*ಅಮಾನವೀಯ ರಾಜಕಾರಣ ಮತ್ತು ಪ್ರವಾಹ*
ಏನಾಗಿದೆ ನಮ್ಮ ರಾಜಕಾರಣಿಗಳಿಗೆ ? ನೋವಿನಲೂ ಕೀಳು ಮಾತುಗಳು. ‘ನೀವು ಓಟೇ ಹಾಕಿಲ್ಲ ಆದರೂ ನಾ ಹೆಲ್ಪ್ ಮಾಡ್ತೀನಿ’ ಅನ್ನೋ ಮಹಾ ಔದಾರ್ಯ!
ಇನ್ನೊಬ್ಬರು ಮಹಾರಾಜ ಶೈಲಿಯಲ್ಲಿ ಬಿಸ್ಕಿಟ್ ಒಗಿತಾರೆ.
‘ಈ ಸರಕಾರ ಕೆಲಸ ಮಾಡ್ತಿಲ್ಲ ಅದಕೆ ಪ್ರವಾಹ’ ಅಂತ ಇನ್ನೋರ್ವ ನಾಯಕರು ಬಡಬಡಿಸ್ತಾರೆ.
ಕಾಡಿನ ವಿಷಯದಲ್ಲಿ ಪ್ರಾಣಿಗಳ ಹಾಗೆ ಭೂ ಕಬಳಿಸಿದ ಕಾರಣದಿಂದಾಗಿ ಪರಿಸರ ಹಾಳಾಗಿದೆ.
ಕಾಡು ಕಡಿದು ಮಣ್ಣು ತಿನ್ನುವುದರಲಿ ಇವರು ಪಕ್ಷಾತೀತರು.
ಕಾಡು ಕಡಿದು ರೆಸಾರ್ಟ್ ಕಟ್ಟಿ ಮೋಜು ಮಾಡುವವರು ಇವರೇ ಉಳ್ಳವರು. ಉಳ್ಳವರೆಂದರೇ ಇದೇ ಬಿಟ್ಟಿ, ಬೇನಾಮಿ ಬಂಡವಾಳಶಾಹಿಗಳು.
ಈಗ ಹಣವೆಂದರೆ ರಾಜಕಾರಣ, ರಾಜಕಾರಣವೆಂದರೆ ಹಣ. ಯಾರ ಹೆಣ ಬಿದ್ದರೂ ಅಷ್ಟೇ. ಬರೀ ರಾಜಕಾರಣ.
ಅಪಾರ ಆಸ್ತಿ ಮಾಡುವ ಅನಾರೋಗ್ಯಕರ ಪೈಪೋಟಿ.
ಒಬ್ಬರಿಗೂ ಮಾತನಾಡುವ ನೈತಿಕತೆ ಇಲ್ಲ ಆದರೂ ಬಾಯಿಗೆ ಬಂದಂತೆ ಮಾತನಾಡುವ ಭಂಡ ಧೈರ್ಯ.
ಕಾರಣ ಪ್ರಜ್ಞಾಹೀನ ಪ್ರಜೆಗಳ ಮೌನ. ಮತದಾರ ಏನನ್ನೂ ಕೇಳಲಾರ ಅವನೂ ಮಾರಿಕೊಂಡಿದ್ದಾನೆ. ಮಾರಿಕೊಂಡವನಿಗೆ ಮಾತೇ ಹೊರಡುವುದಿಲ್ಲ.
ಈಗ ಪ್ರಕೃತಿ ಮಾತೆ ಎಲ್ಲರಿಗೂ ಪಾಠ ಕಲಿಸಲು ತೀರ್ಮಾನಿಸಿ ಕೆಂಡಾಮಂಡಲವಾಗಿದ್ದಾಳೆ.
ಅವಳ ಸಹನೆಯ ಕಟ್ಟೆ ಒಡೆದಿದೆ.
ಮಲೆನಾಡಲಿ ಅತೀವೃಷ್ಟಿ, ಬಯಲು ಸೀಮೆಯಲ್ಲಿ ಅನಾವೃಷ್ಟಿ. ಕಾರಣ ನಮ್ಮ ಅಜ್ಞಾನ, ಅವಿವೇಕತನ.
ಕೃಷಿ ಹಾಳಾಗಿ ಹೋಗಿ, ಕಾಡು ಬೆಳೆಸದ ನಮ್ಮ ಅವಿವೇಕತನಕೆ ಪರಿಸರ ದಿನವೆಂಬ ಶೋಕಾಚರಣೆ.
ಹೋಗಲಿ ಈಗಿನ ಅನಾಹುತಗಳಿಗೆ ವೈಜ್ಞಾನಿಕ ಕಾರಣ ಹುಡುಕಿ ಮುಂದೆ ಎಚ್ಚತ್ತುಕೊಳ್ಳದೇ ಹೋದರೆ ನಾವು ಉಳಿಯುವುದಿಲ್ಲ.
ಸದ್ಯದ ಪರಿಸ್ಥಿತಿಯನ್ನು ಪಕ್ಷಭೇದ ಮರೆತು ನಿಭಾಯಿಸುವ ಸೂಕ್ಮತೆಯನ್ನು ನಮ್ಮ ರಾಜಕಾರಣಿಗಳು ಕಳೆದುಕೊಳ್ಳಬಾರದಿತ್ತು, ಇದು ಪ್ರವಾಹಕ್ಕಿಂತಲೂ ಭೀಕರ, ಕೆಂಡದ ಮಳೆಗಿಂತಲೂ ಭಯಾನಕ.
ಈಗ ನಮ್ಮ ನಾಯಕರುಗಳು ಈ ಅನಾಗರಿಕ ಪೈಪೋಟಿ ನಿಲ್ಲಿಸಿ ಜನಪರ ಮಾತುಗಳನ್ನಾಡುವ ಸೌಜನ್ಯ ಬೆಳೆಸಿಕೊಳ್ಳಬೇಕು.
ನಮಗೂ ಈ ಅವಘಡಕ್ಕೂ ಸಂಬಂಧವೇ ಇಲ್ಲ ಎಂಬಂತೆ ಮಾತಾಡುವದಾಗಲೀ, ನಾವು ನಮ್ಮ ಮನೆ ಹಣ ತಂದು ನಿಮ್ಮನ್ನು ಸಾಕುತ್ತೇವೆ ಎಂಬ ಉಡಾಫೆಯೂ ಅಕ್ಷಮ್ಯ.
ಮಾಧ್ಯಮಗಳು ಅಷ್ಟೇ, ಬರೀ ಚೀರಾಟದ ಮಾತುಗಳು. ಏಕಪಕ್ಷೀಯ ನಿಲುವು. ಪಕ್ಷಾತೀತ ಪರಿಕಲ್ಪನೆಗಿಲ್ಲಿ ಜಾಗವಿಲ್ಲ.
ಈ ಭೀಕರ ಜಲಪ್ರಳಯದಲಿ ಬಲಿಯಾದ ಅಮಾಯಕರ ಅಸಹಾಯಕತೆಯ ಕೇಳಲು ಯಾರಿಗೂ ಪುರುಸೋತ್ತಿಲ್ಲ ಬರೀ ವೈಯಕ್ತಿಕ ಮೈಲೇಜ್ ಪಡೆಯುವ ಹುನ್ನಾರ.
ನಮಗೆ ರಾಜಕಾರಣ, ನಿಮಗೆ ಟಿ.ಆರ್.ಪಿ. ಸಾಕಲ್ಲ ಎಂಬ ಒಳೊಪ್ಪಂದದ ಛಾಯೆಯ ಕರಿನೆರಳು.
ಪೊಯಟಿಕ್ ಜಸ್ಟಿಸ್ ಇನ್ನೂ ಭೀಕರ ಪಾಠ ಕಲಿಸುವ ಮೊದಲೇ ಎಲ್ಲರೂ ಎಚ್ಚತ್ತುಕೊಳ್ಳುವ ಅನಿವಾರ್ಯತೆ ಇದೆ.
ಜಸ್ಟಿಸ್ ಆಫ್ ನೇಚರ್, ತನ್ನ ಪರಿಸರ ಸಮತೋಲನ ಉಳಿಕೊಳ್ಳಲು ಮನುಷ್ಯನಿಗೆ ಎಷ್ಟೇ ಎಚ್ಚರಕೊಟ್ಟರು ನಮ್ಮದು ಸ್ಮಶಾನ ವೈರಾಗ್ಯದ ನಿರ್ಲಜ್ಯತನ ಇನ್ನು ಮುಂದಾದರೂ ಇಳಿದು, ನಾವು ಉಳಿಯಬೇಕಾಗಿದೆ.
ಸಿದ್ದು ಯಾಪಲಪರವಿ
No comments:
Post a Comment