Wednesday, August 15, 2018

ಶಂಕರಪ್ಪ ಕರಡಿಗುಡ್ಡ

*ಮರೆಯಲಾಗದ ಮಹಾನುಭಾವ‌ ಖಾದಿಸಂತ ಶಂಕರಪ್ಪ ಕರಡಿಗುಡ್ಡ*

ಗರಗ ಖಾದಿ ಕೇಂದ್ರದ ಮುಖ್ಯಸ್ಥರಾಗಿ ಅನುಪಮ ಸೇವೆ ಮಾಡಿ ರಾಷ್ಟ್ರೀಯ ಖ್ಯಾತಿ ಗಳಿಸಿ ಹದಿಮೂರು ವರ್ಷಗಳ ಹಿಂದೆ ನಮ್ಮನ್ನು ದೈಹಿಕವಾಗಿ ಅಗಲಿದ ಶಂಕರಪ್ಪ ಕರಡಿಗುಡ್ಡ ಪ್ರಾಥಃಸ್ಮರಣೀಯರು.

ಅಪ್ಪಟ ಬಸವ ಧರ್ಮ ಪರಿಪಾಲಕರಾಗಿ ಕಾಯಕ-ದಾಸೋಹ-ಇಷ್ಟಲಿಂಗ ನಂಬಿ ಬಾಳಿದವರು. ಖಾದಿ ಕೇಂದ್ರದ ಮೂಲಕ ರಾಷ್ಟ್ರ ಧ್ವಜ ನಿರ್ಮಾಣಕ್ಕೆ ಅಗತ್ಯವಿದ್ದ ಬಟ್ಟೆ ತಯಾರಿಸಿದ ಮೊದಲ ಖಾದಿ ಘಟಕ ಗರಗ.

ಧಾರವಾಡ ಪಕ್ಕದ ಗರಗ ಖಾದಿಕೇಂದ್ರ ಹಾಗೂ ಸಂತ ಮಡಿವಾಳಪ್ಪನವರ ಕಾರಣದಿಂದ ಲೋಕ ವಿಖ್ಯಾತಿ.
ನನ್ನ ಹತ್ತಿರದ ಬಂಧುಗಳೂ ಆಗಿದ್ದು ಯೋಗಾಯೋಗ.
ಪ್ರತಿನಿತ್ಯ ಮುಂಜಾನೆ ಸುಧೀರ್ಘ ಲಿಂಗ ಪೂಜೆಯ ಮೂಲಕ ಕಾಯಕ ಪ್ರವೃತ್ತರಾಗುತ್ತಿದ್ದ ಕರಡಿಗುಡ್ಡ ನಿರಂತರ ಖಾದಿ ಕಾಯಕದ ಕುರಿತು ಆಲೋಚಿಸುತ್ತಿದ್ದರು. ಬಸವಣ್ಣ ಹಾಗೂ ಖಾದಿ ಅವರ ಉಸಿರಾಗಿದ್ದವು.

ತಮ್ಮ ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದ ಸೇವಾರ್ಥಿಗಳಿಗೆ‌ ಆರ್ಥಿಕ ದೃಢತೆ ಒದಗಿಸುವ ಭರದಲ್ಲಿ ವೈಯಕ್ತಿಕ ಅಗತ್ಯಗಳನ್ನು ಲೆಕ್ಕಿಸಲಿಲ್ಲ.

ಆಧ್ಯಾತ್ಮ ಜೀವಿಗಳಾಗಿದ್ದ ಅವರ ವ್ಯಕ್ತತ್ವ ನನ್ನ ಮೇಲೆ ಗಾಢ  ಪ್ರಭಾವ ಬೀರಿದ್ದು ಈಗ ಗೋಚರವಾಗುತ್ತಿದೆ.
ನನ್ನ ಬದುಕಿನ ಚಿತ್ರಣ ಬದಲಿಸಿದ ಧಾರವಾಡದ ಭಿತ್ತಿಯಲಿ ಗರಗದ ಶಂಕರಪ್ಪ ಕಾಕಾ ಹಾಗೂ ಪಾರಮ್ಮ ಕಕ್ಕಿ ಪ್ರಮುಖರು.
ಊಟೋಪಚಾರದಲಿ ರಾಜಾಥಿತ್ಯ, ಅತಿಥಿಗಳ ಮೇಲೆ ಅಪಾರ ಕಾಳಜಿ ಅವರ ದಾಸೋಹದ ಕೈಗನ್ನಡಿ.
ಕಾಯಕ-ದಾಸೋಹ-ಲಿಂಗಾಂಗ ಸಾಮರಸ್ಯದ ಮೂಲಕ ಬಾಳಿದ ಕರಡಿಗುಡ್ಡ ದಂಪತಿಗಳದು ಅನುಕರಣೀಯ ದಾಂಪತ್ಯ.

ವ್ಯಕ್ತಿ ಜನಿಸಿದ ಮೇಲೆ ಬದುಕನ್ನು ತನಗೆ ಸರಿ‌ ಕಂಡಂತೆ ರೂಪಿಸಿಕೊಳ್ಳುವ ಅವಕಾಶವಿರುತ್ತದೆ.
ಅವನಿಗೆ ಸಿಗುವ ಶಿಕ್ಷಣ, ಸಂಸ್ಕಾರ, ಪರಿಸರ ಹಾಗೂ ಸಿದ್ಧಾಂತಗಳೂ ಅವನ ಬೆಳವಣಿಗೆಗೆ ಪೂರಕವಾಗುತ್ತವೆ.
ಹಣ-ಕಾಮ-ಅಂತಸ್ತು ನಮ್ಮನ್ನು ಅಲ್ಪರನ್ನಾಗಿಸಿದರೂ ಆ ಅಲ್ಪತನದಲೇ ಸುಖಿಸುವ ಸಿಂಬಳದಲಿ ಸಿಕ್ಕ ನೊಣ ನಾವು.
ಹೊರಬರಲಾಗದೇ ದ್ವಂದದಲ್ಲಿ ಒದ್ದಾಡುತ್ತೇವೆ.

ಆದರೆ ಕೆಲವರು ಒಂದು ಸುದಿನದ ಮುಂಜಾವಿನಲಿ, fine morning they transform and bring a new change.

ಆದರೆ ನನಗೆ ಈಗಲೂ ಈ ಸೈದ್ಧಾಂತಿಕ ಗೊಂದಲ ಉಂಟಾದಾಗ ಕರಡಿಗುಡ್ಡ ಕಾಕಾ ನೆನಪಾಗುತ್ತಾರೆ.
ಸಾಮಾಜಿಕ ನೆಲೆಯಲ್ಲಿ ನಿಸ್ವಾರ್ಥದಿಂದ ದುಡಿದು ಹೊರಬರುವಾಗ ಅವರಲ್ಲಿ ಸಂತೃಪ್ತಿ ಬಿಟ್ಟರೆ ಬೇರೇನೂ ಇರಲಿಲ್ಲ.

ಆ ಸುರಿವ ಮಳೆಯಲಿ, ಬೈಕ್ ಮೇಲೆ ಧಾರವಾಡ-ಗರಗ ಸುತ್ತಾಡಿ ದೇಹ ಸವಸಿದರು.
ಖಾದಿ ಕೇಂದ್ರ ರಾಷ್ಟ್ರೀಯ ಖ್ಯಾತಿ ಪಡೆದರೂ ಪ್ರಶಸ್ತಿ, ಪ್ರಶಂಶೆಗಳಿಗೆ ಹಂಬಲಿಸಲಿಲ್ಲ. ಎಲ್ಲ ಪ್ರತಿಫಲವನ್ನು ತಮ್ಮ ದುಡಿಯುವ ಸಹಪಾಠಿಗಳಿಗೆ ಹಂಚಿದರು.
ಅವರ ಇಚ್ಛೆಗನುಗುಣವಾಗಿ ನಡೆದ ಅವರ ಪತ್ನಿ ಪಾರಮ್ಮ ನಿಜಾರ್ಥದ ಶರಣೆ. ಸತಿಪತಿಗಳೊಂದಾದ ಭಕ್ತಿ ಹಿತವಪ್ಪುದು ಎಂಬಂತೆ ಅವರಿಗೆ ಸಾತ್ ನೀಡಿದರು.
ಈ ಇಳಿವಯಸ್ಸಿನಲ್ಲಿ ಬಸವತತ್ವ ನಿಷ್ಠರಾಗಿ‌ ಪಾರಮ್ಮ ಕೆಲಸ ಮಾಡುತ್ತಾರೆ.

ಸೋದರ ಶ್ರೀಶೈಲ ಕರಡಿಗುಡ್ಡ ಈಗ ಹುಬ್ಬಳ್ಳಿ ನಿವಾಸಿ ತಮ್ಮ ಮನೆಯಲ್ಲಿ ಮಹಾಮನೆಯ ಮೂಲಕ ತಂದೆಯವರ ಹದಿಮೂರನೆಯ ಪುಣ್ಯಸ್ಮರಣೆ ಆಚರಿಸಿದರು.
ಅನೇಕ ಬಸವಾಸಕ್ತರು ಪಾಲ್ಗೊಂಡ ಸಭೆಯ ಅಧ್ಯಕ್ಷತೆ ವಹಿಸಿದಾಗ ನೆನಹಾಗಿ ಕಾಡಿದ ಗರಗ ನೆನಪುಗಳು ನನ್ನ ಕಟ್ಟಿ ಹಾಕಿದವು. ಅವರ ಪ್ರೀತಿಯ ಪ್ರಸಾದ ನನ್ನ ಮೈಮನಗಳಲಿ ಹರಿದಾಡಿದ ಋಣಭಾವ.

ಕಾಲನ ನಡಿಗೆಯಲಿ ಸಾಗಿದ ನಾವು ಇತಿಹಾಸ ಮರೆಯುವ ನೀಚರು, ಉಪಕರಿಸಿದವರ ಮರೆತು ನಮದೇ ಹಾದಿಯಲಿ ಸಾಗಿ ನಾವೂ ಮರೆತು ಹೋಗುತ್ತೇವೆ. ಇರುವಾಗ ಉಪಕರಿಸಿದವರ ಸ್ಮರಿಸುವ, ಅವರ ಮೌಲ್ಯಗಳ ಪಾಲಿಸುವ ಸೌಜನ್ಯ ತೋರುವುದಿಲ್ಲ. ಏಕೆಂದರೆ ನಾವು ಸಾಮಾನ್ಯರು, ಅಸಾಮಾನ್ಯರಾಗುವ ಮನಸು ಮಾಡದಿರುವುದು ನಮ್ಮ ದುರಂತ.

ಬಸವಾದಿ ಶರಣರು ಹಾಗೂ ಅವರು ಬಿಟ್ಟು ಹೋದ ವಚನಗಳು ನಮಗೆ ದಾರಿದೀಪವಾದರೂ ಕತ್ತಲೆಯಲ್ಲಿ ನಡೆಯುವ ಮೂರ್ಖರು ನಾವು.
ಗೊಂದಲದಲಿಯೇ ಹೋಗಿಬಿಡುತ್ತೇವೆ.

*ತಮ್ಮ ಇಚ್ಛೆಯಂತೆ ರಾಷ್ಟ್ರೀಯ ಹಬ್ಬದ ಸ್ವಾತಂತ್ರ್ಯ ದಿನಾಚರಣೆಯ ದಿನ ದೇಹ ಬಿಟ್ಟ ಇಚ್ಛಾಮರಣಿ ಶರಣ ನಮ್ಮ ಕರಡಿಗುಡ್ಡ ಶಂಕರಪ್ಪ ಅವರು*.

ನಿಮ್ಮ ನೆನೆದಾಗಲೆಲ್ಲ ಉದಯ, ಬೆಳಗು, ಬೆಳಕು, ಮಹಾಬೆಳಕು…

  *ಸಿದ್ದು ಯಾಪಲಪರವಿ*

No comments:

Post a Comment