ಬಾಳ ದಡ ಸೇರೋಣ
ಹೇಳುವದೆಲ್ಲ ಹೇಳಿ ಕೇಳುವುದೆಲ್ಲ
ಕೇಳಿದರೂ ಮಾತು
ಮುಗಿಯುವುದಿಲ್ಲ
ಭಾವಯಾನ ಪಯಣದಲಿ
ವಿಷಾದದ ಅಪಸ್ವರವಿಲ್ಲ
ಬದುಕಿನ ಪಯಣದಲಿ ಸಿಗಬಹುದಾದ
ತಿರುವಿಗೆ ಹಂಬಲಿಸಿದ ಮನಕೊಮ್ಮೆ
ದೊರೆಯುವದು ಮೋಕ್ಷ
ಬಳಸಿ ಬಿಸಾಡಿ , ಅಂಜಿ-ಅಳುಕಿ
ಅವಮಾನಿಸಿ ಅನುಮಾನಿಸದರೆ
ನೂರು ಮಾರು ದೂರ
ಒಲವ ಬೆಳಗು
ಸಾವಿರದ ಬಂಧನಗಳ ಮುಷ್ಟಿಯಲಿ
ಬಿಗಿಹಿಡಿದು ಅನುಸಂಧಾನದ
ಅನನ್ಯತೆ ಅನುಭವಿಸುವ
ನಿರಹಂಕಾರದ ನಿಜಸ್ವರೂಪದ
ವೈಭವ
ಅನುರಾಗದ ಅರಮನೆಯ ರಾಜ-ರಾಣಿ
ಬೇಕಿಲ್ಲ ಅರಸೊತ್ತಿಗೆ ಸಿರಿ ಸಂಪದದ ಹಂಗು
ಅವರಿಗೆ ಅವರದೇ ಆದ
ಹಂಗಿಲ್ಲದ ಒಲವ ಒಡೆತನ
ಸಾಕು ಈ
ವ್ಯವಹಾರಿಕ ಲೋಕದಿ
ಗೇಣು ಹೊಟ್ಟೆಯ ಚೀಲದ ಚಿಂತೆಗೆ
ನಶಿಸಿ ಮಣ್ಣ ಸೇರುವ ಹೇಸಿ ದೇಹದ
ವ್ಯಾಮೋಹದಲಿ ಒಲವ ಮಾರುವ
ಹಂಗಿಲ್ಲದ ಅರಸರು ನಾವು
ಸಮರಸದ ಸರಸದಲಿ ನಿಷ್ಕಾಮ
ವಿರಸದಲಿ ಬೇಕು-ಬೇಡಗಳ
ಹುಡುಕಾಟ ಹುಡುಗಾಟ
ನಿಲ್ಲದೀ ನಿಲ್ಲದ ಪಯಣ
ನಿರ್ಲಿಪ್ತದಿ ಸಾಗುತ
ಬಾಳ ಸರೋವರದ
ದಡ ಸೇರೋಣ.
---ಸಿದ್ದು ಯಾಪಲಪರವಿ
No comments:
Post a Comment