅದನ್ನು ಬರೆದ ಕವಿ ನನ್ನ ಪ್ರೀತಿಯ ಸ್ನೇಹಿತ. ಇವೆರಡೂ ನನ್ನ ಮನಸ್ಸನ್ನೂ ಕಟ್ಟಿ ಬೆಳೆಯಿಸಿತು. ಈ ಸಂಕಲನ ಕಳೆದ ಒಂದು ತಿಂಗಳಿನಿಂದ ನನ್ನ ಜತೆ ಎಲ್ಲೆಲ್ಲೂ ಪ್ರಯಾಣ ಮಾಡಿದೆ. ನಾನು ಹೋದ ಕಡೆ ಈ ಕವಿತೆಯ ಕೆಲವು ಸಾಲುಗಳನ್ನು ಕಣ್ಣಾಡಿಸಿದ್ದೇನೆ. ಆಗಾಗ್ಗೆ ಶಿಷ್ಯಮಿತ್ರರಿಗೆ ಇಲ್ಲಿಯ ಕವಿತೆಗಳನ್ನು ಓದಿ ಹೇಳಿದ್ದುಂಟು. ನನಗೆ ಮೆಚ್ಚುಗೆಯಾದ ಕೆಲವು ಕವಿತೆಗಳನ್ನು ಗೆಳೆಯರ ಜೊತೆ ಓದಿ ಸವಿದಿದ್ದೇನೆ. ಕವಿತೆಯನ್ನು ಕೇಳಿದವರೂ ಸವಿದಿದ್ದಾರೆ. ಏನಿದ್ದರೂ ಕವಿತೆ ಕಿವಿಗೆ ಸೇರಿದ್ದು ತಾನೆ? ನವ್ಯ ಕವಿತೆ ಕಣ್ಣಿಗೆ ಸೇರಿದರೆ, ದೇಸಿ ಕವಿತೆ ಕಿವಿಗೆ ಸೇರಿದ್ದು.
ಕವಿತೆಗೂ ಕಿವಿಗೂ ಒಂದು ಬಗೆಯ ಅವಿನಾಭಾವ ಸಂಬಂಧವಿದೆ. ಕೇಶಿರಾಜ 'ಶ್ರೋತ್ರದೊಳ್ ಉದ್ಭಾವಿಪ' ಎಂದು ಹೇಳಿದ್ದಾನೆ. 'ಕಿವಿವೊಕ್ಕಡಂ' ಎಂದು ಪಂಪ ಹೇಳಿದ್ದಾನೆ. 'ಕೇಳಲಕ್ಕುಂ,ಕೇಳ್ದೊಡಂ' ಎಂಬಂಥ ಪೂರ್ವವಾಕ್ಯಗಳು ಅಸಂಖ್ಯವಾಗಿವೆ. 'ಕೇಳುವ ಜಂಗಮ ಜನಾರ್ಧನರು' ಎಂದು ಕುಮಾರವ್ಯಾಸ ಹೇಳುತ್ತಾನೆ. 'ತಿಳಿಯ ಹೇಳುವೆ ಕೃಷ್ಣಕಥೆಯನು' ಎಂದು ಅವನೇ ಹೇಳುತ್ತಾನೆ. ನಮ್ಮ ದಿನನಿತ್ಯದ ವ್ಯವಹಾರ ಜಗತ್ತಿನಲ್ಲಿ ಕಿವಿಯೂ ಭಾಗವಹಿಸುತ್ತದೆ. ಸಾಹಿತ್ಯಕ್ಕೆ ಕಣ್ಣೆಂಬುದು ಗೌಣ; ಆರ್ದ್ರವಾಗುತ್ತದೆ. ಗಣೇಶನ 'ಮೊಗದಗಲದ ಕಿವಿ' ಸಾಂಕೇತಿಕವಾಗಿಯೂ ಇದೆ. ಹೀಗೆ ಕಾವ್ಯ, ಕವನ, ಕವಿತೆ,ಪದ್ಯ ಇವುಗಳಿಗೆಲ್ಲ ಕಿವಿಯೇ ಪ್ರಧಾನ, ಪ್ರಾಧಾನ್ಯ ಹೌದು!
ಪ್ರೊ. ಸಿದದು ಬಿ. ಯಾಪಲಪರವಿ ಅವರ ಕವಿತೆಗಳು ಕಣ್ಣಿಗೆ ಅಥವಾ ಕಣ್ಣಿನ ಓದಿಗೆ ಸಂಬಂಧಿಸಿಲ್ಲ; ಅದು ಕಿವಿಗೆ ಸಂಬಂಧಿಸಿದ್ದು. ಆದ್ದರಿಂದ ಇಲ್ಲಿಯ ಕವಿತೆಗಳನ್ನು ಗಟ್ಟಿಯಾಗಿ ಓದಿಸಿ ಕೇಳಬೇಕು. ನಾವು ಇಲ್ಲಿಯ ಕವಿತೆಗಳ ಮೇಲೆ ಕೇವಲ ಕಣ್ಣಾಡಿಸಿದರೆ ಏನೇನೂ ಸಿಗದೆ ಹೋಗಬಹುದು. ಹಾಗಾಗಿ, ಇದು ಶುದ್ಧ ದೇಸಿ ಕವಿತೆ. ದೇಸಿ ಕವಿತೆಗೆ ನಾದವೂ ಉಂಟು, ಲಯದ ಬಳುಕುಗಳೂ ಉಂಟು. ಪಂಪ 'ದೇಸಿಯೊಳ್ ಪುಗುವುದು' ಎಂದು ಹೇಳುತ್ತಾನಷ್ಟೆ! ಇದು ಬಹು ಮಹತ್ವದ ಮಾತು. ಈ ಮಾತಿನ ಜಾಡನ್ನು ಹಿಡಿದು ನಾವು ನಡೆಯಬೇಕು ಅಷ್ಟೆ. ಈ ಸಂಕಲನದ 'ಆರ್ತನಾದ' ಎಂಬ ಕವಿತೆ ಯಾಪಲಪರವಿಯವರ ಸಂಕಟಕ್ಕೆ ಹಿಡಿದ ಕನ್ನಡಿಯಾಗಿದೆ. ಇದು ಕವಿತೆಯಾಗಿಸುವ ಸಂಕಟವೂ ಹೌದು; ಇದರ ಜೊತೆಗೆ ಕವಿತೆಯ ಆಶಯದ ಹಿಂದಿರುವ ಆತಂಕವೂ ಹೌದು. ಇವೆರಡನ್ನೂ ಒಂದುಗೂಡಿಸುವ - ಆ ಮೂಲಕ ಪರಿಭಾವಿಸುವ - ವಿಫುಲ ಯತ್ನಗಳೂ ನಮ್ಮ ಮುಂದೆ ಈ ಕವಿ ತಂದು ತೋರಿಸುತ್ತಾರೆ. ಕವಿತೆ ಆರಂಭವಾಗುವುದು 'ಮನದ ಬಾಗಿಲು' ಗಳ ರೂಪಕದಿಂದ.
ಎಂದೋ ಮುಚ್ಚಿಹೋಗಿದೆ
ಮನದ ಬಾಗಿಲು
ಚಿಂತೆಯ ಬಿರುಗಾಳಿಗೆ
ಅರಳುವ ಕಲ್ಪನೆಗಳೆಲ್ಲ
ಕರಗಿ ಹೋಗುತಲಿವೆ
ಭಾವಕ ನೆಲೆ ಇಲ್ಲದೆ
ತಳಮಳದ ಜೀವ ಚಡಪಡಿಸುತಿದೆ
ಬಂಧನವ ಬಿಡಿಸಲು
ಚಿಂತೆ, ಭಯ, ಕಾತರಗಳು
ಕೊಚ್ಚಿಹೋಗಬಾರದೇ ಆತ್ಮಾಭಿಮಾನದ
ಸೋಂಕು ತಟ್ಟಲು
ನಿನ್ನಪ್ಪುಗೆ ಕರಗಿಸಲಿ
ಚಿಂತೆಯ ಚಿತೆಯ
ತಟ್ಟಿ,ತಟ್ಟಿ ತೆರೆಸಲಿ ಮುಚ್ಚಿದ ಕದವ
ಬೆಳಗಲಿ ಪ್ರೀತಿ ನಗೆ
ಓಡಿಸಲಿ ಆವರಿಸಿದ ಕತ್ತಲೆ
ಕೊಚ್ಚಿಹೋಗಲಿ ದು:ಖ-ದುಮ್ಮಾನ
ಎಲ್ಲಿರುವೆ ನಲ್ಲೆ?
ಬದುಕಿಸಬಾರದೇ ನನ್ನೀ ನರಳಾಟದಿ (ಆರ್ತನಾದ)
ಈಗ ಲೋಕವು ಆನಂದದ ಸಮುದ್ರದಲ್ಲಿ ತೇಲುತ್ತಿಲ್ಲ. ಅಲ್ಲಿ ಗೋಳಿನ ರೂಪಕಗಳುಂಟು. ಅಲ್ಲಿ ಚಿಂತೆಯ ಬಿರುಗಾಳಿಗಳುಂಟು. ಅಲ್ಲಿ ಅರಳುವ ಕಲ್ಪನೆಗಳಿಲ್ಲ. ಅವೆಲ್ಲವೂ ಕರಗಿಹೋಗಿವೆ. ಇದು ವಾಸ್ತವದ ರೂಪಕ. ಇಂಥ ವಾಸ್ತವವು ಯಾಕೆ ನೆಲೆಯೂರಿತು. ಇಲ್ಲಿ ವ್ಯಕ್ತಿತ್ವಗಳು ನಾಶವಾಗುತ್ತಲಿವೆ. ವ್ಯಕ್ತಿಗಳು ವಿಜೃಂಭಿಸುತ್ತಿದ್ದಾರೆ. ಇಲ್ಲಿ ಆತ್ಮಾಭಿಮಾನಕ್ಕೆ ದಾರಿಗಳಿಲ್ಲ. ಅವು ಸೋಂಕುಗಳಿಂದ ಕೂಡಿವೆ. ಇಂಥ ಸನ್ನಿವೇಶದಲ್ಲಿ ಪ್ರೀತಿಯ ಅಪ್ಪುಗೆ ಬೇಕು. ಚಿಂತೆಯ ಕದ ಅಲ್ಲಿ ತೆರೆಯಬೇಕು. ಆಗ ಅಲ್ಲಿ ಪ್ರೀತಿಯ ನಗೆಯುಕ್ಕಿ ಆವರಿಸಿರುವ ಕತ್ತಲೆ ಓಡುತ್ತದೆ. ಇಡೀ ಕವಿತೆಯ ಆರ್ತನಾದ ವ್ಯಕ್ತಿ ನೆಲೆಯಿಂದ ಸಾಮೂಹಿಕ ನೆಲೆಗೂ, ಅಲ್ಲಿಂದ ವ್ಯಕ್ತಿ ನೆಲೆಗೂ ಸಂಚರಿಸುತ್ತದೆ. ಜೀವನಕ್ಕೆ ಏರುಮುಖದ ಚಲನೆ ಇರುವಂತೆ ಇಳಿಮುಖದ ಚಲನೆಯೂ ಉಂಟು. ಇವೆರಡೂ ಭಿನ್ನವೆಂದು ಕವಿ ಭಾವಿಸುವುದಿಲ್ಲ. ಅವೆರಡೂ ಪರಸ್ಪರ ಒಗ್ಗೂಡುವ ಪ್ರಯತ್ನ ಬೇಕು. ಕತ್ತಲೆಯೊಳಗಿಂದ ಬೆಳಕು ಬರುತ್ತದೆಯಷ್ಟೆ! ಬೆಳಕು ಕತ್ತಲೆಯನ್ನು ನುಂಗುತ್ತದೆ. ಆರ್ತತೆಯಲ್ಲಿಯೂ ನಾದವುಂಟು ಎಂಬ ರೂಪಕೋಕ್ತಿ ವಿಧಾನವು ಕವಿತೆಯ ಪ್ರಧಾನ ಆಶಯವಾಗಿರುವುದು ಗಮನೀಯ.
ಈ ಸಂಕಲನವು ಮುಖ್ಯವಾಗಿ ವ್ಯಕ್ತಿನೆಲೆಯ ಪ್ರೀತಿಮುಖಗಳನ್ನು ಹುಡುಕುತ್ತದೆ. ವ್ಯಕ್ತಿನೆಲೆ ತಿಳಿಯದೆ ಸಾಮೂಹಿಕ ನೆಲೆ ತಿಳಿಯುವುದು ಹೇಗೆ? ಈ ಸಂಕಲನದ ಚಿತ್ತ ಚಿತ್ತಾರ, ನಗ್ನಸತ್ಯ, ನಿನ್ನ ಕಣ್ಣ ಸೆಳೆತದಲಿ, ಸಂಗಾತಿ ಮುಂತಾದ ಕವಿತೆಗಳು ಗಂಡು-ಹೆಣ್ಣಿನ, ಸಖ-ಸಖಿಯರ, ಗೆಳೆಯ-ಗೆಳತಿಯರ ಸಂಬಂಧಗಳ ನಂಟನ್ನು ಹುಡುಕುತ್ತದೆ. ವ್ಯಕ್ತಿನೆಲೆಯ ಪ್ರೀತಿ ಮುಖಗಳಿಗೆ ಸಾರ್ವಜನಿಕ ಮುಖವೂ ಉಂಟು. ಆದರೆ, ಇದು ವ್ಯಕ್ತಿ ನೆಲೆಯ ವಿವಿಧ ಮುಖಗಳನ್ನು ನೋಡಲು ಇಚ್ಛಿಸುತ್ತದೆ. ಎಲ್ಲಿ ಗಂಡು-ಹೆಣ್ಣುಗಳ ಪ್ರೀತಿ ಮುಖಗಳೂ, ವಿರಸದ ಮುಖಗಳೂ ಪರಸ್ಪರ ತೆರೆದು ನಿಲ್ಲುತ್ತವೋ, ಅಲ್ಲಿ ವೈಚಾರಿಕ ಆಕೃತಿಯ ನೆಲೆಗಳು ಬರುತ್ತವೆ. ಈ ಸಂಕಲನದ 'ಸಂಗಾತಿ' ಎಂಬ ಕವಿತೆ ಈ ದೃಷ್ಟಿಯಿಂದ ತೀರಾ ಕುತೂಹಲಕಾರಿ. ಈ ಕವಿತೆಯು ಮೊದಲಿಗೆ ಶಿಶುನಾಳ ಶರೀಫನ ಕವಿತೆಯ ಎರಡು ಸಾಲನ್ನು ಹಾಕಿದೆ. ಅದಾದ ಮೇಲೆ ಕವಿತೆ ಆರಂಭವಾಗುತ್ತದೆ. ಈ ಕವಿತೆಯು ಎರಡು ಘಟಕಗಳನ್ನು ಹೊಂದಿದೆ. ಮೊದಲನೆಯ ಘಟಕ ಭೂತಕಾಲದ ಮುಖ. ಇಲ್ಲಿ ಭೂತಕಾಲವೂ ವರ್ತಮಾನಕ್ಕೆ ತಂದು ನಿಲ್ಲಿಸಿ ದಂತಿದೆ. ಮೊದಲನೆಯ ಘಟಕದ ಕವಿತೆಯ ಸಾಲುಗಳು ಹೀಗಿವೆ:
ತಲೆಯನೆತ್ತಿ ನಡೆಯದಂತೆ ತಿನ್ನುವ ಚಿಂತೆಗಳು
ಹುದುಗಿಕೊಂಡಿವೆ ನನ್ನ ಸಮಸ್ಯಗಳು
ಅರ್ಥರಹಿತ ವ್ಯವಹಾರಿಕ ಬದುಕು ಏನೆಲ್ಲಾ ಮರೆಸಿದೆ
ಚೈತನ್ಯ, ನೆಮ್ಮದಿ ಎಲ್ಲೂ ಸಿಗದೆ ತಬ್ಬಲಿಯಾದಾಗ
ಈ ಕವಿತೆಯ ಸಾಲುಗಳು ವೈಯಕ್ತಿಕ ಮುಖವನ್ನೂ ಹೇಳುತ್ತಿವೆ ಎನಿಸಿದರೂ ಅದು ಸಾರ್ವಜನಿಕವಾಗುವುದು ಅನಿವಾರ್ಯ. ವೈಯಕ್ತಿಕ ಮುಖದಲ್ಲಿ ಚಿಂತೆ-ಸಮಸ್ಯಗಳು ಮುಕ್ಕಿಬಿಡುತ್ತವೆ ನಿಜ. ಆದರೆ, ಚೈತನ್ಯ ನೆಮ್ಮದಿ ಬೇಕು. ಆದರೆ ಚೈತನ್ಯವಿಲ್ಲದೆ ನೆಮ್ಮದಿಗೆ ಅವಕಾಶವಿಲ್ಲ. ಆಗ 'ತಬ್ಬಲಿತನ' ಬಂದು ಮುಸುಕುತ್ತವೆ. ಇಲ್ಲಿರುವ 'ತಬ್ಬಲಿ' ಎಂಬ ರೂಪಕ ಪ್ರೀತಿಯ ಮುಖವೂ ಹೌದು. ತಬ್ಬಲಿತನದ ಚಿತ್ರವೂ ಹೌದು. ಮೊದಲು ತಬ್ಬಲಿತನ ಕಂಡರೂ ಅದರೊಳಗೆ 'ತಬ್ಬಲಿ' ಎಂಬ ಪ್ರೀತಿಪೂರ್ವಕವೂ ಇದೆ. ಇದು ಎರಡನೆಯ ಘಟಕಕ್ಕೆ ಚಂಗನೆ ನೆಗೆಯುತ್ತದೆ.
ನಿನ್ನ ಬಳೆಗಳ ನಾದ
ನಗುವ ತುಟಿ
ಬಳಸಿದ ತೋಳು
ಬಿಸಿ ಅಪ್ಪುಗೆ
ಮುದವಾದ ತಟ್ಟುವಿಕೆ
ಕಿಲಕಿಲ ನಗು
ಸಿಹಿ ಮುತ್ತುಗಳು
ವ್ಯಸನದಲೂ ಅರಳಿಸಿವೆ........
ಕವಿತೆ ಹೀಗೆ ಬೆಲೆಯುತ್ತದೆ. ಎರಡನೆಯ ಘಟಕದ ಪ್ರೀತಿಯ ಸಂಕೇತ ಹಾಗೂ ರೂಪಕಗಳು ವೈಯಕ್ತಿಕ ನೆಲೆಗೆ ತಂದು ಕೊಡುತ್ತವೆ. ಕವಿತೆಯ ಪೂರ್ವಸ್ಮೃತಿ 'ಕೊಡು; ಕವಿತೆಗೆ ಸದ್ದಿಲ್ಲದೆ ಅವಶ್ಯಕತೆಯನ್ನು ತಂದು ಉಕ್ಕಿಸಿದೆ. ಜೀವನವು ಕುಶಲದಿ ಕೂಡಿ ಹಗುರಾಗಿಸಿದೆ.' ಎಂಬ ಮಾತಿನೊಡನೆ ಈ ಕವಿತೆಯು ಮುಕ್ತಾಯಗೊಳ್ಳುತ್ತದೆ.
ಪ್ರೊ. ಸಿದ್ದು ಬಿ. ಯಾಪಲಪರವಿಯವರ ಕವಿತೆಗಳು ಬೇಗನೆ ಮೈದೆರೆಯುವುದಿಲ್ಲ. ಇಲ್ಲಿಯ ಕವಿತಾ ಶೈಲಿ ನಾರೀಕೇಳಪಾಕ. ಇದು ದ್ರಾಕ್ಷಾಪಾಕವೂ ಹೌದು. ಈ ಕವಿಯು ಎರಡು ಬಗೆಯ ಕಾವ್ಯ ಪಾಕವನ್ನು ಹುದುಗಿಸಬಲ್ಲರು. ಮೇಲೆ ಉದಾಹರಿಸಿದ 'ಸಂಗಾತಿ' ಕವಿತೆಯಲ್ಲೇ ಈ ಎರಡೂ ಶೈಲಿ ಇರುವುದನ್ನು ಗಮನಿಸಬಹುದು. ಮೊದಲನೆಯ ಘಟಕವು ನಾರೀಕೇಳಪಾಕ, ಎರಡನೆಯ ಘಟಕ ದ್ರಾಕ್ಷಾಪಾಕ. ಕವಿತೆಯ ವ್ಯಾಖ್ಯಾನಕ್ಕೆ ನಾನು ಬೇಕಾಗಿ ಎರಡು ಬಗೆಯ ಪಾಕಗಳ ಮಿಶ್ರಣ ಹೇಗಾಗಿದೆಯೆಂಬುದಕ್ಕೆ ಕಾವ್ಯಮೀಮಾಂಸೆಯ ಪರಿಕಲ್ಪನೆಯನ್ನು ಇಲ್ಲಿ ಬಳಸಿದ್ದೇನೆ. ಇಡೀ ಸಂಕಲನದ ಕವಿತೆಗಳು ನಾರೀಕೇಳಪಾಕ ವಾಗಿರುವುದೂ ಉಂಟು; ದ್ರಾಕ್ಷಾಪಾಕವಾಗಿರುವುದು ಉಂಟು. ಹಲವು ಕಡೆ ಒಂದರ ಮುಖ ಮತ್ತೊಂದು ಮುಖಕ್ಕೆ ಕೂಡಿಹಾಕಿಕೊಂಡಿರುವುದು ಉಂಟು. ಇದು ಕಾವ್ಯ ಶೈಲಿಯ ಪ್ರಮೇಯ. ಪ್ರಮಾಣಗಳನ್ನು ಒದಗಿಸಲು ಕವಿ ಎಲ್ಲೂ ತಿರುಗುವುದಿಲ್ಲ. ಅದಲು ತನ್ನ ಕವಿತೆಯ ಲೋಕದಿಂದಲೇ ಪ್ರತ್ಯಕ್ಷ ಸಾಕ್ಷ್ಯವನ್ನು ಒದಗಿಸಲು ಯತ್ನಿಸುತ್ತಾನೆ. ಇದು ಈ ಸಂಕಲನದ ಮಟ್ಟಿಗೆ ಒಂದು ಚೋದ್ಯವೇ ಸರಿ. ಕವಿಗೂ ಕವಿತೆಗೂ ಕವಿಯ ಲೋಕಕ್ಕೂ ಸಂಬಂಧಿಸಿದ ಮಾತೆಂದು ನಾನಂತೂ ಲಘುವಾಗಿ ಹೇಳಲಾರೆ. ಲಘುತ್ವದಿಂದ ಬಹುತ್ವದ ಕಡೆಗೆ ಸೆಳೆಯುವ ಸಂಚಲನ ಇಲ್ಲಿದೆ.
ಸಿದ್ದು ಯಾಪಲಪರವಿ ವೈಯಕ್ತಿಕ ನೆಲೆ ಮತ್ತು ಸಾರ್ವಜನಿಕ ನೆಲೆ ಎಂಬೆರಡು ಪಥಗಳಲ್ಲಿ ಸಂಚರಿಸುತ್ತಿದ್ದಾರೆ. ಅನೇಕಬಾರಿ ಇವೆರಡು ಒಮ್ಮುಖಗಳಾಗಿರುವುದೇ ಹೆಚ್ಚು. ಬದುಕು ಅರ್ಥವಾಗುವುದು ಇಮ್ಮುಖವಾದಾಗ ಅಲ್ಲ. ಅಲ್ಲಿ ಬದುಕಿನ ರಹಸ್ಯ ಕೋಣೆಗಳು ತೆರೆಯುವುದಿಲ್ಲ. ಇಮ್ಮುಖತೆಯ ಕವಿತೆಗೆ ಅರ್ಧಸತ್ಯದ ಎಳೆಗಳನ್ನು ಪ್ರದಾನ ಮಾಡುತ್ತದೆ. ಅದೇ ಜಾಗದಲ್ಲಿ ಒಮ್ಮುಖತೆಯು ಕವಿತೆಗೆ ಪೂರ್ಣ ಸತ್ಯದ ನೆಲೆಗಳನ್ನು ಕಾಣಿಸುವುವಂತೆ ಮಾಡುತ್ತದೆ. ಈ ಕವನಸಂಕಲನದ ಹಲವು ಕವಿತೆಗಳು ಇವೆರಡನ್ನೂ ಕೂಡಿಸಿಕೊಳ್ಳುವ ಬಗೆ ಹೇಗೆಂಬುದ್ನು ಚಿಂತಿಸುತ್ತದೆ. ಲೇಖಕ, ಕವಿ, ಸಾಹಿತಿ ಆದವನು ಇಂಥ ಅಗ್ನಿದಿವ್ಯದ ಕುಂಡದಿಂದ ಮೇಲೆರಬೇಕು. ಇದು ಮೊದಲಿಗೆ ತನ್ನನ್ನು ಸುಟ್ಟುಕೊಂಡು ಬೆಳಕು ನೀಡುವವನ ಪರಿ. ಈ ಗತಿಯು ಕವಿತೆಗೆ ಹೊಸ ಅರ್ಥದ ಪಳುಕುಗಳನ್ನು ತೊಡಿಸುತ್ತದೆ. ಸಿದ್ದು ಕವಿತೆಗೆ ಸೌಂದರ್ಯಾತ್ಮಕ ಆಭರಣಗಳನ್ನು ತೊಡಿಸುವುದಿಲ್ಲ. ಅಲ್ಲಿ ಚಿಂತನೆಯೇ ಮೇಲ್ಮೈಯಾಗುತ್ತದೆ. ಆಗ 'ಕಾವ್ಯ'ದ ಒಳಬನಿಯ ದನಿಯು ಕ್ಷೀಣಿಸುತ್ತದೆ. ಈ ಕವಿತೆಗಳ ಸಹಸ್ಪಂದನಕ್ಕೆ ಇರುವ ತೊಡಕು ಇದೊಂದೇ. ಕವಿತೆಯ ಲಯಗಳು ಸೂಕ್ಷ್ಮಗೊಳ್ಳಬೇಕು. ಗದ್ಯದ ಲಯಗಳನ್ನು ಪದ್ಯದ ಲಯಗಳಾಗಿ ನೋಡುವ ಉಪಕ್ರಮವೊಂದುಂಟುಷ್ಟೆ. ಇಂಥ 'ಲಯ'ಗಳನ್ನು ಹಿಡಿಯುವ ಕಡೆ ಸಿದ್ದು ಯತ್ನಿಸುತ್ತಾರೆ. ಆಗ ಚಂದದ ಸಾಲುಗಳನ್ನು ಕಾಣಬಹುದು. ಆದರೆ, ಕಾವ್ಯಕೌಶಲ್ಯವೇ ಸೌಂದರ್ಯ ಮತ್ತು ಚಿಂತನಾತ್ಮಕ ಅಂಶಗಳೆರಡನ್ನೂ ಒಟ್ಟಿಗೆ ಹಿಡಿಯುವ ಇರಾದೆಯನ್ನು ವ್ಯಕ್ತಪಡಿಸುವುದಿಲ್ಲ. ಅದು ಇನ್ನು ಮುಂದೆ ನಮ್ಮ ಕವಿ ಮಿತ್ರ ಸಿದ್ದು ಹಿಡಿಯಬೇಕಾದ ದಾರಿ. ಕಲೆ ಮತ್ತು ಚಿಂತನೆ ಸಮಪ್ರಮಾಣವಾಗಿ ಬೆರೆಯಬೇಕು. ಕೇವಲ ಸ್ಪೋಟಕವೊ, ಕೇವಲ ಚಿಂತನೆಯೊ, ಕೇವಲ ಸೌಂದರ್ಯವೊ ಕವಿತೆಗೆ ಜೀವಧಾತು ಒದಗಿಸಲಾರದು. ಇವೆಲ್ಲವೂ ಜೊತೆಜೊತೆಯಾಗಿ ಸಮಪ್ರಮಾಣದಲ್ಲಿ ಬೆರೆಯಬೇಕು. ಅಂಥ ಕಡೆ ಚಲಿಸಬಲ್ಲ ಶಕ್ತಿ ಈ ಕವಿಗಿದೆ ಎಂಬುದನ್ನು ಅನೇಕ ಕವಿತೆಗಳಲ್ಲಿ ತೋರಿಸಿಕೊಡುತ್ತಾರೆ. ಇದೊಂದು ಕಾವ್ಯಕಸುಬು, ಈ ಕಸಬುದಾರಿಕೆಗೆ ಮನಸ್ಸಿನ ಸ್ವಾಸ್ಥ್ಯ, ಸಾಮಾಜಿಕ ಸ್ವಾಸ್ಥ್ಯ ಹಾಗೂ ಸಾಂಸ್ಕೃತಿಕ ಸ್ವಾಸ್ಥ್ಯಗಳು ನೆರವಿಗೆ ಬರಬೇಕು. ಅದು ಬರಲಿ ಎಂದು ನಾನು ಮನಸಾರೆ ಹಾರೈಸುತ್ತೇನೆ. ನಾನು ಕವಿತೆಗಳನ್ನು ಓದುತ್ತಿದ್ದಂತೆಲ್ಲಾ ಆಗಾಗ ಮೂಡಿದ ಅಭಿಪ್ರಾಯಗಳನ್ನು ಇಲ್ಲಿ ಹೇಳಿದ್ದೇನೆ. ಸದ್ಯದ ಕವಿತೆಯ ಲೋಕ ಹಿಡಿದಿರುವ ಹಾದಿಗೂ ಈ ಕವಿ ಹಿಡಿದಿರುವ ಹಾದಿಗೂ ಎಷ್ಟೋ ಭಿನ್ನತೆಗಳಿವೆ: ಮಾರ್ಗಾಂತರಗಳಿವೆ. ನಾನು ಅವುಗಳನ್ನು ಇಲ್ಲಿ ಚರ್ಚಿಸಿಲ್ಲ; ಚರ್ಚಿಸಲು ಹೋಗಿಲ್ಲ. ಅದು ಬೇರೊಂದು ಕಡೆ ನಮ್ಮನ್ನು ಕರೆದೊಯ್ಯುತ್ತದೆ. ಪ್ರಾಚೀನ ಅಥರ್ವಣ ವೇದದ ಕವಿಯೊಬ್ಬ ಹೇಳಿದ ಮಾತಿನೊಂದಿಗೆ ಮುನ್ನುಡಿಯನ್ನು ಮುಗಿಸುತ್ತೇನೆ-
'ಕಾವ್ಯಂ ನ ಮಮಾರ, ನ ಜೀರ್ಯತಿ'
(ಕಾವ್ಯಕ್ಕೆ ಮರಣವಿಲ್ಲ, ಮುಪ್ಪಿಲ್ಲ)
ಮೇ 20, 2007 -ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ
ಹಂಪಿ

No comments:

Post a Comment