Sunday, August 26, 2018

ವಿಚಾರ ಪತ್ನಿ

ವಿಚಾರ ಪತ್ನಿ : ಆಚಾರ ಸಾಂಗ್ಯತ್ಯದ ಹುಡುಕಾಟ

ವಿಚಾರ-ಆಚಾರ , ಆಚಾರ-ವಿಚಾರಗಳ ಕದನ ನಿಲ್ಲುವುದೇ ಇಲ್ಲ.
ಅತೃಪ್ತ ಮನಸಿಗೆ ನೂರೆಂಟು ತಳಮಳಗಳು. ಬಿಟ್ಟೆನೆಂದರೂ ಬಿಡದ ಮಾಯಾವಿಗಳು.

ಸರಿ-ತಪ್ಪುಗಳ ಸೆಳೆತದಲಿ ತಪ್ಪು ಪ್ರಿಯವೆನಿಸುವುದು ಸಹಜ. ಆ ತಪ್ಪನ್ನು ಕ್ರಮಬದ್ಧವಾಗಿ ಸಮರ್ಥಿಸುವ ವಾದ-ವಿವಾದ.
ಮಾಗಿದ ಮನಸಿನ ಚಪಲಕೆ ನಿಲ್ಲದ ಹಾರಾಟ. ವಯಸ್ಸಾದಂತೆಲ್ಲ ಏನೋ ಹುಡುಕಾಟ. ಹುಡುಗಾಟ.

ಅನೇಕಾನೇಕ ಸಾಧು ಸಂತರ , ಬಸವಾದಿ ಶರಣರ ಅನುಭಾವಗಳು ನಮಗೆ ಹೊಸ ಲೋಕ ತೋರಿಸಿ ವೈರಾಗ್ಯದ ಕಡೆ ಕೊಂಡೊಯ್ಯುವಾಗ ಕಾಡಿ ನೆನಪಾಗುವ ವೈಚಾರಿಕ ಸಾಂಗ್ಯತ್ಯದ ಸಾಮಿಪ್ಯದ ತುಡಿತ.

ಯಾಕೆ ಹೀಗೆ ? ಏರು ಯೌವನದಲಿ ಇಲ್ಲದ ಮನೋಪಲ್ಲಟ ಈಗೇಕೆ ?

ಪ್ರಬುದ್ಧತೆ , ಸಮಾಧಾನ ಅದರೊಂದಿಗೆ  ಒಂಟಿತನವನ್ನು ಏಕಾಂತವಾಗಿಸುವ ಇರಾದೆ.

ಇನ್ನಿಲ್ಲದ ಜಡಪಡಿಕೆಯ ಪ್ರತಿಫಲವಾಗಿ ಭಾವಲೋಕ ಪ್ರವೇಶಿಸಿ ವಿಚಾರ ಸಂಗಾತಿಯನ್ನು ಹುಡುಕುವುದು ಸಾಮಾನ್ಯ ಎಂಬ ಸತ್ಯ ಬೆಳಕಿಗೆ ಬಂದಿದೆ.

ಹುಡುಕುವ ಪರಿಗೆ ಬೆರಗಾಗಿ ಹುಡುಕಾಟಕೆ ಒಲಿದು ವಿಚಾರಪತ್ನಿ ಸಿಗಬಹುದು ಆದರೆ ಮುಂದೇನು ?
ಇದನ್ನು ಸಾಮಾಜಿಕ ವ್ಯವಸ್ಥೆಯಲ್ಲಿ ಬಹಿರಂಗ ಪಡಿಸಬಹುದಾ ?
ಎಂಬ ಪ್ರಶ್ನೆಗಳಿಗೆ ಉತ್ತರ ಹುಡುಕುವುದರೊಳಗೆ ನಾವು ಕಳೆದುಹೋಗಿರುತ್ತೇವೆ.

ಮತ್ತದೇ ತಲ್ಲಣ , ಸಂಘರ್ಷಗಳ ಸವಿಮಾಲೆ ಧರಿಸಿ ಹೊಸ ಸಂಬಂಧದ ಹಂಗಾಮಾ ಸವಿಯುವ ತರಾತುರಿ .
ಸಮರ್ಥ ಬೌದ್ಧಿಕ ಸಾಮಿಪ್ಯ ಹೊಂದಿದ ವಿಚಾರ ಪತ್ನಿ - ಪತಿ ಸಿಕ್ಕಾಗಲಾದರೂ ಹುಡುಗಾಟಿಕೆಯ ಹುಡುಕಾಟ ನಿಲ್ಲಬೇಕು.

ತುಂಬ ಆತ್ಮವಿಶ್ವಾಸದಿಂದ ಸಾಮಾಜಿಕ ಅಭಿಪ್ರಾಯ ಲೆಕ್ಕಿಸದೇ , ಚಾರಿತ್ರ್ಯದ ಸೋಗಲಾಡಿತನವನ್ನು ದೂರ ಮಾಡಿ ಸಂತಸ , ಸಂಭ್ರಮದಿಂದ ಬದುಕಬೇಕು.

ವಯಸ್ಸಾದಂತೆಲ್ಲ ಪ್ರಾಮಾಣಿಕತೆ ಪಸರಿಸಬೇಕು. ನಂಬಿಕೆ ಬಿಗಿಯಾಗಬೇಕು.
ಒಪ್ಪಿಕೊಂಡ ವ್ಯಕ್ತಿಯ ಚರಿತ್ರೆ ಹಾಗೂ ಚಾರಿತ್ರ್ಯದ ಗೊಡವೆಗೆ ಹೋಗಬಾರದು.

ಖುಷಿ ನಮ್ಮ ಧೋರಣೆಯಾಗಬೇಕು. ವರ್ತಮಾನದ ಎಲ್ಲ ಜವಾಬ್ದಾರಿಗಳನ್ನು ನಿರ್ವಹಿಸುತ್ತ ಇರುವ ಸಂಬಂಧಗಳನ್ನು ದಿಕ್ಕರಿಸದೇ , ಆಚಾರ ಸಂಗಾತಿಯನ್ನು ಅನಾಥ ಮಾಡದೆ ಇಳಿ ಹೊತ್ತನು ಸಂಭ್ರಮಿಸಬೇಕು.

Life skill ತರಬೇತಿಯ ಸಂದರ್ಭದಲ್ಲಿ ಕೆಲವರು ಈ ರೀತಿಯ ಸಂಬಂಧಗಳ ನಿರ್ವಹಣೆ ಕುರಿತು ಪ್ರಶ್ನಿಸಿದಕ್ಕೆ ಇದನ್ನು ಹೇಳಬೇಕಾಯಿತು ಅಷ್ಟೇ .

----ಸಿದ್ದು ಯಾಪಲಪರವಿ

No comments:

Post a Comment