ಲವ್ ಕಾಲ
*ಕಳೆದು ಹೋಗುವ ಹಳವಂಡ ಹಾಗೂ ಮೇಘಸಂದೇಶ*
ಈ ಭಾವಲೋಕವೇ ಹೀಗೆ, ಸಮಯ ಹಾಳು. ಮುಟ್ಟುವ ಗುರಿ ಮರೆಸುವ ಹುನ್ನಾರ. ಕಾಲ ಯಾರಿಗೂ ಕಾಯದೇ ನಿಲ್ಲುವುದಿಲ್ಲ ಆದರೂ ನಾವು ಕೆಲವರಿಗಾಗಿ ಕಾಯುತ್ತೇವೆ ಹುಚ್ಚರ ಹಾಗೆ ಮಾಡುವ ಕೆಲಸ ಬಿಟ್ಟು.
ಊಟ-ನಿದ್ರೆ-ಕಾಮ ಬದುಕಿನ ಅವಿಭಾಜ್ಯ ಅಂಗಗಳು. ಹಾಗಾದರೆ ಈ ಹುಚ್ಚು ಪ್ರೀತಿ ಮತ್ತದವರ ಧಾವಂತಕೆ ಏನನ್ನಬೇಕು?
ಅತ್ತ ಕಾಮವೂ ಅಲ್ಲದ ಬರೀ ದೂರ ದೂರದ ಕಹಿ ಯಾತನೆಯೊಂದಿಗಿನ ಕಾಮವಿಲ್ಲದ ಕಾಲಹರಣಕೆ ಏಕೆ ?
ಭ್ರಮೆಯೋ, ತಲ್ಲಣವೋ, ಅವಾಸ್ತವ ಕಾಲಹರಣವೋ.
ಏನೇ ವ್ಯಾಖ್ಯಾನಿಸಿದರೂ ಭಾವುಕ ಮನಸಿಗೆ ಮುದ ಸಿಗುವುದಂತೂ ಗ್ಯಾರಂಟಿ.
ಅದಕೆ ನಾವು ಭಾವ ಪ್ರಪಂಚದಲ್ಲಿ ತೇಲಾಡಿ ಸಮಯ ಹಾಳಾದರೂ ಖುಷಿಪಡುತ್ತೇವೆ.
ಒಂದು ಕಾಲಕೆ ಪ್ರೇಮಿಗಳು ನಿಗೂಢ ಭಾಷೆಯಲ್ಲಿ ಪತ್ರ ಬರೆದು ನಿವೇದಿಸುತ್ತಿದ್ದರು.
ಇನ್ನೂ ಹಿಂದೆ ಸಾವಿರ ವರ್ಷಗಳ ಹಿಂದೆ ಮೇಘ ಸಂದೇಶ.
ಕಾಳಿದಾಸನ ಕಾಲದಿಂದಲೂ ಇರುವ ಈ ಹುಚ್ಚು ಇಂದಿಗೂ ಜೀವಂತ ಮತ್ತೆ ಹೊಸ ಹೊಸ ರೂಪದಲ್ಲಿ, ಹೊಸ ಆವಿಷ್ಕಾರಗಳೊಂದಿಗೆ.
ಕಾಳಿದಾಸನ ಮೇಘಸಂದೇಶ ಖಂಡಿತ ಕಲ್ಪನೆಯಲ್ಲ.
ಆಧುನಿಕ ತಂತ್ರಜ್ಞಾನದ ಸೆಟ್ ಲೈಟ್ ನೆಟ್ ವರ್ಕ್, ಅಂದರೆ ಈಗಿನ ಇಂಟರ್ ನೆಟ್.
ನಮ್ಮ ಎಲ್ಲ ದಾಖಲೆಗಳ ಶೇಖರಣೆ ಗೂಗಲ್ cloud ನಲ್ಲಿರುವಂತೆ ಆ ಕಾಲದ ಮೇಘಸಂದೇಶ ಇರಬಹುದಲ್ಲ ಅನಿಸುತ್ತದೆ.
ನೂರು ವರ್ಷಗಳ ಹಿಂದೆ ರಾವಣನ ಪುಷ್ಪಕ ವಿಮಾನವೂ ಕಲ್ಪನೆ ಅನಿಸುತಿತ್ತು ಆದರೆ ಈಗಿನ ಹೆಲಿಕ್ಯಾಪ್ಟರ್ ಹಾಗೂ ಚಾರ್ಟರ್ ಫ್ಲೈಟ್ ನೋಡಿದಾಗ ಹೌದಲ್ಲ ಎನಿಸುತ್ತದೆ.
ಮನುಷ್ಯ ತನ್ನ ಉತ್ಕಟ ಪ್ರೇಮಾಭಿವ್ಯಕ್ತಿಗೆ ಕಲ್ಪಿಸಿಕೊಂಡಿದ್ದನ್ನೆಲ್ಲ ವಿಜ್ಞಾನ ತಂತ್ರಜ್ಞಾನ ಮೂಲಕ ನನಸಾಗಿಸಿಕೊಂಡಿದ್ದಾನೆ. ಅದಕ್ಕೆ ಕಾರಣ ಈ ಜೀವನೋತ್ಸಾಹದ ಪ್ರೀತಿ-ಪ್ರೇಮ-ಪ್ರಣಯ.
ಮನುಷ್ಯನ ಖಾಸಗಿ ಗುಟ್ಟೆಂದರೆ ಪ್ರೇಮ ಮತ್ತು ಯುದ್ಧ. ಇವೆರಡು ಗುಟ್ಟಾಗಿರಲಿ ಎಂದು ಬಯಸಿ ಹೊಸ ಮಾರ್ಗ ಕಂಡು ಹಿಡಿಯುತ್ತಾನೆ.
ಪ್ರೇಮಭಾಷೆ ಹಾಗೂ ಯುದ್ಧಭಾಷೆ ಗುಟ್ಟಾಗಿದ್ದು ಸಂಬಂಧಿಸಿದವರಿಗೆ ಮಾತ್ರ ಅರ್ಥವಾಗಲಿ ಎಂಬ ಖಾಸಗಿತನದಿಂದಾಗಿ ನೂರಾರು ಆವಿಷ್ಕಾರಗಳು.
ಫೋನ್, ಮೆಸೆಜುಗಳು, ಇಮೋಜಿಗಳು, ಫೇಸ್ ಬುಕ್, ವಾಟ್ಸ್ ಅ್ಯಾಪ್, ವಿಡಿಯೋ ಕಾಲ್, ಮೆಸೆಂಜರುಗಳು… ಇನ್ನೂ ಏನೇನೋ ಆವಿಷ್ಕಾರಗಳು ಸಾಗಿವೇ ಇವೆ.
ಎಲ್ಲದಕು ಕಾರಣ ಅದೇ ಪ್ರೀತಿ ಮತ್ತು ಯುದ್ಧ. ಎರಡಲ್ಲೂ ತಾನೇ ಗೆಲ್ಲಬೇಕೆಂಬ ಹಟ.
ಅದೇ ಸಾತ್ವಿಕ ಹಟದ ಜಾಡ ಹಿಡಿದು ಆಧುನಿಕ ಮೇಘಸಂದೇಶದ ಮೂಲಕ ನಿನ್ನ ಹಿಡಿದುಬಿಟ್ಟೆ. ಆಧುನಿಕ ಜಾತಾಣದಲಿ ಸೆರೆ ಸಿಕ್ಕ ನಿನ್ನ ಅದೇ ಸಾತ್ವಿಕ ಹಟದ ಮೂಲಕ ಯುದ್ಧ ಗೆದ್ದಂತೆ ಎದೆಗವಚಿಕೊಂಡ ಕತೆ ಈಗ ಹೊಸ ಇತಿಹಾಸ.
ಇನ್ನೂ ಗೆಲುವ ಸದಾ ಹತ್ತಿರ ಇಟ್ಟುಕೊಳುವ ಧಾವಂತಕೆ ಕೊನೆ ಎಂಬುದೇ ಇಲ್ಲ.
ಆದರೂ ಗೂಗಲ್ ಮೇಘಸಂದೇಶ ನಮ್ಮನ್ನು ಹತ್ತಿರ ಇರುವಂತೆ ಮಾಡಿದೆ. ವಿಡಿಯೋ ಕಾಲ್ ಎಂಬ ಜಾದೂ ಲೋಕದಲಿ ಎದುರು ಬದುರಾಗಿ ಹರಟೆ ಹೊಡೆಯುವುದು ತಂತ್ರಜ್ಞಾನದ ಪವಾಡವಲ್ಲದೇ ಇನ್ನೇನು?
ನಾವು ದೂರ ಇದ್ದೇವೆ ಎಂಬ ಭಾವ ದೂರಾಗಿ, ಜೊತೆಗಿದ್ದ ರಸಾನುಭವ. *ಪರಸ್ಪರ ಮುಟ್ಟದಿದ್ದರೂ ಮನಸುಗಳು ತಟ್ಟುತ್ತಲೇ ಇರುತ್ತವೆ*.
ಸಂಪರ್ಕ ಕಡಿದು ಹೋದರೆ ಮನುಷ್ಯ ಮಾನಸಿಕವಾಗಿಯೂ ದೂರಾಗುವ ಅಪಾಯವಿದೆ. ನಿರಂತರ ಸಂಪರ್ಕ ನಿಂತು ಹೋದರೆ ನೆನಪು ಮಸುಕಾಗಿ ಸಂಬಂಧ ಮರೆಯಾಗುತ್ತದೆ.
Out of sight is out of mind… ಎಂಬ ಮಾತು ಸುಳ್ಳಲ್ಲ.
ಮರೆವು ವರ ಹೇಗೇಯೋ ಹಾಗೆ ಶಾಪವೂ ಹೌದು.
*ಮರೆಯುವ ಮಾತ ಮರೆತುಬಿಡು* ಎನ್ನಲು ನೆರವಾಗುವ ಈ ಆಧುನಿಕ ಮೇಘಸಂದೇಶಕೆ ನಾವು ಸದಾ ಚಿರರುಣಿ.
ಹತ್ತಿರ ಇನ್ನೂ ಹತ್ತಿರ ಈ ಲೋಕದ ಹಂಗ ಹರಿದು...
*ಸಿದ್ದು ಯಾಪಲಪರವಿ*
No comments:
Post a Comment